ಕನ್ನಡ ಹವ್ಯಾಸಿ ರಂಗಬೂಮಿ ಹೊರಳು ಸ್ಥಿತಿಯಲ್ಲಿದೆ ಎನ್ನುವುದು ಒಪ್ಪತಕ್ಕ ಮಾತಾದರೂ ಬಗೆ ಮಾತ್ರ ವಿಷಾದಮಯವಾಗೇನೂ ಇಲ್ಲ. ವೃತ್ತಿರಂಗಭೂಮಿಯ ಔನ್ನತ್ಯವನ್ನು ಕಂಡ ಕನ್ನಡ ನಾಡಿಗೆ, ಕ್ರಮೇಣ ಅದರ ಅವಸಾನದ ಹಾದಿಯನ್ನೂ ಗುರುತಿಸಿಕೊಂಡೇ ಹವ್ಯಾಸಿ ರಂಗಭೂಮಿ ತೆರೆದುಕೊಳ್ಳುತ್ತಿರುವ ಸವಾಲುಗಳಿಗೆ, ಪ್ರತಿಕ್ರಿಯೆಗಳಿಗೆ ವಿಸ್ಮಯವೂ ಮೂಡಿದೆ.
‘ಕಾಲಘಟ್ಟದ ನಿರ್ಣಯ’ ಅಂತಂದು ಜಾರಿಕೊಳ್ಳಲಾಗದು. ಬದಲಾಗುತ್ತಿರುವ ಜಗತ್ತಿನಾಶಯದ ಅನುಗುಣವಾಗಿ ಹವ್ಯಾಸಿರಂಗ ಚಲಿಸುತ್ತಿದೆ ಮತ್ತು ವರ್ತಮಾನದಲ್ಲಿ ಇದ್ದೇವೆಂಬುದು ಅಷ್ಟೇ ಸತ್ಯ!
‘ವೈಚಾರಿಕ ದೃಷ್ಟಿ’ ಆದುನಿಕ ರಂಗಬೂಮಿಯ ಹಣ್ಣೆಬೊಟ್ಟು, ‘ಸಮಕಾಲೀನ ಆಲೋಚನಾ ಲಹರಿ’ ಈ ರಂಗದ ಸಾವಯವತೆ. ವೃತ್ತಿ ರಂಗದ ನಾಟಕಗಳಲ್ಲಿ ಎಲ್ಲ ಅವಘಡಗಳಿಗೂ-ಅನಾಹುತಕ್ಕೂ ‘ನೀನೇ, ಸಮಾಜ ಕಾರಣ!’ ಎಂದು ದೂಷಿಸಿದರೆ ಹವ್ಯಾಸಿ ರಂಗ ‘ಸಮಾಜದಲ್ಲಿ ನೀನೂ ಇದ್ದಿ, ಪರೀಕ್ಷಿಸಿಕೋ’ ಎನ್ನಲು ಶುರು ಮಾಡಿತು. ಎರಡರದ್ದೂ ಹುಟ್ಟು, ಬೆಳವಣಿಗೆ ಬೇರೆ ಬಗೆಯದ್ದಾದರೂ, ವೃತ್ತಿ, ಹವ್ಯಾಸಿಗಳೆರಡೂ ಮೂಲದಲ್ಲಿ ಮನಸ್ಸಂತೋಷ ಪಡೆಯಲೆಂದು ಅರಳಿಕೊಂಡಥವು. ‘ವಿಚಾರ’ ಬೇಡವೇ? ಅಂದರೇ ವೃತ್ತಿಯೂ, ಸಂತಸವೂ, ವಿಚಾರವೂ ಒಟ್ಟಿಗೆ ಬೇಕೆಂದಾಗ ಹುಟ್ಟಿದ್ದು ‘ರೆಪರ್ಟರಿ’. ವೃತ್ತಿ ರಂಗಭೂಮಿಯ ವೃತ್ತಿಪರತೆ, ಹವ್ಯಾಸಿಗಳ ವಿಚಾರಪರತೆಗಳನ್ನು ಒಟ್ಟುಗೂಡಿ ಪ್ರದರ್ಶಿಸುವ ಪರಿಕಲ್ಪನೆ.
ಶಾಲೆಗಳಲ್ಲಿ ವಾರ್ಷಿಕೋತ್ಸವಕ್ಕೆ ಆದ ನಾಟಕಗಳನ್ನು, ಕಾಲೇಜಿನ ದಿನಗಳಲ್ಲಿ ಆಡಿದ ನಾಟಕಗಳನ್ನು, ಊರಿನ ಹಬ್ಬ ಹರಿದಿನಗಳಲ್ಲಿ ಪ್ರದರ್ಶಿಸಿದ ಪೌರಾಣಿಕ ನಾಟಕಗಳು-ಸಾಮಾಜಿಕ ನಾಟಕಗಳು, ಸ್ಪರ್ಧೆಯಲ್ಲಿ ಭಾಗವಹಿಸುವ ನಾಟಕಗಳು, ಕಾರ್ಖಾಗಳಲ್ಲಿ, ಬ್ಯಾಂಕುಗಳಲ್ಲಿ, ಎಲ್ಲೆಲ್ಲಿ ತನ್ನ ಮುಖ್ಯ ಕೆಲಸದ ಬದಿಯಲ್ಲಿ ಬಿಡುವಿನ ಸಮಯದಲ್ಲಿ ಹವ್ಯಾಸಕ್ಕೋಸ್ಕರವೇ ಮಾಡಿದ ನಾಟಕಗಳನ್ನು ‘ಹವ್ಯಾಸಿ ರಂಗಭೂಮಿ’ ಎಂದು ಸರಳೀಕರಿಸಲು ಸಾದ್ಯವಿಲ್ಲವಾದರೂ ಇವೆಲ್ಲವೂ, ಇನ್ನೂ ಒಂದಿಷ್ಟು ಈ ವಿಭಾಗದಲ್ಲೇ ಬರುತ್ತವೆ. ಹವ್ಯಾಸಿ ರಂಗಭೂಮಿಗೆ ‘ವಿಲಾಸಿ ರಂಗಭೂಮಿ’ ಎಂಬ ಇನ್ನೊಂದೂ ಹೆಸರಿದೆ!
ಯಾವತ್ತು ಕಾಲೇಜಿನ ಅಧ್ಯಾಪಕರು ಸಂಜೆ ಹೊತ್ತಿಗೆ ನಾಟಕಾಭ್ಯಾಸ ಮಾಡಲು ಶುರು ಮಾಡಿದರೋ ಅವತ್ತು ಅದರ ಖದರ್ರು ಬದಲಾಯಿತು! ಇಂತದ್ದೇ ಕಾಲದಲ್ಲಿ ಅಂತ ನಿಖರವಾಗಿ ಹೇಳಲು ಸಾದ್ಯವಾಗುವುದಿಲ್ಲವಾದರೂ ಬದಲಾಗುತ್ತಿರುವ ಸ್ಥಿತಿಗಳನ್ನು ಸಂಕ್ರಮಣ ಘಟ್ಟದಲ್ಲಿ ಕೃತಿಗಳ ಮೂಲಕ ದಾಖಲಿಸಲೆತ್ನಿಸಿದ್ದು ಶ್ರೀರಂಗರು, ಟಿ. ಪಿ. ಕೈಲಾಸಂ, ಮತ್ತಿತರರು ಎಂದು ನನ್ನ ನಂಬಿಕೆ.
ಆಗ ಆರಂಭವಾದ ಈ ಹೊಸ ಶೈಲಿ ಪರಂಪರಾಗತೆಯನ್ನು ಅನುಮಾನಿಸುತ್ತಲೇ ಅದರ ಶೈಲಿಯನ್ನು ಅನುಕರಿಸುವ ಅನಿವಾರ್ಯತೆಯಲ್ಲಿ ಇದ್ದದ್ದು ಈಗ ಸುಸ್ಪಷ್ಟ.
ಹವ್ಯಾಸಿ ರಂಗಭೂಮಿಯ ವ್ಯಾಪ್ತಿ ವಿಶಾಲ. ಏಕಪ್ರಕಾರದಾಲೋಚನೆಗೆ ಥಟ್ಟನೆ ಸಿಗುವಂತದ್ದಲ್ಲ! ರಂಗವೆಂಬ ಸಾಗರದಲ್ಲೊಂದು ಮಹಾನದಿ ಹವ್ಯಾಸಿರಂಗಬೂಮಿ, ಅನೇಕ ನದಿಗಳು, ನಾಲೆಗಳು, ಸಣ್ಣ-ಪುಟ್ಟ ಹಳ್ಳ-ಕೊಳ್ಳ ಗುಂಡಿಗಳೂ ಇವೆ!

ಚರ್ಚಿಸಲಿಕ್ಕೆ ಬೇಕಾದಷ್ಟಿದೆಯಾದರೂ, ಸದ್ಯಕ್ಕೆ ಕನ್ನಡ ಹವ್ಯಾಸಿ ರಂಗಭೂಮಿಯ ಕೆಲ ತಾಪತ್ರಯಗಳನ್ನು ತೋಡಿಕೊಳ್ತಿದ್ದೇನೆ. ಇಡೀ ಜಗತ್ತೇ ನರಳುತ್ತಿರುವ ‘ಜಠರ’ ಸಮಸ್ಯೆ ಮತ್ತು ‘ಧಾವಂತ ಮನಸ್ಥಿತಿ’ ಎರಡು ಪ್ರಮುಖ ಖಾಯಿಲೆಗಳು ಎಲ್ಲ ಕಡೆಯಂತೆ ಇಲ್ಲೂ ಅಕ್ರಮಿಸಿಕೊಂಡಿದೆ. ದುಡ್ಡಿಲ್ಲವ? ರಂಗಸಜ್ಜಿಕೆ, ಪರಿಕರಗಳು, ಮುಖವಾಡ, ಬೆಳಕು, ಉಡುಪು, ಆಭರಣ, ಪ್ರಚಾರ ತಂತ್ರಗಳಲ್ಲಿ ಹೊಸತನ ಇಲ್ಲವಾ? ಚಿಂತನೆಗಳಿವಾ? ಈ ಎಲ್ಲವೂ ಇದೆ ಪ್ರಾಣವಾಯು; ‘ಸಂಕಲ್ಪ’ವೇಇಲ್ಲ! ಇಚ್ಫಾಶಕ್ತಿ ಪ್ರಬಲವಾಗಿಲ್ಲದಿದ್ದರೆ, ರಿಹರ್ಸಲ್ಗೆ ಹೇಳಿದ ಸಮಯಕ್ಕೆ ಸರಿಯಾಗಿ, ಕಾರಣಗಳನ್ನು ಕೊಡದೇ ತಪ್ಪಿಸಿಕೊಳ್ಳದೇ ಹಾಜರಾಗದಿದ್ದರೆ, ತಂಡವೇ ಸೇರದಿದ್ದರೆ, ಸಾಂಘಿಕವಾಗಿ ಒಳ್ಳೇ ನಾಟಕ ಮಾಡಲು ಹೇಗೆ ಸಾದ್ಯ? ‘ಹವ್ಯಾಸಿ ರಂಗಾಂದೋಲನ’ ಪ್ರತಿಭಟನೆಯ ಅಸ್ತ್ರವಾಗಿ ಕೂಡ ಕೆಲದಶಕಗಳಲ್ಲಿ ಕೆಲಸ ಮಾಡಿದ್ದು ಕೂಡ ಎಲ್ಲ ಸೇರಿದಾಗಲೇ. ಆದರೀಗ ಸಣ್ಣ ಪುಟ್ಟ ಕಾರಣಗಳಿಗಾಗಿ ಎಲ್ಲಕ್ಕೂ ಎದುರಿನವನ ತಪ್ಪು ಹುಡುಕುವ ಚಾಳಿಯಿಂದಾಗಿಯೇ ಮತ್ತು ಅವಸರವೆಂಬ ಅತ್ಯಂತ ಬಯಂಕರ ರೋಗಕ್ಕೆ ಎಲ್ಲರೂ ತುತ್ತಾಗಿರುವುದರಿಂದ ಸಮಸ್ಯೆ ಮತ್ತಷ್ಟು ಜಟಿಲವಾಗಿ ನೀವು ಯಾರನ್ನೇ ಕೇಳಿ ನೋಡಿ, ಒಂದೇ ಉತ್ತರ ‘ಟೈಂ ಇಲ್ಲ ಗುರು’!
ಹವ್ಯಾಸಿಗಳ ದೊಡ್ಡ ಕೂಗು ‘ತಾಲೀಮಿಗೆ ಜಾಗ ಇಲ್ಲ’. ಒಮ್ಮೆ ಯೋಚಿಸಿ; ಇಂಥ ಸಮಯಕ್ಕೆ ಈ ನಾಟಕ, ಇಂಥಲ್ಲಿ ಪ್ರದರ್ಶನ ನಿಶ್ಚಯ ಮಾಡಿಕೊಂಡರೆ ಯೋಧರಂತೆ ಕೆಲಸ ಮಾಡಿ, ಅದು ಅರಳಿಕಟ್ಟೆಯ ಜಗಲಿಯೋ, ಶಾಲಾ-ಕಾಲೇಜಿನ ಕ್ಲಾಸ್ ರೂಂಗಳೋ, ಟೆರೇಸ್ ಮೇಲೋ, ತೋಟದಲ್ಲೋ, ಪಾರ್ಕ್‌ನಲ್ಲೋ, ಎಲ್ಲೆಂದರಲ್ಲಿ ತಾಲೀಮಿಗೆ ಜಾಗ ಮಾಡಿಕೊಂಡು ಕೆಲಸ ಆರಂಭಿಸಿಬಿಟ್ಟಿರುತ್ತೇವೆ ಈಗ ಹುಡುಕಲಿಕ್ಕೆ ಮನಸ್ಸಾಗುತ್ತಿಲ್ಲ ಅಷ್ಟೆ. ಸಮಯದ ಅಭಾವವೆಂಬುದಿರುವುದಿಲ್ಲ, ಎಲ್ಲವೂ ‘ಸುಲಭವಾಗಿ ದಕ್ಕಿ ಬಿಡಲೆಂಬ’ ಮತ್ತು ‘ಬೇಗನೇ ಸಿಕ್ಕಿಬಿಡಲೆಂಬ’ ವ್ಯಾದಿಗೆ ಬಲಿಯಾಗಿದೆ ನಮ್ಮ ಹವ್ಯಾಸಿ ರಂಗಬೂಮಿ.
ನಟ-ನಟಿಯರಿಗೆ ಬದ್ಧತೆ ಇಲ್ಲ ಎಂಬೊಂದು ಮಾತು ಎಲ್ಲ ಕಡೆ ಇದೆ. ನಿಜವಾದರೂ ಅದು ಅರ್ದ ಸತ್ಯ! ಕಲಾವಿದರಾಗಲು ಬಂದ ಹೊಸ ತಲೆಮಾರಿಗೆ ಒಳಿತನ್ನು ಬೋಧಿಸುವ ಪರಿ ಸರಿಯಾಗಿಲ್ಲವೆಂಬುದು ನನ್ನ ಗುಮಾನಿ. ಹವ್ಯಾಸಿರಂಗಭೂಮಿ ‘ವಿಲಾಸ’ಕ್ಕೆ ಮಾತ್ರ ಮೀಸಲಿದ್ದ ಯುಗದಿಂದ ವಸ್ತು, ತಂತ್ರ, ಶೈಲಿ, ಹೊಸ ಆಲೋಚನಾ ಕ್ರಮ ಆರಂಭವಾಗಿದ್ದು ಎಲ್ಲಕ್ಕೂ ಶಿಸ್ತು ಬಂದಿದ್ದು ಕರ್ನಾಟಕದಲ್ಲಿ ರಾಷ್ಟ್ರೀಯ ನಾಟಕ ಶಾಲೆಯ ಕೆಲ ಪದವೀದರರು ನಡೆಸಿದ ಶಿಬಿರದ ಪಲ, ಅವರ ಶಿಬಿರ-ನಾಟಕಗಳಿಂದ ರಂಗಶಿಕ್ಷಣದ ಪರಿಗಳಿಂದ ಆದ ಪ್ರಭಾವ ಎಂದು ನಿಸ್ಸಂದೇಹವಾಗಿ ಗುರುತಿಸಿಕೊಳ್ಳಬಹುದಾಗಿದೆ. ಅದನ್ನು ದಟ್ಟವಾಗಿ ಮುಂದುವರಿಸಿದ್ದು ನೀನಾಸಮ್ ಸದ್ದಿಲ್ಲದೇ ರಂಗಕ್ಕೆ ಮದ್ದು ಕೊಟ್ಟಿತು. ‘ಸಮುದಾಯ’ದ ಜಾಥಾ ಪ್ರಗತಿಪರ ಚಿಂತನೆಗಳೊಂದಿಗೆ ಇತಿಹಾಸ ನಿರ್ಮಿಸಿದರೇ ಈಚಿನ ರಂಗಾಯಣ, ಶಿವಸಂಚಾರ, ಜಮುರಾ, ಜನಮನದಾಟ, ಮರುತಿರುಗಾಟ ಇತ್ಯಾದಿಗಳು ಆದುನಿಕ ವೃತ್ತಿ ತಂಡಗಳಾಗಿ ಕೆಲಸ ನಿರ್ವಹಿಸುತ್ತಿದ್ದರೂ ಹವ್ಯಾಸಿಗಳು ತಮ್ಮ ಅಭಿರುಚಿ, ಧೋರಣೆ, ತಾಲೀಮು ಎಲ್ಲದರಲ್ಲೂ ಶಿಸ್ತನ್ನು ಮತ್ತು ವಿನ್ಯಾಸವನ್ನು ರೂಢಿಸಿಕೊಳ್ಳುವಲ್ಲಿ ಪ್ರಭಾವ ಬೀರಿದೆ.
ಎಪ್ಪತ್ತರ ದಶಕದಲ್ಲಿ ರವೀಂದ್ರ ಕಲಾಕ್ಷೇತ್ರದ ಬಯಲುರಂಗದಲ್ಲಿ ಮೂಡಿದ ಬಿರುಗಾಳಿ ಹೊಸ ಕರ್ನಾಟಕದ ರಂಗ ದಿಕ್ಕನ್ನು ತೋರಿದ ಸಮರ್ಥ ಚಳುವಳಿಯಾದರೆ ಅಲ್ಲಿಂದ ಮೊದಲುಗೊಂಡು ಬೆಂಗಳೂರಿನ ಅಸಂಖ್ಯ ತಂಡಗಳು, ಮೈಸೂರು, ಹೆಗ್ಗೋಡು, ನಾಗಮಂಗಲ, ಮಂಡ್ಯ, ಉಡುಪಿ, ಮಂಗಳೂರು, ಧಾರವಾಡ, ಶಿವಮೊಗ್ಗ, ಸಾಗರ, ರಾಯಚೂರು, ಗುಲ್ಬರ್ಗಾ, ಬೆಳಗಾಂ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಆದುನಿಕ ಪ್ರಙ್ಞೆಯ ನಾಟಕಗಳು ಪ್ರದರ್ಶನಗೊಂಡು ಸಹಸ್ರಾರು ಪ್ರೇಕ್ಷಕವರ್ಗ ಸೃಷ್ಟಿಯಾಗಿದ್ದು ಹೌದು. ನಂತರದ ದಿನಗಳಲ್ಲಿ ಕಾಲಕ್ಕೆ ತಕ್ಕಂತೆ ಶೈಲಿಗಳೂ ಬದಲಾಗಿ ‘ತಿರುಗಾಟ’ ನಾಡಿನಿಡೀ ತಿರುಗಾಡಿ ಹವ್ಯಾಸಿಗಳಿಗೆ ಮಾದರಿಯೂ ಆಯಿತು.
ಇವತ್ತು ಹವ್ಯಾಸಿ ನಾಟಕಗಳಿಗೆ ಜನ ಬರೋದಿಲ್ಲ ಎಂಬ ಮತ್ತೊಂದು ಕೂಗಿದೆ. ‘ವೃತ್ತಿಪರತೆ’ ಇರುವ ಹವ್ಯಾಸಿ ತಂಡಗಳು ಒಳ್ಳೇ ನಾಟಕಗಳನ್ನು ನೀಡಿ, ಒಳ್ಳೇ ಪ್ರಚಾರವನ್ನೂ ನೀಡಿದರೆ ಖಂಡಿತ ಜನ ಬರುತ್ತಾರೆನ್ನುವುದು ನನ್ನ ಅಚಲವಾದ ನಂಬಿಕೆ. ನಮ್ಮ ‘ನಟನ’ದ ಪ್ರಯೋಗಗಳಲ್ಲಿ ಇದು ಸಾಬೀತಾಗಿದೆ. ಕನ್ನಡದ ಅನೇಕ ತಂಡಗಳೂ ಸಾಧಿಸಿರುವುದನ್ನು ಸ್ವತಃ ಕಂಡಿದ್ದೇನೆ.
ಕನ್ನಡ ಹವ್ಯಾಸಿ ರಂಗಭೂಮಿಯ ಅತ್ಯಂತ ತುರ್ತಿನ ಕೆಲಸ; ಹವ್ಯಾಸಿಗಳಿಗೆ, ಹೊಸತಲೆಮಾರಿಗೆ, ವೃತ್ತಿಪರವಾಗಿ, ಅಖಂಡ ರಂಗಬೂಮಿಯ (Total Theatre) ಮಹತ್ವವನ್ನೂ ಅರುಹಲೇ ಬೇಕಿದೆ. ನಟ-ನಟಿಯರಷ್ಟೆ ಮುಖ್ಯವಾಗಿ ನೇಪಥ್ಯದ ಮಹತ್ವವನ್ನು ತಿಳಿಸಿ ಒಟ್ಟೂ ರಂಗಭೂಮಿಯಿಂದ ಸಿಗುವ ಸಂತೋಷ ಹಾಗೂ ಅದರ ‘ಸರಳತೆಯೇ ಸೌಂದರ್ಯ, ಅದು ಬದುಕಿಗೂ ಬೇಕಿದೆ’ ಎಂದು ಮನಗಾಣಸಬೇಕಿದೆ.
ಮಂಡ್ಯ ರಮೇಶ್ ಕಾಲಂ : ಹಾರೋಣ ಬಾ
ನಿಮಗೆ ಇವೂ ಇಷ್ಟವಾಗಬಹುದು…

0 Comments