ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಭಾವಕೂ ನಿಲುಕದ ಭಾವಗೀತೆ..’

ksn.jpg‘ಭಾವಕೂ ನಿಲುಕದ ಭಾವಗೀತೆ..’ ಎಂಬ ಅಡಿಬರಹ ಹೊತ್ತ ಕವನಗಳ ಗುಚ್ಚವೊಂದು ಬ್ಲಾಗ್ ಮಂಡಲ ದಲ್ಲಿದೆ. ಕೆ ಎಸ್ ನ ಅವರ ಮಲ್ಲಿಗೆ ಕವಿತೆಗಳು, ಶಿಶುನಾಳ ಶರೀಫ ರ ಕಾಡುವ ಹಾಡುಗಳು, ಬೇಂದ್ರೆ,  ಕೆ ಎಸ್ ನರಸಿಂಹಸ್ವಾಮಿ,  ನಿಸಾರ್ ಅಹಮದ್, ಕುವೆಂಪು, ಅಡಿಗ, ಲಕ್ಷ್ಮೀನಾರಾಯಣ ಭಟ್ಟ, ಬಿ ಆರ್ ಲಕ್ಷ್ಮಣ ರಾವ್ ಎಚ್ . ಎಸ್. ವೆಂಕಟೇಶ ಮೂರ್ತಿ, ಜಯಂತ ಕಾಯ್ಕಿಣಿ, ವೈದೇಹಿ,  ಸುಮತೀಂದ್ರ ನಾಡಿಗ್, ಚಂಪಾ ಸೇರಿದಂತೆ ಹಲವು ಕನ್ನಡದ ಅಮೂಲ್ಯ ಕವನಗಳು ಇಲ್ಲಿವೆ.

ಕನ್ನಡದ ಕವನಗಳಿಗೆ ಈ ಬ್ಲಾಗ್ ಬಾಗಿಲು ತೆರೆದಿದೆ. ಎಚ್ ಗೋವಿಂದಯ್ಯ ಅವರ ಅಪಾರ ಜನಪ್ರಿಯತೆ ಪಡೆದ ಅ ಆ ಮತ್ತು… ಕವನ ನಿಮ್ಮ ಮರು ಓದಿಗಾಗಿ ನೀಡುತ್ತಿದ್ದೇವೆ.

ಅ ಆ ಮತ್ತು….

—————————————————–

ಕಣ್ಣು ಬಿಟ್ಟು ನಾನು ಕೈಕಾಲು ಆಡಿಸಿದಾಗ

ಕತ್ತಲೆ ಗೂಡಿನ ಅವ್ವನ ಕಣ್ಣೊಳಗೆ

ಒಲೆ ಉರಿಯುತ್ತಿತ್ತು

ಕಪ್ಪು ಕೈಕಾಲುಗಳ ಬೆಂಕಿಗೆ ಒಪ್ಪಿಸಿ ಕಾಯುತ್ತಾ

ಅಪ್ಪ ಮೋಟು ಬೀಡಿಯೊಂದಿಗೆ ಉಸಿರಾಡಿದ

ಕುದಿವ ಗಂಜಿಗೆ ಜೀವಗಳು ಕುದಿಯುತ್ತಿದ್ದವು

ಅವ್ವನ ಎದೆ ಗೂಡೊಳಗೆ

ತೆವಳಿ ನಿಂತು ನಡೆದಾಡಿದ ಹೆಜ್ಜೆಗಳು

ಇಸ್ಕೋಲು ಗೋಡೆಗಳ ನಡುವೆ ನಿಂತೇ ಬಿಟ್ಟಾಗ

ಕರಿ ಕೆನ್ನೆಯ ಮೇಲೆ ಹುರಿಗೊಂಡಿದ್ದ ಅಪ್ಪನ ಮೀಸೆ

ನಾಮದ ಮೇಸ್ಟರ ಕಾಲಿಗೆ ಬಿದ್ದು ನೆಲ ನೋಡಿತು.

ಕತ್ತಲೆ ಬೋರ್ಡಿನ ಮೇಲೆ ಕಲಿತ ಅ ಆ

ಅಕ್ಷರಗಳ ನಡುವೆ ಅವ್ವ ಅಪ್ಪನ ಅಶೆಗಳು ಸಿಕ್ಕಿದುವು

ನಮ್ಮೂರ ಕೇರಿ ಸಮಾಧಿಗಳು ಸಿಕ್ಕಿದುವು

ಅಸ್ಥಿ ಪಂಜರಗಳ ಪಾತಾಲದಲ್ಲಿ

ಒಂದಿಷ್ಟು ಮಾತುಗಳು ಸಿಕ್ಕಿದುವು

ಹುಡುಕುತ್ತಾ ಹುಡುಕುತ್ತಾ

ಕೆಳಕ್ಕೆ ಇಳಿದಾಗ ಎದ್ದ ಪ್ರಶ್ನೆಗಳಿಗೆ

ಕಾಕಿ ಡ್ರೇಸ್ಸಿನ ಕೈಕಾಲುಗಳು ಮೂಡಿ

ಮೀಸೆ ಬೆಳೆದು ಅಡರಿಸಿಕೊಂಡು

ಕತ್ತಲಲ್ಲಿ ಕಾಣದಾದೆ

ಆದರೆ

ಪಿತ್ರಾರ್ಜಿತ ಗುಡಿಸಲ ಹರಕು ಗೋಡೆಯ ಮೇಲೆ

ಅ ಆ ಮೂಡಿಸಿದಾಗ ಅಂದು

ಅವ್ವ ಕೊಟ್ಟ ಮುತ್ತುಗಳು ಕೆನ್ನೆ ಮೇಲೆ ಇನ್ನೂ ಇವೆ

ಅಪ್ಪ ಕೊಟ್ಟ ತೂತು ಕಾಸು ಉಡುದಾರದಲ್ಲಿ ಹಾಗೇ ಇದೆ.

– ಎಚ್ ಗೋವಿಂದಯ್ಯ

‍ಲೇಖಕರು avadhi

17 January, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading