‘ಮಂಜಣ್ಣ ಉರುಫ್ ಕುರಟ್ಟಿ ಮಾಸ್ತರ’ ಮದುವೆಗೆ ಬನ್ನಿ

ಊರಲ್ಲಿ ಹುಡ್ರು ಸಾಮಾಜಿಕ ನಾಟಕ ಕಲೀತಿದಾರೆ. ನೀವೂ ನಾಟ್ಕಾ ಪಾಟ್ಕಾ ಮಾಡ್ತೀರಂತೆ… ಇಂದು ಇಲ್ಲೇ ಉಳ್ಕಂಬುಡಿ, ಸಂಜೆ ಟ್ರಯಲ್ ಮಾಡ್ಸಾಕೆ ನಾಟ್ಕದ ಮೇಷ್ಟ್ರೂ ಬತ್ತೌರೆ” ಅಂತ ಹೇಳಿ ಬರ್ರ್ ಅಂತ ಚೇತಕ್ ಗಾಡಿಯಲ್ಲಿ ಧೂಳೆಬ್ಬಿಸುತ್ತ ಹೋದರು ಚೇರ್ಮೆನ್ ಮಂಜಪ್ಪ.

ಐನೋರಹಳ್ಳಿ’ ಅನ್ನೋ ಊರು ಅದು. ಅಲ್ಲಿರುವ ಊರ ಸಂಘದ ಮುಖ್ಯಸ್ಥರು ಅವರು. ಹೀಗಾಗಿ ಚೇರ್ಮೆನ್ ಮಂಜಪ್ಪ ಅಂತ ಹೆಸರು ಅವರಿಗೆ. ಮಂಡ್ಯ ಜಿಲ್ಲೆ ಮತ್ತು ಚೆನ್ನರಾಯಪಟ್ಟಣದ ಗಡಿಯಲ್ಲಿತ್ತು ಆ ಹಳ್ಳಿ. ಊರಿಗೆ ಬಸ್ ಇರಲಿಲ್ಲ. ಅಲ್ಲಿಂದ 3 ಕಿ.ಮೀ.ನಡೆದರೆ ‘ಸಾಸಲು’ ಎಂಬ ಇನ್ನೊಂದು ಹಳ್ಳಿಸಿಗುತ್ತದೆ.

ಅಲ್ಲಿ ಶ್ರವಣಬೆಳಗೊಳಕ್ಕೆ ಹೋಗುವ ಅಪರೂಪಕ್ಕೊಮ್ಮೆ ಬರುವ ಮೆಟಡೋರು ಹತ್ತಿದರೆ ಆ ಕಡೆ ಕಿಕ್ಕೇರಿಗೋ ಅಥವಾ ಈ ಕಡೆ ಶ್ರವಣಬೆಳಗೊಳಕ್ಕೋ ಹೋಗಿ, ಅಲ್ಲಿಂದ ಬೇರೆ ಬಸ್ ನಲ್ಲಿ 15 ಕಿ.ಮೀ. ಮತ್ತೆ ಪಯಣಿಸಿದರೆ ಚನ್ನರಾಯಪಟ್ಟಣ ಸಿಗುವುದು.

1989
ರ ಕಾಲವದು. ಹೊಸದಾಗಿ ಆ ಊರಿಗೆ ಶಿಕ್ಷಕನಾಗಿ ಬಂದಿದ್ದೆ. 19ರ ಹರಯದಲ್ಲಿಯೇ ನೌಕರಿ ಸೇರಿದ ಕರಾವಳಿ ಊರಿನ ಹುಡುಗನಾಗಿದ್ದ ನನಗೆ ‘ಮಂಡ್ಯ ಕಡೆ ಫುಲ್ ರಾಜಕಾರಣ ಇರ್ತದೆ, ಹೀಗಾಗಿ ಊರಿಂದ ದೂರ ಇದ್ದಷ್ಟು ಒಳ್ಳೇದು’ ಅಂತ ಯಾರ್ಯಾರದೋ ಸಲಹೆ. ಸ್ಥಳಕ್ಕೆ ಮಾತ್ರವಲ್ಲ ನೌಕರಿಗೂ ಹೊಸಬನೇ ನಾನು.

ಹೀಗಾಗಿ ಅಂತಹಮಾತುಗಳನ್ನೇ ನಂಬಿ ಶ್ರವಣಬೆಳಗೊಳದ ಹತ್ತಿರ ಒಂದು ‘ರೂಂ’ ಮಾಡಿಕೊಂಡು, ಅಲ್ಲಿಂದ ಒಂದು ಸೈಕಲ್ ಮೇಲೆ ಐನೋರಹಳ್ಳಿಗೆ, ದಿನಕ್ಕೆ 16 ಕಿ.ಮೀ. ಪ್ರಯಾಣಿಸುತಿದ್ದೆ. ಶಾಲೆಗೆ ಸೇರಿ ಒಂದು ತಿಂಗಳು ಕಳೆದಿತ್ತೋ ಏನೋ ಅಷ್ಟೆ; ಅಷ್ಟರಲ್ಲಿ ಚೇರ್ಮನ್ನರ ಈ ಆಮಂತ್ರಣ!

ಆ ಊರಿನಲ್ಲಿ ನಾಟಕ ತಯಾರಿ ಶುರುವಾಗಿತ್ತು. ಸಹೋದ್ಯೋಗಿಗಳು ಆ ಊರಿನಲ್ಲಿ ನಾನು ನಾಟಕಪ್ರಿಯ ಅಂತ ಈ ಮೊದಲೇ ಸುದ್ದಿ ಹಬ್ಬಿಸಿದ್ದರಿಂದ ಚೇರ್ಮನ್ಮಂಜಪ್ಪ ‘ರಿಹರ್ಸಲ್’ ನೋಡೋಕೆ ಆಮಂತ್ರಿಸಿದ್ದರು.


ಹಿಂದೆಲ್ಲ ಮೂರೋ ನಾಲ್ಕೋ ವರ್ಷಕ್ಕೊಮ್ಮೆ ಸಂಗೀತಮಯ ಪೌರಾಣಿಕ ನಾಟಕ ಆಡ್ತಿದ್ದಂತ ಊರಂತೆ ಅದು. ಈಗ ಹೊಸ ತಲೆಮಾರಿನ ಯುವಕರ ಆಸೆಯಂತೆ ಅವರಿಗಾಗಿಯೇ ಮೊದಲ ಬಾರಿಗೆ ಸಾಮಾಜಿಕ ನಾಟಕ ಮಾಡುತ್ತಿದ್ದಾರೆ.

ಆ ಕಾಲಕ್ಕೆ ಆ ಹಳ್ಳಿಯವರಿಗೆ ಸಾಮಾಜಿಕ ನಾಟಕವೆಂದರೆ ‘ಅಲ್ಟ್ರಾ ಮಾಡರ್ನ್ ಡ್ರಾಮಾ’ ಅದು. ನಾವು ನಮ್ಮಲ್ಲಿ ‘ಹೊಸ ಅಲೆ ನಾಟಕ’ ಅಂತ ಕೆಲವಕ್ಕೆ ಕರ್ಕೋತಿದ್ವಲ್ಲ, ಹಾಗೆ. ಹೀಗಾಗಿ ಊರು ತುಸು ಹೆಚ್ಚೇ ಸಂಭ್ರಮಿಸುತ್ತಿತ್ತು.

ರಾತ್ರಿ 8ರ ಸುಮಾರು ಊಟವಾದ ನಂತರ, ಊರಿನವರೇ ಕಟ್ಟಿಕೊಂಡ ‘ಸಂಘದ ಮನೆ’ ಎಂಬ ಹೆಸರಿನ ಕಟ್ಟದಲ್ಲಿ ನಡೆಯುತ್ತಿರುವ ನಾಟಕದ ತಾಲೀಮಿಗೆ ಚೇರ್ಮೆನ್‍ರ ಜತೆಯಲ್ಲಿ ಪ್ರವೇಶ ಆಯ್ತು.

ಒಂದು ದೊಡ್ಡ ಜಗುಲಿ, ಮತ್ತೊಂದು ದೊಡ್ಡ  ಹಾಲ್, ಎರಡು ಕೊಠಡಿ ಇರುವ ಕಟ್ಟಡ ಅದು. ಮದುವೆ ಮುಂತಾದ ಶುಭ ಕಾರ್ಯಕ್ಕೂ, ಊರ ಸಭೆ ಸಮಾರಂಭಗಳಿಗೂ ನೆರವಾಗುವಂತಹ ಬಹುಪಯೋಗಿ ತಾಣ. ಊರಿನವರೇ ಮನೆಮನೆಯ ದೇಣಿಗೆ ಸಂಗ್ರಹಿಸಿ ಕಟ್ಟಿಕೊಂಡ ಕಟ್ಟಡವಂತೆ!

‘ಊರ ಬಡವರಿರಲಿ, ಸಿರಿವಂತರಿರಲಿ ಇಲ್ಲೇ ಮದುವೆ ಮಾಡೋದು ನಮ್ಮ ಪದ್ಧತಿ’ ಅಂದ್ರು ಮಂಜಪ್ಪ.  ಹಾಲ್ ಒಳಗೆ ಅದಾಗಲೇ ಸುಮಾರು 25ಕ್ಕೂ ಹೆಚ್ಚು ಜನ ಸೇರಿದ್ದರು; ತಾಲೀಮು ನೋಡಲು!!

ಆಗಲೇ ತಾಲೀಮು ಶುರುವಾಗಿತ್ತು. ‘ಚಿನ್ನದ ಗೊಂಬೆ’ ಎಂಬ ಕಂಪನಿ ಶೈಲಿಯ ನಾಟಕದ ತಾಲೀಮು ಅದು. ತಾಲೀಮು ಮಾಡಿಸಲು ಬಂದ ‘ನಿರ್ದೇಶಕ’ ಹಾರ್ಮೋನಿಯಂ ಮೇಷ್ಟ್ರು. ಅವರು ಲೆಗ್ ಹಾರ್ಮೋನಿಯಂ ತಂದಿಟ್ಟುಕೊಂಡು ಕೂತಿದ್ದರು.

‘ಎಂಟೇಗೌಡ’ ಮತ್ತು ‘ಕುರಟ್ಟಿ ಮಾಸ್ತರ’ ಎನ್ನುವ ಎರಡು ಹಾಸ್ಯದ ಪಾತ್ರಗಳು ಮಾತನಾಡುವ ದೃಶ್ಯವದು. ಅವರ ಸಂಭಾಷಣೆಯ ಮಧ್ಯೆ ಮಧ್ಯೆ ಹಾರ್ಮೋನಿಯಂ ಬಾರಿಸುವದು ನಿರ್ದೇಶಕನ ಕೆಲಸ ಆಗಿತ್ತು ಅಲ್ಲಿ.

ಪಾಪ ಅವರೂ ಪೌರಾಣಿಕ ನಾಟಕದಲ್ಲಿ ಗಳಿಗೆಗೊಮ್ಮೆ ಹಾಡುವ ಹಾಡಿಗೆ ಪೆಟ್ಟಿಗೆ ಬಾರಿಸಿ ಅಭ್ಯಾಸ ಆದವರು. ಹಾಸ್ಯದ ಮಾತಿಗೂ ಬಿಡದೇ ‘ಭಾರಿಸುತಿದ್ದರು’. ನಟರು ಅಕ್ಕ ಪಕ್ಕದಲ್ಲಿ ನಿಂತು ಹಾರ್ಮೋನಿಯಂ ಸದ್ದಿಗಿಂತ ಗಟ್ಟಿಯಾಗಿ ಮಾತನಾಡಲು ಪ್ರಯತ್ನಿಸುತ್ತಿದ್ದರು.


ತಾಲೀಮು ನೋಡ ಬಂದ ಜನರಿಗೆ ಅವರು ಏನು ಹೇಳುತ್ತಿದ್ದರೆಂಬುದು ಕೇಳಿಸದಿದ್ದರೂ ತುಂಬ ಕುತೂಹಲದಿಂದ ಆಲಿಸಲು ಪ್ರಯತ್ನಿಸುತ್ತಿದ್ದರು. ಮಧ್ಯದ ಚಹಾ ಬಿಡುವಿನಲ್ಲಿ ಚೇರ್ಮೆನ್ ನನ್ನ ಪರಿಚಯವನ್ನು ನಾಟಕದ ಮೇಷ್ಟ್ರಿಗೆ ಮಾಡಿಕೊಟ್ಟರು.

ಅವರು ನನ್ನಲ್ಲಿ “ನೀವೂ ಸ್ವಲ್ಪ ಹೇಳ್ಕೊಡಿ, ನೋಡೋಣ, ನಿಮ್ ಕಡೆ ಹೆಂಗೆ ಮಾಡ್ತಾರೆ ಅಂತ” ಅಂದರು. ನೋಡೋಕೆ ಬಂದವನು ಆಡೋ ಹಾಗೆ ಆಯ್ತು! ಅನಾಯಾಸವಾಗಿ ಒದಗಿದ ಸಂದರ್ಭವದು!

ಕಾಲೇಜಿನಲ್ಲಿ ನಾಟಕ ಮಾಡಿಕೊಂಡು ಕುಣಿಯುತ್ತಿದ್ದ, ಬಿ.ಎ ಕಲಿಯುತ್ತಿದ್ದ ಪೋರನಾಗಿದ್ದವನಿಗೆ ಇದ್ದಕ್ಕಿದ್ದಂತೆ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ನೇಮಕಾತಿ ಪತ್ರ ಬಂದಾಗ ದಿಗಿಲಾಗಿತ್ತು. ಪಿ.ಯು.ಸಿ ಜತೆಗೇ ಟಿ.ಸಿ.ಎಚ್ ಪದವಿ ದೊರಕಿದ್ದ ಕಾರಣ ನಾನು ಶಿಕ್ಷಕನಾಗಿಬಿಟ್ಟಿದ್ದೆ.

ಆ ಸಮಯದಲ್ಲಿ ಸ್ನೇಹಿತರೊಡನೆ ಸೇರಿ ಕಟ್ಟಿದ್ದ ‘ಹೆಣದ ಬಟ್ಟೆ’ ನಾಟಕ ದಕ್ಷಿಣ ಭಾರತ ಮಟ್ಟದ ಯುವಜನೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದು ಡೆಹರಾಡೂನಿನಲ್ಲಿ ನಡೆಯಲಿದ್ದ ರಾಷ್ಟ್ರಮಟ್ಟದ ಉತ್ಸವಕ್ಕೂ ಆಯ್ಕೆಯಾಗಿತ್ತು.

ಅದನ್ನು ಬಿಟ್ಟು ಹೊರಡುವುದು ತುಂಬ ಸಂಕಟದ ಮಾತೇ ಆಗಿತ್ತು. ‘ಇಷ್ಟು ಸಣ್ಣ ವಯಸ್ಸಿಗೆ ಸರ್ಕಾರಿ ಉದ್ಯೋಗ ಅಂದ್ರೆ ಹುಡುಗಾಟಿಕೆಯಾ? ನಡೆ’ ಎಂದವರೇ ಹೆಚ್ಚು. ನಮ್ಮ ಕಾಲೇಜಿನಲ್ಲಿ ದುಡಿಯುತ್ತಿದ್ದ ಅರೆಕಾಲಿಕ ಉಪನ್ಯಾಸಕರಂತೂ ‘ಈ ವಯಸ್ಸಿಗೇ ನಮಗಿಂತ ಹೆಚ್ಚು ಸಂಬಳ ಬರುತ್ತದೆ ಹೋಗುವುದೇ ಒಳಿತು’ ಅಂದಿದ್ದರು.

ಕಾಲೇಜನ್ನೂ, ನಾಟಕವನ್ನೂ, ಸ್ನೇಹಿತರನ್ನೂ ತುಂಬ ಕಷ್ಟಪಟ್ಟು ಬಿಟ್ಟು ಬಂದವನಿಗೆ ಇದ್ದಕ್ಕಿದ್ದಂತೇ ಸೇರಿದ ಊರಿನಲ್ಲೊಂದು ನಾಟಕದ ಸಂದರ್ಭ! ಅದೂ ಬಂದ ಹೊಸತರಲ್ಲೇ! ಕಂಪನಿ ನಾಟಕ ನೋಡೋದ್ರಲ್ಲಿ ಫಂಟನಾಗಿದ್ದ, ಆಧುನಿಕ ನಾಟಕಗಳ ಜಗತ್ತಿನಲ್ಲಿ ಓಡಾಡಲು ಶುರುಮಾಡಿದ್ದವನಿಗೆ ನಿಜಕ್ಕೂ ಆ ಹಳ್ಳಿಯಲ್ಲಿ ‘ಚಿನ್ನದಗೊಂಬೆ’ಯೇ ದೊರಕಿದಂತಾಗಿತ್ತು!

ಕೈಯಲ್ಲಿ ನಾಟಕದ ಪುಸ್ತಕ ಹಿಡಿದು ಕುರಟ್ಟಿಮಾಸ್ತರನ ಮತ್ತು ಎಂಟೇಗೌಡನ ದೃಶ್ಯವನ್ನು ಎಲ್ಲ ಆಂಗಿಕ ವಾಚಿಕದ ತಾಕತ್ತು ಹಾಕಿ ಏಕಪಾತ್ರಾಭಿನಯದಂತೆ ಅಭಿನಯಿಸಿಬಿಟ್ಟೆ. ಅಷ್ಟೆ!

ಮಾರನೇ ದಿನವೇ ಶ್ರವಣಬೆಳಗೊಳದಲ್ಲಿಯ ನನ್ನ ಬಾಡಿಗೆಯ ರೂಮಿನಲ್ಲಿದ್ದ ಹಾಸಿಗೆ, ಟ್ರಂಕುಗಳೆಲ್ಲ ಚಕ್ಕಡಿಗಾಡಿಯ ಮೆರವಣಿಗೆಯಲ್ಲಿ ಐನೋರಹಳ್ಳಿಯ ಚೇರ್ಮೆನ್‍ರ ಮನೆಗೆ ಶಿಫ್ಟ್ ಆಯಿತಲ್ಲದೇ, ಮುಂದೆ ಆ ಊರಿನಲ್ಲಿರುವವರೆಗೂ ಊಟ ತಿಂಡಿ ಎಲ್ಲವೂ ಅವರ ಮನೆಯಲ್ಲೇ ಆಗತಕ್ಕದ್ದೆಂದು ತೀರ್ಮಾನವೂ ಬಂದಾಯಿತು; ನನ್ನ ಅಭಿಪ್ರಾಯಕೇಳುವಗೋಜಿಗೆ ಯಾರೂಹೋಗಲಿಲ್ಲ!

ನಾಟಕದ ಹಾರ್ಮೋನಿಯಂ ಮೇಷ್ಟ್ರು ‘ನನಗೆ ಈ ಬಗೆಯ ನಾಟಕ ಕಷ್ಟವಾಗಿರುವುದರಿಂದ ಸಂಗೀತ ನೀಡಲು ಬರುತ್ತೇನೆ, ಈಗ ನಿಮ್ಮೂರ ಮೇಷ್ಟ್ರಿಂದಲೇ ನಾಟಕ ಕಲಿತುಕೊಳ್ಳಿ’ ಎಂದು ಬಿಟ್ಟಿದ್ದರಂತೆ.  ಹೀಗೆ ನಾನು ಐನೋರಳ್ಳಿಯ ‘ನಾಟಕದ ಮೇಷ್ಟ್ರಾದೆ!

ದಿನವೂ ನಾಟಕ ರಿಹರ್ಸಲ್ ನೋಡಲು ಕಿಕ್ಕಿರಿದು ಜನ! ಮುದುಕರಂತೂ ಮೊಮ್ಮಕ್ಕಳೊಡನೆ ಚಾಪೆ ಸಹಿತ ತಾಲೀಮು ಕೊಠಡಿಗೆ ಸಮಯಕ್ಕೆ ಮೊದಲೇ ಬಂದು ಕೂರುತ್ತಿದ್ದರು. ತಾಲೀಮು ಸ್ವಲ್ಪ ತಡವಾದರೂ ಅವರಿಂದ ಬೈಗಳುಗಳು ಸಹಸ್ರನಾಮದಂತೇ ಉದುರುತ್ತಿದ್ದವು!

ಪ್ರತಿ ದಿನ ಪ್ರೇಕ್ಷಕರ ಮುಂದೆಯೇ ನಮ್ಮ ನಾಟಕದ ತಾಲೀಮು. ನಾಟಕದ ಪ್ರದರ್ಶನದ ಆಗುವಷ್ಟರಲ್ಲಿ ಊರಿನ ಬಹುತೇಕ ಎಲ್ಲರೂ ಆ ನಾಟವನ್ನು ಕನಿಷ್ಠ ಹತ್ತುಸಾರಿಯಾದರೂ ನೋಡಿರಬೇಕು. ಬಹತೇಕರಿಗೆ ನಾಟಕದ ಎಲ್ಲ ಮಾತುಗಳೂ ಕಂಠಪಾಠ ಆಗಿಹೋಗಿದ್ದವು.

ಕೆಲವು ಮಂದಿಯಂತೂ ತಾಲೀಮು ನೋಡಿ ನೋಡಿ ಅವರೇ ನನಗಿಂತ ಮೊದಲು ನಟರಿಗೆ ಸಲಹೆಕೊಡಲು ಆರಂಭಿಸಿರುವುದೂ ಉಂಟು. ಈ ನಡುವೆ ನಾಟಕದಲ್ಲಿನ ಖದೀಮ ಪಾತ್ರಗಳ ಹೆಸರನ್ನು ಊರಲ್ಲಿಯ ಕೆಲ ಜಿಪುಣರಿಗೆ ಗುಟ್ಟಾಗಿ ಇಟ್ಟುಕೊಂಡು ಪಡ್ಡೆ ಹುಡುಗರು ಮರೆಯಲ್ಲಿಯೇ ನಗುವಸುಖ ಅನುಭವಿಸತೊಡಗಿದ್ದರು.

ಅಂತೂ ಊರ ಬಹುತೇಕ ಜನ ನಾಟಕದ ಭಾಗವೇ ಆಗಿ ಹೋದರು. ಹದಿನೈದು ದಿವಸ ಮೊದಲೇ ನಾಟಕ ಆಡುವ ಜಾಗಕ್ಕೆ ಚಪ್ಪರ ಹಾಕಲಾಯ್ತು. ತಾವೂ ಈ ರಂಗಕ್ರಿಯೆಯಲ್ಲಿ ಪಾಲುದಾರರು ಎಂಬುದೇ ಅನೇಕರಿಗೆ ಘನತೆಯ ಸಂಗತಿಯಾಗಿಯೂ ಮಾರ್ಪಟ್ಟಿತ್ತು.! ನಾಟಕದ ದಿನ ಊರಲ್ಲಿ ಜಾತ್ರೆಗಿಂತ ಹೆಚ್ಚು ಜನ. ನಟರ ನೆಂಟರಿಷ್ಟರೆಲ್ಲ ಊರ ತುಂಬ ತುಂಬಿ ಹೋಗಿದ್ದರು. ಸಾವಿರಕ್ಕೂ ಮಿಕ್ಕ ಜನ!


ನಾಟಕದಲ್ಲಿ ಪಾತ್ರವಹಿಸಿದ ಅನೇಕರಿಗೆ ಅವರ ಪಾತ್ರಗಳ ಹೆಸರೇ ಖಾಯಂ ಆಯಿತು. ಮೊದ ಮೊದಲು ತಮಾಶೆಗೆಂಬಂತೆ ಶುರುವಾದ ಈ ನಾಮಕರಣದ ಆಟ ಮುಂದೆ ಖಾಯಂ ಆಗಿಯೇ ಹೋಯಿತು. ಮುಂದಿನ ವರ್ಷಗಳಲ್ಲಿ ಅವರು ಬೇರೆ ಯಾವುದೇ ನಾಟಕ ಮಾಡಿದರೂ ಈ ನಾಟಕದ ಹೆಸರು ಮರೆಯಾಗಲಿಲ್ಲ.

‘ಕುರಟ್ಟಿ ಮಾಸ್ತರ’ನ ಪಾತ್ರವಹಿಸಿದ್ದ ಮಂಜಣ್ಣಗೌಡ ಎಂಬ ಯುವಕ ನಾಟಕವಾದ ಎರಡು ವರ್ಷಗಳ ನಂತರ ಮದುವೆಯಾದ. ಅವನ ಲಗ್ನಪತ್ರಿಕೆಯಲ್ಲಿ ಆತ ಅವನ ಹೆಸರನ್ನು ‘ಮಂಜಣ್ಣ ಉರುಫ್ ಕುರಟ್ಟಿ ಮಾಸ್ತರ’ ಅಂತ ಹಾಕಿಸಿಕೊಂಡಿದ್ದ!

ಆ ಒಂದು ನಾಟಕ ನನಗೆ ರಂಗಭೂಮಿಯ ಹಲವು ಪಾಠಗಳನ್ನು ಕಲಿಸಿತು. ನಾಟಕವೆಂದರೆ ಅದೊಂದು ಮಹಾರಹಸ್ಯ ವಿದ್ಯೆ; ಘನಂದಾರಿ ಕಸುಬು; ಅದರ ತಾಲೀಮು ಮುಚ್ಚಿದ ಬಾಗಿಲಿನಲ್ಲಿಯೇ ಇರತಕ್ಕದ್ದು; ಇವೇ ಮೊದಲಾದ ಹಲವು ಮಿಥ್ಯೆಗಳನ್ನು ಕಳಚಿತು. ಸಮೂಹದ ಸೌಂದರ್ಯಾತ್ಮಕ ಅಭಿಪ್ಸೆಯನ್ನು ಗುರುತಿಸುವ ಬಗೆ ನಿಧಾನಕ್ಕೆ ಅರ್ಥವಾಗತೊಡಗಿತು.

ನಾನು ಅವರ ಬದುಕಿನ ಭಾಷೆ ಕಲಿಯತೊಡಗಿದೆ. ಅವರ ಹಬ್ಬ ಆಚರಣೆಯ ಭಾಗವಾದೆ. ನನ್ನ ಹಳೆಯ ಚಹರೆ ಮಾಯವಾಗ ತೊಡಗಿತು, ಊಟದಲ್ಲಿ; ಕೂಟದಲ್ಲಿ; ಆಟದಲ್ಲಿ; ಏನೆಲ್ಲದರಲ್ಲಿ! ಮೊದಲು ನನ್ನ ಮೂಲ ಹೆಸರು ಮರೆಯಾಗಿ ನಾನು ‘ನಾಟಕದ ಮೇಷ್ಟ್ರು’ ಅಂತ ಕರೆಸಿಕೊಳ್ತಿದ್ದೆ.

ಈಗ ಆ ಹೆಸರೂ ದೂರಾಗಿ ‘ಐನೋರಹಳ್ಳಿ ಮೇಷ್ಟರು’ ಅಂತ ಹೆಸರಾದೆ; ನಾನು ಐನೋರಹಳ್ಳಿಯವನಾಗಿಬಿಟ್ಟಿದ್ದೆ! ಊರ ಸಂಘದ ಮನೆಯ ಯುವಕರ ‘ಅಡ್ಡೆ’ಗೆ ಅನಧಿಕೃತ ಅಧ್ಯಕ್ಷನೂ ಆಗಿಬಿಟ್ಟಿದ್ದೆ! ನಮ್ಮ ನಾಟಕತಂಡ ವಾಲೀಬಾಲ್, ಕಬಡ್ಡಿ ಆಟದ ಗುಂಪಾಗಿಯೂ, ರಾತ್ರಿ ಹೊತ್ತು ಹಲಸಿನ ಹಣ್ಣು ಜೇನು ಇಳಿಸಲು ಬಯಲೆಲ್ಲ ಸುತ್ತುವ ‘ಗ್ಯಾಂಗ್’ ಆಗಿಯೂ, ಅಕ್ಷರ ಆಂದೋಲನದ ಸ್ವಯಂ ಸೇವಕರ ತಂಡವಾಗಿಯೂ ಹೀಗೆ ಬಹುರೂಪಿಯಾಯಿತು.

ನಾಟಕ ಕಟ್ಟುವುದೆಂದರೆ ಅದು ಬದುಕು ಕಟ್ಟುವ ಕಲೆಯೂ ಹೌದು. ನಾಟಕದ ಆಡುತ್ತಿರುವ ಸಮೂಹದ ಬದುಕಿನ ಜತೆ ಬೆರೆಯಲಾರದ ಸಂದರ್ಭದಲ್ಲೆಲ್ಲ ನಾಟಕ ಪ್ರದರ್ಶನ ಯಾಂತ್ರಿಕಗೊಳ್ಳುತ್ತದೆ. ರಂಗಭಾಷೆ ರೂಪುಗೊಳ್ಳುವುದು ಅದನ್ನಾಡುವ ಆ ಜನಮನದ ಭಾಷೆಯ ಸಾಹಚರ್ಯದಿಂದಲೇ. ಅದಕ್ಕೆಂದೇ ನಾಟಕ ‘ಕಲಿಯುವುದು’ ಅನ್ನುತ್ತೇವೇನೊ! ನಾನು ಆ ಹಳ್ಳಿಯಲ್ಲಿ ಅವರ ಭಾಷೆಯನ್ನು, ತನ್ಮೂಲಕ ರಂಗಭಾಷೆಯನ್ನು ಕಲಿಯಲು ಪ್ರಯತ್ನಿಸತೊಡಗಿದ್ದೆ.

ಮುಂದಿನ ವರ್ಷ ಇನ್ನೊಂದು ಕಂಪನಿ ಶೈಲಿಯ ನಾಟಕ ಆಡಿದೆವು. ‘ಮುದುಕನ ಮದುವೆ’. ತುಂಬ ಜನಪ್ರಿಯವಾಯಿತು. ಅಷ್ಟರಲ್ಲಿ ನಮ್ಮೆಲ್ಲರೊಳಗೆ ಬೆಸೆದ ಬಾಂಧವ್ಯ, ಮೂಡಿದ ಅರಿವು ಇವೆಲ್ಲದರಿಂದಾಗಿ ಹೊಸರಂಗಭೂಮಿಯ ಚಟುವಟಿಕೆಗೆ ರಂಗ ಸಿದ್ಧವೂ ಆಗಿತ್ತು.

ಆ ಸಮಯಕ್ಕೆ ಸರಿಯಾಗಿ ನಮ್ಮ ಶಾಲೆಯ ಹೊಸ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಒದಗಿ ಬಂದಿತ್ತು. ಹಗಲು ಹೊತ್ತಿನಲ್ಲಿ ಉದ್ಘಾಟನೆ ಇರುವುದರಿಂದ ಅಲ್ಲಿ ಶಾಲೆಯ  ಮುಂದೆ ಬೀದಿನಾಟಕ ಮಾಡೋಣ ಅಂತ ಯೋಚಿಸಿದೆವು. ಅವರಿಗದು ಹೊಸ ಅಭಿವ್ಯಕ್ತಿಯ ಪ್ರಕಾರ.

ಉತ್ಸಾಹದಿಂದ ಪಾಲ್ಗೊಂಡರು. ‘ನಾವೆಲ್ಲ ಒಂದು’ ಎಂಬ ಬೀದಿ ನಾಟಕ ಪ್ರಯೋಗಗೊಂಡಿತು. ಕಾರ್ಯಕ್ರಮಕ್ಕೆ ಬಂದಿದ್ದ ಆಚೀಚಿನ ಊರ ಯುವಕರು, ಶಿಕ್ಷಕರು ಮುಂದೆ ನಾವೂ ಹೊಸಬಗೆಯ ನಾಟಕಕ್ಕೆ ಸೇರುತ್ತೇವೆ. ನಮಗೂ ಕಲಿಸಿಕೊಡಿ ಎಂದರು.ಅಕ್ಷರ ಆಂದೋಲನ ಆರಂಭವಾದ ಸಂದರ್ಭವದು. ಹೀಗಾಗಿ ‘ಹೆಬ್ಬೆಟ್ಟು ಅನ್ನುವ ನಾಟಕ ಪ್ರದರ್ಶನಕಂಡಿತು.

ಆ ಊರಿನಲ್ಲಿ ನಾವೆಲ್ಲ ಸೇರಿ ಆಡಿದ ಕೊನೆಯ ನಾಟಕ ಬರಗೂರುರಾಮಚಂದ್ರಪ್ಪಅವರ  ‘ಕಪ್ಪುಹಲಗೆ.’ ನಾನು ಆ ಊರಿನ ಕಿರಿಯ ಪ್ರಾಥಮಿಕ ಶಾಲೆಗೆ ‘ಕಪ್ಪುಹಲಗೆ’ ಯೋಜನೆಯಡಿಯಲ್ಲೇ ಶಿಕ್ಷಕನಾಗಿ ನೇಮಕ ಆಗಿದ್ದೆ!

ಇಂದಿಗೆ 30 ವರ್ಷವಾಯ್ತು; ನಂಟುತನ ಮುಂದುವರಿಯುತ್ತಲೇ ಇದೆ; ಸ್ನೇಹಿತರಿಗೆ ಹೆಣ್ಣು ನೋಡಲೆಂದೋ, ಮದುವೆ ಮಾಡಿಸಲೆಂದೋ ಹೀಗೆ. ನಾಟಕದ ‘ಎಂಟೇಗೌಡರು’ ಈಗಲೂ ಫೋನ್ ಮಾಡಿ ಆರೋಗ್ಯ ವಿಚಾರಿಸ್ತಾರೆ. ಚೇರ್ಮೆನ್ ಮಂಜಪ್ಪನವರ ಮೊಮ್ಮಕ್ಕಳೊಂದಿಗೂ ಸಂಬಂಧ ಅಬಾಧಿತವಾಗಿ ಮುಂದುವರಿದಿದೆ.ರಂಗಸಂಬಂಧ ಅದು. ಸುಲಭಕ್ಕೆ ಕಡಿದು ಹೋಗದು!!

‍ಲೇಖಕರು ಶ್ರೀಪಾದ್ ಭಟ್

August 22, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. KIRAN BHAT

    ಕೊನೆಗೂ ನಾಟ್ಕ ಅನ್ನೋದು ಸಮುದಾಯದ್ದೇ ಆಗಿಬಿಡೋದು ಹೀಗೇ.
    ಚಿನ್ನದಂತಾ ಬರಹ.

    ಪ್ರತಿಕ್ರಿಯೆ
  2. ಅರೆಹೊಳೆ ಸದಾಶಿವ ರಾವ್

    “ನಾಟಕ ಕಟ್ಟುವುದೆಂದರೆ ಅದು ಬದುಕು ಕಟ್ಟುವ ಕಲೆಯೂ ಹೌದು. ನಾಟಕದ ಆಡುತ್ತಿರುವ ಸಮೂಹದ ಬದುಕಿನ ಜತೆ ಬೆರೆಯಲಾರದ ಸಂದರ್ಭದಲ್ಲೆಲ್ಲ ನಾಟಕ ಪ್ರದರ್ಶನ ಯಾಂತ್ರಿಕಗೊಳ್ಳುತ್ತದೆ” ಈ ಮಾತುಗಳು ತಮ್ಮ ಬರಹದ ಒಟ್ಟಂದದ ಮುಕುಟದಂತನಿಸಿತು ಸರ್. ನಿಮ್ಮ ನಾಟಕಗಳ ಅಭಿಮಾನಿಯಾಗಿದ್ಧ…ಈಗ ಬರಹಗಳಿಗೂ!

    ನಿಮ್ಮ ಈ ಅನುಭವದ ಗುಚ್ಚಗಳೆಲ್ಲಾ ಸಂಕಲ‌ನವಾಗಿ ಮುಂದೆ ರಂಗಾಭ್ಯಾಸಿಗಳಿಗೆ ಮಾಹಿತಿಯ ಕಣಜವಾಗುವುದರಲ್ಲಿ ಸಂದೇಹವಿಲ್ಲ. ಅಭಿನಂದನೆಗಳು
    ಅರೆಹೊಳೆ ಸದಾಶಿವ ರಾವ್

    ಪ್ರತಿಕ್ರಿಯೆ
  3. ವಿಜಯವಾಮನ

    ಎಂಥಾ ಸರಾಗ ಬರೆಹ ! ” ಸರಾಗ ” ಪದದ ಎಲ್ಲ ಧ್ವನಿಗಳಿಂದಲೂ ಅರ್ಥೈಸಿಕೊಳೊಳ್ಳಿ.

    ಪ್ರತಿಕ್ರಿಯೆ
  4. Manjukodagu

    ಶ್ರೀಪಾದ ಭಟ್ಟರೇ,
    ಇಂಥಾ ಅನುಭವಗಳಿಂದ ವಂಚಿತನಾದೆ ಅನ್ನೋ ಹೊಟ್ಟೆಕಿಚ್ಚು ನಿಮ್ಮ ಮೇಲೆ. ಹಳ್ಳಿ ಸುತ್ತಾಡಿ, ಜನಬಳಕೆ- ಪರಿಚಯಮಾಡ್ಕೊಂಡು, ಆ ಊರಲ್ಲೇ ನಾಟಕ ಮಾಡಿಸಿ ನಾಟಕದ ಮೇಸ್ಟ್ರಾದ – ಈ ನಿಮ್ಮ ಲೇಖನ ಇಷ್ಟ ಆಯ್ತು. ಇದೆಲ್ಲಾ ಕಾಲದ ಸ್ಮೃತಿ. ಇಂಥಾ ಅನುಭವ ಆ ಕಾಲ – ಮತ್ತು ಆ ಪರಿಸ್ತಿತಿಯಿಂದ ಮಾತ್ರ ಹುಟ್ಟಲು ಸಾಧ್ಯ. ಧನ್ಯವಾದಗಳು.
    ಮಂಜುಕೊಡಗು

    ಪ್ರತಿಕ್ರಿಯೆ
  5. Kavya Kadame

    ಬ್ಯುಟಿಫುಲ್ ಸರ್. ನಾಟಕದ ತಾಲೀಮಿನ ವಿವರಗಳು ಆಕರ್ಷಕವಾಗಿವೆ. ಫೋಟೋಗಳು ಪೂರಕವಾಗಿ ಆ ಕಾಲದ ಕಥೆಗಳನ್ನು ಹೇಳುತ್ತವೆ. ಪ್ರೇಕ್ಷಕರಿಗೆ ನಾಟಕದ ಸಂಭಾಷಣೆಗಳೆಲ್ಲ ಕಂಠಪಾಠ ಆಗಿಹೋಗುವುದು ವಿಶೇಷವಾಗಿದೆ. ಆದರೂ ಮತ್ತೆ ಮತ್ತೆ ಬಂದು ಅದೇ ನಾಟಕವನ್ನು ನೋಡುವುದು ನಾಟಕ ಆಡುವ ಪ್ರಕ್ರಿಯೆಯ ಚಲನಶೀಲತೆಗೆ ಒಂದು ಪ್ರಮಾಣ. 

    ಪ್ರತಿಕ್ರಿಯೆ
  6. ರಾಘವೇಂದ್ರ ಬಿ ಎಂ ಉಪನ್ಯಾಸಕರು ಮೈಸೂರು

    ನಾಟಕದ ನಾಟಿ ಮಾಡಿ ಪಲ್ಲ ಪಲ್ಲ ಬೆಳೆ ಬೆಳೆದು ಸುಗ್ಗಿಯ ಸಡಗರದಂತೆ ನಿಮ್ಮ ಅನುಭವ, ಬರಹ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: