ಐದಾರು ವರ್ಷಗಳ ಹಿಂದೆ ನಾವು ಗೆಳೆಯರು ಮಂಡ್ಯ ಪೇಟೆಯಲ್ಲಿ ಸಂಜೆ ಅಂಡಲೆಯುತ್ತಿದ್ದಾಗ ನಾನು ಗೋಳಾಡಿದ್ದೆ. ಆಧುನಿಕ ಕನ್ನಡ ರಂಗಭೂಮಿಯನ್ನು ಪೂರ್ಣ ವೃತ್ತಿಯಾಗಿ ತೆಗೆದುಕೊಂಡು ಬದುಕಲು ಸಾಧ್ಯವಿಲ್ಲವಲ್ಲಾ ?… ನಾಟಕವನ್ನು ಶಿಕ್ಷಣವನ್ನಾಗಿ ರೂಪಿಸುವ ಅವಕಾಶವೇ ಇಲ್ಲವೇ ?… ಇದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳುವ ವಿಚಾರವಂತರೂ ಇಲ್ಲದೇ ಹೋದರೆ ?… ಹೀಗೆಲ್ಲಾ ಯೋಚಿಸಿ ದಿಕ್ಕೆಟ್ಟಿದ್ದೆ. ಹುಡುಗನೊಬ್ಬ ತನ್ನ ಆಸೆಯಿಂದ ವೃತ್ತಿ- ಬದುಕನ್ನು ಪಡೆಯಲು ಸಾಧ್ಯವೇ ಆಗದಂಥಾ ಹೀನ ಸ್ಥಿತಿಯಲ್ಲಿ ನಾವಿದ್ದೇವೆ !…ದಿನನಿತ್ಯ ಏನೆಲ್ಲಾ ಚರ್ಚಿಸಿದರೂ ಕೊನೆಗೆ ಚರ್ಚೆ ಅಲ್ಲಿಗೇ ಕೊನೆಗೊಂಡು ಮಂಕುಮೋರೆಯಿಂದ ಮನೆಗೆ ಮರಳುತ್ತಿದ್ದುದು ನನಗೆ ಚೆನ್ನಾಗಿ ನೆನಪಿದೆ.
ದಿಢೀರನೆ ಲಂಕೇಶ್ ನಲ್ಲಿ ಹದಿಹರಯದವರನ್ನು ಕುರಿತು ಟೀಕೆ ಟಿಪ್ಪಣಿ ಬಂತು. ನಮ್ಮದೇ ಮಾತುಗಳು ಅಲ್ಲಿ ಮೂಡಿದ್ದರಿಂದ ರೋಮಾಂಚಿತರಾಗಿದ್ದೆವು. ಏಕೆಂದರೆ, ಅಷ್ಟು ಮುಗ್ಧತೆ ನಮ್ಮಲ್ಲಿತ್ತು!
ಕೆಲವೇ ದಿನಗಳಲ್ಲಿ ಮೈಕೊಡವಿ ನೀನಾಸಮ್ ನಾಟಕ ಶಾಲೆಗೆ ಹೋಗಿ ಬಂದೆ. ಒಂದು ವರ್ಷ ತಿರುಗಾಟವೂ ಮುಗಿಸಿದೆ… ಕಣ್ಣರಳತೊಡಗಿತ್ತು. ಆದರೂ ಅಭದ್ರತೆ, ಪುಕ್ಕಲುತನ ಹೇರಳವಾಗಿಯೇ ಇದ್ದವು… ಗೆಳೆಯರ ಆಸೆಗಾಗಿ ಚಲನಚಿತ್ರವೊಂದಕ್ಕೆ ಕೆಲಕಾಲ ಕೆಲಸ ಮಾಡಿದೆ. ಭಯಂಕರ ಅನುಭವ ಅದು ! ನಟಿ ಸರಿತಾ ಪ್ರತಿಭೆ ಕಂಡು ಬೆರಗಾಗಿದ್ದು, ಯಾವುದೋ ಕಾರಣಕ್ಕಾಗಿ ಅವಳೊಡನೆ ಗುರುಗುಟ್ಟಿದ್ದು, ಬಿಟ್ಟರೆ ಹೆಚ್ಚೇನೂ ಮನಸ್ಸಿನಲ್ಲಿ ಉಳಿದಿಲ್ಲ.
ಬೆಂಗಳೂರು ಒಂಟಿತನ ತಡೆಯದೆ ಮತ್ತೆ ಓಡಿದೆ ಹೆಗ್ಗೋಡಿಗೆ. ನಾಟಕದ ಚಟ ಅಂಥಾದ್ದು!! ನನಗಾಗಿ ತಿರುಗಾಟದ ಕಾಮಿಡಿ ಪಾತ್ರಗಳು ಕಾಯುತ್ತಿದ್ದವು. ಈ ದಿನಗಳಲ್ಲೇ ನನ್ನ ಸುತ್ತ ಸಂಸ, ಶೇಕ್ಸ್ಪಿಯರ್, ಬ್ರೆಕ್ಟ್, ಕಂಬಾರರು ಸುಳಿದಾಡುತ್ತಿದ್ದರು. ನನ್ನ ಬಾಲಿಶತನಗಳು ನಿಧಾನವಾಗಿ ಅರಿವಾಗಹತ್ತಿತ್ತು. ಒಳ್ಳಯ ಅಭಿನಯ, ಕೆಟ್ಟ ಅಭಿನಯಗಳಿರಲಿ, ನಿಜವಾಗಿ ಅಭಿನಯಿಸುವುದು ಎಷ್ಟುಕಷ್ಟ ಎಂಬುದು ತಿಳಿಯುತ್ತಾ ಹೋಯಿತು. ಸುಬ್ಬಣ್ಣನವರು ಹೇಳಿದ್ದ ಮಾತು ನೆನಪಿದೆ. ಈ ಜಗತ್ತಿನಲ್ಲಿ ಅತ್ಯಂತ ಪವಿತ್ರ ಹಾಗೂ ಕಷ್ಟಕರವಾದ ಕೆಲಸವಿದ್ದರೆ ಅದು… ಅಭಿನಯಿಸೋದು ಮಾತು ಪೂರ್ಣ ಅರ್ಥವಾಗಲು ಇನ್ನೆಷ್ಟು ವರ್ಷ ಪಳಗಬೇಕೋ…?
ಮೂರು ವರ್ಷ ತಿರುಗಾಟ, ರಂಗನೆಲೆ ಕಂಡುಕೊಳ್ಳಲು ಸಾಕಷ್ಟು ಅನುಭವ ಗಳಿಸಿಕೊಟ್ಟಿತು. ಬಗೆಬಗೆಯ ಪಾತ್ರಗಳು ಥರಥರದ ಜನಗಳು, ಚಿತ್ರ-ವಿಚಿತ್ರದ ಊರುಗಳು. ಊಟಗಳು ಎಲ್ಲಾ ಜಿಲ್ಲೆಯಲ್ಲೂ ಹಣಿಕಿ, ದೆಹಲಿಯಲ್ಲೂ ಒಂದೆರೆಡು ಬಾರಿ ಮೂತಿ ತೂರಿಸಿಬಂದದ್ದಾಯ್ತು. ಜನರನ್ನು ನಗಿಸಿದ್ದೇ ನಗಿಸಿದ್ದು. ಕ್ರಮೇಣ ಭಯ ಶುರುವಾಯ್ತು. ಒಳಗೇ ಅಳುತ್ತಿದ್ದೆ. ಬೇರೆ ಪಾತ್ರಗಳನ್ನು ಮಾಡಬಲ್ಲೆನೆಂಬ ಕೆಚ್ಚಿತ್ತು…ಸಿಗಲಿಲ್ಲ! ಆದರೆ ಸಿಕ್ಕಿದ್ದು ಎಷ್ಟೊಂದು ಜನರ ಪ್ರೀತಿ, ಸ್ನೇಹ-ಸಂಪರ್ಕ!! ಹಿನ್ ಕಲ್ ಡ್ಯಾಂನ ಹರೆಯದ ಹುಡುಗಿಯೊಬ್ಬಳು ಪ್ರೇಕ್ಷಕರ ಪ್ರತಿಕ್ರಿಯೆಯಲ್ಲಿ ಧೀರ್ಘ ಪ್ರೇಮ ಪತ್ರವನ್ನು ಬರೆದುದರಿಂದ ಹಿಡಿದು ಕನ್ನಡಪ್ರಭದಲ್ಲಿ ಪ್ರಕಟವಾದ ಭಾರೀ ಸಂದರ್ಶನದವರೆಗೆ ಯಾವೂ ಅಹಂಕಾರವನ್ನೇನೂ ಹೆಚ್ಚಿಸಲಿಲ್ಲ. ಅಲ್ಲಲ್ಲಿ ಆತ್ಮವಿಶ್ವಾಸ ಮೂಡಿಸಿದ್ದಂತೂ ಸತ್ಯ.
ತಿರುಗಾಟದಲ್ಲಿದ್ದಾಗಲೇ ಸರ್ಕಾರದ ರಂಗಘಟಕದ ಬಗ್ಗೆ ಸುದ್ದಿಬಂತು. ಕರೆಂಟ್ ಹೊಡೆದಂತಾಯ್ತು! ಎಲ್ಲವನ್ನೂ ಹೊಂದಿಸಿ ಅರ್ಜಿ ಕಳುಹಿಸುವಷ್ಟರಲ್ಲಿ ತಿಂಗಳು ಕಳೆದಿತ್ತು. ಸರ್ಕಾರದಲ್ಲವೇ? ಎಲ್ಲವೂ ತಡ. ತಿರುಗಾಟ ಪೂರೈಸಿ ಕೊಡಗು. ಸಕಲೇಶಪುರ, ವಿಟ್ಲ ಮುಂತಾದ ಕಡೆ ಹವ್ಯಾಸಿ ತಂಡಗಳಿಗೆ ರಂಗತರಬೇತಿ ಶಿಬಿರಗಳನ್ನು ಮಾಡಿದೆ. ನಾಲ್ಕಾರು ನಾಟಕಗಳನ್ನು ಮಾಡಿಸಿದೆ. ನನ್ನ ಭುಜಕ್ಕೆ ಭುಜ ಕೊಟ್ಟಿದ್ದ ನನ್ನ ಅವತ್ತಿನ ಹೆಂಡತಿ, ಸುಳ್ಯದ ಕೃಷ್ಣಕುಮಾರ, ತೆಳ್ಳಗೆ…ಗಡ್ಡ…ತುಂಬಾ ಸೆಂಟಿಮೆಂಟಲ್…ಹಠಮಾರಿ ಹುಡುಗ, ಅವನ ಸೂಕ್ಷ್ಮ ಸ್ವಭಾವಕ್ಕೆ ಹೆದರಿಯೇ ನನ್ನ ಜೊತೆಗಾಗಿ ಬಲವಂತದಿಂದ ಅರ್ಜಿ ಹಾಕಿಸಿದ್ದೆ.
ರಂಗಶಿಬಿರಗಳ, ನಾಟಕಗಳ ಯಶಸ್ಸಿನಲ್ಲಿ ಅವನದೂ ಸಮಪಾಲಲು. ಈ ಹೊತ್ತಿಗಾಗಲೇ ಎಷ್ಟು ಜವಾಬ್ದಾರಿ ಬರಲಿಕ್ಕೆ ಆರಂಭಿಸಿತ್ತು ಎಂದರೆ, ಶಿಬಿರಗಳನ್ನು ಎಂದೂ ಹಗುರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ತಿಂಗಳಿಡೀ ತಂಡದೊಂದಿಗೆ ಹಗಲು ರಾತ್ರಿ ಕಷ್ಟಪಟ್ಟು ನಾಟಕ, ರಂಗಕ್ಕೆ ಬಂದಾಗ ಹೆಮ್ಮೆಯಿಂದ ಅಳು ಬಂದುಬಿಟ್ಟಿತ್ತು.
ಅವಕಾಶ ಸಿಕ್ಕಾಗ ಗೆಳೆಯ ಕಾರ್ಯಪ್ಪ ಕಟ್ಟುತ್ತಿದ್ದ ಪುಟ್ಟ ರೆಪರ್ಟರಿಗೆ ಸಹಾಯಕ್ಕೆ ನಿಂತೆ ಮೊತ್ತೊಮ್ಮೆ ಊರು ಸುತ್ತಿದೆ. ನಟನಾಗಿ, ಪರದೆ ಕಟ್ಟಿ, ಗೋಡಿಗೆ ಮೊಳೆಹೊಡೆದು ಮಾತ್ರ ಗೊತ್ತಿದ್ದ ನನಗೆ ತಂಡವೊಂದರ ಸಂಘಟನೆ, ವ್ಯವಸ್ಥೆ, ಸಂಪರ್ಕ ಇವುಗಳ ಪರಿಚಯವೂ ಆಗಿದ್ದು, ಕೊಡಗಿನಲ್ಲಿ ಕಳೆದ ದಿನಗಳಲ್ಲಿ…!
ನನ್ನನ್ನು ಚಿಕ್ಕಂದಿನಲ್ಲಿ ನಾಟಕಕ್ಕೆ ಹಚ್ಚಿದ ನನ್ನೂರು ನಾಗಮಂಗಲದಲ್ಲಿ ಶಿಸ್ತಿನ ನಾಟಕ ಮಾಡಿಸಲು ಕರೆ ಬಂತು. ತುಂಬಾ ಖುಷಿಯಾಗಿಬಿಟ್ಟಿದ್ದೆ ! ಸೋಲುತ್ತಿದ್ದ ನಾಟಕವೊಂದು ಶ್ರಮ-ಶಿಸ್ತು-ಸಹನೆಗಳಿಂದ ದಿಢೀರಾಗಿ ಗೆದ್ದುಬಿಟ್ಟಾಗ ಮೊದಲಬಾರಿಗೆ ಮೀಸೆಗೆ ಕೈಹಾಕಿದ್ದೆವು!! ರಂಗಾಯಣದ ಸಂದರ್ಶನದಲ್ಲಿ ಸಿಕ್ಕ ಪರಿಚಯಸ್ಥರು, ನಿಮಗೆ ಯಾಕ್ರೀ ತರಬೇತಿ ? ಹಾಗೆ ಹೀಗೆ ಅಂತೆಲ್ಲಾ ರೈಲು ಹತ್ತಿಸಿದ್ದರು! ನಿಜವಾದ ಬಂಡವಾಳ ನಮಗೆ ಗೊತ್ತಿತ್ತು. ವೈವಾದಲ್ಲಿ ನೇರವಾಗಿ ಹೇಳಿದ್ದೆ, ನನಗೆ ತುಂಬಾ ಮಿತಿಗಳಿವೆ ನನ್ನ ಮಿತಿಗಳನ್ನು ಮೇರಲು ನನಗೆ ತರಬೇತಿ, ಅಭ್ಯಾಸ, ನಿರಂತರತೆ, ಆಶ್ರಯ ಎಲ್ಲವೂ ಬೇಕಾಗಿದೆ.
ಸಂದರ್ಶನಗಳೆಲ್ಲಾ ಒಂದು ಶಿಬಿರದಂತೆಯೇ ಇದ್ದವು. ನೂರೆಂಟು ಕೀಳರಿಮೆ, ಗೊಂದಲಗಳಿಂದ ಭಯಕ್ಕೊಳಗಾಗಿಬಿಟ್ಟಿದ್ದೆ…ಅವಕಾಶ ಸಿಗುತ್ತೋ ಇಲ್ಲವೋ ಅಂತ ನಿಜವಾಗಿ ಹೆದರಿಬಿಟ್ಟಿದ್ದೆ.
ಕೊನೆಗೂ ಬಂತು..! ಪಟ್ಟಿಯಲ್ಲಿ ಮೊದಲ ಹೆಸರಿತ್ತು. ಬದುಕಿದೆ ಅಂದುಕೊಂಡೆ. ಅಂತೂ ರಂಗಾಯಣಕ್ಕೆ ಬಂದುಬಿದ್ದೆ. ಇನ್ನೊಂದು ಮಜಲು ಕಾರಂತ ಕಂಡರು.
ಕೃಷ್ಣಕುಮಾರನನ್ನೂ ಕೂಡಿ ಒಂದಷ್ಟು ಹಳೇ ಮುಖಗಳೂ ಬಹಳಷ್ಟು ಹೊಸ ಗೆಳಯ-ಗೆಣೆಕಾರ್ತಿಯರೂ ಇದ್ದರು. ಚೆನ್ನಾಗಿ ಹಾಡಬಲ್ಲ ಪಿಚ್ಚಳ್ಳಿ ಶ್ರೀನಿವಾಸ ಇದ್ದ. ಶಾಸ್ರೀಯ ಗಾಯನದ ಗಂಧವಿದ್ದ ನಂದಿನಿ ಇದ್ದಳು (ಕ.ವೆಂ.ರಾಜಗೋಪಾಲರ ಮಗಳು). ಮೈಮ್ ಗೊತ್ತಿದ್ದ ರಮೇಶ ಇದ್ದ. ಪ್ರಾಣಿ-ಪಕ್ಷಿ-ಮಗುವನ್ನು ಅವೇ ನಾಚುವಂತೆ ಅನುಕರಿಸಬಲ್ಲ ಸುಳ್ಯದ ಗೀತಾ ಇದ್ದಳು. ಕನ್ನಡದಷ್ಟೇ ಇಂಗ್ಲೀಷನ್ನು ಆರಾಮವಾಗಿ ಮಾತನಾಡಬಲ್ಲ ಅನೇಕ ಬುದ್ಧಿವಂತ ಹುಡುಗ- ಹುಡುಗಿಯರಿದ್ದರು. ಹಾಡು, ನೃತ್ಯ, ವಾದ್ಯ ಎಲ್ಲವನ್ನೂ ಮಾತಿನಷ್ಟೇ ಪಟಪಟ ಮಾಡುತ್ತಿದ್ದ ಸಾಗರದ ಅರುಣ ಎಂಬ ಹುಡುಗನಿದ್ದ. ಈ ಗೆಳೆಯರ ಉತ್ಸಾಹ, ಪ್ರತಿಭೆ ನನಗೆ ಹೆಮ್ಮೆ ಮೂಡಿಸುವುದರ ಜೊತೆಗೆ ಅಪಾರ ಕೀಳರಿಮೆ ಹುಟ್ಟಿಸಿಬಿಟ್ಟಿತ್ತು. ಹಾರ್ಮೋನಿಯಂ ನುಡಿಸಿ ಗೊತ್ತಿಲ್ಲ, ಕಂಜರ ಮುಟ್ಟಿಯೇ ಇಲ್ಲ.
ಹಾಡುವುದು ನಮ್ಮಪ್ಪರಾಣೆ ಗೊತ್ತಿರಲಿಲ್ಲ… ಏನು ಮಾಡುವುದು ?
ಮತ್ತೆ ಉಸಿರುತುಂಬಿದ್ದು, ಬರಿಯ ಮಾತುಗಳ ಶಕ್ತಿಯಿಂದ ಈ ಕಾರಂತರು.
ಮಾತು…ಮಾತು. ಅವರ ಮಾತಿನ ಮೋಡಿಗೆ ಮರುಳಾಗದ ವಿದ್ಯಾರ್ಥಿಗಳಿಲ್ಲ! ಆತ್ಮ ವಿಶ್ವಾಸ ಮೂಡಿಸಲು ಈ ಅರವತ್ತರ ಮುದುಕ ಪಣ ತೊಟ್ಟಂತಿತ್ತು. ಇಡೀ ಜೀವನವನ್ನು ಮನುಷ್ಯ ಬದುಕನ್ನು, ಅಗಾಧ ಪ್ರಪಂಚವನ್ನು ಸಂಗೀತದ ಮೂಲಕ, ಲಯದ ಮೂಲಕ ಗಮನಿಸಬಲ್ಲವರಾಗಿದ್ದರು, ಕಾರಂತ. ಅದು ಹೇಗೆಂದು ಪ್ರಶ್ನಿಸಿದರೆ, ಅವರ ಜೊತೆ ಇದ್ದೇ ಅರ್ಥ ಮಾಡಿಕೊಳ್ಳಬೇಕು. ಪ್ರತೀ ವಸ್ತು, ಮನುಷ್ಯ, ಪ್ರಾಣಿ, ಪಕ್ಷಿಗಳ ಚಲನೆ ಎಲ್ಲವನ್ನೂ ಕುತೂಹಲದಿಮದ, ಎಚ್ಚರಿಕೆಯಿಂದ ಆತ ಗಮನಿಸುತ್ತಿದ್ದರು. ತಮ್ಮದೇ ದೃಷ್ಟಿಯಿಂದ ವ್ಯಾಖ್ಯಾನಿಸಲು ಯತ್ನಿಸುತ್ತಿದ್ದರು.
ಗುಬ್ಬಿ ಕಂಪನಿ, ಎನ್.ಎಸ್.ಡಿ.,ಭೂಪಾಲ್ ರಂಗಮಂಡಲು, ಹೀಗೆ ಎಷ್ಟೊಂದು ಅನುಭವದ ಮೂಟೆಯನ್ನು ಹೊತ್ತು ತಂದಿದ್ದ ಕಾರಂತರ ಅನುಭವವನ್ನು ಕೇಳುವುದೇ ಒಂದು ಪಾಠವಾಗಿತ್ತು. ಸಂಗೀತ-ರಂಗ ಸಂಗೀತಕ್ಕಿರುವ ವ್ಯತ್ಯಾಸ, ರಂಗ ಸಂಗೀತ, ನಾಟಕದಲ್ಲಿ ಬಳಕೆಯಾಗುವ ಸಂಗೀತ, ನಮ್ಮ ವೃತ್ತಿನಟರ ಶಕ್ತಿ ಮತ್ತು ನಿಶ್ಯಕ್ತಿ, ಹವ್ಯಾಸಿ ತಂಡದ ವಿಚಾರಪೂರಿತ ಸಾಹಸಗಳು, ಪ್ರಾಕ್ಟೀಸ್ ಮತ್ತು ರಿಹರ್ಸಲ್ ಗಳಿಗಿರುವ ಮುಖ್ಯ ಭಿನ್ನತೆ, ಒಬ್ಬ ನಟ ಬುದ್ಧಿವಂತನಾಗಲೇಬೇಕೆಂಬ ಹಠ ಯಾಕಿರಬೇಕು ? ಯಾಕೆ ನಟರು ಪ್ರತಿನಿತ್ಯ ನ್ಯೂಸ್ ಪೇಪರ್ ಓದಬೇಕು ? ಪ್ರಸ್ತುತತೆಯನ್ನು ಚೆನ್ನಾಗಿ ಬಲ್ಲವ ರಂಗದ ಮೇಲೆ ಹೇಗೆಜನರೊಂದಿಗೆ ಜೀವಂತವಾಗಿ ಬದುಕಬಲ್ಲ,ಸಾಹಿತ್ಯ ಓದುವುದು, ಬರೆಯುವುದನ್ನು ಮಾಡದೇ ನಟನಾಗಲು ಹೊರಟರೆ ಆಗುವ ಅನಾಹುತಗಳು, ನಟರು-ಸಮಾಜದ ಜೊತೆಗಿರುವ ಸಂಬಂಧ, ಸಂಘಟನೆಯೊಂದು ಸಮರ್ಥವಾಗಿ ರೂಪುಗೊಳ್ಳುವಾಗ ನಟರ, ವ್ಯವಸ್ಥಪಕರ ಜವಾಬ್ದಾರಿ-ಸ್ನೇಹಪರತೆ, ಸಂಸ್ಥೆಯೊಂದು ಸರ್ಕಾರದ ಜೊತೆಗೆ ಏಗಬೇಕಾದ ಸ್ಥತಿಗಳು, ನಟರು ಸಮಾಜದ ಭಾಗವಾಗಲು ಇರುವ ಸಮಸ್ಯೆ… ಹೀಗೆ ನೂರಾರು ಸಾವಿರಾರು ಸಂಗತಿಗಳನ್ನು ಅವರಿಂದ ನಮ್ರನಾಗಿ ಕೇಳಿದ್ದೇನೆ. ಎಲ್ಲವೂ ಅರ್ಥವಾಗಿಲ್ಲ. ಒಂದಂತೂ ಮರೆತಿಲ್ಲ. ನಟನಾಗಲು ಬೇಕಾದ್ಧೇ ವಿಲ್ ಪವರ್. ಮತ್ತೇನೂ ಬೇಡ. (ಮನುಷ್ಯನಾಗಲೂ ಅಷ್ಟೇ ಅಂದುಕೊಂಡಿದ್ದೇನೆ) ಕಾರಂತರು ವೀರಣ್ಣನವರಿಂದ ಕಲಿತದ್ದು, ಸಂಸ್ಥೆಯನ್ನು ಪರಿವಾರವೊಂದರಂತೆ ನಡೆಸಿಕೊಳ್ಳೋದು… ನನ್ನ ದಾರಿಯೂ ಅದಾಗಬೇಕೆಂಬ ಆಸೆ ಹುಟ್ಟಿದೆ.
ಒಂದು ಅಚ್ಚರಿ ಹೇಳ್ತೇನೆ. ತರಬೇತಿ ಕೊಡಲು ಮುಂದಾಗಿದ್ದು ಸಿಲೆಬಸ್ ರಹಿತ ಪಾಠಗಳ ಮೂಲಕ ! ಅನುಭವ, ಬರೀ ಅನುಭವ. ಅನುಭವವೇ ಮೊದಲ ಪಾಠ ಅನ್ನುವಂತೆ ಮೈಸೂರಿನ ಬೀದಿಗಳಿಗೆ, ಗಲ್ಲಿಗಳಿಗೆ, ಅಗ್ರಹಾರ-ಕೇರಿಗಳಿಗೆ, ಮಾರ್ಕೆಟ್,-ಬಸ್ ಸ್ಟಾಪ್ ಗಳಿಗೆ, ಸ್ಮಶಾನ-ಆಸ್ಪತ್ರೆಗಳಿಗೆ, ಸಂತೆ-ಜಾತ್ರೆಗಳಿಗೆ ಧಾಳಿ ಇಟ್ಟಿದ್ದೇ ಇಟ್ಟಿದ್ದು ! ಹುಟ್ಟಿದ ಮಗುವನ್ನು ಪಿಳಿಪಿಳಿ ಕಣ್ಣುಬಿಟ್ಟು ನೋಡಿದಂತೇ. ಹೆಣಕೊಯ್ಯುವ ಮನೆಯಲ್ಲಿ ಮೈಸುಟ್ಟುಕೊಮಡು ಅನಾಥವಾಗಿ ಬಿದ್ದಿದ್ದ ಬೆತ್ತಲೆ ಹೆಣ್ಣನ್ನು ನೋಡಿ ದಿನವಿಡೀ ಬೆಪ್ಪರಾಗಿಬಿಟ್ಟಿದ್ದೆವು!
ಮಹದೇಶ್ವರ ಬೆಟ್ಟದಲ್ಲಿ ಲಕ್ಷ ಲಕ್ಷ ಜನರ ನಟ್ಟನಡುವೆ ನಡುರಾತ್ರಿಯಲ್ಲಿ ನಾಮುಂದು, ತಾಮುಂದು ಅಂತ ನುಗ್ಗಿ ನಶೆ ಏರಿದವರಂತೆ ನುಗ್ಗಾಡಿ ನಕ್ಕುನೋಡಿದ್ದೇವೆ. ಬಿಳಿಗಿರಿ ರಂಗನ ಬೆಟ್ಟದಲ್ಲಿ ಸೋಲಿಗರ ಹಟ್ಟಿಗೆ ನುಗ್ಗಿ ಮಡಕೆ ಮುಟ್ಟಿ ಸಂತಸಪಟ್ಟಿದ್ದೇವೆ. ದೊಡ್ಡ ಸಂಪಿಗೆ ನೋಡುವ ಸಲುವಾಗಿ ಮುಂಜಾವಿನ ಮಂಜಲ್ಲಿ, ಇಳಿಜಾರ ಕೊರಕಲಲ್ಲಿ ಜಾರುತ್ತಾ, ಜೇಡರ ಬಲೆ ಸರಿಸುತ್ತಾ, ಜಿಗಣೆ ಕೀಳುತ್ತಾ ಅಕ್ಕಪಕ್ಕದ ಹಸಿರು ಹಾಯ್ದು ಆಳದ ತಣ್ಣನೆ ಹರಿವನೀರಿನಲ್ಲಿ ಮುಳುಗಿ ಎದ್ದದ್ದು ರೋಚಕ!
ನೆನಪಾಯ್ತು ! ಪ್ರತಿದಿನ ನಮಗೆ ಇಲ್ಲಿ ಹಾರ್ಮೋನಿಯಂ ಹಿಡಿದು ಸ..ಪ..ಸ.. ಕೂಗಿಸಿ ಶೃತಿ ಸೇರಿಸಲು ತಯಾರಿ ಕೊಡ್ತಿದ್ದರು. ಮರದ ಕಟ್ಟಿಗೆ ತುಮಡು, ಕರಟ, ಕಲ್ಲು ಇತ್ಯಾದಿಗಳಲ್ಲಿ ಕುಟ್ಟಿಸಿಕುಟ್ಟಿಸಿ ಲಯ ಗಟ್ಟಿಮಾಡಲು ಪ್ರಯತ್ನಿಸುತ್ತಿದ್ದರು. ನಾವು ಏಗುತ್ತಿದ್ದೆವು.
ಆದರೆ, ಇಲ್ಲಿ ಕಂಡದ್ದೇನು? ಸೋಲಿಗ ಹುಡುಗ ಹುಡುಗಿಯರು ಯಾವುದೇ ಶೃತಿಪೆಟ್ಟಿಗೆ ಸಹಾಯವಿಲ್ಲದೇ ತಬಲಾದ ನೆರವಿಲ್ಲದೆ ಶೃತಿಬದ್ಧವಾಗಿ, ಅದೂ ಕೋರಸ್ ನಲ್ಲಿ ಕರೆಕ್ಟಾಗಿ ಹಾಡುತ್ತಿದ್ದಾರೆ! ಕೋರಸ್ ನಲ್ಲಿ ಒಬ್ಬ ಶೃತಿ ತಪ್ಪಿದರೂ ಮೊಸರನ್ನದಲ್ಲಿ ಕಲ್ಲುಸಿಕ್ಕಂತೆ ಅಂತ ನಿಮಗೆ ಗೊತ್ತು. ಇದು ಹೇಗೆ ಸಾಧ್ಯ ಅಂದಿರಾ ? ಅದು ಹೀಗಿರಬಹುದು. ನದಿಯ ಕಲರವ, ಮರಗಳ ಮರ್ಮರ, ಜೀರುಂಡೆಯ ಜೀರ್… ಹಕ್ಕಿಗಳ ಚೀವ್…ಚೀವ್…, ಕೂ…ಕೂ… ಇವೆಲ್ಲವುಗಳ ಮಧ್ಯೆ ಬೆಳದ ಅವರಿಗೆ ಈ ಶಕ್ತಿ ಬರುವುದು ಸಹಜ. ನಾನು ಯೋಚಿಸಿದೆ. ನಮಗೆ ಸಿಕ್ಕ ತರಬೇತಿ ಈ ಗಿರಿಜನ ಮಕ್ಕಳಿಗೆ ಸಿಕ್ಕರೇ…? ಏನೆಲ್ಲಾ ಆಗಿ ಬಿಡಬಹುದು…ಅಲ್ಲವೇ ?
ನಮ್ಮ ಧ್ವನಿಯ ರೇಂಜ್ ವೃದ್ಧಿಸಲು ಕಾರಂತರು ತೆಗೆದುಕೊಂಡ ಕ್ರಮಕ್ಕೆ ಒಂದೆರಡು ಉದಾಹರಣೆ ಕೊಡುತ್ತೇನೆ. ಚುಂಚನಕಟ್ಟೆಯಲ್ಲಿ ಭೋರ್ಗರೆವ ಹೊಳೆಯೆದಿರು ನಮ್ಮನ್ನು ಕೂಗಲು ಹಚ್ಚಿದರು. ಆ ಶಬ್ದಕ್ಕೆ ನಾವು ಸ್ತರ್ಧಿಯೇ ? ಕುಕ್ಕರಹಳ್ಳಿ ಕೆರೆಯ ಕಂಟಿಕಾಡಿನಲ್ಲಿ ದೂರದೂರದಿಂದ ಅರಚಿಸಿದರು. ಚಾಮುಮಡಿ ಬೆಟ್ಟವನ್ನು ನೇರದಾರಿ ಬಿಟ್ಟು, ಕಲ್ಲುಮುಳ್ಳಿನ ಕಳ್ಳಹಾದಿಯಲ್ಲಿ ಹತ್ತಿಸಿ ಏದುಸುರಿನಲ್ಲಿ ಗೆಳೆಯರನ್ನು ಕರೆಯಲು ಸೂಚಿಸಿದರು. ಹೀಗೆ…
ನಾವು ರಾಗ-ಸರಾಗ ಮಾಡಿದ್ದು. ಧ್ವನಿ-ನಾದ-ಶಬ್ದ-ತಾಳ-ಲಯ-ಎಲ್ಲವೂ ನಮ್ಮ ದಿನನಿತ್ಯ ಹಾಸುಹೊಕ್ಕಾದ ಬಗೆಯನ್ನು ಇತರೆ ಹುಡುಕಾಟವನ್ನು ಪ್ರೇಕ್ಷಕರೆದುರು ಸಹಜವಾಗಿ ಮಂಡಿಸಿಡುವುದು. ಇಲ್ಲಿ ಗೆಜ್ಜೆ ಶಬ್ದ ಒಬ್ಬರ ನಂತರ ಮತ್ತೊಬ್ಬರು ನುಡಿಸಿದಾಗ ಸೌಂಡ್ ಜರ್ನಿ ಆಗುತ್ತದೆ. ಕೇಳಲಿಕ್ಕೆ ಹಿತವಿದೆ. ನಾವು ನಾಗರಹೊಳೆ ಕಾಡಿನಲ್ಲಿ ರಾತ್ರಿ ಒಂದಷ್ಟುಜನ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದೆವು. ಅಲ್ಲೇ ಸಮೀಪದ ದೊಡ್ಡ ಪೊದೆಗಳ ಮೇಲ್ಭಾಗದಲ್ಲಿ, ರಾಶಿರಾಶಿ ಮಿಣುಕು ಹುಳುಗಳು ಒಮ್ಮೆಲೆ ಹತ್ತುವುದು, ಹಾರುವುದು ನಡೆಸಿದ್ದವು. ಸುಮಾರು ಎಂಭತ್ತರಿಂದ ನೂರು ಗಜದಷ್ಟು ಉದ್ದದ ಕತ್ತಲಲ್ಲಿ ಒಂದರ ಪಕ್ಕ ಇನ್ನೊಂದರಂತೆ ಮಿಣುಕು ಹುಳುಗಳು ಮಿಂಚುತ್ತಾ ಹಾರುತ್ತಾ ಹೋಗುವುದು… ನೋಡಲಿಕ್ಕೆ ವಾಹ್ ಅನ್ನಿಸಿತು. ಬೆಳಕು ಪ್ರಯಾಣಿಸುವುದು ಇದೆಯೇ ? ಹೌದು, ಪ್ರಕೃತಿಯೂ ಪಾಠ ಹೇಳಿತ್ತು !
ನಮಗೆ ಸ್ವರಚಿತ ಹಾಡುಗಳನ್ನು ಹೇಳಿಕೊಟ್ಟವರು, ಯೋಗಣ್ಣ (ಶ್ರೀ ಯೋಗಾನರಸಿಂಹ, ಪ್ರಸಿದ್ಧ ರಂಗಕರ್ಮಿ). ನಾನು ಅವರನ್ನು ಈಗ ಕಂಡುಬಲ್ಲೆ… ಹೇಳ್ತೇನೆ… ಮೂರು ತಲೆಮಾರಿಗಾಗುವಷ್ಟು ಪ್ರತಿಭೆಯನ್ನು ಮತಿಯಲ್ಲಿರಿಸಿಕೊಂಡು ಹಣೆಬರಹ ಚೆನ್ನಾಗಿಲ್ಲದೇ ಹೋದದ್ದರ ಜ್ವಲಂತ ರೂಪ, ಈ ಮನುಷ್ಯ, ಹಾರ್ಮೋನಿಯಂ ಕೈಗೆ ಬಂತೆಂದರೆ ಬೆರಳು ಹೂ ಪಕಳೆಗಳ ಮೇಲೆ ಹರಿದಷ್ಟು ಸರಾಗ… ಮೋಡಿ… ಹಳೆಯ ವೃತ್ತಿ ನಾಟಕಗಳ ಸಮರ್ಥ ನಟರಾದರೂ, ಆಧುನಿಕ ರಂಗಭೂಮಿ. ಹೊಸನಿಟ್ಟಿನ ಕುರಿತು ಕುತೂಹಲ, ಗೌರವಗಳನ್ನಿಟ್ಟುಕೊಂಡು ಭಾಗಿಯಾದವರು. ಕಫನಿ ಕಟ್ಟಿ, ರಾತ್ರೋರಾತ್ರಿ ಬೀಸಿದ ಬಿರುಗಾಳಿಗೆ ದಿವಾಳಿಯಾದವರು. ಸಹ್ತಾಸಾಮುದ್ರಿಕೆಯಿಂದ ದೇಹ ವಿಜ್ಞಾನ, ಆಕಾಶ ಜ್ಞಾನದವರೆಗೂ ಚೆನ್ನಾಗಿ ಮಾತನಾಡಬಲ್ಲವರು. ನಾಟಕದಲ್ಲಿ, ಸಿನಿಮಾದಲ್ಲಿ ನಟಿಸಿ ನಿರ್ದೇಶಿಸಿ, ಸಾಹಿತಿಗಳಾಗಿ,ಸಂಗೀತ ನಿರ್ದೇಶಕರಾಗಿ, ಭಾಷಣಕಾರರಾಗಿ… ನತದೃಷ್ಟರಾಗಿಯೂ… ಮೊಚುಮಾತಿನಿಂದ ನಗಿಸುತ್ತಾ,
ಎಲ್ಲರೊಂದಿಗೆ ಬೆರೆವವರು… ಹಾಡಿನ ಕ್ಲಾಸಿನಲ್ಲಿ ಅನುಭವ ಕೇಳಿದ್ದೇ ಜಾಸ್ತಿ ನಾವು !
ಕೋಟ್ಯಾಂತರ ಖರ್ಚುತಿಂದ ಕಲಾಮಂದಿರದ ಕೆಳಭಾಗ, ಹಿಂಬಾಗ, ಕಳೆ ಬೆಳೆದು ಪಾಳುಬಿದ್ದು, ಪಾರ್ಥೇನಿಯಂ ಆವಾಸಸ್ಥಾನವಾಗಿತ್ತು, ನಾವು ಇಲ್ಲಿಗೆ ಬಂದಾಗ. ಕ್ರಮೇಣ ಇದನ್ನು ನಮ್ಮ ಜಾಗ ಮಾಡಿಕೊಳ್ಳಲು ವಾರಗಟ್ಟಲೆ ತಪ್ಪದೇ ಶ್ರಮದಾನ ಮಾಡಿದ್ದೇವೆ. ಮುಳ್ಳುಕಂಟಿಗಳನ್ನು ಕಿತ್ತು ಮಣ್ಣು ಹದಮಾಡಿ, ನೂರಾರು ಪುಟ್ಟಸಸಿ ನೆಟ್ಟಿದ್ದೇವೆ. ಇದ್ದ ನಾಲ್ಕಾರು ಮರಗಳಿಗೆ ಪಾತಿ ಮಾಡಿ ನೀರೆರೆದು, ದೂರ ದೂರದಿಂದ ಮಣಭಾರ ಕಲ್ಲುಗಳನ್ನು ತಲೆಮೇಲೆ ಹೊತ್ತುತಂದು, ಮಣ್ಣುಕಲೆಸಿ, ಕಲ್ಲುಜೋಡಿಸಿ ಕಟ್ಟೆ ಕಟ್ಟಿದ್ದೇವೆ. ಪ್ರತಿ ಪೂರ್ವರಂಗಕ್ಕೂ ರಂಗಾಯಣದ ಆವರಣ ಬೇರೆ ಬೇರೆ ರೀತಿ ಅಲಂಕಾರಗೊಳ್ಳುತ್ತಾ, ಆ ಬದಲಾವಣೆಗಳಲ್ಲಿ ನಮ್ಮ ಕ್ರಿಯಾಶೀಲತೆ ತೋರಿಸಲು ಹೆಣಗಾಡಿದ್ದೇವೆ. ಮಲಗಿದ್ದವರು ಮಧ್ಯರಾತ್ರಿ ಬಂದ ಲೋಡ್ ಗಟ್ಟಳೆ ಹೆಣಭಾರ ಕಬ್ಬಿಣವನ್ನು ಲಾರಿಯಿಂದ ಇಳಿಸಿ, ಬೆಳಗ್ಗೆ ಯೋಗದಲ್ಲಿ ಮೈ ಬಗ್ಗುವಾಗ ಅಯ್ಯಪ್ಪಾ ಅಂದಿದ್ದೇವೆ. ಇಲ್ಲಿಗೆ ಇಟ್ಟಿಗೆ-ಕಟ್ಟಿಗೆಗಳು, ಪಿಕಾಸಿ-ಕಟ್ಟಿಗಳು ನಮಗೆ ಕೊಳೆಯಾಗಿರುವುದನ್ನು ಅಭ್ಯಾಸಮಾಡಿಸಿವೆ… ಕೊಂಚ ರಕ್ತದ ರುಚಿಯನ್ನೂ ಕಂಡಿವೆ… ನಾವು ನೆಟ್ಟಗಿಡ ಬೆಳೆದು ಹೂ ಬಿಟ್ಟಾಗ ನಮ್ಮ ಹುಡುಗಿ ನಕ್ಕಂತಾಗಿ ಮುಖ ಅರಳಿದೆ !
ರಂಗದಮೇಲೆ ಪುಟ್ಟ ಪಾತ್ರ ಮಾಡುವುದರಿಂದ ದೊಡ್ಡ ರಂಗಮಂದಿರ ಕಟ್ಟುವವರೆಗೆ ಪ್ರತಿಕ್ಷಣ ರಿಸ್ಕ್ ತೆಗೆದು ಕೊಳ್ಳಲೇಬೇಕು. ಇದು ಕಾರಂತರ ವಾದ ಮತ್ತು ಪ್ರವೃತ್ತಿ ಕೂಡ.
ಪೂರ್ವರಂಗದ ಬಗ್ಗೆ ಹೇಳುವುದಾದರೆ, ಇದು ಸಂಸ್ಕೃತ ಪ್ರೇರಿತವಾದ ಪದ ಇರಬೇಕು. ಯಕ್ಷಗಾನದಲ್ಲಿ ಬಾಲಕಲಾವಿದರಿಗೆ ತರಬೇತಿಕೊಟ್ಟು ಪ್ರದರ್ಶಿತವಾದದ್ದರ ಪದ ಇದಾಗಿದೆ. ಮೂರು ವರ್ಷಗಳ ನಮ್ಮ ತರಬೇತಿಯ ಹಂತಗಳನ್ನು ಕೆಲ ಪ್ರದರ್ಶನಗಳಲ್ಲಿ ತೋರಿಸುವುದು ಮತ್ತು ನಮ್ಮ ಪ್ರದರ್ಶನಗಳಿಗೆ ಪ್ರೇಕ್ಷಕರಿಲ್ಲ ಎಂಬ ಕೂಗು ಎಷ್ಟು ಸುಳ್ಳು ಎಂದು ಸ್ಪಷ್ಟವಾಗಿ ತೋರುತ್ತದೆ.
ಆರಂಭದ ಪೂರ್ವರಂಗಗಳಲ್ಲಿ ಮೂರ್ನಾಲ್ಕು ತಂಡಮಾಡಿ ಜಾತ್ರ, ಕೊಳೆಗೇರಿ ಇತ್ಯಾದಿ ವಿಷಯಗಳನ್ನು ಕೊಟ್ಟು ಆಶು ವಿಸ್ತರಿಸಲು ಬಿಟ್ಟಿದ್ದರು. ನಮ್ಮ ಹೊಂದಾಣಿಗೆ-ಕಲ್ಪನಾಚಾತುರ್ಯ, ಸನ್ನಿವೇಶ ನಿರ್ಮಾಣ ಮತ್ತು ಪ್ರತಿಯೊಬ್ಬರ ಕೊಡುಗೆ ಏನು ? ಎಂಬುದನ್ನು ಗಮನಿಸಲಾಗಿತ್ತು. ನಮ್ಮ ಎಷ್ಟೋ ಆಶುವಿಸ್ತರಣೆಗಳು ಒಳ್ಳೆಯ ನಾಟಕವಾಗಿ ರೂಪುಗೊಳ್ಳಲು ಸಮರ್ಥಶಕ್ತಿಯನ್ನು ಪಡೆದುಬಿಟ್ಟವು. ನಂತರದ ದಿನಗಳಲ್ಲಿ ಗೆಳೆಯರು ಇದನ್ನು ರುಜುವಾತು ಮಾಡಿ ತೋರಿದರು. ಪ್ರಾರಂಭದ ದಿನಗಳ ಈ ಅಭ್ಯಾಸಗಳಲ್ಲಿ ಬಗೆ ಬಗೆಯ ಭಾವನೆಗಳನ್ನು ಹೊತ್ತ ಮುಖಗಳು, ಮನಸ್ಸುಗಳು ಹೊಳೆಯುತ್ತಿದ್ದವು. ಸಂಕೋಚ-ನಾಚಿಕೆ-ಹಮ್ಮು-ಅತೀ ಉತ್ಸಾಹ-ಕೀಳರಿಮೆ-ತಮಾಷೆ-ವ್ಯಂಗ್ಯ-ಗೇಲಿ-ಸಂತಸ…ಹೀಗೇ ಎಷ್ಟೊಂದು !
ನಾವು ಚಿಕ್ಕಂದಿನಲ್ಲಿ ಕಂಠಪಾಠ ಮಾಡಿದ್ದ ಪದ್ಯ, ಗೋವಿನಹಾಡು… ಅದೇ ಪುಣ್ಯಕೋಟಿಯನ್ನು… ಹುಲಿ…ಆಹಾ ! ಆ ಹಾಡನ್ನು ಮಕ್ಕಳಿಗೆ ಅರ್ಥವಾಗುವ ಹಾಗೆ ಸರಳವಾಗಿ ದೃಶ್ಯಜೋಡಿಸುವ ನಿರ್ವಹಣೆ ನನ್ನಮೇಲೆ ಬಂತು. ಮನತಾಗುವಹಾಗೆ ಹೋಗಣ್ಣ ಸಂಗೀತ ಕೊಟ್ಟರು. ಹಸು-ಕರು-ಮರಗಳು-ದನಗಳು-ಹುಲಿ ಎಲ್ಲರೂ ಕರೆಕ್ಟಾಗಿ ಅಭಿನಯಿಸಿದರು. ಪುಟ್ಟಮಕ್ಕಳಿಂದ ಮೊದಲ್ಗೊಮಡು ಬುದ್ಧಿಜೀವಿ ಮುದುಕರವರೆಗೆ ಎಲ್ಲರೂ ಪ್ರೇಕ್ಷಾಂಗಣದಲ್ಲಿ ಅಳುತ್ತಿದ್ದುದನ್ನು ಕಂಡಿದ್ದೇನೆ. ಈ ಪ್ರದರ್ಶನಕ್ಕೆ ಕಾರಂತರು ಮಾಡಿದ ರಿಪೇರಿಯಲ್ಲಿ ಮೌನ ಮತ್ತು ಮೆಲು ಘಂಟೆಗಳ ಪಾತ್ರ ಎಷ್ಟು ಮಹತ್ವದ್ದೆಂದು ನಮಗೆ ತಡವಾಗಿ ತಿಳಿಯುತ್ತಾಹೋಯಿತು.
…ಅಷ್ಟರಲ್ಲಿ ದಿಲ್ಲಿಗೆ ಹೋಗುವ ಕಾರ್ಯಕ್ರಮ ಬಂತು… ಖುಷಿಯೋ ಖುಷಿ. ನಾಟಕದವರ ದೊಡ್ಡಸಂಸಾರವೊಂದು ತೀರ್ಥಯಾತ್ರೆಗೆ ಹೊರಟಂತೆ ಸಂಭ್ರಮದಿಂದ ತೆರಳಿದ್ದೆವು… ಟ್ರೈನಿನಲ್ಲಿ ದಿನಗಟ್ಟಲೆ ಪ್ರಯಾಣಿಸಿ… ಅಟ್ಟಣಿಗೆ ಸೀಟಲ್ಲಿ ತಿಮಡಿ, ತೀರ್ಥ… ಮರೆತೆ ನೋಡಿ. ನಾವು ಹೋಗಿದ್ದು, ನೆಹರು ಜನ್ಮಶತಾಬ್ಧಿಯ ನೆನಪಲ್ಲಿ ಎಲ್ಲಾ ಭಾಷೆಯ (60-70ರ ದಶಕದಲ್ಲಿ ತುಂಬಾ ಹೆಸರುಮಾಡಿದ) ನಾಟಕಗಳನ್ನು ಆಯ್ದು ಪ್ರದರ್ಶಿಸುತ್ತಾರೆ… ನಾವು, ನೋಡುವುದು. ಈ ನಾಟಕೋತ್ಸವ ನಡೆದದ್ದು ದೆಲ್ಲಿಯ ಕಮಾನಿನ ರಂಗಮಂದಿರದಲ್ಲಿ… ತುಂಬಾ ಒಳ್ಳೇ ಅವಕಾಶವದು. ಸಾಕಷ್ಟು ಒಳ್ಳೆ ನಟರನ್ನು, ತರಾವರೀ ನಾಟಕಗಳನ್ನು ಕಂಡುಬಂದೆವು. ನಾಸಿರುದ್ದೀನ್ ಷಾ, ಓಂಪುರಿ, ಅಮರೀಶ್ ಪುರಿ, ಶ್ಯಾಮಾನಂದನ್, ಉತ್ಪಲ್ ದತ್, ಶ್ರೀರಾಂಲಾಂಗು… ಮುಂತಾದ ಖ್ಯಾತನಾಮರನ್ನೆಲ್ಲಾ ರಂಗದಮೇಲೆ ನೋಡಿದ್ದಾಯ್ತು. ನನಗೆ ಮನಸ್ಸಿನಲ್ಲಿ ಉಳಿದ ನಾಟಕಗಳು… ಹಿಂದಿಯ ಅಧೇ ಅಧೂರೇ, ಅಂಧಯುಗ್, ಉದ್ವಸ್ತ ಧರ್ಮಶಾಲಾ, ಬಂಗಾಲದ ನಬನ್ನ, ಕಲ್ಲೋಲ್, ಕೇರಳತಂಡದ ಊರುಭಂಗಂ… ಇತ್ಯಾದಿ. ಕನ್ನಡದ ಜೋಕುಮಾರಸ್ವಾಮಿ, ಹಯವದನ ಕೂಡ ಪ್ರದರ್ಶಿತವಾಗಿದ್ದವು.
ಮಣಿಪುರಿಯ ಚಕ್ರವ್ಯೂಹದ ಕೋರಿಯೋಗ್ರಾಫಿ ಮರೆಯಲು ಸಾಧ್ಯವಿಲ್ಲ… ಒಂದೊಂದು ನಾಟಕದಲ್ಲೂ ರಂಗಸಜ್ಜಿಕೆ, ಬೆಳಕು, ಪರಿಕರ ಬಳಕೆ, ಅಭಿನಯಶೈಲಿ… ಕಲಿಕೆ ದೃಷ್ಟಿಯಿಂದ ಭಾರೀ ಉಪಯುಕ್ತವಾಗಿದ್ದವು. ದೆಹಲಿಯ ಪ್ರೇಕ್ಷಣೀಯ ಸ್ಥಳಗಳು ನನಗೆ ಹೊಸತಲ್ಲ… ಆದರೆ ಈ ಬಾರಿ ಬಹುತೇಕ ಎಲ್ಲಾ ರಂಗಮಂದಿರಗಳನ್ನು ನೋಡಿದ್ದು ಹೊಸ ಅನುಭವ. ಬಗೆ ಬಗೆಯ ಪಾಠಗಳು, ದೆಹಲಿಯ ಹೊರಬದಿಯಲ್ಲಿರುವ ರಂಗಮಂದಿರವೊಂದು ನಮ್ಮ ಪುಟ್ಟಹಳ್ಳಿಯೊಂದರಷ್ಟು ದೊಡ್ಡದಿದೆ ! ಎಂದರೆ ಅಚ್ಚರಿಯಾಗುತ್ತದೆ. ಬ್ರಹ್ಮರಾಕ್ಷಸ ಅದು ! ಹಾಗಿದೆ… 72 ಸೀಟಿರುವ ಎನ್.ಎಸ್.ಡಿ ಸ್ಟುಡಿಯೋ ಥಿಯೇಟರ್ ನಲ್ಲಿ ನಾವು ನೋಡಿದ ರೆಪರ್ಟರಿ ನಾಟಕ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ… ಒಳ್ಳೆ ಅನುಭವ. ಪ್ರಗತಿ ಮೈದಾನದ ಬಗೆ ಬಗೆಯ ರಂಗಮಂದಿರಗಳು, ಶ್ರೀರಾಮ್ ಸೆಂಟರ್, ನ್ಯಾಷನಲ್ ಥಿಯೇಟರ್ ಬಯಲು ರಂಗಮಂದಿರ, ಇಂಟಿಮೇಟ್ ಥಿಯೇಟರ್ ಗಳು… ಹೀಗೆ ಲೆಕ್ಕವಿಲ್ಲ ! ನನಗೆ ತುಂಬಾ ತಮಾಷೆಯೆನಿಸಿದ್ದು, ಅಂತರಾಷ್ಟ್ರೀಯ ಖ್ಯಾತಿಯುಳ್ಳ ನಮ್ಮ ರಾಷ್ಟ್ರೀಯ ನಾಟಕಶಾಲೆಗೆ ಒಂದುಸುಸಜ್ಜಿತ ರಂಗಮಂದಿರ ಇಲ್ಲದೇ ಇರುವುದು !?
ದೆಹಲಿಯಲ್ಲಿ..
ಗಲ್ಲಿಗೊಂದು ಗೋರಿ, ಕುತುಬ್ ಮಿನಾರ್, ಗಾಂಧಿ-ಇಂದಿರಾಗಾಂದಿಗಳಿಗೆ ಗುಂಡು ಬಿದ್ದ ಸ್ಥಳ, ರೆಪ್ಯುಜಿ ಮಾರ್ಕೆಟ್ ಡಾಬಾಗಳು, ಅಲ್ಲೇ ಸಮೀಪದ ಸಂಡೆ ಬಜಾರ್… ನೋಡಬೇಕು… ತುಕ್ಕು ಹಿಡಿದ ಹಳೆಯ ಸೆಲ್ ನಿಂದ ಹಿಡಿದು ಬ್ರಿಟೀಷ್ ರಾಜರ ಸೇವಕರು ಬಳಸುತ್ತಿದ್ದ ದಪ್ಪನೆಯ ಉಣ್ಣೆ ಕೊಟುಗಳವರೆಗೂ ಮಾರಾಟಕ್ಕೆ ಸಿಗುತ್ತಿರುತ್ತವೆ, ಸೆಕೆಂಡ್ ಹ್ಯಾಂಡಿನಲ್ಲಿ !… ನೋಡಲೇಬೇಕಾದ ಸ್ಥಳ ಶಂಕರ್ ಡಾಲ್ಸ್ ಮ್ಯೂಜಿಯಂ. ಭಾರತದ ಎಲ್ಲ ವರ್ಗದ ಜನಪ್ರತಿನಿಧಿಗಳು ಗೊಂಬೆಗಳಾಗಿ ನಿಂತಿದ್ದಾರೆ ಅಲ್ಲಿ… ಒಳ್ಳೆಯ ಸಂಗ್ರಹಾಲಯವದು. ಒಟ್ಟೂ ದೆಲ್ಲಿಯ ಜೀವನ ಲಯ ಅಲ್ಲಿಯ ಹವೆಯಂತೆ ವಿಚಿತ್ರ ಕೂಡ !
… ಅಲ್ಲಿಂದ ಭೂಪಾಲ್ ಗೆ. ಸರ್ಕಾರಿ ಅಧಿಕಾರಿಯೊಬ್ಬ ಹಠತುಂಬಿ ನಿಂತ ಶ್ರೇಷ್ಠ ಕಲಾವಿದರುಗಳು… ಬರಡುಭೂಮಿಯಲ್ಲಿ ಫಲಭರಿತ ಸಾಂಸ್ಕೃತಿಕ ಬೆಳೆಯ ತೆಗೆಯಲೇ ಬೇಕೆಂಬ ಪಣ ತೊಟ್ಟು ನಿಂತರೆ ಏನಾಗಬಹುದು ? ಅದಕ್ಕೆ ಉದಾಹರಣೆ ಭಾರತ್ ಭವನ್… ಪ್ರತಿ ಇಂಚಲ್ಲೂ ಕಲಾತ್ಮಕ ಸಾಧನೆಯ ಗುರುತಿದೆ… ಅಲ್ಲಿಯ ಆದಿವಾಸಿ ಕಲಾಕೃತಿಗಳು, ಪೇಂಟಿಮಗ್ ಎಲ್ಲವೂ ನಮ್ಮನ್ನು ಸಾಂಚೀ-ಭೀಮ್ ಬೈಟ್ಕಾಗೆ ಹೋಗಲು ಪ್ರಚೋದಿಸಿದವು… ಸಾವಿರಾರು ವರ್ಷಗಳ ಹಿಂದಿನ ನಮ್ಮ ಮಾನವ ಜೀವನ ಪದ್ಧತಿಯ ಕುರುಹುಗಳನ್ನು ನೋಡಿ ರೋಮಾಂಚನಗೊಳ್ಳಬೇಕೆಂದಿದ್ದರೆ ಖಂಡಿತಾ ಭೀಮ್ ಬೈಟ್ಕಾಕ್ಕೆ ಹೋಗಲೇಬೇಕು.
ರಂಗಮಂದಿರ ಕಲಾವಿದರು ಅಭಿನಯಿಸಿದ ತ್ರಿಪೆನ್ನಿ ಅಪೇರಾ ನೋಡಿದ್ದು, ದ್ವಾರಕೀಪ್ರಸಾದ್, ಅಮರ್ ಸಿಂಗ್, ವಿಭಾಮಿಶ್ರರ ಜೊತೆಯಲ್ಲಿ ನಾವೊಂದು ಆಶುವಿಸ್ತರಣೆ ಮಾಡಿ… ನಾವೂ ಅವರೂ ಹಾಡಿದ್ದು… ನೆನಪಿದೆ.
ಭೂಪಾಲ್ ನಿಂದ ಕಲಿಯಬೇಕಾದಷ್ಟು ಬೆಟ್ಟದಷ್ಟಿದೆ. ದೆಹಲಿ, ಭೂಪಾಲ್ ಪ್ರವಾಸಗಳು, ತಮ್ಮ ಕಲಾವಿದತನದ ಆಸೆಗಳು ಗರಿಗೆದರಿ, ರಂಗಭೂಮಿಯ ಬದ್ಧತೆಗೆ ಪುಷ್ಠಿಯಾಗಲು ಹೆಚ್ಚು ಸಹಾಯಕವಾದವು.
ಮರಳಿ ಮನೆಗೆ…


nimma anubhava janya bahara thumba chennagide. Namagu HOsa anubhavavannu needuttide. Munduvarisi.
ರಮೇಶ ಸರ್ ನಿಮ್ಮ ಬರಹ ಓದುತ್ತಾ ನನ್ನ್ ನಾಟಕ ಶಿಬಿರದ ದಿನಗಳು ನೆನಪಾದವು ಮತ್ತೆ ಶಿಬಿರ ಮುಗಿಸಿಬಂದಂತೆ ಭಾಸವಾಗ್ತಿದೆ ಲೇಖನ ಮನಮುಟ್ಟುವಂತಿದೆ ಧನ್ಯವಾದಗಳು,,,
chennagi baruthide nimma lekhana ramesh.prakatisitiruva avdhigu nimagu thanks
25ವರ್ಷಗಳ ಕೆಳಗೆ ರಂಗಾಯಣದ ಆರಂಭದ ದಿನಗಳ ಮೊಟ್ಟಮೊದಲ ಮೂರು ವರ್ಷದ ತಯಾರಿಯನ್ನು ಕುರಿತಾಗಿ ಪುಣೆಯ ಗೆಳೆಯನಿಗೆ ಬರೆದ ದೀರ್ಘ ಪತ್ರವೊಂದು ಅಂಚೆಗೆ ಹಾಕಲು ಕಾಸಿಲ್ಲದೆ Table ಮೇಲೆಯೇ ಉಳಿದು ಹೋಗಿತ್ತು. ಅದರ ಪ್ರತಿ ಈಗ ಲೇಖನವಾಗಿ ಪ್ರಕಟವಾಗಿದೆ. ತಪ್ಪಿದ್ದರೆ ತಿದ್ದಿಕೊಳ್ಳಿ, ಉಪ್ಪಿದ್ದರೆ ನೆಕ್ಕಿಕೊಳ್ಳಿ…!
anna lekhana tumba chanagide,,,, idu ondu ranga patada thara ide
ಕಾರಂತರ ರಂಗ ಸೃಷ್ಟಿಯಷ್ಟೇ ರಂಗಾಯಣದ ಸೃಷ್ಟಿಯೂ ಒಂದು ಅದ್ಭುತ. ಅವರ ಜೊತೆ ಕಳೆದ ಕೆಲವು ಗಂಟೆಗಳ ಕಾಲದ ಮೌನ ನನಗೆ ಅವರ ಪ್ರತಿ ಮಾತನ್ನೂ ಅರ್ಥವತ್ತಾಗಿಸಿತು. ಒಂದೊಂದು ಮಾತೂ 3ಡಿ ಆಕಾರ ತಳೆದು ಜೀವಂತವಾಗಿ ಕಣ್ಮುಂದೆ ಕಾಣಿಸುತ್ತಿದೆಯೇನೋ ಎಂಬ ಭ್ರಮೆ ಮೂಡಿಸುತ್ತಿತ್ತು.
ಅದ್ಭತವಾದ ಲೇಖನ ಗುರುಗಳೇ ರಂಗಾಯಣದ ಅಂಗಳದಲ್ಲಿ ಮೂರು ವರುಷಗಳ ಕಾಲ ಕಳೆದ ನನ್ನ ದಿನಗಳನ್ನು ಮತ್ತೆ ಜ್ಞಾಪಿಸಿದೆ ಗುರುಗಳೇ. ರಂಗ ಕಲಾವಿದನಾಗಬೇಕು ಎಂಬ ಹಂಬಲದೊಂದಿಗೆ ರಂಗಾಯಣಕ್ಕೆ ಕಾಲಿಟ್ಟ ನಾನು ಬೇರೆ ಬೇರೆ ಕಾರಣಗಳಿಗೆ ಸಾದ್ಯವಾಗದೇ ನಿರಾಸೆ ಅನುಭವಿಸಿದ್ದೇನೆ….. ನಿಮ್ಮ ನಾಟಕದ ತಯಾರಿಗಳ ಈ ಲೇಖನ ನೋಡಿ ಒಂದು ರೀತಿಯಲ್ಲಿ ರೋಮಾಂಚಿತನಾಗಿದ್ದೇನೆ ಇನ್ನು ಮುಂದೆ ಸಹ ನಿಮ್ಮ ಹಲವು ನಾಟಕದ ತಯಾರಿಗಳನ್ನು ಅವಧಿಯಲ್ಲಿ ನಾನು ನೀರಿಕ್ಷೀಸುತ್ತೇನೆ
ಧನ್ಯವಾದಗಳು ಗುರುಗಳೇ
Ramesharavare nimma anubhav oodi nanage karantara nenapu tumane aytu nanu raveendra kala k .dalli one sare nodidde.
Dear friend Ramesh
FANTASTIC ARTICLE BY FANTASTIC PERSON. mithra rameshanna Nimma ella baraha nange thumba priyakaravagide,
dhavitty munduvarasi.shubavagali……