ಹೆಗ್ಗಣವೋ ಇಲಿ ?
ಜೆರಾಲ್ಡ್ ಕಾರ್ಲೋ
ಮೂಲ: ಸುರೇಶ್ ಮೆನನ್
ನಮ್ಮ ದೇಶದಲ್ಲಿ ವರ್ಷಕ್ಕೆ ಕನಿಷ್ಟ ಅರವತ್ತು ಸಾಹಿತ್ಯ ಮೇಳಗಳು ನಡೆಯುತ್ತವೆಂದು ಇತ್ತಿಚೆಗೆ ಓದಿದೆ. ಇವುಗಳಲ್ಲಿ ಎಷ್ಟು ಮೇಳಗಳು, ಒಂದು ದಿನ, ಅದೂ ಬೇಡ ಒಂದು ಅಧಿವೇಶನ ಸಾಹಿತ್ಯದ ಬಹುಮುಖ್ಯವಾದ ಬಾಷಾಂತರ ಪ್ರಕಾರದ ಚರ್ಚೆಗೆ ಮೀಸಲಾಗಿಡುತ್ತವೆ ಎಂದುಕೊಂಡಿದ್ದೀರಾ? ನಿಮಗೆಲ್ಲಾ One Hundred Years of Solitude, Hopscotch, Name of the Rose, The Unbearable Lightness of Being ಮತ್ತಿತರ ಜಗದ್ವಿಖ್ಯಾತ ಕೃತಿಗಳನ್ನು ರಚಿಸಿದವರ ಹೆಸರುಗಳು ಚೆನ್ನಾಗಿ ಗೊತ್ತು. ಹಾಗೇ, ಅವುಗಳನ್ನು ನಮ್ಮ ಬಾಷೆಗೆ ಅನುವಾದ ಮಾಡಿದವರ ಹೆಸರಗಳನ್ನೂ ಹೇಳಬಲ್ಲಿರಾ?
ಗೇಬ್ರಿಯಲ್ ಗಾರ್ಸೆ ಮಾರ್ಕೆಜ್ ಮಲೆಯಾಳಂ ಭಾಷೆಯ ಸುಪ್ರಸಿದ್ಧ ಲೇಖಕ ಎಂದು ಅಲ್ಲಿಯ ಜನ ಹಾಸ್ಯ ಚಟಾಕಿ ಹಾರಿಸುತ್ತಾರೆ! ಬಹಳಷ್ಟು ಕೇರಳೀಯರಿಗೆ ಮಾರ್ಕೆಜ಼್ ಈ ಬಾಷೆಯಿಂದಲೇ ಪರಿಚಿತ. ಸ್ಪ್ಯಾನಿಶ್ ಮತ್ತು ಪೋರ್ಚುಗೀಸ್ ಬಾಷೆಯ ಮಲೆಯಾಳಂ ಅನುವಾದಗಳು ಸಿಗುವಷ್ಟು ಸುಲಭವಾಗಿ ಪಂಜಾಬಿ ಮತ್ತು ಗುಜರಾತಿ ಬಾಷೆಯಲ್ಲಿ ಸಿಗಲಾರವು. ಇದೇ ಮಾತು ತೆಲುಗು ಮತ್ತು ಬಂಗಾಲಿ ಬಾಷೆಗಳಲ್ಲಿ ಮಲೆಯಾಳಂ ಅನುವಾದಗಳ ಬಗ್ಗೆ ಹೇಳಬಹುದೇನೋ? ಒ.ವಿ ವಿಜಯನ್ ತಮ್ಮ ಪುಸ್ತಕಗಳನ್ನು ಇಂಗ್ಲಿಷಿಗೆ ತಾವೇ ಭಾಷಾಂತರಿಸುತ್ತಾರೆ. ಗಿರೀಶ್ ಕಾರ್ನಾಡ್ ಕೂಡ ತಮ್ಮ ನಾಟಕಗಳನ್ನು ಇಂಗ್ಲಿಷಿಗೆ ದಾಟಿಸುವ ಮೊದಲು ಕನ್ನಡದಲ್ಲಿ ರಚಿಸುತ್ತಾರೆ. ಇಂತವರು ಅಪರೂಪವೆನ್ನಬಹುದು.
ಅಮೆರಿಕೆಯಲ್ಲಿ ವಾಸಿಸಿದ್ದೂ, ಇಂಗ್ಲಿಷನ್ನು ಸುಲಲಿತವಾಗಿ ಬಲ್ಲ ಗ್ವಾಟೆಮಾಲದ ಕಾದಂಬರಿಕಾರ ಎಡ್ವಾರ್ಡ್ ಹಾಫೊನನ ‘ದಿ ಪೊಲಿಶ್ ಬಾಕ್ಸರ್’ ಕಾದಂಬರಿಯನ್ನು ಬಾಷಾಂತರಿಸಲು ಐದು ಜನ ಅನುವಾದಕರು ಕಾರ್ಯನಿರತರಾಗಿದ್ದರಂತೆ.
ಸೆರ್ವಾಂಟಿಸನ ಮೂಲ ‘ಡೊನ್ ಕ್ವಿಕ್ಸೊಟ್’ ಇಡಿತ್ ಗ್ರೊಸ್ಮನ್ಳ ಅನುವಾದದಷ್ಟು ಚೆನ್ನಾಗಿಲ್ಲವೆಂದು ಹೇಳಿದ ಕಾದಂಬರಿಕಾರ ಕಾರ್ಲ್ ಲಸ್ ಫೋಂಟೆಸ್ ಇದೊಂದು ‘ಮಹತ್ತರವಾದ ಸಾಹಿತಿಕ ಮೈಲಿಗಲ್ಲು’ ಎನ್ನುತ್ತಾನೆ. ಈ ಅಭಿಪ್ರಾಯ, ಅನುವಾದಗಳೆಂದರೆ ಅಸಾಧ್ಯವಾದುದು, ಅನುವಾದವೆಂದರೆ ನಂಬಿಕೆ ದ್ರೋಹ, ಮೋಸ, ಅಧ್ವಾನವೆನ್ನುವ ಪೂರ್ವಪೀಡಿತ ಗ್ರಹಿಕೆಗೆ ವಿರುದ್ಧವಾಗಿದೆ. ಅನುವಾದವನ್ನು ಇತರೆ ಸಾಹಿತ್ಯ ಪ್ರಕಾರಗಳಿಂದ ಹೊರಗಿಡಬೇಕೆಂಬ ಕೂಗೂ ಇದೆ. ಗ್ರೊಸ್ಮನ್ ಹೇಳುತ್ತಾರೆ, ‘ಲೇಖಕ ತಾನೊಬ್ಬ ರಚನಕಾರ ಎನ್ನುವುದಕ್ಕಿಂತ ಪ್ರಸಾರಕನೆಂದು ತಿಳಿದುಕೊಳ್ಳುವುದು ಉಚಿತ.’ ಬೊರ್ಹೇಸ್ (Borges) ಕೂಡ ತನ್ನ ಅನುವಾದಕನಿಗೆ , ‘ನಾನು ಹೇಳಿದಂತಲ್ಲ ನಾನು ಹೇಳಲು ಬಯಸಿದ್ದನ್ನು ಅನುವಾದಿಸು.’ ಎನ್ನುತ್ತಾನೆ.

ಮಾರ್ಕೆಜ಼್ ತನ್ನ ಭಾಷಾಂತರಕಾರಲ್ಲೊಬ್ಬರಾದ ಗ್ರೆಗರಿ ರಬಸ್ಸನನ್ನು ಕುರಿತಂತೆ, ‘ಇಂಗ್ಲಿಷ್ ಬಾಷೆಯಲ್ಲಿ ಬರೆಯುತ್ತಿರುವ ಅಮೋಘ ಲ್ಯಾಟಿನ್ ಅಮೆರಿಕನ್ ಲೇಖಕ’ ಎಂದು ಹೊಗಳಿದಷ್ಟೇ ಅಲ್ಲದೆ, ಗ್ರೊಸ್ಮನ್ ಮತ್ತು ರಬಸ್ಸಾರವರು ಅನುವಾದಿಸಿದ ‘ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’ ಕಾದಂಬರಿ ತಾನು ಸ್ಪ್ಯಾನಿಶ್ ಬಾಷೆಯಲ್ಲಿ ರಚಿಸಿದ್ದ ಕೃತಿಗಿಂತ ಉತ್ಕೃಷ್ಟವಾಗಿದೆ ಎಂದು ಮನಸಾರೆ ಹೊಗಳಿದ್ದರು.
ಮೇಲೆ ಉಲ್ಲೇಕಿಸಿದ ಲೇಖರಷ್ಟೇ ಅಲ್ಲದೆ, ಬಾಷಂತರಕಾರರ ನೆರವಿಲ್ಲದಿದ್ದರೆ ಪ್ರೌಸ್ಟ್, ದೋಸ್ತೊವ್ಸ್ಕಿ, ಪಾಝ್, ಪುಶ್ಕಿನ್, ಚೆಕಾವ್, ಕುಂದೇರಾ, ಲ್ಲೊಸಾ, ಅಲ್ಲೆಂಡೆ, ನೆರುಡಾ, ಪಾಮುಕ್ -ಪಟ್ಟಿ ಇನ್ನೂ ದೊಡ್ಡದಿದೆ- ರಂತ ಲೇಖಕರು ಹೊರಗಿನ ಪ್ರಪಂಚಕ್ಕೆ ಗೊತ್ತೇ ಆಗುತ್ತಿರಲಿಲ್ಲ. ಅನುವಾದವೆನ್ನುವುದು ಒಂದು ಸುದೀರ್ಘವಾದ, ಏಕತಾನತೆಯ ಹಾಗೂ ಅಪಾಯಕಾರಿಯೂ ಆದ ಕೆಲಸ. ಆದರೂ, ಅನುವಾದಕರನ್ನು ಸೃಜನಶೀಲ ಬರಹಗಾರರಲ್ಲವೆಂದು ಅಸಡ್ಡೆ ಮಾಡುತ್ತಾರೆ. ಅವರಿಗೆ ಸಲ್ಲಬೇಕಾದ ಗೌರವ ಕೊಡುವುದಿಲ್ಲ.
ತಮ್ಮ ಕಾಯಕವು, ಎರಡು ಬಾಷೆಗಳನ್ನು ಒಂದು ಪ್ರನಾಳ ಶೀಷೆಯಲ್ಲಿ ಹಾಕಿ ವೈಜ್ಞಾನಿಕವಾಗಿ ಇಂತಿಷ್ಟೇ ಕಲಕಿ ತಯಾರಾದ ಪದಾರ್ಥವೆಂಬಂತೆ ತಾಂತ್ರಿಕವಾಗಿ ವಿವರಿಸಲು ಹೋಗಿ ಅನುವಾದಕರು ಕೂಡ ಈ ಬಗೆಯ ಅಸಡ್ಡೆಗೆ ಆಂಶಿಕವಾಗಿ ಕಾರಣಕರ್ತರಾಗಿರುತ್ತಾರೆ. ಅನುವಾದ ಕಾಯಕವು ಬಹಳಷ್ಟು ಸಲ ಒಂದು ಕೃತಿಯ ಅಜ್ಙಾತ ಮುಖಗಳ ಮೇಲೆ ಬೆಳಕು ಚೆಲ್ಲುವ ಸೇವೆಯಾಗಿರುತ್ತದೆ.
‘ಮೂಲ ಕೃತಿಗೆ ನಿಷ್ಠತೆ ನಮ್ಮ ಮೊದಲ ಗುರಿ ಹೌದೆನ್ನುವುದಾದರೂ ಅನುವಾದ ಕಾರ್ಯ ಕಾರ್ಬನ್ ಪೇಪರನ್ನಿಟ್ಟು ಮಾಡುವಂತದಲ್ಲ. ಅದೊಂದು ವಿಮಶರ್ಾತ್ಮಕ ವ್ಯಾಖ್ಯಾನವೆನ್ನಬಹುದು. ಪ್ರತಿಯೊಂದು ಬಾಷೆಗೂ ಅದರದೇ ಆದ ಭವ್ಯ ಇತಿಹಾಸವಿರುತ್ತದೆ. ಸಾಂಸ್ಕೃತಿಕ ಮತ್ತು ಪರಂಪರಾನುಗತ ಬೆಳವಣಿಗೆಗಳಿಂದ ಯಾವುದೇ ಎರಡು ಬಾಷೆಗಳು ಒಂದಕ್ಕೊಂದು ಪೂರಕವಾಗಿರಲು ಸಾಧ್ಯವಿಲ್ಲ.’ ಎನ್ನುತ್ತಾರೆ ಇಡಿತ್ ಗ್ರೊಸ್ಮನ್. ಆದ್ದರಿಂದಲೇ, ಗ್ರೊಸ್ಮನಳ ‘Why Translation Matters’ ಪುಸ್ತಕವು ವಿಶೇಷವಾದ ಅನುಭೂತಿಯನ್ನು ಕೊಡುತ್ತದೆ. ರಬಸ್ಸಾ ‘If this be Treason’ ನಲ್ಲಿ ಅನುವಾದ ಕಾರ್ಯದ ಬಗ್ಗೆ, ಮತ್ತು ಕೊರ್ಟಾಜರ್, ಲ್ಲೊಸಾ ಮತ್ತು ಇತರರ ಕೃತಿಗಳನ್ನು ಅನುವಾದಿಸುವ ಕಾಯಕದಲ್ಲಿ ತನ್ನ ಅನುಭವಗಳನ್ನು ಲಘುವಾದ ಲಹರಿಯಲ್ಲಿ ಹೇಳಿದ್ದಾನೆ.
ಅಜಂತಾ ಮತ್ತು ಎಲ್ಲೋರದ ಕಲ್ಲುಗಳಲ್ಲಿ ಅಡಗಿದ್ದ ದೇವದೇವತೆಗಳನ್ನು ಹೊರಗೆ ತೆಗೆದ ಶಿಲ್ಪಿಗಳಂತೆ ತಾನೂ, ಮಾಕರ್ೇಜನ ಸ್ಪ್ಯಾನಿಶ್ ಬಾಷೆಯಲ್ಲಿ ಅಡಗಿದ್ದ ಇಂಗಿಷನ್ನು ಜಗತ್ತಿಗೆ ತೆರೆದಿಟ್ಟೆ ಎನ್ನುತ್ತಾನೆ ರಬಸ್ಸಾ.
ಎಲ್ಲ ಅನುವಾದಗಳೂ, ಲೇಖಕನ ಪದಶಃ ನಿಷ್ಠೆಯ ಮತ್ತು ಅವನ ಒಟ್ಟಾರೆ ಆಶಯದ ಅನುಸಂಧಾನವಾಗಿರುತ್ತದೆ. ವ್ಲಾದಿಮಿರ್ ನಬೊಕೊವ್, ಪದ ನಿಷ್ಠ ಅನುವಾದ ಪಂಥಕ್ಕೆ ಸೇರಿದವನಾಗಿದ್ದ. ಅವನ, ಯೂಜಿನ್ ಒನ್ಗೀನನ ಅನುವಾದವು ಮೂಲ ಕವಿತೆಗಳ ಆಶಯವನ್ನೇ ತೊಡೆದು ಹಾಕುತ್ತದೆ. ಪುಶ್ಕಿನರಿಂದ ಪ್ರೇರಿತರಾಗಿರುವ ‘ಗೋಲ್ಡನ್ ಗೇಟ್’ ಖ್ಯಾತಿಯ ವಿಕ್ರಂ ಸೇಠ್, ಇಂಗ್ಲಿಷ್ ಬಾಷಾಂತರಕಾರ ಸರ್ ಚಾರ್ಲ್ಸ್ ಜಾನ್ಸ್ಟನ್ರನ್ನು ಮನಸಾರೆ ಹೊಗಳುತ್ತಾರೆ. ಅವರೊಂದು ಕಡೆ ಹೀಗೆ ಹೇಳುತ್ತಾರೆ: ‘ಪುಶ್ಕಿನನ ಮೇರು ಕೃತಿಗೆ ಜಾನ್ಸ್ಟನನ ಉಜ್ವಲ ಅನುವಾದ.’
ಅನುವಾದಗಳ ಕುರಿತ ತನ್ನ ಪ್ರಬಂಧಗಳ ಸಂಕಲನ ‘Mouse or Rat?’ ನಲ್ಲಿ ಲೇಖಕ ಉಂಬೆರ್ಟೋ ಇಕೊ ಅನುವಾದವೆಂದರೆ ಒಂದು ಬಗೆಯ ಕೊಡುಕೊಳ್ಳುವಿಕೆ ಎಂದು ಹೇಳುತ್ತಾನೆ. ಕೊಡುಕೊಳ್ಳುವಿಕೆ ಕೇವಲ ಶಬ್ಧಗಳಲ್ಲಿ ಮಾತ್ರವಲ್ಲ ಎರಡು ಸಂಸ್ಕೃತಿಗಳ ಮಧ್ಯೆ ಕೂಡ ಎಂದು ಆವನ ಅನಿಸಿಕೆ. ಇಟಾಲಿಯನ್ ಬಾಷೆಯಲ್ಲಿ ‘ratto’ ಎಂದರೆ ಹೆಗ್ಗಣ, ‘topo’ ಎಂದರೆ ಹೆಗ್ಗಣವೂ ಆಗುತ್ತದೆ, ಇಲಿಯೂ ಆಗುತ್ತದೆ. ಆದರೆ ಆಲ್ಬರ್ಟ್ ಕಾಮೂವಿನ ಅನುವಾದ La Peste ಕಾದಂಬರಿಯಲ್ಲಿ ಪ್ಲೇಗು ಮೂಷಕದಿಂದ ಹರಡುವುದಿಂದ ಇಲ್ಲಿ ratto ಎನ್ನುವುದೇ ಸರಿಯಾದ ಶಬ್ಧ.
ಸೂಸನ್ ಸೊಂಟ್ಯಾಗ್ ಆಧುನಿಕ ಬಾಷಾಂತರವನ್ನು ಮೂರು ವಿಧಾನಗಳಲ್ಲಿ ಗುರುತಿಸುತ್ತಾಳೆ – ವಿವರಣಾತ್ಮಕ ಅಂದರೆ ಅನುವಾದಕನ ಕೆಲಸ ಬಿಡಿಸಿ ಹೇಳುವುದು; ಎರಡನೆಯದಾಗಿ, ರೂಪಾಂತರಿಸುವುದು (ಮಾರ್ಪಡಿಸುವುದು) ಮತ್ತು ಮೂರನೆಯದಾಗಿ ಉತ್ತಮಪಡಿಸುವುದು. (ಎಡ್ಗರ್ ಎಲನ್ ಪೋ ನ ಕವಿತೆಗಳನ್ನು ಬೊದಿಲೆರನು ಉತ್ತಮಪಡಿಸಿ ಅನುವಾದಿಸಿದನೆಂದು ಹೇಳಲಾಗುತ್ತದೆ.)
ಅನುವಾದವೂ ಒಂದು ಕಲೆ. ಎಲ್ಲಾ ಕಲಾ ಪ್ರಕಾರಗಳಂತೆ ಅನುವಾದವೂ ಕೂಡ ಅಖಚಿತವಾದುದು. ಕೆಲವು ಲೇಖಕರು ಅನುವಾದಕನ ಕಾಯಕದಲ್ಲಿ ತಾವೂ ತೊಡಗಿಸಿಕೊಂಡರೆ, ಗಾಬ್ರಿಯೆಲ್ ಗಾಸರ್ಿಯ ಮಾಕರ್ೇಜನಂತವರು ಅನುವಾದಕನನ್ನು ಅದು ಅವನ ಪಾಡೆಂದು ಅವನಷ್ಟಕ್ಕೆ ಬಿಡುತ್ತಾರೆ.
ಭಾಷಾಂತರವೇ ಅಸಾಧ್ಯವೆನಿಸುವಂತ ಕೃತಿ ಇದೆ ಎನ್ನುವುದಾದರೆ, ಆ ಗೌರವ ಫಿನ್ನೆಗಾನ್ನ ‘ವೇಕ್’ ಗೆ ಸಲ್ಲಬಹುದೆಂದು ನನ್ನ ಭಾವನೆ. ಭಾಷಾಂತರದಲ್ಲಿ ಕಾವ್ಯ ಕಳೆದುಹೋಗುತ್ತದೆ ಎಂದು ರೋಬರ್ಟ್ ಫ್ರೊಸ್ಟ್ ಹೇಳುತ್ತಿದ್ದ. ಆದರೆ ಶ್ರೇಷ್ಠ ಭಾಷಾಂತರಕಾರನ ಕೈಯಲ್ಲಿ ಇದಕ್ಕೆ ಅಪವಾದವೆನ್ನುವಂತೆ ಕಾವ್ಯ ಜೀವ ತಳೆಯಬಹುದು ಎನ್ನುವುದೂ ನಿಜವೇ.
ವಾಲ್ಟರ್ ಬೆಂಜಮಿನ್ ಹೇಳುವಂತೆ ಎಲ್ಲಾ ಶ್ರೇಷ್ಠ ಪಠ್ಯಗಳ ಸಾಲುಗಳ ಮಧ್ಯೆ ಭಾಷಾತರದ ಅವಕಾಶವಿದ್ದೇ ಇರುತ್ತದೆ. ಇದು ಮಾರ್ಕೆಜ್ ಅಷ್ಟೇ ಅಲ್ಲ, ಎಮ್.ಟಿ.ವಾಸುದೇವನ್ ನಾಯರ್ ಮತ್ತು ಪ್ರೇಮ್ಚಂದ್ರವರ ಮಟ್ಟಿಗೂ ಸತ್ಯ. ಗ್ರೊಸ್ಮನ್ ಹೇಳುತ್ತಾರೆ: ‘ಸಾಹಿತ್ಯವಿದ್ದಲ್ಲಿ ಅನುವಾದಕ್ಕೂ ಅವಕಾಶ ಇರುತ್ತದೆ. ಅವೆರಡದೂ ಅವಿಭಾಜ್ಯ ಸಂಬಂಧ. ಅಂತಿಮವಾಗಿ ಒಂದಕ್ಕೇನಾಗುತ್ತದೋ ಅದು ಮತ್ತೊಂದಕ್ಕೂ ಆಗಿಯೇ ತೀರುತ್ತದೆ. ದೀರ್ಘಕಾಲೀನ ಸಂಬಂಧದಲ್ಲಿ ಎರಡರ ಮಧ್ಯೆ ಅನ್ಯೋನ್ಯತೆಯು ಅತ್ಯಂತ ಅವಶ್ಯಕ.’
ರಬಸ್ಸಾ ತನ್ನ ಪುಸ್ತಕದ ಕೊನೆಯಲ್ಲಿ ಹೀಗೆ ಹೇಳುತ್ತಾನೆ: ‘ನಾನು ಭಾಷಾಂತರಿಸಿದ ಕೃತಿಗಳಲ್ಲಿ, ಅತಿ ಮನ್ನಣೆ ಪಡೆದ ಕೃತಿಗಳಲ್ಲೂ ಕೂಡ ಒಂದು ಪ್ರಕಾರದ ಅತೃಪ್ತಿ ಉಳಿದುಕೊಂಡೇ ಇದೆ.’
ಈ ತರದ ಅತೃಪ್ತಿಯಲ್ಲೇ ಸಂತೃಪ್ತಿ ಅಡಗಿದೆ.
*******
(ಲೇಖಕರು Wisden India Almanc ನ ಸಂಪಾದಕರು)
(Gained from translations: Had it not been for great translators, doyens of literature wouldn’t have been household name. ಮೇ 3, 2014 DNA ಪತ್ರದಲ್ಲಿನ ಲೇಖನದ ಅನುವಾದ)






Translation indeed is creative literature, the translator being in captivity of the original author’s concepts and being compelled to express them in his language beautifully, sometimes exceeding the creativity of the original author himself. I often feel the pinch and tension being a translator myself; however, I have not gone through any literature on translation process. Thanks for the insights.