ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಜುಳ ಸಿ ಎಸ್ ಹೊಸ ಕವಿತೆ – ಕನಸಿಗೂ ಭಯ !

ಮಂಜುಳ ಸಿ ಎಸ್

ಭಯವೇ ?
ಯಾತರದ ಭಯ ?
ಕಡು ಕತ್ತಲೆಯು
ಆವರಿಸಿದ ನಿಟ್ಟಿರುಳು
ಬಳಸಿದ ನಿನ್ನ ತೋಳುಗಳು
ಹೇಳದೆ ಕೇಳದೆ
ತೊರೆದು ಹೋದರೆಂಬ ಭಯ !

ಅರಿತು ಅರಿಯದೆ ಮಾಡಿದ
ಸಣ್ಣ ಸಣ್ಣ
ತಪ್ಪುಗಳಿಗೆ
ನೀ ಕೋಪಗೊಂಡು
ಬೇರೆಯವರೆದು
ನಿಂದಿಸಿ ಶಿಕ್ಷಿಸಿ
ಮಾತು ಬಿಟ್ಟೆಯೆಂಬ ಭಯ!

ಏಳು ಜನ್ಮಗಳಿಗೂ
ಜೊತೆಯಿರುವೆನೆಂದು
ಹೇಳಿದವ
ಅಚಾನಕ್ಕಾಗಿ
ಮತ್ತಾರಿಗಾಗಿಯೋ
ನನ್ನ ಕಡೆಗಣಿಸಿದರೆ
ಆಗಬಹುದಾದ
ನೋವಿನ ಭಯ !

ನೋವು ನಲಿವುಗಳ
ಸಮನಾಗಿ ಹಂಚಿ ಕೊಳ್ಳುವ
ಮಾತು ಕೊಟ್ಟವ
ತನ್ನ ಸುಖದಲ್ಲೇ
ತಾ
ಕಳೆದು ಹೋದರೆ
ಏನು ಮಾಡುವುದೆಂಬ
ಭಯ !

ಜೀವದ ಪ್ರತಿ
ಉಸಿರು ಉಸುರುವ
ಹೆಸರು
ನನ್ನದಾಗಿರದೆ
ಇದ್ದಕ್ಕಿದ್ದಂತೆ
ಒಮ್ಮೆಗೆ ನನಗಷ್ಟೇ
ತಿಳಿಯುವಂತೆ
ಬೇರೆಯವರ ನೀ
ಕನಸಲಿ
ಕನವರಿಸಿದರೆ ಎಂದು
ಪದೇ ಪದೇ
ಕಾಡುವ ಭಯ !

ನಿನ್ನ ಪ್ರತಿ ಹೆಜ್ಜೆ
ಗುರುತಿಗೆ
ಹಿಂದಿಂದೆ ಬರುವ
ನನ್ನ ನೀ ಸಾಕಿನ್ನು
ಹಿಂದಿರುಗು
ಎಂದರೆ ನಾ
ಹೋಗುವುದಾದರೂ
ಎಲ್ಲಿಗೆ ಎಂದು
ಎಡೆಬಿಡದೆ ಕಾಡುವ
ಭಯ!

ಪ್ರೀತಿಗೆ ಹೊಸ
ಭಾಷ್ಯ ಬರೆದು
ನೀನಿರುವರೆಗೂ
ನಾನಿದ್ದು
ಕೊನೆವರೆಗೂ
ನೀ ಅದೇ ಪ್ರೇಮವ
ಉಳಿಸಿ
ಕೊಳ್ಳದೇ ಹೋಗುವ
ಭಯ! ಭಯ!!

‍ಲೇಖಕರು Admin

2 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading