ಭವ್ಯ ಟಿ ಎಸ್
ಗದ್ದುಗೆಯ ಸುಖವನೊದ್ದು ಹೋದೆ ನೀ ಅಂದು
ಹೊದ್ದು ಮಲಗಿದ್ದ ಅಜ್ಞಾನದಂಧಕಾರವ ಸೀಳಲೆಂದು
ಗೆದ್ದು ಬಂದೆ ಜ್ಞಾನದ ದೀಪ್ತಿಯ ಜಗದ ಮನೆಗೆ
ಬಿದ್ದು ಹೋದ ಶಾಂತಿ ಸಮತೆಗಳನುದ್ಧರಿಸಲು
ಬುದ್ಧನಾದೆ ಕರುಣೆ ಮಂತ್ರವ ಪಸರಿಸಲು
ಮದ್ದಿರದ ಜಾಡ್ಯಗಳು ಮನಗಳ ಕದಡಿರುವಾಗ
ಪ್ರಬುದ್ಧರಾಗಬೇಕಿದೆ ನಾವಿಂದು ಅವನೆಡೆಗೆ ಸಾಗುತ
ಸದ್ದಿರದೆ ಹಬ್ಬುತಿರುವ ಹಿಂಸೆ ದ್ವೇಷಗಳ ಕಿಚ್ಚನು
ಶಮನಗೊಳಿಸಲು…!!

ಅಂಗುಲೀಮಾಲನ ಕ್ರೌರ್ಯವೇ ಬೆಚ್ಚಿತು ನಿನ್ನ ಕಾರುಣ್ಯಕೆ
ನುಂಗಲಾರದ ಸಾವು ಸತ್ಯವಾಗಿ ಕಂಡಿತು ಕಿಸಾಗೋತಮಿಗೆ
ಸಂಗದಲ್ಲೂ ನಿಸ್ಸಂಗಿಯಾಗುವ ಸತ್ತ್ವಕೆ ನೀ ಬದ್ಧನಾದೆ
ಹಂಗಿನ ಅರಮನೆ ತೊರೆದು ಮನೆಮನಗಳ
ಜ್ಯೋತಿ ತಾನಾದೆ
ತಂಗಿದೆಡೆಗಳಲ್ಲಿ ಶಿಷ್ಯರ ಮಹಾಪೂರ ಪಡೆದರು ಸದ್ಗುರುವನ್ನು
ಅಷ್ಟಾಂಗಮಾರ್ಗದ ಬೆಳಕಿನಲಿ ಮಿಂದರು ಪರಿಪೂರ್ಣತೆಯ ಸಾರವನ್ನು…!!






0 Comments