ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂದ್ರ ಷಡ್ಜದ ಮೊಳೆಗೆ ನೇತಾಡುವ ರಾಗವೊಂದು..

ಮಾರುತಿ ದಾಸಣ್ಣವರ / ಕೌಶಾಂಬಿ / ಉ.ಪ್ರ

ಪದ ಕುಸಿದರೂ
ಮಂದ್ರ ಷಡ್ಜದ ಮೊಳೆಗೆ
ನೇತಾಡುವ ರಾಗವೊಂದು
ಮುಂದೆ ಹೋಗಲಾರದೇ
ಅದದೇ ಆಲಾಪಗಳ ತೊಡಕಿನಲಿ
ಒದ್ದಾಡುತ್ತ ತಿರುಗುತ್ತದೆ ಅಲ್ಲೇ
ಮತ್ತೆ ಮತ್ತೆ……

ಮಧ್ಯದ ಗುರಿಯೂ ದುಸ್ತರವಾದ
ವಿಲಂಬಿತ ಲಯಕೆ ಬೇಸತ್ತು
ಹೆಜ್ಜೆಗಳೂ ಮುಖ ಊದಿಸಿಕೊಂಡು
ಕೂತಿವೆ……

ಹತಾಶೆಯಾಕಾಶದಲ್ಲಿ
ಕಣ್ಣು ಹೊಡೆಯುವ ಅಸಂಖ್ಯ
ನಕ್ಷತ್ರಗಳ ನಂಜುನಗೆ
ಗಾಢವಾಗಿಸುತ್ತದೆ ಕತ್ತಲೆಯನು
ಮತ್ತೆ ಮತ್ತೆ….. !

ಬದುಕೇ ಹೆಬ್ಬಂಡೆಯಾಗಿ
ಬೆಟ್ಟವಾಗಿ ಬೆಳೆದು
ಹಿಂಜರಿಕೆ ರಾಗವನು
ಹಿಡಿದು ಎಳೆದೆಳೆದು
ಬೆಟ್ಟಕ್ಕೆ ಕಟ್ಟಿ ಕಣ್ಣ ಕಿಸಿಯುತ್ತದೆ
ಮತ್ತೆ ಮತ್ತೆ….!

ಆದರೂ……….
ಒಳಗೆಲ್ಲೋ ಸರ ಸರ ಕೊರೆವ
ಇರುವೆಗಳ ಕಲರವ,
ಬೆರ ಬೆರ ಬೆದಕುವ
ಇಲಿಗಳ ಚಿಂವ್ ಚಿಮು……

ಒಳಗೊಳಗೇ ಬೆಟ್ಟ ಟೊಳ್ಳಾಗುತ
ಬಿದ್ದು ಮಣ್ಣಾಗುತ
ಮಣ್ಣು ಹಣ್ಣಾಗುತ
ಹಾಡು ಹಾದಿಯಾಗುವ
ಬೆಳಕು…..!

ಈಗ ಹೆಜ್ಜೆ ಹುರುಪಾಗಿವೆ,
ದ್ವಿಗುಣವಾಗಿದೆ ಲಯದ ನಡೆ
ಹುಡಿಯೆಬ್ಬಿಸಿ ಮುನ್ನಡೆದಿದೆ
ರಾಗ……
ತಾನಗಳ ತನನನ
ತಾರಕವ ಮುಟ್ಟಿ, ಚುಂಬಿಸಿ
ಬರುವ ತವಕ…

‍ಲೇಖಕರು avadhi

2 June, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading