ಮಕ್ಕಳ ಲೋಕಕ್ಕೆ ಹೆಚ್ಚಿನ ಖುಷಿ ಕೊಡುವ ‘ನೋಟ್ ಬುಕ್

ತಮ್ಮಣ್ಣ ಬೀಗಾರ

ಮಕ್ಕಳು ಯಾವಾಗಲೂ ಕನಸು ಕಾಣುತ್ತಾರೆ… ಅವರು ಕನಸು ಕಾಣಬೇಕು. ಅವರ ಕನಸಿನಲ್ಲಿ ಬಣ್ಣ ಬಣ್ಣದ ಲೋಕವೇ ತೆರೆದುಕೊಳ್ಳುತ್ತಿರುತ್ತದೆ… ಅದು ತೆರೆದುಕೊಳ್ಳುವಂತೆ ಮಾಡುವಲ್ಲಿ ಸುತ್ತಲಿನ ಪರಿಸರ ಪ್ರೇರಕ ಮತ್ತು ಪೂರಕವಾಗಿರಬೇಕು. ಸಾಮಾನ್ಯವಾಗಿ ಕನ್ನಡದ ಬರಹಗಾರರು ತಮ್ಮ ಬಾಲ್ಯದ ನೆನಪುಗಳನ್ನು ಹೇಳಿಕೊಳ್ಳುವಾಗ ‘ಚಂದಮಾಮ’ ಓದಿದ್ದನ್ನು ಹೇಳಲು ಮರೆಯುವುದಿಲ್ಲ. ಅಲ್ಲಿನ ಕಥೆಗಳು ಅದಕ್ಕೆ ಪೂರಕವಾಗಿ ಇರುವ ಹೆಸರಾಂತ ಕಲಾವಿಧರ ಬಣ್ಣ ಬಣ್ಣದ ಚಿತ್ರಗಳು ಮಕ್ಕಳನ್ನು ಎಲ್ಲಿಲ್ಲದಂತೆ ಸೆಳೆದವು ಅಂದು ನನಗೆ ಅನಿಸುತ್ತದೆ. ‌

ಹಾಗಾಗಿಯೇ ಮಕ್ಕಳಿಗಾಗಿ ಬರೆಯುವವರು ಕೂಡಾ ಮಕ್ಕಳಿಗೆ ಆಕರ್ಷಕವಾಗುವ ರೀತಿ ಪುಸ್ತಕವನ್ನು ಸಿದ್ಧಪಡಿಸಿ ಅವರ ಮುಂದಿಡಬೇಕು ಎಂಬ ಆಸೆಯನ್ನು ಹೊತ್ತುಕೊಂಡೇ ಇರುತ್ತಾರೆ. ಇಂಗ್ಲೀಷ ಓದುವ ಮಕ್ಕಳಿಗೆ ಬಣ್ಣ ಬಣ್ಣದ ಚಿತ್ರಗಳಿರುವ ಕೈಇಟ್ಟರೆ ಜಾರುವ ಹೊಳಪಿನ ಹಾಳೆಯ ಪುಸ್ತಕಗಳು ಓದಲು ಮಾರುಕಟ್ಟೆಯಲ್ಲಿ ಸಿಗುತ್ತವೆ. ಆದರೆ ಕನ್ನಡದ ಸೀಮಿತ ಮಾರುಕಟ್ಟೆಯಲ್ಲಿ ಅಂತಹ ಪುಸ್ತಕ ಪ್ರಕಟಿಸುವ ಸಾಹಸಕ್ಕೆ ಪ್ರಕಾಶಕರು ಇಳಿದದ್ದು ಕಡಿಮೆ. ಲೇಖಕರು ತಮ್ಮ ಪುಸ್ತಕ ಪ್ರಕಟಿಸುವುದೇ ಕಸರತ್ತಿನ ಕೆಲಸವಾಗಿರುವಾಗ ಬಣ್ಣ ಬಣ್ಣದ ಪುಸ್ತಕದ ಆಲೋಚನೆಯ ಬಣ್ಣವೆಲ್ಲ ಕರಗಿ ಹೋಗುತ್ತಲೇ ಇರುತ್ತದೆ.

ಇರಲಿ, ನಾನು ಈಗ ಮೇಲಿನದೆಲ್ಲಾ ಏಕೆ ಹೇಳಿದೆನೆಂದರೆ… ಕನ್ನಡದಲ್ಲಿ ಹೊಸತು ಎನ್ನುವಂತೆ ಮಕ್ಕಳು ಬಣ್ಣದ ಪುಸ್ತಕದ ಖುಷಿಗೆ ತೆರೆದುಕೊಳ್ಳುವ ಹಾಗೆ ಬಳ್ಳಾರಿಯ ಹಂದಿಹಾಳು ಗ್ರಾಮದ ಶಿಕ್ಷಕ ಸ್ನೇಹಿತ ಡಾ. ಕೆ ಶಿವಲಿಂಗಪ್ಪ ಹಂದಿಹಾಳು ಮಾಡಿದ್ದಾರೆ. ಇವರ ಕಥಾ ಸಂಕಲನ ‘ನೋಟ ಬುಕ್’ ವರ್ಣಮಯವಾಗಿ ಮುದ್ರಣಗೊಂಡಿದೆ. ಪ್ರತಿಭಾನ್ವಿತ ಕಲಾವಿಧ ಮುರಳೀಧರ ವಿ ರಾಥೋಡ್ ಬಹು ಸುಂದರವಾಗಿ ಮುಖಪುಟ ಒಳ ಪುಟಗಳನ್ನು ತಮ್ಮದೇ ಕಲೆಯೊಂದಿಗೆ ವಿನ್ಯಾಸಗೊಳಿಸಿದ್ದಾರೆ. ಹೊಳೆಯುವ ಪುಟಗಳಲ್ಲಿಯ ಚಿತ್ರಗಳು ಕಥೆಯ ಮೆರಗನ್ನು ಬೆರಗನ್ನೂ ಹೆಚ್ಚಿಸಿವೆ.

ಪ್ರತಿ ಕಥೆಯ ಆರಂಭದಲ್ಲಿ ಕ್ಯುಆರ್ ಕೋಡ್ ನೀಡಿದ್ದು ಇದನ್ನು ಬಳಸಿ ಕಲಾವಿಧರು ಸಾಅಭಿನಯದ ಮೂಲಕ ಪ್ರಸ್ತುತ ಪಡಿಸಿದ ಕಥೆಯ ವಿಡಿಯೋ ಕೂಡಾ ನೋಡಬುದಾಗಿರುವುದು ವಿಶೇಷತೆ. ಇದು ಮಕ್ಕಳ ಹಿಗ್ಗನ್ನು ಇನ್ನಷ್ಟು ಹೆಚ್ಚಿಸಲು ಪೂರಕವಾಗಿದೆ.
ಶಿವಲಿಂಗಪ್ಪನವರು ಮಕ್ಕಳ ಸಾಹಿತ್ಯವನ್ನು ಸದಾ ತಮ್ಮ ತುಡಿತವಾಗಿಸಿಕೊಂಡವರು. ಬಹಳಷ್ಟು ಸಾರಿ ಅದರ ಕುರಿತಾಗಿಯೇ ಮಾತಿಗಿಳಿಯುತ್ತಾರೆ. ಅವರು ‘ಕನ್ನಡ ಮಕ್ಕಳ ಸಾಹಿತ್ಯ: ಫ್ಯಾಂಟಸಿಯ ಸ್ವರೂಪ’ ವಿಷಯದ ಕುರಿತಾಗಿ ಆಳವಾದ ಅಧ್ಯಯನದೊಂದಿಗೆ ಪಿಎಚ್‌ಡಿ ಪದವಿ ಪಡೆದಿದ್ದಾರೆ.

ಪುಸ್ತಕದ ಸೌಂದರ್ಯ ಹೇಗೆಲ್ಲಾ ಇದ್ದರೂ ಅದರ ಆಂತರ್ಯ ಹೇಗಿದೆ ಎನ್ನುವುದೂ ಬಹಳ ಮುಖ್ಯ ರಾಜ ರಾಣಿಯರ ಕಥೆಗಳು, ನೀತಿ ಕಥೆಗಳು ಎಂದು ತುಂಬಿಹೋಗಿದ್ದ ಕನ್ನಡದ ಮಕ್ಕಳ ಸಾಹಿತ್ಯ ಈಗ ಹೊಸ ತಿರುವು ಪಡೆದುಕೊಂಡಿದೆ. ಮಕ್ಕಳಿಗೆ ಶಿಕ್ಷಣ, ನೀತಿ ಬೋಧಿಸಬೇಕೆನ್ನುತ್ತ ಒಂದು ರೀತಿ ಚೌಕಟ್ಟು ಹಾಕಿಕೊಂಡಿದ್ದನ್ನು ಬದಿಗೆ ಸರಿಸಿ ಮುಕ್ತವಾದ ಕಲಾತ್ಮಕ ಕಥೆಗಳು ಮಕ್ಕಳ ಓದಿಗೆ ಸಿಗುತ್ತಿವೆ. ಇಂತಹ ಕಲಾತ್ಮತೆಯೊಂದಿಗೆ ರಚನೆಗಿಳಿದಿರುವ ಶಿವಲಿಂಗಪ್ಪ ಮಕ್ಕಳೊಂದಿಗೆ ಎಲ್ಲರೂ ಓದಬಹುದಾದ ಒಳ್ಳೆಯ ಕಥೆಗಳನ್ನು ಇಲ್ಲಿ ನೀಡಿದ್ದಾರೆ.

ಶಿವಲಿಂಗಪ್ಪ ಹಳ್ಳಿಯಲ್ಲಿ ಬೆಳೆದವರು. ಅವರು ಬೋಧಿಸುವ ಶಾಲೆಯೂ ಹಳ್ಳಿಯದೇ ಆಗಿದೆ. ಹಳ್ಳಿಯ ಮಕ್ಕಳ ಕಷ್ಟ, ಸಂತಸ, ಕನಸುಗಳೊಂದಿಗೆ ಗ್ರಾಮೀಣ ಮಕ್ಕಳ ವಾಸ್ತವ ಚಿತ್ರಣವನ್ನು ಹಿತವಾದ ಕಲ್ಪನಾ ಲೋಕದೊಂದಿಗೆ ಕಥೆಗಳಲ್ಲಿ ವಿಸ್ತರಿಸಿದ್ದಾರೆ. ಮಕ್ಕಳನ್ನು ಹಾಗೂ ತನ್ನ ವೃತ್ತಿಯನ್ನು ಪ್ರೀತಿಸುವ ಶಿಕ್ಷಕ ಮಕ್ಕಳ ಒಳಿತಿಗಾಗಿ ಏನೇನೋ ಪ್ರಯತ್ನದಲ್ಲಿ ತೊಡಗುತ್ತಾನೆ. ಅಂತಹ ಒಬ್ಬ ಶಿಕ್ಷಕರಾದ ಶಿವಣ್ಣ ಮೇಷ್ಟ್ರು ಕಥೆಯ ಉದ್ದಕ್ಕೂ ತೆರೆದುಕೊಂಡಿರುವುದು ವಿಶೇಷ.

‘ಮಳೆಬಿಲ್ಲು’ ಕಥೆಯಲ್ಲಿ ಶಿವಣ್ಣ ಮೇಷ್ಟ್ರು ಪಾಠವನ್ನು ಅಪ್ಯಾಯಮಾನವಾಗಿಸಿಕೊಳ್ಳುವ ಮಕ್ಕಳು ಮಳೆಯ ಬಯಲಿಗೆ ಹೋದುದು, ಮಳೆಯಲ್ಲಿ ಮಿಂದು ಕುಣಿದು ಖುಷಿ ಹೊಂದಿದುದು… ನಂತರ ಮಳೆ ಬಿಲ್ಲನ್ನು ಕಾಣುತ್ತ ತಮ್ಮದೇ ಆದ ಕಲ್ಪನಾ ಲೋಕಕ್ಕೆ ವಿಸ್ತರಿಸಿ ಕೊಂಡುದೆಲ್ಲ ಸಹಜವೆಂಬಂತೆ ಓದುವ ಓದುಗನಿಗೆ ನಂತರ ಇದೊಂದು ಕಲ್ಪನಾ ಲೋಕವೆಂದು ಅರಿವಿಗೆ ಬಂದರೂ… ಅವೆಲ್ಲಾ ಅವಾಸ್ತವ ಸಂಗತಿ ಅನಿಸುವುದೇ ಇಲ್ಲ. ಕೊನೆಯಲ್ಲಿ ಮಳೆ ಬೀಳತೊಡಗಿದಾಗ ಓದುಗನು ಆ ಮಳೆಯೊಂದಿಗೆ ಒಂದಾಗಿ ಮಳೆ ಬಿಲ್ಲಿನ ಅನುಭವ ಹಾಗೂ ಮಳೆಯ ಸುಖ ಅನುಭವಿಸತೊಡಗುತ್ತಾನೆ.

ಇಂತಹ ಸಂತಸವನ್ನು ಪರೋಕ್ಷವಾಗಿ ತಂದಿಡುವ ಕಥೆ ನಮ್ಮೊಂದಿಗೆ ಆಗಾಗ ಮಳೆಯಾಗಿ, ಮಳೆಬಿಲ್ಲಾಗಿ… ಜೊತೆಯಲ್ಲಿಯೇ ಇರುವಂತಾಗುವುದು ಕಥೆಯ ಯಶಸ್ಸಾಗಿಬಿಡುತ್ತದೆ. ‘ಕೂಸು ಮೋಡ’ ಕಥೆ ಕೂಡಾ ಒಂದಿಷ್ಟು ಫ್ಯಾಂಟಸಿಯೊಂದಿಗೆ ತೆರೆದುಕೊಳ್ಳುತ್ತ… ಪ್ರಕೃತಿಯ ಚಿತ್ರವನ್ನೇ ನೋಡಿ ಖುಷಿಪಡುವ, ಅದಕ್ಕೆ ಬೆರಗಾಗುವ ಮತ್ತು ಅದನ್ನೇ ತಮ್ಮ ಸುತ್ತಲಿನ ತಂದೆ ತಾಯಿಯ ಪ್ರೀತಿಗೆಲ್ಲಾ ಬೆಸೆದು ಸಂತಸದಲ್ಲಿ ತೇಲುವ ಸಂಗತಿಯನ್ನೆಲ್ಲ ನಮ್ಮೊಂದಿಗೆ ಹಂಚುವುದು ಇದೆ. ಇಲ್ಲಿ ಶಿವಲಿಂಗಪ್ಪನವರು ಮಕ್ಕಳ ಖುಷಿ ಹೇಗೆಲ್ಲಾ ಅರಳುತ್ತದೆ ಎಂಬುದನ್ನು ಖುಷಿ ಖುಷಿಯಾಗಿಯೇ ಮುಟ್ಟಿಸಿದ್ದಾರೆ.

ಶಿವಲಿಂಗಪ್ಪನವರ ಬಹಳಷ್ಟು ಕಥೆಗಳು ಹಳ್ಳಿಯ ಊರಿನ ಬಡತನ ಹಾಗೂ ಅಲ್ಲಿ ಅರಳುವ ಮಕ್ಕಳ ಬಾಲ್ಯ ಹೇಗೆಲ್ಲಾ ಸಂಕಟಕ್ಕೆ ಒಳಗಾಗುತ್ತದೆ ಎನ್ನುವುದನ್ನು ಹೇಳುತ್ತಾ… ಶಿಕ್ಷಕರ ಅಂತಃಕರುಣೆ ಹಾಗೂ ಒಲವು ಮಕ್ಕಳ ಬದುಕಿನ ತಿರುವನ್ನು ಹೇಗೆಲ್ಲಾ ಬದಲಾಯಿಸಿ ಆನಂದದ ಬೆಳಕಿನ ಕಿರಣವನ್ನು ಕಾಣಿಸಬಲ್ಲದು ಎಂಬುದನ್ನು ಹೇಳುತ್ತವೆ. ‘ನಾನು ಶಾಲೆಗೆ ಸೇರಿದೆ’ ಎನ್ನುವ ಕಥೆಯಲ್ಲಿ ತಿಮ್ಮರಾಜ ತಂದೆ ಇಲ್ಲದ ಹುಡುಗ.

ತಾಯಿ ಬೆಂಗಳೂರಿಗೆ ಕೆಲಸಕ್ಕೆ ಹೋಗಿರುವುದರಿಂದ ಅನಿವಾರ್ಯವಾಗಿ ಮಾವನ ಮನೆಯಲ್ಲಿ ವಾಸ. ಆದರೆ ತಿಮ್ಮರಾಜನಿಗೆ ಶಾಲೆಗೆ ಸೇರುವ ಆಸೆ. ಮಾವ ಹೊಲದಲ್ಲಿ ದುಡಿ ಎನ್ನುತ್ತಾನೆ ವಿನಹ ತನ್ನ ಮಕ್ಕಳ ಜೊತೆ ಶಾಲೆಗೆ ಕಳಿಸುತ್ತಿಲ್ಲ. ಇಂತಹ ಹುಡುಗ ತನ್ನ ಎದೆಯಲ್ಲಿ ಓದುವ ಆಸೆ ತುಂಬಿಕೊಂಡು ಹೇಗೆಲ್ಲಾ ಮಾಡಿ ಓದಲು ತೊಡಗಿದ್ದ ಹಾಗೂ ಶಾಲೆಗೆ ಸೇರಿದ ಎನ್ನುವುದನ್ನು ನಾವು ಓದುತ್ತಿದ್ದಹಾಗೆ ಕಣ್ಣು ಆದೃವಾಗುತ್ತದೆ. ನಿರ್ಗತಿಕ ಮಗುವು ತನ್ನ ಅದಮ್ಯ ಪ್ರಯತ್ನ ಮುಂದುವರಿಸಿ ಶಿಕ್ಷಕರ ಸಹಾಯದಿಂದ ಶಾಲೆ ಸೇರುವುದು ಖುಷಿ ಉಂಟುಮಾಡುತ್ತದೆ.

ಹೆಸರಿಗಷ್ಟೇ ‘ಖುಷಿ’ಯಾಗಿದ್ದ ಹೆಣ್ಣು ಮಗಳೊಬ್ಬಳ ಕಥೆಯಲ್ಲಿ ಬಡತನದ ಜೊತೆಗೆ ಹೆಣ್ಣಾಗಿರುವುದರಿಂದ ಅವಳ ಆಸೆಯನ್ನು ತಾಯಿ ಕೂಡಾ ನಿರ್ಲಕ್ಷಿಸುವುದು ಇದೆ. ಇದೆಲ್ಲ ಮಕ್ಕಳ ವಿವಿಧ ರೀತಿಯ ಕಷ್ಟಗಳ ಚಿತ್ರ ನೀಡಿದರೆ ಇನ್ನೊಂದು ಕಥೆ ‘ಹೊಸ ಬಟ್ಟೆ’ಯಲ್ಲಿ ಖುಷಿ ಗೆಳತಿಯರೊಂದಿಗೆ ಒಂದೇ ರೀತಿಯ ಬಟ್ಟೆ ಖರೀದಿಸಬೇಕೆಂದುಕೊಳ್ಳುತ್ತಾಳೆ. ಅದಕ್ಕಾಗಿ ಅಮ್ಮನಿಗೆ ತಿಳಿಯದಂತೆ ಮೆಣಸಿನ ಕಾಯಿ ಕೊಯ್ಯಲು ಹೋಗಿ ಬಟ್ಟೆಗಾಗಿ ಹಣ ಸಂಪಾದಿಸುತ್ತಾಳೆ. ಆದರೆ ತಮ್ಮನಿಗೆ ಜ್ವರ ಬಂದು ಅಮ್ಮನ ಕೈಯಲ್ಲಿ ಹಣವಿಲ್ಲದಾದಾಗ ತಾನು ಬಟ್ಟೆಗಾಗಿ ಸಂಪಾದಿಸಿದ ಹಣ ನೀಡಿ ತಮ್ಮನಿಗೆ ಚಿಕಿತ್ಸೆ ನೀಡಿಸಿ ಗುಣಪಡಿಸುವುದು… ತನ್ನ ಬಯಕೆ ಈಡೇರದಿದ್ದರೂ ತಮ್ಮನ ನಗುವಿನಲ್ಲಿ ಸಂತಸ ಹೊಂದುವುದು ಇದೆ. ಈ ಕಥೆಗಳು ಹೆಣ್ಣು ಮಕ್ಕಳ ಅಸಹಾಯಕತೆಯನ್ನೂ ಮತ್ತು ಅವರ ಕಾರುಣ್ಯ ಪ್ರೀತಿಯನ್ನೂ ಅನಾವರಣಗೊಳಿಸುತ್ತವೆ.

ಬಡ್ಯೆಗ ‘ಲೈಟ ಕಂಬ’ ಕಥೆಯ ಹುಡುಗ. ಅವನು ಶಾಲೆಗೆ ಹೋಗುವುದು ಅಮವಾಸ್ಯೆ ಹುಣ್ಣಿಮೆಗೆಗೆ. ಅವನ ಕುಟುಂಬದ ಇತರೆ ಜನರ ವಲಸೆಯಿಂದಾಗಿ ಎತ್ತು ಎಮ್ಮೆ ಮೇಯಿಸುವುದು ಅಲ್ಲದೇ ಶಿವಪ್ಪ ತಾತನ ಅಂಗಳ ಗುಡಿಸುವ ಕಾಯಕವೆಲ್ಲ ಬಡ್ಯಾನ ಮೇಲೆ ಬಿದ್ದು ಅವನು ಶಾಲೆಗೆ ಹೋಗುವುದನ್ನೇ ನಿಲ್ಲಿಸಬೇಕಾಯಿತು. ಆಟಿಕೆ ವಿಮಾನ ಕೊಳ್ಳುವ ಅವನ ಆಸೆಯೂ ಈಡೇರಲಿಲ್ಲ… ಆದರೆ ಲೈಟ ಕಂಬದಿಂದ ಕಾಣಿಸಿದ ಬೆಳಕು ಅವನಲ್ಲಿ ವಿಶೇಷ ಬೆಳಕು ತುಂಬಿತು.

ಮುಂದಿನ ದೇವರ ಉತ್ಸವದಲ್ಲಿ ಜನರೆಲ್ಲ ಬೆರಗಾಗುವಂತೆ ಬಡ್ಯೆಗ ತಾನೇ ತಯಾರಿಸಿದ ವಿಮಾನ ಹಾರಿಸಿದ! ಬಡ್ಯೆಗನ ಪ್ರತಿಭೆ ಮೆಚ್ಚಿ ಕಾಸಗಿ ಶಾಲೆಯವರು ಕರೆದರೂ ಹೋಗದೇ ಸರಕಾರಿ ಶಾಲೆಯ ಮೇಲಿನ ಪ್ರೀತಿಯನ್ನು ಎತ್ತಿ ಹಿಡಿದ. ಹೀಗೆ ಒಳಿತಿನೊಂದಿಗೆ ಮುಗಿಯುವ ಕಥೆ ಮಕ್ಕಳ ಕನಸಿಗೆ ಬಣ್ಣ ತುಂಬುತ್ತದೆ. ಅವರು ಒಂದು ಒಳ್ಳೆಯ ನಿಲುವಿಗೆ ದೃಢವಾದ ಪ್ರಯತ್ನದೊಂದಿಗೆ ಸಜ್ಜಾಗಲು ಪ್ರೇರೇಪಿಸುತ್ತದೆ. ನೋಟಬುಕ್ ಕಥೆಕೂಡಾ ಇಂತಹುದೇ ಅಂಶದ ಮೂಲಕ ಹುಡುಗಿಯ ಆಸೆ ಸಾಕಾರಗೊಳ್ಲುವುದೆಲ್ಲ ಬಹು ಸೊಗಸಾಗಿ ಬಂದಿದ್ದು ಓದಿಯೇ ನೋಡಬೇಕು. ‘ಐಸ್ ಕ್ರೀಮ್’ ಕಥೆ ಮಕ್ಕಳ ಆಸೆಯೊಂದಿಗೆ ಸೇರಿಕೊಂಡಿರುವ ವಾಸ್ತವ ಸಂಕಟವನ್ನು ತೋರಿಸಿದೆ.

ಎಲ್ಲ ಕಥೆಗಳು ಆಗಲೇ ಹೇಳಿದ ಹಾಗೆ ಹಳ್ಳಿಯ ಪರಿಸರವನ್ನೇ ಆವರಿಸಿಕೊಂಡಿದ್ದು ಬಳ್ಳಾರಿಯ ಹಳ್ಳಿಯ ಭಾಷೆಯ ಸೊಗಡನ್ನೇ ಬಳಸಿಕೊಂಡಿದ್ದು ಕಥೆಯನ್ನು ಇನ್ನಷ್ಟು ಆಪ್ತಗೊಳಿಸಿದೆ. ಗ್ರಾಮೀಣ ಮಕ್ಕಳ ಆಟ, ಖುಷಿ, ಅವರ ಸುತ್ತಲಿನ ಸಂಕಟಗಳು, ಶಾಲೆಗಳಲ್ಲಿ ಶಿಕ್ಷಕರ ಸಹಾಯ ಹಸ್ತ, ತಂದೆ ತಾಯಂದಿರ ಅದರಲ್ಲೂ ತಾಯಂದಿರ ಅಸಾಹಯಕತೆ ಮತ್ತು ಪ್ರೀತಿ, ಮಕ್ಕಳ ಮುಕ್ತತೆ ಹಾಗೂ ಗೆಳೆತನ ಇವೆಲ್ಲ ಈ ಕಥೆಗಳಲ್ಲಿ ಬಂದಿದ್ದು ಕಥೆಗಳು ಬರಿ ಕಥೆಗಳಾಗಿರದೆ ಅನುಭವಗಳಾಗಿ ಆವರಿಸಿಕೊಳ್ಳುತ್ತವೆ.

ಎಲ್ಲ ಸ್ತರದ ಮಕ್ಕಳಿಗೂ ಬೇರೆ ಬೇರೆ ಪರಿಸರದ ಕಷ್ಟ ಸುಖಗಳ ಅರಿವು ಉಂಟಾಗಬೇಕಾಗಿರುವುದು ಅಗತ್ಯ ಕೂಡಾ. ಅವರ ಒಳಿತಿನ ವಿಸ್ತಾರಕ್ಕೆ ಇದು ಪೂರಕ. ‘ಕನ್ನಡದಲ್ಲಿ ಈಗ (ಸಾಮಾನ್ಯವಾಗಿ ಕನ್ನಡ ಮಕ್ಕಳ ಸಾಹಿತ್ಯದ ಮೂರನೇ ಹಂತ ಅಂದುಕೊಳ್ಳುವ) ಈ ಬಗೆಯ ವಿಭಿನ್ನವಾದ, ಲೇಖನ ಒಳತುಡಿತದ ಬರವಣಿಗೆ ನಿಧಾನವಾಗಿಯಾದರೂ ಕಾಣತೊಡಗಿದೆ. ಮಕ್ಕಳಿಗಾಗಿ ಸಾಹಿತ್ಯವೆಂದು ಸೃಷ್ಟಿಸುವ ಲಘುತನ ಇಲ್ಲಿಲ್ಲ.’ ಎಂದು ಆನಂದ ಪಾಟೀಲರು ಬೆನ್ನುಡಿಯಲ್ಲಿ ಹೇಳಿದ್ದಾರೆ.

ಇಲ್ಲಿಯ ಕಥೆಗಳು ಅದನ್ನು ಪುಷ್ಟೀಕರಿಸುತ್ತವೆ. ಮಕ್ಕಳ ಸಾಹಿತ್ಯದ ಈ ಪರಿಶ್ರಮದ ಫಲ ಎಲ್ಲ ಓದುಗರಿಗೆ ತಲುಪಬೇಕು. ಮಕ್ಕಳು ಇಂತಹ ಓದಿನ ಖುಷಿಯನ್ನು ಅನುಭವಿಸಲು ಪ್ರೇರೇಪಿಸಬೇಕು. ಶಿವಲಿಂಗಪ್ಪ ಪರಿಶ್ರಮ ಹಾಗೂ ಸಾಹಸದೊಂದಿಗೆ ಒಂದು ಒಳ್ಳೆಯ ಮಾದರಿ ಪುಸ್ತಕ ರೂಪಿಸಿದ್ದು ಮಕ್ಕಳ ಲೋಕಕ್ಕೆ ಹೆಚ್ಚಿನ ಖುಷಿ. ಈ ಖುಷಿಯನ್ನು ಮಕ್ಕಳಿಗೆ ತಲುಪಿಸುವ ಕಾರ್ಯ ಆಗಬೇಕು. ಪುಸ್ತಕ ಕೊಂಡು ಓದಿ ಮಕ್ಕಳಿಗೂ ಓದಿಸಿ, ಕಥೆಯ ವಿಡಿಯೋ ನೋಡಿಸಿ ಪ್ರೋತ್ಸಾಹಿಸುವ ಮೂಲಕ ಶಿವಲಿಂಗಪ್ಪ ಅವರನ್ನು ಅಭಿನಂದಿಸೋಣ.

‍ಲೇಖಕರು Avadhi

June 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: