-ರುಕ್ಮಿಣಿ ನಾಗಣ್ಣವರ
ಅಮೃತದ ಸುಳ್ಳು
ನಿನ್ನ ಹೆಜ್ಜೆಗಳ ನೆರಳಲ್ಲಿ
ನಾಲ್ಕು ಹೆಜ್ಜೆ ಇಡುವಷ್ಟರಲ್ಲಿ
ದಾರಿಯ ಕೊನೆಯಲ್ಲಿದ್ದ
ಕಂದಕ ಕಾಣಿಸಿತ್ತು
ಆದರೂ ನಡೆಯುತ್ತಿದ್ದೇನೆ
ಹಿಂತಿರುಗಿದರೆ
ನಡೆದು ಬಂದ ದಾರಿಯ
ಹೆಜ್ಜೆಗುರುತುಗಳು ಅನಾಥವಾಗುವವೆಂದು
ಸೆರಗಿನ ತುಂಬ ಕೆಂಡಗಳಿವೆ
ಹೂವುಗಳೆಂದು ಬಿಗಿದಿಟ್ಟಿದ್ದೇನೆ
ಹೊಗೆ ಕಣ್ಣಿಗಿಳಿದಾಗಲೆಲ್ಲ
ಗಾಳಿಯ ನೆಪ ಹೇಳುತ್ತಿದ್ದೇನೆ
ಬಿದ್ದಲ್ಲೇ ಬೇರು ಬಿಡಲಿಲ್ಲ
ಎದ್ದು ನಡೆಯುವುದನ್ನು ಕಲಿತೆ
ಆದರೂ ನನ್ನ ಪಾದಗಳ ಕೆಳಗೆ
ನೆಲವೇ ಜಾರಿಹೋಗುತ್ತಿದೆ!
ಕಣ್ಣೊಳಗೊಂದು ಸಮುದ್ರವಿದೆ
ಅಲೆಗಳ ಲೆಕ್ಕವಿಟ್ಟವರಾರು?
ಇದೂ ಒಂದು ಹನಿ ಅಷ್ಟೇ
ಅದರ ಉಪ್ಪಿಗೆ ಸೇರಲಿ ಬಿಡು
ನಾಲಗೆಯ ಮೇಲೆ ವಿಷದ ಬಳ್ಳಿ
ಬೇರಿಳಿಸಿ ಬಹುಕಾಲವಾಯಿತು
ಈಗ ಕಹಿಯೂ ಹಳೆಯ ಗೆಳೆಯ
ಸಿಹಿಯ ವಿಳಾಸವೇ ಮರೆತುಹೋಗಿದೆ
ಅಮೃತವೆಂದು ಕುಡಿದದ್ದೆಲ್ಲ
ಒಳಗೊಳಗೇ ನೀಲಿಗಟ್ಟಿದೆ
ಆದರೂ ತುಟಿಗಳ ಅಂಚಿನಲ್ಲಿ
ಸಿಹಿಯೊಂದು ಸುಳ್ಳು ನಗುತ್ತಿದೆ
ಕೆಲವು ವಿಷಗಳಿಗೆ
ಕೊಲ್ಲುವ ಕರುಣೆಯೂ ಇರುವುದಿಲ್ಲ
ಬದುಕು ನಿಧಾನ ಉರಿಯುವ ಚಿತೆ
ಬೂದಿಯಾಗಲೂ ಅನುಮತಿಯಿಲ್ಲ!






0 Comments