ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಡ್ಯ ರಮೇಶ್ ಕಾಲಂ : ಗ್ರೀಕ್ ನಾಟಕದಲ್ಲಿ ನಾವು!

(ಇಲ್ಲಿಯವರೆಗೆ…)

ಪ್ರದರ್ಶನ ನೋಡಿದ ಸುಬ್ಬಣ್ಣ, ಡಿ.ಆರ್.ನಾಗರಾಜ್, ಮರುಳಸಿದ್ಧಪ್ಪ, ಕಿ.ರಂ. ಎಲ್ಲರೂ ಕವನದ ಪ್ರಬಂಧ ಧ್ವನಿ ಸ್ಪಷ್ಟವಾಗದಿದ್ದರೂ ತುಂಬಾ ಒಳ್ಳೆ ಎಕ್ಸರ್ಸೈಜ್ ಇದು…. ಒಳ್ಳೆ ಸಾಧ್ಯತೆ ಇದು ಎಂದರು. ಈ ನಾಟಕ ಮ್ಯಾಟ್ನೀ ಪ್ರದರ್ಶನಗಳನ್ನೂ ಸಹ ಕಂಡಿತು. ಒಂದೆರಡು ಪ್ರೇಕ್ಷಕರಿದ್ದರೂ ಕೂಡ ಅಷ್ಟೇ ನಿಷ್ಠೆಯಿಂದ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದೆವು.
ನಮ್ಮ ರಂಗಾಯಣದ ಪರ್ಮನೆಂಟ್ ಪ್ರೇಕ್ಷಕರಾರು ಗೊತ್ತೆ? ಅತ್ಯಂತ ಮೃದು ನಡುವಳಿಕೆಯ ಶ್ರೀ ಜಿ.ಹೆಚ್.ನಾಯಕರು. ಮೊದಲ ವರ್ಷದಲ್ಲಿ ಇವರು ವಾರೆಕ್ಕೆರಡು ದಿನ ತೆಗೆದುಕೊಳ್ಳುತ್ತಿದ್ದ ಕನ್ನಡ ಸಾಹಿತ್ಯ ಪರಂಪರೆಯ ತರಗತಿಗಳು ನನಗೆ ಎಷ್ಟು ಉಪಯುಕ್ತವಾದವೆಂದರೆ, ಪರಂಪರೆಯ ಪ್ರಜ್ಞೆ ಇಲ್ಲದೇ ಸಾಹಿತ್ಯವನ್ನು ಗೊಬ್ಬರದಂತೆ ಬೆಳೆಸುತ್ತಾ ಹೋಗುವುದು ಎಷ್ಟು ಅನಾಹುತ ಎಂದು ನಿಧಾನವಾಗಿ ಅರ್ಥವಾಗತೊಡಗಿತು. ಪಂಪ, ಕುಮಾರವ್ಯಾಸರಾಗಲೀ, ರನ್ನ, ಜನ್ನರಾಗಲೀ, ಬೇಂದ್ರ, ಮಾಸ್ತಿ, ಶಿವಪ್ರಕಾಶ್, ವೈದೇಹಿವರೆಗೂ ಸಾಹಿತ್ಯದ ಬಗೆಬಗೆಯ ಮುಖಗಳನ್ನು ಮಕ್ಕಳ ಮುಂದೆ ತಿಂಡಿ ಇಟ್ಟಂತೆ ಇಟ್ಟು ನಮಗೆ ಉಣಿಸಿದ್ದಾರೆ ನಮ್ಮ ಉತ್ಸಾಹ ಕಂಡು ಎಂ.ಎ ಕಲಿಯಲು ಬರುವ ಎಷ್ಟೋ ಜಳ್ಳುಗಳಿಂತ ನೀವು ವಾಸಿ ಅಂದಾಗ ನಮ್ಮ ಬೆನ್ನನ್ನು ನಾವೇ ತಟ್ಟಿಕೊಂಡಿದ್ದೇವೆ.
ನಾವು ಹಿಪೋಲಿಟಸ್ ನಾಟಕ ಆಡಿದ್ದು ಹೇಳ್ತೇನೆ. ಗ್ರೀಕ್ ಅಂದೊಡನೆ, ಈಡಿಪಸ್, ಅಂತಿಗೊನೆ ಅಥವಾ ಅರಿಸ್ಟೊಪೆನಿಸ್ನ ನಾಲ್ಕಾರು ನಾಟಕ ಅವನ್ನೇ ಕೇಳಿ ಗೊತ್ತಿತ್ತು. ಈ ನಾಟಕವನ್ನು ನಮ್ಮಲ್ಲೇ ಅನೇಕರು ಹಿಪೋಪೊಟಮಸ್ ಅಂತ ಹೇಳುತ್ತಿದ್ದುದನ್ನು ಕೇಳಿದ್ದೇನೆ.! ಯೂರಿಪಿಡಸ್ನ ಹಿಪ್ಪೋಲಿಟಸ್ ನಾಟಕ ಬ್ರಹ್ಮಚರ್ಯೆ ಮತ್ತು ನಾಟಕ ನಡುವಿನ ಸಂಘರ್ಷ, ಮನುಷ್ಯ ಸಂಬಂಧದ ಆಳ-ಅರಿವು-ತೀವ್ರತೆಯನ್ನು ಗಾಢವಾಗಿ ಹೇಳುತ್ತದೆ. ನಮ್ಮ ಶಿಕ್ಷಕರಾದ ರಘುನಂದನ್ರೇ ಜೊತೆಗಿದ್ದು, ಅನುವಾದಿಸಿದ್ದನ್ನು ಗ್ರೀಸ್ನಿಂದ ಬಂದ ನಿರ್ದೇಶಕ ತಂಡ ನಮ್ಮನ್ನು ಓರೆಗೆ ಹಚ್ಚಿತು.
ನಿರ್ದೇಶಕ ಸಣ್ಣ ವಯಸ್ಸಿನ ವ್ಯಾಸಿಲಿ ಎಂಬಾತ. ಶಿಸ್ತು-ಬದ್ಧತೆ ಅವನ ಇನ್ನೊಂದು ಹೆಸರು. ಮುಂಜಾವಿನಿಂದ ಮಧ್ಯರಾತ್ರಿಯವರೆಗೆ ವನರಂಗದಲ್ಲಿ ಸಿಗರೇಟನ್ನು ಸತತವಾಗಿ ಸುಡುತ್ತಾ ಗಂಭೀರವಾಗಿ ನಮ್ಮ ನಟ ನಟಿಯರಿಗೆ ಬೆಂಡೆತ್ತುತ್ತಿದ್ದನ್ನು ಕಂಡು ವಿಸ್ಮಿತನಾದೆ. ಮೊನಚು ಮಾತು, ತನ್ಮಯತೆಗಳಿಂದ ತನಗೆ ಬೇಕಾದ್ದನ್ನು ನಟರಿಂದ ಪಡೆದ. ಮೂರು ಘಂಟೆಗಳು ರಂಗದಲ್ಲಿ ಸತತ ನಿಲ್ಲುವುದು. ಭಾವ ಪ್ರವಾಹವನ್ನು ನಿಮಿಷಗಟ್ಟಲೆ ಕಾಯ್ದಿಡುವುದು.. ಈತನಿಂದ ಕಲಿತ ಪಾಠಗಳು. ಸ್ವಭಾವದಲ್ಲಿ ಈತನ ತದ್ವಿರುದ್ಧ ಜೊತೆಗಿದ್ದ ಸಂಗೀತ ನಿರ್ದೇಶಕ ಫಿಲಿಪ್. ಎಲ್ಲರನ್ನೂ ತನ್ನ ನಗು-ತಮಾಷೆಗಳಿಂದ ಸೆಳೆಯುತ್ತಿದ್ದರೂ ಶೃತಿ ತಪ್ಪಿ ಹಾಡಿದರೇ ಕೆರಳಿ ಕೆಂಡವಾಗಿ ಛಳಿ ಬಿಡಿಸುತ್ತಿದ್ದ. ಹಾಡಲು ಹಿಂಜರಿಯುತ್ತಿದ್ದ ಎಷ್ಟೊಂದು ಗೆಳೆಯರಿಗೆ ಹಾಡಲು ಧೈರ್ಯ ಬಂದಿದ್ದು, ಗ್ರೀಕ್ ನಾಟಕದ ಹಾಡುಗಳಲ್ಲಿ ಭಾಗವಹಿಸಿ, ಪರಿಶ್ರಮ ಪಟ್ಟಿದ್ದರಿಂದ ಎನ್ನುವುದು ನಂತರ ಎಲ್ಲರಿಗೂ ಗೊತ್ತಾಗಿದೆ.

ಅವರೊಂದಿಗೆ ಕ್ರಿಸ್ಟೊಫರ್ ಕಿಕಿಸ್ ಎಂಬ ಅಮೇರಿಕನ್ ಚಾಲಾಕಿಯೂ ಇದ್ದ. ನಾಟಕವನ್ನು ಎರಡೂ ದಿನ ವಿಡಿಯೋ ಶೂಟ್ ಮಾಡಿದ ಆ ಶ್ರಮ ನೆನೆದರೆ ಈಗಲೂ ಭಯವಾಗುತ್ತದೆ! ಎರಡನೇ ದಿನ ಶೂಟಿಂಗ್ ಮುಗಿದಾಗ ಬೆಳಿಗ್ಗೆ 6 ಗಂಟೆ 15 ನಿಮಿಷ.!! ಕೆಲ ದೃಶ್ಯಗಳನ್ನು ಸಂಯೋಜಿಸುವಾಗ ಅತಿ ನಿಜವಾಗಿ ರಿಸ್ಕ್ ತೆಗೆದುಕೊಂಡಿದ್ದ. ನಮ್ಮವರಿಗೂ ಕೈ ಭರ್ತಿ ಕೆಲಸ. ಸೌಂದರ್ಯ ದೇವತೆ ಅಪ್ರೋದಿತೆ ನಾಟಕದ ಆರಂಭಕ್ಕೆ ಧಗ್ಗನೆ ಹೊತ್ತಿಕೊಂಡ ಬೆಂಕಿಯ ನಡುವೆ ಉದ್ದಕ್ಕೆ ನೆಡೆದು ಬರುತ್ತಾಳೆ. ಹಾಗೆಯೇ ಹಿಪೋಲಿಟಸ್ ಕೊನೆಯಲ್ಲಿ ಕುದುರೆಗಳೊಂದಿಗೆ ಸ್ವರ್ಗಕ್ಕೆ ಏರಿ ದೂರ ಸಾಗುತ್ತಾನೆ. ಈ ಎರಡೂ ದೃಶ್ಯಗಳೂ ದೂರದ ಕಲ್ಪನೆ ಮತ್ತು ನೆರಳು ಬೆಳಕಿನ ಒಳ್ಳೆಯ ಅನುಭವವೇ ಆಗಿತ್ತು. ವಿಶೇಷವಾಗಿ ಹಿಪ್ಪೊಲಿಟಸ್ ಗೆಳೆಯರೊಂದಿಗೆ ದೂರದ ಅರಣ್ಯದ ಹಾದಿಯಲ್ಲಿ ಸುತ್ತಿಸುತ್ತಾ, ಬೇಟೆಯಿಂದ ವಾಪಾಸ್ಸಾಗಿ ಅರಮನೆಗೆ ಬರುವ ದೃಶ್ಯ ಅದ್ಭುತವಾಗಿತ್ತು. ಸಂಗೀತದ ಪರಿಣಾಮಗಳು, ಹಾಕಿದ್ದ ಟ್ಯೂನ್… ಎಲ್ಲವೂ ತುಂಬಾದಿನ ನಮ್ಮ ತಲೆಯಲ್ಲಿ ಉಳಿದಿತ್ತು. ಗ್ರೀಕ್ ಭಾಷೆಯದ್ದೇ ಹಾಡುಗಳು… ಆ ವ್ಯಾಸಲಿಯ ಹೆಂಡತಿ ಅಲೆಗ್ಸಾಂಡ್ರಿಯಾ ಎಂಬ ಹಾಲಿವುಡ್ ನಟಿ-ನಮ್ಮೊಡನೆ ಒಂದು ಪಾತ್ರವನ್ನೂ ಮಾಡಿದ್ದಳು.! ಈ ಗ್ರೀಸ್ ತಂಡ ವಾಪಾಸ್ಸಾದ ಮೇಲೆ ಪ್ರತೀ ವಾರವೂ ಪಾತ್ರ ಬದಲಾವಣೆ ಮಾಡಿ (ಎಲ್ಲರಿಗೂ ಅವಕಾಶ ಒದಗಿಸಲೋಸುಗ) ಹಿಪ್ಪೋಲಿಟಸ್ ಪ್ರದರ್ಶಿಸಲಾಯಿತು. ಅಭಿನಯ ತರಬೇತಿಯ ದೃಷ್ಟಿಯಿಂದ ಈ ಬದಲಾವಣೆಗಳು ಮುಖ್ಯ ಮಜುಲು. ನಾನೂ ಒಮ್ಮೆ ಹಿಪೋಲಿಟಸ್ ಪಾತ್ರ ಮಾಡಿ ಗಂಟಲು ಕಟ್ಟಿಕೊಂಡು ಒದ್ದಾಡಿದ್ದು., ಹೋರಾಟ ನಡೆಸಿದ್ದು.. ಎಲ್ಲವೂ ನೆನಪಿದೆ.
ಹತ್ತಿರದ ಹಳ್ಳಿಗೆ ರಥೋತ್ಸವಕ್ಕೆ ಹೋಗುವ ಕಾರ್ಯಕ್ರಮ ನಮ್ಮ ಜಿಲ್ಲೆಯ ಅಕ್ಕಿಹೆಬ್ಬಾಳಿಗೆ ಹೋಗಿದ್ದೆವು. (ಎ.ಎನ್.ಮೂರ್ತಿಯವರ ಊರು) ಎಲ್ಲಾ ಹುಡುಗರು ಜನಿವಾರ ತೊಟ್ಟು ದೇವರನ್ನು ಹೊತ್ತಿದ್ದು. ಓಕುಳಿ ಎರಚಾಡಿ, ಮೈಮೇಲೆ ಬರೆ ಬರಿಸಿಕೊಂಡಿದ್ದು…. ಈಜು ಬಾರದವರು ನದಿಯಲ್ಲಿ ಮುಳುಗಿ ಬೆಬೆಬೆ ಅಂದಿದ್ದು., ಎಲ್ಲಾ ಖುಷಿಪಟ್ಟ ಸಂಗತಿಗಳು…! ನಾವು ಯಾವುದಾದರೂ ಸ್ಥಳಕ್ಕೆ ಹೋದರೆ ಆ ಊರ ಜನರ ಚಲನವಲನಗಳನ್ನು ಗಮನಿಸುತ್ತಿದ್ದರೂ, ಆ ಮಂದಿಯೊಂದಿಗೆ ಎಲ್ಲರೂ ಬೆರೆತು, ಊರಿನವರೇ ಆಗಿ ಬಿಡುತ್ತಿದ್ದೆವು. ಹಬ್ಬ ಹರಿದಿನ, ಶಾಸ್ತ್ರ-ಸಂಪ್ರದಾಯದ ಸ್ಥಿತಿಗಳಲ್ಲಿ ಊರ ಜನ, ಹೆಂಗಸರು, ಮಕ್ಕಳು, ಮುದುಕ, ಬೇರೆ ಬೇರೆ ವರ್ಗದ ಜನರ ನಡವಳಿಕೆ ಗಮನಿಸುವುದು ಹೆಚ್ಚು ಕುತೂಹಲಕಾರಿ, ಪಾಲ್ಗೊಳ್ಳುವುದು ಹಿತವಾದ ಅನುಭವ.
(…… ಮುಂದುವರೆಯುವುದು)
 
 

‍ಲೇಖಕರು avadhi

29 July, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading