ಮಂಜುಳಾ ಬರೆದ ಎರಡು ಕವಿತೆಗಳು

ಅವ್ವ ನೆನಪಾದ್ಲು..

ಮಂಜುಳಹುಲಿಕುಂಟೆ


ಇಲ್ಲಿನ ಎಲ್ಲವೂ ನಿರ್ಜೀವ ನಿರ್ಬಾಹುಕ ಅನಿಸಿದಾಗಲೆಲ್ಲಾ
ನನ್ನವ್ವ ನೆನಪಾಗುತ್ತಾಳೆ..
ಅಲ್ಲೆಲ್ಲೊ ಗೌಡರ ಮನೆ ನಾಯಿ ಸತ್ತ ದಿವಸ
ಮಂಕರಿಯಲ್ಲಿ ಹೊತ್ತು ನಡೆದ
ಆ ಹಾದಿ-ಅನಾದಿಯ ಸಾಧನೆಯನ್ನು
ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಆಕೆಯ ಮುಗ್ಧತೆ
ಪ್ರತಿಯೊಂದಕ್ಕೂ ತುಡಿವ ಬಾವುಕತೆ ನೆನಪಾಗುತ್ತದೆ.
 
ಇಲ್ಲಿನ ಎಲ್ಲಾ ನಂಭಿಕೆಗಳಿಗೂ
ಪೆಟ್ಟು ಬಿದ್ದು ಏಳಲಾರದೇ ನಾನು ಕೊರಗುವಾಗಲೆಲ್ಲಾ
ಅತ್ತೆಯ ಕಾಟಕ್ಕೆ ಹಲ್ಲು ಮುರಿಸಿಕೊಂಡರೂ
ಊರಮಾರಿ ನನ್ನಜ್ಜಿಯನ್ನು ಮೆಚ್ಚಿಸಿಯೇ ಗೆದ್ದ
ಓರೆ-ಕೋರೆಯವರ ಬಾಯಿ ಚಪಲಕ್ಕೆ
ಮೈ ಮೂಳೆ ಸವೆಸಿದ
ನನ್ನವ್ವನ ಮಾಗದ ನೋವುಗಳ ನೆನೆದು ಉಸೂರಾಗುತ್ತೇನೆ..
 
ಹುಟ್ಟು ಅಹಂಕಾರಿ ನನ್ನಪ್ಪನನ್ನೂ ಹದ್ದುಬಸ್ತಿನಲ್ಲಿಟ್ಟು
ಸತತ ನಲವತೈದು ವರ್ಷಗಳಿಂದಲೂ
ಅವನೊಂದಿಗೆ ಬದುಕುಕಟ್ಟಿಕೊಂಡಿರುವ
ಅವಳ ಅಪರಿಮಿತ ಜೀವನ ಪ್ರೀತಿ
ಆತ್ಮಸ್ಥೈರ್ಯಗಳೂ ಇಂದಿಗೂ ಪ್ರಶ್ನೆಯಾಗಿ ನನ್ನ ಕಾಡುತ್ತದೆ..
 
ಇಲ್ಲಿನ ಎಲ್ಲಾ ಸೋಲುಗಳು ನನ್ನನ್ನ ಅಣಕಿಸುವಾಗ
ಇಡೀ ಊರಿಗೆ ಎದುರಾಗಿ ಕಚ್ಚೆಕಟ್ಟಿ ತನ್ನದೊಂದು ಸೂರ ನಿಲ್ಲಿಸಿದ
ಅವಳ ಆತ್ಮಾಭಿಮಾನ ನೆನೆದು ತತ್ತರಿಸಿದ್ದೇನೆ
 
ಸವೆದ ಕಾಲು ಸುಕ್ಕುಗಟ್ಟಿದ ಚರ್ಮವೂ
ಅವಳ ಬದುಕಿನಾಸೆಯ ಚಿರ ಚೆಲುವ ಅಳಿಸಲಾಗಿಲ್ಲ
ಹೆತ್ತ ಆರು ಮಕ್ಕಳನ್ನೂ ಸಾಕಿ ಸಲುಹಿದ
ಕಿತ್ತು ತಿನ್ನುವ ಬಡತನದಲ್ಲೂ ಬೀದಿಗೆ ಬಿಡದ
ನನ್ನವ್ವನ ತಾಯಿತನಕ್ಕೆ ಸವಾಲಾಗುವ ಯಾವ ಸಾಧನೆಯೂ
ಇಲ್ಲಿಲ್ಲ ಅನಿಸಿ ಮತ್ತೆ ಅವಳ ಮಡಿಲ ಸೇರಿ ಬಿಡಲು ಹಂಬಲಿಸಿದ್ದೇನೆ.
ಕತ್ತಲ ಹಾಡು

ಅವಳೊಂದು ಕತ್ತಲ ಹಾಡು
ಬಣ್ಣವೂ ಕಪ್ಪು ಬದುಕೂ ಕಪ್ಪು
ಬಣ್ಣದ ಕನಸುಗಳಿಗೂ ದೂರ ಉಳಿದ ಹುಡುಗಿ
 
ತೊರೆದ ಹಾದಿ, ಹಿರಿವ ಮೌನ
ಕೊಲ್ಲುವ ತಿರಸ್ಕಾರಗಳ ಕತ್ತಲ ರಾತ್ರಿಗಳಲ್ಲಿ ನೆನೆದು
ರಾಗವಾಗಿ ರೋಧಿಸುತ್ತಾಳೆ
ಬಿಳಿಯ ಹಾಳೆಗೂ ಬೇಸತ್ತು
ಕಪ್ಪು ಮಸಿಯಲಿ ತನ್ನ ನೋವುಗಳ ಕಾರುತ್ತಾಳೆ.
ಅವೆಲ್ಲವೂ ಕಪ್ಪು ಕವಿತೆಗಳಾಗುತ್ತವೆ
ಕರಾಳ ರಾತ್ರಿಗಳ ಜೊತೆ ಸೇರಿ
ಅವಳ ಕಣ್ಣ ಹನಿಗಳಾಗಿ ತುಳುಕುತ್ತವೆ
ಅಲ್ಲೊಂದು ಝರಿ ಹುಟುತ್ತದೆ
ಹರಿದ ಕಣ್ಣೀರು ಕಡಲಾಗುತ್ತದೆ..
ಅವಳ ಮಾಗದ ನೋವುಗಳು ಅಬ್ಬರಿಸುವ ಅಲೆಗಳಾಗುತ್ತವೆ..
ಆ ರಾತ್ರಿಗಳು ಬಿಕ್ಕುತ್ತಾ ಹರಿಯುತ್ತವೆ
ಹರಿವ ಹಾದಿಯ ತುಂಬಾ ಕರಿಛಾಯೆ.
ಬದುಕಿನ ಹಾದಿಗಳೆಲ್ಲಾ ಕಗ್ಗತ್ತಲಾಗುತ್ತವೆ
ಕಣ್ಣಿಗೂ ಕಪ್ಪು ಪೂರೆ
ಆ ರಾತ್ರಿಗಳು ಮೆಲ್ಲನೆ ಜಾರುತ್ತವೆ
ಅವಳ ಕತ್ತಲ ಹಾಡಿಗೆ ಬೇಸತ್ತು
ಬೆಳಕಿನ ಸೆರಗ ಹೊದ್ದಿಕೊಳ್ಳುತ್ತವೆ.
 

‍ಲೇಖಕರು G

February 18, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. siddalingamurthy

    “ಅವ್ವ ನೆನಪಾದ್ಲು..” ಕವಿತೆ ಲಂಕೇಶರ “ಅವ್ವ” ಕವಿತೆಯಷ್ಟೇ ತೀವ್ರವಾಗಿದೆ.

    ಪ್ರತಿಕ್ರಿಯೆ
  2. Anonymous

    Kavanagalu chennagive. “Badukinaaseya cheluvu…” Howdu!Jeevana preetiyu nija soundaryavu.
    Rohini Satya.

    ಪ್ರತಿಕ್ರಿಯೆ
  3. H Virupakshappa

    ಅವ್ವ ನೆನಪಾದ್ಲು ಕವನ ಹದವಾಗಿ ಮೂಡಿಬಂದಿದೆ
    ನನ್ನವ್ವ ನನಗೆ ತುಂಬಾ ಕಾಡುತ್ತಿದ್ದಾಳೆ
    ಅವಳು ಬಹಳ ದಿನ ಬದುಕುವುದೇ ಕಷ್ಟಕರವಾಗಿದೆ.
    ಅವಳಿಗೆ ಬೋನ್ಸ್ ಕ್ಯಾನ್ಸರ್ ಇದೆ ಆ ದೇವರೇ ಕಾಪಾಡಬೇಕು.

    ಪ್ರತಿಕ್ರಿಯೆ
  4. H Virupakshappa

    ಅವ್ವ ನೆನಪಾದ್ಲು ಕವನ ಹದವಾಗಿ ಮೂಡಿಬಂದಿದೆ
    ನನ್ನವ್ವ ನನಗೆ ತುಂಬಾ ಕಾಡುತ್ತಿದ್ದಾಳೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: