ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಜುಳ ಸಿ ಎಸ್ ಕ್ವಿಟ್- ಇವಳೇನು ಅಹಲ್ಯೆಯಲ್ಲ

ಮಂಜುಳ ಸಿ ಎಸ್

ಇವಳೇನು ಅಹಲ್ಯೆಯಲ್ಲ
ಆದರೂ ಕಲ್ಲಾದಳು
ಎದುರಿನ ವಿಪತ್ತುಗಳ ಅನವರತ
ದಾಳಿಗೆ ಮತ್ತೂ
ಕಲ್ಲಾದಳು ಅದಾವ
ಶಾಪಮುಕ್ತಿಯೊಂದು
ಇವಳಿಗೀಗ ಬೇಕಿಲ್ಲ॥

ನೂರು ಇಂದ್ರರೂ
ಹಲವೂ ಚಂದ್ರರ
ಕಣ್ಣಿಗೆ ಇವಳು ಬಿದ್ದರೂ
ಹುಸಿ ಮೋಹದ ಬಲೆಗೆ
ಸಿಲುಕದೆ
ತಾನೇ ಕಲ್ಲಾದಳು
ನಿರಂತರ ಉರಿವ ಚಿತೆಗೆ ತಾನೇ
ಕಿಚ್ಚು ಹಚ್ಚಿ ನಿಂತಳಲ್ಲ ॥

ಸವಿ ಮಧುಪಕ೯
ತಂಪು ತಂಪು ಬೆಳದಿಂಗಳ
ತೊರೆದೂ ಅದೆಷ್ಟೋ
ವೈಭೋಗಳ
ಕಲ್ಲೇ ಅದಳಲ್ಲ
ನಿರಂತರ ಮೌನದ ಧ್ಯಾನಕ್ಕೆ
ನಿಂತಳಲ್ಲ
ಮತ್ತೀಗ ಯಾವ ಮುಕ್ತಿಯೂ
ಇವಳಿಗೆ ಬೇಕಿಲ್ಲ॥

ಹಲವು ಸುಳಿ
ಕೊನೆಯಿರದ
ಧಾವಂತದ ಈಜಿಗೆ ಬಿದ್ದು
ಜೀವ ಉಳಿಸಲು
ಸಾಗರದ ಆಳ ತುದಿಯ
ಸೇರಿ ತಾನೇ
ಕಲ್ಲಾದಳಲ್ಲ
ಇನ್ನೀಗ ರಾಮನಿಗೂ
ಕಾಣದಾದಳಲ್ಲ
ತಾನೇ ತನ್ನೊಳಗೆ
ಶಿಲೆಯಾದಳಲ್ಲ ॥

ಕೊನೆಯಿರದ 
ಜಗದ ಜಂಜಡಕೆ
ಸಿಲುಕದೆ
ಕನಸು ನನಸುಗಳ
ನಡುವೆ ಹೊಯ್ದಾಡದೆ
ಹುಸಿ ನಗುವ ಧರಿಸಿ
ಮುಗುಳ್ಗೆಯ ಸೂಸುವ
ಶಿಲೆಯಾದಲ್ಲ
ಆದರೂ ಇವಳು
ಅಹಲ್ಯೆಯಲ್ಲ॥

‍ಲೇಖಕರು Avadhi

17 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading