ಮಂತ್ರಿಗಳೇ, ಮೊದಲು ಅಧ್ಯಾಪಕರನ್ನು ಗೌರವಿಸಲು ಕಲಿಯಿರಿ..

20151230_165539

ಕೆ.ವಿ. ತಿರುಮಲೇಶ್

ಜೂನಿಯರ್ ಕಾಲೇಜು ಅಧ್ಯಾಪಕರ ಮುಷ್ಕರದ ವಿಷಯದಲ್ಲಿ ಕರ್ನಾಟಕ ಸರಕಾರ ನಡೆದುಕೊಳ್ಳುವ ರೀತಿ ಸರಿಯಲ್ಲ. ಅಧ್ಯಾಪಕರು ಸಮಾನ ವೇತನವನ್ನು
ಕೇಳುವುದು ನ್ಯಾಯಯುತವೇ ಆಗಿದೆ; ಹಾಗೂ ಅವರು ಮೌಲ್ಯ ಮಾಪನ ಸಂದರ್ಭವನ್ನು ಇದಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರುವುದೂ ತರವಲ್ಲ.
ಒಟ್ಟಾರೆ ಶಿಕ್ಷಣ ವ್ಯವಸ್ಥೆಯಲ್ಲಿ ತಮ್ಮ ಅಗತ್ಯ ಎಷ್ಟಿದೆೆ ಎನ್ನುವುದನ್ನು ಅವರು ತೋರಿಸಿಕೊಡುತ್ತಿದ್ದಾರೆ ಅಷ್ಟೆ. (ಮುಷ್ಕರಕ್ಕೆ ಎಲ್ಲಿಯೂ ಸರಿಯಾದ ಕಾಲ
ಎನ್ನುವುದಿಲ್ಲ.) ಅಲ್ಲದೆ ಇದು ವಿದ್ಯಾರ್ಥಿಗಳ ವಿರುದ್ಧ ಎಂದು ನಿರೂಪಿಸುವುದು ಬೇಡ. ಅಧ್ಯಾಪಕರು ಎಂದೂ ವಿದ್ಯಾರ್ಥಿಗಳ ವಿರುದ್ಡವಾಗಿರುವುದು ಸಾಧ್ಯವಿಲ್ಲ.

lecturers strikeಮಂತ್ರಿಗಳೇ, ಮೊದಲು ಅಧ್ಯಾಪಕರನ್ನು ಗೌರವಿಸಲು ಕಲಿಯಿರಿ. ಅವರ ಘನತೆಗೆ ಕುಂದಾಗುವಂಥ ಏನನ್ನೂ ಆಡಬೇಡಿ, ಮಾಡಬೇಡಿ. ಅವರ ಬೇಡಿಕೆಗಳನ್ನು
ಮನ್ನಿಸಿ ಮುತ್ಸದ್ದಿತನ ತೋರಿ. ಆ ಮೂಲಕ ಅಧ್ಯಾಪಕರನ್ನೂ ವಿದ್ಯಾರ್ಥಿಗಳನ್ನೂ ಒಟ್ಟಿಗೆಯೇ ಮಿತ್ರರನ್ನಾಗಿ ಮಾಡಿಕೊಳ್ಳಿ.

ಇನ್ನು ಎಸೆಂಬ್ಲಿಯಲ್ಲಿ, ಪಾರ್ಲಿಮೆಂಟಿನಲ್ಲಿ ನೀವು ನಿಮ್ಮ ನಿಮ್ಮ ಸಂಬಳವನ್ನು ಮತ್ತು ಸವಲತ್ತುಗಳನ್ನು ಆಗಾಗ್ಗೆ ಹೆಚ್ಚುಮಾಡಿಕೊಳ್ಫುತ್ತಿರುವುದು ನೆನಪಿದೆಯೇ? ಆಗ ಹಣಕಾಸು ಕೊರತೆಯೋ ಇನ್ನೇನೋ ಅಡ್ಡಿಯಾಗಲಿಲ್ಲವೇ? ಅದೆಂಥಾ ದಿವ್ಯ ಸಂದರ್ಭ: ಕೊಡುವವರೂ ನೀವೇ, ತೆಗೆದುಕೊಳ್ಳುವವರೂ ನೀವೇ?! ಆಗ ಯಾವ ಪಕ್ಷಭೇದವೂ ಇರುವುದಿಲ್ಲ! ಅಷ್ಟಕ್ಕೂ ನಿಮ್ಮಲ್ಲಿ ಹೆಚ್ಚಿನವರೂ ಮಾಡುತ್ತಿರುವುದೇನು, ಸಭೆಯಲ್ಲಿ ಒಂದೋ ಜಗಳ ಇಲ್ಲವೇ ನಿದ್ದೆಯನ್ನಲ್ಲದೆ? ನಿಜಕ್ಕೂ ದೇಶಕ್ಕೆ ಹೊರೆಯಾಗಿರುವವರು ನೀವು. ಅಧ್ಯಾಪಕರು ಸ್ವತಹ ಕಲಿಯುತ್ತ, ಮುಂದಿನ ಪೀಳಿಗೆಗೆ ಕಲಿಸುತ್ತಾರೆ. ಅದೇನೂ, ನೀವು ಅಂದುಕೊಂಡಷ್ಟು ಲಘುವಾದ ಕೆಲಸವಲ್ಲ.

ನಿಮ್ಮ ಅರಿವಿನ ಕೊರತೆಗೆ ಏನನ್ನೋಣ? ಸ್ವಯಂಪ್ರತಿಷ್ಠೆ ಬಿಟ್ಟು ಯೋಚಿಸಿನೋಡಿ. ಅಧಿಕಾರವನ್ನು ನಿರಂಕುಶಮತಿಯಾಗಿ ಚಲಾಯಿಸಬೇಡಿ.

 

‍ಲೇಖಕರು admin

April 18, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

12 ಪ್ರತಿಕ್ರಿಯೆಗಳು

  1. ಚಂದ್ರಪ್ರಭಾ ಬಿ.

    ಕೆ.ವಿ. ತಿರುಮಲೇಶರಂಥ ಹಿರಿಯರು ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದ್ದು ನಿಜಕ್ಕೂ ಅಧ್ಯಾಪಕರ ಉತ್ಸಾಹವನ್ನು ಇಮ್ಮಡಿಸಿದೆ. ನಾಗರಿಕ ಸಮಾಜ ಸರಕಾರದ ಅನಾಗರಿಕ ನಡವಳಿಕೆಯನ್ನು ಖಂಡಿಸುವುದರ ಅವಶ್ಯಕತೆ ಇದ್ದೇ ಇದೆ. ತಮ್ಮಂಥ ಪ್ರಾಜ್ಞರ ಮಧ್ಯಸ್ಥಿಕೆಯಿಂದಲಾದರೂ ಒಂದು ಮಧ್ಯಮ ಮಾರ್ಗ ಒಡಮೂಡಲಿ, ಮೌಲ್ಯಮಾಪನ ಕಾರ್ಯ ತುರ್ತಾಗಿ ಆರಂಭವಾಗಲಿ. ಧನ್ಯವಾದಗಳು ಸರ್ ನಿಮಗೆ, ಎಲ್ಲಾ ಅಧ್ಯಾಪಕರ ಪರವಾಗಿ.

    ಪ್ರತಿಕ್ರಿಯೆ
  2. Lingaraju BS

    ರಕ್ತಸ್ರಾವವಾಗುತ್ತಿರುವ ಗಭರ್ಿಣಿಗೆ ಸಿಸೇರಿಯನ್ ಮಾಡದಿದ್ದರೆ ಪ್ರಾಣಕ್ಕೆ ಕುತ್ತು. ಬೇಗ ಹಣ ಹೊಂದಿಸಿ ಕಟ್ಟಿ, ನಂತರ ಸಿಸೇರಿಯನ್ ಮಾಡುತ್ತೇವೆ ಎಂಬ ವೈದ್ಯರ ಮಾತು….
    ಅಪಘಾತಕ್ಕೀಡಾದ ಗಾಯಾಳುವಿಗೆ ಚಿಕಿತ್ಸೆ ನೀಡುವ ಮುನ್ನ ಪೊಲೀಸರಿಗೆ ಮಾಹಿತಿ ಕೊಡಿ, ಅವರು ಬಂದ ಮೇಲೆ ಚಿಕಿತ್ಸೆ ಆರಂಭಿಸುತ್ತೇವೆ ಎಂಬ ವೈದ್ಯರ ಹೇಳಿಕೆ ಎರಡೂ ನೆನಪಾಗುತ್ತಿವೆ….

    ಪ್ರತಿಕ್ರಿಯೆ
    • kvtirumalesh

      ಜೂನಿಯರ್ ಕಾಲೇಜಿನ ಉಪನ್ಯಾಸಕರೇನೂ ಮಂಚಿನ ಮುಷ್ಕರ ಮಾಡಿಲ್ಲ. ಅವರು ವೇತನ ಸಮಾನತೆಯ ಕುರಿತಾದ ಅವರ ಒತ್ತಾಯ ಇಂದಿನ ಮಾತೂ ಅಲ್ಲ. ಅವರು ಡಿಗ್ರೀ ಉಪನ್ಯಾಸಕರ ಜೊತೆ ಸಮಾನತೆ ಕೇಳುವುದೇ ತಪ್ಪೆ? ಅಥವಾ ಅದಕ್ಕೆ ಪ್ರಶಸ್ತವಾದ ಕಾಲ ಇದಲ್ಲವೇ? ಅವರ ವಿರುದ್ಧ, ಮಂತ್ರಿಗಳು ಬೆದರಿಸುವಂತೆ, ಎಸ್ಮಾ ಬಳಸಬೇಕೇ? ಕಾಮನ್ ಕ್ರಿಮಿನಲುಗಳಂತೆ
      ಜೇಲಿಗೆ ತಳ್ಳಬೇಕೇ? ವಿವಿಧ ರೀತಿಗಳಲ್ಲಿ ಬೆದರಿಸಬೇಕೇ, ತೇಜೋವಧೆ ಮಾಡಬೇಕೇ? ಹೇಗಾದರೂ ಮಾಡಿ ವೇತನ ಸಮಾನತೆ ಸಿಗದಂತೆ ಮಾಡಬೇಕೇ?
      ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಕಲಿಸಿದವರು ಅವರೇ ಎನ್ನುವುದನ್ನು ಮರೆಯಬೇಡಿ–ಅದಕ್ಕಾಗಿ ಕೃತಜ್ಞರಾಗಿ.

      ಅಧ್ಯಾಪನ ವೃತ್ತಿ ಆಕರ್ಷಣೆಯನ್ನು ಕಳೆದುಕೊಂಡ ಈ ಕಾಲದಲ್ಲಿ ಸರಕಾರದ ಇಂಥ ವಿರೋಧಿ ನಿಲುವು ಶಿಕ್ಷಣದ ಮೇಲೆ ಯಾವ ಪರಿಣಾಮವನ್ನು ಉಂಟುಮಾಡೀತು? ಇಂದಿನ ಯುವ ಜನತೆಗೆ ಅಧ್ಯಾಪನ ವೃತ್ತಿ ಬೇಡ, ಏನಾದರೂ ಕಚೇರಿ ಕೆಲಸ ಬೇಕು. ಆದರೆ ಉತ್ತಮ ಶಿಕ್ಷಕರಿಲ್ಲದ ಒಂದು ದೇಶವನ್ನು ಊಹಿಸಲು ಕಷ್ಟವಾಗುತ್ತದೆ. ಶಿಕ್ಷಕ ವೃತ್ತಿ ಬೇಡ, ಆದರೆ ಶಿಕ್ಷಣ ಬೇಕು ಎನ್ನುವ ವಿರೋಧಾಭಾಸ ನಮ್ಮಲ್ಲಿದೆ. ಇಂಥ ಪರಿಸ್ಥಿತಿಯಲ್ಲಿ ಡಿಗ್ರಿ ಕ್ಲಾಸಿಗೆ ಕಲಿಸುವವರಿಗೆ ಒಂದು ವೇತನ, ಪ್ಲಸ್ ಟೂ ಕ್ಲಾಸುಗಳಿಗೆ ಕಲಿಸುವವರಿಗೆ ಇನ್ನೊಂದು–ಎರಡೂ ಮಟ್ಟದವರ ಮೂಲ ಶೈಕ್ಷಣಿಕ ಅರ್ಹತೆ ಒಂದೇ ಆಗಿದ್ದರೂ–ಎನ್ನುವುದು ಜೂನಿಯರ್ ಕಾಲೇಜು ಅಧ್ಯಾಪನ ವೃತ್ತಿಯನ್ನು ಇನ್ನಷ್ಟು ಅನಾಕರ್ಷಕವಾಗಿಸುತ್ತದೆ. ಇದು ಒಟ್ಟಾರೆ ಶಿಕ್ಷಣಕ್ಕೆ ಒಳ್ಳೆಯದಲ್ಲ. ಯೋಚಿಸಿ ನೋಡಿ.
      ಕೆ.ವಿತಿರುಮಲೇಶ್

      ಪ್ರತಿಕ್ರಿಯೆ
  3. ಅಶ್ವತ್ಥರೆಡ್ಡಿ ಅಪ್ಪಣ್ಣರೆಡ್ಡಿ

    ತಿರುಮಲೇಶ್ ಸಾರ್, ನಿಮ್ಮ ಸಲಹೆ ಒಳ್ಳೆಯದೆ. ‘ಕಬ್ಬಿಣ ಕಾದಾಗ ಬಗ್ಗಿಸು’ ಮಾತಿನಂತೆ ಶಿಕ್ಷಕರು ಮೌಲ್ಯಮಾಪನ ಸಮಯದಲ್ಲಿ ತಮ್ಮ ಬೇಡಿಕೆಗಳೊಂದಿಗೆ ಮುಷ್ಕರ ಮಾಡುತ್ತಿರುವುದು ಸ್ವಾಗತಕರ ವಿಷಯ. ಆದರೆ ಯಾವುದೆ ಸರ್ಕಾರ ಸಮಸ್ಯೆಯನ್ನು ಜಟಿಲಗೋಳಿಸಲು ಬಯಸುವುದಿಲ್ಲ, ಈ ಹಿಂದಿನ ಸರ್ಕಾರ ವೇತನ ಆಯೋಗದ ಬಗ್ಗೆ ಕುಮಾರ ನಾಯಕ್ ಸಮಿತಿ ರಚನೆ ಮಾಡಿದೆ, ಇದೀಗ ಈ ವರದಿಯಂತೆ ಇಂದಿನ ಸರ್ಕಾರ ಆರ್ಥಿಕ ಇಲಾಖೆಯ ಒಪ್ಪಿಗೆ ಪಡೆಯಲು ಹೆಚ್ಚಿನ ಆರ್ಥಿಕಹೊರೆ ಬಗ್ಗೆ ಮಾತನಾಡಿದರೂ, ಶಿಕ್ಷಕರ ಹಾಗೂ ಉಪನ್ಯಾಸಕರ ನ್ಯಾಯಸಂಮತ ಸಮಸ್ಯೆಗಳನ್ನು ಬಗೆಹರಿಸುವುದು ಸರ್ಕಾರಕ್ಕೆ ಎಷ್ಟು ಮುಖ್ಯವೂ, ಶಿಕ್ಷಕರಿಗೆ ಮಕ್ಕಳ ಪ್ರಗತಿಪೂರಕವಾದ ನಿರ್ಣಯ ಪ್ರಸ್ತುತ ಅಷ್ಟೇ ಮುಖ್ಯವಾಗಿದೆ. ಸಂಘದ ಪಧಾದಿಕಾರಿಗಳ ಹೇಳಿಕೆಗಳು ಆಡಳಿತಾಂಗವನ್ನು ಅಣಕಿಸುವಂತಾಗಾದೆ ಹಾಗೂ ಮೂನ್ನೆ ನಡೆದ ಉತ್ತರ ಪತ್ರಿಕೆ ಸೊರಿಕೆಗೆ ವಿಷಯಗಳ ಬಗ್ಗೆ ಮೆಲುಕಾಕುವುದು ಬೇಡ, ಏಕೇಂದರೆ ತಪ್ಪಿತ್ತತಸರಿಗೆ ಶಿಕ್ಷೆಯಾಗಬೇಕಾಗಿದೆ.ಇದರಿಂದ ಸಮಸ್ಯೆ ಜಟಿಲಗೂಂಡು, ಮಕ್ಕಳ ಹಾಗೂ ಪೊಷಕರ ಆತಃಕ ಹೆಚ್ಚಾಗುತ್ತಿದೆ. ನಿಮ್ಮಂತಹ ಮೇದಾವಿಗಳು ಶಾಸಕರ ವೇತನ ಬಗ್ಗೆ ಮಾತನಾಡಿದರೂ ಅವರ ಹಾಗೂ ಶಿಕ್ಷಕ-ಉಪನ್ಯಾಸಕರ ಸಂಖ್ಯೆಯ ಅನುಪಾತವೂ ಮುಖ್ಯ ಅಲ್ವೇ ಸಾರ್. ನಿಮ್ಮ ಇಂತಹ ಕಾಳಜಿಯ ಬರಹಗಳು ಶಿಕ್ಷಣದ ಗುಣಮಟ್ಟದ ಕುರಿತು ಬರುವಂತಹ ನಿರೀಕ್ಷೆ ನನ್ನದು. ಶೈಕ್ಷಣಿಕ ಪ್ರಗತಿಶೀಲತೆಗೆ ಕುಂದಾಗದ ರೀತಿಯಲ್ಲಿ ಸಮಸ್ಯೆ ಅತಿಬೇಗನೆ ಬಗೆಹರೆಯುವಂತಾಗಲಿ ಸಾರ್.

    ಪ್ರತಿಕ್ರಿಯೆ
    • kvtirumalesh

      ಶ್ರೀ ರೆಡ್ಡಿಯವರೇ,
      ಇಡೀ ಜೀವನವನ್ನು ಶಿಕ್ಷಕನಾಗಿ (ಕಾಲೇಜು, ಯುನಿವರ್ಸಿಟಿ ಮಟ್ಟದಲ್ಲಿ ಮತ್ತು ದೇಶ ವಿದೇಶಗಳಲ್ಲಿ) ಕಳೆದ ನನಗೆ ಶಿಕ್ಷಣ ಕ್ಷೇತ್ರದ ಬಗ್ಗೆ ಅಪಾರೆ ಗೌರವವಿದೆ. ಶೈಕ್ಷಣಿಕ ಸಮಸ್ಯೆಗಳ ಕುರಿತು ಹಲವಾರು ಲೇಖನಗಳನ್ನು ಬರೆದಿದ್ದೇನೆ. ಒಂದು ಕ್ಲಾಸ್ ರೂಮ್ ಹೇಗಿರ ಬೇಕು, ಕಲಿಸುವುದೆಂದರೇನು, ವಿದ್ಯಾರ್ಥಿಗಳನ್ನು ಹೇಗೆ ಗೌರವದಿಂದ ಕಾಣಬೇಕು, ಪ್ರಶ್ನೆ ಪತ್ರಿಕೆ ಹೇಗಿರಬೇಕು, ಗ್ರಂಥಾಲಯಗಳ ಬಳಕೆ–ಹೀಗೆ ಹಲವು ಸಂಗತಿಗಳ ಬಗ್ಗೆ ಯೋಚಿಸಿದ್ದೇನೆ, ಬರೆದಿದ್ದೇನೆ, ನೀವು ನೋಡಿರಲಾರಿರಿ. ಇರಲಿ.

      ಶಾಸಕರು ತಮ್ಮ ವೇತನವನ್ನು ಏರಿಸಿಕೊಳ್ಳುವುದಕ್ಕೆ ಮತ್ತು ಜೂನಿಯರ್ ಕಾಲೇಜು ಉಪನ್ಯಾಸಕರ ವೇತನ ಸಮಾನತೆಯನ್ನು ನಿರಾಕರಿಸುವುದಕ್ಕೆ ಅನುತಾಪ ಕಾರಣ ಎನ್ನುವುದು ಸತ್ಯ; ಆದರೆ ಈ ಮಾತು ಶಾಸಕರ ಬಾಯಿಂದ ಬರಬೇಕು. ಹಾಗಿದ್ದೂ ಸುಗಮ ಮಾರ್ಗವೊಂದನ್ನು ಕಂಡುಕೊಳ್ಳಬೇಕಾಗುತ್ತದೆ; ಯಾಕೆಂದರೆ ಸಂಖ್ಯಾನುಪಾತವೆಂಬ ಕಾರಣ ಅನ್ಯಾಯಕ್ಕೆ ದಾರಿ ಮಾಡಿಕೊಡುತ್ತದೆ.
      ಡೆಫರ್ಡ್ ಪೇಮೆಂಟ್ ಒಂದು ಮಾರ್ಗ.
      ಇನ್ನು ನಮ್ಮ ವಿದ್ಯಾರ್ಥಿಗಳ ಸುಗಮ ಭವಿಷ್ಯದ ಬಗ್ಗೆ ಯಾರಿಗೆ ತಾನೆ ಆತಂಕವಿಲ್ಲ?

      ಈ ಉಪನ್ಯಾಸಕ ಮುಷ್ಕರವನ್ನು ಸುಖಾಂತವಾಗಿ ಕೊನೆಗಳಿಸುವುದು ಎಲ್ಲರ ಹಿತದೃಷ್ಟಿಯಿಂದಲೂ, ಮುಖ್ಯವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ, ಒಳ್ಳೆಯದು. ಹಾಗಾಗಲಿ ಎಂದು ಆಶಿಸುತ್ತೇನೆ. ಆದರೆ ಇದನ್ನು ಮೊದಲೇ ನೊಂದ ಉಪನ್ಯಾಸಕರ ವಿರುದ್ಧ ಒಂದು ಕಪ್ಪುಚುಕ್ಕೆಯಾಗಿ ಬಳಸುವುದಕ್ಕೆ ನನ್ನ ಅಸಮ್ಮತಿಯಿದೆ because it is bad faith.

      ಕೆ.ವಿ. ತಿರುಮಲೇಶ್

      ಪ್ರತಿಕ್ರಿಯೆ
  4. Gubbachchi Sathish

    ಮಾನ್ಯ ಸರ್ಕಾರ ಈಗ ಪರೀಕ್ಷೆ ಬರೆದಿರುವವರೆಲ್ಲಾ ಮುಂದಿನ ಚುನಾವಣೆಗೆ ಮತ ಚಲಾಯಿಸಲು ಅರ್ಹರಾಗಿರುತ್ತಾರೆ ಎಂಬುದನ್ನಾದರು ಮನಗಾಣಬೇಕಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಗೌರವದಿಂದ ಕಾಣುವುದನ್ನು ರಾಜಕಾರಣಿಗಳು ಕಲಿಯಬೇಕು.

    ಪ್ರತಿಕ್ರಿಯೆ
  5. Lingaraju BS

    ನಮ್ಮನ್ನು ಎಲ್ಲರೂ ಗೌರವಿಸಬೇಕು, ನಮ್ಮ ಮಾತು ಕೇಳಬೇಕು. ಏಕೆಂದರೆ ನಾವೀಗ ಅನಿವಾರ್ಯ…..
    ಈ ಮಾತಲ್ಲಿ ನ್ಯಾಯ ಕಾಣಿಸುತ್ತಿದೆಯೋ ಅಥವಾ ಅಹಮಿಕೆಯೋ

    ಕಬ್ಬಿಣ ಕಾದಾಗಲೇ ಬಡಿಯಬೇಕು
    ಈ ಮಾತಲ್ಲಿ ನ್ಯಾಯ ಕೇಳುವ ಸುಸಂದರ್ಭವೋ, ಅವಕಾಶವಾದವೋ….

    ಪ್ರತಿಕ್ರಿಯೆ
    • kvtirumalesh

      ಗೌರವ ಎಲ್ಲರಿಗೂ ಸಿಗಬೇಕು. ಅದರಲ್ಲಿ ಅನಿವಾರ್ಯ ಎನ್ನುವ ಮಾತಿಲ್ಲ. ಒಂದು ರಾಜ್ಯದ ಶಿಕ್ಷಕವರ್ಗ ಚೆನ್ನಾಗಿದ್ದರೆ ರಾಜ್ಯಕ್ಕೆ ಒಳ್ಳೆಯದು. ಈ ಬಗ್ಗೆ ನಾನು ಈಗಾಗಲೇ ಹೇಳಿದ್ದೇನೆ: ಈ ಕೆಲಸವನ್ನು ಆಕರ್ಷಕವಾಗಿಸಿ ನಮ್ಮ ಯುವ ಜನರನ್ನು ಅತ್ತ ಸೆಳೆಯಬೇಕು ಇತ್ಯಾದಿ. ಇದಾವುದನ್ನೂ ಪರಿಗಣಿಸದೆ, ಕಟಕಿ ಮಾತನ್ನು ಆಡುತ್ತ ಹೋಗುವುದು ಸರಿಯಲ್ಲ, ಲಿಂಗರಾಜು ಅವರೇ. ಮೌಲ್ಯಮಾಪನವನ್ನು ಬಹಿಷ್ಕರಿಸಿದ ಉಪನ್ಯಾಸಕರನ್ನು ಎಸ್ಮಾ ಬಳಸಿ ಜೇಲಿಗೆ ಹಾಕುತ್ತೇವೆ ಎಂದು ಮುಂತಾಗಿ ಕೆಮ್ಮನೆಯವರು ನುಡಿಯುವ ಹಿನ್ನೆಲೆಯಲ್ಲಿ ನಾನು ಗೌರವದ ಮಾತು ಹೇಳಬೇಕಾಯಿತು. ಸರಿಯಾಗಿ ಯೋಚಿಸಿ ನೋಡಿ: ನಿಮ್ಮ ಮಕ್ಕಳಿಗೂ ಚೆನ್ನಾದ ಶಿಕ್ಷಣ ದೊರಕಬೇಕೆಂಬ ಆಸೆ ನಿಮಗಿಲ್ಲವೇ? ಅದಕ್ಕೆ ನಮಗೆ ಒಳ್ಳೆಯ ಅಧ್ಯಾಪಕರ ಅಗತ್ಯವಿದೆ; ಒಳ್ಳೆಯ ಅಧ್ಯಾಪಕರು ತಯಾರಾಗಬೇಕಿದ್ದರೆ, ಆ ಕ್ಷೇತ್ರ ಆಕರ್ಷಕವಾಗಬೇಕು. ನಿಂದಿಸುವ ಮೂಲಕ ಅದು ಆಗುವುದಿಲ್ಲ.

      ಕೆ.ವಿ. ತಿರುಮಲೇಶ್

      ಪ್ರತಿಕ್ರಿಯೆ
  6. ಡಾ.ಲಕ್ಷ್ಮೀ ಜಿ ಪ್ರಸಾದ

    ತಮ್ಮಂಥ ಹಿರಿಯ ಶಿಕ್ಷಣ ತಜ್ಞರ ಮಾತು ಕೇಳಿ ಸಂತಸವಾಯಿತು ತಿರುಮಲೇಶ ಸರ್ ,ಕಳೆದ22 ವರ್ಷಗಳಿಂದ ವೇತನ ತಾರತಮ್ಯ ಆಗಿದ್ದೂ ನಿರಂತರವಾಗಿ ಇದನ್ನು ಸರಿ ಪಡಿಸುವಂತೆ ವಿನಂತಿ ಮಾಡಿದ್ದರೂ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದರೂ ಕಿವಿ ಗೊಡದೆ ಇದ್ದಾಗ ಉಪನ್ಯಸಕರಿಕೆ ಮೌಲ್ಯ ಬಹಿಷ್ಕಾರದ ದಾರಿ ಹಿಡಿಯುವುದು ಅನಿವಾರ್ಯವಾಗಿದೆ ಆದರೆ ಇದನ್ನು ಅನೇಕರು ಅರ್ಥಮಾಡಿಕೊಳ್ಳುತ್ತಿಲ್ಲ ,ಇಷ್ಟಕ್ಕೂ ಕುಮಾರ ನಾಯಕ ವರದಿ ಜಾರಿ ಮಾಡಿದರೆ ಕೂಡ ವೇತನ ತಾರತಮ್ಯ ಸರಿಯಾಗುದಿಲ್ಲ ಸಮಾನ ಶ್ರೇಣಿಯ ಇತರ ಸರ್ಕಾರಿ ನೌಕರರಿಗೂ ಆರಂಭಿಕ ವೇತನದಲ್ಲಿ ಸಮಾರು ಎಂಟು ಸಾವಿರ ವ್ಯತ್ಯಾಸವಿದೆ ಕುಮಾರ ನಾಯಕ್ ವರದಿ ಅನುಷ್ಟಾನಕ್ಕೆ ತಂದರೆ ಕೇವಲ ಮೂರು ಸಾವಿರ ದಷ್ಟು ಮಾತ್ರ ಹೆಚ್ಚಳವಾಗುತ್ತದೆ ಆದರೆ ಅದನ್ನು ಕೂಡ ಸರ್ಕಾರ ಕೊಡದೆ ಬೊಕ್ಕಸಕ್ಕೆ ಹೊರೆಯಾಗುತ್ತದೆ ಎನ್ನುತ್ತಾರೆ .ಕೇವಲ 543 ಮಂದಿ ಶಾಸಕರ ವೇತನ ,ಖರ್ಚು ವೆಚ್ಚಗಳು ವಾರ್ಷಿಕ 500 ಕೋಟಿ ದಾಟುತ್ತದೆ.ಸುಮಾರು ಇಪ್ಪತ್ತು ಸಾವಿರದಷ್ಟು ಉಪನ್ಯಾಸಕರಿಗೆ ಕುಮಾರ ನಾಯಕ ಸಮಿತಿ ಸೂಚಿಸಿದ ವೇತನ ಕೊಟ್ಟರೆ ಸರ್ಕಾರಕ್ಕೆ ವಾರ್ಷಿಕವಾಗಿ ಕೇವಲ ಐವತ್ತು ಕೋಟಿ ಮಾತ್ರ ಹೆಚ್ಚ್ಚು ಹೊರೆ ಬೀಳುತ್ತದೆ .ಅದನ್ನು ಬೊಕ್ಕಸಕ್ಕೆ ಹೊರೆ ಎನ್ನುತ್ತಾರೆ ಸರ್ಕಾರದ ಬೊಕ್ಕಸದ ಬಗ್ಗೆ ಕಾಳಜಿ ಇದ್ದರೆ ಇವರುಗಳು ಇವರ ವೇತನ ಖರ್ಚು ವೆಚ್ಚಗಳಾದ ಐನೂರು ಕೋಟಿಯನ್ನು ಬಿಟ್ಟುಕೊಡಲಿ ಅಥವಾ ಅದರಲ್ಲಿ ಹತ್ತು ಶೇಕಡಾ ಬಿಟ್ಟುಕೊಟ್ಟರರೂ ಸಾಕು .ಉಪನ್ಯಾಸಕರಿಗೆ ಹೆಚ್ಚುವರಿ ಕೊಡಬೇಕಾದ ಐವತ್ತು ಕೋಟಿ ಅಲ್ಲೆ ಸಿಗುತ್ತದೆ .ಸಮಾನ ಕೆಲ್ಸಕ್ಕೆ ಸಮಾನ ವೇತನ ಎನ್ನುವುದು ಸಾಮಾನ್ಯ ನಿಯಮ ಈ ಬಗ್ಗೆ ತಮಗೆ ಆದ ವೇತನ ತಾರತಮ್ಯ ನಿವಾರಿಸಿ ಎಂದು ಕೇಳಿದಾಗಲೂ ಕೊಡದೆ ಇರುವುದಾದರೆ ನಮಗೆ ಪ್ರಜಾ ಪ್ರಭುತ್ವ ಯಾಕೆ ಬೇಕು ?ನ್ಯಾಯಯುತ ಬೇಡಿಕೆಗೂ ಮನ್ನಣೆ ಕೊಡದೆ ಇದ್ದರೆ ಹೇಗೆ ಅಲ್ಲವೇ ?ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಸರ್

    ಪ್ರತಿಕ್ರಿಯೆ
  7. G.N.Nagaraj

    ಕೆ.ವಿ.ತಿರುಮಲೇಶ್ ರವರ ಕಳಕಳಿ ಸ್ವಾಗತಾರ್ಹ. ೀ ಮುಷ್ಕರದ ವಿಷಯದಲ್ಲಿ ಅಧ್ಯಾಪಕರಿಂದ ಯಾವ ತಪ್ಪೂ ಇಲ್ಲ. ನಾವು ಹೇಳಿ ಕೇಳಿ ಕಮ್ಯೂನಿಸ್ಟರು ಆದ್ದರಿಂದ ಮುಷ್ಕರಕ್ಕೆ ಬೆಂಬಲ ಕೊಡುವುದು ಸ್ವಾಭಾವಿಕ ಎಂದು ಭಾವಿಸಬಹುದು. ಆದರೆ ಈ ಒಂದೆರಡು ವಾಸ್ತವ ಸಂಗತಿಗಳನ್ನು ಗಮನಿಸಿ. ಹಿಂದಿನ ಮೌಲ್ಯಮಾಪನವೂ ಸೇರಿದಂತೆ ಹಲವು ವರ್ಷ ಕಾಲ ಮೌಲ್ಯಮಾಪನ ಾಲದಲ್ಲಿಯೆ ಮುಷ್ಕರ ನಡೆಸಲಾಗಿದೆ.ಪ್ರತಿ ವರ್ಷವೂ ಬೇಡಿಕೆ ಈಡೇರಿಸುವ ಭರವಸೆಗಳನ್ನು ಕೊಡಲಾಗಿದೆ. ಭರವಸೆ ಕೊಟ್ಟವರಿಗೆ ಅದನ್ನು ಮುಂದಿನ ಮೌಲ್ಯಮಾಪನ ಬರುವ ಮೊದಲೆ ಈಡೇರಿಸುವ ಹೊಣೆಯೂ ಇದೆಯಲ್ಲವೇ ? ಇಲ್ಲದಿದ್ದರೆ ಮತ್ತೆ ಮುಷ್ಕರವನ್ನು ಎದುರಿಸಬೇಕಾಗುತ್ತದೆ ಎನ್ನುವ ವಿಷಯವೂ ಗೊತ್ತಿದೆಯಲ್ಲವೇ ?
    ಮತ್ತೊಂದು ಇದು ಕೇವಲ ವೇತನದ ವಿಷಯ ಮಾತ್ರ ಅಲ್ಲ. ಶಿಕ್ಷಣಕ್ಕೆ ಪ್ರತಿಭಾವಂತರನ್ನು ಸೆಳೆಯುವ ವಿಷಯ ಮತ್ತು ಸರ್ಕಾರದ ಇತರ ಇಲಾಖೆಗಳಲ್ಲಿ ಹಿಂದೆ ಪಿಯು ಅಧ್ಯಾಪಕರು ಗಳಿಸುತ್ತಿದ್ದ ವೇತನವನ್ನೆ ಪಡೆಯುತ್ತಿದ್ದವರಿಗೆ ಈಗ ಬಹಳ ಹೆಚ್ಚು ವೇತನ ಮತ್ತು ಇವರಿಗೆ ಕಡಿಮೆ ಎಂಬುದು ಶಿಕ್ಷಣಕ್ಕೆ ಸರ್ಕಾರಗಳು ಕೊಟ್ಟ ಆದ್ಯತೆಯ ವಿಷಯ ಮತ್ತು ಒಂದು ಕಣ್ಣಿಗೆ ಸುಣ್ಣ ಮತ್ತೊಂದಕ್ಕೆ ಬೆಣ್ಣೆ ಎಂಬ ಅನ್ಯಾಯದ ವಿಷಯ. ಇದು ಈ ಸರ್ಕಾರದ್ದು ಮತ್ತು ಒಂದು ಪಕ್ಷದ್ದಲ್ಲ ಕರ್ನಾಟಕವನ್ನು ಇಲ್ಲಿಯವರೆಗೆ ಆಳಿದ ಮೂರೂ ಪಕ್ಷಗಳೂ ಕೂಡ ಈ ಅನ್ಯಾಯವನ್ನು ಎಸಗಿರುವ ವಿಷಯ.
    ಇದು ಕೇವಲ ಸರ್ಕಾರದ ಬಜೆಟ್ ಪ್ರಶ್ನೆಯೂ ಅಲ್ಲ. ಸರ್ಕಾರಿ ಪಿಯು ಅಧ್ಯಾಪಕರ ಸಂಬಳ ೇರಿದರೆ ಈ ಪಕ್ಷಗಳ ನಾಯಕರು ಮತ್ತವರ ಸಂಬಂಧಿಗಳು ನಡೆಸುತ್ತಿರುವ ಕಾಲೇಜುಗಳಲ್ಲಿ ಸಂಬಳ ಏರಿಸಬೇಕಾಗುತ್ತದೆ ಅದಕ್ಕಾಗಿ ತಮ್ಮ ಅಕ್ರಮ ಲಾಭದಲ್ಲಿ ಕೋಟಿಗಟ್ಟಲೇ ಕಳೆದುಕೊಳ್ಳಬೇಕಾಗುತ್ತದೆ ಎಂಬ ಅವರ ದುರಾಲೋಚನೆಯೂ ಸೇರಿದೆ.

    ಪ್ರತಿಕ್ರಿಯೆ
  8. Lingaraju BS

    ಗುರುಗಳೇ, ನನ್ನೆದುರು ಪರೀಕ್ಷೆ ಬರೆದು ಫಲಿತಾಂಶ ಬರುತ್ತೋ ಇಲ್ಲವೋ ಎಂದು ಗಾಬರಿ, ಆತಂಕದಿಂದ ಕುಳಿತ ಪೋಷಕರು ಮತ್ತು ವಿದ್ಯಾಥರ್ಿಗಳ ಚಿತ್ರ ಕಾಣಿಸುತ್ತಿದೆ.
    ಶಿಕ್ಷಕರ ಬೇಡಿಕೆಗಳು ಸರಿಯಾಗಿದ್ದರೂ ಅವರು ಬೇಡಿಕೆಗಳ ಈಡೇರಿಕೆಗೆ ಕುಳಿತಿರುವ ಸಂದರ್ಭಕ್ಕೆ ಮಾತ್ರ ನನ್ನ ಆಕ್ಷೇಪವಿದೆ. ಮೌಲ್ಯಮಾಪನ ಮುಗಿಸಿಯೇ ಪ್ರತಿಭಟನೆ ಮಾಡಬಹುದಿತ್ತಲ್ಲವೇ. ತರಗತಿಗಳನ್ನು ನಡೆಸದೆ, ತಾವೇ ಆಯ್ಕೆ ಮಾಡಿದ ಪ್ರತಿನಿಧಿಗಳ ಕೊರಳಪಟ್ಟಿ ಹಿಡಿದು ನ್ಯಾಯ ಕೇಳಬಹುದಿತ್ತು. ಹಿಂದೊಮ್ಮೆ ನೀವೇ ಹೇಳಿದಂತೆ ನ್ಯಾಯಾಲಯಕ್ಕೆ ಹೋಗಬಹುದಿತ್ತು. ಸಕರ್ಾರದ ಮೊಂಡಾಟ ಮತ್ತು ಶಿಕ್ಷಕರ ಹಠಮಾರಿತನದಿಂದ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದರೆ ಯಾರು ಹೊಣೆ. (ನೀವೆಲ್ಲಾ ಸಕರ್ಾರ ಎಂದು ಸುಲಭವಾಗಿ ಹೇಳುತ್ತೀರಿ)
    ಇದೂ ಬೇಡ, ನಿಮ್ಮ ಮೊದಲ ಲೇಖನದಲ್ಲಿ ಸಕರ್ಾರ ಅಧ್ಯಾಪಕರನ್ನು ಗೌರವಿಸಬೇಕು ಎಂದು ಹೇಳಿದ್ದೀರಿ. ಅಲ್ಲಿ ಪ್ರತಿಭಟನೆ ಮಾಡುತ್ತಿರುವವರಲ್ಲಿ ಒಬ್ಬರನ್ನಾದರೂ ನಿಮ್ಮಂಥವರನ್ನು ತೋರಿಸಿಬಿಟ್ಟರೆ ನಿಮಗೆ ಚಿರಋಣಿ. ಶಿಕ್ಷಕ ವೃತ್ತಿಗೆ ಅಪರ್ಿಸಿಕೊಂಡಿರುವ ಎಷ್ಟು ಶಿಕ್ಷಕರನ್ನು ನೀವು ಅಲ್ಲಿ ತೋರಿಸುತ್ತೀರಿ. ಪದವೀಧರ, ಶಿಕ್ಷಕ ಮತ್ತು ಸಕರ್ಾರಿ ನೌಕರರ ಚುನಾವಣೆ ವೇಳೆ ಎಷ್ಟು ಶಿಕ್ಷಕರು ಶಾಲೆಗೆ ಬರುತ್ತಾರೆ ಗೊತ್ತಾ? ಎಷ್ಟು ಶಿಕ್ಷಕರು ಬಡ್ಡಿ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ ಕೇಳಿ ನೋಡಿ.
    ನನಗೆ ಪ್ರಾಥಮಿಕ ಶಾಲೆಯಲ್ಲಿ ನಾಗೇಶಯ್ಯ ಎನ್ನುವ ಶಿಕ್ಷಕರೊಬ್ಬರು ಸಿಕ್ಕಿದ್ದರು. ಮನೆಪಾಠ ಮಾಡದ ನನಗೆ ಹೊಡೆದಿದ್ದರು. ಆದರೆ ಅವರ ಆ ಮಧ್ಯಾಹ್ನ ಊಟವನ್ನೇ ಮಾಡಿರಲಿಲ್ಲ. ಇಂದಿಗೂ ಅವರ ನಮ್ಮೂರ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಮೊನ್ನೆ ನಮ್ಮೂರ ಶಾಲೆಯ ವಜ್ರಮಹೋತ್ಸವದಂದು ನಡೆದ ಗುರುನಮನಕ್ಕೆ ಅವರು ಬಂದಿದ್ದರು. ನಮ್ಮೂರ ಶಾಲೆ ಮುಚ್ಚುವ ಮಾಹಿತಿ ಕೇಳಿ ಕಣ್ಣೀರು ಹಾಕಿದರು. ನಮನ ಸ್ವೀಕರಿಸದೆ ಸಾಯುವ ಮನೆಯ ಸತ್ಕಾರ ಬೇಡವೆಂದು ಹೇಳಿ, ಶಾಲೆ ಉಳಿಸಿಕೊಂಡು ಐದು ವರ್ಷದ ನಂತರ ಬನ್ನಿ, ಆಗ ನಮನ ಸ್ವೀಕರಿಸುತ್ತೇನೆ ಎಂದು ಹೇಳಿ ಹೋದರು. ಅಂತ ಶಿಕ್ಷಕರು ಅಲ್ಲಿದ್ದರೆ ಹೇಳಿ
    ಶಿಕ್ಷಣ ಕ್ಷೇತ್ರ ಆಕರ್ಷಣೆ ಕಳೆದುಕೊಂಡಿರುವುದು ಸಕರ್ಾರದ ನಿಧರ್ಾರಗಳಿಂದಲೇ ಮಾತ್ರವಲ್ಲ ಎಂಬುದು ನಿಜವಲ್ಲವೇ. ಮೊನ್ನೆ ಮೌಲ್ಯಮಾಪನಕ್ಕೆ ಹೋಗುತ್ತಿದ್ದ ಸಕರ್ಾರಿ ಶಿಕ್ಷಕರನ್ನು ಅನುದಾನಿತ ಶಿಕ್ಷಕರು ಹಲ್ಲೆ ಮಾಡಿದ ವರದಿ ಬಂದಿವೆ. ಹಾಗೆಯೇ ಪ್ರತಿಭಟನೆ ನಿಲ್ಲಿಸಲು ಸಕರ್ಾರಿ ಶಿಕ್ಷಕರು ಸಿದ್ಧವಿದ್ದರೂ ಅನುದಾನಿತ ಶಿಕ್ಷಕರು ಅವಕಾಶಕೊಡುತ್ತಿಲ್ಲ ಎಂದೂ ವರದಿಯಾಗಿದೆ.
    ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಶಿಕ್ಷಕರ ಮೌಲ್ಯಮಾಪನ ನಡೆಸಬೇಕು ಎಂದಾಗ ಇದೇ ಶಿಕ್ಷಕರು ವಿರೋಧಿಸಿದ್ದರು. ಇದೇ ಶಿಕ್ಷಕರು ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ಬೀದಿಗಿಳಿದಿದ್ದನ್ನು ನಾನು ನೋಡಿಲ್ಲ, ಕೇಳೂ ಇಲ್ಲ. ಸಕರ್ಾರಿ ಶಾಲೆಗಳು ಮುಚ್ಚಲು, ಜನರ ವಿಶ್ವಾಸ ಕಳೆದುಕೊಳ್ಳಲು ಸಕರ್ಾರ ಮಾತ್ರ ಕಾರಣವೇ?.
    ಶಿಕ್ಷಕರ ಪ್ರತಿಭಟನೆಗೆ ಮೌಲ್ಯಮಾಪನ ಬಹಿಷ್ಕಾರ ಮಾತ್ರವೇ ಸರಿಯಾದ ಮಾರ್ಗ ಎನ್ನುವುದು ಅಪರ್ಿಸಿಕೊಂಡ ಶಿಕ್ಷಕನ ಬಾಯಲ್ಲಿ ಬರದು. ಬಂದರೆ ಆತ ಶಿಕ್ಷಕನೇ ಅಲ್ಲ.

    ಪ್ರತಿಕ್ರಿಯೆ
  9. Anonymous

    ಕೆ.ವಿ.ತಿರುಮಲೇಶರ ಪ್ರತಿಮಾತಿಗೂ ನನ್ನ ಬೆಂಬಲವಿದೆ. ಸರ್ಕಾರ ಮೊದಲು ಮುಷ್ಕರ ನಿರತ ಶಿಕ್ಷಕರನ್ನು ಗೌರವಿಸುವುದು ಕಲಿತರೆ ಅರ್ಧ ಬೇಡಿಕೆ ಈಡೇರುತ್ತವೆ. ಆದರೆ ತಲೆತುಂಬ ಅಹಮ್ ತುಂಬಿಕೊಂಡೇ ಹೊರಡುವ ಈ ಸರ್ಕಾರದ ಕಣ್ಣುಗಳು ಸತ್ಯವನ್ನು ನೋಡಲಾರೆ ಕೇಳಲಾರೆ ಎಂದು ಹಠ ಹಿಡಿದಿದೆ.. ಈ ಮುಷ್ಕರದ ಮೂಲಬೇರಿನ ಬಗ್ಗೆ ಸರ್ಕಾರಕ್ಕಿರುವ ಅಸಡ್ಡೆ ನೀಗದ ಹೊರತು ಉರಿಬಿಸಿಲಲ್ಲಿ ಕೂತ ಮೇಷ್ಟ್ರುಗಳ ಕಷ್ಟ ನೀಗುವುದಿಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: