2013 ಮತ್ತು ‘ಹೆಣ್ಣೆಂಬ ಹೆಣ್ಣು’
ಜಯಶ್ರೀ ಕಾಸರವಳ್ಳಿ
ಬೆಂಗಳೂರಿನ ಜನರ ನಡವಳಿಕೆಯೇ ಕೆಲವೊಮ್ಮೆ ವಿಚಿತ್ರ. ಮೊನ್ನೆ ರಸ್ತೆಯಲ್ಲಿ ಹೋಗುತ್ತಿರುವಾಗ ಅಷ್ಟೇನೂ ಪರಿಚಯವಿಲ್ಲದ ಒಬ್ಬ ಕಿರಿಯ ಅದೂ ಇದೂ ಮಾತನಾಡುತ್ತಾ ಕೇಳಿದ: By the way, what is your new year resolution? ಒಂದು ವರುಷ ಮುಗಿದು ಮತ್ತೊಂದು ವರುಷ ಬಂದಿದ್ದೂ ಗಮನಿಸಲಾಗದಷ್ಟು ಅಪ್ಪಳಿಸುವ ಘಟನೆಗಳಿಂದ ನಾವಿನ್ನೂ ಚೇತರಿಸಿಕೊಳ್ಳಲಾಗದೇ ತತ್ತರಿಸುತ್ತಾ ಎಂದೋ ಕಿತ್ತುಕೊಂಡ ನಮ್ಮ ನಿದ್ದೆಯಲ್ಲಿ, ಎಲ್ಲೋ ಓದಿದ್ದ ಬಾಲ್ಯದ ಚಂದಮಾಮದ ಕತೆಯ ಯಾರದ್ದೋ ಜೀವ ಏಳು ಸಮುದ್ರದಾಚೆಯ ಪಂಜರದ ಗಿಳಿಯಲ್ಲಿ ವಿಲವಿಲ ಒದ್ದಾಡಿದ ಹಾಗೆ, ಹೆಣ್ಣೆಂಬ ನಮ್ಮೆಲ್ಲರ ಆತ್ಮದ ಆ ಹಿಡಿ ಜೀವವನ್ನ ಅಂಗೈಯಲ್ಲಿ ಹಿಡಿದು ಸಂಪೂರ್ಣ ಹೊಸಕಿಯೂ ಹಾಕದೇ, ನಿರಾತಂಕದಿಂದ ಬಾಳಲೂ ಬಿಡದೇ, ದಿನಕ್ಕೆ ಒಂದೊಂದು ಅನಘ್ರ್ಯ ಮುತ್ತುಗಳನ್ನು ಉದುರಿಸುತ್ತಾ ನಮ್ಮನ್ನು ಇನ್ನಷ್ಟು ಮತ್ತಷ್ಟು ಅಧೀರಗೊಳಸಿ, ಅತಂತ್ರರನ್ನಾಗಿಸುತ್ತಾ, ನಮ್ಮನ್ನ ಆದಿಕಾಲಕ್ಕೆ ತಳ್ಳುತ್ತಿದ್ದಾರೋ ಅಥವಾ ಆಧುನಿಕ ಕಾಲದಲ್ಲೇ ಉಳಿಸಿದ್ದಾರೋ ದೇಶವನ್ನಾಳುವ ಈ ಧುರೀಣರು ಎಂದು ಒಂದೂ ತಿಳಿಯದೇ ಅಸಹಾಯಕರಾಗಿ ಸರ್ವರೂ ತಲೆ ಎತ್ತಿ ದೆಹಲಿಯೆಡೆಯೇ ನೋಡುತ್ತಿರುವಾಗ, ಪಾಪ! ಯಾವ ತಪ್ಪೂ ಇರದ ಮುಗ್ಧ ಹುಡುಗನೊಬ್ಬ, ಹೊಸ ವರುಷದ ಶುಭಾಶಯ ಕೋರಿ, ರೆಸಲೂಷನ್ ಬಗ್ಗೆ ಪ್ರಶ್ನಿಸಿದ. ಯಾವ ವರುಷಕ್ಕೂ ಅಂತಹ ಪ್ರಾಮುಖ್ಯತೆ ಕೊಡದ ನಮಗೆ ಇವೆಲ್ಲಾ ಹೊಸತಾದರೂ, ಇಷ್ಟು ಬಂಡೆದ್ದ ದೇಶದಲ್ಲಿ ರೆಸಲೂಷನ್ ಅಂತ ನಾವು, ಮಹಿಳೆಯರು ತೆಗೆದುಕೊಂಡರೆ ಯಾವ ವಿಷಯದ ಬಗ್ಗೆ ತೆಗೆದುಕೊಳ್ಳಲು ಸಾದ್ಯ? ನಮಗೆ ಬೇಕಿರುವುದಾದರೂ ಏನು? ಕೇವಲ ಪಗಡೆಯಾಟದ ದಾಳದಂತೆ ಉಪಯೋಗಿಸಲ್ಪಡುವವರ ಕೈಚಳಕದ ಮೇಲೆ ಹೆಣ್ಣಿನ ಗರ ನಿಂತಿರುವಾಗ ಹೇಳುವುದಾದರೂ ಎನಿತು? ಅವಿರತವಾಗಿ ಚಡಪಡಿಸುವ ಮನಸ್ಸು ಮೌನವಾಗಿ ರೋದಿಸಿ, ಕಡೆಗೂ ಹೊಳೆದಿದ್ದು ಇಷ್ಟು…..

ವ್ಯಂಗ್ಯ ಚಿತ್ರ ಕೃಪೆ : ದಿನೇಶ್ ಕುಕ್ಕುಜಡ್ಕ
1) ಮಕ್ಕಳು ದೊಡ್ಡವರಾದ್ದರಿಂದ ಮುಂದೆ ಬರುವ ಮೊಮ್ಮಕ್ಕಳೂ ಕೂಡ ಯಾವ ಕಾರಣಕ್ಕೂ ಸ್ಕರ್ಟ್ ಹಾಕಿಕೊಳ್ಳದ ಹಾಗೆ ಕಾಪಾಡುತ್ತೇನೆ !
2) ಮುಖಕ್ಕೆ ಮೇಕಪ್ ಹಾಕಿಕೊಂಡರೆ ಅವೆಲ್ಲವೂ dented and painted ಆಗಿ ಕಾಣುವುದರಿಂದ ಅವೆಲ್ಲವೂ ವರ್ಜ್ಯ !
3) ಹೇಗೆಂದರೂ ರಸ್ತೆಗಿಳಿದು ಎಂದೂ ಯಾರಿಗೂ ಧಿಕ್ಕಾರ ಹಾಕುವುದಿರಲಿ, ಮನೆಯಲ್ಲೂ ಯಾರಿಗೂ ಹಾಕಿ ಅರಿವಿಲ್ಲದ್ದರಿಂದ, ಹಾಕಬೇಕೆಂಬ ಮನಸ್ಸಾದರೂ ಹಾಗೆ ಹಾಕುವುದು ಈಗಿನ ಮಕ್ಕಳಿಗೆ ಫ್ಯಾಶನೆಬಲ್ ಆದ್ದರಿಂದ ಮಕ್ಕಳು ರಸ್ತೆಗಿಳಿಯುವುದನ್ನೂ ತಡೆಗಟ್ಟುತ್ತೇನೆ!
4) ಹೆಣ್ಣು ಮಕ್ಕಳು ಯಾವ ಕಾರಣಕ್ಕೂ ರಾತ್ರಿ ಏಳರ ನಂತರ ಹೊರಹೋಗದ ಹಾಗೆ ನಾಲ್ಕು ಗೋಡೆಯೊಳಗೆ ಭದ್ರವಾಗಿ ಬಂಧಿಸಿ ದೇಶದ ಹಿತದೃಷ್ಟಿಯಿಂದ ಕಾವಲು ಕಾಯುತ್ತೇನೆ!
5) ರೇಪ್ನಂತ ಹೀನಾಯ ಕೃತ್ಯವೆಸಗಿದವನಿಗೆ ಮರಣದಂಡನೆ ವಿಧಿಸಿದರೆ, ಎಷ್ಟೋ ಸಲ ನಿರಪರಾಧಿಗಳೇ ಬಲಿಯಾಗುವ ಅಪಾಯವಿರುವುದರಿಂದ ಮರಣದಂಡನೆಯನ್ನು ವಿರೋಧಿಸಿದ ಕಾಪ್ ಪಂಚಾಯತ್ರ ಅಭಿಪ್ರಾಯ ಅಕ್ಷರಶಃ ನಿಜವಾದ್ದರಿಂದ, ಹೆಣ್ಣು ಮಕ್ಕಳು ಮನೆಯೇ ಬಿಟ್ಟುಹೋಗದ ಹಾಗೆ ನೋಡಿಕೊಳ್ಳುತ್ತೇನೆ!
6) ಮಕ್ಕಳು ಎಂದೂ ಸೆಲ್ಫೋನ್ ಮುಟ್ಟದ ಹಾಗೆ ಕಣ್ಣಿನ ಮೇಲೆ ಕಣ್ಣಿಟ್ಟು ರಕ್ಷಿಸುತ್ತೇನೆ!
7) ಭಾರತದಂತಹ ದೇಶದಲ್ಲಿ ಎಂದೂ ರೇಪ್ ಆಗುವುದಿಲ್ಲ, ರೇಪ್ ಏನಿದ್ದರೂ ‘India’ದಲ್ಲಿ ಮಾತ್ರ ನಡೆಯುವುದರಿಂದ ಆ ಮಹಾನುಭಾವರು ವಿವರಿಸಿದಂತಹ ಭಾರತ ಎಲ್ಲಿದೆ ತಿಳಿದಿಲ್ಲವಾದ್ದರಿಂದ ಮಕ್ಕಳನ್ನ ವಿದೇಶಕ್ಕೇ ಅಟ್ಟುತ್ತೇನೆ!
8) ಲೈಂಗಿಕತೆಯ ಎಲ್ಲೆ ಮೀರಿ ಮಕ್ಕಳು ಸ್ವೇಚ್ಛೆಯಾಗಿ ವಿಹರಿಸುವುದು ಕಾನೂನುಬಾಹಿರವಾಗಿ ಅಪರಾಧಿಗಳೆಂದು ಪರಿಗಣಿಸಿ ಶಿಕ್ಷೆಗೆ ಗುರಿಯಾಗುವುದರಿಂದ ಲಕ್ಷ್ಮಣರೇಖೆ ಎಳೆದು ಕಾಪಿಡುತ್ತೇನೆ!
9) ಒಂದು ವೇಳೆ, ಒಂದೇ ಒಂದು ವೇಳೆ……. ಇಷ್ಟೆಲ್ಲಾ ವಿಧಿಸಿದ ನಂತರವೂ ಹೆಣ್ಣು ಮಕ್ಕಳು ಹೊರ ಹೋಗುವ ಸಂದರ್ಭ ಬಂದು, ಸಾರ್ವಜನಿಕ ಸಾರಿಗೆ ಸೌಲಭ್ಯಗಳನ್ನು ಉಪಯೋಗಿಸುವ ದುರ್ದೆಸೆ ಬಂದಲ್ಲಿ, ಅದರ ಬದಲು ಹೋಗಿ ಎಲ್ಲಾದರೂ ಕೆರೆಯೋ ಬಾವಿಗೋ ಬೀಳಿರೆಂದು ಉಪದೇಶಿಸುತ್ತೇನೆ………..!







ತುಂಬಾ ಒಳ್ಳೆಯ ರೆಸಲ್ಯೂಷನ್ ಗಳು, ಹೆಣ್ಣಿನ ಇಂತಹ ಸ್ವಾತಂತ್ರ್ಯಗಳಿಗೆ ನಮ್ಮೆಲ್ಲರ ಸಂಪೂರ್ಣ ಬೆಂಬಲವಿದೆ.
Good one! Hope, men ponder over the statements they made in haste.
hmmm … vyangyada monachu thagabekadavarige thaakali …:)
yes!!!
sarcastic….
ಅಬ್ಬಾ..