ಕಳಶ ಹೊತ್ತ ಹುಡುಗಿ
ಭಾನು ಮುಶ್ತಾಕ್
ಸೇಂದಿ ಕಂಟ್ರಾಕ್ಟರ್ ಪಾಪಣ್ಣನ ಮಗಳು ಗೌರಿ ನನ್ನ ಕ್ಲಾಸ್ಮೇಟು
ಪಾಪಾಸುಕಳ್ಳಿ ಹಣ್ಣಿನ ರುಚಿ ರತ್ನಿ ಮೈನೆರೆದಿದ್ದು ಶಿವಮ್ಮ ಕದ್ದು
ಬಸಿರಾದದ್ದು ಅವಳದೇ ನ್ಯೂಸು . ಜಾಡಿಯಲ್ಲಿಟ್ಟ ಕಳ್ಳಿನ ರುಚಿ
ತೋರಿದ್ದೂ ಅಲ್ಲದೆ ಅಮ್ಮ ನಮಾಜ್ ಮುಗಿಸುವವರೆಗೂ ಕಾದು
ಚಾಡಿ ಹೇಳಿ ಬಡಿಸಿದ್ದು ಅವಳದೇ ಹಿಕಮತ್ತು.
ಆದರೂ ಅವಳು ಚಂದ ಅವಳ ರೇಷಿಮೆ ಲಂಗ
ಕುಚ್ಚಿನ ನೀಲ ಜಡೆ,ಮಿಡಿಮೊಲೆ ಬಂಗಾರದ
ಒಡವೆ ಇಂದಿಗೂ ನೆನೆಪು ! ವಾದ್ಯದ ತಾಳಕೆ ಕಂಗಳ
ಅರೆತೆರೆದು ಕೈಗಳ ತಲೆ ಮೇಲೆ ಹೊತ್ತು
ತೆಂಗು ತೆನೆ ಮೋಡಿಯ ತೂಗು ನಡಿಗೆ ಎಂತಹ ಸೊಬಗು

ಹೊಳೆಯುವ ಹುಡುಗಿ ಬೆಳಗುವ ಕಳಶ ಮಾವ ರಂಗಪ್ಪನ
ಆಸರೆಯಲಿ ನಡೆದಾಕೆಯ ಮೆರವಣಿಗೆಯಲಿ ಕಂಡಾಗ
ಕಾಗೆ ಎಂಜಲಿನ ಅವಳಾರೋ ನಾನ್ಯಾರೋ
ಗೌರಿ ಗೌರಿ ನಂಗೂ ಒಂದಿನ ಕೊಡೇ ; ಇಲ್ಲಮ್ಮಾ
ನೀವು ಸಾಬರು ಗೌರಿ ತೂಗುವಿಯೇಕೇ
ಅದು ನಮ್ಮ ದೇವರು .

ಬಾಳ ಇಳಿ ಸಂಜೆಯಲಿ ಮಬ್ಬಾದ ಕಣ್ಣಲಿ
ಹೊಳಪಾದ ಸತ್ಯವ ಕೇಳಿಲ್ಲಿ ಕಳಶ ಹೊತ್ತ ಹುಡುಗಿ
ನಿನ್ನೊಬ್ಬಳದೇನಲ್ಲ ,ಸುತ್ತಿ ಸುಳಿವ ಮೆರಗು
ಹೊಳೆವ ಮತ್ತಿನ ನಡಿಗೆ ಶತ ಶತಮಾನಗಳಿಂದ
ನಮ್ಮೆಲ್ಲರದೇ ಹೊರುವ ಹೊಣೆ ಕೆಲವರಿಗುಂಟು
ವಾದ್ಯದ ಹುಮ್ಮಸ್ಸು ಬಂಗಾರದ ಬೆಡಗು ,
ಅಸರೆಗಿಷ್ಟು ಕೈಗಳು ಉಳಿದವರಿಗೆ ಮೌನದ ನಿಟ್ಟುಸಿರು
ಹೊರುವ ಹುಮ್ಮಸ್ಸು, ಹೆರುವ ಸಹಜತೆ ಹೆರವರ
ಲಕ್ಷ್ಮಣರೇಖೆಗಳಡಿ ತುಡಿವ ಎಳೆ ನೋವಿನ ಮಿಡಿತಗಳು
ಎಲ್ಲ ಹೆಸರುಗಳೂ ಕುಣಿಸಲು
ಎಲ್ಲ ಪ್ರಭೆಗಳೂ ದಹಿಸಲು
ನಮ್ಮನ್ನು ಮೆಟ್ಟಿ ಎತ್ತರಕ್ಕೇರುತ್ತಾ
ನಮ್ಮ ಜೈಲಿನ ಸ್ವಯಂಘೋಷಿತ ಆಧಿಕಾರಿಗಳಾಗುತಾ
ಅಂಗೈ ಗೆರೆಗಳ ರೂವಾರಿಗಳು
ಹಣೆಯ ತಿಲಕ,ತಲೆಯ ಕಿರೀಟ
ಎಮ್ಮ ಪರದೈವವಾಗುತಾ
ನಮ್ಮ ಹಸಿ ರಕ್ತದಲಿ ಬೆರಳ ಆದ್ದುತಾ
ಜೀವಂತ ದಹಿಸುವ ಜ್ವಾಲೆಯ ವೈಭವೀಕರಿಸುತಾ
ನಮ್ಮ ಕೈಯಲೇ ನಮ್ಮ ಬೂದಿಯ ರಂಗೋಲಿ
ಬಿಡಿಸುತಾ ದಾಖಲಿಸುತಾರೆ ಅವರ ಇತಿಹಾಸವ
ಬಾಯಲಿ ಜಪಿಸುತಾ ‘ಯತ್ರ ನಾರ್ಯಸ್ತು’






mam, heart touching lines……
ಕೈಗನ್ನಡಿ
Kavite chennaagide.”Namma kayalle namma boodiya rangoli…”saalugala dani mana muttuttade.
RohiniSatya.
Excellent