– ಕೆ.ಎನ್.ಲಾವಣ್ಯ ಪ್ರಭಾ
ಏನೆಂದು ಭಾವಿಸುವಿರಿ?
——
ಮಳೆಗಾಲ
ಮುಗಿಯಿತೆನ್ನುವಷ್ಟರಲ್ಲಿ
ಈ ಸಂಜೆ
ಮತ್ತೆ ಸೋನೆಯ ರಾಗ…
ಬೇಕಿರಲಿಲ್ಲ ಮುರುಟಿಹೋದ
ಭಾವಗಳಿಗೀಗ ಪ್ರೀತಿ ಯೋಗ
ಮೈಯೆಲ್ಲಾ ಹಿಡಿಯಾಗಿಸಿ
ಆಕಾಶಕ್ಕೆ ಕೈ ಮುಗಿದು
ಕಣ್ಣ ಹಣತೆಯ ಬೆಳಕಲ್ಲಿ
ದೃಢವಾಗಿ ಪ್ರಾರ್ಥಿಸಿ
ಪಾದದಡಿಯ ಮಣ್ಣಧೂಳನ್ನು
ಹಣೆಗಿರಿಸಿ
ಹರಕೆ ಸಲ್ಲಿಸಿ ಮನೆದೇವರಿಗೆ
ಉತ್ಸಾಹದಲೇ
ಬಿತ್ತಿದ್ದ ಬೀಜಗಳು
ಮಳೆಯ ಮಂತ್ರಾಕ್ಷತೆಗೆ ಬಿರಿದು
ಆಗಲೋ ಈಗಲೋ
ಮುಗುಳ್ನಕ್ಕಿತೆಂದೇ
ಕಾದು ಕಾದು ಬೆವೆತು ಬಸವಳಿದು
ಬಾರದೇಹೋದ
ಮಳೆಯ ಮೋಸಕ್ಕೆ
ಕಂಗೆಟ್ಟು ಕುಸಿದು
ತಲೆಮೇಲೆ ಕೈಹೊತ್ತು ಕೂತ ರೈತ
ಶೂನ್ಯವನೇ ದಿಟ್ಟಿಸುವಾಗ
ಆಕಾಶವೇ…
ನಿನಗ್ಯಾಕಿರಲಿಲ್ಲ
ಕೊಂಚವೂ ಕರುಣೆ ದಯೆ?
ಕಟ್ಟಿಕೊಂಡ ಆಸೆಗೋಪುರ
ಬಿದ್ದುಹೋದ ಬಯಲೊಳಗೆ
ಬರಬಾರದ ಹೊತ್ತಿನಲ್ಲಿ
ಬಂದೆ ನೋಡಿಲ್ಲೀ ಎಂದು
ತುಂಟನಗೆ ಬೀರುತ್ತಾ ತೋರಿದ
ಮಳೆಯ ಅನುನಯಕ್ಕೆ
ದೃಷ್ಟಿ ಕಳೆದುಕೊಂಡ ಹೊಲದ
ಅಂಗಳದಲ್ಲೀಗ ಯಾವ
ಚಿತ್ತಾರ ಸಾಧ್ಯ?
ಎದೆ ಸುಟ್ಟುಕೊಂಡು
ನಿರ್ಲಿಪ್ತವಾದ
ಬರಡು ಭೂಮಿಯ
ಉದ್ದಕ್ಕೂ ಕೊಳ್ಳಿಯಿಟ್ಟು
ಹಸಿರು ತೆನೆಪೈರು ಕನಸುಗಳ
ಸಾಲು ಸಾಲು ಸಾವಿಗೆ
ತಾನೇ ಕಾರಣವೆಂಬ
ಪರಮ ಸತ್ಯ ಅರಿತು
ನೊಂದನೆಲದ ತಾಪ
ಮಳೆಯ ಮನಸ್ಸಿಗೂ
ಎಂದಾದರೂ ತಟ್ಟಿ
ಪಶ್ಚಾತ್ತಾಪ ಸಾದ್ಯವಿದ್ದರೆ….?
ಅದರಿಂದೇನಾಗುತ್ತಿತ್ತು
ಎಂದೆನಿಸಿ ನಿರ್ಜೀವ
ನಗೆನಕ್ಕು ಎದ್ದು ಹೋದ
ಅನ್ನದಾತ
ಹೊರಟಿದ್ದಾದರೂ ಎಲ್ಲಿಗೆ?
ಬರಬೇಕಿದ್ದ ಕಾಲಕ್ಕೆ
ಬಾರದೇ
ನುಡಿಯಬೇಕಿದ್ದಾಗ
ಮೌನವಾಗದೇ
ಮಿಡಿಯಬೇಕಾದ ಹೊತ್ತಲ್ಲಿ
ಕಲ್ಲಾಗದೇ
ನೊಂದ ಹೃದಯಕ್ಕಿನಿತೂ
ಮರುಗದೆ
ಸೋತ ಜೀವದ ಜೊತೆ ನಿಂತು
ಕೈಹಿಡಿದು ಮುನ್ನಡೆಸದೇ
ನಂಬಿದವರ ತಬ್ಬಿ
ಆಸರೆಯಾಗದೇ ಹೋದರೆ
ಜೀವಚೈತನ್ಯಕ್ಕೆಲ್ಲಿಯ ತಾವು?
ನಿರೀಕ್ಷೆ , ನಿರಾಸೆ , ಸೋಲು, ಅನರ್ಥ….
ಈ ಎಲ್ಲವೂ
ಸಂಭವಿಸುವುದು ಕೇವಲ
ನೆಲ ಮುಗಿಲುಗಳ ನಡುವೆ
ಮಾತ್ರ ಎಂದು ನೀವು
ಭಾವಿಸುವಿರೇನು?






0 Comments