ಭಾಷಣಕಾರ ಮತ್ತು ರೊಟ್ಟಿ ಮಹಿಳೆ

[ಇದೊಂದು ಕಥೆ. ಕಾಡಿನ ಒಂದು ಕುಗ್ರಾಮದಲ್ಲಿ ಇರುತ್ತಿದ್ದ ಒಂಟಿ ಮನೆಯಲ್ಲಿ ನಡೆದಿದ್ದು. ಯಾವಾಗಲೋ ಯಾರ ಬಾಯಲ್ಲಿಯೋ ಕೇಳಿ ನೆನಪಿನ ಖಜಾನೆಯಲ್ಲಿ ದಾಖಲಾಗಿದ್ದು.

ಒಬ್ಬಳು ಸಂಸಾರಸ್ಥೆ ಹಾಗೂ ಒಬ್ಬ ಜನಪ್ರಿಯ ವ್ಯಕ್ತಿಯ ನಡುವೆ ನಡೆದಿದ್ದು. ಆಮೇಲೆ ಅವಳು ಮಂಕಾಗಿ ಉಳಿದದ್ದು. ನಂತರ ಅವಳ ಅತ್ಯಂತ ಸುಂದರ ರೂಪದಲ್ಲಿ ಪೆದ್ದುಕಳೆ ಉಳಿದುಕೊಂಡಿದ್ದು, ಮಾನಸಿಕ ಸಮಸ್ಥಿತಿಗೆ ಎಂದೂ ಕಾಣದ ಆಸ್ಪತ್ರೆಯನ್ನೇ ನೆಲೆಯಾಗಿಸಿಕೊಂಡಿದ್ದು, ಮಾತ್ರೆಗಳ ಮೊರೆ ಸಾಯುವವರೆಗೂ ಮುಂದುವರೆದಿದ್ದು, ಎಲ್ಲಾ ಹಳೆಯದಾಗಿದೆ.

ಆದರೂ ಎಲ್ಲಾ ಕಾಲಕ್ಕೂ ಸಲ್ಲುವ ಇಂಥ ಕಥೆಗಳಿಗೆ ಸಲ್ಲಬೇಕಾದ ಸುಧಾರಣೆ ಯಾರ ಜವಾಬ್ದಾರಿ?..

ಬರುವ ಆಗಂತುಕ ವಿದ್ಯಮಾನಗಳು ಸಾಮಾಜಿಕ ನೈತಿಕ ವೈಯಕ್ತಿಕ ಗೆರೆಗಳಲ್ಲಿ ಬೇರೆ ಬೇರೆ ಸ್ತರಗಳಲ್ಲಿ ಪರಿಣಾಮ ಬೀರಿ ನೋವಾಗಿ ಉಳಿವುದು ಯಾಕೆ? ಹೊಣೆಗಾರಿಕೆಗೆ ಹಣೆಪಟ್ಟಿ ಇದೆಯೇ? ಇದು ನನಗೂ ಪ್ರಶ್ನೆಯಾಗೇ ಉಳಿದಿದೆ. ಎಲ್ಲ ಪ್ರಶ್ನೆಗಳಿಗೂ ಜೀವನದಲ್ಲಿ ಉತ್ತರವಿರುವುದಿಲ್ಲ. ಇಂಥ ಜಾರಿಕೆಯ ಮನಃಸ್ಥಿತಿ ಬಿಟ್ಟು ಪರಿಣಾಮವನ್ನು ಯೋಚಿಸುವ ಪ್ರಬುದ್ಧತೆ ಇರುವ ಈಗಿನ ಸಮಾಜದಲ್ಲಿರುವ ನಮಗೆ ಇಂಥ ಭಾವಾನುರಾಗಗಳನ್ನು ನಿಭಾಯಿಸುವ ಹೊಣೆಗಾರಿಕೆ ಕೂಡಾ ಇದೆಯೆಂದೇ ಭಾವಿಸುತ್ತೇನೆ.

ಇದು ಕಾಲ, ದೇಶ, ಕೋಶಗಳನ್ನೂ ಮೀರಿದ್ದು ಎಂದು ತಳ್ಳಿ ಹಾಕುವಂತಿಲ್ಲ. ಎಲ್ಲರ ಮನಸ್ಸಿಗೂ ಬದ್ಧತೆಯ ಅರಿವಿದ್ದಾಗ ಇಂಥ ಮನಸ್ಸಿನ ನ್ಯೂನತೆಗಳನ್ನು ಮೀರಬಹುದೇನೋ?]

ಅವನು ಭಾಷಣಕಾರ. ಭಾಷಣವೆಂದರೆ ಕೇವಲ ಭಾಷಣವಲ್ಲ. ಅವು ಜಗತ್ತಿನ ಸತ್ಯದರ್ಶನದ ಕಡೆಗೆ ತುಡಿತವಿರುವ, ಜನರ ಮನಸ್ಸಿನಲ್ಲಿ ಹಸಿರ ಗರಿಕೆಯಂತೆ ಹಬ್ಬತೊಡಗುವ ಭಾಷಣಗಳು. ಅಲ್ಲಿ ಇಲ್ಲಿ ಭಾಷಣವೆಂದು ಯಾವಾಗಲೂ ಪಾದರಸದಂತೆ ಚಲಿಸುತ್ತಿದ್ದವನಿಗೆ ಒಂದುದಿನ ಆಯಾಸ, ಬಳಿಲಿಕೆಯುಂಟಾಯಿತು. ಅಲ್ಲೇ ಹತ್ತಿರವಿದ್ದ, ಒಂಟಿ ಮನೆಗೆ ತೆರಳಿ ಕೊಂಚ ವಿರಮಿಸುತ್ತಾನೆ. ಆ ಮನೆಯ ಮಹಿಳೆ ನಗುನಗುತ್ತಾ ರೊಟ್ಟಿ ತಟ್ಟಿಕೊಟ್ಟು ಅವನ ಹಸಿವನ್ನು ತಣಿಸುತ್ತಾಳೆ. ಭಾಷಣವೂ ಇಷ್ಟು ಶ್ರಮದಾಯಕವೇ? ಎನ್ನುತ್ತ ಅಚ್ಚರಿಯಲ್ಲಿ ಅವನಿಗೆ ವಿರಮಿಸಲು ಅವಕಾಶಕೊಟ್ಟು ಉಪಚರಿಸುತ್ತಾಳೆ. ಪ್ರಾಮಾಣಿಕವಾಗಿ ಒಂದು ಹೆಣ್ಣು ಅತಿಥಿಗೆ ಮಾಡಬೇಕಾದ ಎಲ್ಲ ಉಪಚಾರವನ್ನು ಮಾಡುತ್ತಾಳೆ.

ಆ ಕ್ಷಣದಲ್ಲಿ ತುಂಬಿದ ಹೊಟ್ಟೆ, ಅವಳಿಗೆ ಕೃತಜ್ಞತೆ ತಿಳಿಸುತ್ತದೆ. ಮತ್ತೆ ತನ್ನ ಕಾಯಕವನ್ನು ಮುಂದುವರಿಸುತ್ತದೆ. ಅವನ ಮುಂದುವರಿದ ಭಾಷಣದ ತುಣುಕುಗಳು ಇವಳಿಗೂ ಕೇಳಿಸತೊಡಗುತ್ತದೆ. ರೊಟ್ಟಿ ತಟ್ಟುವ ಇವಳ ಕೈ ಬೆರಳುಗಳ ತಾಳ, ಹಾಡಿನ ಗುನುಗು ಹಾಗೂ ಅವನ ಮೆಚ್ಚುಗೆಯ ಮಾತಿನ ಲಯ ಹೊಂದಿಕೊಳ್ಳುತ್ತಾ ಇಬ್ಬರನ್ನೂ ಏಕರೂಪದಲ್ಲಿ ತಲುಪುತ್ತದೆ. ಇಬ್ಬರ ಮುಖದಲ್ಲೂ ಮಂದಹಾಸ ಅರಳುತ್ತದೆ. ಕೊಳದ ಕೊಳಲಿನ ನಾದದ ಅಲೆಯಲ್ಲಿ ಕಮಲದ ಹೂವುಗಳು ಅರಳುವ ತೆರದಲ್ಲಿ, ತುಟಿಯ ಮೇಲಿಂದ ಜಾರಿ ಮುಗಳು ನಗೆಯೊಂದು ಆ ಮನೆಯಲ್ಲಿ ಉಲ್ಲಾಸವಾಗುತ್ತದೆ. ರೊಟ್ಟಿಯ ಮೇಲೆ ಅಚ್ಚಗೆ ಅವಳ ಬೆರಳುಗಳು ಮೂಡುತ್ತವೆ. ಅದು ದಣಿದು ಬಂದ ಅವನ ಒಡಲಿಗೆ ಅಂತರ್ಗತ ಚೈತನ್ಯವಾಗಿ ಶಕ್ತಿ ನೀಡುತ್ತದೆ.

ದಿನದಿನ ಇದು ಪುನರಾವರ್ತನೆಯಾಗುತ್ತದೆ. ಭಾಷಣ ಕೇಳಲು ಬಂದ ಜನರೆಲ್ಲ ಉಘೇಉಘೇ ಎಂದು ತೆರಳಿದ ನಂತರ ಅವನಿಗೆ ಹಸಿದ ಹೊಟ್ಟೆ ನೆನಪಾಗಿ, ರೊಟ್ಟಿಮನೆಯ ಕಡೆ ಬರುವುದು ನಿರಂತರವಾಗುತ್ತದೆ. ಉಂಡು ವಿರಮಿಸಿದ ಇಬ್ಬರ ನಗುವೂ ಹಬ್ಬಿ ಬಳ್ಳಿಯ ವದರೊಳಗೆ ಮಾತಾಡುತ್ತಾ ಕೂರುವ ಹಕ್ಕಿಗಳ ಕಣ್ಣಿಗೆ ಬೀಳುವ ಫಲದಂತೆ ಒಲಿಯುತ್ತದೆ. ಅವನ ಭಾಷಣದ ವ್ಯಾಪ್ತಿಯೂ ಜನಮರುಳೋ, ಜಾತ್ರೆಮರುಳೋ?ಎಂಬಂತೆ ವಿಸ್ತರಿಸುತ್ತದೆ.  ಮಹಿಳೆಗೆ ಇದರ ವ್ಯಾಪ್ತಿ ತಿಳಿಯುವುದಿಲ್ಲ. ಅವನು ಬಳಲಿ ಬರುತ್ತಾನೆಂದೇ ಅವಳು ರೊಟ್ಟಿ ಕಾಪಿಡುತ್ತಾಳೆ. ವರುಷಗಳು ಉರುಳಿ ಅವಳು ಹೆಮ್ಮರವಾಗುತ್ತಾಳೆ. ಅವನು ಆಸೆಗಳ ಹೊಸ ಹೊಸ ಗೂಡನ್ನು ನೇದು ಮರದಲ್ಲಿ ತೂಗಿಬಿಡುತ್ತಾನೆ. ದಿನಗಳು ಉರುಳಿ ಹಕ್ಕಿ ಸಂತತಿ  ಸಾವಿರವಾಗುತ್ತವೆ. ಬಳಲಿ ಬಂದ ಮೊದಲನೇ ದಿನ ರೊಟ್ಟಿ ತಿಂದು ನೀರುಕುಡಿದ ಅವನ ಸಂತೃಪ್ತಿಯ ಭಾವ, ಇವತ್ತಿಗೂ ಅವಳಿಗೆ ಮನಸ್ಸಿನಲ್ಲಿ ಹೊಚ್ಚ ಹೊಸದಾಗಿಯೆ ಉಳಿದು ಹೋಗಿರುತ್ತದೆ.

ಒಂದು ದಿನ ಮನೆಯಲ್ಲಿ ರೊಟ್ಟಿಯು ಹಿಟ್ಟು ಮುಗಿದುಹೋಗಿರುತ್ತದೆ. ಅವಳು ಕಷ್ಟಕಾಲದಲ್ಲಿರುತ್ತಾಳೆ. ಭಾಷಣಕಾರನ ಭೇಟಿ ವಿರಳವಾಗುತ್ತಾ ಹೋಗಿರುತ್ತದೆ. ಕಾರಣಗಳೂ ಹುಟ್ಟಿಕೊಳ್ಳುತ್ತವೆ. ಮರದಲ್ಲಿ ಹಕ್ಕಿ ಸಂತತಿ ಬಿಟ್ಟು ಹೋದ ಖಾಲಿಗೂಡು ತೂಗಾಡುತ್ತಿರುತ್ತವೆ. ಬೆಳಗಿನ ಮುಂಜಾವಿನಲ್ಲಿ ಎಲೆಗಳು ಬಿದ್ದ ಹಿಮಮಣಿಗಳನ್ನು ಹಿಡಿದು ಶೇಖರಿಸಿ ಮರದ ಬೇರಿಗೆ ಹನಿಸಿ ನೆಲದ ವಳಗಿನ ತನ್ನ ಜಗತ್ತಿಗೆ ನೆನಪಿನ ಕಾಣಿಕೆಯೊಂದನ್ನು ತಲುಪಿಸುತ್ತಿರುತ್ತವೆ, ಅಕ್ಕರೆಯಿಂದ.. ತಾನುಂಡ ನೀರನ್ನು ಕಾಲಚಕ್ರ ತಿರುಗಿ ತನ್ನ ಬುಡಕ್ಕೆ ತಲುಪಿಸುವ ವಿನಯ. ಹಕ್ಕಿ ಸಂತತಿಯ ಮುಂದುವರಿಕೆ ಹೊಸ ಗೂಡ ನೇಯುವುದನ್ನು ನೋಡುತ್ತಾ ನಿಲ್ಲುತ್ತಾಳೆ.

ಎಂದೂ ಅವನಲ್ಲಿಗೆ ಹೋಗದ ಅವಳು ಅವನ ನೆರವು ಕೇಳಲು ಹೋಗುತ್ತಾಳೆ. ಅವನನ್ನು ಕಾದು ಕೂರುತ್ತಾಳೆ. ದೂರದಿಂದಲೇ ಅವನು ಅವಳನ್ನು ನೋಡುತ್ತಾನೆ. ಅವಳು ತನಗಾಗೆ ಕಾದು ಕೂತಿದ್ದಾಳೆಂದು ಅವನಿಗೂ ತಿಳಿಯುತ್ತದೆ. ಆದರೆ ಅವನ ಸುತ್ತಲೂ ಜನರಿರುತ್ತಾರೆ. ಒಂದು ಚಳುವಳಿಯ ಅವಸರದ ಗಡಿಬಿಡಿಯಲ್ಲಿರುವವನಿಗೆ ಹಿಂದಿನ ಸಾಲಲ್ಲಿ ಕಾಯುತ್ತ ಕುಳಿತ ಮಹಿಳೆ ಮರೆತುಹೋಗುತ್ತಾಳೆ. ಆಂದೋಲನದ ಹೊಸ ಹೊಸ ರೂಪ ಅವನ ತಲೆಯಿಂದ ಜನರ ಗುಂಪಿನ ನಡುವೆ ಕರಗುತ್ತಲೇ ಭಾಷಣಕಾರನೂ ಅವರೊಡನೆ ಕರಗಿಹೋಗುತ್ತಾನೆ. ಬಂದ ಜನರೆಲ್ಲರೂ ಖಾಲಿಯದ ಮೇಲೆ ಒಬ್ಬಳೇ ಉಳಿದ ಅವಳ ಖಾಲಿ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ. ಮಂಜು ಮುಸುಕಿದ ದಾರಿಯಲ್ಲಿ ಮನೆಗೆ ಹಿಂತಿರುಗುತ್ತಾಳೆ. ಖಾಲಿಯಾದ ರೊಟ್ಟಿಹಿಟ್ಟಿನ ಪಾತ್ರೆ, ಖಾಲಿ ಮನೆ, ಇದುವರೆಗೂ ಅವನನ್ನು ಕಾದ ಕಾಲ, ಅವಳನ್ನು ನಿರಾಳವಾಗಿ ಕೂರಲು ಬಿಡದೆ ಪ್ರಶ್ನೆಗಳನ್ನು ಕೇಳತೊಡಗುತ್ತವೆ.

ಒಂದು ಹೃದಯದ ಭಾವನೆಗೆ ಸ್ವಂದಿಸದವನು, ಅಷ್ಟುಜನರ ಹೃದಯಕ್ಕೆ, ಹೇಗೆ ಸ್ಪಂದಿಸುತ್ತಾನೆ? ಒಂದು ಹೃದಯದ ಸಮಸ್ಯೆಯನ್ನು ಅರಿಯದವನು, ಜಗತ್ತಿನ ಸಮಸ್ಯೆಗಳಿಗೆ ಸ್ಪಂದಿಸುವುದು ಸಾಧ್ಯವೇ? ಹಾಗಾದರೆ ಅಲ್ಲಿ ನೆರೆದ ಜನರಾರು? ಅಲ್ಲಿ ನಡೆದ ಸಂವಹನವೇನು? ಜನರ ಹಾ! ಹೋ! ಉದ್ಘಾರಗಳಿಗೆ ಅರ್ಥವೇನು? ಅವಳಿಗೆ  ತಿಳಿಯುವುದಿಲ್ಲ. ಉತ್ತರ ಹೊಳೆಯುವುದಿಲ್ಲ. ಆ ಗೊಂದಲದ ನಡುವೆಯೇ ಅವಳ ನಾಯಿ ದಾರಿಯಲ್ಲಿ ಬಿದ್ದ ಚೀಲವೊಂದನ್ನು ಹಿಡಿದು ಅವಳ ಹಿಂದೆಯೇ ಓಡಿಬರುತ್ತದೆ. ಅದರೊಳಗೆ ರೊಟ್ಟಿಹಿಟ್ಟಿನ ಕಾಳುಗಳು. ಸುತ್ತಲೂ ನೋಡುತ್ತಾಳೆ. ದಾರಿಹೋಕರರೂ ಕಾಣುವುದಿಲ್ಲ. ಯಾರ ತುತ್ತಿನ ಚೀಲವೋ? ಇದಕ್ಕೆ ಹೇಗೆ ತಿಳಿಯಿತು?

ಇದಕ್ಕೆ ಹೇಗೆ ಸಿಕ್ಕಿತು? ಯೋಚಿಸುತ್ತಾಳೆ.

ದಣಿವಾರಿಸಿಕೊಂಡು ಎದ್ದು ಮನೆಯ ಮುಂದಿನ ನೆಲಕೆರೆದು ಒಂದು ಹಿಡಿ ಕಾಳನ್ನು ಬಿತ್ತುತ್ತಾಳೆ. ಸಮಯಕ್ಕೆ ಸಿಕ್ಕ ತುತ್ತಿನ ಚೀಲ ಹಿಡಿದು ಯೋಚಿಸುತ್ತಲೇ ಎದ್ದು ಬೀಸುವ ಕಲ್ಲಿನತ್ತ ತೆರಳುತ್ತಾಳೆ. ಗರತಿಯ ಹಾಡು ತಂತಾನೇ ರಾಗವಾಗುತ್ತದೆ. ಕೊಂಚ ಸಮಯದ ನಂತರ ಉರಿವ ಒಲೆ ಮುಂದೆ ಹೊಳೆವ ಅವಳ ಮುಖದಲ್ಲಿ ಬೆವರು ಹರಿಯತ್ತದೆ. ರೊಟ್ಟಿ ತಟ್ಟುವ ಕಾಯಕ ಮುಂದುವರಿಯುತ್ತದೆ. ದಿನನಿತ್ಯ ಅವಳು ಎರಡು ರೊಟ್ಟಿ ತೆಗೆದಿಟ್ಟು ಉಳಿದಿದ್ದನ್ನಷ್ಟೇ ತಿನ್ನುವುದು, ಅದನ್ನು ಬೆಳಗೆದ್ದು ತನ್ನ ನಾಯಿಯ ಮುಂದಿಡುವುದು, ಕಣ್ಣ ಹೊಳಪಲ್ಲಿ ಪೊರೆ ಬಂದು ಕೂರುವವರೆಗೂ ನಡೆದೇ ತೀರುತ್ತದೆ.

ಪಕ್ಕದಲ್ಲಿ ನಾಲಿಗೆ ನೀರು ಸುರಿಸುತ್ತ ಕುಳಿತ ನಾಯಿಯನ್ನು ನೋಡಿದಾಗೆಲ್ಲಾ, ಅವಳಿಗೆ ನಿಷ್ಠೆ ಹಾಗೂ ಸಜ್ಜನಿಕೆ ಎಂಬ ಅವನ ಭಾಷಣದ ತುಣುಕೊಂದು ಕಿವಿಯಲ್ಲಿ ಬಂದು ಗುಂಗುರು ಗುನುಗುಟ್ಟುವಂಥ ಗುನುಗಾಗಿ ಸಾಯುವವರೆಗೂ ಉಳಿಯುತ್ತದೆ.

‍ಲೇಖಕರು Admin

December 25, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

3 ಪ್ರತಿಕ್ರಿಯೆಗಳು

ಇದಕ್ಕೆ ಪ್ರತಿಕ್ರಿಯೆ ನೀಡಿ H.R.SujathaCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: