ಭವ್ಯ ಕಬ್ಬಳಿ
ಅರ್ಧ ಕಣ್ಣು ತೆರೆದು
ಹಾದಿ ಪೂರ ಕುರುಹು
ಮೂಡಿಸುವ ನಮಗೆ,
ಕಾಣುವ ಬಣ್ಣ
ಕಂಡುಕೊಳ್ಳುವ ಬೆಳಕು
ಎದೆಗೆ ಅಂಟಿಕೊಂಡ ಭಾವ
ದಕ್ಕುವ ಎಲ್ಲವೂ ಅಪೂರ್ಣ!

ಸುದ್ದಿ ಮಾಡುತ್ತಾ ಎಣಿಕೆಗಳಲ್ಲಿಯೇ
ಇದ್ದುಬಿಡುವುದನ್ನು ತುಸು ಹೆಚ್ಚೇ
ಸುಲಭವಾಗಿಸಿಕೊಳ್ಳುವ ನಾವು,
ಸುಮ್ಮನೇ ಸಲೀಸಾಗಿ ಜೀವಿಸುವುದು
ಅಂದುಕೊಂಡಷ್ಟು ಸುಲಭವೂ ಅಲ್ಲ
ಜೇಡದ ಬಲೆಯಷ್ಟು ಕಷ್ಟವೂ ಅಲ್ಲ,
ಬಲೆಯಾಗುವ ಮುನ್ನ-
ಬದುಕನ್ನು ಜೀವಿಸುತ್ತಾ
ಬದುಕಾಗಿಸುವ ಮುನ್ನ,
ಎಳೆ ಎಳೆಯನ್ನು ಗಮನಿಸಬೇಕಷ್ಟೆ
ಚಿಟ್ಟೆಯ ರೆಕ್ಕೆಗಳನ್ನು
ಸದ್ದಿಲ್ಲದೇ ಇಣುಕಿ ನೋಡಿ,
ಎಷ್ಟೊಂದು ಬಣ್ಣ!
ಹಚ್ಚಿಕೊಳ್ಳುವವರೆಗು
ಅಳಿಸಿ ಹೋಗುವವರೆಗು

ದೀಪದ ಸುತ್ತ ಕಣ್ರೆಪ್ಪೆ ಅರಳಿಸಿ
ಸುಮ್ಮನೇ ಕುಳಿತು ನೋಡಿ,
ಎಷ್ಟೊಂದು ಬೆಳಕು!
ಕೆಲವು ಹುಡುಕಿಕೊಂಡದ್ದು
ಕೆಲವು ಕತ್ತಲೆಯೇ ಕೊಂದದ್ದು
ಸುತ್ತಲಿನವರನ್ನು
ಮೌನದಲ್ಲಿಯೇ ಮಾತನಾಡಿಸಿ ನೋಡಿ,
ಎಷ್ಟೊಂದು ಭಾವ!
ಕೆಲವು ಸಾಲುಸಾಲಾಗಿ ಹರಿದದ್ದು
ಮೇಲಿನ ಸಾಲುಗಳಂತೆ,
ಕೆಲವು ಸಾಲು ಸಾಲದೇ ಉಳಿದದ್ದು
ನನ್ನ – ನಿಮ್ಮೊಳಗಿನಂತೆ…






ಚಂದದ ಕವಿತೆ