ಭಿಕ್ಷೆಗೆ ದೂಡಿದ ಮಕ್ಕಳ ಕೈಗಳು..

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ..

ʻಸರ್‌, ನಿಮ್ಮ ಮೇಲೆ ಒಂದು ದೂರಿದೆ. ಕೇಸ್‌ ದಾಖಲಿಸಿಕೊಳ್ಳಬೇಕಿದೆ. ನೀವು ಸ್ಟೇಷನ್‌ಗೆ ಬಂದು ಹೇಳಿಕೆ ಕೊಡಬೇಕು. ಕೇಸ್‌ ತನಿಖೆಗೆ ತಾವು ಸಹಕರಿಸಬೇಕುʼ 

ಅದು ಆ ಹೊತ್ತು ಬೆಂಗಳೂರು ಉತ್ತರ ವಲಯದ ಪೊಲೀಸ್‌ ಠಾಣೆಯೊಂದರ ಇನ್ಸ್‌ಪೆಕ್ಟರ್‌ ಒಬ್ಬರಿಂದ ಬಂದ ಮೊಬೈಲ್‌ ಕರೆ. 

ʻಆಯ್ತು! ದಾಖಲಿಸಿಕೊಳ್ಳಿ. ಸ್ಟೇಷನ್‌ಗೆ ಬರ್ತೀನಿ. ಏನು ದೂರು?ʼ 

ನಾನಾಗ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯಿದೆಯ ಜಾರಿ ಉಸ್ತುವಾರಿಯ ಪಾತ್ರವಿರುವ ಬೆಂಗಳೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ (೨೦೦೮). ನನ್ನೊಡನೆ ಇನ್ನೂ ನಾಲ್ಕು ಜನ ಸದಸ್ಯರು. ನಾವೆಲ್ಲರೂ ಸ್ವಯಂಸೇವಾ ಸಂಘಟನೆಗಳಲ್ಲಿ ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದವರು. ನಮ್ಮನ್ನು ಸರ್ಕಾರವೇ ವಿವಿಧ ಹಂತಗಳ ಪರಿಶೀಲನೆಯ ನಂತರ ನೇಮಕ ಮಾಡಿತ್ತು. ಕಾಯಿದೆಯಂತೆ ಮಕ್ಕಳಿಗೆ ಸಂಬಂಧಿಸಿದ ವಿಚಾರಗಳಿಗೆ ನಮ್ಮದು ನ್ಯಾಯಾಧೀಶರ ಪೀಠಕ್ಕೆ ಸಮವಾದ ಜವಾಬ್ದಾರಿ.

ʻಏನಿಲ್ಲ ಸರ್‌. ನೀವು ನಾವು ಸೇರಿ ಎರಡು ವಾರದ ಹಿಂದೆ ರೆಸ್ಕ್ಯೂ ಮಾಡಿದ್ವಲ್ಲ ಭಿಕ್ಷೆಯಲ್ಲಿದ್ದ ಮಕ್ಕಳು, ಅವರ ಕಡೆಯವರುʼ 

ʻಓ! ಅದಾ? ಯಾರು ಹಾಕ್ತಿರೋದು ಕೇಸು? ಮಕ್ಕಳನ್ನ ಭಿಕ್ಷೆಗಿಟ್ಟುಕೊಂಡಿದ್ದವರು ಇನ್ನೂ ಜೈಲಿನಲ್ಲಿದ್ದಾರಲ್ವ? ಈಗ್ಯಾರು ಕೇಸ್‌ ಹಾಕೋರು?ʼ

ʻಅವ್ರೆಲ್ಲಾ ನಾಲ್ಕು ದಿನದ ಹಿಂದೆ ಬೇಲ್‌ ತೊಗೊಂಡಿದ್ದಾರೆ. ನೆನ್ನೆ ಬಂದು ನಿಮ್ಮ ಮೇಲೆ ದೂರು ಕೊಟ್ಟಿದ್ದಾರೆʼ.

***

… ಎರಡು ವಾರದ ಹಿಂದೆ.

ಚೈಲ್ಡ್‌ಲೈನ್‌ ೧೦೯೮, ಮಕ್ಕಳ ಹಕ್ಕುಗಳ ರಕ್ಷಣೆಯ ಕ್ಷೇತ್ರದಲ್ಲಿ ಕೆಲಸ ಮಾಡುವ ಐದಾರು ಸಂ‍ಸ್ಥೆಗಳು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗಳು ಮತ್ತು ಪೊಲೀಸ್‌ ಒಡಗೂಡಿ ಹೋಗಿ, ಭಿಕ್ಷೆಗೆ ದೂಡಿದ್ದ ಸುಮಾರು ೧೭ ಮಕ್ಕಳನ್ನು ರಕ್ಷಿಸಿದ್ದೆವು. ಆರು ವರ್ಷದಿಂದ ಹಿಡಿದು ೧೬ ವರ್ಷದೊಳಗಿನ ಮಕ್ಕಳು. ಅವರಲ್ಲಿ ಒಂದು ಬಾಲಕಿಗೆ ಮದುವೆಯಾಗಿತ್ತು ಮತ್ತು ಆಕೆ ಗರ್ಭಿಣಿ ಕೂಡಾ! ಮಕ್ಕಳನ್ನು ಭಿಕ್ಷೆಗಿಟ್ಟುಕೊಂಡಿದ್ದ ಆರೋಪದ ಮೇಲೆ ಆರು ವಯಸ್ಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು, ಎಫ್‌.ಐ.ಆರ್‌. ದಾಖಲಿಸಿ ಅವರನ್ನೆಲ್ಲಾ ನ್ಯಾಯಾಂಗ ಬಂಧನದಲ್ಲಿರಿಸಿದ್ದರು. 

ಅದು ಇಷ್ಟು ಸುಲಭವಾಗಿ ಆಗಿರಲಿಲ್ಲ. 

ವಾಹನ ದಟ್ಟಣೆಯಿರುವ ಬೆಂಗಳೂರಿನ ಅನೇಕ ವೃತ್ತಗಳಲ್ಲಿ ಮಕ್ಕಳು ಒಂಟಿಯಾಗಿ ಅಥವಾ ಗುಂಪುಗುಂಪಾಗಿ ಭಿಕ್ಷೆ ಬೇಡುವುದನ್ನು ಕುರಿತು ಅನೇಕ ದೂರುಗಳಿದ್ದವು. ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯಿದೆಯಡಿಯ ಅವಕಾಶಗಳಂತೆ ಅಂತಹ ಮಕ್ಕಳನ್ನು ಪೊಲೀಸರು ಇಲ್ಲವೇ ಚೈಲ್ಡ್‌ಲೈನ್‌ ೧೦೯೮ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ರಕ್ಷಿಸಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯೆದುರು ಹಾಜರು ಪಡಿಸುವುದೂ ಆಗುತ್ತಿತ್ತು. ಅವರನ್ನು ತಾತ್ಕಾಲಿಕವಾಗಿ ಮಕ್ಕಳ ನಿಲಯಗಳಲ್ಲಿ ಇರಿಸಲಾಗುತ್ತಿತ್ತು. ಆದರೆ ಮಕ್ಕಳ ಪೋಷಕರು ಬಂದು ತಾವೇ ಅಮ್ಮ, ಅಪ್ಪ ಇತ್ಯಾದಿ ಹೇಳಿ ದಾಖಲೆಗಳನ್ನು ಮುಂದೆ ಹಿಡಿದಾಗ ಅವರೊಡನೆ ಮಾತನಾಡಿ, ಹೀಗೆಲ್ಲಾ ಮಕ್ಕಳನ್ನು ಭಿಕ್ಷೆಗೆ ಬಿಡಬಾರದು ಇತ್ಯಾದಿ (ಆಪ್ತಸಮಾಲೋಚನೆ!) ಮಾಡಿ, ಕಾಗದಪತ್ರಗಳಿಗೆ ಸಹಿ ಮಾಡಿಸಿಕೊಂಡು ಬಿಡಲೇಬೇಕಾಗುತ್ತಿತ್ತು. ಆದರೆ ಕಷ್ಟವಾಗುತ್ತಿದ್ದುದು ಅದೇ ಮಕ್ಕಳು ಎರಡು ಮೂರು ಬಾರಿ ʻರಕ್ಷಣೆʼಗೆ ಗುರಿ(!)ಯಾದಾಗ. ಅದೇ ಅದೇ ಪೋಷಕರು ಮಕ್ಕಳನ್ನು ಬಿಟ್ಟುಕೊಡಿ ಎಂದು ಬರುತ್ತಿದ್ದಾಗ! 

ಮಕ್ಕಳಿಂದ ಭಿಕ್ಷೆ ಬೇಡಿಸುತ್ತಿದ್ದ ಅಪ್ಪ: 

ಯಲಹಂಕದ ಬಳಿ ಭಿಕ್ಷೆ ಬೇಡುತ್ತಿದ್ದ ಇಬ್ಬರು ಹುಡುಗರನ್ನು ಪೊಲೀಸರ ಸಹಾಯದಿಂದ ಚೈಲ್ಡ್‌ಲೈನ್‌ ೧೦೯೮ನವರು ರಕ್ಷಿಸಿ ಬೆಂಗಳೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯೆದುರು ತಂದಿದ್ದರು. ಸಮಿತಿಯೆದುರು ಹಾಜರಾಗಿದ್ದ ಮಕ್ಕಳ ತಂದೆ, ಇದು ಸುಳ್ಳು ಆರೋಪ, ಮಕ್ಕಳು ಭಿಕ್ಷೆ ಬೇಡುತ್ತಿರಲಿಲ್ಲ, ಎನ್.ಜಿ.ಓ.ಗಳು ದುರುದ್ದೇಶದಿಂದ ತಂದಿದ್ದಾರೆ ಎಂದು ಆರೋಪಿಸಿದ. ಸಾಕ್ಷಿಯಾಗಿ ಮಕ್ಕಳನ್ನು ರಕ್ಷಿಸಿದ್ದ ದಿನ ಅವರು ʻಶಾಲೆಯಲ್ಲಿ ಹಾಜರಿದ್ದರುʼ ಎಂದು ದಾಖಲೆಯನ್ನೂ ತಂದಿದ್ದ! ಎಲ್ಲರೂ ಮೋಸಗಾರರು ಎಂದು ಕೂಗಾಡಿದ. ನಮ್ಮ ಬಳಿಯಿದ್ದ ಸಾಕ್ಷಿ ಮಕ್ಕಳು ಭಿಕ್ಷೆ ಬೇಡುತ್ತಿದ್ದುದು ವಾಸ್ತವವೆಂದು ತೋರುತ್ತಿತ್ತು. ಮಕ್ಕಳೂ ಸಹ ತಾವು ಶಾಲೆಗೆ ಸೇರಿರುವುದು ನಿಜವೆಂದೂ, ಆದರೆ ಅಪ್ಪನೇ ಸೈಕಲ್‌ ಮೇಲೆ ಕರೆದುಕೊಂಡು ಬಂದು ಪೊಲೀಸ್‌ ಠಾಣೆಯಿರುವ ಯಲಹಂಕ ಸರ್ಕಲ್‌ನಲ್ಲಿ ಬಿಡುತ್ತಿದ್ದನೆಂದೂ, ಭಿಕ್ಷೆ ಹಣವನ್ನು ತಾನೇ ತೆಗೆದುಕೊಳ್ಳುತ್ತಾನೆಂದೂ ಹೇಳಿಕೆ ಕೊಟ್ಟಿದ್ದರು. 

ಈ ಕಗ್ಗಂಟು ಬಿಡಿಸುವುದು ಹೇಗೆ? ಮಕ್ಕಳೊಂದಿಗೆ ಇನ್ನಷ್ಟು ಮಾತನಾಡಬೇಕು, ಇನ್ನು ಮೂರು ದಿನ ಬಿಟ್ಟು ಬನ್ನಿ ಎಂದು ಮಕ್ಕಳ ತಂದೆಯನ್ನು  ಹಿಂದೆ ಕಳುಹಿಸಿದೆವು. ಆತನೋ ನಿಮ್ಮನ್ನ ನೋಡ್ಕೊಳ್ತೀನಿ ಅಂತ ಧಮಕಿಯ ಸವಾಲು ಹಾಕಿ  ಹೋದ. ಇಂತಹ ಎಷ್ಟೋ ಬೆದರಿಕೆಗಳು ಅಷ್ಟು ಹೊತ್ತಿಗೆ ನಮಗೆ ರೂಢಿಯಾಗಿತ್ತು. ನಕ್ಕು ಸುಮ್ಮನಾಗಿದ್ದೆವು. 

ಮಾರನೇ ದಿನವೇ ಸಂಜೆ ನಮಗೊಂದು ತುರ್ತಿನ ಮಾಹಿತಿ ಬಂದಿತು. ನಮಗೆ ಸವಾಲು ಹಾಕಿ ಹೋಗಿದ್ದ ಮನುಷ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ʻಹೇಬಿಯಸ್‌ ಕಾರ್ಪಸ್‌ʼ (ವ್ಯಕ್ತಿ ಎಲ್ಲಿದ್ದಾರೋ ಗೊತ್ತಿಲ್ಲ. ಆದರೆ ಅವರನ್ನು ಹಾಜರುಪಡಿಸಲು ಪೊಲೀಸರಿಗೆ/ ಸಂಬಂಧಿಸಿದವರಿಗೆ ನಿರ್ದೇಶನ ಕೊಡಲು ನ್ಯಾಯಾಧೀಶರಿಂದ ಸೂಚನೆ) ಅರ್ಜಿ ಸಲ್ಲಿಸಿದ್ದರು. ನಾಳೆಯೇ ಬಾಲಕರನ್ನು ಹೈಕೋರ್ಟ್‌ನಲ್ಲಿ ನ್ಯಾಯಾಲಯಕ್ಕೆ ಒಪ್ಪಿಸಬೇಕು. 

ಇದೊಳ್ಳೆ ವಿಚಿತ್ರವಾಯಿತಲ್ಲ. ಮಕ್ಕಳು ಎಲ್ಲಿದ್ದಾರೆಂದು ಈ ಮನುಷ್ಯನಿಗೆ ಚೆನ್ನಾಗಿ ಗೊತ್ತಿರುವಾಗ ಹೇಬಿಯಸ್‌ ಕಾರ್ಪಸ್‌ ಅರ್ಜಿಯೇಕೆ ಬೇಕಿತ್ತು ಎಂಬುದು ನಮ್ಮ ಪ್ರ‍ಶ್ನೆಯಾಗಿತ್ತು. ನಾವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ನ್ಯಾಯಾಲಯಕ್ಕೆ ಹೋಗಿ, ಸರ್ಕಾರದ ಪರವಾಗಿ ವಾದಿಸುವ ಹಿರಿಯ ಪಬ್ಲಿಕ್‌ ಪ್ರಾಸೆಕ್ಯೂಟರ್‌ ಅವರನ್ನು ಸಂಪರ್ಕಿಸಿ ವಿವರಿಸಿದೆವು. ಆಗ ಪಿ.ಪಿ. ಆಗಿದ್ದ ಆ ಮಹಾನುಭಾವನಿಗೆ ಈ ವಿಚಾರ ಎಷ್ಟು ಅರ್ಥವಾಗಿತ್ತೋ ಗೊತ್ತಿಲ್ಲ, ಮೇಲೆ ಕುಳಿತು ಅಧಿಕಾರವಾಣಿಯಲ್ಲಿ ಮಾತನಾಡುತ್ತಿದ್ದ ನ್ಯಾಯಾಧೀಶರೆದುರು ಮತ್ತು ಈ ಅಪ್ಪನ ವಕೀಲನ ಪ್ರಶ್ನೆಗಳಿಗೆ ತಡಬಡಾಯಿಸಿದರು.

ಮಕ್ಕಳ ನ್ಯಾಯ ಕಾಯಿದೆ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗಳ ಪೀಠಕ್ಕೆ ನ್ಯಾಯಾಧೀಶರ ಸ್ಥಾನಮಾನವಿದೆ, ಈ ಮಕ್ಕಳು ʻಪೋಷಣೆ ಮತ್ತು ರಕ್ಷಣೆ ಆವಶ್ಯಕತೆಯಿರುವ ಮಕ್ಕಳು, ಈ ಮಕ್ಕಳನ್ನು ಅನಧಿಕೃತವಾಗಿ ನಾವು ಹಿಡಿದಿಟ್ಟುಕೊಂಡಿಲ್ಲ, ಈ ಬಾಲಕರು ಎಲ್ಲಿದ್ದರೆಂದು ದೂರು ನೀಡಿರುವ ಈ ಮನುಷ್ಯನಿಗೆ ಅದು ಚೆನ್ನಾಗಿ ಗೊತ್ತಿತ್ತು, ಅವನು ಮಕ್ಕಳನ್ನು ನೋಡಿದ್ದಾನೆ, ಮಾತನಾಡಿಸಿದ್ದಾನೆ, ಇದು ಸುಳ್ಳು ಹೇಬಿಯಸ್‌ ಕಾರ್ಪಸ್‌ ಅರ್ಜಿ, ಬೇಕಾದರೆ ಮಕ್ಕಳನ್ನು ಕೇಳಿ ನೋಡಿ ಎಂದೆಲ್ಲಾ ನಾನು ಪಿಪಿಯವರಿಗೆ ಮೊದಲೇ ವಿವರಿಸಿದ್ದರೂ ಪ್ರಯೋಜನಾಗಿರಲಿಲ್ಲ. 

ನ್ಯಾಯಾಧೀಶರೆದುರು ನಾನೇ ಮಾತನಾಡಲು ಹೋದಾಗ, ಆ ಪಿ.ಪಿ. ʻಶ್ಶಶ್ಶ…ʼ ಎಂದು ಬಾಯಿ ಮುಚ್ಚಿಸಿದ್ದರು. ನ್ಯಾಯಾಧೀಶರುಗಳು ಕಾಯಿದೆಯನ್ನು ಮತ್ತು ಈ ಮಕ್ಕಳಿಗೇನಾಗುತ್ತಿತ್ತು ಎಂದು ಅರ್ಥ ಮಾಡಿಕೊಂಡರೋ ಇಲ್ಲವೋ, ನಿಮಗೆ ಮಕ್ಕಳನ್ನು ಹಿಡಿದಿಟ್ಟುಕೊಳ್ಳುವ ಅಧಿಕಾರವಿಲ್ಲ, ನೀವೇನು ನ್ಯಾಯಾಲಯವೇನು ಎಂದೆಲ್ಲಾ ಕೂಗಾಡಿದ ನ್ಯಾಯಾಧೀಶರು, ಈಗಲೇ ಮಕ್ಕಳನ್ನು ಪೋಷಕರಿಗೆ ಹಸ್ತಾಂತರಿಸಿ ಎಂದು ಮೌಖಿಕ ಆಜ್ಞೆ ಹೊರಡಿಸಿಯೇಬಿಟ್ಟರು. ಆ ಅಪ್ಪ ಮತ್ತು ಅವನ ಕಡೆಯ ವಕೀಲರಿಗೆ ಮಕ್ಕಳನ್ನು ಒಪ್ಪಿಸಲೇಬೇಕಾಯಿತು.  

ನಾವು ಮತ್ತು ಅಧಿಕಾರಿಗಳು ಬೆಪ್ಪರಂತೆ ಹಿಂದೆ ಬಂದೆವು. ಪಿ.ಪಿ ಅತ್ತ ಸುಳಿಯಲೇ ಇಲ್ಲ. ಮಕ್ಕಳಿಂದ ಭಿಕ್ಷೆ ಬೇಡಿಸುತ್ತಿದ್ದ ಅಪ್ಪ, ಮಕ್ಕಳನ್ನು ವಶಕ್ಕೆ ತೆಗದುಕೊಂಡು ನಮ್ಮೆದುರೇ ಮೀಸೆ ಮೇಲೆ ಕೈ ಹಾಕಿಕೊಂಡು ಬೀಗುತ್ತಾ ಹೋದ.

(೨೦೨೧ರ ಆಗಸ್ಟ್‌ ಎರಡನೇ ವಾರ ಪೋಷಣೆ ಮತ್ತು ರಕ್ಷಣೆಯ ಆವಶ್ಯಕತೆಯಿದ್ದು, ಸರ್ಕಾರದ ಸುಪರ್ದಿಯಲ್ಲಿದ್ದಾಳೆ ಎಂದು ತಿಳಿದಿದ್ದರೂ ತಮ್ಮ ಬಾಲಕಿಯೊಬ್ಬಳನ್ನು ಹುಡುಕಿ ಕೊಡಿ ಎಂದು ಹಾಕಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ವಿಲೇ ಮಾಡಿರುವ ಬೆಂಗಳೂರಿನ ಹೈಕೋರ್ಟ್‌ನ ನ್ಯಾಯಾಧೀಶರು, ಮಕ್ಕಳ ಕಲ್ಯಾಣ ಸಮಿತಿಯವರ ಮಾತನ್ನು ಆಲಿಸಿ, ಅದೆಷ್ಟು ಗೌರವಯುತವಾಗಿ ʻಈ ಪ್ರಕರಣವನ್ನು ಗಮನಿಸಿ, ಮಕ್ಕಳ ನ್ಯಾಯ ಕಾಯಿದೆಯ ಅನುಗುಣವಾಗಿ ಮಕ್ಕಳ ಕಲ್ಯಾಣ ಸಮಿತಿಯವರು ಮಗುವಿನ ಹಿತದೃಷ್ಟಿಯಿಂದ ಸೂಕ್ತವಾದ ನಿರ್ಧಾರವನ್ನು ಕೈಗೊಳ್ಳಲು ಸಮರ್ಥರಾಗಿದ್ದಾರೆʼ ಎಂದು ಹೇಳಿ ಪ್ರಕರಣವನ್ನು ಅಲ್ಲಿಯೇ ಇತ್ಯರ್ಥಗೊಳಿಸಬೇಕು ಎಂದಿದೆ. ೨೦೦೮ರಲ್ಲಿ ನ್ಯಾಯಾಧೀಶರು ನಮ್ಮ ಮಾತು ಕೆಲ ಕಾಲ ಕೇಳಿದ್ದರೆ, ಮಕ್ಕಳ ನ್ಯಾಯ ಕಾಯಿದೆಯನ್ನು ಅರ್ಥ ಮಾಡಿಕೊಂಡಿದ್ದರೆ… ಪಿ.ಪಿ.ಯವರು ಸರಿಯಾಗಿ ವಿವರಿಸಿದ್ದರೆ…)

ಕಛೇರಿ ಸಮುಚ್ಚಯಗಳಲ್ಲಿ ಭಿಕ್ಷೆಗೆ ಬರುವ ಬಾಲಕಿಯರು 

ಆ ಹುಡುಗಿಯರಿಬ್ಬರೂ ಇನ್ನೂ ಹತ್ತು ಹನ್ನೆರಡರ ಹರೆಯದವರಿರಬೇಕು. ಸ್ವಲ್ಪ ಹೆಚ್ಚೇ ಎನಿಸುವಷ್ಟು ಮೇಕ್‌ಅಪ್‌ ಮಾಡಿಕೊಂಡಿದ್ದರು. ಬಿಗಿಯಾದ ಶರ್ಟ್‌, ಚಿಕ್ಕ ಸ್ಕರ್ಟ್‌, ಶೂ. ಪಟ ಪಟ ಇಂಗ್ಲಿಷ್‌ನಲ್ಲಿ ಮಾತು. ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಹೈಪಾಯಿಂಟ್‌ನ ನಮ್ಮ ಕಛೇರಿ ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ಗೆ (ಸಿ.ಆರ್.ಟಿ) ಬಂದಿದ್ದರು. ಬಂದ ಕಾರಣ, ತಮ್ಮ ಶಾಲಾ ಶುಲ್ಕ ಕಟ್ಟಲು ನೆರವು ನೀಡಿ. 

ನನಗಾಗಲೇ ಈ ದಂಧೆಯ ವಾಸನೆ ಹತ್ತಿತ್ತು. ನಯವಾಗಿ ಮಾತನಾಡಿ, ನನ್ನ ಸಹೋದ್ಯೋಗಿ ಮಹಿಳೆಯರನ್ನು ಕರೆಯಿಸಿ ಆ ಮಕ್ಕಳೊಡನೆ ಕುಳಿತು ಮಾತನಾಡಲು ಹೇಳಿದೆ. ಇನ್ನಿಬ್ಬರು ಸಹೋದ್ಯೋಗಿಗಳಿಗೆ ತಕ್ಷಣ ನಮ್ಮ ಕಛೇರಿ ಕೋಣೆ ಇರುವ ಅಂತಸ್ತಿನಲ್ಲಿ ಮತ್ತು ಕಟ್ಟಡದ ಕೆಳಗೆ ಯಾರಾದರೂ ಅನುಮಾನಾಸ್ಪದ ವ್ಯಕ್ತಿಗಳಿದ್ದಾರೇನು ನೋಡಿ ಬನ್ನಿ ಎಂದು ಕಳಿಸಿದೆ. ಹತ್ತಿರದಲ್ಲೇ ಇದ್ದ ಪೊಲೀಸ್‌ ಠಾಣೆಗೆ ಫೋನ್‌ ಮಾಡಿ ನೆರವು ಕೇಳಿದೆ. 

ಮೊದಮೊದಲು ನಗುನಗುತ್ತಲೇ ಉತ್ತರಿಸುತ್ತಿದ್ದ ಬಾಲಕಿಯರಿಗೆ ಯಾವಾಗ ನಾವು ಹಣ ಕೊಡುವುದಿಲ್ಲ, ಅಷ್ಟೇ ಅಲ್ಲ ಬಿಡುವುದಿಲ್ಲ ಎಂದು ಗೊತ್ತಾಗುತ್ತಿದ್ದಂತೆಯೇ ಭೋರೆಂದು ಅಳಲಾರಂಭಿಸಿದರು, ನೆಲದ ಮೇಲೆ ಬಿದ್ದು ಹೊರಳಿದರು, ಕೂಗಿದರು! ನಮ್ಮ ಕಛೇರಿಯ ಅಕ್ಕಪಕ್ಕದ ಕಛೇರಿಗಳಿಂದ ಜನ ಬಂದರು. ವಿಚಾರ ಏನೆಂದು ತಿಳಿದುಕೊಂಡರು. ಜೊತೆಗೆ ಅವರಿಗೆಲ್ಲಾ ಮಕ್ಕಳ ಹಕ್ಕುಗಳನ್ನು ಕುರಿತು ನಾವು ಮಾಡುವ ಕೆಲಸದ ಬಗ್ಗೆ ಗೊತ್ತಿದ್ದರಿಂದ ಹೆಚ್ಚೇನೂ ಗಲಾಟೆಯಾಗಲಿಲ್ಲ. 

ಪೊಲೀಸರು ಸಾಕಷ್ಟು ಬೇಗನೆ ಬಂದರು. ಮಕ್ಕಳನ್ನು ಬಾಲಕಿಯರ ಬಾಲ ಮಂದಿರಕ್ಕೆ ಅಲ್ಲಿಂದ ಮಕ್ಕಳ ಕಲ್ಯಾಣ ಸಮಿತಿಯೆದುರು ಹಾಜರುಪಡಿಸಲಾಯಿತು. ಆಗ ಎಂದಿನಂತೆ ʻಅಪ್ಪ ಅಮ್ಮʼ ದಾಖಲೆಗಳೊಂದಿಗೆ ಬಂದರು. ಈ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಅದು ರಾಜಾಸ್ಥಾನದಲ್ಲಿ! ಈಗ ಬೆಂಗಳೂರು ನೋಡಲು ಬಂದವರು ಅಕಸ್ಮಾತ್‌ ಆಗಿ ಯಾವುದೋ ಕಟ್ಟಡ ಹತ್ತಿದ್ದಾರೆ, ತಪ್ಪಾಗಿ ತಿಳಿದು ಅವರನ್ನು ಇಲ್ಲಿಗೆ ಕರೆದುಕೊಂಡು ಬರಲಾಗಿದೆ. 

ಅಷ್ಟು ಹೊತ್ತಿಗೆ ಚೈಲ್ಡ್‌ಲೈನ್‌ ೧೦೯೮ ತಂಡದವರು ಮಕ್ಕಳ ಗೃಹ ತನಿಖೆ ಮಾಡಿದ್ದರು. ಬೆಂಗಳೂರಿನ ಪೂರ್ವಭಾಗದಲ್ಲಿ ರಾಜಾಸ್ಥಾನದಿಂದ ನಿರಾಶ್ರಿತರಾಗಿ ವಲಸೆ ಬಂದವರು ಹಿಂಡುಹಿಂಡಾಗಿ ವಾಸಿಸುತ್ತಿದ್ದಾರೆ. ನೆಲೆಯಿಲ್ಲ, ದೊಡ್ಡವರೆಲ್ಲಾ ಏನೇನೋ ಉದ್ಯೋಗ, ಭಿಕ್ಷೆ ಇತ್ಯಾದಿಗಳಿಗೆ ಹೋಗುತ್ತಾರೆ. ಮಕ್ಕಳನ್ನು ಹೀಗೆ ಬೇರೆಬೇರೆ ವೇಷದಲ್ಲಿ, ರೂಪದಲ್ಲಿ ಪೋಷಕರು ಮತ್ತವರ ಬಂಧುಗಳು ಭಿಕ್ಷೆಗೆ ದೂಡುತ್ತಾರೆ! 

ಹೀಗೆಯೇ, ಸುಮಾರು ೧೨ ವರ್ಷದ ಒಬ್ಬ ಬಾಲಕಿ ತನಗೆ ಮಾತು ಬಾರದು ಎಂದು ಹೇಳುವ ದಾಖಲೆಗಳೊಂದಿಗೆ ಒಂದು ರಸೀತಿ ಪುಸ್ತಕ ಹಿಡಿದು ನಮ್ಮ ಕಛೇರಿಗೆ ಬಂದಿದ್ದಳು. ನಮ್ಮದು ಎಂದಿನಂತೆ ಅದೇ ಕಾರ್ಯವಿಧಾನ. ಕೂಡಿಸಿ ನೀರು ಕೊಟ್ಟು, ತಿಂಡಿ ತಿನ್ನಲು ಕೊಡುತ್ತೇವೆ, ತಿನ್ನುವೆಯಾ ಎಂದು ಕೇಳಿದೆವು. ಆಕೆ, ಬೇಡ ಎಂದು ಸನ್ನೆ ಮಾಡಿ ದುಡ್ಡು ಕೊಡಿ ಎಂದಳು. ಅಷ್ಟು ಹೊತ್ತಿಗೆ ನಮ್ಮ ಒಬ್ಬ ಸಹೋದ್ಯೋಗಿ ಚೈಲ್ಡ್‌ಲೈನ್‌ ೧೦೯೮ರ ಗೆಳೆಯರಿಗೆ ಹಾಗೂ ಪೊಲೀಸರಿಗೆ ತಿಳಿಸಿ ಆಗಿತ್ತು. 

ಅವರೊಡನೆ ಹೋಗಲು ತಾನು ಸಿದ್ಧವಿಲ್ಲ ಎಂದು ಆ ಹುಡುಗಿ ʻನಿಶ್ಶಬ್ದʼವಾಗಿಯೇ ಪ್ರತಿಭಟಿಸಿದಳು. ನೆಲದ ಮೇಲೆ ಬಿದ್ದು ಹೊರಳಾಡಿದಳು. ಆದರೂ ಅವಳನ್ನು ಪೊಲೀಸ್‌ ಮಾಹಿತಿ ಕೊಟ್ಟು ಬಾಲಕಿಯರ ಬಾಲಮಂದಿರಕ್ಕೆ ಒಯ್ಯಲಾಯಿತು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯೆದುರು ಹಾಜರು ಪಡಿಸಿದಾಗಲೂ ಆಕೆ ಮಾತನಾಡಲಿಲ್ಲ. ಯಾವುದೇ ಗೊತ್ತು ಗುರಿ, ವಿಳಾಸ ಇಲ್ಲದೆ ಪತ್ತೆ ಕಷ್ಟವಾಗಿತ್ತು. 

ಮೂರು ದಿನದ ನಂತರ ಆಕೆ ಮಾತನಾಡಿದಳು. ಅದೊಂದು ದುರಂತದ ಕತೆ. ಬಹಳ ಆಸಕ್ತಿದಾಯಕ ವಿಚಾರವೆಂದರೆ, ಅವಳನ್ನು ಕೇಳಿಕೊಂಡು ಯಾರೂ ಬರಲಿಲ್ಲ. ನಮ್ಮ ಕಛೇರಿಯ ಮೇಲೆ ದಾಳಿಯಾಗಲಿಲ್ಲ! ಅವಳ ವಿಳಾಸ, ಪೋಷಕರು, ಯಾವ ಊರು ಇತ್ಯಾದಿ ತಿಳಿಯಲೇ ಇಲ್ಲ. ಅವಳು ಅದನ್ನು ಹೇಳಲೇ ಇಲ್ಲ. ಬಾಲಕಿಯರ ಬಾಲ ಮಂದಿರದಲ್ಲೇ ಅವಳು ಬೆಳೆದಳು. ಅಷ್ಟೂ ಇಷ್ಟೂ ಶಿಕ್ಷಣವನ್ನೂ ಪಡೆದಳು. 

****

ಕಬ್ಬನ್‌ ಪಾರ್ಕಿನ ಪೈಪ್‌ನಲ್ಲಿ ಮಕ್ಕಳು

ನಶೆಯಲ್ಲಿ ಮೈಮರೆತಿದ್ದ ಇಬ್ಬರು ಯುವಕರು ಅಕಸ್ಮಾತ್‌ ಆಗಿ ಕಬ್ಬನ್‌ ಪಾರ್ಕ್‌ ಪೊಲೀಸರ ಕೈಗೆ ಬಿದ್ದಿದ್ದರು. ಅವರಿಬ್ಬರ ಬಡಬಡಿಕೆಯಿಂದ ಪೊಲೀಸರಿಗೆ ಏನೋ ಅನುಮಾನ ಬಂದಿತ್ತು. ಇನ್ನಷ್ಟು ವಿಚಾರಿಸಿದಾಗ ಗೊತ್ತಾಗಿದ್ದು ಅವರು ಮಕ್ಕಳಿಂದ ಭಿಕ್ಷೆ ಬೇಡಿಸುತ್ತಿದ್ದಾರೆ ಎನ್ನುವುದು. ಕಾರ್ಪೊರೇಷನ್‌ ವೃತ್ತ, ಕೆಂಪೇಗೌಡ ರಸ್ತೆ, ಮಹಾತ್ಮಾಗಾಂಧೀ ರಸ್ತೆ, ಸುತ್ತಮುತ್ತಲಲ್ಲಿ ಮಕ್ಕಳಿಂದ ಇವರು ಭಿಕ್ಷೆ ಬೇಡಿಸುತ್ತಿದ್ದರು. ಸಂಜೆಯ ಹೊತ್ತಿಗೆ ಮಕ್ಕಳಿಗೆ ಊಟ ಹಾಕಿ  ನೀರು ಸಾಗಿಸಲಿರುವ ದೊಡ್ಡ ಖಾಲಿ ಪೈಪ್‌ನಲ್ಲಿ ಕೂಡಿ ಹಾಕಿಟ್ಟುಕೊಂಡು  ಭಿಕ್ಷೆಯಲ್ಲಿ ಮಕ್ಕಳು ತಂದಿದ್ದ ದುಡ್ಡಿನಲ್ಲಿ ಮಜಾ ಮಾಡುತ್ತಿದ್ದರು. (೨೦೦೫)

ಮಕ್ಕಳನ್ನು ಕರೆತಂದು ಚಿಕಿತ್ಸೆ ಕೊಡಿಸಿ, ಆಪ್ತಸಮಾಲೋಚನೆ ಮಾಡಿದಾಗ ಬೆಚ್ಚಿಬೀಳುವಂತಹ ವಿವರಗಳು  ಹೊರಬಂದವು. ಕೈಗೆ ಗಾಯ ಮಾಡುವುದು, ಕಾಲು ಕುಂಟುವಂತೆ ಮಾಡುವುದು, ಕಣ್ಣಿಗೆ ಏಟು, ಇತ್ಯಾದಿ ಮಾಡಿ ಮಕ್ಕಳನ್ನು ಭಿಕ್ಷೆಗೆ ಇರಿಸಿದ್ದರು. ಈ ಮಕ್ಕಳನ್ನು ಎಲ್ಲೆಲ್ಲಿಂದಲೋ ಕದ್ದುಕೊಂಡು ಬಂದಿದ್ದರು. (ಮುಂದೆ ೨೦೦೮-೦೯ರಲ್ಲಿ ಇಂತಹ ದೃಶ್ಯಗಳನ್ನು ಸ್ಲಂ ಡಾಗ್‌ ಮಿಲಿಯನೀರ್‌ ಸಿನೆಮಾದಲ್ಲಿ ನೋಡಿದೆವು). ಈ ಯುವಕರನ್ನು ಹಿಡಿದದ್ದು, ಮಕ್ಕಳನ್ನು ಬಿಡಿಸಿದ್ದು ಹಲವಾರು ಕಳೆದು ಹೋಗಿದ್ದ ಮಕ್ಕಳ ಪತ್ತೆಗೆ ನೆರವಾಯಿತು. 

**** 

ಎರಡು ವಾರಗಳ ಹಿಂದೆ… 

ಚೈಲ್ಡ್‌ಲೈನ್‌ ೧೦೯೮ ತಂಡದವರು ಭಿಕ್ಷೆಯಲ್ಲಿದ್ದ ಮಕ್ಕಳನ್ನು ಕುರಿತು ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದರು. ಫೋಟೋಗಳು ಇದ್ದವು. ಸುಮಾರು ೫೦ಕ್ಕೂ ಹೆಚ್ಚು ಜನರಿರುವ ದೊಡ್ಡ ತಂಡ. ಪ್ರತಿದಿನ ಸುಮಾರು ಎಂಟು ಗಂಟೆಗೆಲ್ಲಾ ತಮ್ಮದೇ ದೊಡ್ಡ ವಾಹನದಲ್ಲಿ ಎರಡು ಮೂರು ದಿಕ್ಕುಗಳಿಗೆ ತಂಡ ತಂಡವಾಗಿ ಹೊರಡುತ್ತಾರೆ. ಕೆಲವೆಡೆ ಮಹಿಳೆಯರು ಎಳೆ ಮಕ್ಕಳನ್ನು ಎತ್ತಿಕೊಂಡು ಇಳಿಯುತ್ತಾರೆ. ಕೆಲವು ವೃತ್ತಗಳಲ್ಲಿ ಮಕ್ಕಳನ್ನು ಮಾತ್ರ ಬಿಡಲಾಗುತ್ತದೆ. ಅವರನ್ನು ಉಸ್ತುವಾರಿ ಮಾಡಲು ಒಂದಿಬ್ಬರು ಗಂಡಸರು ಇರುತ್ತಾರೆ. ಒಂದಷ್ಟು ಜನರನ್ನು ಸಂಜೆ ನಾಲ್ಕರ ಹೊತ್ತಿಗೆ ವಾಪಸ್‌ ಕರೆದೊಯ್ಯುತ್ತಾರೆ. ಕೆಲವರು ರಾತ್ರಿಯವರೆಗೂ ಉಳಿಯುತ್ತಾರೆ. 

ಭಿಕ್ಷೆ ಬೇಡುವ ಮಹಿಳೆಯರನ್ನು ಯಾರಾದರೂ ಪ್ರಶ್ನೆ ಮಾಡಿದರೆ ತಕ್ಷಣವೇ ಅವರು ತಮ್ಮ ಬಳಿ ಇರುವ ಹೇರ್‌ಪಿನ್‌, ಸೂಜಿ, ಪೆನ್‌ ಇತ್ಯಾದಿ ತೋರಿಸಿ ತಾವು ಅದನ್ನು ಮಾರುವವರೆಂದು ಯಾಮಾರಿಸುತ್ತಾರೆ. ಚಿಕ್ಕ ಮಕ್ಕಳನ್ನು ತೋರಿಸಿ ಭಿಕ್ಷೆ ಬೇಡುವವರಿಗೆ ಹೆಚ್ಚಿನ ಆದಾಯ ಬರುತ್ತದೆ. ಚಿಕ್ಕ ಪುಟ್ಟ ಮಕ್ಕಳು ಕೂಡಾ ಸಾಕಷ್ಟು ಸಂಪಾದನೆ ಮಾಡುತ್ತಾರೆ. ಎಲ್ಲರೂ ರಾತ್ರಿ ತಮ್ಮ ಟೆಂಟ್‌ಗಳಿಗೆ ಹಿಂದಿರುಗುತ್ತಾರೆ. ಊಟವಾದ ಮೇಲೆ ಬ್ಯಾಟರಿಗಳ ಸಹಾಯದಿಂದ ರಾತ್ರಿ ಬಹುಹೊತ್ತಿನ ವರೆಗೆ ಸಿನೆಮಾ ನೋಡುತ್ತಾರೆ. ಅವರ ಬಳಿ ಬೈಕುಗಳು ಮತ್ತು ದೊಡ್ಡ ದೊಡ್ಡ ವಾಹನಗಳಿವೆ. ಇಡೀ ಭಿಕ್ಷೆಯ ವ್ಯವಹಾರ ನೋಡಿಕೊಳ್ಳುವವರು ಮೂರ್ನಾಲ್ಕು ಜನ ಮೂವತ್ತು ನಲವತ್ತರ ವಯಸ್ಸಿನ ಗಂಡಸರು. 

ಈ ಪ್ರಕರಣವನ್ನು ಹೇಗೆ ಭೇದಿಸಬೇಕು, ಮಕ್ಕಳನ್ನು ರಕ್ಷಿಸಬೇಕು ಎಂದು ನಾವು ವಿವರವಾದ ಸಮಾಲೋಚನೆ ನಡೆಸಿದೆವು. ಮಕ್ಕಳನ್ನು ಕರೆದುಕೊಂಡು ಭಿಕ್ಷೆಗೆ ಹೊರಟು ನಿಂತಾಗ ಅವರನ್ನು ರಕ್ಷಿಸಬೇಕು, ಆಗ ಎಲ್ಲರೂ ಒಟ್ಟಿಗೆ ಸಿಗುತ್ತಾರೆ. ಈ ವಿಧಾನ ಅದೆಷ್ಟು ಸೂಕ್ತ ಹೌದು ಅಥವಾ ಅಲ್ಲ ಎಂಬ ಬಗ್ಗೆ ಒಂದಷ್ಟು ಜಿಜ್ಞಾಸೆಯೂ ಆಯಿತು. ಕೊನೆಗೂ ಅದೇ ಸರಿ, ಇಲ್ಲವಾದರೆ ಒಂದೊಂದು ವೃತ್ತದ ಬಳಿ ನಾವು ರಕ್ಷಿಸುತ್ತಾ ಹೋದರೆ ಮುಗಿಯಲಾಗದ ಪ್ರಕ್ರಿಯೆ ಮತ್ತು ಎಲ್ಲರೂ ಎಚ್ಚೆತ್ತುಕೊಂಡು ಮರೆಯಾಗಿಬಿಡುತ್ತಾರೆ ಎಂದು ನಿರ್ಧಾರವಾಯಿತು. ನಿಗದಿತ ದಿನ ಚೈಲ್ಡ್‌ಲೈನ್‌, ಮಕ್ಕಳ ಕಲ್ಯಾಣ ಸಮಿತಿಗಳ ಸದಸ್ಯರು, ಇತರ ಸ್ವಯಂಸೇವಾ ಸಂಘಟನೆಗಳ ಪ್ರತಿನಿಧಿಗಳು ಮತ್ತು ಪೊಲೀಸರು ಎಂಟು ಗಂಟೆಯ ಮೊದಲೇ ಗುರುತಿಸಲಾಗಿದ್ದ ಸ್ಥಳಕ್ಕೆ ತಲುಪಿದೆವು. 

ನಮ್ಮ ಗುರಿಯಾಗಿದ್ದ ಗುಂಪಿನ ಸದಸ್ಯರಿಂದ ಟೆಂಟ್‌ಗಳಲ್ಲಿ ಭಾರೀ ಚಟುವಟಿಕೆಗಳು ನಡೆದಿತ್ತು. ಅವಸರದ ಮಾತುಗಳು, ಡ್ರೈವರ್‌ಗಳು ಎಲ್ಲರನ್ನೂ ಹೊರಡಿಸುತ್ತಿದ್ದರು. ಇನ್ನೇನು ವಾಹನಗಳು ಹೊರಡಬೇಕು, ಪೊಲೀಸರು ಅಡ್ಡ ನಿಂತರು. ಸರಳವಾದ ಮಾತುಗಳು, ಎಲ್ಲಿಗೆ ಹೊರಟಿದ್ದೀರಿ, ಮಕ್ಕಳು ಏನು ಮಾಡುತ್ತಾರೆ. ಈ ವಾಹನಗಳಿಗೆ ನಿಮ್ಮ ಬಳಿ ರಹದಾರಿ ಪತ್ರ ಇದೆಯಾ, ಲೈಸನ್ಸ್‌ ಇದೆಯಾ, ಇತ್ಯಾದಿ.

ವಾಹನಗಳಿಗೆ ಬೇಕಾದ ಎಲ್ಲ ದಾಖಲೆಗಳಿದ್ದವು. ಆದರೆ ಮಕ್ಕಳನ್ನು ಎಲ್ಲಿಗೆ ಒಯ್ಯುತ್ತಿದ್ದೀರಿ ಎನ್ನುವುದಕ್ಕೆ ಅವರಿಂದ ಸಮರ್ಪಕ ಉತ್ತರವಿರಲಿಲ್ಲ. ಮಕ್ಕಳು ತಾವು ‘ಭೀಕ್‌ ಮಾಂಗ್ನೇ ಕೇ ಲಿಯೇʼ ಎಂದು ಸ್ಪಷ್ಟವಾಗಿ ಹೇಳಿದರು. ಎಳೆ ಮಕ್ಕಳನ್ನು ಎತ್ತಿಕೊಂಡು ಸಿದ್ಧರಾಗಿದ್ದ ಕೆಲವರು ಮಹಿಳೆಯರೂ ಅದನ್ನೇ ಹೇಳಿದರು. ಆದರೆ ಗಂಡಸರಾರೂ ಅದನ್ನು ಒಪ್ಪಲಿಲ್ಲ. ತಾವು ಕೆಲಸಕ್ಕೆ ಹೊರಟಿದ್ದೇವೆ (ನಿಜ), ಬೆಂಗಳೂರು ನೋಡಿಸಲು ಬಂದಿದ್ದೇವೆ, ಇತ್ಯಾದಿ ಹೇಳಿ ಕೊಸರಾಡಿದರು. 

ಸುಮಾರು ಅರ್ಧ ಮುಕ್ಕಾಲು ಗಂಟೆಯ ಹೌದು, ಇಲ್ಲಗಳ ಮಾತುಗಳಾದ ಮೇಲೆ, ಚೈಲ್ಡ್‌ ಲೈನ್ ೧೦೯೮ನ ತಂಡದವರು ಮಕ್ಕಳನ್ನು ಮಾತನಾಡಿಸುತ್ತಿದ್ದಾಗ ಪೊಲೀಸರು ಆರು ಗಂಡಸರನ್ನ ವಶಕ್ಕೆ ತೆಗೆದುಕೊಂಡರು. ಆ ಜನರಿದ್ದ ಟೆಂಟ್‌ಗಳನ್ನು ತಪಾಸಣೆ ಮಾಡಿದರು. ಅಲ್ಲಿ ಒಂದಷ್ಟು ಗಾಂಜಾ ಮತ್ತಿತರ ಮಾದಕ ವಸ್ತುಗಳನ್ನು ಪತ್ತೆ ಮಾಡಿದ್ದರು ಎಂದು ನಂತರ ತಿಳಿಯಿತು. ನಂತರ ಆ ಗಂಡಸರನ್ನು ಪೊಲೀಸರು ತಮ್ಮ ವಾಹನದಲ್ಲಿ ಹತ್ತಿಸಿಕೊಂಡು ಠಾಣೆಗೆ ಹೋದರು. ತಾವೇ ದೂರು ದಾಖಲಿಸಿಕೊಳ್ಳುವುದಾಗಿ ಹೇಳಿದರು. ಅಲ್ಲಿದ್ದ ಎಲ್ಲ ಹೆಂಗಸರು ಮತ್ತು ಮಕ್ಕಳು ಭೋರೆಂದು ಅತ್ತರು. ಕೂಗಾಡಿದರು. ಪೊಲೀಸರತ್ತ ಮಣ್ಣು ತೂರಿದರು. ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ನಾವು ಸುಮ್ಮನೆ ನಿಂತು ನೋಡಿದೆವು. ನಾವ್ಯಾರೂ ಯಾವುದೇ ಪ್ರಕ್ರಿಯೆಯಲ್ಲಿ ನೇರವಾಗಿ ಪಾಲ್ಗೊಳ್ಳಲಿಲ್ಲ. 

ಚೈಲ್ಡ್‌ಲೈನ್‌ ಮತ್ತು ಮಹಿಳಾ ಪೊಲೀಸ್‌ ಸಹಾಯದಿಂದ ೧೭ ಮಕ್ಕಳನ್ನು ವಾಹನದಲ್ಲಿ ಹತ್ತಿಸಿಕೊಳ್ಳುವುದೊಂದು ಸಾಹಸವೇ ಆಯಿತು. ಮಕ್ಕಳು ಕೂಗುವುದೇನು, ಕಿರುಚುವುದೇನು, ದೊಡ್ಡ ಗಂಟಲಲ್ಲಿ ಅಳುವುದೇನು. ಸುತ್ತಮುತ್ತಲು ಓಡಾಡುತ್ತಿದ್ದ ಜನ ಮೊದಮೊದಲು ನಾವೇನೋ ದೊಡ್ಡ ಅಪರಾಧ ಮಾಡುತ್ತಿದ್ದೇವೆಂದು ಮಕ್ಕಳನ್ನು ರಕ್ಷಿಸಲು ಬಂದವರು, ಪೊಲೀಸರನ್ನು ನೋಡಿ ಹಿಂದೆ ನಿಂತರು. ಮಕ್ಕಳನ್ನು ಹತ್ತಿಸಿಕೊಂಡಿದ್ದ ವಾಹನ ನಿಮ್ಹಾನ್ಸ್‌ ಹಿಂದಿರುವ ಮಕ್ಕಳ ನಿಲಯಗಳತ್ತ ಓಡಿತು. ಆ ಗುಂಪಿನಲ್ಲಿದ್ದ ಮಹಿಳೆಯರು ಹಿಂದೆ ನಿಲ್ಲಬೇಕಾಯಿತು. 

ಮಕ್ಕಳನ್ನು ಭಿಕ್ಷೆಗೆ ದೂಡಿರುವ ಆಪಾದನೆಯ ಮೇಲೆ ಪೊಲೀಸರೇ ಮುಂದಾಗಿ ಎಫ್‌.ಐ.ಆರ್‌. ದಾಖಲಿಸಿ ಆರು ಗಂಡಸರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲು ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿತ್ತು. ಮಕ್ಕಳನ್ನು ಬಾಲಕರ ನಿಲಯ ಮತ್ತು ಬಾಲಕಿಯರ ನಿಲಯದಲ್ಲಿ ದಾಖಲು ಮಾಡಿಕೊಂಡು ವಿವರ ಸಂಗ್ರಹದ ಮಾತುಕತೆ ಆರಂಭಿಸಲಾಯಿತು. 

ಮಕ್ಕಳನ್ನು ಭಿಕ್ಷೆಗಿಟ್ಟುಕೊಂಡಿರುವುದು ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯಿದೆಯಂತೆ ಶಿಕ್ಷಾರ್ಹ ಅಪರಾಧ. ಜೊತೆಗೆ ಮಕ್ಕಳಿಗೆ ಶಿಕ್ಷಣ ಒದಗಿಸದಿರುವುದು ಇನ್ನೂ ದೊಡ್ಡ ಅಪರಾಧ. ಇಷ್ಟರ ಮೇಲೆ ಈ ಮಕ್ಕಳಲ್ಲಿ ಯಾರನ್ನಾದರೂ ಕದ್ದುಕೊಂಡು ಬಂದಿರಬಹುದೆ ಎನ್ನುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದರು. ಆ ಆಯಾಮವನ್ನೂ ಪರಿಶೀಲಿಸಬೇಕಿತ್ತು. 

ಆಗಲೇ ನನಗೆ ಬೇರೆ ಬೇರೆ ಕಡೆಗಳಿಂದ ಫೋನುಗಳು ಬರಲಾರಂಭಿಸಿತ್ತು. ಕರ್ನಾಟಕದವರು ಒಂದಷ್ಟು ಜನ ಹೇಳಿದ್ದು, ಬಡ ಜನರ ಹೊಟ್ಟೆಯ ಮೇಲೆ ಹೊಡೆಯಲು ನಿಮ್ಮ ದಬ್ಬಾಳಿಕೆ, ಕೆಳಜಾತಿಯವರ ಮೇಲೆ ಮೇಲ್ಜಾತಿಯವರ ದಾಳಿ, ನಿಮ್ಮ ಮೇಲೆ ಕ್ರಮ ಕೈಗೊಳ್ತೀವಿ ಇತ್ಯಾದಿ. ದೂರದ ರಾಜಾಸ್ಥಾನದಿಂದ ಬಂದಿದ್ದ ಕರೆ ವಿಶಿಷ್ಟವಾಗಿತ್ತು. ತನ್ನನ್ನು ಅಲೆಮಾರಿ ಸಮುದಾಯಗಳ ಸಂಘದ ಅಧ್ಯಕ್ಷ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಶಿಷ್ಟ ಹಿಂದಿಯಲ್ಲಿ ಒಂದಷ್ಟು ಹೇಳಿದ್ದ. ನನಗರ್ಥ ಆದದ್ದು, ʻಅಲೆಮಾರಿ ಸಮುದಾಯಗಳ ಹಕ್ಕುಗಳನ್ನು ಭಂಗ ಮಾಡಲು ಹೊರಟಿರುವುದು ತಪ್ಪು. ಭಿಕ್ಷೆ ಬೇಡುವುದು ಜನರ ಹಕ್ಕು. ಅದು ಅವರ ಸಂಸ್ಕೃತಿ. ರಾಷ್ಟ್ರೀಯ ಮಟ್ಟದಲ್ಲಿ ಎಲ್ಲಿ ಬೇಕಾದರೂ ಭಿಕ್ಷೆ ಬೇಡುವ ಅಧಿಕಾರ ಅವರಿಗಿದೆ. ಹೀಗಿರುವ ಅವರ ಸ್ವಾತಂತ್ರ್ಯವನ್ನು ಕಸಿದುಕೊಂಡಿರುವುದರಿಂದ ನನ್ನ ಮೇಲೆ ಆತ ರಾಷ್ಟ್ರೀಯ ಮಟ್ಟದಲ್ಲಿ ಮಾನವ ಹಕ್ಕುಗಳ ಆಯೋಗದ ಮುಂದೆ ದೂರು ದಾಖಲಿಸುತ್ತಾನೆ. ಈಗಿಂದೀಗಲೇ ಈ ಮಕ್ಕಳು ಮತ್ತು ವಯಸ್ಕರನ್ನು ಬಿಡದಿದ್ದರೆ, ನನ್ನ ಮೇಲೆ ಆಂದೋಲನ ನಡೆಸುತ್ತಾರೆ. ಇತ್ಯಾದಿʼ.

ಅದೇನೂ ಆಗಲಿಲ್ಲ. 

ಆದರೆ ಈಗ ನಾವು ಯಾವ ಪೊಲೀಸರ ನೆರವಿನಲ್ಲಿ ಮಕ್ಕಳನ್ನು ರಕ್ಷಿಸಿದ್ದೆವೋ, ಅದೇ ಪೊಲೀಸ್‌ ಠಾಣೆಯಲ್ಲಿ ನನ್ನ ಮೇಲೆ ದೂರು ದಾಖಲಾಗಲಿದೆ! ತಕ್ಷಣವೇ ನಮ್ಮ ಪರಿಚಯವಿದ್ದ ವಕೀಲರನ್ನು ಸಂಪರ್ಕಿಸಿ ವಿಚಾರಿಸಿದೆವು. ಎಫ್‌.ಐ.ಆರ್‌. ಆದಲ್ಲಿ ಮಾತ್ರ ಪೊಲೀಸ್‌ ಕರೆ ಕೊಟ್ಟರೆ ಆಗ ಠಾಣೆಗೆ ಹೋಗಬೇಕು ಎಂದು ಅವರು ವಿವರಿಸಿದರು. 

ಅದೇನಾಯಿತೋ ಏನೋ ಗೊತ್ತಿಲ್ಲ. ನನ್ನ ಮೇಲೆ ಎಫ್‌.ಐ.ಆರ್‌. ದಾಖಲಾಗಲಿಲ್ಲ. ನಂತರ ತಿಳಿದದ್ದು, ಅವರು ನನ್ನ ಮೇಲೆ ಕೊಡಬೇಕೆಂದಿದ್ದ ದೂರು, ʻನಮ್ಮ ವಾಸಸ್ಥಳವಾದ ಟೆಂಟ್‌ಗಳಿಗೆ ನಾನು ಒಂದಷ್ಟು ಜನರನ್ನು ಕಟ್ಟಿಕೊಂಡು ಹೋಗಿ ದಾಳಿ ಮಾಡಿ ಅವರಲ್ಲಿದ್ದ ಚಿನ್ನವನ್ನು ಕದ್ದಿದ್ದೀನೆ ಎಂದು! ಅದು ದರೋಡೆಗೆ ಸಮನಾದ ಆಪಾದನೆʼ.

ಮುಂದಿನ ಒಂದು ವಾರಗಳ ಕಾಲ ಬಾಲಕರ ಬಾಲ ಮಂದಿರವಿರುವ ಆವರಣದಲ್ಲಿ ಅವರ ಇಡೀ ಸಮುದಾಯ ಹೆಚ್ಚೂ ಕಡಿಮೆ ಉಪವಾಸ ಸತ್ಯಾಗ್ರಹ ಮಾಡಿದರು. ಬುಡಕಟ್ಟು ಸಮುದಾಯದ ನಾಯಕರೆಂದು ಹೇಳಿಕೊಂಡು ಅನೇಕರು ಕೆಲವು ರಾಜಕೀಯ ಮುಖಂಡರ ಲೆಟರ್‌ಹೆಡ್‌ಗಳಲ್ಲಿ ಪತ್ರಗಳನ್ನು ತಂದಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರು ಇಲಾಖಾ ಸಿಬ್ಬಂದಿಯಿಂದ ಅನೌಪಚಾರಿಕವಾಗಿ ವಿವರಣೆಯನ್ನು ಪಡೆದುಕೊಂಡರು. ಇಲ್ಲ, ಈ ಮಕ್ಕಳ ಕಲ್ಯಾಣ ಸಮಿತಿಯವರು ಜಪ್ಪಯ್ಯ ಎಂದರೂ ಬಿಡುವುದಿಲ್ಲ ಎಂದು ಗೊತ್ತಾದ ಮೇಲೆ ಬಹುತೇಕ ಎಲ್ಲರೂ ಸುಮ್ಮನಾದರು. 

ಮುಂದಿನ ಮೂರು ವಾರದಲ್ಲಿ ಧಿಡೀರ್‌ ಬೆಳವಣಿಗೆಯಾಯಿತು. ಈ ಜನರ ಪ್ರಕರಣ ನ್ಯಾಯಾಲಯದೆದುರು ಬಂದಿತ್ತಂತೆ. ಇವರೆಲ್ಲರೂ ತಪ್ಪು ಒಪ್ಪಿಕೊಂಡರು. ಪ್ರತಿಯೊಬ್ಬರಿಗೂ ಮಕ್ಕಳನ್ನು ಭಿಕ್ಷೆ ಕೇಳಲು ದೂಡಿದ್ದ ಆಪಾದನೆ ಮೇಲೆ ಏನೋ ಒಂದು ಕನಿಷ್ಠ ದಂಡ ಹಾಕಿ ಬಿಟ್ಟಿದ್ದರು. 

ನಂತರದ ಕ್ಷಿಪ್ರ ಬೆಳೆವಣಿಗೆಯಲ್ಲಿ ಆ ಎಲ್ಲ ಮಕ್ಕಳನ್ನು ಬಿಡುಗಡೆ ಮಾಡಬೇಕೆಂದೂ ತಾವು ಕರ್ನಾಟಕದಲ್ಲಿಯೇ ಇರುವುದಿಲ್ಲವೆಂದು ಮಾತು ನೀಡಿ ಮಕ್ಕಳನ್ನು ಕರೆದುಕೊಂಡು ಎಲ್ಲರೂ ಹೊರಟುಹೋದರುರು. 

ಈಗಲೂ ನಗರಗಳಲ್ಲಿ ಮಕ್ಕಳು ಭಿಕ್ಷೆ ಬೇಡುವ ಪರಿಸ್ಥಿತಿ ಹೆಚ್ಚೇನೂ ಬದಲಾಗಿಲ್ಲ. ಈಗಲೂ ಮಕ್ಕಳಿಂದ ಭಿಕ್ಷೆ ಬೇಡಿಸುವುದು ನಡೆದೇ ಇದೆ. ಕೊರೋನಾ ಅವಧಿಯಲ್ಲಿಯೂ ಈ ಭಿಕ್ಷೆ ಜೋರಾಗಿಯೇ ನಡೆದಿದೆ. 

ಕಳೆದ ವರ್ಷ ಸಹೃದಯರೊಬ್ಬರು, ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮ್ಮೆ ಹೂಡಿ ಮಕ್ಕಳು ಭಿಕ್ಷೆ ಬೇಡುವ ಪರಿಸ್ಥಿತಿ ಬದಲಿಸಲು, ಸಂಪೂರ್ಣವಾಗಿ ತಡೆಯಲು ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿದ್ದಾರೆ. ಇದು ʻಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ ೧೯ರ ಉಲ್ಲಂಘನೆ. ಅಷ್ಟೇ ಅಲ್ಲ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ೨೦೦೯ ಹಾಗೂ ಸಂವಿಧಾನದ ಪರಿಚ್ಛೇದ ೨೧ ಎ (೬ರಿಂದ ೧೪ ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಉಚಿತ ಮತ್ತು ಕಡ್ಡಾಯ) ಉಲ್ಲಂಘನೆ. ಮಕ್ಕಳು ಭಿಕ್ಷೆ ಬೇಡುತ್ತಿದ್ದರೆ ಅದು ಸರ್ಕಾರದ ಹೊಣೆʼ ಎಂದಿದ್ದಾರೆ. ಆ ಪ್ರಕರಣ ವಿಚಾರಣೆಯ ಹಂತದಲ್ಲಿದ್ದು, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಚೈಲ್ಡ್‌ ಲೈನ್‌೧೦೯೮, ಪೊಲೀಸರು,  ಸ್ವಯಂಸೇವಾ ಸಂಘಟನೆಗಳು ಎಲ್ಲರೂ ಒಗ್ಗೂಡಿ ಹಲವು ಹಂತದ ಯೋಜನೆಗಳು, ಕ್ರಿಯಾ ತಂತ್ರಗಳನ್ನು ನ್ಯಾಯಾಲಯಕ್ಕೆ ಮಂಡಿಸಿದ್ದೇವೆ. 

***

ಬೆಂಗಳೂರಿನ ಅರಮನೆ ರಸ್ತೆಯಲ್ಲಿದ್ದ ಜೈನ್‌ ಕಾಲೇಜಿನ ಆವರಣದಿಂದ ಒಮ್ಮೆ ಮಕ್ಕಳ ಕಡ್ಡಾಯ ಮತ್ತು ಉಚಿತ ಶಿಕ್ಷಣ ಕಾಯಿದೆ (ಆರ್.ಟಿ.ಇ) ಜಾರಿ ಕುರಿತು ಒಂದು ಸಭೆ ಮುಗಿಸಿಕೊಂಡು ಹೊರ ಬಂದೆ. ನನ್ನ ಸಹೋದ್ಯೋಗಿಗಳು ಮತ್ತಿತರರು ಇನ್ನೂ ಕಾಲೇಜಿನ ಆವರಣ ದಾಟಿರಲಿಲ್ಲ. ಆಗಲೇ ನನ್ನೆದುರು ಒಬ್ಬ ಹತ್ತು ಹನ್ನೆರೆಡು ವರ್ಷದ ಹುಡುಗ ಬಂದು ಕೈ ಚಾಚಿದ. ನಗುಮೊಗದಿಂದಲೇ ಅವನ ಹೆಗಲ ಮೇಲೆ ಕೈ ಹಾಕಿ, ʻಏನು ಹೆಸರೋ ನಿನ್ನದು…ʼ ಎಂದೆ. ಅಷ್ಟೆ. ಧಡಕ್‌ ಎಂದು ನೆಲಕ್ಕೆ ಬಿದ್ದ. ಏನಾಯಿತು ಎಂದು ನೋಡುವಷ್ಟರಲ್ಲಿ ಎದ್ದು ಓಡಲೆತ್ನಿಸಿದ. ಜಾಗೃತನಾದ ನಾನು ಅವನ ಕೈಯನ್ನು ಬಿಗಿಯಾಗಿಯೇ ಹಿಡಿದೆ. ಅವನು ಎಷ್ಟು ದೊಡ್ಡ ಗಂಟಲಲ್ಲಿ ಅಳಲು ಆರಂಭಿಸಿದನೆಂದರೆ ಸುತ್ತಮುತ್ತ ಇದ್ದ ಜನರು, ವಾಹನಗಳಲ್ಲಿ ಹೋಗುತ್ತಿದ್ದವರು ಅನೇಕರು ದೊಡ್ಡ ಗುಂಪಾದರು. ಅಷ್ಟರಲ್ಲಿ ನನ್ನ ಸಹೋದ್ಯೋಗಿಗಳು ಮತ್ತು ಆ ಹೊತ್ತು ನಮ್ಮೊಡನಿದ್ದ ಚೈಲ್ಡ್‌ಲೈನ್‌ ೧೦೯೮ ಸಿಬ್ಬಂದಿ ಗುಂಪನ್ನು ಎದುರಿಸಿದೆವು. 

ಗುಂಪಿನಿಂದ ತಲಾ ಒಂದೊಂದು ಮಾತು, ನೀವು ಮಕ್ಕಳನ್ನು ಕದಿಯುವವರಿರಬೇಕು, ಮಗುವಿಗೆ ಏಕೆ ಹಿಂಸೆ ಕೊಡುತ್ತೀರಿ. ಏನೋ ಪಾಪ ನಾಲ್ಕು ಕಾಸು ಭಿಕ್ಷೆ ಬೇಡಿಕೊಂಡು ಬದುಕ್ತಾರೆ. ನಿಮ್ಮದೇನು ಕಷ್ಟ, ಇತ್ಯಾದಿ. ಒಂದು ತರಹದಲ್ಲಿ ನಾವು ಇಂತಹ ಅವಕಾಶಗಳು ಒದಗಿದಾಗ ಅದರ ಸದುಪಯೋಗ ಮಾಡಿಕೊಳ್ಳುವವರು. 

ಆ ಹುಡುಗನ ಕೈ ಹಿಡಿದುಕೊಂಡೇ ನಾನೊಂದು ಪುಟ್ಟ ಭಾಷಣ ಮಾಡಿದೆ. ಮಕ್ಕಳ ಹಕ್ಕುಗಳು, ಸರ್ಕಾರದಿಂದ ಅವರ ಶಿಕ್ಷಣ ಮತ್ತು ಆರೋಗ್ಯ, ಪೌಷ್ಟಿಕತೆಗಾಗಿ ಇರುವ ಸೌಲಭ್ಯಗಳು, ಮಕ್ಕಳೇಕೆ ಭಿಕ್ಷೆ ಬೇಡಬಾರದು, ಇತ್ಯಾದಿ. 

ಬಹಳ ಮುಖ್ಯವಾಗಿ ಸ್ವಲ್ಪ ಗಟ್ಟಿಯಾಗಿಯೇ ಹೇಳಿದೆ, ʻಸಾರ್ವಜನಿಕರಲ್ಲಿ ವಿನಂತಿ : ಮಕ್ಕಳಿಗೆ ಭಿಕ್ಷೆ ನೀಡುವುದರಿಂದ ಖಂಡಿತಾ ನಿಮಗೆ ಪುಣ್ಯ ಬರುವುದಿಲ್ಲ. ನಿಮ್ಮ ಭಿಕ್ಷೆ ಮಕ್ಕಳನ್ನು ಇನ್ನಷ್ಟು ದುರಂತಕ್ಕೆ, ಕಷ್ಟದ ಪರಿಸ್ಥಿತಿಗೆ ದೂಡುತ್ತದೆ. ಮಕ್ಕಳು ಭಿಕ್ಷೆ ಬೇಡುತ್ತಿದ್ದರೆ ಅಥವಾ ಮಕ್ಕಳಿಂದ ಭಿಕ್ಷೆ ಬೇಡಿಸುತ್ತಿರುವುದು ಕಂಡರೆ ಚೈಲ್ಡ್‌ಲೈನ್‌ ೧೦೯೮ಗೆ ಮಾಹಿತಿ ಕೊಡಿʼ.

ಈ ಮಾತನ್ನು ಈಗಲೂ ನಾವೊದಷ್ಟು ಜನ ಹೇಳುತ್ತಲೇ ಇರುತ್ತೇವೆ. ಬನ್ನಿ ನೀವೂ ನಮ್ಮ ಜೊತೆ ದನಿಯಾಗಿ. ಮಕ್ಕಳ ಹಕ್ಕುಗಳನ್ನು ರಕ್ಷಿಸೋಣ. 

‍ಲೇಖಕರು Admin

August 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: