ಮಕ್ಕಳ ನ್ಯಾಯ ಮಕ್ಕಳ ಹಕ್ಕು

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

|ಕಳೆದ ಸಂಚಿಕೆಯಿಂದ|

ಚೆನ್ನೈನ ಶ್ರೀ ರಾಮಚಂದ್ರ ಮೆಡಿಕಲ್‌ ಕಾಲೇಜು ಮತ್ತು ಡೀಮ್ಡ್‌ ವಿಶ್ವವಿದ್ಯಾಲಯ ಮತ್ತು ಇಂಡಿಯನ್‌ ಕೌನ್ಸಿಲ್‌ ಫಾರ್‌ ಚೈಲ್ಡ್‌ ವೆಲ್ಫೇರ್‌, ತಮಿಳುನಾಡು ಅವರು ಜಂಟಿಯಾಗಿ ಏರ್ಪಡಿಸಿದ್ದ ‘ಮಕ್ಕಳ ದುರುಪಯೋಗ ತಡೆಯುವಲ್ಲಿ ವಿವಿಧ ವೃತ್ತಿಶೀಲರ ಪಾತ್ರʼ ಕುರಿತು ಮೂರು ದಿನಗಳ ಸಮ್ಮೇಳನ (ಫೆಬ್ರವರಿ ೨೦೦೪). ಕೇಂದ್ರ ಸರ್ಕಾರದ ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಫಾರ್‌ ಸೋಷಿಯಲ್‌ ಡಿಫೆನ್ಸ್‌ ಅವರ ಪ್ರಾಯೋಜಿತ ಕಾರ್ಯಕ್ರಮ. ಬೆಂಗಳೂರಿನಿಂದ ಅಪ್ಸಾ ಸಂಸ್ಥೆಯ ಶೀಲಾ ದೇವರಾಜ್‌ ಮತ್ತು ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ನಿಂದ ನಾವು ಭಾಗವಹಿಸಲು ಹೋಗಿದ್ದೆವು. ಬೆಂಗಳೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿದ್ದ ನೀನಾ ನಾಯಕ್‌ ಮತ್ತು ನಿಮ್ಹಾನ್ಸ್‌ನ ಮಕ್ಕಳ ಮನೋವಿಜ್ಞಾನ ತಜ್ಞರಾದ ಡಾ. ಶೇಖರ್‌ ಶೇಷಾದ್ರಿಯವರು ಅಲ್ಲಿ ಸಂಪನ್ಮೂಲ ವ್ಯಕ್ತಿಗಳು.

ʼಮಕ್ಕಳ ಹಕ್ಕುಗಳು ಹಾಗೂ ಲೈಂಗಿಕ ಶೋಷಣೆಗೊಳಗಾದ ಮಕ್ಕಳ ರಕ್ಷಣೆ ಮತ್ತು ಪುನರ್ವಸತಿʼ ಕುರಿತು ನಡೆದ ಗೋಷ್ಠಿಯಲ್ಲಿ ಮಾತನಾಡಿದ ಡಾ. ಶೇಖರ್‌ ಶೇಷಾದ್ರಿಯವರು “ಆಪ್ತಸಮಾಲೋಚನೆ ಬೇರೆ ಬೇರೆ ಸಂದರ್ಭದಲ್ಲಿ ಬಹುತೇಕ ಎಲ್ಲರಿಗೂ ಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ ಎರಡು ರೀತಿಯ ಮಕ್ಕಳಿಗೆ ಅದು ಅತ್ಯಾವಶ್ಯಕ. ಒಂದು ಯಾವ ಮಕ್ಕಳಿಗೆ ಆರೈಕೆ, ಪೋಷಣೆ ಮತ್ತು ರಕ್ಷಣೆ ಆವಶ್ಯಕವಾಗಿ ಬೇಕಾಗಿರುವ ಮಕ್ಕಳು. ಇನ್ನೊಂದು ಕಾನೂನಿನೊಡನೆ ಸಂಘರ್ಷದಲ್ಲಿ ಇದ್ದಾರೆ ಎಂದು ಗುರುತಿಸಲಾಗಿರುವ ಮಕ್ಕಳು.” ಹಾಗೆ ಹೇಳುತ್ತಲೇ ನನ್ನತ್ತ ತಿರುಗಿ ಒಂದು ಆಹ್ವಾನ ಕೊಟ್ಟರು, ʼವಾಸು ವೇದಿಕೆಗೆ ಬಾ. ನಾವೊಂದು ರೋಲ್‌ ಪ್ಲೇ ಮಾಡೋಣʼ.  

ಏನೂ ಸಿದ್ಧತೆಯಿಲ್ಲದೆ ವೇದಿಕೆಗೆ ಹೋದ ನಾನು ತೊಂದರೆಯಲ್ಲಿರುವ ಮಗುವಾಗಿ ಮತ್ತು ಶೇಖರ್‌ ಶೇಷಾದ್ರಿ ಒಬ್ಬ ಆಪ್ತಸಮಾಲೋಚಕನಾಗಿ ಐದಾರು ನಿಮಿಷ ಮಾತನಾಡಿದೆವು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರು ನಮ್ಮ ಮಾತುಕತೆಯಿಂದ ಸಮರ್ಪಕವಾದ ಪ್ರಶ್ನೆಗಳು ಅಥವಾ ಮಾತುಗಳು ಮತ್ತು ಯಾವುದು ಸೂಕ್ತವಾಗಿತ್ತು ಅಥವಾ ಇರಲಿಲ್ಲ, ಹಾಗೆಯೇ ಅವು ಮಕ್ಕಳ ಹಕ್ಕುಗಳಿಗೆ ಎಷ್ಟರ ಮಟ್ಟಿಗೆ ಪೂರಕವಾಗಿತ್ತು ಅಥವಾ ಇಲ್ಲ ಎಂದು ಗುರುತಿಸಬೇಕಿತ್ತು. ಅಧಿವೇಶನದ ನಂತರ ಬೆಂಗಳೂರಿನಿಂದ ಈ ಕಾರ್ಯಕ್ರಮಕ್ಕೆ ಹೋಗಿದ್ದ ನಾವೆಲ್ಲಾ ಚಹಾ ಕುಡಿಯುತ್ತಾ ಮಾತನಾಡುತ್ತಿದ್ದಾಗ, ನೀನಾ ನಾಯಕ್‌ ಒಂದು ಸೂಚನೆ ಮುಂದಿಟ್ಟರು. ʼವಾಸು ನೀನು ಸೋಷಿಯಲ್‌ ವರ್ಕ್‌ ಜೊತೆಗೆ ಕ್ರಿಮಿನಾಲಜಿ ಓದಿರೋದು ಅಲ್ವ. ಶೀಲಾ ಚೈಲ್ಡ್‌ಲೈನ್‌ ನಡೆಸುವವರು ಮತ್ತು ಮಕ್ಕಳೊಡನೆ ನೇರವಾಗಿ ಕೆಲಸ ಮಾಡುವವರು, ನೀವು ಇಬ್ರೂ ಚೈಲ್ಡ್‌ ವೆಲ್ಫೇರ್‌ ಕಮಿಟಿಗೆ ಅಪ್ಲೈ ಮಾಡ್ಕೊಳಿ. ಈಗ ಎರಡು ವೇಕೆನ್ಸಿ ಇದೆ.ʼ 

ತಟಕ್ಕನೆ ನನಗೆ ನೆನಪಿಗೆ ಬಂದದ್ದು ನನ್ನಕ್ಕ ನಾಗಲತಾ. ಚೈಲ್ಡ್‌ ವೆಲ್ಫೇರ್‌ ಕಮಿಟಿ (ಸಿಡಬ್ಲೂಸಿ), ಅರ್ಥಾತ್‌ ಮಕ್ಕಳ ಕಲ್ಯಾಣ ಸಮಿತಿ, ನೀನಾ ಅವರ ಮಾತು ನನ್ನನ್ನ ಸುಮಾರು ಇಪ್ಪತ್ತು ವರ್ಷಗಳಷ್ಟು ಹಿಂದಕ್ಕೆ ಒಯ್ದಿತ್ತು.

ನನ್ನ ಮೊದಲನೇ ಅಕ್ಕ ಸೀತಾದೇವಿಗೆ ಮೊದಲ ಮಗು ಜನಿಸಿದಾಗ ನಾನು ಪಿಯೂಸಿ ವಿದ್ಯಾರ್ಥಿ. ನನ್ನಕ್ಕ ಮಹಾರಾಜಾ ಕಾಲೇಜಿನಲ್ಲಿ ಬಿಬಿಎಂ ಅಧ್ಯಯನದಲ್ಲಿದ್ದಳು. ಮಗು ಯಾವುದಾದರೂ ಕಾರಣಕ್ಕೆ ಅತ್ತರೆ ಅದನ್ನು ಮಾತನಾಡಿಸಬೇಕಿತ್ತು. ಮಗು ಸುಮ್ಮನಾಗುತ್ತಿತ್ತು. ಎಲ್ಲರೂ ಅವರವರಿಗೆ ತೋಚಿದಂತೆ ಮಗುವಿನೊಡನೆ ಮಾತನಾಡುವುದು ಸಾಮಾನ್ಯ. ಲತಾ ಅಕ್ಕನ ಮಾತುಗಳು ಬಹಳ ವಿಶಿಷ್ಟವಾಗಿರುತ್ತಿದ್ದವು. ʼಯಾಕಮ್ಮಾ ಅಳೋದು. ಯಾರೇನ್ಮಾಡಿದ್ರಮ್ಮಾ. ಸುಮ್ನಿರು ನಿಂಗೆ ಹೊಡ್ದೋರ್ನ ಮಕ್ಕಳ ಕೋರ್ಟಿಗೆ ತೊಗೊಂಡ್ಹೋಗೋಣ…ʼ. ಈ ಮಾತಿಗೆ ಎಲ್ಲರೂ ನಗುವುದು, ಮಗು ಬೆರಗಾಗಿ ದೊಡ್ಡ ಕಣ್ಣುಗಳಲ್ಲಿ ನೋಡುವುದು ಆಗುತ್ತಿತ್ತು.

ಅರೆ ಮಕ್ಕಳ ಕೋರ್ಟ್‌! ಚೈಲ್ಡ್‌ ವೆಲ್ಫೇರ್‌ ಕಮಿಟಿ, ಒಂದು ರೀತಿಯಲ್ಲಿ ಮಕ್ಕಳಿಗೆ ನ್ಯಾಯ ಒದಗಿಸುವ ಜವಾಬ್ದಾರಿ ಇರುವ ನ್ಯಾಯ ವ್ಯವಸ್ಥೆ. ಆಗಷ್ಟೇ ಆರಂಭವಾಗಿದ್ದ ಮಕ್ಕಳ ಕಲ್ಯಾಣ ಸಮಿತಿಗಳು ನಿಧನಿಧಾನವಾಗಿ ಮಕ್ಕಳ ಕೋರ್ಟ್‌ ಅಂತ ಹೆಸರು ಪಡೆದಿತ್ತು.

***

ಹಿಂದೊಂದು ಕಾಲದಲ್ಲಿ ಮಕ್ಕಳೆಂದರೆ ಯಾರು ಬೇಕಾದರೂ ಹೇಗೆ ಬೇಕಾದರೂ ನಡೆಸಿಕೊಳ್ಳಬಹುದಾದ ಜೀವಿಗಳೋ ಎಂಬಂತೆ ಇದ್ದ ಮನೋಭಾವವಿತ್ತು. ಉದಾಹರಣೆಗೆ ೧೭೦೦ರ ಇಂಗ್ಲೆಂಡಿನ ನ್ಯಾಯ ವ್ಯವಸ್ಥೆಯನ್ನು ಕುರಿತು ಒಂದು ಅಣಕವಿದೆ. ʼಮಕ್ಕಳನ್ನು ಯಾರಾದರೂ ಅಪಹರಿಸಿದರೆ, ಅದನ್ನ ಮಕ್ಕಳ ಮೇಲೆ ಆಗಿರುವ ಅಪರಾಧ, ಮಗುವಿನ ಕಳ್ಳತನ ಅಂತ ಪೊಲೀಸರು ದೂರು ದಾಖಲಿಸಬೇಕೆಂದರೆ, ಆ ಮಗು ಎಂತಹ ಬಟ್ಟೆ ಹಾಕಿಕೊಂಡಿತ್ತು ಅಂತ ನೋಡ್ತಿದ್ದರು. ಆಗ ಅದನ್ನ ಬಟ್ಟೆಯ ಕಳ್ಳತನ ಅಂತ ಪರಿಗಣಿಸಿ ತನಿಖೆ ಆಗ್ತಿತ್ತು. ಒಂದು ರೀತಿಯಲ್ಲಿ ಸತ್ತ ದೇಹ ಮತ್ತು ಜೀವವಿರುವ ಮಗು ಎರಡಕ್ಕೂ ಯಾವುದೇ ಕಾನೂನಿನ ರಕ್ಷಣೆಯಿರಲಿಲ್ಲ!ʼ.

ಮಕ್ಕಳೆಂದರೆ ಚಿಕ್ಕ ದೇಹದ ವಯಸ್ಕರು ಎಂದೇ ಸಾಕಷ್ಟು ಕಡೆಗಳಲ್ಲಿ ಭಾವನೆಯಿದ್ದದ್ದು. ಹೀಗಾಗಿ ಮಕ್ಕಳನ್ನೂ ವಯಸ್ಕರಂತೆಯೇ ಆಗಿನ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸಿ ವಯಸ್ಕರಂತೆಯೇ ಶಿಕ್ಷೆ – ಮರಣದಂಡನೆಯನ್ನೂ ವಿಧಿಸಲಾಗುತ್ತಿತ್ತು. ೧೮೦೦ರ ಮಧ್ಯ ಭಾಗದಲ್ಲಿ ಯೂರೋಪು, ಅದರಲ್ಲೂ ಮುಖ್ಯವಾಗಿ ಇಂಗ್ಲೆಂಡ್‌ ಮತ್ತು ಅಮೇರಿಕೆಯಲ್ಲಿ ಮಕ್ಕಳು ಮತ್ತು ಯುವಜನರನ್ನು ಕುರಿತು ವಿಭಿನ್ನವಾಗಿ ಚಿಂತಿಸಬೇಕು ಎಂಬ ವಿಚಾರ ಮಕ್ಕಳ ನ್ಯಾಯಕ್ಕೆ ಮೊಳಕೆಯಾಯಿತು ಎನ್ನಬಹುದು.

ಅಮೇರಿಕೆಯಲ್ಲಿ ಪೋಷಕರು ಮತ್ತು ವಾರಸುದಾರರಿಲ್ಲದ ನೂರಾರು ಸಾವಿರಾರು ಮಕ್ಕಳು ಬೀದಿಗಳಲ್ಲಿ ಇದ್ದರು ಮತ್ತು ಅವರಲ್ಲಿ ಸಾಕಷ್ಟು ಮಕ್ಕಳು ಬದುಕು ನಡೆಸಲು ಏನಾದರೂ ಮಾಡಬೇಕಿತ್ತು. ಅದು ಕೂಲಿ, ಕೆಲಸ, ಏನಾದರೂ ಮಾರುವುದು, ಚಿಕ್ಕಪುಟ್ಟ ಕಳ್ಳತನ, ಹೊಡೆದಾಟ, ಹಲ್ಲೆ, ಕೊಲೆ, ದೊಂಬಿ, ಸೂಳೆಗಾರಿಕೆ ಹೀಗೆ ಏನೇನೋ. ಎಲ್ಲೋ ಒಂದಷ್ಟು ಮಕ್ಕಳಿಗೆ ಅದೃಷ್ಟದಾಟವೆಂಬಂತೆ ಯಾರಾದರೂ ಸಹೃದಯರು ಸಿಕ್ಕರೆ ಬದುಕು ಬದಲಿಸಿಕೊಳ್ಳುತ್ತಿದ್ದರು. ಅಂತಹ ಸಂದರ್ಭದಲ್ಲಿ ೧೮೪೦ರ ಹೊತ್ತಿಗೆ ನ್ಯೂಯಾರ್ಕ್‌ನಲ್ಲಿ ನಿರಾಶ್ರಿತರ ಕುಟೀರಗಳನ್ನು ಆರಂಭಿಸಿದರು. ಮುಂದಿನ ದಿನಗಳಲ್ಲಿ ಅವು ಜ್ಯುವೆನೈಲ್‌ ಜಸ್ಟಿಸ್‌ ಸಿಸ್ಟಂ ಎಂದು ಬೆಳೆಯಿತು. ಮುಂದೆ ವ್ಯವಸ್ಥಿತವಾದ ನ್ಯಾಯವ್ಯವಸ್ಥೆ, ಅದಕ್ಕೆ ಪೂರಕವಾಗಿ ಕಾನೂನು ಬೆಳೆಯುತ್ತಾ ಹೋಯಿತು.

ಭಾರತದಲ್ಲಿ ಮಕ್ಕಳ ರಕ್ಷಣೆ ಕುರಿತು ಬ್ರಿಟಿಷರ ಕಾಲದಲ್ಲಿ ಕೆಲವು ಕಾನೂನುಗಳು ಬಂದಿದ್ದರೂ, ೧೯೫೮ರಲ್ಲಿ ಹೊರಡಿಸಲಾದ ತಪ್ಪು ಮಾಡಿದವರ ಮೇಲಿನ ಮೇಲ್ವಿಚಾರಣೆ ಕಾನೂನು ಪ್ರಾಯಶಃ ಮಕ್ಕಳ ನ್ಯಾಯದ ಹೆಜ್ಜೆಗಳು ಎನ್ನಬಹುದು. ಇದರಲ್ಲಿ ಮುಖ್ಯವಾಗಿ ಕಂಡದ್ದು ೨೧ ವರ್ಷದೊಳಗಿನವರನ್ನು ಬಂಧೀಖಾನೆಗಳಲ್ಲಿ ಇರಿಸಬಾರದು ಎಂಬುದು. ಮುಂದೆ ೧೯೮೬ರಲ್ಲಿ ಮಕ್ಕಳ ನ್ಯಾಯ ಕಾಯಿದೆ ಜಾರಿಯಾಯಿತು. ಇದರಲ್ಲಿ ೧೬ ವರ್ಷದೊಳಗಿನ ಹುಡುಗಿಯರು ಮತ್ತು ೧೮ ವರ್ಷದೊಳಗಿನ ಹುಡುಗರನ್ನು ಜ್ಯುವೆನೈಲ್‌ ಎಂದು ಪರಿಗಣಿಸಲಾಗಿತ್ತು. ಇದರಲ್ಲಿ ಏನಾದರೂ ಕಾನೂನು ಉಲ್ಲಂಘನೆ ಮಾಡಿದ ಮಕ್ಕಳು ಅಲ್ಲದೆ ತೊಂದರೆಯಲ್ಲಿರುವ, ಹಿಂಸೆ, ಕಷ್ಟದಲ್ಲಿರುವ ಮಕ್ಕಳನ್ನು ಕೂಡಾ ಪರಿಗಣಿಸಿ ಅವರಿಗೆ ನ್ಯಾಯ ಒದಗಿಸುವ, ಪಾಲನೆ ಪೋಷಣೆ ಒದಗಿಸುವ ಕೆಲಸಗಳನ್ನು ಈ ಕಾಯಿದೆ ಒಳಗೊಂಡಿತ್ತು.

ಇಲ್ಲೊಂದು ಮಾತು ಹೇಳಲೇಬೇಕು. ಈ ಜ್ಯುವೆನೈಲ್‌ ಜಸ್ಟಿಸ್‌ ಎಂಬುದನ್ನು ನಮ್ಮ ದೇಶದ ಎಲ್ಲ ಕಾನೂನು ಶಾಲೆಗಳಲ್ಲಿ ಪಾಠ ಮಾಡಿರುತ್ತಾರೆ. ನಮ್ಮ ವಕೀಲರು, ನ್ಯಾಯಾಧಿಶರು ಮತ್ತು ಅದಕ್ಕಿಂತಲೂ ಹೆಚ್ಚಾಗಿ ಕಾನೂನು ಪುಸ್ತಕಗಳನ್ನು ಬರೆಯುವವರು, ಪೊಲೀಸರು, ಮಾಧ್ಯಮಗಳ ವರದಿಗಾರರು, ಸಂಪಾದಕರು ಈ ʼಜ್ಯುವೆನೈಲ್‌ʼ ಎಂಬ ಪದವನ್ನು ಮೇಲಿಂದ ಮೇಲೆ ʼಕನ್ನಡʼದಲ್ಲೂ ಬಳಸಿರುತ್ತಾರೆ. ʼಜುವೆನೈಲ್‌ʼ ಎಂಬುದಕ್ಕೆ ʼಡೆಲಿಂಕ್ವೆನ್ಸಿʼ ಪದ ತಳಕು ಹಾಕಿಕೊಂಡಿರುವುದರಿಂದ ಯಾರೋ ಮಹಾನುಭಾವರು ʼಬಾಲಾಪರಾಧಿʼ ಎಂದು ಅನುವಾದಿಸಿಬಿಟ್ಟರು. ಅದನ್ನೇ ಎಲ್ಲರೂ ಉಜ್ಜಿ ಉಜ್ಜೀ ಅದೇ ಸರಿ ಎಂಬಂತೆ ಮಾಡಿಬಿಟ್ಟಿದ್ದಾರೆ.

ಮೂಲತಃ ಜ್ಯುವೆನೈಲ್‌ ಎಂಬ ಲ್ಯಾಟಿನ್‌ ಪದದ ಅರ್ಥ ʼಮಗುʼ ಎಂದು. ನಮ್ಮ ಪರಿಸರದಲ್ಲಿ ಈಗಿನ ವ್ಯವಸ್ಥೆ ಮತ್ತು ವ್ಯಾಖ್ಯಾನದಂತೆ ʼ೧೮ ವರ್ಷದೊಳಗಿನ ಎಲ್ಲ ವ್ಯಕ್ತಿಗಳು – ಮಕ್ಕಳು ಅಥವಾ ಜ್ಯುವೆನೈಲ್ಸ್‌ʼ. ಡೆಲಿಕ್ವೆಂನ್ಸಿ ಎಂದರೆ ಸಮಾಜದ ಸಿದ್ಧ ಮಾದರಿಗಳು, ಕಟ್ಟುಪಾಡುಗಳು, ನಿಯಮಗಳು, ಸರಿ ತಪ್ಪುಗಳನ್ನು ಧಿಕ್ಕರಿಸುವವರನ್ನು ಗುರುತಿಸುವ ಪದ. ಇದರಲ್ಲಿ ʼಅಪರಾಧʼ ಎಂಬ ಪದವನ್ನು ‘ಕಂಡು’ ಮೊದಲು ʼಜುವೆನೈಲ್‌ ಡೆಲಿಂಕ್ವೆನ್ಸಿʼ ಎಂಬ ಪದವನ್ನು ಭಾರತೀಯ ಭಾಷೆಗಳಿಗೆ ಅನುವಾದಿಸಿದವರ ʼಅಪರಾಧʼವೇ ಹೆಚ್ಚಾಗಿದೆ.

ಮೊದಮೊದಲು ಇದು ಎಲ್ಲೋ ಕನ್ನಡದವರದ್ದೇ ಎಡವಟ್ಟು ಎಂದು ನಾನೆಂದುಕೊಂಡಿದ್ದೆ. ಆದರೆ ತಮಿಳು, ತೆಲುಗು, ಹಿಂದಿಯಲ್ಲೂ ಇದೇ ಅರ್ಥ! [ತೆಲುಗಿನಲ್ಲಿ ʼಬಾಲ ನೇರಸ್ತುಡುʼ ಎಂದೇ ಬರೆಯುತ್ತಿದ್ದರು.] ಮಕ್ಕಳ ನ್ಯಾಯ ಕುರಿತು ನಾನು ನಡೆಸುವ ಎಲ್ಲ ಕಾರ್ಯಾಗಾರಗಳಲ್ಲಿ ʼಬಾಲಾಪರಾಧಿʼ ಎನ್ನುವ ಪದವನ್ನು ಜನರ ತಲೆಯಿಂದ ಅಳಿಸಿ, ಈಗ ಜ್ಯುವೆನೈಲ್‌ ಡೆಲಿಂಕ್ವೆಂನ್ಸಿ ಎನ್ನುವ ಪದದ ಬಳಕೆಯಿಲ್ಲ, ಬದಲಿಗೆ ʼಕಾನೂನಿನೊಡನೆ ಸಂಘರ್ಷದಲ್ಲಿರುವ ಮಕ್ಕಳು (Children in conflict with law)ʼ ಎಂಬ ಗುರುತಿಸುವಿಕೆ ಇದೆ ಎಂದು ಪರಿವರ್ತಿಸುವುದೇ ದೊಡ್ಡ ಕೆಲಸ. ಇದನ್ನು ಪೊಲೀಸರು, ವಕೀಲರು, ಸರ್ಕಾರದ ಸಾರ್ವಜನಿಕ ಫಿರ್ಯಾದುದಾರರು ಅಷ್ಟೇ ಅಲ್ಲ ನ್ಯಾಯಾಧೀಶರುಗಳ ಪದಬಳಕೆಯವರೆಗೂ ಮಾಡುತ್ತಲೇ ಬಂದಿದ್ದೇನೆ.  

ಇತ್ತೀಚೆಗೆ ಬೆಳಗಾವಿಯಲ್ಲಿ ಮಕ್ಕಳ ನ್ಯಾಯ ಕಾರ್ಯಾಗಾರದ ಉದ್ಘಾಟನಾ ಭಾಷಣ ಮಾಡುತ್ತಿದ್ದ ಒಬ್ಬ ಹಿರಿಯ ನ್ಯಾಯಾಧೀಶರು ಸತತ ಮೂರು ಬಾರಿ ʼಬಾಲಾಪರಾಧಿಗಳುʼ ಎಂದು ಬಳಸಿದರು. ನಾಲ್ಕನೇ ಬಾರಿ ಅವರದನ್ನು ಬಳಸಿದಾಗ, ನಾನು ಎದ್ದು ನಿಂತು ವಿನಯದಿಂದಲೇ ʼಸರ್‌ ಆ ಪದದ ಬಳಕೆ ಮಾಡಬಾರದು. ಆ ಪದಕ್ಕೆ ಅರ್ಥವೇ ಇಲ್ಲ. ದಯಮಾಡಿ ಕಷ್ಟವಾದರೂ ಪರವಾಗಿಲ್ಲ, ಕಾನೂನಿನೊಡನೆ ಸಂಘರ್ಷದಲ್ಲಿರುವ ಮಕ್ಕಳು ಎಂದು ಬಳಸಿʼ ಎಂದೆ. ಆತ ಆಗಲಿ ಎಂದವರು ಆ ಪದವನ್ನು ಬಳಸದೇ ಮುಂದಿನೆರೆಡು ನಿಮಿಷದಲ್ಲಿ ತಮ್ಮ ಭಾಷಣ ಮುಗಿಸಿಯೇ ಬಿಟ್ಟರು.

ಇದಕ್ಕೆ ಮುಖ್ಯ ಕಾರಣ, ʼಅಪರಾಧʼ ಎನ್ನುವ ಪದದ ಅರ್ಥ ಮತ್ತು ವಿಶ್ಲೇಷಣೆ. ಯಾರಾದರೂ ಯಾವುದಾದರೂ ಕಾನೂನು ಮುರಿಯುವ ಕೆಲಸ ಮಾಡಿದರೆ [ಕಳ್ಳತನ, ಮೋಸ, ವಂಚನೆ, ದರೋಡೆ, ಕೊಲೆ, ಅತ್ಯಾಚಾರ, ಇತ್ಯಾದಿ] ಅವರನ್ನು ಪೊಲೀಸರು ಅನುಮಾನದ ಮೇಲೆ ಅಥವಾ ಸಾಕ್ಷಿಯೊಡನೆ ಬಂಧಿಸಿದಾಗ ಅವರನ್ನು ವಿವಿಧ ಕಾಯಿದೆಗಳ ವ್ಯಾಖ್ಯಾನಗಳಂತೆ ʼಆಪಾದಿತರುʼ ಎಂದು ಮಾತ್ರ ಗುರುತಿಸಬೇಕು. ಪೊಲೀಸ್‌ ದೂರಾಗಿದ್ದರೂ ಆ ವ್ಯಕ್ತಿಗಳು ಕೇವಲ ʼಆಪಾದಿತರುʼ. ನ್ಯಾಯಾಲಯದಲ್ಲಿ ವಿಚಾರಣೆಯಾಗಿ, ನ್ಯಾಯಾಲಯ ʼನಿಶ್ಚಿತ ಕಾನೂನುಗಳಡಿ ಆಪಾದನೆಗಳನ್ನು ಪುರಾವೆ ಸಮೇತ ಒಪ್ಪಿಕೊಂಡು ಶಿಕ್ಷೆಯನ್ನು ಘೋಷಿಸಿದಾಗ ಆ ಆಪಾದಿತರು, ಅಪರಾಧಿಗಳು ಆಗುತ್ತಾರೆʼ. 

ಅಪರಾಧ ಶಾಸ್ತ್ರದ ಒಂದು ಸರಳ ವ್ಯಾಖ್ಯಾನದಲ್ಲಿ ʼಅಪರಾಧವೆಂದರೆ, ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಬಹುದಾದ ಕೃತ್ಯʼ ಎಂದೇ ಇರುವುದು.  ಇಷ್ಟೇ ಅಲ್ಲ ಭಾರತ ಒಪ್ಪಿರುವುದು, ʼಅಪರಾಧಿಗಳ ಸುಧಾರಣಾ ತತ್ತ್ವʼ. ನಮ್ಮಲ್ಲಿ ಶಿಕ್ಷೆ ಎಂದರೆ ಅದು ಸುಧಾರಣೆಗಾಗಿ, ಮನಃ ಪರಿವರ್ತನೆಗಾಗಿ. ಬಂಧೀಖಾನೆಯಲ್ಲಿ ಇರಿಸುವುದು ಮತ್ತು ಕಠಿಣ ಕೆಲಸಗಳಲ್ಲಿ ತೊಡಗಿಸುವುದು ಎಲ್ಲವೂ ಕಾಲಾನುಕಾಲಕ್ಕೆ ʼಅಪರಾಧಿಕ ಕೃತ್ಯ ಮಾಡಿರುವವರು ಬದಲಾಗುತ್ತಾರೆ, ಅವರನ್ನು ಮತ್ತೆ ಸಮಾಜಕ್ಕೆ ಬರಮಾಡಿಕೊಳ್ಳಬೇಕುʼ ಎನ್ನುವುದರ ಮೇಲೆ ಅವಲಂಬಿತವಾಗಿದೆ. ಮಧ್ಯಕಾಲೀನ ಚಿಂತನೆಯಾದ ಹಮುರಬಿಯ ನ್ಯಾಯ ವ್ಯವಸ್ಥೆ – ಕಣ್ಣಿಗೆ ಕಣ್ಣು, ಕೈಗೆ ಕೈ, ಜೀವಕ್ಕೆ ಜೀವ ತೆಗೆಯುವುದನ್ನು ಭಾರತ ಒಪ್ಪಿಲ್ಲ.

ಇಷ್ಟರ ಮೇಲೆ ಭಾರತದಲ್ಲಿ, ಅಷ್ಟೇಕೆ ವಿಶ್ವದ ಬಹುಭಾಗಗಳಲ್ಲಿ ೧೮ ವರ್ಷದೊಳಗಿನವರು ಕಾನೂನು ವಿರೋಧೀ ಕೃತ್ಯಗಳನ್ನು ಮಾಡಿದರೆ ಅವರಿಗೆ ಶಿಕ್ಷೆ ವಿಧಿಸಬಾರದು ಬದಲಿಗೆ ಅವರನ್ನು ಸುಧಾರಿಸಬೇಕು ಎನ್ನುವುದನ್ನು ಒಪ್ಪಲಾಗಿದೆ. (೧೬-೧೮ರವರೆಗೆ ಶಿಕ್ಷೆಯಂತೆ! ಈ ಬಗ್ಗೆ ಮುಂದೆ ಮಾತನಾಡೋಣ). ಹೀಗಿರುವಾಗ ʼಬಾಲಾಪರಾಧಿʼ ಪದ ಹೇಗೆ ಹುಟ್ಟಿತು ಎನ್ನುವುದು ನನಗೆ ಸದಾ ಕಾಲಕ್ಕೂ ಸೋಜಿಗ.

ನಾನು ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಇದ್ದ ಕಾಲದಲ್ಲಿ ʼಬಾಲಪರಾಧಿʼ ಎಂದು ಬರೆದ ಚಿಕ್ಕ ದೊಡ್ಡ ಪತ್ರಿಕೆಗಳು, ವಾರ್ತಾ ವಾಹಿನಿಗಳು ಎಲ್ಲರಿಗೂ ಪತ್ರ ಬರೆದೆ, ಕೆಲವರಿಗೆ ನೋಟೀಸು ಕೊಟ್ಟು ಕರೆಸಿ ಬದಲಾಯಿಸಿಕೊಳ್ಳಲು ಸೂಚಿಸಿದೆ. ಒಂದು ವಾರ್ತಾ ವಾಹಿನಿಯಲ್ಲಿ ಸಂದರ್ಶನದಲ್ಲಿ ಕುಳಿತಿದ್ದಾಗ, ಮೊದಲು ಸಂದರ್ಶನ ಮಾಡುತ್ತಿದ್ದವರಿಗೆ ಪದ ಬದಲಿಸಲು ಹೇಳಿದೆ. ಆಮೇಲೆ ಪರದೆಯ ಮೇಲೆ ಮಿಂಚುತ್ತಿದ್ದ ʼಕ್ಯಾಪ್ಶನ್‌ʼ ಬದಲಿಸುವವರೆಗೆ ಬೇರೆ ಮಾತಿಲ್ಲ ಎಂದು ಹೇಳಿ ಬದಲಿಸಿಸಿದೆ.  

ಈಗಲೂ ಅನೇಕರಿಗೆ ಕಾನೂನಿನೊಡನೆ ಸಂಘರ್ಷದಲ್ಲಿರುವ ಮಕ್ಕಳು ಮತ್ತು ಪೋಷಣೆ ಮತ್ತು ರಕ್ಷಣೆ ಆವಶ್ಯಕತೆಯಿರುವ ಮಕ್ಕಳು ಬೇರೆ ಬೇರೆ ಎಂಬ ಸ್ಪಷ್ಟತೆ ಇಲ್ಲ. ಪೊಲೀಸರಿಗೂ ಸಾಕಷ್ಟು ಜನರಿಗೆ ಗೊತ್ತಿಲ್ಲ. ತೊಂದರೆಯಲ್ಲಿರುವ ಮಕ್ಕಳನ್ನಿಟ್ಟುಕೊಂಡಿರುವ ಯಾವುದೇ ನಿಲಯ ʼರಿಮ್ಯಾಂಡ್‌ ಹೋಂʼ ಅಥವಾ ಅನಾಥಾಲಯ! ನಮ್ಮ ಸಿನೆಮಾಗಳೂ, ಕೆಲವು ಕತೆಗಾರರೂ, ಲೇಖಕರೂ ಕೂಡಾ ಈಗಲೂ (೨೦೦೦ದ ನಂತರವೂ) ಇದೇ ಅರ್ಥದಲ್ಲಿ ಕತೆ ಬರೆಯುತ್ತಾರೆ.

ಎರಡು ವರ್ಷಗಳ ಹಿಂದೆ ಸಾಹಿತಿಗಳ ಸಭೆಯಲ್ಲಿ, ʼದಯಮಾಡಿ ಕತೆ ನಾಟಕ ಕವನ ಬರೆಯುವವರು ಈಗಿನ ಬದಲಾದ ಪರಿಸ್ಥಿತಿಗಳನ್ನು ಅರಿತುಕೊಳ್ಳಬೇಕು. ಬದಲಾಗಿರುವ ಕಾನೂನುಗಳು, ವ್ಯವಸ್ಥೆಗಳನ್ನು, ಮಕ್ಕಳ ಹಕ್ಕುಗಳನ್ನು ತಿಳಿದುಕೊಂಡು ಬರೆಯಿರಿ. ಇಲ್ಲವಾದರೆ ನೀವೇ ಅನಾಹುತ ಮಾಡಿದಂತಾಗುತ್ತದೆʼ ಎಂದಾಗ ಹಲವರು ಸಿಟ್ಟಾಗಿದ್ದರು. ಉದಾ. ʼದಾರಿಯಲ್ಲಿ ಸಿಕ್ಕ ಅನಾಥ ಮಗುವನ್ನು ತೆಗೆದುಕೊಂಡು ಹೋಗಿ ಸ್ನಾನ ಮಾಡಿಸಿ ನಾನು ಬೆಳೆಸಿದೆʼ ಎಂದು ಈಗಲೂ ಕೆಲವರು ಕತೆ, ಕವನ, ನಾಟಕ, ಬರೆಯುತ್ತಾರೆ. ಹಾಗೆ ಮಾಡುವುದು ʼಮಕ್ಕಳ ನ್ಯಾಯʼ ಕಾಯಿದೆಯ ಪ್ರಕಾರ ಅಪರಾಧವಾಗುತ್ತದೆ. ಶಿಕ್ಷೆಯಿದೆ. 

***

೧೯೮೬ರ ಮಕ್ಕಳ ನ್ಯಾಯ ಕಾಯಿದೆ ೨೦೦೦ ಮತ್ತು ೨೦೧೫ರಲ್ಲಿ ಎರಡೆರೆಡು ಬಾರಿ ತಿದ್ದುಪಡಿಯಾಗಿ ‘ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯಿದೆ’ ಎಂದು ಬದಲಾಗಿದೆ. ಈ ಕಾಯಿದೆಯ ಜಾರಿ ವ್ಯವಸ್ಥೆಯ ಭಾಗವೇ ʼಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿʼ (District Child Welfare Committee – CWC) ಮತ್ತು ʼಜಿಲ್ಲಾ ಮಕ್ಕಳ ನ್ಯಾಯ ಮಂಡಳಿʼ (District Juvenile Justice Board – JJB). ಇದು ರಾಷ್ಟ್ರೀಯ ಮಟ್ಟದ ಸಮಗ್ರ ಮಕ್ಕಳ ರಕ್ಷಣಾ ಯೋಜನೆ (Integrated Child Protection Scheme – ICPS)ಯ ಭಾಗ.

ಈಗ ಮಕ್ಕಳ ನ್ಯಾಯ ಕಾಯಿದೆಯ ಜಾರಿಗಾಗಿ ಪ್ರತಿ ರಾಜ್ಯದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯಗಳು ಅಸ್ತಿತ್ವದಲ್ಲಿದೆ. ಎಲ್ಲೆಡೆ ‘ಜಿಲ್ಲಾ ಮಕ್ಕಳ ಸಂರಕ್ಷಣಾ ಘಟಕ’ಗಳನ್ನು (District Child Protection Unit – DCPU) ಸ್ಥಾಪಿಸಲಾಗಿದೆ. ಆಯಾ ಜಿಲ್ಲಾಧಿಕಾರಿಗಳ ಸುಪರ್ದಿಯಲ್ಲಿ ಸಮಿತಿಯೊಂದು ಇದ್ದು ಅವುಗಳ ಉಸ್ತುವಾರಿಯಲ್ಲಿ ಎಲ್ಲ ಜಿಲ್ಲೆಗಳಲ್ಲಿ ಮಕ್ಕಳ ಪಾಲನೆ, ಪೋಷಣೆ, ರಕ್ಷಣೆಗಿರುವ ಸರ್ಕಾರಿ ಮತ್ತು ಸರ್ಕಾರೇತರ ವ್ಯವಸ್ಥೆಗಳು ನಡೆಯುತ್ತವೆ.

ಈ ವ್ಯವಸ್ಥೆಯ ಭಾಗವಾಗಿ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯಿದೆಯ ಜಾರಿಗಾಗಿ ೨೦೦೪ರಿಂದ ೨೦೦೯ರವರೆಗೆ ಬೆಂಗಳೂರು ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯನಾಗಿ, ಅ‍ಧ್ಯಕ್ಷನಾಗಿ ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳ ಕಾಯಿದೆಯ (National Commissions for the Protection of Child Rights – NCPCR) ಭಾಗವಾಗಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯನಾಗಿ, ಸರ್ಕಾರ ಮತ್ತು ಸ್ವಯಂಸೇವಾ ಸಂಘಟನೆಗಳೊಡನೆ ಒಡನಾಡಿ ಆದ ಅನುಭವದ ಮೂಲಕ ಮಕ್ಕಳ ಹಕ್ಕುಗಳ ಜಾರಿಯಲ್ಲಿ ಹಲವಾರು ಪಾಠಗಳನ್ನು ಕಲಿತಿದ್ದೇನೆ. ಕಲಿಸಿದ್ದೇನೆ ಕೂಡಾ!

|ಮುಂದಿನ ಸಂಚಿಕೆಯಲ್ಲಿ|

‍ಲೇಖಕರು ವಾಸುದೇವ ಶರ್ಮ

December 17, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ವಿಚಾರ ಪೂರ್ಣ ಲೇಖನ. ತಿಳಿದುಕೊಳ್ಳಲೇಬೇಕಾದ ಹಲವು ವಿಚಾರಗಳಿವೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: