ಮಂಡ್ಯ ರಮೇಶ್ ಕಾಲಂ: ನಾನೇಕೆ ಮಕ್ಕಳ ರಂಗಭೂಮಿಯಲ್ಲಿ ತೊಡಗಿಕೊಳ್ತೇನೆ?

ಮಕ್ಕಳ ರಂಗಭೂಮಿ ಒಂದು ನೋಟ

ಆಡಿ ಬಾ ನನ ಕಂದಾ,
ಅಂಗಾಲ ತೊಳೆದೇನು,
ತೆಂಗಿನ ಕಾಯಿ ತಿಳಿನೀರ ತಕ್ಕೊಂಡು
ಬಂಗಾರ ಮೋರೆ ತೊಳೆದೇನು.
– ಜನಪದ ಕಾವ್ಯ.
ಆಡಿ ಬಂದ ಕಂದನಿಗೆ ಅಂಗಾಲು ತೊಳೆಯಲು ಕೆಸರಿನ ಕೆಮ್ಮಣ್ಣಲ್ಲ, ತೆಂಗಿನಕಾಯಿ ತಿಳಿನೀರ ಕೇಳುವವರಿಲ್ಲದೆ ಸೊರಗಿದೆ. ಬಂಗಾರ ಮೋರೆ ತೊಳೆಯಲು ಅಮ್ಮನಿಲ್ಲ. ಕ್ಲಬ್ಬಿಗೆ ಹೋಗಿದ್ದಾಳೆ, ಬಿಟ್ಟು ಹೋದ ಮಕ್ಕಳಿಗೆ ನಾಟಕ ಕಲಿಸಲು ನಾವಿದ್ದೇವೆ!
ಸ್ನೇಹಿತ್ರೇ
ನಾನೇಕೆ ಮಕ್ಕಳ ರಂಗಭೂಮಿಯಲ್ಲಿ ತೊಡಗಿಕೊಳ್ತೇನೆ ಅಂತಾ ಮೊದಲು ಹೇಳ್ತೇನೆ; ಮಕ್ಕಳೊಂದಿಗೆ ಆಟ ಆಡ್ತಾ ನಾನೂ ಒಂದಷ್ಟು ಹೊತ್ತು ಮಗುವಾಗಿ ಬಿಡೋ ಸಡಗರ, ಮತ್ತೆಲ್ಲೂ ಕಾಣದಷ್ಟು ನನಗೆ ಸಿಗೋ ಮಕ್ಕಳ ಕಲ್ಪನೆಯ ಲೋಕದ ಪರಿಚಯ, ವಿಹಾರಗಳಿಂದ ಸಿಗೋ ವಿಸ್ಮಯ ಮತ್ತು ದೀರ್ಘಕಾಲ ಅಂದ್ರೇ ಹಲ ವರುಷಗಳಷ್ಟು ಅವರನ್ನು ರಂಗಭೂಮಿಯಲ್ಲಿ ಉಳಿಯಲು ಪ್ರೇರೇಪಿಸಬಹುದೆಂಬ ಹಂಬಲ ಯುವಕ-ಯುವತಿಯರಾದ್ರೇ ಎರಡನೇ ಪ್ರದರ್ಶನ ಹೊತ್ತಿಗೆ – ಟಿ.ವಿ.ಗೆ ಪಲಾಯನ, ಕಟ್ಟಿಹಾಕೋದು ಕಷ್ಟ. ಮದ್ಯವಯಸ್ಕರಾದ್ರೆ ಕುಟುಂಬ ತಾಪತ್ರಯಗಳು ಜಾಸ್ತಿ! ವಯಸ್ಸಾದವರು ವಯಸ್ಸಿದ್ದಾಗ ಆಡಿದ ನಾಟಕಗಳ ಬಗ್ಗೆ ಹೇಳುತ್ತಾ ಮುಂದಕ್ಕೆ ಹೋಗಲ್ಲ ಅಂತಾರೆ ಹಠ ಬೇರೆ! ಹೀಗಾಗಿ ಬಾಲ್ಯದಲ್ಲಿ ಬಂದವರು ರಂಗಭೂಮಿಗೆ ಅನೇಕ ವರ್ಷಗಳಾದರೂ ಉಳೀಬಲ್ಲರು ಅಂತಾ ಅನ್ನಿಸಿರೋದ್ರಿಂದ ಮಕ್ಕಳ ನಾಟಕ ಮಾಡಿಸ್ಲಿಕ್ಕೆ ಹೊರಡ್ತೇನೆ.
ಮಕ್ಕಳ ನಾಟಕದ ತಾಲೀಮು, ಪ್ರದರ್ಶನ, ಪ್ರವಾಸ, ಪ್ರತಿಕ್ರಿಯೆ, ಪರಿಣಾಮದ ಕುರಿತು ಬೇಕಾದಷ್ಟು ಮಾತನಾಡಬಹುದಾದರೂ – ನನಗೆ ವಿದ್ವತ್ಪೂರ್ಣವಾಗಿ ಮಂಡಿಸಲು ಬರುವುದಿಲ್ಲವಾದ್ದರಿಂದ – ನನ್ನ ಕೆಲ ಅನುಭವಗಳನ್ನು ಮಾತ್ರ ಹಂಚಿಕೊಳ್ಳುತ್ತೇನೆ. ಪೋಷಕರಾಗಲೀ, ಶಿಕ್ಷಕರಾಗಲೀ, ಸಹಪಾಠಿಗಳಾಗಲೀ ಸ್ವತಃ ಮಕ್ಕಳಿಗೇ, ತಾವಾಡುವ ನಾಟಕಗಳು ಹೇಗಿರಬೇಕೆಂದು ಗಂಭೀರವಾಗಿ ಚಿಂತಿಸಿದವರಲ್ಲ. ಬಹುತೇಕರು ‘ಸಂತೆ ಹೊತ್ತಿಗೆ ಮೂರು ಮೊಳ ನೇಯ್ದಂತೆ’ ನಾಟಕ ಆಡಿಸುವ ಆತುರ. ಇವತ್ತಿಗೂ ಶಾಲೆಗಳಲ್ಲಿ ಎಂತಹ ನಾಟಕ, ಯಾಕಾಗಿ ನಾಟಕ ಮಾಡಿಸಬೇಕೆಂದು ಆಧುನಿಕವಾಗಿ ಚಿಂತಿಸುವ ಕ್ರಮವೇನು ಇದ್ದಂತಿಲ್ಲ.
ಮಕ್ಕಳ ನಾಟಕಕ್ಕೆ ಆಕಾರ ಹೇಗಿರಬೇಕೆಂದು ವಿಚಾರ. ನನ್ನ ಪ್ರಕಾರ ಒಟ್ಟೂ ರಂಗಭೂಮಿ ಹೀಗಿರಬೇಕೆಂದು ಕಾನೂನು ನಿಯಮಗಳ ಪದ್ಧತಿಗಳೇನೂ ಇರದೇ ಇರುವುದರಿಂದ ಇನ್ನು ಮಕ್ಕಳ ನಾಟಕಗಳಿಗೆ ಆಕಾರವೇ ಇರಬೇಕೆಂದಿಲ್ಲ. ಅದು ನಿರಾಕಾರ, ನೀವು ಎಲ್ಲಿ, ಯಾವ ತಂಡಕ್ಕೆ, ಯಾವ ಬಗೆಯ ಪ್ರೇಕ್ಷಕರೆದುರು ನಾಟಕವನ್ನಾಡುತ್ತಿದ್ದೀರಿ, ನೀವು ಮಕ್ಕಳ ಮೂಲಕ ಮಕ್ಕಳಿಗೇನು ಹೇಳುತ್ತಿದ್ದೀರಿ ಅಥ್ವಾ ಮಕ್ಕಳ ಮೂಲಕ ಹಿರಿಯರಿಗೆ ಏನು ಹೇಳಬೇಕೆಂದಿದ್ದೀರಿ? ಅಥವಾ ನಾಟಕದ ಅಭ್ಯಾಸದ ನೆಪದಲ್ಲಿ ಮಕ್ಕಳಿಗೆ ನಾಟಕದ ಅರ್ಥವನ್ನು ತಂಡಕ್ಕೆ ಮನವರಿಕೆ ಮಾಡಿಕೊಡುತ್ತಿದ್ದೀರೋ ಅನ್ನುವುದೇ ಮುಖ್ಯವಾಗುತ್ತದೆ. ವಸ್ತು ಮತ್ತು ಪ್ರಸ್ತುತಿ ಬಗ್ಗೆ ಮಾತ್ರ ಯೋಚಿಸೋದು ನನ್ನ ಪದ್ಧತಿ. ವಸ್ತು ತುಂಬ ಸಂಕೀರ್ಣವಾದರೂ ಅದರ ಪ್ರಸ್ತುತಿ ಮಾತ್ರ ಸರಳವಾಗಿದ್ದರೇ ಹೆಚ್ಚು ಸೂಕ್ತ. ನನ್ನ ಮುಂದೆ ಎರಡು ಬಗೆಯ ಮಕ್ಕಳ ರಂಗ ನಿರ್ದೇಶಕರನ್ನು ಹೆಚ್ಚು ಕಂಡಿದ್ದೇನೆ;

1. ಅತ್ಯಂತ ಸಂಕೀರ್ಣ ವಸ್ತುವನ್ನು ಅದಕ್ಕಿಂತಲೂ ಸಂಕೀರ್ಣವಾಗಿ ಮಕ್ಕಳಿಗೆ ಅರ್ಥ ಆಗಲಿ ಬಿಡಲಿ ಅವರೆದುರು ಇಟ್ಟು, ಭಯ ಮೂಡಿಸಿ ಅತಿ ಗಾಂಭೀರ್ಯದ ಸೋಗಿನಲ್ಲಿ ಪ್ರೇಕ್ಷಕರನ್ನು ರಂಗಮಂದಿರದ ಕಡೆ ಪುನಃ ತಲೆ ಹಾಕದಂತೆ ಮಾಡುವುದು.
2. ಅತಿರೇಕವಾಗಿ, ತೀರಾ ಅಂದರೆ ತೀರಾ ಕ್ಷುಲ್ಲಕ ವಿಷಯಗಳನ್ನು, ಅಷ್ಟೇ ಬೇಜವಾಬ್ದಾರಿಯಿಂದ, ಮಕ್ಕಳನ್ನು  underestimate ಮಾಡಿ, ಮನರಂಜನೆ ಹೆಸರಿನಲ್ಲಿ ‘ಅಭಿರುಚಿರಹಿತ’ ನಾಟಕಗಳನ್ನು ಮಾಡಿಸುವ ಮಹಾನುಭಾವರು.
ಅತಿ ಅಥ್ವಾ ವೈಭವಾತಿರೇಕದ ದೃಶ್ಯಗಳು, ಆರ್ಭಟದ ಸಂಗೀತ, ಮ್ಯಾಜಿಕ್, ಲೈಟ್, ಮುಂತಾದವುಗಳಲ್ಲಿ ವಸ್ತುವಿನ ಸೂಕ್ಷ್ಮತೆ ಕಾಣದ ಹಾಗೆ ನಾಟಕ ಮಾಡಿಸೋದು.
ನಾನು ನನ್ನ ನಾಟಕಗಳ ಆಕಾರವನ್ನು ನಿರ್ಮಿಸುವಾಗ ಈ ಎರಡೂ ಬಗೆಯನ್ನು ಬಿಟ್ಟು, ವಸ್ತು ಎಷ್ಟೇ ಸೂಕ್ಷ್ಮವಾದದ್ದಾದರೂ ಅದನ್ನು ಸರಳಗೊಳಿಸಿ ಸಂಗೀತ, ಹಾಸ್ಯ, ನೃತ್ಯಗಳ ಮೊರೆ ಹೋಗಿ ಅವುಗಳಿಂದಲೇ ಆವರಿಸಿ, ನಾಟಕದ ತುದಿಯಲ್ಲಿ ಕ್ಷಣಕಾಲ ಇಲ್ಲಿ ಬೇರೇನೋ ಇದೆ ಎನ್ನುವ ಹಾಗೆ ಮಾಡಲು ಪ್ರಯತ್ನವಿಡುತ್ತೇನೆ. ಹಾಗೆ ಕೆಲವೊಮ್ಮೆ ತೀರಾ ತೆಳುವಾದ ನಾಟಕವೊಂದನ್ನು ನಾಟಕ, ನೃತ್ಯ, ವಾದ್ಯ ಸಂಗೀತ, ಚಟಪಟನೆ ಮಾತಿನ ಮಂಟಪದ ಮೂಲಕ ಕಟ್ಟಿ, ನಾಟಕಕಾರ ಹೇಳಿಲ್ಲದ ಅನೇಕ ವಿಷಯಗಳನ್ನು ನನ್ನದೇ ಅಭಿಪ್ರಾಯಗಳನ್ನು ಮಕ್ಕಳ ಕೈಲಿ ಆಡಿಸಿ ಸಮಾಧಾನ ಪಟ್ಟುಕೊಂಡಿದ್ದೇನೆ.

 

ಮಕ್ಕಳ ನಾಟಕ ಮಾಡಿಸುವಾಗ ಬಹಳ ಸಾರಿ ಮೂಲ ಪಠ್ಯವನ್ನು ಪೂರ್ಣವಾಗಿ, ಚಾಚೂತಪ್ಪದಂತೆ ಅನುಸರಿಸಲು ಸಾದ್ಯವೇ ಆಗದು. ಅಲ್ಲಲ್ಲಿ ಬದಲಾಯಿಸಿ ‘ರಂಗಕೃತಿ’ಯೊಂದನ್ನು ಸೃಷ್ಟಿಸಿಕೊಳ್ಳುವುದು ಅನಿವಾರ್ಯ. ತುಂಬ ಮುಖ್ಯವಾದದ್ದು ತಂಡವನ್ನು ನೋಡಿಯೇ ನಾಟಕವನ್ನು ನಿರ್ದರಿಸೋದು. ನಾನು ನಾಗಮಂಗಲದ ತಂಡವಾದರೇ ಆರಿಸಿಕೊಳ್ಳುವ ನಾಟಕವೇ ಬೇರೆ, ಮಂಡ್ಯದ ಮಣ್ಣಗೆ ಬೇರೆ, ಉಡುಪಿಗಾದರೇ ಬೇರೆ, ನಮ್ಮ ‘ನಟನ’ದ ಮಕ್ಕಳಿಗಾದರೇ ಬೇರೆಯೇ. ಆ ಊರಿನ, ಪರಿಸರದ ಮತ್ತು ಬದಲಾಗುತ್ತಿರುವ ಸನ್ನಿವೇಶಕ್ಕೆ ಪೂರಕವಾಗಿ, ಆ ಮಕ್ಕಳ ಅಭಿರುಚಿ, ಪೋಷಕರ ಆಸಕ್ತಿ, ಅಲ್ಲಿನ ಜನಸಮುದಾಯದ ಒಟ್ಟು ಧೋರಣೆ, ಸ್ಥಳೀಯ ಸಂಪನ್ಮೂಲದ ಸಾದ್ಯತೆ, ಮಿತಿ ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡೇ ನಾಟಕವನ್ನು ಆರಿಸಿಕೊಳ್ಳಬೇಕಾಗುತ್ತದೆ. ಪಾಂಡವಪುರದ ಪಕ್ಕ ಚೆಲುವರಸನಕೊಪ್ಪಲಿನಲ್ಲಿ, ನಾಟಕವನ್ನೇ ಕಂಡಿರದ ಸರ್ಕಾರಿ ಶಾಲೆ ಮಕ್ಕಳಿಗೆ ಬೆಕೆಟ್ನ ‘ಗಾಡೋ’ ನಾಟಕವನ್ನು ಮಾಡಿಸುವ ಮುಠ್ಠಾಳತನಕ್ಕೆ ನಾನು ಕೈ ಹಚ್ಚೋದಿಲ್ಲ. ನಾಟಕ ಆಯ್ಕೆಯಲ್ಲಿ ತುಂಬಾ ಎಚ್ಚರ ವಹಿಸಿದರೇ ಮತ್ತು ಆರಿಸಿಕೊಂಡ ನಾಟಕದಲ್ಲಿ ತುಂಬಾ ಶಕ್ತಿ ಇದ್ದರೆ ನಾವು ಅರ್ಧ ಗೆದ್ದಂತೆ! ಇವತ್ತಿಗೂ ಹೊಸ ನಾಟಕದ ಕೊರತೆ ಇದೆ ಎನ್ನುವುದು ಹೌದಾದರೂ ಅರ್ದ ಸತ್ಯ.
ಹಾಗೆಂದ ಮಾತ್ರಕ್ಕೆ ಮಕ್ಕಳ ನಾಟಕವೆಂದರೆ ಗಂಭೀರ ವಿಷಯಗಳನ್ನು ಚರ್ಚಿಸಬಾರದೆಂದಿಲ್ಲ ಆದರೆ ಹೇಳುವಾಗ ಸರಳವಾಗಿ, ಲವಲವಿಕೆಯಿಂದ ಹೇಳಿದರೆ ಮಕ್ಕಳು ಮತ್ತೆ ನಾಟಕಕ್ಕೆ ಬರ್ತಾವೆ ಅನ್ನೋದು ನನ್ನ ಅಭಿಪ್ರಾಯ.

 

ಮಕ್ಕಳ ನಾಟಕ ಕಲಿಸುವ ಮುನ್ನ ಅವರ ನಿತ್ಯದ ಬದುಕಿನ ಚಲನವಲನಗಳನ್ನು ಗಮನದಲ್ಲಿಟ್ಟುಕೊಂಡು ಅವಳು ಹೀಗಿರೋದ್ರಿಂದ ಅವರು ಈ ರೀತಿ ಪಾತ್ರಗಳನ್ನು ಅಭಿನಯಿಸಬಲ್ಲರು ಅನ್ನೋ ಭ್ರಮೆ ಬೇಡ! ದಿನ ನಿತ್ಯ ಪಟಪಟನೆ ಮಾತನಾಡುವ ಹುಡುಗಿ ರಂಗದಲ್ಲಿ ಗರ ಬಡಿದವಳಂತೆ ನಿಂತು, ತುಂಬ ಮೃದು ಹುಡುಗನೊಬ್ಬ ನಾಟಕದ ಹೊತ್ತಿಗೆ ಲೀಲಾಜಾಲವಾಗಿ ಅಭಿನಯಿಸುವ ‘ಪವಾಡಗಳನ್ನು ಕಣ್ಣಾರೆ ಕಂಡಿದ್ದೇನೆ. ಅವರೊಳಗೇ ಆ ಶಕ್ತಿ ಇರುತ್ತದೆ. ನಾವು ಅದಕ್ಕೆ ಕೊಂಚ ಇಂಬು ಕೊಟ್ಟರೆ ಸಾಕಷ್ಟೇ, ಕೆಲವೊಬ್ಬರು ಬೇಗ, ಮತ್ತೆ ಕೆಲವರು ಸ್ವಲ್ಪ ತಡ ಆದರೆ ಪ್ರತೀ ಮಗುವು spontaneous ಆಗೇ ಆಗುತ್ತದೆ. ಹಾಗೇ spontaneous ಆಗದ ಮಗುವೇನಾದರೂ ಇದ್ದರೆ ಅದು ಪೋಷಕರು ಮತ್ತು ಶಿಕ್ಷಕರ ದೆಸೆಯಿಂದ ಅಂತ ನನ್ನ ನಂಬಿಕೆ!.

ತಾಲೀಮಿನಲ್ಲಿ ಎರಡು ಅಂಶವನ್ನು ಖಂಡಿತ ಗಮನಿಸಿಕೊಳ್ತೇನೆ. ತಾಲೀಮಿನಲ್ಲಿ ಮಕ್ಕಳು ಪೂರ್ಣ ತೊಡಗಿಕೊಳ್ಳುವ ಹಾಗೇ ಮಾಡುವುದು, ಆ ಪ್ರಕ್ರಿಯೆಯೇ ಅತ್ಯಂತ ಮುಖ್ಯವಾದದ್ದು ಮತ್ತು ರಂಗಾಟಗಳ ಮೂಲಕವೇ ತಾಲೀಮಿನ ತಾಜಾತನವನ್ನು ಕಾಯ್ದಿಡುವುದು.
ನಾಟಕ ಪೌರಾಣಕವಾದರೂ ಆದುನಿಕ ಪ್ರಙ್ಞೆಯನ್ನು ಸಂವಹಿಸುವ ಜಾಣ್ಮೆ ನಿರ್ದೇಶಕನಿಗಿದ್ದರೆ ಮೂಲತಃ ಪ್ರಗತಿಪರ ಚಿಂತನೆಗಳನ್ನಿಷ್ಟ ಪಡುವರಾದರೆ, ಎಂಥ ನಾಟಕಗಳಲ್ಲೂ ವಿಚಾರಗಳನ್ನು ಹೇಳಲು ಬರುತ್ತದೆ. ಹೇಳುವ ರೀತಿ ಹಿತವಾಗಿರಬೇಕಾಗುತ್ತದೆ ಅಷ್ಟೇ. ಮೈಸೂರಿನ ರಾಮಕೃಷ್ಣಾಶ್ರಮದ ಶಾಲೆಯಲ್ಲಿ ಅಪ್ಪಟ ಸಂಪ್ರದಾಯಸ್ಥ ನಿರ್ದೇಶಕಮಾಸ್ತರ ಪುಟ್ಟ ಮಕ್ಕಳಿಗೆ ಬೂಮಿ ಕಲುಷಿತಗೊಳ್ಳುತ್ತಿರುವ ಅಪಾಯದ ಬಗ್ಗೆ ತುಂಬಾ ಅಚ್ಚುಕಟ್ಟಾದ ವೈಚಾರಿಕ ನಾಟಕವನ್ನು ವಾರ್ಷಿಕೋತ್ಸವಕ್ಕೆ ನೀಡಿದ್ದ. ಎಲ್ಲೂ ಬರೀ ‘ಘೋಷಣೆ’ ಅನ್ನಿಸದೇ ‘ಅನುಭವ’ವಾಗುವ ಹಾಗೇ ಮಾಡುವುದು ನಿಜವಾದ ಕಲಾತ್ಮಕತೆ ಅಂತಾ ಭಾವಿಸ್ತೇನೆ.

ಮಕ್ಕಳಲ್ಲಿನ ಹಿಂಜರಿಕೆ, ಮಖೇಡಿತನವನ್ನು ಕಳಚುವ ಸಂದರ್ಬದಲ್ಲಿ ಅವರ ನಾಚಿಕೆ-ಸಂಕೋಚಗಳೆಂಬ ಭಾವವೂ ಓಡಿಹೋಗುವ ಹಾಗೆ ನೋಡಿಕೊಳ್ಳಬೇಕು. ಮೊದಲ ದಿನ ರಿಹರ್ಸಲ್ಗೆ ಬರಲು ಅಳುವ ಬಾಲಕ ನಾಟಕ ಮುಗಿದ ಘಳಿಗೆ ನಿಮ್ಮ ಕುತ್ತಿಗೆಗೂ ಕೈ ಹಾಕಬಾರದಲ್ಲಾ!? ಎಲ್ಲ ಪ್ರೀತಿ ಕೊಡುತ್ತಲೇ ರಂಗಶಿಸ್ತನ್ನೂ ರೂಢಿ ಮಾಡುತ್ತಾ ಹೋಗಬೇಕು.
ನನ್ನ ಶಿಬಿರಗಳ – ನಾಟಕ ತಯಾರಿ ಛಠಣಣಠಟ ಟಟಿಜ – ತಮಾಷೆ; ನಾಟಕಗಳಲ್ಲಿ ಹಾಸ್ಯ, ಮಾತಿನ ಚಟಪಟಿ ಮತ್ತು ಅಭಿನಯ ಕೇಂದ್ರವೇ ನನ್ನ ಹೂರಣ. ಒಬ್ಬೊಬ್ಬರದು ಒಂದೊಂದು ಶೈಲಿ. ನನ್ನ ಗೆಳೆಯರೇ ಇದ್ದಾರೆ, ಅದೆಂತಹ ಸೆಟ್ ಹಾಕ್ತಾನೆ ಎಂದರೇ ಮಕ್ಕಳ ನಾಟಕವಾದರೂ ಒಂದೂವರೆ ಲಕ್ಷ ಸೆಟ್ಗೆ ಖರ್ಚಾಗಿರುತ್ತೆ. ಆ ಉಡುಪು, ಆ ಸಂಗೀತ, ಅಬ್ಬಬ್ಬಾ ನನಗೆ ಅವರ ಬಗ್ಗೆ ಮಿಶ್ರ ಭಾವ ಮಕ್ಕಳ ನಾಟಕಕ್ಕೆ ಅಷ್ಟೊಂದು ದುಡ್ಡು ಹುಟ್ಟಿಸ್ತಾರಲ್ಲ ಅನ್ನುವ ಅಚ್ಚರಿ!
ರಂಗಭೂಮಿಯ ಸರಳತೆಯೇ ಅದರ ಸೌಂದರ್ಯ ಅನ್ನೋದನ್ನ ನಂಬಿಕೊಂಡವನು ನಾನು. ಹಾಗಂತ ತೀರಾ ಖಾಲಿಯಾಗೂ ಇರೋದಿಲ್ಲ. ವಸ್ತುವಿಗೆ ತಕ್ಕ ಹಾಗೆ ರಂಗಸಜ್ಜಿಕೆ, ಪರಿಕರ, ಸಂಗೀತ, ಉಡುಪು, ಬೆಳಕು ಎಲ್ಲ ವಿಭಾಗಗಳಲ್ಲೂ ಕೊಂಚ ರಂಗುರಂಗಾಗಿಯೇ ಇಡುವ ಪ್ರಯತ್ನ ಮಾಡ್ತೇನೆ. ಆದರೆ ಗಾಡಿ ಮಾಡೋದಿಲ್ಲ, ಅವಶ್ಯಕತೆಗಿಂತ ಜಾಸ್ತಿ ಬಣ್ಣ ತುಂಬೋದು ಕೂಡ ಮಕ್ಕಳಲ್ಲಿ ಅಭಿರುಚಿ ಕೆಡಿಸುತ್ತಾ ಹೋಗುವುದನ್ನು ಕಂಡಿದ್ದೇನೆ.
ತಮಾಷೆ, ಮಕ್ಕಳ ಲವಲವಿಕೆ, ಚೂಟಿತನದ ಮೂಲಕ ನಾಟಕ ನೋಡುವ ನನಗೆ ಮಿಕ್ಕವರ ಶೈಲಿ – ಆಕಾರಗಳೂ ಪ್ರಿಯವಾಗಬಾರದೆಂದಿಲ್ಲ. ದೈಹಿಕ ಕಸರತ್ತಿನ, ವಿಶಿಷ್ಟ ದೇಹ ಭಾಷೆಯ ಮೂಲಕ ನಾಟಕ ಕಟ್ಟುವ ಗುರು ಇಕ್ಬಾಲ್ ಸರ್, ಯಕ್ಷಗಾನದಂತ ಪ್ರಕಾರವನ್ನೂ ದುಡಿಸಿಕೊಳ್ಳೋ ಕವಾತ್ತಾರ್, ಅದರೊಟ್ಟಿಗೆ ಮ್ಯಾಜಿಕ್ನ್ನು ಬೆರೆಸಿ ವಿಸ್ಮಯ ಮೂಡಿಸುವ ಜೀವನ್ರಾಂ, ಸಾಹಿತ್ಯ ದೃಷ್ಟಿಯ ಪ್ರಬಲವಾದಿ ಡಾ ಕಶ್ಯಪ್, ತಲ್ಲಣಗಳನ್ನೂ ಕುಣಸುತ್ತಾ ಹೇಳುವ ಕೋಟಗಾನಹಳ್ಳಿ, ಮಕ್ಕಳ ನಾಟಕವೆಂದರೇ ಸೆಟ್, ಪ್ರಾಪರ್ಟಿ, ಮುಖವಾಡ ಅನ್ನುವ ಮಾಲತೇಶ, ವೈಭವ ಅನ್ನುವ ಪ್ರೇಮಾ ಮೇಡಂ ಹೀಗೆ ಒಬ್ಬೊಬ್ಬರದ್ದೂ ಒಂದೊಂದು ಬಗೆ ಅವರ ಹಿನ್ನೆಲೆ, ಪರಿಸರ, ರೂಢಿಸಿಕೊಂಡದ್ದು ಎಲ್ಲವೂ ಅವರ ದೃಷ್ಟಿಯೇ.
ಮಕ್ಕಳ ನಾಟಕದಲ್ಲಿ ನೀತಿ ಬೇಡವೇ ಅಂತ ಪ್ರಶ್ನೆ. ನೀತಿಯೋ, ಸಂದೇಶವೋ, ಕಥೆಯೊಳಗೇ ಮಿಳಿತವಾಗಿದ್ದರೇ ಚಂದ, ನೀತಿಗಾಗಿಯೇ ನಾಟಕವಾದರೆ; ನನ್ನ ಅನೇಕ ಬುದ್ಧಿಜೀವಿ ‘ಸೆಮಿನಾರ್ ಖಾಯಂ’ ನಿರ್ದೇಶಕರು ಆಡಿಸುವ ಮಕ್ಕಳ ನಾಟಕಗಳಂತೇ – ನೀರಸವಾಗಿಬಿಡುತ್ತದೆ.
ಸಣ್ಣದೊಂದು ಅನುಭವ ಹೇಳಿಬಿಡ್ತೇನೆ;
ನಮ್ಮ ಮಕ್ಕಳ ‘ನಾಯಿತಿಪ್ಪ’ ಬುದ್ಧಿವಂತರ ನಾಡಿನ ರಂಗ ಅದ್ಯಯನ ಕೇಂದ್ರವೊಂದರಲ್ಲಿ ಪ್ರದರ್ಶನ ನೀಡಿದಾಗ ಪ್ರೇಕ್ಷಕರು, ಪೋಷಕರು, ಮಕ್ಕಳು ಅಪಾರ ಸಂಭ್ರಮಿಸಿದರು. ನಂತರ ವಿದ್ಯಾರ್ಥಿಗಳು ನನ್ನಜೊತೆ ಸಂವಾದದಲ್ಲಿ ಸೆಟೆದುಕೊಂಡು ಕುಳಿತಿದ್ದರು. ಯಾಕಪ್ಪ ಅಂದೆ ನಿಧಾನವಾಗಿ ಒಬ್ಬ ‘ಸಾರ್, ನಮಗೆ ಹೇಳ್ಕೊಟ್ಟಿದ್ದಾರೆ ಮಕ್ಕಳ ನಾಟಕ ಅಂದ್ರೆ ಮಕ್ಕಳು ಅಭಿನಯಿಸಬಾರದು, ಅವರಿಗೆ ಅರಿವಿರೋದಿಲ್ಲ ದೊಡ್ಡವರು ಮಕ್ಕಳಿಗಾಗಿ ಮಾಡೋ ನಾಟ್ಕವೇ ಮಕ್ಕಳ ನಾಟ್ಕ’ ಅಂದ. ಅಯ್ಯಪ್ಪಾ! ಅಂದ್ಕೊಂಡೆ. ನಾನು ಹೇಳಿದೆ ‘ಗೆಳೆಯ, ನಿಮಗೆ ತಪ್ಪು ಮಾಹಿತಿ ನೀಡಿದ್ದಾರೆ. ಅದೂ ನಾಟಕವೇ – ಒಂದು ಶೈಲಿ ಆದರೆ ಮಕ್ಕಳ ನಾಟಕ ಮಕ್ಕಳು ಮಾಡುವುದು ತಪ್ಪಲ್ಲ’ ಅಂತಾ ಅವರಿಗೆ ತಿಳಿಸಿ ಹೇಳುವಲ್ಲಿ ಸಾಕೋ ಬೇಕಾಯಿತು.!
 
ಮಕ್ಕಳ ನಾಟಕಗಳನ್ನೂ ದೊಡ್ಡವರೇ ಅಭಿನಯಿಸುವಾಗ ವಸ್ತುವನ್ನು ಮಂಡಿಸುವಾಗ ಶೈಲಿಯಲ್ಲಿ ಹೆಚ್ಚು ಎಚ್ಚರ ವಹಿಸಬೇಕು, ನಟರು ತುಂಬ ಕೌಶಲ್ಯಪೂರ್ಣವಾಗಿರಲೇಬೇಕು. ಮಕ್ಕಳನ್ನು ನಂಬಿಸುವುದು ಮೇಲ್ನೋಟಕ್ಕೆ ಸುಲಬವಾಗಿ ಕಂಡರೂ, ಮಕ್ಕಳ ಅನುಮಾನಗಳನ್ನು ಬಗೆಹರಿಸುವುದೂ ಕೆಲವೊಮ್ಮೆ ಕಷ್ಟವೂ ಆಗಿಬಿಡುತ್ತದೆ.
ಮಕ್ಕಳ ನಾಟಕಗಳನ್ನು ಕಟ್ಟುವಾಗ ಮಕ್ಕಳಲ್ಲಿ ಆಶುವಿಸ್ತರಣೆಯ ಮೂಲಕ ಸನ್ನಿವೇಶ ಸೃಷ್ಟಿಸುವುದು, ಪಾತ್ರ ಅರ್ಥೈಸುವಂತೆ ಮಾಡುವುದು ಹೆಚ್ಚು ಸೂಕ್ತ. ನೀವು ಆಯ್ದುಕೊಂಡ ನಾಟಕವನ್ನು ಪಕ್ಕದಲ್ಲಿಟ್ಟು – ಮಕ್ಕಳಿಗಾಗಿ ಸರಳವಾಗಿ ಅದೇ ಕಥೆ ಹೇಳಿ ತಂಡಗಳನ್ನು ರಚಿಸಿ ಅವರಿಗೇ ಬಿಡಿ ಆಮೇಲೆ ಪಾತ್ರ ಹಂಚುವುದು ನಿರ್ದೇಶಕನಿಗೂ ಸುಲಬವಾಗುತ್ತದೆ. ಮಕ್ಕಳ spontainity ದಿಢೀರ್ ಸೃಷ್ಟಿ ಯಾವತ್ತಿಗೂ ಅದ್ಭುತವೇ. ಅದನ್ನೇ ಕೇಂದ್ರವಾಗಿಟ್ಟುಕೊಂಡು ನಾಟಕ ಕಟ್ಟಿದರೆ ಬಯವಾಗಬಹುದು. ಆದರೆ, ಅವರ ಕಲ್ಪನೆಗಳನ್ನಾದರಿಸಿಯೇ ಮುಂದುವರೆದರೆ ವಸ್ತುಕಥೆ, ಶೈಲಿ ಎಲ್ಲವೂ ಸೃಷ್ಟಿಯಾಗಿ ನಾವು – ನೀವು ಕಂಡಿರದ ಹೊಸ ಲೋಕ ಸೃಷ್ಟಿಯಾಗಿಬಿಡುತ್ತದೆ. ನಿರ್ದೇಶಕರು ಅತೀ ಬಿಗಿ ಇರಬಾರದು. ರಿಜಿಡ್ ಆದಷ್ಟು ಸಂಕಟವೇ, ಹುಡುಗ ಕೈ ಕೊಟ್ಟಾಗ ಪಕ್ಕದ ಹುಡುಗ ಸ್ವಲ್ಪ ಮಂದ ಆದರೂ ಪರವಾಗಿಲ್ಲ. ಅವನನ್ನು ಪ್ರೋತ್ಸಾಹಿಸಿ ನೋಡಿ, ಹಳಬನಿಗಿರದ ವಿಶಿಷ್ಟ ಪ್ರತಿಭೆಯೊಂದು ಇವನಲ್ಲಿ ಅಂತರ್ಗತವಾಗಿ ಇರುತ್ತದೆ. ಅದು ಪಕ್ಕನೆದ್ದು, ನಾಟಕಕ್ಕೊಂದು ಮೆರುಗು ಬಂದುಬಿಡುತ್ತದೆ. ನಾನು ಈ ಬಗೆಯ ‘ಕ್ಷಣದ ಸ್ಪುರಿತಕ್ಕೇ’ ಹೆಚ್ಚು ತೆರೆದುಕೊಂಡಿರ್ತೇನೆ. (ಎಲ್ಲ ಸಿದ್ಧತೆಗಳನ್ನು ಪಕ್ಕ ಮಾಡಿಟ್ಟುಕೊಂಡಿದ್ದಾಗಲೂ!)
 
ರಹಸ್ಯದ ಕಥೆಗಳನ್ನು, ಭೂತ – ರಾಕ್ಷಸನ ಕಥೆಗಳನ್ನು ಚಮತ್ಕಾರಿಕ ತಂತ್ರಗಳಲ್ಲಿ ಮಕ್ಕಳಿಗೆ ಹೇಳುವಾಗ ‘ಬ್ರೆಕ್ಟ್’ ಶೈಲಿಯಲ್ಲಿ ಪ್ರದರ್ಶಿಸಿದರೆ ಒಳಿತು. ಇಲ್ಲದಿದ್ರೆ ಮನೆಯಲ್ಲೂ ಪ್ರಯೋಗ ಮಾಡಲು ಹೋಗಿ ಮಕ್ಕಳು ಎಡವಟ್ಟು ಮಾಡಿಕೊಳ್ಳುತ್ತವೆ. ಮಕ್ಕಳ ವಿಚಾರದಲ್ಲಿ ಅತೀ ನಿಗೂಡವೂ ಅಪಾಯವೇ. ಜಾನಪದ ಕಥೆಗಳ ವರ್ಣರಂಜಿತ್ವ, ಸಡಗರ ಇರಲಿ; ಮೂಡನಂಬಿಕೆಗಳು ನುಸುಳದಂತೆ ಜಾಗ್ರತೆ ವಹಿಸಬೇಕಷ್ಟೆ.
ಮಕ್ಕಳಿಗೆ ಪೂರ್ಣ ಮಾಡಿತೋರುವುದಕ್ಕಿಂತ ವರ್ಣಿಸಿದರೆ ಸಾಕೆಂದು ಬಹಳ ಸುಲಭ ಅನ್ನಿಸಿದರೂ ಮೊದಲ ಬಾರಿ ರಂಗಕ್ಕೆ ಹತ್ತಿದ ಮಕ್ಕಳಾದರೆ ಒಂದೆರಡು ಬಾರಿ ಮಾಡಿ ತೋರಿಸಿದರೆ ಅನುಕೂಲ. ಕ್ರಮೇಣ ಅವುಗಳ ಶಕ್ತಿ ನಿಮಗರಿವಾಗುತ್ತಿದ್ದಂತೆ ಬರೀ ಪ್ರಚೋದಿಸಿದರೂ ಸಾಕು ಗರಿ ಬಿಚ್ಚಿ ಹಾರುತ್ತವೆ. ಎಂಥದ್ದೇ ಸಂದರ್ಬದಲ್ಲಿ ಪರಸ್ಪರ ಹೋಲಿಸಲೇಬಾರದು, ಬಹುಬೇಗ ಕುಗ್ಗಿಬಿಡುತ್ತವೆ. ಆರಂಬದಲ್ಲೇ ಅವರ ಕೀಳರಿಮೆ ತೊಡೆದರೆ ಅರ್ದ ಗೆದ್ದಂತೆ! ಶಾಲೆ ವಾರ್ಷಿಕೋತ್ಸವಗಳಲ್ಲಿ, ಸ್ಪರ್ಧೆಗಳಲ್ಲಿ, ಉತ್ಸವಗಳಲ್ಲಿ, ಗಣಪತಿ ಪೆಂಡಾಲ್, ರಾಜ್ಯೋತ್ಸವ, ಎನ್.ಎಸ್.ಡಿ. ಉತ್ಸವಗಳು, ಕೂನೆಗೆ ಪ್ರತಿಷ್ಠಿತ ದೆಹಲಿಯ ಜಶ್ನೇ ಬಚ್ಪನ್ ಉತ್ಸವಗಳಲ್ಲಿ, ಬೇರೆ ಬೇರೆ ಸಮಯದಲ್ಲಿ ನಾಟಕ ತಯಾರಾಗಬೇಕಾದುದರಿಂದ ಸಂದರ್ಭಕ್ಕೆ ತಕ್ಕಂತೆ ಕುತೂಹಲ ಕಾಯ್ದುಕೊಳ್ಳುವ ಮಕ್ಕಳ ಮುಗ್ಧತೆಯನ್ನುಳಿಸಿಕೊಂಡು ಹೋಗುವ ಹಾಗೇ ನಾಟಕದಾಕಾರವನ್ನು ರೂಪಿಸಿಕೊಳ್ಳಬೇಕಾಗುತ್ತದೆ.
ರಾಷ್ಟ್ರೀಯತೆ, ಪರಿಸರ ಕಾಳಜಿ ಕುರಿತ ವಸ್ತುಗಳು ನಿಮಗೆ ತೊಂದರೆ ಯಾಗಲಾರವು. ಜಾಗತೀಕರಣ, ವರ್ಣಬೇದ, ಲಿಂಗ ತಾರತಮ್ಯ, ಜಾತೀಯತೆ ಕುರಿತಾದ ವಸ್ತುಗಳನ್ನು ಮಕ್ಕಳಿಂದಲೇ ಹೇಳಿಸುವಾಗ ನಾವು ಹೆಚ್ಚು ಸ್ಪಷ್ಟವಾಗಿರಬೇಕಾಗುತ್ತದೆ. ಮಕ್ಕಳೆಸೆವ ಪ್ರಶ್ನೆಗೆ ಸಮರ್ಥನೆ ಇಲ್ಲದೇ ಸಾಗಲೇ ಆಗುವುದಿಲ್ಲ.
ಮಕ್ಕಳ ನಾಟಕದಲ್ಲಿ ಇವೆಲ್ಲ ಯಾಕೆ? ಅಂತಾ ಉಪೇಕ್ಷೆಯೂ ಬೇಡ, ಅವುಗಳಿಂದಾಗುವ ಅನಾಹುತವನ್ನು ಸರಳವಾಗಿ ಅರ್ಥೈಸಿಕೊಟ್ಟರೆ ದೊಡ್ಡವರು ನಾಚುವಂತೆ ಮಕ್ಕಳು ಅಭಿನಯಿಸಿ ತೋರಿಸುತ್ತವೆ. ನಂಬಿಕೆಯ ಆಟಗಳು, ದೈಹಿಕ ಕಸರತ್ತುಗಳು, ನಾಲ್ಕು ಮಂತ್ರಗಳಾದ ಏಕಾಗ್ರತೆ, ಗ್ರಹಣಶಕ್ತಿ, ಸ್ಮರಣೆಶಕ್ತಿ ಮತ್ತು ಕಲ್ಪನೆಗೆ ಸಂಬಂಧಿಸಿದಂತೆ ಆಟಗಳನ್ನು ಆಡಿಸುತ್ತಾ ರಿಹರ್ಸಲ್ಗೆ ಬೇಕಾದ ಆವರಣವನ್ನು ನೀವು ಒಮ್ಮೆ ಸೃಷ್ಟಿ ಮಾಡಿಕೊಂಡರೆ ಅಲ್ಲಿಂದಾಚೆ ಲೀಲಾಜಾಲ. ಪಾತ್ರಧಾರಿ ಗಟ್ಟಿಯಾದರೆ, ಹಾಡುಗಾರ್ತಿ ಗಟ್ಟಿಯಾದರೆ, ಉಳಿದಂತೆ ಸಣ್ಣ ಪುಟ್ಟ ತಾಂತ್ರಿಕ ದೋಷಗಳು ಅಮುಖ್ಯ. ಎಲ್ಲ ಮರೆತೂ ಪ್ರೇಕ್ಷಕರೂ ಮಕ್ಕಳಾಗಿ ಬಿಟ್ಟ ಸಂದಭಗಳನೇಕವಿವೆ.
ಮಕ್ಕಳಿಗೆ ಅಭಿನಯ ಪಾಠ ಹೇಳುವಾಗ ಸಂವಹನ ಕೌಶಲದೊಡನೆ ಪ್ರತಿ ಚಲನೆಯ ‘ಅರ್ಥ’ ಮಾಡಿಸಿದರೆ ಸಾಕು, ಕಾನೂನಿನ ಅಗತ್ಯವಿಲ್ಲ. ಬರೀ ಅಭಿನಯ ಮಾತ್ರ ಮಾಡಿಸದೆ ರಂಗಸಜ್ಜಿಕೆಯ ವೈವಿದ್ಯ, ವಾಸ್ತು, ಉಡುಪು, ಪರಿಕರ ಬಳಕೆ ಮತ್ತು ಬೆಳಕಿನ ಮಹತ್ವ, ಸಂಗೀತ, ಶಬ್ಧಗಳ ಬಗ್ಗೆ ವಿವರಣೆ ಕೊಟ್ಟು ಅದರ ಕಡೆಗೆ ಮನವೊಲಿಸಬೇಕಿದೆ. ಪ್ರಸಾದನ ಕಲೆಯ ಅಭ್ಯಾಸದಲ್ಲಿ ಮನುಷ್ಯ ದೇಹರಚನೆ ಅದ್ಯಯನ ಎಷ್ಟು ಮುಖ್ಯ  ಅನ್ನೋದು ಗೊತ್ತಾದರೆ ಮತ್ತು ಎಲ್ಲಕ್ಕೂ ವೈಙ್ಞಾನಿಕವಾಗಿ ಮಕ್ಕಳಲಿ ಪರಿಙ್ಞಾನ ಮೂಡಿಸಿದರೆ ನಾಟಕದ ಬಂದ ಕಟ್ಟಲನುಕೂಲಕರ ಅಂದುಕೊಳ್ತೇನೆ.
ನಿಸ್ಸಂದೇಹವಾಗಿ ಮಕ್ಕಳಲ್ಲಿ ಪೂರ್ಣರಂಗಭೂಮಿಯ  ಪರಿಕಲ್ಪನೆಯನ್ನು ಬೋಧಿಸುವ ಅವಶ್ಯವಿದೆ. ಬೆಳೆಯುತ್ತಾ ನಟ-ನಟಿಯೊಂದಿಗೆ ನಾಟಕಕಾರ, ಸಂಗೀತಕಾರ, ವಿನ್ಯಾಸಕರು, ಒಬ್ಬ ಒಳ್ಳೇ ಮ್ಯಾನೇಜರನ್ನು ಸೃಷ್ಟಿಸುವ ಅಗತ್ಯವಿದೆ. ಅವರ ಪರಾವಲಂಬಿತನ ತಪ್ಪಿಸಬೇಕಾಗಿದೆ.
ಮಕ್ಕಳ ನಾಟಕ ಮಾಡಿಸೋದ್ರಿಂದ ಮತ್ತೊಂದು ಲಾಭ ಏನಂದ್ರೆ ನೀವು ಒಬ್ಬ ಹುಡುಗನಿಗೆ ಪಾತ್ರ ಹಾಕಿಸಿದ್ರೆ ಅವರಮ್ಮ, ಅವನಪ್ಪ ಅಂತೂ ನಾಟ್ಕ ನೋಡಲು ಬರೋದು ಗ್ಯಾರಂಟಿ. ಅಕ್ಕನೋ ತಂಗಿಯೋ ಜತೇಲಿ ಇದ್ರೆ ಅವೂ ಬರ್ತಾವೆ. ತಮ್ಮ ಮಕ್ಕಳ ಪ್ರತಿಭೆ ಮೆರೆಯಿಸಲು ತಮ್ಮ ಅಕ್ಕಪಕ್ಕ ಮನೆಯವರು, ನೆಂಟ್ರು, ಇಷ್ಟರನ್ನು ಕೂಡ ಕರೆತರುವ ಸಾದ್ಯತೆಗಳಿರುತ್ತವೆ. ಹೀಗಾಗಿ ಒಂದು ಮಗುವಿನಿಂದ ಹತ್ತಾರು ಮಂದಿ ರಂಗಮಂದಿರದ ಕಡೆಗೆ ಬರುವ ಹಾಗಾಗುತ್ತೆ.
ಹಠಕ್ಕೆ ಬಿದ್ದಾದರೂ ಪುನರ್ ಪ್ರದರ್ಶನಗಳು ಹೆಚ್ಚಾಗಬೇಕು. ತಪ್ಪುಗಳನ್ನು ತಿದ್ದಿಕೊಳ್ಳಲು, ಗೆಳೆಯರನ್ನು, ಸಹಪಾಠಿಗಳನ್ನು ಹೆಚ್ಚು ರಂಗಕ್ಕೆ ಸೆಳೆಯಲು, ಬೇರೆ ಬೇರೆ ಬಗೆಯ ಪ್ರೇಕ್ಷಕರಿಂದ ಪ್ರಯೋಗಕ್ಕೆ ಸಿಗುವ ತಾಜಾತನಕ್ಕೆ ಪುಟಾಣ ಕಲಾವಿದ/ಕಲಾವಿದೆ ತಮ್ಮ ಬದಲಾವಣೆ, ಬೆಳವಣಗೆಗಳನ್ನು ಗುರುತಿಸಿಕೊಳ್ಳಲು ಪುನರ್ ಪ್ರದರ್ಶನಗಳಾದರೆ ಹೆಚ್ಚು ಅನುಕೂಲವಾಗುತ್ತದೆ. ನಮ್ಮ ‘ಅಲೀ ಬಾಬಾ’ 75 ಶೋ ಆದರೆ, ‘ತುಂಟ ರಾಬಿನ್’ 70 ಪ್ರದರ್ಶನ ಕಂಡಿದೆ, ‘ನಾಯಿತಿಪ್ಪ’ 60 ದಾಟಿದರೆ, ‘ರತ್ನಪಕ್ಸಿ’ 60 ಮುಗಿಸಿದೆ. ‘ಸತ್ರು ಅಂದ್ರೆ ಸತ್ರಾ?’ 40 ಪ್ರದರ್ಶನ ಕಂಡು ಮುನ್ನುಗ್ಗುತ್ತಿದೆ. ಧಾಂ ಧೂಂ ಸುಂಟರಗಾಳಿ 50 ಪ್ರದರ್ಶನಗಳೂ ಹೌಸ್ ಫುಲ್ ಆಗಿ ಪ್ರಚಂಡ ಯಶಸ್ಸು ಕಂಡಿದೆ. ಪ್ರದರ್ಶನದಿಂದ ಪ್ರದರ್ಶನಕ್ಕೆ ಮಕ್ಕಳ ನಟನ ಕೌಶಲ್ಯ, ತಂತ್ರಙ್ಞ ಗುಣದ ಬೆಳವಣಗೆಯನ್ನು, ಬದಲಾವಣೆಯನ್ನು ಕಂಡು ವಿಸ್ಮಿತನಾಗಿದ್ದೇನೆ. ಮೂಲೆಯಲ್ಲಿ ಮುದುಡಿ ನಿಲ್ಲುವ ಮಗುವೊಂದು ಮುಖ್ಯಪಾತ್ರ ಮಾಡಿ ಸಂಬ್ರಮಿಸುವ ಘಳಿಗೆ ಸೃಷ್ಟಿಯಾಗುವುದು ಪುನರ್ ಪ್ರದರ್ಶನಗಳಿಂದ ಸಾದ್ಯ.
ವಾರಗಟ್ಟಲೆ, ತಿಂಗಳುಗಟ್ಟಲೆ ಅನಿವಾರ್ಯವಾಗಿ ನೀವು ಮಕ್ಕಳ ನಾಟಕ ಮಾಡಿಸುವಾಗ ಈ ಎಳವೆಯಲ್ಲೇ ಅವಕ್ಕೆ ಕನ್ನಡ ಗಾದೆಗಳು, ಬೈಗುಳ, ನುಡಿಗಟ್ಟುಗಳು, ಸಾಹಿತ್ಯದ ಪರಿಚಯದ ಮೂಲಕ ಕನ್ನಡ ಭಾಷೆ, ಪರಂಪರೆಯ ಅಭ್ಯಾಸವೂ ಆಗುತ್ತದೆ. ಎಲ್ಲ ಶಾಲೆಗಳಲ್ಲಿ (ಕಾನ್ವೆಂಟ್ ಸೇರಿ) ಸಮಾರಂಬಕ್ಕೆ ಒಂದಾದರೂ ಕನ್ನಡ ನಾಟಕ ಇರ್ಲೆಬೇಕೂಂತ ಸರ್ಕಾರಿ ಆಜ್ಞೆ ಹೊರಬಿದ್ರೆ ಆರಂಭದಲ್ಲಿ ಬಯಕ್ಕೆ, ಆಮೇಲೆ ಚಟವಾಗಿ, ಮತ್ತೆ ಪ್ರೀತಿಯಿಂದ ನಾಟಕ ಬೆಳೆಯುತ್ತೆ. ಕಡ್ಡಾಯ ನಾಟಕ ಕಲಿಕೆಗೆ ‘ಪೀರಿಯಡ್’ ಇದ್ದರೆ ಇನ್ನೂ ಚಂದವೇ.
ನಾಟಕದ ಕಾರಣಕ್ಕಾಗಿಯಾದರೂ ಮಕ್ಕಳು ಒಂದೆಡೆ ಸೇರ್ತಾರಲ್ಲಾ, ಸಂಘಟನಾತ್ಮಕವಾಗಿ ಬದುಕುವ ಕಲೆಯನ್ನು ಮತ್ತು ಸಹಿಷ್ಣುತೆಯನ್ನು ಬೆಳೆಸಿಕೊಳ್ಳುವತ್ತ ಸಾಗ್ತಾರಲ್ಲಾ ಎನ್ನುವ ಸಮಾಧಾನವೂ ನನಗಿದೆ. ಸಕಾರಾತ್ಮಕ ಮನೋಭಾವ ರೂಪಿಸಲು ಸಾದ್ಯವಾಗಿದ್ದು ಸ್ವತಃ ಅನುಬವವಾಗಿದೆ.
ಅವಕಾಶವಾದಾಗಲೆಲ್ಲಾ ಮಕ್ಕಳ ನಾಟಕವನ್ನು ಬೇರೆ ಬೇರೆ ವಯೋಮಾನದ, ಬೇರೆ ಬೇರೆ ಸಂಸ್ಕೃತಿಯ ಹಿನ್ನೆಲೆ, ಬಣ್ಣ, ಜಾತಿ, ದರ್ಮ ಮತ್ತು ಬೇರೆ ಬೇರೆ ಕಸುಬಿನಲ್ಲಿರುವವರ ಮಕ್ಕಳನ್ನು ಸೇರಿಸಿ ನಾಟಕ ಕಲಿಸಿದರೆ ನಾಟಕ ಕಲಿಕೆಯ ಪ್ರಕ್ರಿಯೆ ಹೆಚ್ಚು ದ್ವನಿಪೂರ್ಣವಾಗಿದ್ದನ್ನು ನನ್ನ ಅನುಭವದಿಂದ ಕಂಡುಕೊಂಡಿದ್ದೇನೆ. ರಜೆಯಲ್ಲಾಗುವ ಬೇಸಿಗೆ ಶಿಬಿರದಲ್ಲಿ ಇನ್ನೂ ಒಂದು ಹೆಜ್ಜೆ ಸಾಗಿ ಒಂದಷ್ಟು ಅನಾಥಾಶ್ರಮ ಮಕ್ಕಳು, ಖೈದಿಗಳ ಮಕ್ಕಳು, ಕೊಳೆಗೇರಿಯ ಮಕ್ಕಳು, ವಿಶೇಷ ಮಕ್ಕಳು, ವಿಕಲಚೇತನ ಪುಟಾಣಗಳು, ಬಾಲಾಪರಾಧಿ ಗೃಹದಿಂದ ಕರೆತಂದವರನ್ನೂ ಸಾಮಾನ್ಯ ಮಕ್ಕಳೊಂದಿಗೆ ಮುಖ್ಯವಾಹಿನಿಯಲ್ಲಿ ತೊಡಗಿಸಿ ಕೊಂಚ ತಾಳ್ಮೆ ವಹಿಸಿ, ಗಮನಿಸಿದರೆ ವಿಶಿಷ್ಟ ರೂಪಕಗಳೇ ಸೃಷ್ಟಿಯಾಗಿಬಿಡುತ್ತವೆ.
ಅವರ ವರ್ತನೆ, ಸಂಕಟ, ಕಲಿಕೆ, ಸಂಬ್ರಮ ಎಲ್ಲವನ್ನು ಕಂಡಿದ್ದೇನೆ. ಕೆಲ ಐಟಿ-ಬಿಟಿ ಪೋಷಕರು ಮುನಿಸಿಕೊಂಡು ಹೋಗಿದ್ದು ಹೌದಾದರೂ ಪ್ರಯೋಗಕ್ಕೆ ಹೊಸ ಝಲಕ್ ಮೂಡಿದ್ದು ಅಕ್ಷರಶಃ ಸತ್ಯ.
ಶಾಲಾ ಮಕ್ಕಳಿಗೆ ಪ್ರವಾಸ ಎಂದೊಡನೆ ತಿರುಪತಿ, ದರ್ಮಸ್ಥಳ, ಜಿಆರ್‌ಎಸ್ ಪಾರ್ಕ್, ವಂಡರ್ಲಾಗೆ ಸಾಗುವ ಮಂದಿಗೆ ನನ್ನದೊಂದು ಮನವಿ; ಆಗೀಗ ಹೆಗ್ಗೋಡಿಗೆ, ಆದಿಮಕ್ಕೆ, ಸುಳ್ಯದ ರಂಗಮನೆಗೆ, ರಂಗಾಯಣಕ್ಕೆ ಕರೆದೊಯ್ದು ಅಲ್ಲಿನ ಚಟುವಟಿಕೆ ಗಮನಿಸಲು ಹೇಳಿ! ಮಕ್ಕಳ ಅಭಿರುಚಿ ಮತ್ತಷ್ಟು ಮಧುರವಾಗದಿದ್ದರೇ ನೋಡಿ!
ಮಕ್ಕಳ ರಂಗ ಪ್ರವಾಸದ ಪ್ರಯಾಸ ನಾನು ಬಲ್ಲೆ. ಆದರೆ ಪ್ರಯಾಣ, ಪರಿಸರ, ಪ್ರತೀ ಊರಿನ ಪ್ರೇಕ್ಷಕರೆದುರು ಮಕ್ಕಳು ಅರಳಿಕೊಳ್ಳುತ್ತಾವೆನ್ನುವುದೂ ಅಷ್ಟೇ ಸತ್ಯ!
ಅಕಸ್ಮಾತ್ ದೇಶಪ್ರೇಮದ ಬಗ್ಗೆಯೋ, ಗಾಂಧೀತಾತನ ನಚಿಕೇತನದ ಬಗ್ಗೆಯೋ ಮಕ್ಕಳು ನಾಟಕ ಮಾಡುತ್ತೇವೆಂದು ಹೊರಟರೆ, ಮಾಡಲಿ ಬಿಡಿ ಸಾಮಾಜಿಕ ಸಮಸ್ಯೆ, ಬಡತನ, ತಾರತಮ್ಯ, ಸಮಸ್ಯೆಗಳ ಕುರಿತು ಮಾಡ್ತೀವಂದ್ರೂ ಮಾಡಲಿ ಬೆನ್ನು ತಟ್ಟಿಬಿಡಿ. ಈಗಲೇ ‘ನಿಮ್ಮ ತಲೆ’ಯಲ್ಲಿರುವ ‘ಇಸಂ’ ತುಂಬಿ ಅವರ ನಾಟಕ ಮಾಡುವ ಉತ್ಸಾಹ ಕಳೆಯದಿದ್ದರೇ ಸಾಕೆನ್ನುವವ ನಾನು. ಪುಟ್ಟ ಸಲಹೆಯನ್ನು ಪ್ರೀತಿಯಿಂದ ನೀಡಬಹುದು ನೀವು. ಹೇರಬಾರದು ಅಷ್ಟೆ!
ನಾಟಕ ತಯಾರಿಯ ಪ್ರತೀ ಹಂತವನ್ನು ಕ್ರಮವಾಗಿ ತಾಲೀಮು ನಡೆಸಿಕೊಂಡು ಹೋದರೆ ಎಲ್ಲಕ್ಕೂ ನಾವು ಸ್ಪಷ್ಟವಾಗಿದ್ದರೆ, ಮಕ್ಕಳು ಅದನ್ನೇ ಅನುಸರಿಸುತ್ತವೆ. ನಮ್ಮ ಮಾತು, ಕ್ರಿಯೆ, ನಡವಳಿಕೆಗಳ ಕನ್ನಡಿ ಅವು, ಅದಕ್ಕಾಗಿ ಸಂತಸದ ಜೊತೆಗೆ ಬಯವೂ ಮೂಡಿದೆ.
ಅಷ್ಟೊಂದು ಸಂತೋಷ ಕೊಡುವ ಮಕ್ಕಳ ರಂಗಬೂಮಿಯ ಬಗ್ಗೆ ಹೊರಗಡೆ ಅವಜ್ಞೆ ಯಾಕಿದೆ ಅಂತ ನನಗೆ ಪೂರ್ಣ ಅರ್ಥವಾಗದಿದ್ದರೂ ಅದು ಮಕ್ಕಳ ರಂಗಬೂಮಿ ಮಾತ್ರ ಅಲ್ಲ ಅದು ‘ಮಕ್ಕಳ ಬಗ್ಗೆಯೇ’ ಇದೆ ಅನ್ನಿಸುತ್ತೆ!
ವಾಪಸ್ ನಮಗೆ ತಿರುಗಿ ತಂದುಹಾಕುವ ಯಂತ್ರ ನಮ್ಮ ಪ್ರತಿಷ್ಠೆಯನ್ನು ಕಾಯಬೇಕಾದ ಸಾದನ ಅಂತೆಲ್ಲ ಬಲವಂತವಾಗಿ ನಂಬಿ ಮುನ್ನಡೆದ ವ್ಯಾಪಾರಿ ಜಗತ್ತಿನೆದುರು ಆಟ-ನೋಟದ ಅಂತಃಕರಣ ಭಾವದ ಪ್ರೀತಿಯ ನಡೆ-ಅಂತನ್ನುವ ಅನುಭಾವದ ತುರ್ತಿದೆ ಎಲ್ಲರಲ್ಲಿ ಅಂತ ಭಾವಿಸ್ತೇನೆ.
ಗುರು ಕಾರಂತರು ಹೇಳಿದ್ದು :
ಜಗತ್ತಿನ ನಕ್ಷೆಯಲ್ಲಿ ರಂಗಬೂಮಿ ಮಂದಿ ತೀರಾ ಅಲ್ಪಸಂಖ್ಯಾತರು, ಆದುನಿಕ ರಂಗಬೂಮಿಯವರಂತೂ ಇನ್ನೂ ಕಮ್ಮಿ. ನಾವು ನಾಟಕ ಮಾಡಿಸದಿದ್ದರೆ ಯಾಕೆ ಮಾಡಿಸಿಲ್ಲ ಅಂತ ಯಾರೂ ಕೇಳಲ್ಲ. ಹೊರಗಿನ ಸಂಕಟಗಳೇ ಬೇಕಾದಷ್ಟಿವೆ. ಜನ ಕಳೆದು ಹೋಗಿದ್ದಾರೆ, ಸೌರಿಸಿಕೊಂಡು ನಾಟಕ ಮಾಡಿಸುತ್ತಾ ಹೋಗಿ..
ಮುಂದುವರೆದು ಹೇಳ್ತೇನೆ :
ಮಕ್ಕಳ ರಂಗಭೂಮಿ ಅದರಲ್ಲೂ ಕನ್ನಡ ಮಕ್ಕಳ ರಂಗಭೂಮಿ ಮಾಡ್ತಿರೋರು ಇನ್ನೂ ಅಲ್ಪಸಂಖ್ಯಾತರು. ನಮ್ಮದೇ ಪುಟ್ಟ ಪ್ರಪಂಚದಲ್ಲಿ ಒಬ್ಬರ ಕೆಲಸವನ್ನು ಮತ್ತೊಬ್ಬರು ಗೌರವಿಸುತ್ತಾ ಮಕ್ಕಳ ಮುಗ್ಧತೆಯ ಬೆರಗು ನಮ್ಮ ಕಣ್ಣಾಲಿಗಳಲ್ಲಿ ಮೂಡಲಿ ಅಂತಂದುಕೊಳ್ಳುತ್ತಾ ಪ್ರೀತಿಯಿಂದ ಎಲ್ಲರಿಗೂ ವಂದಿಸುತ್ತೇನೆ.
ದೊಡ್ಡವರೆಲ್ಲರ ಹೃದಯದಿ ಕಟ್ಟಿಹ
ತೊಟ್ಟಿಲ ಲೋಕದಲಿ
ನಿತ್ಯಕಿಶೋರತೆ ನಿದ್ರಿಸುತಿರುವುದು
ವಿಸ್ಮತ ನಾಕದಲಿ
ಮಕ್ಕಳ ಸಂಗದೊಳೆಚ್ಚರಗೊಳ್ಳಲಿ
ಆನಂದದ ಆ ದಿವ್ಯಶಿಶು
ಆಡಲಿ, ಹಾಡಲಿ, ಹಾರಲಿ, ಏರಲಿ
ದಿವಿಜತ್ವಕೆ ಈ ಮನುಜ ಪಶು.
ಕುವೆಂಪು
(ಬೊಮ್ಮನಹಳ್ಳಿ ಕಿಂದರಿಜೋಗಿ)

‍ಲೇಖಕರು avadhi

April 8, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. Anjali Ramanna

    tuMbaa chennaagide Ramesh! naaTaka maaDO makkaLa phOTo nODi maimareebEkide. innoMdiShTu phOTo haaki please 🙂
    Anjali Ramanna

    ಪ್ರತಿಕ್ರಿಯೆ
  2. Gopaal Wajapeyi

    ”ತುಂಬ ಮುಖ್ಯವಾದದ್ದು ತಂಡವನ್ನು ನೋಡಿಯೇ ನಾಟಕವನ್ನು ನಿರ್ಧರಿಸೋದು. ನಾನು ನಾಗಮಂಗಲದ ತಂಡವಾದರೇ ಆರಿಸಿಕೊಳ್ಳುವ ನಾಟಕವೇ ಬೇರೆ, ಮಂಡ್ಯದ ಮಣ್ಣಿಗೆ ಬೇರೆ, ಉಡುಪಿಗಾದರೇ ಬೇರೆ, ನಮ್ಮ ‘ನಟನ’ದ ಮಕ್ಕಳಿಗಾದರೇ ಬೇರೆಯೇ…” ನಿಮ್ಮ ಮಾತು ನೂರಕ್ಕೆ ನೂರು ಸರಿ. ಯಾಕಂದರೆ ನಾಟಕಕಾರ ಯಾವುದೋ ಒಂದು ಪ್ರದೇಶದ ಹಿನ್ನೆಲೆಯಿಟ್ಟುಕೊಂಡು ನಾಟಕ ಬರೆದಿರುತ್ತಾನೆ. ಅದು ಸಾರ್ವತ್ರಿಕತೆ ಪಡೆಯಬೇಕೆಂದರೆ ಮತ್ತು ಆಯಾ ಕಡೆ ಅದು ನಮ್ಮದು ಅನ್ನಿಸಬೇಕಾದರೆ ಹೀಗೆ ಮಾಡಲೇಬೇಕು. ಮಕ್ಕಳ ರಂಗಭೂಮಿಯಲ್ಲಿ ಪಳಗಿದ ನಿಮ್ಮ ಬರಹಗಳು ರಂಗಾಸಕ್ತರಿಗೆ ಬೆಳಕಿನಂತೆ. ರಂಗಭೂಮಿಯ ಬಗ್ಗೆ ಒಲವು ಮೂಡಿಸಿಕೊಳ್ಳಬೇಕೆಂಬವರಿಗೆ ಪ್ರೇರಣೆ.

    ಪ್ರತಿಕ್ರಿಯೆ
    • ಸುಧಾ ಚಿದಾನಂದಗೌಡ

      ವಂಡರ್ ಲಾ ಬದಲು ರಂಗಭೂಮಿಕ್ಷೇತ್ರಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿರೆಂಬ ನಿಮ್ಮ ಸಲಹೆ ಅಮೂಲ್ಯವಾಗಿದೆ.
      ಒಟ್ಟಾರೆ ಲೇಖನ ತುಂಬ ಚೆನ್ನಾಗಿದೆ.

      ಪ್ರತಿಕ್ರಿಯೆ
  3. D.Ravivarma

    ವಿಸ್ಮತ ನಾಕದಲಿ
    ಮಕ್ಕಳ ಸಂಗದೊಳೆಚ್ಚರಗೊಳ್ಳಲಿ
    ಆನಂದದ ಆ ದಿವ್ಯಶಿಶು
    ಆಡಲಿ, ಹಾಡಲಿ, ಹಾರಲಿ, ಏರಲಿ
    ದಿವಿಜತ್ವಕೆ ಈ ಮನುಜ ಪಶು…..ramesh nimma olagina halahalike,antarangada haadu nanage arthavaaytu…naavu namma makkalannu kaledu kondiddeve…badukina ii janjaata ottadadalli namage avara baage alochisalu kuda samayavilla…avarige savalattugalannu odagisidaagyu..avarige bekaada priiti aaraike inda vanchisiddeve…naataka avara manasina belavanige aatmaviswasa,ananda taruvalli prerane aaguttade…nimma ii kaayaka nanage tumbaa istavaaytu…abhinandanegalu…..

    ಪ್ರತಿಕ್ರಿಯೆ
  4. Dr.Kashyap

    ಗೆಳೆಯ,
    ನಿರಂತರ ಕ್ರಿಯಾಶೀಲತೆಯ ನಡುವೆಯೂ ಇಷ್ಟೆಲ್ಲ ಬರೆಯಲು ಅವಕಾಶ ಮಾಡಿಕೊಂಡಿದ್ದೀಯಲ್ಲ ಎನ್ನುವುದು ಹೊಟ್ಟೆಕಿಚ್ಚು ತರಿಸುತ್ತದೆ ಆದರು ನಿನ್ನ ಈ ಲೇಖನ ಚೆನ್ನಾಗಿ ಮೂಡಿಬಂದಿದೆ. ಮಕ್ಕಳು ಏನು ಮಾಡಿದರೂ ಚಂದ ಎನ್ನುವ ಒಂದು ಕ್ಲೀಶೆಯಿದೆ, ದುರಾದೃಶ್ಟವಷಾತ್ ಅದು ಕೆಲವು ಪ್ರೇಕ್ಷಕರ, ರಂಗಕರ್ಮಿಗಳ ಅನಿಸಿಕೆಯೂ ಆಗಿದೆ. ಮಕ್ಕಳು ಏನು ಮಾಡಿದರೂ ಚಂದ ಎನ್ನುವ ಆ ಸಾಲಿನ ಹಿಂದೆಯೇ ಮಕ್ಕಳ ರಂಗಭೂಮಿಯ ಬಗ್ಗೆ ಒಂದು ತಾತ್ಸಾರವಿದೆ ಅದನ್ನು ತೊಡೆದು ಹಾಕಬೇಕು. ಮಕ್ಕಳರಂಗಭೂಮಿಯಲ್ಲಿ ಚಿಣ್ಣರ ತರಲೆ, ತುಂಟಾಟ, ಲವಲವಿಕೆ ಎಲ್ಲದರ ಜೊತೆಗೆ ಗಂಭೀರ ಪ್ರಯತ್ನ ಮಾಡುವ ಹಲವಾರು ತಂಡಗಳು ಇವೆ ಎನ್ನುವುದನ್ನು ಈಗೀಗ ಜನರು ಗುರುತಿಸಲು ಶುರುವಿಟ್ಟಿದ್ದಾರೆ.
    ಮಕ್ಕಳ ನಾಟಕ ಮಾಡಿಸುವುದಲ್ಲದೆ, ಪೋಷಕರನ್ನೂ educate ಮಾಡುವ ಅಗತ್ಯವಿದೆ. ಆ ನಿಟ್ಟಿನಲ್ಲಿಯೂ ಕೆಲಸ ಆಗಬೇಕು. ಆದ್ದರಿಂದಲೇ ವಿಜಯನಗರ ಬಿಂಬ ಹಲವಾರು ಸಂವಾದಗಳನ್ನು, ಸೆಮಿನಾರ್ ಗಳನ್ನು ರಂಗ ಶಿಬಿರದ ಸಮಯಕ್ಕೇ ಹಮ್ಮಿಕೊಳ್ಳುತ್ತೇವೆ.
    ಮಕ್ಕಳ ನಾಟಕ ಮಕ್ಕಳ ಅರಿವನ್ನು ಹೆಚ್ಚಿಸುವಂತಿರಬೇಕು, ಹಾಗೆಂದು ಅದು ಬೋಧನೆಯಾಗಬಾರದು, ಅಥವ ಸ್ಲೋಗನ್ ಸಹ ಆಗಬಾರದು. ಅಂತಹ ನಾಟಕಗಳು ಹೆಚ್ಚಲಿ ಮಕ್ಕಳ ರಂಗಭೂಮಿ ನಿಜಕ್ಕೂ ಭವಿಷ್ಯವನ್ನು ಕಟ್ಟುವ ಅಮೂಲ್ಯ ಸಾಧನ ಆದ್ದರಿಂದ ಇನ್ನು ಹೆಚ್ಚು ಹೆಚ್ಚು ಪ್ರಯೋಗಗಳು ಆಗಬೇಕು ಎನ್ನುವುದು ನನ್ನ ಅಭಿಮತ.

    ಪ್ರತಿಕ್ರಿಯೆ
  5. ಶೋಭಾ ವೆಂಕಟೆಶ್

    ಮಕ್ಕಳ ರಂಗಭೂಮಿಯ ಬಗ್ಗೆ ಇಂತಹ ಲೇಖನ ಪ್ರಕಟಿಸಿದ ಅವಧಿಗೆ ಅಭಿನಂದನೆಗಳು. ರಮೇಶ್ ಅವರ ಮಕ್ಕಳ ರಂಗ ಭೂಮಿಯ ಬಗ್ಗೆಗಿನ ಈ ಲೇಖನ ಎಲ್ಲರನ್ನು ಜಾಗೃತ ಗೊಳಿಸುವಂತಿದೆ. ಈ ನಿಟ್ಟಿನಲ್ಲಿ ಮಕ್ಕಳ ರಂಗಭೂಮಿಯ ಬಗ್ಗೆ ಇನ್ನು ತ್ವರಿತವಾಗಿ ಕೆಲಸವಾಗಬೇಕಿದೆ. ರಂಗ ಭೂಮಿಯಲ್ಲಿ ಭವಿಷ್ಯದ ಒಳ್ಳೆಯ ರೂವಾರಿಗಳನ್ನು ನಿರ್ಮಿಸಲು ಸರಕಾರಗಳು, ಶಿಕ್ಷಣ ಇಲಾಖೆ, ಅಥವ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಬೇಕಾಗಿದೆ. ಎನ್.ಎಸ್.ಎಸ್, ಎನ್.ಸಿ.ಸಿ, ಕ್ರೀಡೆ ಮುಂತಾದವಕ್ಕೆ ಕೋಟ ನೀಡುವಂತೆ ರಂಗಭೂಮಿಯಲ್ಲಿ ತೊಡಗಿಸಿ ಕೊಂಡಿರುವ ಮಕ್ಕಳಿಗೆ ಕೋಟಾ (Quota) ನೀಡುವಂತಾಗ ಬೇಕು.ಇದರಿಂದ ಮಕ್ಕಳ ರಂಗಭೂಮಿಗೆ ಇನ್ನು ಹೆಚ್ಚಿನ ಪ್ರೋತ್ಸಾಹ ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ರಂಗಕರ್ಮಿಗಳು ಒಗ್ಗಟ್ಟಾಗಿ ಮುಂದುವರಿಯಬೇಕೆಂಬುದು ನನ್ನ ಹಂಬಲ. ಏನಂತೀರ ರಮೇಶ್ ?

    ಪ್ರತಿಕ್ರಿಯೆ
  6. Aravinda

    sir thumba chennagi ede lekhana……sarkaradavaru swlpa nodidare olleyadittu ansutte

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: