
ಕಿರಸೂರ ಗಿರಿಯಪ್ಪ
ಸುಡುವ ಬಿಸಿಲಿನು ನೆತ್ತಿಗೆ ಒಕ್ಕರಿಸಿಕೊಂಡು
ತಲೆಕೆಳಗಾಗಿ ಬಿದ್ದಕೊಂಡ ಬೀಜದೊಳಗೆ
ಚಿಗುರಿನ ಧ್ಯಾನ ತಡೆಯಲು ಅಸಾಧ್ಯ!
ಏಕೆಂದರೆ ಅದು ಅಲ್ಲಮನ ಅಂಗಳ
ಹೆಗಲಿಗೆ ಮೆತ್ತಿದ ತಗಣಿಗಳ ಕುಟ್ಟಿ
ಅಲೆಮಾರಿ ಕಣ್ಣಿನ ಜೋಳಿಗೆಯೊಳಗೆ
ಬೆವರಿನ ಮನೆ ಕೆಡವಲು ಅಸಾಧ್ಯ!
ಏಕೆಂದರೆ ಅದು ಲಕ್ಕವ್ವನ ಅಕ್ಷಯ ಪಾತ್ರೆ
ಹೂ ನಗೆಯ ತೆಕ್ಕೆಗೆ ಮುಳ್ಳಬೇಲಿಯ ಮುಕ್ಕರಿಸಿ
ಬಯಲು ಹೆಜ್ಜೆಗಳ ನಡೆಯೊಳಗೆ
ಜಡ ಗೋಡೆಗಳ ಕಟ್ಟಲು ಅಸಾಧ್ಯ!
ಏಕೆಂದರೆ ಅದು ಬಸವನ ಅರಿವಿನ ನೆಲೆ

ಬೋಳು ಬುಡದ ಪಾದಗಳ ನೆಕ್ಕಲು ಹಾತೊರೆವ
ಗೆದ್ದಲು ನಗೆಯ ಕುಹಕದೊಳಗೆ
ಎಲೆಗಳ ಪಿಸುಮಾತು ಮುರಿಯಲು ಅಸಾಧ್ಯ
ಏಕೆಂದರೆ ಅದು ಬುದ್ಧ ಕರುಣೆಯ ಬಳ್ಳಿ
ಶಾಪದ ಕೊಳೆ ಕಳಚಲು ಹಪಹಪಿಸಿ
ರಸ್ತೆಯ ಇಕ್ಕೆಲಗಳಿಗೆ ನೆರಳಾದ ಹೆಜ್ಜೆಗಳೊಳಗೆ
ಮನುಷ್ಯ ಪ್ರೀತಿಯ ಬೇರು ಕತ್ತರಿಸಲು ಅಸಾಧ್ಯ!
ಏಕೆಂದರೆ ಅದು ಭೀಮಯಾನದ ಉಸಿರು
ಮಾತುಗಳಿಗೆ ಬೇಡಿ ತೊಡಿಸುವ
ಹೆಜ್ಜೆಗಳಿಗೆ ಬೇಲಿ ಹಾಕುವ
ನಿಂತ ನೆಲೆಗಳನ್ನೇ ಕಬಳಿಸುವ ಊಸುರುವಳ್ಳಿಗಳ ಕಾಲವಿದು!
ಸಮತೆ ದೀಪದ ಆಕಾಶ ಮುಕ್ಕಲು ಅಸಾಧ್ಯ
ಏಕೆಂದರೆ ಅದು ಭೂಮಿಗೆ ಇಳಿಬಿದ್ದ ನಕ್ಷತ್ರಪುಂಜ






0 Comments