‘ಭಾಂಗ್ರಾ ಬಾನಿನಲ್ಲಿ ಅರೀನಾ ಹಕ್ಕಿ’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ಕೆಲವೊಮ್ಮೆ ಮೇಲ್ನೋಟಕ್ಕೆ ಏನೇನೂ ಅನಿಸದ ಪುಟ್ಟ ನಡೆಗಳು ಅದ್ಭುತವನ್ನೇ ಮಾಡಿರುತ್ತವೆ.

ನಮ್ಮದೇ ಆಫೀಸಿನ ದೊಡ್ಡ ಕಾರ್ಯಕ್ರಮವೊಂದಕ್ಕೆ ಅಂದು ಖ್ಯಾತ ಬಾಲಿವುಡ್ ಗಾಯಕ ಶಂಕರ್ ಮಹಾದೇವನ್ ಬಂದಿದ್ದರು. ಶಂಕರ್ ಮಹಾದೇವನ್ ಸಂಗೀತ ಕಾರ್ಯಕ್ರಮವೆಂದರೆ ಎಲ್ಲರಿಗೂ ಹುಮ್ಮಸ್ಸಿರುವುದು ಸಹಜವೇ. ಆ ಸಂಜೆ ಅಲ್ಲೂ ಕೂಡ ಅಂಥದ್ದೊಂದು ವಾತಾವರಣವಿತ್ತು.

ಹಲವು ದೇಶಗಳಿಂದ ಅತಿಥಿಗಳಾಗಿ ಆಗಮಿಸಿದ್ದ ಸಚಿವರು, ಗಣ್ಯರು, ವಿವಿಧ ಸರಕಾರಿ ಮಂತ್ರಾಲಯಗಳಲ್ಲಿ ಆಯಕಟ್ಟಿನ ಹುದ್ದೆಯಲ್ಲಿದ್ದ ಹಿರಿಯ ಅಧಿಕಾರಿಗಳು, ಐ.ಎ.ಎಸ್ ಅಧಿಕಾರಿಗಳು, ನಮ್ಮದೇ ಸಂಸ್ಥೆಯ ಸಿಬ್ಬಂದಿಗಳು… ಹೀಗೆ ಬರೋಬ್ಬರಿ ಸಾವಿರ ಮಂದಿ ಸೇರಿದ್ದ ಅದ್ದೂರಿ ಸಮಾರಂಭವಾಗಿತ್ತದು. ನಿರೀಕ್ಷೆಯಂತೆ ಸಂಗೀತ ಕಾರ್ಯಕ್ರಮವನ್ನು ಸವಿಯಲು ಸಭಾಂಗಣದಲ್ಲಿ ಕಾಲಿಡಲೂ ಆಗದಷ್ಟಿನ ಜನಸಂದಣಿ.

ಸ್ವಲ್ಪ ಹಾಡು, ಕೊಂಚ ಹರಟೆ, ಒಂದಿಷ್ಟು ಮೋಜು… ಹೀಗೆ ಸಾಗುತ್ತಿತ್ತು ಶಂಕರ್ ರವರ ಸಂಗೀತದ ಸಾಗಾ. ತಾವು ಇನ್ನೇನು ಪ್ರಸ್ತುತಪಡಿಸಲಿರುವ ಒಂದು ಹಾಡಿನ ಸಂಕ್ಷಿಪ್ತ ಪರಿಚಯವನ್ನು ನೀಡುತ್ತಾ ಶಂಕರ್ ತನ್ನ ಸವಿನೆನಪಿನ ಬುತ್ತಿಯನ್ನು ಬಿಚ್ಚುತ್ತಿದ್ದರು. ‘ಅದೊಂದು ಪೂರ್ಣ ಪ್ರಮಾಣದ ಸಿನೆಮಾ ಎಂಬ ಭಾವವು ನಮ್ಮಲ್ಲಿ ಅಂದು ಬಂದಿರಲೇ ಇಲ್ಲ. ಚಿತ್ರದ ನಿರ್ದೇಶಕ ಓರ್ವ ಉತ್ಸಾಹಿ ತರುಣನಾಗಿದ್ದ. ಆತನ ವಯಸ್ಸಿಗೆ ಮತ್ತು ಹುಮ್ಮಸ್ಸಿಗೆ ಸರಿದೂಗುವಂತಹ ಮೂವರು ಅನುಭವಿ ನಟರು ಜೊತೆಗಿದ್ದರು. ನಾವೂ ಕೂಡ ಹುಡುಗಾಟವಾಡುತ್ತಾ, ಏನೇನೋ ಟ್ಯೂನ್ ಹಾಕಿ ಹಾಡುತ್ತಾ-ಕುಣಿಯುತ್ತಾ ಮಜವಾಗಿದ್ದೆವು. ನಮಗೆ ಅದೊಂದು ಸುಂದರ ರಜಾದಿನಗಳಂತಿತ್ತು ಅಷ್ಟೇ. ನಂತರ ಆ ಸಿನೆಮಾ ತೆರೆಗೆ ಬಂದಿತು. ಎಲ್ಲರ ನಿರೀಕ್ಷೆಗೂ ಮೀರಿ ದೇಶದಾದ್ಯಂತ ಬದಲಾವಣೆಯ ಹೊಸ ಗಾಳಿಯನ್ನೇ ಬೀಸಿತು. ಮುಂದೆ ನಡೆದಿದ್ದೆಲ್ಲಾ ಇತಿಹಾಸ. ಇದೇ ಚಿತ್ರದ ಸೂಪರ್ ಹಿಟ್ ಹಾಡೊಂದನ್ನು ನಿಮ್ಮೆಲ್ಲರಿಗಾಗಿ ಇಂದು ಪ್ರಸ್ತುತಪಡಿಸುತ್ತಿದ್ದೇನೆ. ಎಂಜಾಯ್ ದಿಲ್ಲಿ…’, ಹೀಗೆ ಶಂಕರ್ ಮಹಾದೇವನ್ ಕುತೂಹಲ ಹುಟ್ಟಿಸುತ್ತಿದ್ದರೆ ನೆರೆದಿದ್ದವರಿಗೆ ಹಾಡನ್ನು ಕೇಳುವ ಕಾತರ.

ಶಂಕರ್ ಮಹಾದೇವನ್ ಅಂದು ಹೀಗೆ ಹೇಳುತ್ತಿದ್ದಿದ್ದು ‘ದಿಲ್ ಚಾಹತಾ ಹೈ’ ಚಿತ್ರದ ಬಗ್ಗೆ. ನಟ, ನಿರ್ದೇಶಕ, ಗಾಯಕ ಫರ್ಹಾನ್ ಅಖ್ತರ್ ನಿರ್ದೇಶನದ ಮೊದಲ ಚಿತ್ರವಾಗಿತ್ತದು. ಅಮೀರ್ ಖಾನ್, ಸೈಫ್ ಅಲಿ ಖಾನ್ ಮತ್ತು ಅಕ್ಷಯೆ ಖನ್ನಾ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದ ಮೂವರು ನಟರು. ಜೊತೆಗೆ ಡಿಂಪಲ್ ಕಪಾಡಿಯಾ, ಸೋನಾಲಿ ಕುಲಕರ್ಣಿ ಮತ್ತು ಪ್ರೀತಿ ಜಿಂಟಾರ ಅದ್ಭುತ ಕಾಸ್ಟಿಂಗ್. ಹೊಸ ಶತಮಾನದ ಭಾರತೀಯ ಯುವಕ-ಯುವತಿಯರ ಬದುಕನ್ನು ಪರಿಣಾಮಕಾರಿಯಾಗಿ ತೆರೆಗೆ ತಂದ ಚಿತ್ರವಾಗಿತ್ತದು. ಆ ಕಾಲಕ್ಕೆ ತೀರಾ ಹೊಸ ಪ್ರಯೋಗ. ಇನ್ನು ಚಿತ್ರದ ಅಚ್ಚುಕಟ್ಟಾದ ಪ್ರಸ್ತುತಿಗೆ ಶಂಕರ್-ಎಹ್ಸಾನ್-ಲಾಯ್ ಎಂಬ ಗಾನಗಂಧರ್ವತ್ರಯರ ಸಂಗೀತವೂ ಸೇರಿ ಚಿತ್ರವು ಹೊಸದೊಂದು ಮೈಲುಗಲ್ಲನ್ನೇ ಸೃಷ್ಟಿಸಿತ್ತು. ಇವೆಲ್ಲವೂ ಆಗಿ ಇಂದಿಗೆ ಭರ್ಜರಿ ಇಪ್ಪತ್ತು ವರ್ಷ.

೨೦೦೧ ರಲ್ಲಿ ತೆರೆಗೆ ಬಂದ ದಿಲ್ ಚಾಹತಾ ಹೈ ಚಿತ್ರವು ಭಾರತೀಯ ಯುವಜನತೆಯು ಸಾಮಾನ್ಯವಾಗಿ ಆಡುವ ಭಾಷೆಯನ್ನೇ ಮಾತನಾಡುತ್ತಿತ್ತು. ಅವರು ಇಷ್ಟಪಡುವ ಸಂಗೀತವನ್ನೇ ತನ್ನ ನಾಡಿಯಲ್ಲಿ ಮಿಡಿತವಾಗಿಸಿತ್ತು. ಅವರ ಆಂತರಿಕ ತಲ್ಲಣಗಳನ್ನೇ ಮನಮುಟ್ಟುವಂತೆ ದೃಶ್ಯರೂಪದಲ್ಲಿ ತಂದು ಪ್ರೇಕ್ಷಕರ ಮುಂದಿರಿಸಿತ್ತು. ಮುಖ್ಯವಾಹಿನಿಯ ಚಿತ್ರವಾಗಿ ವಿಮರ್ಶಕರನ್ನೂ, ಪ್ರೇಕ್ಷಕರನ್ನೂ ಏಕಕಾಲದಲ್ಲಿ ಸೆಳೆದಿದ್ದು ಈ ಚಿತ್ರದ ಹೆಗ್ಗಳಿಕೆ. ಇಂದು ಗಾಯಕ ಶಂಕರ್ ಮಹಾದೇವನ್ ಆ ದಿನಗಳ ಬಗ್ಗೆ ಹೀಗೆಲ್ಲಾ ಕತೆ ಹೇಳಿದರೆ ನಮ್ಮಂಥವರಿಗೆ ಬೆರಗಾಗುತ್ತದೆ. ಹುಡುಗಾಟದ ಮೂಡಿನಲ್ಲಿದ್ದ ಕೆಲ ಪ್ರತಿಭಾವಂತರು ನೋಡನೋಡುತ್ತಲೇ ಎಂಥಾ ಪವಾಡವನ್ನು ಸೃಷ್ಟಿಸಿದರಲ್ಲವೇ ಅನಿಸಿಬಿಡುತ್ತದೆ.

ಜಸ್ಮೀತ್ ಸಿಂಗ್ ತನ್ನ ಕತೆಯೊಂದನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದಾಗ ನನಗೆ ನೆನಪಾಗಿದ್ದು ಇದೇ ಘಟನೆ.

ಅದು ೨೦೧೮ ರ ಮಾತು. ಜಸ್ಮೀತ್ ಸಿಂಗ್ ಭಮ್ರಾ ದಿಲ್ಲಿ ಮೂಲದ ಯುವಕ. ಜೀವನೋತ್ಸಾಹ ಮಾತ್ರ ಪಕ್ಕಾ ಪಂಜಾಬಿಗಳದ್ದು. ಜಸ್ಮೀತ್ ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್. ಪಂಜಾಬಿ ಕುಣಿತವಾದ ಭಾಂಗ್ರಾ ಕುಣಿಯುವುದೆಂದರೆ ಆತನಿಗೆ ಪಂಚಪ್ರಾಣ. ಆಗ ಜಸ್ಮೀತ್ ಮತ್ತು ಕೆಲ ಸಮಾನಮನಸ್ಕ ಗೆಳೆಯರು ‘ಭಾಂಗ್ರಾ ಅರೀನಾ’ ಎಂಬ ಗುಂಪೊಂದನ್ನು ಕಟ್ಟಿಕೊಂಡು, ಭಾಂಗ್ರಾ ಕುಣಿತದ ಪುಟ್ಟ ತರಗತಿಗಳನ್ನು ನಡೆಸುತ್ತಿದ್ದರು. ಅಲ್ಲೇ ಆಸುಪಾಸಿನಲ್ಲಿದ್ದ ಕೆಲವು ಮಕ್ಕಳು ಮತ್ತು ವಯಸ್ಕರು ಭಾಗವಹಿಸುತ್ತಿದ್ದ ಸಾಮಾನ್ಯ ಡ್ಯಾನ್ಸ್ ಕ್ಲಾಸ್ ಆಗಿತ್ತದು.

ಅಂದು ರಾತ್ರಿ ಒಂಭತ್ತರ ಹೊತ್ತಿಗೆ ಜಸ್ಮೀತ್ ರವರ ಸ್ಮಾರ್ಟ್ಫೋನ್ ಸದ್ದು ಮಾಡಿತ್ತು. ಕರೆಯನ್ನು ಸ್ವೀಕರಿಸಿದರೆ ಅತ್ತ ಕಡೆಯಿಂದ ಪರ್ಮೀಶ್ ವರ್ಮಾ ಮಾತನಾಡುತ್ತಿದ್ದರು. ಪರ್ಮೀಶ್ ವರ್ಮಾ ಪಂಜಾಬಿ ಚಿತ್ರರಂಗದ ಖ್ಯಾತ ಗಾಯಕ, ನಟ ಮತ್ತು ನಿರ್ದೇಶಕ. ಮ್ಯೂಸಿಕ್ ಇಂಡಸ್ಟಿçಯಲ್ಲಿ ಒಳ್ಳೆಯ ಹೆಸರು ಮಾಡಿರುವ ಸೆಲೆಬ್ರಿಟಿ. ‘ನನ್ನ ಹಾಡನ್ನು ನಿಮ್ಮ ವಿದ್ಯಾರ್ಥಿಗಳು ಅದೆಷ್ಟು ಚಂದ ಪ್ರಸ್ತುತಪಡಿಸಿದ್ದಾರೆ. ಯೂಟ್ಯೂಬಿನಲ್ಲಿ ನಿಮ್ಮ ವೀಡಿಯೋ ನೋಡಿ ಬಹಳ ಖುಷಿಪಟ್ಟೆ. ಈ ಪುಟ್ಟ ಮಕ್ಕಳನ್ನೊಮ್ಮೆ ಭೇಟಿಯಾಗಬೇಕು ಎಂಬ ಆಸೆ ನನಗೆ. ನಾನೀಗ ಚಂಡೀಗಢದಲ್ಲಿದ್ದೇನೆ. ನಾಳೆ ಮುಂಜಾನೆ ಒಂಭತ್ತರ ಹೊತ್ತಿಗೆ ಬಂದು ಭೇಟಿಯಾಗುವುದು ಸಾಧ್ಯವೇ?’, ಎನ್ನುತ್ತಿದ್ದರು ಪರ್ಮೀಶ್. ಇತ್ತ ನಮ್ಮ ಜಸ್ಮೀತ್ ಪಾಜಿಗೆ ಇದು ಕನಸೋ, ನನಸೋ ಎಂಬ ಗೊಂದಲದ ಭಾವ.

ಫೋನ್ ಇಟ್ಟಿದ್ದೇ ತಡ! ಜಸ್ಮೀತ್ ಸಿಂಗ್ ತನ್ನ ತಂಡದ ಇತರ ಸದಸ್ಯರೊಂದಿಗೆ ಈ ಬಗ್ಗೆ ಚರ್ಚಿಸಿದರು. ಗುಂಪಿನ ಭಾಗವಾಗಿದ್ದ ಮಕ್ಕಳ ಪೋಷಕರಿಗೆ ಕರೆಗಳು ಹೋದವು. ಪೋಷಕರನ್ನು ತ್ವರಿತಗತಿಯಲ್ಲಿ ಒಪ್ಪಿಸಿದ್ದೂ ಆಯಿತು. ಹೀಗೆ ಕೆಲವೇ ತಾಸುಗಳಲ್ಲಿ ಜಸ್ಮೀತ್ ಸಿಂಗ್ ತಮ್ಮ ಪಟಾಲಂ ಕಟ್ಟಿಕೊಂಡು ಚಂಡೀಗಢಕ್ಕೆ ಹೊರಟಿದ್ದರು. ಮರುದಿನ ಮುಂಜಾನೆ ಎಲ್ಲರೂ ಪರ್ಮೀಶ್ ರನ್ನು ಭೇಟಿಯಾಗಿ ಬೆನ್ನು ತಟ್ಟಿಸಿಕೊಂಡರು.

ಮುಂದೆ ಪರ್ಮೀಶ್ ತಮ್ಮ ವೀಡಿಯೋ ಒಂದರಲ್ಲಿ ಭಾಂಗ್ರಾ ಅರೀನಾ ತಂಡದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿ ಪ್ರೋತ್ಸಾಹವನ್ನೂ ಕೊಟ್ಟರು. ‘ನಮಗೆ ನಿಜವಾದ ಕಿಕ್ ಸ್ಟಾರ್ಟ್ ಕೊಟ್ಟಿದ್ದೇ ಅದು’, ಎಂದು ತಮ್ಮ ನೆನಪುಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಾ ಜಸ್ಮೀತ್ ಕಳೆದುಹೋಗಿದ್ದು ಹೀಗೆ. ಈ ಘಟನೆಯ ತರುವಾಯ ತರಗತಿಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ತಂಡದ ಭಾಂಗ್ರಾ ಕುಣಿತವನ್ನು ನೋಡಲು ಭರ್ಜರಿ ಜನಜಂಗುಳಿಯು ಸೇರುತ್ತಿತ್ತಂತೆ.

ಹಾಗೆ ನೋಡಿದರೆ ೨೦೧೭ ರಲ್ಲಿ ಆಶಿಶ್ ಸಿಂಗ್, ಗುರುಸಾಹಿಬ್ ಸಿಂಗ್, ಜಸ್ಮೀತ್ ಸಿಂಗ್ ಭಮ್ರಾ, ಪರ್ಮಿಂದರ್ ಸಿಂಗ್, ರವೀಂದರ್ ಸಿಂಗ್ ಮತ್ತು ಪ್ರಿಯಾಂಕಾ ಅರೋರಾ ಎಂಬ ಆರು ಮಂದಿಯ ಯುವತಂಡವು ‘ಭಾಂಗ್ರಾ ಅರೀನಾ’ ಎಂಬ ಭಾಂಗ್ರಾ ಗುಂಪನ್ನು ಕಟ್ಟಿಕೊಂಡಿದ್ದೇ ವಿಶೇಷ. ಏಕೆಂದರೆ ಇವರ್ಯಾರೂ ವೃತ್ತಿಪರ ನೃತ್ಯಪಟುಗಳಲ್ಲ. ಬದಲಾಗಿ ಹವ್ಯಾಸಿ ಕಲಾವಿದರು. ಎಲ್ಲರ ಹಿನ್ನೆಲೆಯೂ ಬೇರೆ. ಹೆಚ್ಚಿನವರು ಎಂಜಿನಿಯರಿಂಗ್, ಎಮ್.ಬಿ.ಎ ಇತ್ಯಾದಿ ಪದವಿಗಳನ್ನು ಪಡೆದು ವಿವಿಧ ಸಂಸ್ಥೆಗಳಲ್ಲಿ ಉದ್ಯೋಗಿಗಳಾಗಿ ಸೇವೆ ಸಲ್ಲಿಸುತ್ತಿರುವವರು. ಎನ್.ಜಿ.ಒ, ಉದ್ಯಮಗಳಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳು.

ಹೀಗೆ ವಿವಿಧ ಹಿನ್ನೆಲೆಯುಳ್ಳ ಇವರೆಲ್ಲರನ್ನೂ ಒಡಹುಟ್ಟಿದವರಂತೆ ಬೆಸೆಯುತ್ತಿರುವುದು ಮಾತ್ರ ಭಾಂಗ್ರಾ ಕುಣಿತದ ಬಗ್ಗೆ ಇವರೆಲ್ಲರಿಗಿರುವ ಅಗಾಧ ಪ್ರೀತಿ. ಪಂಜಾಬಿನ ಶ್ರೀಮಂತ ನಾಟ್ಯಸಂಸ್ಕೃತಿಯನ್ನು, ಜನಪದವನ್ನು ಹೊಸ ಪೀಳಿಗೆಗೂ ತಲುಪಿಸಬೇಕು ಎಂಬ ಬಗ್ಗೆ ಇವರಿಗಿರುವ ಅದಮ್ಯ ಉತ್ಸಾಹ. ನಾನು ಮೊಟ್ಟಮೊದಲ ಬಾರಿ ಅರೀನಾ ತಂಡದೊಂದಿಗೆ ಮುಖಾಮುಖಿಯಾಗಿದ್ದು ೨೦೧೯ ರಲ್ಲಿ. ಭರ್ತಿ ಎರಡು ವರ್ಷಗಳ ನಂತರ ಸುಮ್ಮನೆ ಜಸ್ಮೀತ್ ಸಿಂಗ್ ರವರಿಗೆ ಕರೆ ಮಾಡಿ ‘ಕೀ ಹಾಲ್ ಹೈ… ಮಾತಾಡಬೇಕಿತ್ತಲ್ವಾ ಪಾಜೀ’ ಎಂದಾಗ ತಕ್ಷಣ ಸ್ಪಂದಿಸಿದ್ದರು ಜಸ್ಮೀತ್. ಮರುದಿನವೇ ಝೂಮ್ ನಲ್ಲಿ ನಮ್ಮ ಪಂಚಾಯಿತಿ ಸೇರಿತ್ತು.

ಹೀಗೆ ಏಳು ಮಂದಿ ಸೇರಿದ್ದ ನಮ್ಮ ವರ್ಚುವಲ್ ಪಂಚಾಯ್ತಿ ಕಟ್ಟೆಯ ಮೀಟಿಂಗಿನಲ್ಲಿ ನನ್ನನ್ನೂ ಸೇರಿದಂತೆ ಐವರು ಭಾರತದಲ್ಲಿದ್ದೆವು. ಒಬ್ಬರು ಆಸ್ಟ್ರೇಲಿಯಾದಿಂದ ಮಾತನಾಡುತ್ತಿದ್ದರೆ, ಮತ್ತೊಬ್ಬರು ಕೆನಡಾದಲ್ಲಿ ಕೂತಿದ್ದರು. ಭಾಂಗ್ರಾ ಕುಣಿತದ ಬಗ್ಗೆ ನಿಮಗಿರುವ ಪ್ರೀತಿಯು ಇಲ್ಲಿಯ ಸಂಪೂರ್ಣ ಹಾಜರಾತಿಯಲ್ಲೇ ಕಾಣುತ್ತಿದೆಯಲ್ವಾ ಎಂದು ನಾನು ಎಲ್ಲರ ಕಾಲೆಳೆದಿದ್ದೆ. ‘ಎನೀಥಿಂಗ್ ಫಾರ್ ಭಾಂಗ್ರಾ’ ಎಂದು ಲ್ಯಾಪ್ಟಾಪ್ ಪರದೆಯಲ್ಲಿ ಕಾಣುತ್ತಿದ್ದ ಪುಟ್ಟ ಕಿಟಕಿಯೊಂದರಿಂದ ಜೈಕಾರ ಹಾಕಿದರು ಪ್ರಿಯಾಂಕಾ ಅರೋರಾ. ಭಾಂಗ್ರಾ ಅರೀನಾ ತಂಡದ ಹುಮ್ಮಸ್ಸು ಅಂಥದ್ದು.

ಇವೆಲ್ಲದಕ್ಕೊಂದು ಚಿಕ್ಕ ಹಿನ್ನೆಲೆಯೂ ಇದೆ. ಸಾಹಿತ್ಯ-ಸಂಗೀತ, ಕಲೆ-ಸಂಸ್ಕೃತಿ ಸಂಬಂಧಿ ಚಟುವಟಿಕೆಗಳಲ್ಲಿ ಸದಾ ಸಕ್ರಿಯವಾಗಿರುವ ಸಿಟಿ ಬುಕ್ ಲೀರ‍್ಸ್ ತಂಡದ ಕಾರ್ಯಕ್ರಮವೊಂದರಲ್ಲಿ ನಾನೊಮ್ಮೆ ಭಾಗವಹಿಸಿದ್ದೆ. ಅದ್ದೂರಿ ಎನಿಸುವ ಹಾಲ್ ಒಂದರಲ್ಲಿ, ಸೀಮಿತ ಸಂಖ್ಯೆಯ ಸಭಿಕರನ್ನು ಹೊಂದಿದ್ದ ಚಿಕ್ಕ, ಚೊಕ್ಕದಾದ ಕಾರ್ಯಕ್ರಮ.

ಗುರುಗ್ರಾಮದ ಸೆಕ್ಟರ್-೫೪ ರಲ್ಲಿ, ಲಕ್ಷ್ಯರಿ ಅಪಾರ್ಟ್ಮೆಂಟ್ ಗಳ ನಿರ್ಮಾಣದಲ್ಲಿ ಹೆಸರು ಮಾಡಿರುವ ‘ದ ಕ್ರೆಸ್ಟ್’ ಸಂಸ್ಥೆಯು ಈ ಕಾರ್ಯಕ್ರಮವನ್ನು ಪ್ರಾಯೋಜಿಸಿತ್ತು. ಮುಖ್ಯ ಅತಿಥಿಯಾಗಿ ಬಂದಿದ್ದ ಲೇಖಕ, ಉತ್ಸಾಹಿ ಪ್ರವಾಸಿಗ, ಐ.ಎ.ಎಸ್ ಅಧಿಕಾರಿ ಪಾರ್ಥಸಾರಥಿ ಸೇನ್ ಶರ್ಮಾ ವೇದಿಕೆಯಲ್ಲಿ ತಮ್ಮ ಬರವಣಿಗೆಯ ಬಗ್ಗೆ ಹಾಯಾಗಿ ಮಾತನಾಡುತ್ತಿದ್ದರು. ನಾನು ಕಂಡAತೆ ಸೇನ್ ಶರ್ಮಾ ವೇದಿಕೆಯಾಚೆಗೂ ಹಸನ್ಮುಖಿ ಮತ್ತು ಸ್ನೇಹಮಯಿ ವ್ಯಕ್ತಿ.

ಇನ್ನು ಅತಿಥಿಗಳಲ್ಲೊಬ್ಬರಾಗಿ ಬಂದಿದ್ದ ಮತ್ತೋರ್ವ ಪ್ರತಿಭಾವಂತನೆಂದರೆ ನಮನ್ ಗಂಭೀರ್ ಎಂಬ ಪುಟ್ಟ ಹುಡುಗ. ಹದಿನಾಲ್ಕರ ವಯಸ್ಸಿನ ನಮನ್ ಗಂಭೀರ್ ಅಂದು ತಾನು ಓದಿದ್ದ ‘ದ ಟೆಸ್ಟ್ ಆಫ್ ಮೈ ಲೈಫ್: ಫ್ರಂ ಕ್ರಿಕೆಟ್ ಟು ಕ್ಯಾನ್ಸರ್ ಆಂಡ್ ಬ್ಯಾಕ್ʼ (ಕ್ರಿಕೆಟಿಗ ಯುವರಾಜ್ ಸಿಂಗ್ ಆತ್ಮಕಥೆ) ಕೃತಿಯು ತನ್ನನ್ನು ಪ್ರಭಾವಿಸಿದ್ದ ಬಗ್ಗೆ ಸುಮಾರು ಇಪ್ಪತ್ತು ನಿಮಿಷಗಳ ಕಾಲ ಅದ್ಭುತವಾಗಿ ಮಾತನಾಡಿದ್ದ. ಸಾಲದ್ದೆಂಬಂತೆ ಭಾಷಣದ ತರುವಾಯ ಡ್ರಮ್ಮರ್ ಅವತಾರದಲ್ಲಿ ಆತನ ವಿಶೇಷ ಪ್ರಸ್ತುತಿಯೂ ಇತ್ತು. ಅಂದು ಖ್ಯಾತ ಡ್ರಮ್ಮರ್ ಶಿವಮಣಿಯ ರೇಂಜಿನಲ್ಲಿ ಹೈಸ್ಕೂಲು ಹುಡುಗ ನಮನ್ ಗಂಭೀರ್ ಡ್ರಮ್ಮುಗಳನ್ನು ಬಾರಿಸುತ್ತಿದ್ದರೆ ಸಭಿಕರು ಸಂಗೀತಸುಧೆಯಲ್ಲಿ ಮೈಮರೆತಿದ್ದರು.

ಹೀಗೆ ಲೇಖಕ ಐ.ಎ.ಎಸ್ ಅಧಿಕಾರಿಯೊಂದಿಗೆ ಪುಸ್ತಕ ಹರಟೆ, ಕೆಲ ಸಿ.ಇ.ಒ ಗಳ ಟೆಡ್ ಟಾಕ್ ಮಾದರಿಯ ಉಪನ್ಯಾಸ, ನಮನ್ ಎಂಬ ಜೂನಿಯರ್ ಜೀನಿಯಸ್ಸಿನ ಪ್ರಸ್ತುತಿ… ಇತ್ಯಾದಿ ಗಂಭೀರ ಕಾರ್ಯಕ್ರಮಗಳ ಭರಾಟೆಯಲ್ಲಿ, ಅಂದು ಶಿಸ್ತಿನಿಂದ ಕೂತಿದ್ದ ಸಭಿಕರನ್ನು ಕೊನೆಗೂ ಮೋಜಿನ ಮೂಡಿಗೆ ಕರೆತಂದಿದ್ದು ‘ಭಾಂಗ್ರಾ ಅರೀನಾ’ ತಂಡ. ಸಭಿಕರಿಂದ ಹೆಚ್ಚೆಂದರೆ ಐದಡಿ ದೂರವಿದ್ದ ಚೌಕದಲ್ಲಿ ಅರೀನಾ ತಂಡವು ಅದೆಷ್ಟು ಹುಮ್ಮಸ್ಸಿನಿಂದ ಭಾಂಗ್ರಾ ಕುಣಿಯುತ್ತಿತ್ತೆಂದರೆ, ಮುಂದಿನ ಒಂದೆರಡು ಸಾಲಿನ ಸಭಿಕರು ತಮ್ಮೊಳಗಿನ ಸಂಕೋಚವನ್ನು ಬಿಸಾಕಿ ಅರೀನಾ ತಂಡದ ಕಲಾವಿದರ ಜೊತೆ ಹೆಜ್ಜೆಹಾಕುತ್ತಿದ್ದರು. ಪಶ್ಚಿಮದ ಶೈಲಿಯಲ್ಲೇ ಅಷ್ಟುಹೊತ್ತು ಠಾಕುಠೀಕಾಗಿದ್ದ ಸಭಿಕರು ನಂತರ ‘ಬಲ್ಲೇ ಬಲ್ಲೇ… ಶಾವಾ ಶಾವಾ…’ ಎಂದು ಹರ್ಷದಿಂದ ಭಾಂಗ್ರಾ ಕುಣಿಯುತ್ತಾ ಅಪ್ಪಟ ದೇಸಿ ಆಗಿದ್ದು ಹೀಗೆ.

ಕಾರ್ಯಕ್ರಮದ ನಂತರ ಆಯೋಜಿಸಲಾಗಿದ್ದ ಭೋಜನಕೂಟದಲ್ಲಿ ಜಸ್ಮೀತ್ ಸಿಂಗ್ ಮತ್ತು ತಂಡದ ಸದಸ್ಯರು ಮಾತಿಗೆ ಸಿಕ್ಕಿದ್ದರು. ಅಂದು ಭಾಂಗ್ರಾ ಅರೀನಾ ತಂಡದ ಜನಪ್ರಿಯತೆಯ ಬಗ್ಗೆ ಅಷ್ಟಾಗಿ ಮಾಹಿತಿಯಿರದಿದ್ದ ನನ್ನಂತಹ ಕೆಲವರಿಗೆ ಅದೊಂದು ‘ಆಫ್ ದ ರೆಕಾರ್ಡ್’ ಮಾತುಕತೆಯ ಸಮಯ. ಹೀಗೆ ವಿಸಿಟಿಂಗ್ ಕಾರ್ಡುಗಳ ವಿನಿಮಯದ ನಂತರ, ನಿತ್ಯದ ಜಂಜಾಟಗಳಿಂದಾಗಿ ಒಂದು ರೀತಿಯಲ್ಲಿ ನೇಪಥ್ಯಕ್ಕೆ ಸೇರಿದ್ದ ನಾವೆಲ್ಲರೂ ಮತ್ತೊಮ್ಮೆ ಒಟ್ಟಾಗಿದ್ದು ಬರೋಬ್ಬರಿ ಎರಡು ವರ್ಷಗಳ ನಂತರವೇ.

‘ದಿಲ್ಲಿಗಿದು ಕೋವಿಡ್ ಕಾಲ. ಹೀಗಿರುವಾಗ ಭಾಂಗ್ರಾ ಕತೆಯೇನು?’, ಎಂದು ಜಸ್ಮೀತ್ ಬಳಿ ಕೇಳಿದ್ದೆ. ಭಾಂಗ್ರಾ ನಮ್ಮ ಬದುಕೇ ಆಗಿರುವಾಗ ಅದು ನಿಲ್ಲುವುದುಂಟೇ ಎಂದಿದ್ದರು ಜಸ್ಮೀತ್. ಈ ಎರಡು ವರ್ಷಗಳಲ್ಲಿ ಯಮುನೆಯಲ್ಲಿ ಅದೆಷ್ಟು ನೀರು ಹರಿದುಹೋಯಿತೋ ಏನೋ. ಆದರೆ ಅಚಲವಾಗಿ ಉಳಿದಿದ್ದು ಮಾತ್ರ ಇವರ ಅಪ್ಪಟ ಭಾಂಗ್ರಾ ಪ್ರೀತಿ.

ಭಾಂಗ್ರಾಕ್ಕಾಗಿ ಎಂಥದ್ದೂ ಸೈ ಎಂಬ ಮಿಸ್ ಅರೋರಾರ ಉದ್ಗಾರವು ತಮಾಷೆಯೇನಲ್ಲ ಎಂಬುದನ್ನು ಪ್ರಮಾಣೀಕರಿಸಿಲು ಇತ್ತ ಮತ್ತಷ್ಟು ಕತೆಗಳು ಸಾಲುಗಟ್ಟಿ ನಿಂತಿದ್ದವು.

| ಮುಂದಿನ ಸಂಚಿಕೆಯಲ್ಲಿ |

‍ಲೇಖಕರು Avadhi

May 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: