ನಾಟಕ ಓದಿಸಿದ್ದು ಅಂದಕೂಡ್ಲೆ ನೆನಪಾಯ್ತು! ಪ್ರತೀ ವಾರಕ್ಕೊಮ್ಮೆ ಒಬ್ಬೊಬ್ಬರು ನಾಟಕ ಓದುವುದು. ಒಂದು ನಾಟಕ ಓದುವುದು, ಆಮೇಲೆ ಅದರ ಬಗ್ಗೆ ಚರ್ಚೆ ಮಾಡುವುದು. ಈ ಕ್ಲಾಸ್ನಲ್ಲಿ ತುಂಬಾ ಒಳ್ಳೊಳ್ಳೆ ನಾಟಕಗಳ ರೀಡಿಂಗ್ ಆಯ್ತು.
ಬೆಕೆಟ್ನ ಗಾಡೋ, ಚಂಪಾರ ಅಪ್ಪ, ಗಿಳಿಯು ಪಂಜರದೊಳಿಲ್ಲ (ಲಂಕೇಶ್)… ಹೀಗೆ ಕೆಲವನ್ನು ನಾವು ಓದಿದರೇ., ನಟರಾಜ್ ತದ್ರೂಪಿ ಓದಿ, ಕಾರಂತರು ಷಹಜಹಾನ್, ಏವಂ ಇಂದ್ರಜಿತ್ ಒದಿಹೇಳಿದ್ದರು. ನಮ್ಮ ಶಿಕ್ಷಕ ವರ್ಗದವರು ಓದಿದ ಎಷ್ಟೊಂದು ನಾಟಕಗಳಲ್ಲಿ ಹಿಂದಿಯ ಬಾಕಿ ಇತಿಹಾಸ್ ನಾಟಕ ನನ್ನನ್ನು ಗಾಢವಾಗಿ ತಟ್ಟಿಬಿಟ್ಟಿತ್ತು.
ನಾಟಕಗಳ ನಂತರ ಚರ್ಚೆ ನಡೆದು…. ಛೇ! ಚರ್ಚೆ ಅಂದಕೂಡ್ಲೆ ಇನ್ನೊಂದು ಮನಸ್ಸಿಗೆ ಬಂತು. ಪ್ರತೀ ಸೋಮವಾರ ನಮ್ಮ ಹಾಸ್ಟೆಲ್ಲಿನಲ್ಲಿ ಮೈಸೂರಿನ ಅತಿಥಿ ವಿದ್ವಾಂಸರೊಬ್ಬರನ್ನು ಕರೆದು ಒಂದು ವಿಷಯ ಕೊಟ್ಟು… ನಮ್ಮ ಹುಡುಗರಲ್ಲಿ ಇಬ್ಬರು ಮೊದಲು ಮಾತನಾಡಿದ ಮೇಲೆ ಚರ್ಚೆಯಾಗುತ್ತಿತ್ತು. ಚರ್ಚೆ ಜಗಳದ ಮಟ್ಟಿಗೆ ಹೋಗುತ್ತಿದ್ದಾಗ, ಅತಿಥಿ ವಿದ್ವಾಂಸರು ತಡೆದು ಅವರು ನಾಲ್ಕು ಮಾತುಗಳಲ್ಲಿ ವಿಷಯ ಮಂಡಿಸಿ, ಸಭೆ ಮುಗಿಸುತ್ತಿದ್ದರು.
ಆ ರಾತ್ರಿ ನಮ್ಮೊಂದಿಗೆ ಊಟ ಮಾಡಿ ಅವರು ತೆರಳಿದ ಮೇಲೂ ರಾತ್ರಿಯೆಲ್ಲಾ ನಮ್ಮ ರೂಮುಗಳಲ್ಲಿ ಚರ್ಚೆ ಬೆಳೆಯುತ್ತಲೇ ಇರುತ್ತಿತ್ತು. ನಟ ವಿಚಾರವಂತ ಮತ್ತು ಒಳ್ಳೆ ಭಾಷಣಗಾರನೂ ಆಗಬೇಕೆಂಬ ಉದ್ದೇಶದಿಂದಷ್ಟೇ ಕಾರಂತರು ಈ ಕಾರ್ಯಕ್ರಮವನ್ನು ಯೋಜಿಸಿದ್ದರು.
ಜಿ.ಆರ್.ಲಕ್ಷಣರಾವ್ ವಿಜ್ಞಾನದ ಬಗ್ಗೆ, ಕಾಳೆಗೌಡರು ಜಾನಪದದ ಬಗ್ಗೆ…. ಶ್ರೀಮತಿ ಸರ್ವಮಂಗಳ, ವಿಶ್ವನಾಥ ಮಿರ್ಲೆ , ಕಿಕ್ಕೇರಿ ನಾರಾಯಣ ಎಲ್ಲರೂ ಮಾತನಾಡಿದ್ದನ್ನು ಹತ್ತಿರದಿಂದ ಕಂಡಿದ್ದು ನೆನಪಿದೆ.
ಒಮ್ಮೆ ಕ್ಲಾಸಿನಲ್ಲಿ ನ.ರತ್ನರೇ ಬಂದು ಅವರ ‘ಬೊಂತೆ’ ನಾಟಕ ಓದಿ ಚರ್ಚಿಸಿದ್ದರು. ಸಿ.ಆರ್.ಸಿಂಹ ಬಂದು ‘ತುಘಲಕ್’ನ ಆಸೆಗಳ ವಯಸ್ಸು…. ಸ್ವಗತ ಹೇಳಿ ತೋರಿಸಿದ್ದರು. ಇವೆರಡೂ ನನ್ನ ಮನಸ್ಸಿನಲ್ಲಿ ತುಂಬಾ ದಿನ ಉಳಿದುಬಿಟ್ಟವು. ‘ಸಂಸ’ರ ‘ಬಿರುದೆಂತೆಬರ ಗಂಡ’ ನಾಟಕವನ್ನು ಇಡಿಯಾಗಿ ಉರುಹಚ್ಚಿ ತೋರಿಸಬೇಕು, ಎಂಬುದೊಂದು ಟೆಸ್ಟ್ ಇತ್ತು!
ಆ ದಿನಗಳಲ್ಲಿ ಎಲ್ಲರ ನಾಟಕ ನೊಡಬೇಕು…. ಕೂತಲ್ಲಿ, ನಿಂತಲ್ಲಿ, ಮಾತನಾಡಿದರೆ, ನೋಡಿದರೆ ಎಲ್ಲೆಲ್ಲೂ ಅದೇ…. ಸಂಸಮಯವಾಗಿಬಿಟ್ಟಿತ್ತು. ರೂಂ ಮೇಟ್ಗಳು ರಾತ್ರಿ ಕನಸುಗಳಲ್ಲೂ ಮೈಸೂರು ರಾಜರೊಂದಿಗೆ ಸಂಭಾಷಿಸುತ್ತಾ, ಕನವರಿಸಿ, ಹಾಸಿಗೆಯಲ್ಲಿ, ನಿದ್ರೆಯಲ್ಲಿ ಉಧೋ ಹೇಳುತ್ತಿದ್ದುದ್ದನ್ನು ಕಣ್ಣಾರೆ ಕಂಡಿದ್ದೇನೆ.
ಒಂದು ಸುಂದರ ಮುಂಜಾನೆ ನಮ್ಮ ಕ್ಲಾಸಿಗೆ ಎಠಟಿ ಒಚಿಡಿಣಟಿ ಎಂಬ ಅಮೇರಿಕನ್ ಹಾಜರ್! ಮಾಟವಾದ ಅಗಲ ಮುಕ-ದೇಹ, ಉದ್ದ ಕೂದಲು, ಅಮೇರಿಕನ್ ನಗೆಯ ಈ ರಸಿಕ ತನ್ನ ತರಗತಿಗಳನ್ನು ಆರಂಭಿಸಿದ. ತಿಂಗಳಿಡೀ ಆತ ಮಾಡಿದ ತರಗತಿಯ ಅಭ್ಯಾಸಗಳು ಯಾವುದೇ ನಟನಿಗೂ ಅವಶ್ಯವೆನಿಸಿದ ಕಟು ವ್ರತ. ನಟ ಪ್ರತಿಕ್ಷಣವನ್ನು ರಂಗದಲ್ಲಿ ಕಳೆಯುವುದು, ತನ್ನ ಉಸಿರಾಟ ನಿಯಂತ್ರಣಗಳಿಂದ ಪಾತ್ರವೊಂದರ ಭಾವ ಬದಲಾವಣೆಗೆ, ಹೊಸ ಸೃಷ್ಠಿಗೆ ಉಸಿರಾಟ ಎಷ್ಟು ಮುಖ್ಯವೆನ್ನುವುದು ತಿಳಿದದ್ದೇ ಇತನಿಂದ.
ವಜ್ರಸ್ಥಾನ, ನಟ ಪಾತ್ರದ ಚಲನದಲ್ಲಿ ದೇಹವನ್ನು ಕೇಂದ್ರಗೊಳಿಸಿಕೊಳ್ಳಬೇಕಾದ ರೀತಿ…. ಎಲ್ಲೂ ಆಯತಪ್ಪದ ಸ್ಥಿರತೆ, ಚಟುವಟಿಕೆತನ ಇವನೆಲ್ಲಾ ಕಾಯ್ದುಕೊಳ್ಳಲು ಆತ ಮಾಡಿಸಿದ ಅಭ್ಯಾಸಗಳು ದೇಹಕ್ಕೆ, ಮನಸ್ಸಿಗೆ ಶಕ್ತಿ, ವಿಶ್ವಾಸವನ್ನು ತಂದುಕೊಟ್ಟವು. ಧ್ವನಿಯ ಎಲ್ಲಾ ಸಾಧ್ಯಗಳಿಗೆ ಅನುವಾಗುವ ಅಭ್ಯಾಸ, ದೇಹದ ಸಂಕುಚನ, ವಿಕಸನಗಳಿಂದ ಪಾತ್ರಕಟ್ಟುವ ಬಗೆ, ಎಲ್ಲವನ್ನೂ ತೋರಿಸಿಕೊಟ್ಟ. ಅಶುವಿಸ್ತರಣೆಯ ಹೊಸ ಅರ್ಥ ತಿಳಿದದ್ದೇ ಜಾನ್ ಮಾರ್ಟಿನ್ನಿಂದ. ವ್ಯಕ್ತಿ-ವ್ಯಕ್ತಿಗೆ, ವಸ್ತು-ವಸ್ತುವಿಗೆ, ವ್ಯಕ್ತಿ ಪರಿಸರಕ್ಕೆ, ವ್ಯಕ್ತಿ-ಸಮೂಹಕ್ಕೆ…. ಅಶು ವಿಸ್ತರಿಸುತ್ತಾ ಸನ್ನಿವೇಶ ಕಟ್ಟುತ್ತಾ ಹೋಗುವುದು ತುಂಬಾ ಮಜಾ ಮತ್ತು ವಿಶಿಷ್ಟವಾದ ಸಂಗತಿ….
(…. ಮುಂದುವರೆಯುವುದು)
ಮಂಡ್ಯ ರಮೇಶ್ ಕಾಲಂ : ನಾಟಕ, ನಾಟಕ ಮತ್ತು ನಾಟಕ
ನಿಮಗೆ ಇವೂ ಇಷ್ಟವಾಗಬಹುದು…

0 Comments
Trackbacks/Pingbacks