ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭೂಗರ್ಭ ಜಾತರು

ಯಮುನಾ_ಗಾಂವ್ಕರ್

ಅಗುಳನ್ನ ಬೀಳಲು ಬಿಡದ ನನ್ನಬ್ಬೆ ಅಪ್ಪಂದಿರು
ನೇಗಿಲು ನೊಗದ ಸಂಗಾತಿಗಳು
ಕೊಟ್ಟಿಗೆಯೊಳಗಿನ ಜೋಡೆತ್ತುಗಳೇ ಸಂಪತ್ತಿವರದು.
ನಸುಕಿಂದ ಮುಸುಕಿನ ತನಕ
ಬೆವರು ಹಾಕಿ ಸಸಿ ಸಾಕುತ್ತ
ಚುಮುಚುಮು ಚಳಿಯ
ಅರೆಬೆಳಗಿಂದ ತಡರಾತ್ರಿ ತನಕ
ನೊಗಕ್ಕೆ ಜೊತೆ ನೀಡುತ್ತ ಸಾಗಿದ್ದರವರು…

ಆ ಜೋಪಡಿಯೊಳಗೂ ಈ ಹೊಲಗದ್ದೆಗೂ
ಜೀಕಿದ್ದಾರವರು ಜೀವದುಸಿರಾಗಿ…
ಶತಶತಮಾನಗಳ ವಾರಸುದಾರರಾಗಿ.

ಅವರ ಕಣ್ಹನಿಗಳಲಿ ಬೆರೆತ
ಮಣ್ಣು ನೆನೆನೆನೆದು,
ತೇವಗೊಂಡು, ಬಿತ್ತಿದ ಬೀಜ ಮೊಳೆತು,
ಆಳೆತ್ತರಕೆ ಬೆಳೆದು, ತುಂಬಿದವು
ಹಸಿದೊಡಲ ಖಜಾನೆಗಳ.
ಭೂಮಿಯೊಳಗೆ ಇಂಗಿಹೋದ ಹನಿ ನೀರಂತೆ,
ಖಾಲಿಯಾಗುತ್ತಲೇ ಮತ್ತೆ ಮತ್ತೆ ತುಂಬಿಸುತ್ತ ಸಾಗಿದರು ಅನುದಿನವೂ…

ಊರಲಾಗದ ಒಡೆದ ಹಿಮ್ಮಡಿಯಲ್ಲೇ
ಓಡುತ್ತೋಡುತ್ತ,
ಒಡಕು ಪಾದದ ಗುರುತು ಬಿಟ್ಟರು
ಬಿರುಕುಬಿಟ್ಟ ಹೊಲದೊಳಗೆಲ್ಲ.

ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತ,
ಹಾಲ್ಬತ್ತದ ತೆನೆ ಚಿವುಟುವವರ ಕಾದು
ಕದಿರು ಕದ್ದು ಕಡಿಯುವವರ ಓಡಿಸಿ
ಮಣ್ಣ ಕಣಕಣದ ಮನಸನರಿತು
ಜೀವಜಲವುಣಿಸಿ, ಪೈರು ಫಸಲನು ಹೊತ್ತು,
ಕನಸುಗಳ ಸುತ್ತಿಟ್ಟು
ಬಣಿವೆಯ ಗೋಪುರ ಕಟ್ಟಿದರವರು…

ಆದರೀಗೀಗ ಬರುತ್ತಿದ್ದಾರೆ
ಕೊಯ್ದು ಒಟ್ಟಿದ ಬಣಿವೆಗೆ ಕಡ್ಡಿಗೀರಲು.
ಅನ್ನದೊಳಗಿನ ನನ್ನಿಗೆ ಉರಿಯನಿಕ್ಕಲು.

ಬೆಳೆಯ ಒಕ್ಕುವ ಕಣದಲಿ ಸಾಗಿದೆ
ರೈತ-ರೈವತರ ರಣರಂಗ
ಸೆಲೆ ಬತ್ತಿಹೋದ ಹೀನ ಹೃದಯದವರಲಿ
ನೆರಳನರಸುವುದುಂಟೇ?
ಸೋಲು ಸುಳಿಯದಿರಲಿ ಭೂಗರ್ಭ ಜಾತರಿಗೆ!!

‍ಲೇಖಕರು Avadhi

16 December, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading