ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭೂಮಿಗೆ ಮನುಷ್ಯರು ಬಂದ ಕಥೆ

ನಿನ್ನೆ ಭೂದಿನ. ಆ ದಿನದ ನೆನಪಿನಲ್ಲಿ

ಭೂಮಿಗೆ ಮನುಷ್ಯರು ಬಂದ ಕಥೆ

ಮಲ್ಲಿಕಾರ್ಜುನ ಹೊಸಪಾಳ್ಯ

ಭೂಮಿಗೆ ಮನುಷ್ಯರು ಬಂದ ಬಗ್ಗೆ ನಮಮ್ಮ ಒಂದು ಕಥೆ ಹೇಳುತ್ತಿತ್ತು. ಯಾರ ಮನೆಯಲ್ಲಾದರೂ ಮಗು ಹುಟ್ಟಿದಾಗ, ಮಗು ನೊಡಲು ಹೋಗುವಾಗ ಅಥವಾ ಹೆಸರಿಡುವ ಸಂದರ್ಭದಲ್ಲಿ ಈ ಕಥೆಯನ್ನು ಅಕ್ಕ-ಪಕ್ಕ ಇದ್ದವರಿಗೆ ಹೇಳುವುದು ಆಕೆಯ ಅಭ್ಯಾಸ. ನಾನಂತೂ ಬೇಕಾದಷ್ಟು ಸಲ ಇದನ್ನು ಕೇಳಿದ್ದೇನೆ. ತುಂಬಾ ವಿಚಿತ್ರವೂ, ವಿಶಿಷ್ಟವೂ ಆದ ಕಥೆ. ಭೂದಿನದ ನೆನಪಿಗಾಗಿ ಆ ಕಥೆಯನ್ನು ಆಕೆಯ ಆಕ್ಸೆಂಟಿನಲ್ಲೇ ಬರೆಯುವ ಪ್ರಯತ್ನ ಮಾಡಿದ್ದೇನೆ.

ಒಂದಾನೊಂದು ಕಾಲದಲ್ಲಿ ಈ ಭೂಮಿ ಮ್ಯಾಲೆ ನರ ಮನುಶ್ಯರೇ ಇರಲಿಲ್ವಂತೆ. ಬರೇ ಗಿಡ, ಮರ, ಕಲ್ಲು, ಗುಂಡು ಇದ್ವಂತೆ. ಇಂಗೇ ಇರುವಾಗ ಒಂದಿನ ಬ್ರಹ್ಮ ಇದ್ಕಂಡು ಕುಸಾಲಿಗೆ ಅಂತ ಒಂದು ಮುದ್ದೆ ಜೇಡಿ ಮಣ್ಣು ತಗಂಡು ಎರಡು ಗೊಂಬೆ ಮಾಡಿದ್ನಂತೆ. ನೋಡೋಕೆ ಎರಡೂ ಒಂದೇ ಥರ ಇದ್ವಂತೆ. ಹೆಚ್ಚೂ ಇಲ್ಲ, ಕಮ್ಮೀನು ಇಲ್ಲ. ಎರಡನ್ನೂ ತೂಕಕ್ಕೆ ಹಾಕ್ದಾಗ ಒಂದು ಗೊಂಬೆ ರವಷ್ಟು ಜಾಸ್ತಿ ತೂಕ ಇತ್ತಂತೆ. ಎರಡನ್ನೂ ಒಂದೇ ತೂಕ ಇರೋ ಹಂಗೆ ಮಾಡ್ಬೇಕು ಅಂತ ಶ್ಯಾನೆ ಯೋಚ್ನೆ ಮಾಡಿದ್ನಂತೆ ಬ್ರಹ್ಮ. ಯಾಕಂದ್ರೆ ಹೊಸಾ ಮಣ್ಣು ತಗಣಂಗಿಲ್ಲ, ಗೊಂಬೆ ಮಾಡಿರೋ ಜೇಡಿ ಮಣ್ಣು ಎಸೆಯಂಗಿಲ್ಲ. ಆವಗ ತೂಕ ಜಾಸ್ತಿ ಇದ್ದ ಬೊಂಬೆ ತೊಡೆ ಸಂದೀಲಿ ಕೊರೆದು ಚೂರು ಮಣ್ಣನ್ನು ತಗಂಡು ಇನ್ನೊಂದು ಗೊಂಬೆ ತೊಡೆ ಸಂದಿಗೆ ಅಂಟಿಸಿದನಂತೆ.

ಮತ್ತೆ ತೂಕಕ್ಕೆ ಹಾಕಿ ನೋಡಿದರೆ ಈ ಗೊಂಬೆ ತೂಕ ಜಾಸ್ತಿ ಆಗಿಬಿಟ್ಟಿತ್ತಂತೆ. ತಿರಗಾ ಯೋಚ್ನೆ ಮಾಡಿ ಈ ಗೊಂಬೆಗೆ ಅಂಟಿಸಿದ ಮಣ್ಣಿನಲ್ಲಿ ರವಷ್ಟು ತೆಗೆದು ಎರಡು ಸಣ್ಣ ಉಂಡೆ ಮಾಡಿ ಮೊದಲನೆ ಗೊಂಬೆ ಎದೆಗೆ ಅಂಟಿಸಿದನಂತೆ. ಈ ಸಲ ಎರಡೂ ಸಮ-ಸಮ ತೂಕ ಇದ್ದವಂತೆ.

ಬ್ರಹ್ಮ ಅವನ ಹತ್ರ ಇದ್ದ ಜೀವದ ಕಡ್ಡಿ ತಗಂಡು ಈ ಗೊಂಬೆಗಳ ಸುತ್ತೂರ ಮೂರು ಸುತ್ತು ಹಾಕಿ ಜೀವ ಬರಿಸಿದ್ನಂತೆ. ಜೀವ ಬತ್ತಿದಂಗೆ ಒಂದು ಗೊಂಬೆ ಗಂಡಾಯ್ತಂತೆ, ಇನ್ನೊಂದ್ ಗೊಂಬೆ ಹೆಣ್ಣಾಯ್ತಂತೆ. ಒಂದಕ್ಕೊಂದು ನೋಡಿದ್ದೆ ತಡ ಗಂಡು ಗೊಂಬೆ ಹೆಣ್ ಗೊಂಬೆನ ಅಟ್ಟಿಸಿಕೊಂಡು ಹೋಯ್ತಂತೆ. ಅಯ್ಯೋ ಎಂಥಾ ಕೆಲಸ ಆಗೋಯ್ತು ಅಂತ ಬ್ರಹ್ಮ ತಲ್ ತಲೆ ಚಚ್ಕೊಂಡನಂತೆ.

 

‍ಲೇಖಕರು avadhi

23 April, 2020

4 Comments

  1. Sudha Hegde

    ಎಷ್ಟು ಚಂದಿದೆ!

    • Mallikarjuna Hosapalya

      ಧನ್ಯವಾದ ಮೇಡಮ್

  2. Suresh arasalu

    ಗೆಳೆಯ ಹೊಸಪಾಳ್ಯನ ಚಂದದ ಕಥೆ

    • Mallikarjuna Hosapalya

      ಧನ್ಯವಾದ ಸುರೇಶ್, ಕಥೆ ನನ್ನದಲ್ಲ ಅಮ್ಮಂದು. ನಾನು ಕೇವಲ ಲಿಪಿಕಾರ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading