ಭುವನೇಶ್ವರಿ ಹೆಗಡೆ ಅಂಕಣ- ಅಮೃತಾ ಅಪಾರ್ಟ್ ಮೆಂಟ್…

21

ಕನ್ನಡ ಸಿನಿಮಾಗಳನ್ನು ಜನ ಥಿಯೇಟರ್ ಗಳಲ್ಲಿ ನುಗ್ಗಿ ಹೋಗಿ ನೋಡುವ ಕಾಲದಲ್ಲಿ ಕಾಲೇಜು ವಿದ್ಯಾರ್ಥಿನಿಯಾಗಿದ್ದೆ. ಒಳ್ಳೆಯ ಕಥಾಹಂದರ, ರಮಣೀಯವಾದ ನಿಸರ್ಗದ ನಡುವಿನ ಚಿತ್ರೀಕರಣ, ಶುಧ್ಧ ಸಾಹಿತ್ಯಿಕ ಸಂಭಾಷಣೆ, ಕಣ್ಣಿಗೆ ಹಿತವೆನಿಸುವ ದೃಶ್ಯಾವಳಿಗಳು, ಎಷ್ಟೋ ದಿನಗಳ ಕಾಲ ಮುದ ನೀಡುವ ಹಾಡುಗಳು, ಅಷ್ಟೇ ಸುಸಂಬದ್ಧ ಸಂಗೀತ… ಹೀಗೆ ಅಂದಿನ ಸಿನಿಮಾಗಳ ಪ್ರಭಾವಕ್ಕೆ ಒಳಗಾದ ಯುವಜನಾಂಗ ಚಿತ್ರಮಂದಿರಗಳ ಸುತ್ತಾ ಸುತ್ತುವುದು ತೀರಾ ಸಾಮಾನ್ಯವಾದ ದೃಶ್ಯವಾಗಿತ್ತು.

ಶಿರಸಿಯ ನಟರಾಜ ಟಾಕೀಸ್ ಲಕ್ಷ್ಮೀ ಟಾಕೀಜುಗಳು ಕಾಲೇಜು ಕ್ಲಾಸು ತಪ್ಪಿಸಿ ಸಿನಿಮಾ ನೋಡಲು ಸೂಕ್ತವಾದ ಸ್ಥಳಗಳಾಗಿದ್ದವು.ಹಾಗೆ ನಾವು ಕ್ಲಾಸು ತಪ್ಪಿಸಿ ಗುಂಪು ಕಟ್ಟಿಕೊಂಡು ಸೇಂಗಾ ತಿನ್ನುತ್ತ ಸಿನಿಮಾ ಮಂದಿರದೊಳಗೆ ಕೂತಾಗ ಒಬ್ಬಿಬ್ಬರು ಪ್ರೊಫೆಸರುಗಳೂ ಅವರ ಕುಟುಂಬಗಳೊಂದಿಗೆ ಕೂತಿದ್ದು ಕಂಡು ಅಡಗಿ ಅಡಗಿ ಹೊರಬಿದ್ದು ಹಿಂಬಾಗಿಲ ಗೇಟಿನಿಂದ ಪರಾರಿಯಾಗುತ್ತಿದ್ದೆವು.

ಆ ಬಳಿಕದ ಉದ್ಯೋಗಸ್ಥ ಜೀವನದಲ್ಲಿ ಸಿನಿಮಾಗಳನ್ನು ನೋಡಲಾಗಲಿ ಮನೆಯಲ್ಲಿ ಟಿ.ವಿ. ಧಾರಾವಾಹಿಗಳನ್ನು ನೋಡುವುದಾಗಲಿ ಸಾಧ್ಯವೇ? ಏನಿದ್ದರೂ ಕಾಲೇಜಿಗೆ ಓಡುವುದು, ಪಾಠ ಮಾಡುವುದು, ನೋಟ್ಸ್ ಮಾಡಿಕೊಳ್ಳುವುದು ಪೇಪರ್ ತಿದ್ದುವುದು… ಸಿನಿಮಾವಿರಲಿ ಮನರಂಜನೆ ಎಂದರೆ ಕಾಲೇಜು ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳ ಎರ್ರಾಬಿರ್ರಿ ಡ್ಯಾನ್ಸುಗಳನ್ನು ನೋಡುವುದು ಮಾತ್ರ ಆಗಿ ಹೋಗಿತ್ತು. ಈಗ ನಿವೃತ್ತ ಜೀವನದಲ್ಲಿ ಅಷ್ಟಿಷ್ಟು ನಾಟಕ ಯಕ್ಷಗಾನ ಸಿನಿಮಾಗಳನ್ನು ನೋಡಿಕೊಳ್ಳುತ್ತಾ ನಮ್ಮದಾದ ಸಮಯವನ್ನು ನಾವೇ ಸಂಭಾಳಿಸಿ ಕೊಳ್ಳುವುದು ಎಂದೇನೋ ತೀರ್ಮಾನಿಸಿದ್ದೆ. ಆದರೆ ಕೊರೋನಾ ಬಂದು ಕೈ ಕಟ್ ಬಾಯ್ಮುಚ್ಚ್ ಮಾಡಿ ಕೂಡಿಸಿದ ಬಳಿಕ ಚಿತ್ರಮಂದಿರವಿ
ರಲಿ ದೇವ ಮಂದಿರಕ್ಕೂ ಹೋಗಲು ಭಯ. ಮನೆಯೇ ಮಂತ್ರಾಲಯ ಎಂದು ಕೂತಿದ್ದೆ ಆಯ್ತು.

ಈ ನಡುವೆ ನನ್ನ ವಿದ್ಯಾರ್ಥಿ ಶಿವು ‘ಮೇಡಂ ನಾನು ಗುರುರಾಜ್ ಕುಲಕರ್ಣಿಯವರ ಸಿನಿಮಾವೊಂದರ ತಾಂತ್ರಿಕ ವರ್ಗದಲ್ಲಿ ಸೇರಿಕೊಂಡಿದ್ದೇನೆ. ಇವತ್ತು ಹೀಗೆ ನಡೆಯಿತು ಹಾಡು ಶೂಟಿಂಗ್ ಇತ್ತು ಸಂಕಲನ ಪ್ರಾರಂಭವಾಯಿತು ಎಂದು ಆಗಾಗ ಅಪ್ ಡೇಟ್ ಮಾಡುತ್ತಲೇ ಇದ್ದ. ಸರಿ ಕಳೆದ ವಾರ ಇದ್ದಕ್ಕಿದ್ದಂತೆ ನಮ್ಮ ಸಿನಿಮಾ ‘ಅಮೃತ್ ಅಪಾರ್ಟ್ಮೆಂಟ್’ ನಾಡದು ಬಿಡುಗಡೆಯಾಗುತ್ತಿದೆ ನೀವು ಮನೆಯವರೊಂದಿಗೆ ಬಂದು ಮೊದಲ ಪ್ರದರ್ಶನ ನೋಡಲೇಬೇಕು’ ಎಂದು ಆಹ್ವಾನವಿತ್ತ. ಸರಿ ಜೆಪಿನಗರದಿಂದ ಓರಿಯನ್ ಮಾಲ್ ಗೆ ಹೋಗಿ ಅಮೃತ ಅಪಾರ್ಟ್ಮೆಂಟಿನ ಬಿಡುಗಡೆ ಸಡಗರದಲ್ಲಿ ಸೇರಿಕೊಂಡೆವು.

ಮಗಳು ತನ್ನ ಸಹೋದ್ಯೋಗಿ ಸ್ನೇಹಿತೆಯರನ್ನು ಜೊತೆಗೆ ಕರೆತಂದಿದ್ದಳು. ಅಷ್ಟರಲ್ಲಾಗಲೇ ಯುವಕ ಯುವತಿಯರ ದಂಡೇ ಅಲ್ಲಿ ನೆರೆದಿತ್ತು. ಪಾತ್ರಧಾರಿಗಳ ಪರಿಚಯ ಆಗಿನ್ನೂ ಆಗಿರಲಿಲ್ಲ ನಿರ್ದೇಶಕರ ಜೊತೆ ಫೋಟೋ ತೆಗೆಸಿಕೊಳ್ಳೋಣ ವೆಂದು ಆಚೀಚೆ ನೋಡಿದರೆ ಸ್ನೇಹಿತೆಯರೊಟ್ಟಿಗೆ ನನ್ನ ಮಗಳು ನಾಯಕ ನಟನ ಜೊತೆ ನಿಂತು ಫೋಟೋ ತೆಗೆಸಿಕೊಳ್ಳುತ್ತಿದ್ದರು. ನಿರ್ದೇಶಕರು ‘ಹೀರೋ ಹೀರೋಯಿನ್ ಜೊತೆಗೆ ಫೋಟೋ ತೆಗೆಸಿಕೊಳ್ಳಿ ಸಿನಿಮಾ ಇಷ್ಟವಾದರೆ ನನ್ನ ಜೊತೆ ತೆಗೆಸಿಕೊಳ್ಳಬಹುದು’ ಎಂದಿದ್ದಾರೆ ಎಂದರು .

ಅದೆಷ್ಟೋ ದಿನಗಳ ನಂತರ ಪಿವಿಆರ್ ಒಳಗೆ ಹೋಗಿ ಕೂತಿದ್ದಾ ಗಿತ್ತು. ಕಣ್ಣು ದೊಡ್ಡ ಪರದೆಗೆ ಹೊಂದಿಕೊಳ್ಳುವಷ್ಟರಲ್ಲಿ ನಗರ ಪ್ರದೇಶದ ವಿವಿಧ ದೃಶ್ಯಾವಳಿಗಳ ನಾವು ಬಂದೇವ ನಾವು ಬಂದೇವ ಬೆಂಗಳೂರು ನಗರ ನೋಡೋದಕ್ಕಾ ಎಂಬ ಗೀಗೀ ಪದದ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ನಮ್ಮ ಕಣ್ಣೆದುರು ತೆರೆದುಕೊಳ್ಳ ತೊಡಗಿತ್ತು. ಆಫೀಸುಗಳಿಗೆ ಓಡುವ ಧಾವಂತ ದಲ್ಲಿ ಇರುವ ಉದ್ಯೋಗಸ್ಥರು, ಅಪಾರ್ಟ್ ಮೆಂಟ್ ನೊಳಗೆ ಇರುವ ಅನೇಕ ವ್ಯವಸ್ಥೆ, ಮನೆಗೆಲಸದವಳು ಇಸ್ತ್ರಿಯಾತ ಹೀಗೆ ನಗರಪ್ರದೇಶದ ಧಾವಂತ ಗಳನ್ನೇ ಮೈಗೂಡಿಸಿಕೊಂಡ ‘ಅಮೃತ್ ಅಪಾರ್ಟ್ ಮೆಂಟ್’ ನೊಳಗೆ ನಾವು ಪ್ರವೇಶಿಸಿ ಆಗಿತ್ತು. .

ಸಾಕಷ್ಟು ಎತ್ತರವಿರುವ ಆಕರ್ಷಕ ಮೈಕಟ್ಟಿನ ನಾಯಕನಟ ತಾರಕ್ ಪೊನ್ನಪ್ಪ ಹಾಗೂ ನಾಯಕ ನಟಿ ಊರ್ವಶಿ ಗೋವರ್ಧನ್ ಪ್ರೀತಿಸಿ ಮದುವೆಯಾದವರು. ನಾಯಕ ಕನ್ನಡಿಗನಾದರೆ ನಾಯಕಿ ಪಶ್ಚಿಮ ಬಂಗಾಲದವಳು. ಪ್ರೀತಿಸಿ ಮದುವೆಯಾಗುವ ಕಾಲಕ್ಕೆ ಉಳಿದೆಲ್ಲವೂ ನಗಣ್ಯ. ತಂದೆತಾಯಿಯರನ್ನು ಧಿಕ್ಕರಿಸಿದ ನಾಯಕಿ ಪ್ರೀತಿಸಿದವನನ್ನು ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ ಕನ್ನಡೇತರ ಛಾಪಿನ ಹುಡುಗಿ. ಮದುವೆಯಾದ ತಮ್ಮಿಬ್ಬರ ನಡುವಿನ ಅಂತರಗಳನ್ನು ಕಂಡುಕೊಂಡು ಏನು ಬೆಂಗಳೂರೋ ಇವತ್ತೂ ಅದೇ ದೋಸೆಯಾ? ಇಡ್ಲಿಯಾ? ಎಂದು ಜಗಳವಾಡಲು ಶುರುವಾಗಿರುತ್ತದೆ.

ಜೊತೆಯಲ್ಲಿ ಇಂದಿನ ಯುವಜನತೆಯ ಜೀವನಶೈಲಿ. ತಮ್ಮ ಆದಾಯವನ್ನು ಗ್ರಹಿಸಿಕೊಳ್ಳದೆ ಭರ್ಜರಿಯಾದ ಅಪಾರ್ಟ್ ಮೆಂಟ್ ಖರೀದಿಸಿ ಅದರ ಸಾಲದ ಕಂತು ಕಟ್ಟಲಾಗದೆ ಕಂಗಾಲಾಗಿರುವ ನಾಯಕ. ವಿದೇಶಕ್ಕೆ ಹೋಗಿ ನೆಲೆಸೋಣ ಎಂದು ಒತ್ತಾಯಿಸುವ ನಾಯಕಿ ತಾಯಿಯನ್ನು ಬಿಟ್ಟು ಬೇರೆ ದೇಶಕ್ಕೆ ಹೋಗಲು ಒಪ್ಪದ ಗಂಡ. ಸಿಟ್ಟು ಅಳು ಗಳ ನಡುವೆ ಕೊನೆಗೂ ಡೈವೋರ್ಸ್ ಪಡೆದುಕೊಳ್ಳಲು ಲಾಯರ್ (ಸೀತಾ ಕೋಟೆ) ಬಳಿ ಹೋಗುವ ದಂಪತಿಗಳು.

ಒಡೆದ ಕನ್ನಡಿಯಂತಾಗಿದೆ ಈ ಯುವ ಪ್ರೇಮಿಗಳ ಪುಟ್ಟ ಸಂಸಾರ. ಭಗ್ನಗೊಂಡ ವಾಸ್ತವದೊಂದಿಗೆ ತನ್ನ ಊರಿಗೆ ಮರಳಲು ಸಿದ್ಧವಾಗಿದ್ದ ನಾಯಕಿ. ಒಂದು ದಿನ ಮನೆಯೊಳಗೆ ಬರುತ್ತಿದ್ದಂತೆ ಬೆಡ್ ರೂಮಿನಲ್ಲಿ ಸತ್ತುಬಿದ್ದ ಹೆಣವೊಂದನ್ನು ನೋಡಿ ಕಿಟಾರನೆ ಕಿರುಚುತ್ತಾಳೆ. ನಿಗೂಢ ಕೊಲೆಯೊಂದರ ಸುತ್ತ ಪತ್ತೇದಾರಿ ಸಿನಿಮಾದಂತೆ ಸುತ್ತುವ ಸಿನಿಮಾದ ಪ್ರಥಮಾರ್ಧ ಉಸಿರು ಬಿಗಿಹಿಡಿದು ಕೊಲೆಗಾರ ಯಾರೆಂಬುದನ್ನು ಊಹಿಸಲೂ ಆಗದೆ ಅಸಹಾಯಕ ಯುವದಂಪತಿಗಳನ್ನು ಸಂತಾಪದಿಂದ ನೋಡುವಂತಾಗುತ್ತದೆ. ಪೊಲೀಸರ ಪ್ರವೇಶ ವಾಗಿ ಸ್ಟೇಶನ್ ನಲ್ಲಿ ಕೊಡುವ ಟ್ರೀಟ್ ಮೆಂಟ್ ಗಳ ದರ್ಶನ ಸ್ವಲ್ಪ ಇರುಸು ಮುರುಸಾಗುವಷ್ಟರಲ್ಲಿ ಇಂಟರ್ವಲ್ ಘೋಷಣೆಯಾಗಿ ಪ್ರೇಕ್ಷಕ ಸಮೂಹ ಪಾಪ್ ಕಾರ್ನ್ ಪೆಪ್ಸಿ ಯತ್ತ ನುಗ್ಗುತ್ತದೆ.

ಸಿನಿಮಾದ ದ್ವಿತೀಯಾರ್ಧ ಅನೂಹ್ಯವಾದ ತಿರುವುಗಳಿಂದ ಚುರುಕು ಸಂಭಾಷಣೆಗಳಿಂದ ಚಕಚಕನೆ ಕಣ್ಣೆದುರು ನಡೆಯುವ ದೃಶ್ಯಗಳಿಂದ ಒಟ್ಟು ಸಮಯ ಹೋಗಿದ್ದೇ ತಿಳಿಯದಂತೆ ಕಥೆಯನ್ನು ಓಡಿಸಿ ಬಿಟ್ಟಿರುತ್ತದೆ. ನಗರ ಪ್ರದೇಶಗಳ ಅಪಾರ್ಟ್ಮೆಂಟುಗಳಲ್ಲಿ ಆಚೀಚೆ ಮನೆಗಳ ಸಂಪರ್ಕವೇ ಇಲ್ಲದ ಯಾಂತ್ರಿಕತೆಯನ್ನು ಸದುಪಯೋಗಪಡಿಸಿಕೊಳ್ಳುವ ಸೆಕ್ಯೂರಿಟಿ ಯೊಬ್ಬ ಬೆಳಿಗ್ಗೆ ಹೋದರೆ ಸಂಜೆಯೇ ಬರುವ ಕೆಲವು ಅಪಾರ್ಟ್ ಮೆಂಟುಗಳ ಡುಪ್ಲಿಕೇಟ್ ಕೀ ಮಾಡಿಸಿಕೊಂಡು ಯಾರೂ ಇಲ್ಲದ ಮನೆಗಳಿಗೆ ಅನೈತಿಕ ಚಟುವಟಿಕೆಗಳನ್ನು ನಡೆಸಲು ಹೆಣ್ಣು ಗಂಡುಗಳಿಗೆ ತಾಣ ಒದಗಿಸಿ ಮತ್ತೆ ಸಂಜೆಯಾಗುವಾಗ ಎಂದಿನಂತೆ ಬಾಗಿಲು ಭದ್ರಪಡಿಸಿ ಇಡುವ ದುರ್ವ್ಯವಹಾರ ನಡೆಸಿರುತ್ತಾನೆ. ಅಂಥ ಸಂದರ್ಭದಲ್ಲಿ ಪತ್ತೆಯಾದ ಶವವೊಂದು ನಾಯಕ ನಟನ ಮನೆಯೊಳಗೆ ಸಿಕ್ಕು ಕೆಲವೇ ಕ್ಷಣಗಳಲ್ಲಿ ಅದು ಗೂಢವಾಗಿ ನಾಪತ್ತೆಯಾಗಿರುತ್ತದೆ.

ಅಪಾರ್ಟ್ಮೆಂಟ್ ಎದುರು ಆಟೋ ಡ್ರೈವರ್ ವೇಷದಲ್ಲಿರುವ ಇನ್ಸ್ಪೆಕ್ಟರ್ ಲಕ್ಕಣ್ಣ ತನ್ನ ಅಭಿನಯದಿಂದಾಗಿ ಪ್ರೇಕ್ಷಕರ ಮನಗೆದ್ದಿದ್ದು ಎಲ್ಲ ನಟ ನಟಿಯರೂ ತಮ್ಮ ತಮ್ಮ ಪಾತ್ರ ಗಳಿಗೆ ನ್ಯಾಯ ಒದಗಿಸುವಂತೆ ನಟಿಸಿದ್ದಾರೆ. ನಾಯಕ ನಾಯಕಿಯರನ್ನು ಸಾಕಷ್ಟು ಬಳಲಿಸಿದ ಕಹಿ ವಾಸ್ತವ ಡೈವೋರ್ಸಿಗೆ ಹಾಕಿದ ಅರ್ಜಿಯ ಪುಟಗಳಿಗೆ ಸಹಿ ಮಾಡಲು ದಂಪತಿಗಳನ್ನು ಆಹ್ವಾನಿಸಿದಾಗ ಲಾಯರ್ ಬಳಿ ಹೋಗುತ್ತಾರೆ. ಗಂಡ ಇನ್ನೇನು ಸಹಿಮಾಡಿದ ಎಂದಾಗುವಷ್ಟರಲ್ಲಿ ನಾಯಕಿ ಆತನನ್ನು ತಡೆದು ವೈಕಾಂಟ್ ವಿ ಮೇರಿ ಅಗೇನ್ ? ಎಂದು ಕೇಳುತ್ತಾಳೆ. ಲಾಯರ್ ಮುಖದಲ್ಲಿ ಮಂದಹಾಸ ಮೂಡುತ್ತದೆ. ಪ್ರೇಕ್ಷಕರೂ ಸಮಾಧಾನದ ನಿಟ್ಟುಸಿರು ಬಿಡುತ್ತಾರೆ.

ಇಡೀ ಸಿನಿಮಾದ ಪ್ಲಸ್ ಪಾಯಿಂಟ್ ಉತ್ತಮ ಛಾಯಾಗ್ರಹಣ ಹಾಗೂ ಸಂಭಾಷಣೆಗಳ ಜೋಡಣೆ. ಎಲ್ಲಿಯೂ ಅನವಶ್ಯಕ ಅಶ್ಲೀಲತೆಯ ದೃಶ್ಯಗಳನ್ನು ತುರುಕುವಂತಹ ಸಮಕಾಲೀನ ತೆವಲುಗಳನ್ನು ಅಮೃತ ಪಾರ್ಟ್ ಮೆಂಟ್ ನಿರ್ದೇಶಕ ಗುರುರಾಜ ಕುಲಕರ್ಣಿ ಮೆಟ್ಟಿ ನಿಂತು ಸದಭಿರುಚಿಯ ಚಿತ್ರವೊಂದನ್ನು ಕನ್ನಡಿಗರಿಗೆ ನೀಡಿದ್ದಾರೆ.ಸಾಂಸ್ಕೃತಿಕ ಭಿನ್ನತೆ ಇರುವ ಯುವಕ ಯುವತಿಯರು ತಮ್ಮ ನಿರೀಕ್ಷೆಗಳ ವಾಸ್ತವವನ್ನು ಚರ್ಚಿಸದೆ ಲವ್ ಮ್ಯಾರೇಜ್ ಎಂಬ ಭ್ರಮೆಯಲ್ಲಿ ಸಿಲುಕಿಕೊಂಡು ನರಳುವ ಚಿತ್ರಣ ಸೊಗಸಾಗಿ ಮೂಡಿದೆ. ಅಷ್ಟೇ ಅನಿರೀಕ್ಷಿತ ವಾಗಿ ಡೈವೋರ್ಸಿಗೆ ಹೋದ ವಿವಾಹವು ನೈಜ ಪ್ರೀತಿಯೊಂದಿಗೆ ಮರಳಿದ್ದು ಒಂದೊಳ್ಳೆ ಸಂದೇಶ ವನ್ನು ಸಮಾಜಕ್ಕೆ ನೀಡುವಲ್ಲಿ ಸಫಲವಾಗಿದೆ.ಅಪಾರ್ಟ್ ಮೆಂಟ್ ಗಳ ಬದುಕಿನ ಅಸಹಾಯಕತೆ ಗಳನ್ನು ದುರುಪಯೋಗ ಪಡಿಸಿಕೊಳ್ಳುವ ಸೆಕ್ಯುರಿಟಿಗಳನ್ನು ಎಚ್ಚರಿಕೆಯಿಂದ ಗಮನಿಸಬೇಕೆಂಬ ಅರಿವು ಅಪಾರ್ಟ್ ಮೆಂಟ್ ನಿವಾಸಿಗಳಲ್ಲಿ ಮೂಡುವುದರಲ್ಲಿ ಸಂಶಯವಿಲ್ಲ.

ಮೂಲತಃ ಉತ್ತರ ಕರ್ನಾಟಕ ಪ್ರದೇಶದವರಾದ ಗುರುರಾಜ್ ಕುಲಕರ್ಣಿ ಅಲ್ಲಿಯ ಭಾಷೆಯನ್ನು ಅದರ ಎಲ್ಲಾ ಸೊಗಡಿನೊಂದಿಗೆ ಬಳಸಿಕೊಂಡಿದ್ದಾರೆ. ಇಂಪಾದ ಗುನುಗುನಿಸಬಹುದಾದ ಹಾಡುಗಳು ಮುದ ನೀಡುತ್ತವೆ. ಕೆ ಕಲ್ಯಾಣ್ ಅವರ ಸಾಹಿತ್ಯದಲ್ಲಿ ‘ಶುರು ಆಗಬೇಕು ಈಗ ಮತ್ತೊಮ್ಮೆ ನಮ್ಮ ಒಲವು ಪರಿಚಯವು ಆದ ಕ್ಷಣವೇ ನಕ್ಕಂತ ಮೊದಲ ನಗುವೂ’ಎಂಬ ಹಾಡು ವಾಣಿ ಹರಿಕೃಷ್ಣ ಮತ್ತು ಅಜಯ್ ವಾರಿಯರ್ ಗಾಯನದಲ್ಲಿ ಪ್ರಭಾವಶಾಲಿಯಾಗಿ ಮೂಡಿ ಹಾಕುವಂತಿದೆ. ಒಟ್ಟು ಎರಡೂವರೆ ತಾಸಿನ ಅಮೃತ್ ಅಪಾರ್ಟ್ ಮೆಂಟ್ ನಲ್ಲಿ ಕಳೆಯುವ ಕಾಲ ಚೂರೂ ವ್ಯರ್ಥವೆನಿಸದೇ ಅನೇಕ ದಿನಗಳ ಬಳಿಕ ನಮ್ಮ ನಾಡಿನಲ್ಲಿ ಮೂಡಿಬಂದ ಒಂದೊಳ್ಳೆ ಕನ್ನಡ ಚಿತ್ರವನ್ನು ನೋಡುವ ಅನುಭವ ವನ್ನು ನೀಡುತ್ತದೆ.

ಕನ್ನಡನಾಡಿನ ನಗರ ಸಂಸ್ಕೃತಿಯ ಅನಿವಾರ್ಯ ಕಾಲಘಟ್ಟವೊಂದರ ಆಪ್ತ ಚಿತ್ರಣವನ್ನು ಕೊಡುವುದರ ಜೊತೆಗೆ ಯಾವ ಭಾಷೆಯಿಂದಲೂ ಎರವಲು ತರದ ನಮ್ಮದೇ ನಟನಟಿಯರು ನಮ್ಮವರೇ ತಂತ್ರಜ್ಞರು ಗಳನ್ನು ಬಳಸಿಕೊಂಡ ಸದಭಿರುಚಿಯ ಕನ್ನಡ ಚಿತ್ರವೊಂದು ಅಮೃತ್ ಅಪಾರ್ಟ್ ಮೆಂಟ್ ಆಗಿ ನಮ್ಮೆದುರು ಬಂದಿದೆ. ಖಂಡಿತವಾಗಿಯೂ ನಗರವಾಸಿಗಳು ಹೋಗಿ ಈ ಚಿತ್ರವನ್ನು ನೋಡಿ ಬರಬೇಕು. ಸಿನಿಮಾ ವೀಕ್ಷಣೆಯಿಂದ ಸಂತುಷ್ಟವಾದ ನನ್ನ ಮಗಳ ಸ್ನೇಹಿತ ಸ್ನೇಹಿತೆಯರ ಗ್ಯಾಂಗ್ ಈ ಬಾರಿ ನಿರ್ದೇಶಕರನ್ನು ಹುಡುಕಿ ತಂದು ನಿಲ್ಲಿಸಿಕೊಂಡು ಫೋಟೋ ತೆಗೆದುಕೊಳ್ಳುವ ಉಮೇದು ತೋರಿತ್ತು. ನಿರ್ದೇಶಕರಿಗೆ ಅಭಿನಂದಿಸಿ ಮೆಟ್ರೋದತ್ತ ಸಾಗಿದ್ದೆವು.

ಚಿತ್ರಮಂದಿರಗಳು ಸಿನಿಮಾಕ್ಕೆ ಹಾಕಿದ ಹಣವನ್ನು ಮರಳಿಸುವುದು ಅನುಮಾನ. ಬೆಂಗಳೂರು ನಗರದ ತುಂಬ ತುಂಬಿರುವ ಬೃಹತ್ ಅಪಾರ್ಟ್ ಮೆಂಟುಗಳಲ್ಲಿಯೇ ಅಮೃತ ಅಪಾರ್ಟ್ಮೆಂಟ್ ತೋರಿಸುವ ವ್ಯವಸ್ಥೆಯಾಗಿದ್ದರೆ !

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

November 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: