ಭವ್ಯ ಕಬ್ಬಳಿ
ಮುಳ್ಳು ತಾಕಿಸಿಕೊಂಡ ಎದೆಯೊಳಗೆ
ಕವಿತೆ ಹುಟ್ಟುವುದು ಬಲು ಸಲೀಸು
ಮೋಟಾರು ಬೈಕಿನಲ್ಲಿ
ಬೆನ್ನ ಹಿಂದೆ ಕುಳಿತ ಮಗುವನ್ನು
ಆಗಾಗ ಹಿಂದೆ ತಿರುಗಿ
ನೋಡುವ ತಂದೆ
ಶಾಲೆಗೆ ಬಿಟ್ಟ ಮಗುವನ್ನು
ಆವರಣದಲ್ಲಿ ಮರೆಯಾಗುವವರೆಗು
ದೃಷ್ಟಿನೆಡುವ ತಾಯಿ
ಅಂತೆಯೇ ಎಷ್ಟೊಂದು ಮಹಾ ಕಾವ್ಯಗಳ ಪರಿಚಯ

ಮೋಡಕಟ್ಟಿದ ದಿನ
ಆಗಸಕ್ಕೆ ಮೊಗತೋರಿ ನಿಂತ ನಾವು
ಬಿಸಿಲ ಮರೆತದ್ದು ದಡ್ಡತನ
ಬಿಸಿಲ ಕಾವಲಿಯಲ್ಲಿ
ನೆತ್ತಿಕಾವಿಗೆ ಸೋತು
ನಾಳೆ ಕಟ್ಟುವ ಮೋಡವ
ಮರೆತದ್ದೂ ದಡ್ಡತನ
ಎಷ್ಟೊಂದು ಕಂಡ ಕಾವ್ಯಗಳು
ಕಂಡೂ ಕಾಣದ ಕಾವ್ಯಗಳು
ಎಷ್ಟೆಲ್ಲಾ ಪಳಗಿಸುವ ಬದುಕು
ಮುಳ್ಳು ತಾಕಿಸಿಕೊಂಡ ಎದೆಯೊಳಗೆ
ಕವಿತೆ ಹುಟ್ಟುವುದು ಬಲು ಸಲೀಸು






0 Comments