ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭಾರ ಹೃದಯದೊಂದು ನಿಟ್ಟುಸಿರು ತಾಜ್

~ ಅನೀಲ ತಾಳಿಕೋಟಿ

ಎರಡು ಮೂರು ಬಾರಿ ತಾಜಮಹಲ ನೋಡಿದ್ದೇನೆ. ಬೆಳಕಿನಲ್ಲಿ , ಕತ್ತಲೆಯಲ್ಲಿ, ಸುಡು ಸೂರ್ಯನಲ್ಲಿ , ಚಂದ್ರಮನ ಶೀತಲ ತಂಗಾಳಿಯಲ್ಲಿ, ಚಂಚಲ ಮನಸ್ಸಿನ ಮಕ್ಕಳ ಜೊತೆಯಲ್ಲಿ, ಅಸೀಮ ಏಕಾಂತತೆಯಲ್ಲಿ. ಯಾವ ಮಗ್ಗುಲಿನಿಂದ , ಇನ್ನಾವದೆ ಮನೋಭಾವದಿಂದ ನೋಡಿದರೂ ವಾಹ್ ತಾಜ ಎನ್ನದಿರುವದು ಅಸಾಧ್ಯ. ಮೋಹಕತೆ ಮೈ ತಳೆದು ನಮ್ಮನ್ನು ೧೭ನೇ ಶತಮಾನಕ್ಕೆ ಎಳೆದು, ಹದಿನೇಳು ವರುಷಗಳ, ಸಾವಿರಾರು ಕುಶಲಕರ್ಮಿಗಳ ಹಗಲಿರಿಳಿನ ದುಡಿತ ಒಂದೆಡೆ ಪುಳಕಿತರಾಗಿಸಿದರೆ,ಇನ್ನೊಂದೆಡೆ, ಆ ಮಹಲಿನ ಅನಗತ್ಯ ದರ್ಪ, ಆಡಂಬರ, ಶ್ರೀಮಂತಿಕೆ, ಪ್ರೀತಿಯೊಂದನ್ನು ಬಿಟ್ಟು ಬೇರೆಲ್ಲವನ್ನು ಎಷ್ಟು ಸುಂದರವಾಗಿದು ತೋರಿಸುತ್ತದಲ್ಲಾ ಎಂದು ಖೇದವಾಗುತ್ತದೆ.
ಶಹಾಜಹಾನನದು ಇದೆಂತಹ ಶ್ರೀಮಂತಿಕೆಯ ಸೊಕ್ಕು, ಪ್ರದರ್ಶನಕ್ಕೆ ಇಡುವ ಬಾಬತ್ತೆ ಇದು ಎನಿಸುತ್ತದೆ. ಮೂರು ಮಡದಿಯರಲ್ಲಿ ನಡುವಿನವಳಾದ ಮುಮ್ತಾಜ, ಅವಳ ಜೊತೆಯಲ್ಲಿ ನಿಶ್ಚಿತಾರ್ಥವಾದ ಏಳು ವರುಷಗಳ ನಂತರ ಮದುವೆ ಮಾಡಿಕೊಂಡು ಹದಿನಾಲ್ಕು ಮಕ್ಕಳ ಮುಖ ನೋಡಿ ಮೂವತ್ತೆಂಟಕ್ಕೆ ಮಡಿದವಳ ಮೇಲೆ ಅಷ್ಟು ಅಗಾಧವಾದ ಪ್ರೀತಿ ಇತ್ತೆ, ಇದ್ದರೂ ಅದನ್ನು ತೋರ್ಪಡಿಸಲು ಇಂಥಹದೊಂದು ಮಹಲೇ ಬೇಕಿತ್ತೆ? ಅಥವಾ ಇಜಿಪ್ತಿನ ಫೇರೊಗಳಂತೆ ತಾನೆ ದೇವರೆಂದುಕೊಂಡ ಚಕ್ರವರ್ತಿಗಳ ಅಮಲಿನ ಬಿಂಬವೆ ಇದು? ಏನೇ ಇರಲಿ ಭವ್ಯತೆಯಂತೂ ಇದೆ, ದಿವ್ಯತೆ ಯಾಕೆ ಹುಡಕಬೇಕಿಲ್ಲಿ ಎಂದುಕೊಳ್ಳುತ್ತೇನೆ. ತಾಜ ಎಂದಾಕ್ಷಣ ನನಗೆ ನೆನೆಪಾಗುವ ಎರಡು ಸುಂದರ ಪದ್ಯಗಳ ಅನುವಾದದ ಪ್ರಯತ್ನವಿದು. ಮೊದಲನೆಯದ್ದು ರವೀಂದ್ರನಾಥ ಟ್ಯಾಗೋರರ ‘ಶಹಜಹಾನ್’ ಎಂಬ ಕವಿತೆಯ ಕೆಲ ಸಾಲುಗಳು. ಎರಡನೆಯದು ಸಾಹೀರ ಲೂಧಿಯಾನ್ವಿಯ ‘ತಾಜ್ ಮಹಲ’ ಎಂಬ ನಜ್ಮ.

ಶಹಜಹಾನ್
ಓ ಶಹಜಹಾನ್
ಧೂಳಿಯಲ್ಲಿ ನೆಗೆದೋಡಿದ ನಿನ್ನ ರಥದ ವೈಭವ
ಕಾಲಗರ್ಭದಲ್ಲಿ ಹಾರಿ ಚದುರಿ ಹೋದಂತೆ
ನಿನ್ನ ಯೌವನ, ಧನ ದೌಲತ್ತು ಅಳೆದು ಹೋಗುವದೆಂದು
ಗೊತ್ತಿತ್ತು ನಿನಗೆ.
 
ನಿನ್ನ ಹೃದಯದೊಂದು ಬೇನೆಯ
ಪಳೆಯುಳಿಕೆಯಾಗಿಸುವಾಸೆ ನಿನ್ನದು.
ಬೈಗಿನ ನೇಸರನ ಕಿತ್ತಳೆ ಕರಗುವ ಸಮಯದಷ್ಟು
ನಿನ್ನ ಸಾರ್ವಬೌಮತ್ವದ ಹೊತ್ತು.
ನಿನ್ನ ಮನ ಹೊತ್ತಿದ್ದೊಂದೆ ಒಂದು ಆಶೆ
ಭಾರ ಹೃದಯದ ಉಸ್ಸೆಂಬ ಭಾಷೆ
ಆಕಾಶದೆತ್ತರಕ್ಕೂ ಕೊರಗು ತಿಳಿಸುವಾಸೆ.
 
ಮುತ್ತು ರತ್ನ ವಜ್ರಗಳ ಹೊಳಪು ಅಳೆದು
ಕ್ರಮೇಣ ಮಾಯವಾಗುವ ಕಾಮನಬಿಲ್ಲಿನಂತೆ
ಒಂದೇ ಒಂದು ಕಣ್ಣೀರು
ಹೊಳೆ ಹೊಳೆಯುತಲಿರಲಿ ಕೆನ್ನೆಯ ಮೇಲೆ
ಕಾಲ ಕಾಲಕ್ಕೂ ತಾಜನಂತೆ.
 
ಜೀವನೆವೆಲ್ಲ ಜಿಗಿದಾಟದಲ್ಲೆ ಕಳೆ
ಓ ಮಾನವ ಹೃದಯವೇ
ನಿನಗಿಲ್ಲ ಇಲ್ಲಿ ವೇಳೆ,
ನಿನ್ನ ಮರೆವಿಗೆ ಮದ್ದು
ಮೂಡಿಸು ಓ ದೊರೆಯೇ
ನೀ ಕಾಲನ ಚೆಲವು ಕದ್ದು
ಅಜರಾಮರವಾಗಿಸಲು ಬಯಸುವೆಯೇ?
 
ನಿನ್ನ ಮೆಲುಧನಿಯ ಪ್ರೀಯ ಮಾತುಗಳ ಉಸಿರು
ಆ ಚಂದ್ರಿಕೆಯಲ್ಲಿ ತೇಲಿ
ಗುಂಯಿಗೂಡಲಿ ಅನಂತತೆಯ ಕರ್ಣಗಳಲ್ಲಿ.
ಮಧುರ ನುಡಿಗಳರಳಲಿ ಬಿರಿದ ಹೂಗಳಂತೆ.
ಇರು, ನಿನ್ನೊಲವಿನ ಚಿತ್ರ ಕವಿರಾಜ
ಸಂದೇಶ ಬಿತ್ತರಿಸಲಿಂದು ಮೇಘರಾಜ
ಪಸರಿಸುತಾ ಹರಡಲಿದು ದಿಕ್ ದಿಗಂತಗಳತ್ತ
ಅಲ್ಲಿ ಆ ನಿನ್ನ ಪ್ರಿಯತಮೆಯತ್ತ
ಎಲ್ಲ ಬೆಳಗಿನ ಸೂರ್ಯ ರಶ್ಮಿಗಳು
ಬೈಗಿನ ಭಾಸ್ಕರನ ಎಳೆಗಳು
ದಳ ಕಳೆದುಕೊಂಡ ಕೆಮೇಲಿಗಳ
ಸಂಗದಲ್ಲಿ ಭಾಷೆಯ ಗಡಿ ಮರೆತು
ಮರುಕದಿಂದ ತಿರಗಿಸುತ ತಮ್ಮ ಮುಖಗಳ
ಕೂಗಿ ಕೂಗಿ ಹೇಳಲಿ
ಓ ಪ್ರಿಯತಮೆ, ಮರೆತಿಲ್ಲ ನಾ ನಿನ್ನ
‘ನನ್ನ ಪ್ರೀತಿ’ ಮರೆಯಲಾರೆ ನಾ ನಿನ್ನ
ಚೆಲುವೆ ನಿನ್ನ ಕೋಶ ಕೋಶಗಳ
ಶೋಕ ಕಾಲವೆಂದೂ ಕೊನೆಯಾಗದಿರಲಿ.
 
ಸುಳ್ಳು ಸುಳ್ಳು
ಮರೆತಿಲ್ಲ ನೀನೆಂಬುವದೆಲ್ಲ
ಹೇಳಿದವರಾರು ತೆರೆದಿರಿಸಿಲ್ಲ ನೀನು
ನೆನಪುಗಳ ಪಂಚರದ ಬಾಗಿಲೆಂದು.
 
ಇಂದಿಗೂ ನಿನ್ನ ಹೃದಯ ಕದಲುವದಿಲ್ಲವೆ
ಇತಿಹಾಸದ ಆ ಕಾರಿರುಳು ಕಂಡು
ಮರೆಯಲಾಗದೆ ಕೊರಗಿಲ್ಲವೆ
ನಿರ್ವಾಣದ ದಾರಿ ಕೂಡಾ ಇಂದು.
ಸಾವನ್ನು ಮೋಹಕವಾಗಿ ಬಚ್ಚಿಡುತ್ತವೆ
ನೆಲದಡಿಯ ಗೋರಿಗಳು
ಪಾಪ, ಬದುಕನ್ನೆತ್ತಿ ಕಟ್ಟಲು ಸಾಧ್ಯವೆ ಅವಕೆ?

ಮಾಂತ್ರಿಕ ಕವಿ ಸಾಹೀರ ಲೂಧಿಯಾನ್ವಿ ತಾಜನ್ನು ಕಾಣುವ ಬಗೆ ಹೀಗೆ.
 
ಅನಿಸುವದೋ ಏನೋ ನಿನಗೆ
ಸರಿಸಮವಿಲ್ಲವೆಂದು ತಾಜ್ ಗೆ
ಆದರೂ ಗೆಳತಿ ಬರಬೇಡ ನೀನಲ್ಲಿಗೆ.
 
ಸುಂದರ ಮಹಲುಗಳ ಥಳಥಳಿಸುವ ಮಾರ್ಬಲಗಳ
ಧನ ಡೌಲತ್ತಿನ ರಾಜಮಹಾರಾಜರಾಡಿದ ಮಾರ್ಗಗಳ
ಥಳಕು ಬಳುಕಿನ ಸುಖ ಸುಪ್ಪತ್ತಿನಲ್ಲಿಟ್ಟ ಶವಗಳ
ಬದಿಯಲ್ಲಿಲ್ಲ, ನನ್ನ ನಿನ್ನಂತಹ ಸಾವಿರ ಆತ್ಮಗಳಿಗೆ ಜಾಗ.
 
ಅಗಾಧ ಮೋಹಕತೆಯ ಮಡಲಿನಲ್ಲೊಮ್ಮೆ ನೋಡು ಇಣುಕಿ
ಅಸದಳ ಪ್ರೇಮಾನುರಾಗಗಳು ಮುರುಟಿ ಹೋದವಿಲ್ಲಿ
ಸಾವಿರ ಸಾಮಾನ್ಯರ ಸಹಜ ಪ್ರೀತಿ ಬೆಲೆಯಿಲ್ಲದ್ದು
ಚಕ್ರವರ್ತಿ, ಜಗದೇಕ ವೀರರೆದುರಲ್ಲಿ ಎನ್ನುವೆಯೋ?
ಒಂದು ಕಿರು ದೀಪದ ಬತ್ತಿಯೂ ಬೆಳಗುತಲಿಲ್ಲ
ಕತ್ತಲಲ್ಲಿ ಕರಗಿ ಹೋದ ಆ ಕೊಂಪೆವಾಸಿಗಳ ಮೇಲೆ.
 
ನನ್ನ ಪೂರ್ವಿಕರ ರಕ್ತ ಬಸಿದು , ಬೆವರು ಕಸಿದು
ಅವರ ಕಠಿಣ ಚರ್ಮದ ಮೇಲೆದ್ದ ಕರಗದ ಬೊಕ್ಕೆ
ಇ ಸೊಕ್ಕಿನ ಸಲಗಗಳ ಸುಖ ಲೋಲಪತೆಯ ಸೌಧಗಳು.
ಬೆಳ್ಳಂ ಬೆಳ್ಳನೆಯ ಈ ನಾಜೂಕು ಕುಸುರಿ ಕೆತ್ತಿದ್ದು
ಕೊಳೆಯಾದ ಆ ಕೈಗಳು -ಒಂದನ್ನೊಂದು
ಬಾಚಿಕೊಂಡಿರಲಿಲ್ಲವೆ ಪ್ರೇಮದಿಂದ, ಮಿಂದಿರಲಿಲ್ಲವೆ
ಭರಪೂರ ಒಲವಿನ ಮಳೆಯಲ್ಲಿ.
ಒಂದೇ ಒಂದು ಕಲ್ಲಿನ ಸ್ಮಾರಕವಾದರಿದೆಯೇ
ಆ ಕಾರ್ಮಿಕರ ನೆನಪಿಗಾಗಿ.
ಮಿಣುಕು ಬೆಳಕಿದೆಯೇ ಅವರ ಎದೆ ಬೆಚ್ಚಗಿಡಲು?
 
ಈ ಯಮುನೆಯ ತಟ, ತೋಟದ ತಂಗಾಳಿಯ ಸುಳಿ
ಹಚ್ಚನೆ ಹಸಿರಿನ ಸಿರಿ, ಹೊಳೆ ಹೊಳೆವ ಮೈಯ ಮಹಲು
ಕಮಾನು ಕೊತ್ತಲಗಳ ನುಣುಪು ಇದೆಲ್ಲ ಸಾರ್ವಬೌಮ-
ನೊಬ್ಬ ನಮ್ಮ ಮೇಲೆ ಮಾಡಿದ ಅವಹೇಳನ ಗೆಳತಿ.
 
ಮತ್ತೆಲ್ಲಿಯಾದರೂ ಸಿಗುವ ಗೆಳತಿ,
ಬರಬೇಡ ನಿನಲ್ಲಿಗೆ ಮಾತ್ರ ಎಂದಿಗೂ.
 
ಒಮ್ಮೊಮ್ಮೆ ತಾಜ್ ನಮ್ಮ ನಿಮ್ಮಂಥವರಿಗಲ್ಲ ಎನಿಸುವದು ಇದಕ್ಕೆ ಏನೋ, ಭಾರ ಹೃದಯದೊಂದು ನಿಟ್ಟುಸಿರಿನ ಸ್ಥಾವರವದು.
 
 

‍ಲೇಖಕರು G

25 April, 2015

2 Comments

  1. mmshaik

    taaj ge aneka maggulugaLu..drustiyante srusti..alva..neevu ondu kavana bareyabahudittu prayatnisi..erdu kavana chennaagive..dhannyavaadagaLu..

  2. ಲಕ್ಷ್ಮೀಕಾಂತ ಇಟ್ನಾಳ

    Anil ji, very efficient trans, simply superb,

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading