– ಡಾ ಎಸ್ ಬಿ ಜೋಗುರ
ಭಾರತೀಯ ಸಮಾಜದಲ್ಲಿ ಕಾಲಾನುಕ್ರಮವಾಗಿ ಜರುಗಿದ ಪರಿವರ್ತನೆಗೆ ಸಿಲುಕಿಯೂ ಜಾತಿಪದ್ಧತಿ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡಿದೆ. ಅದಕ್ಕೆ ಕಾರಣ ಈ ದೇಶದ ಸಾಂಸ್ಕೃತಿಕ ಇತಿಹಾಸ ಇಲ್ಲಿ ಅನೇಕರು ಆಕ್ರಮಣ ಮಾಡುತ್ತಲೇ ತಮ್ಮ ಸಂಸ್ಕೃತಿಯ ಪ್ರಸರಣ ಮಾಡುತ್ತ ಬಂದಿರುವ ಪರಿಣಾಮ ಇಲ್ಲಿರುವ ಸಾಂಸ್ಕೃತಿಕ ಹರವು ಇನ್ನಷ್ಟು ವಿಸ್ತೃತ ಮತ್ತು ಸಂಕೀರ್ಣವಾಗುತ್ತ ನಡೆಯಿತು. ವಿಶ್ವದ ಯಾವ ಭಾಗದಲ್ಲಿಯೂ ಈ ಬಗೆಯ ದಟ್ಟನೆಯ ಸಾಂಸ್ಕೃತಿಕ ಬಹುತ್ವ ಕಾಣಲು ಸಾಧ್ಯವೇ ಇಲ್ಲ. ಆರ್ಯರ ಆಗಮನ, ಭಾರತೀಯ ಮೂಲದ ಪ್ರೊಟೆಸ್ಟಂಟ್ ಧರ್ಮಗಳೆಂದೇ ಗುರುತಿಸಿಕೊಂಡ ಬೌದ್ಧ ಮತ್ತು ಜೈನ ಧರ್ಮಗಳ ಉಗಮ, ಮುಸ್ಲಿಮರ ಆಕ್ರಮಣ ಮತ್ತು ಆಳ್ವಿಕೆ, ವಸಾಹತಿಶಾಹಿ ಆಳ್ವಿಕೆ ನಂತರ ಅದನ್ನು ವಿರೋಧಿಸಿ ಹುಟ್ಟುಕೊಂಡ ಚಳುವಳಿ ಇವಿಷ್ಟು ಬಹು ಮುಖ್ಯವಾಗಿ ಭಾರತೀಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕನ್ನು ರೂಪಿಸಿಕೊಂಡು ಬಂದಿವೆ. ಇವುಗಳಲ್ಲಿ ಯಾವುದು ಮುಖ್ಯ ಮತ್ತು ಅಮುಖ್ಯ ಎನ್ನುವದನ್ನು ನೊಡುವ ಬದಲಾಗಿ ನಮ್ಮ ಸಮಾಜದ ಮೇಲೆ ಉಂಟು ಮಾಡಿರುವ ಒಟ್ಟು ಪ್ರಭಾವವನ್ನು ಕುರಿತು ಆಲೋಚಿಸಬೇಕಿದೆ. ಇವುಗಳ ಜೊತೆಯಲ್ಲಿ ನಮ್ಮ ಸಾಮಾಜಿಕ ವ್ಯವಸ್ಥೆಯು ಸಾರ್ವತ್ರಿಕವಾಗಿ ಅಸ್ತಿತ್ವದಲ್ಲಿರುವ ವಿವಿಧ ಸ್ತರಗಳನ್ನು ಕೂಡಾ ಒಳಗೊಂಡಿರುವದಿದೆ.
ಇನ್ನು ಕೇವಲ ನಮ್ಮಲ್ಲಿ ಮಾತ್ರ ಕಂಡು ಬರಬಹುದಾದ ಸ್ತರವಿನ್ಯಾಸದ ರೂಪವಾದ ಜಾತಿಯನ್ನು ಕೂಡಾ ಇದು ಒಳಗೊಂಡಿರುವದಿದೆ. ಅದರ ಜೊತೆಗೆ ನಮ್ಮಲ್ಲಿ ಸುಮಾರು 1500 ವಿವಿಧ ಭಾಷೆಗಳನ್ನಾಡುವ ಸಮುದಾಯಗಳಿವೆ, 600 ಆದಿವಾಸಿ ಸಮುದಾಯಗಳಿವೆ. ಅನೇಕ ಧರ್ಮಗಳಿವೆ, ಜನಾಂಗಳಿವೆ, ಆಚರಣೆ ಹಬ್ಬ ಹರಿದಿನಗಳಿವೆ. ಇಷ್ಟೆಲ್ಲಾ ಬೃಹತ್ ಪ್ರಮಾಣದ ಸಾಮಾಜಿಕ ಮತ್ತು ಸಾಂಸ್ಕೃತಿಕ ವೈವಿಧ್ಯ ಇಲ್ಲಿ ಮಾತ್ರ ಸಾಧ್ಯ ಎನ್ನುವದನ್ನು ಮರೆಯುವಂತಿಲ್ಲ. ಭಾರತೀಯ ಸಂವಿಧಾನ ಪೂರ್ವಪೀಠಿಕೆಯನ್ನೊಳಗೊಂಡು ಸಮಾನತೆಯನ್ನು ಅತಿ ಮುಖ್ಯವಾಗಿ ಪ್ರತಿಪಾದಿಸುತ್ತದೆ ಪರಿಣಾಮವಾಗಿ ಎಲ್ಲ ರಂಗಗಳಲ್ಲಿ ಇಂದು ದಲಿತರು, ಹಿಂದುಳಿದವರು ತಮ್ಮ ಅನನ್ಯತೆಯನ್ನು ತೋರಲು ಅವಕಾಶ ಸಿಕ್ಕಂತಾಗಿದೆ. ರಾಜಕೀಯ ಮತ್ತು ಆರ್ಥಿಕ ಸ್ವಾಯತ್ತತೆಯ ವಿಷಯವಾಗಿ ಇಂದು ದಲಿತರಿಗೂ ಹಕ್ಕುಗಳಿವೆ. ರಾಜಕೀಯ ಅಧಿಕಾರವನ್ನು ಅವರೂ ಅನುಭವಿಸುವಂತಾಗಿದೆ. ಜಾಗತೀಕರಣದ ಸಂದರ್ಭದಲ್ಲಿ ಪ್ರತಿಯೊಬ್ಬರ ಉತ್ಪಾದನೆಯೂ ನಿರ್ಣಾಯಕ ಎನ್ನುವ ಸಂದರ್ಭದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಒಂದು ಪ್ರಮುಖ ಭಾಗವಾಗಿರುವ ದಲಿತರ ಉತ್ಪಾದನೆಯನ್ನು ಕೂಡಾ ನಿರ್ಣಾಯಕ ಎಂದು ಪರಿಗಣಿಸುವಂತಾಗಿದೆ. ಹೀಗಿರುವಾಗಲೂ ಜಾತಿಯ ಹಿನ್ನೆಲೆಯಲ್ಲಿ ತಾರತಮ್ಯಗಳನ್ನು ಅನುಸರಿಸುವದು ಮಾತ್ರ ನಿಂತಿಲ್ಲ. ನಾವು ಆಧುನೀಕರಣದ ಸಂದರ್ಭದಲ್ಲಿಯೂ ಜಾತಿಯ ಆದೇಶಕ್ಕನುಗುಣವಾಗಿ ಬದುಕುವ ಕ್ರಮ ಕಡಿಮೆಯಾಗಿಲ್ಲ. ಮೆಲ್ನೋಟಕ್ಕೆ ವ್ಯವಹಾರಿಕವಾಗಿ ಜಾತಿಯ ಪ್ರಜ್ಞೆ ಹಿಂದಿನಷ್ಟು ಇಲ್ಲ ಎನ್ನುವಂತೆ ಭಾಸವಾದರೂ ಅದು ಕೇವಲ ವ್ಯಾಪಾರ ಮತ್ತು ವಹಿವಾಟಿನ ಕಾರಣಕ್ಕಾಗಿ ಅನಿವಾರ್ಯವಾಗಿ ಪ್ರಚಲಿತದಲ್ಲಿರುವ ಆರ್ಥಿಕ ಸಂಪರ್ಕವೇ ಹೊರತು ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಪರ್ಕವಲ್ಲ.

ಆ ಆರ್ಥಿಕ ಸಂಪರ್ಕದಲ್ಲಿಯೂ ಒಂದು ಸೂಕ್ಸ್ಮವಾದ ಅಂತರ ಇದ್ದೇ ಇದೆ. ಕೆಲ ದಿನಗಳ ಹಿಂದೆ ನಾನು ವಸ್ತು ಒಂದರ ಖರೀದಿಗಾಗಿ ಅಂಗಡಿಗೆ ತೆರಳಿದ್ದೆ. ಅಲ್ಲಿ ಆ ಅಂಗಡಿಯ ಮಾಲಿಕನೊಂದಿಗೆ ಮಾತನಾಡುತ್ತಾ ಅದೇ ರಸ್ತೆಯಲ್ಲಿರುವ ಇನ್ನೊಬ್ಬ ವರ್ತಕನನ್ನು ಹೆಸರಿಸಿದೆ. ಆಗ ಅವನು ನೇರವಾಗಿ ಅವನು ದಲಿತರವನು ಮೊದಲೆಲ್ಲಾ ಇಲ್ಲಿ ಇದ್ದದ್ದು ನಮದೇ ಎರಡು ಮೂರು ಅಂಗಡಿಗಳು ಎಂದು ವ್ಯಂಗ್ಯವಾಗಿ ನುಡಿದಿದ್ದ. ಇದರರ್ಥ ಪಾರಂಪರಿಕ ಜಾತಿಯಾಧಾರಿತ ಉದ್ಯೋಗವನ್ನೇ ದಲಿತರು ಮಾಡಬೇಕು ಎನ್ನುವ ಇವರು ಮೇಲಿನ ಜಾತಿಗಳು ಚಪ್ಪಲಿ ಅಂಗಡಿಗಳ ಶೋ ರೂಂ ಮಾಡಿರುವದನ್ನು, ಬಾರ್ ಮತ್ತು ರೆಸ್ಟಾರೆಂಟ್ ಮಾಡಿರುವದನ್ನು ಪ್ರಶ್ನಿಸುವದಿಲ್ಲ. ದಲಿತರು ಆರ್ಥಿಕ ಏಳ್ಗೆಯಾಗುವುದು, ಸಾಮಾಜಿಕವಾಗಿ ಮೇಲೆ ಬರುವುದು ತಪ್ಪು ಎನ್ನುವಂತೆ ಮಾತನಾಡುವ ಮೇಲಿನ ಜಾತಿಗಳು ಅವರವರ ಕರ್ಮ ಎನ್ನುವ ತತ್ವದ ಹಿನ್ನೆಲೆಯಲ್ಲಿ ಅವರು ಬದುಕುವುದು ಉತ್ತಮ ಎನ್ನುವ ಸಾಂಪ್ರದಾಯಿಕ ನಿಲುವನ್ನೇ ಬೆಂಬಲಿಸುತ್ತಾರೆ.
ಜಾತಿಯ ಉಳಿವು ಮತ್ತು ಪಾರಂಪರಿಕ ಜಾತಿಯಾಧಾರಿತ ಉದ್ಯೋಗಗಳ ಉಳಿವಿಗೆ ಅತಿ ಮುಖ್ಯ ಕಾರಣ ಯತಾಸ್ಥಿತಿವಾದಿಗಳು ಮತ್ತು ಜಾತಿಪದ್ಧತಿಯನ್ನು ಕಟ್ಟು ನಿಟ್ಟಾಗಿ ಅನುಸರಿಸಿಕೊಂಡು ಹೋಗುವವವರು. ಇವರು 21 ನೇ ಶತಮಾನದಲ್ಲಿಯೂ ಅದೇ ಪಾರಂಪರಿಕ ಜಾತಿಯಾಧಾರಿತ ಉದ್ಯೊಗಗಳನ್ನೇ ಕೆಳಗಿನ ಜಾತಿಗಳು ಮಾಡಬೇಕೆಂದು ಒತ್ತಡ ತರುತ್ತವೆ. ಈಚೆಗೆ ಅಹಮದಾಬಾದನ ಹಳ್ಳಿಯೊಂದರಲ್ಲಿ ಭಂಗಿ ಕೆಲಸ ಮಾಡುತ್ತಿದ್ದ ಕುಟುಂಬ ಒಂದರ ಯುವಕ ತನ್ನ ಪಾರಂಪರಿಕ ಉದ್ಯೊಗವನ್ನು ಬಿಟ್ಟು ರಿಕ್ಷಾ ಓಡಿಸಲು ಆರಂಭಿಸಿದ್ದೇ ಆ ಗ್ರಾಮದ ಮೇಲಿನ ಜಾತಿಗಳು ಅದನ್ನು ವಿರೋಧಿಸಿ ಅವನ ಮೇಲೆ ಹಲ್ಲೆ ಮಾಡಿದವು. ಇಂಥಾ ಅದೆಷ್ಟೋ ಘಟನೆಗಳು ನಮ್ಮ ಗ್ರಾಮೀಣ ಭಾಗಗಳಲ್ಲಿ ಈಗಲೂ ಜರುಗುತ್ತವೆ ಆದರೆ ಸುದ್ದಿಯಾಗುವದಿಲ್ಲ. ಜಾತಿ ಒಂದು ಪ್ರಮುಖ ಸಂಸ್ಥೆಯಾಗಿ ಗುರುತಿಸಿಕೊಂಡದ್ದು ಮಾತ್ರವಲ್ಲದೆ ಇಂದಿಗೂ ಅದು ನಮ್ಮ ಒಳಹೊರಗನ್ನು ಆಳುವ ಕೆಲಸ ಮಾಡುತ್ತದೆ. ಸಂವಿಧಾನದ ಕಲಮುಗಳು, ಶಿಕ್ಷಣ, ಆಧುನೀಕರಣ, ಜಾಗತೀಕರಣ ಇಂಥಾ ಹತ್ತಾರು ಕರಣಗಳ ವಿಕಿರಣವಾದರೂ ಈ ಸಾಂಪ್ರದಾಯಿಕ ಜಾತಿ ಪದ್ಧತಿ ಮಾತ್ರ ತನ್ನ ಪ್ರಭಾವವನ್ನು ಬಿಟ್ಟುಕೊಟ್ಟಿಲ್ಲ.
ಭವಿಷ್ಯದಲ್ಲಿ ಜಾತಿ ಪದ್ಧತಿ ಕಣ್ಮರೆಯಾಗುತ್ತದೆ ಎಂದು ನುಡಿಯುವ ಧೈರ್ಯ ಯಾವುದೇ ಮಾನಶಾಸ್ತ್ರಜ್ಞನಿಗಾಗಲೀ, ಸಮಾಜಶಾಸ್ತ್ರಜ್ಞನಿಗಾಗಲೀ ಇಲ್ಲ. ಇದ್ದದ್ದೆಲ್ಲಾ ಸಾವಿರಾರು ವರ್ಷಗಳ ಕಾಲ ಅದು ನಮ್ಮ ಸಾಮಾಜಿಕ ಜೀವನವನ್ನು ನಿರ್ಧರಿಸಿದ ರೀತಿ ಮಾತ್ರ. ಜಾತಿ ವ್ಯವಸ್ಥೆಯ ನಿರ್ಮೂಲನೆಯಲ್ಲಿ ಅಂತರಜಾತಿಯ ವಿವಾಹ ಮತ್ತು ಸಹಪಂಕ್ತಿ ಭೋಜನಗಳು ಅತ್ಯಂತ ನಿರ್ಣಾಯಕವಾಗಲಿವೆ ಎಂದು ಹೇಳಿದ ಅನೇಕ ಚಿಂತಕರ, ಸಮಾಜಸುಧಾರಣಾವಾದಿಗಳ ಮಾತನ್ನು ಮೀರಿಯೂ ಜಾತಿ ತನ್ನ ಗಾಢ ಪ್ರಭಾವವನ್ನು ಬೀರಿರುವದಿದೆ. ಅಂತರ ಜಾತಿಯಲ್ಲಿ ಮದುವೆಯಾದವರ ಮರ್ಯಾದೆ ಹತ್ಯೆಗಳಿಗೆ ಲೆಕ್ಕವೇ ಇಲ್ಲ. ಅಂದರೆ ಜಾತಿ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಜೀವಕ್ಕಿಂತಲೂ ಮುಖ್ಯವಾಗಿದೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಹುಟ್ಟುಹಾಕಿದ ಸಂಸ್ಥೆಯೊಂದು ಈ ಮಟ್ಟಕ್ಕೆ ಬೆಳೆದದ್ದು ದೊಡ್ದ ವಿಪರ್ಪಾಸವೇ ಹೌದು. ಜಾತಿಯ ಗಲಭೆಗಳು ಹಿಂದೆಂದಿಗಿಂತಲೂ ಈಗ ಹೆಚ್ಚಿವೆ. ಅದಕ್ಕೆ ದಲಿತರ ಉತ್ಕರ್ಷವೂ ಒಂದು ಕಾರಣವಾಗಿರುವಂತೆ, ಸಾಂಪ್ರದಾಯಿಕ ಜಾತಿಯ ಕರಾರುಗಳನ್ನು ಅವರು ಧಿಕ್ಕರಿಸಿರುವದು ಇನ್ನೊಂದು ಪ್ರಮುಖ ಕಾರಣವಾಗಿರುವದಿದೆ.
ಮೇಲಿನ ಜಾತಿಗಳು ಹೇಳಿದಂತೆ ಬದುಕುವ ದಿನಗಳು ಕಣ್ಮರೆಯಾಗಿವೆ ಆದರೂ ಅವರನ್ನು ಪರಿಗಣಿಸುವ ರೀತಿಯಲ್ಲಿ ಮುಕ್ತತೆ ಇಲ್ಲ. ಉತ್ತರ ಕನ್ನಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಆ ಮಹಿಳೆ ದಲಿತ ಜಾತಿಯವಳು ಅವಳು ಅಡುಗೆ ಮಾಡುವದನ್ನು ತಮ್ಮ ಮಕ್ಕಳು ತಿನ್ನುವದಿಲ್ಲ ಎಂದು ಶಾಲೆಗೆ ಕಳುಹಿಸದಿರುವ ಬಗ್ಗೆ ಘಟನೆಯೊಂದು ನಡೆದಿರುವದಿತ್ತು. ಇಂದಿಗೂ ಗ್ರಾಮೀಣ ಪರಿಸರದಲ್ಲಿ ಜಾತಿ ಪದ್ಧತಿ ತನ್ನ ಅದೇ ಹಳೆಯ ರಾಗದಲ್ಲಿ ಊರನ್ನು ಆಳ್ವಿಕೆ ಮಾಡುತ್ತಿದೆ. ಈ ಬರಹವನ್ನು ಮಾಡುವ ಹಿಂದಿನ ದಿನ ಟಿ.ವಿ. ಚಾನೆಲ್ ಒಂದರಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವಂಬರ್ 25 ,26 ಮತ್ತು 27 ರಂದು ನಡೆಯುವ ಮಡೆ ಸ್ನಾನದ ಬಗ್ಗೆ ಒಂದು ಚರ್ಚೆಯಿತ್ತು. ಆ ಚರ್ಚೆಯಲ್ಲಿಯೂ ಎರಡು ಧಾಟಿಗಳು ಸ್ಪಷ್ಟವಾಗಿ ಬಿಂಬಿತವಾಗುತ್ತಿದ್ದವು. ಒಂದು ಈ ಮಡೆಸ್ನಾನ ಒಂದು ಪರಂಪರೆ ಅದು ಸಾವಿರಾರು ವರ್ಷಗಳಿಂದ ಉಳಿದುಕೊಂಡಿದೆ ಎನ್ನುವುದು, ಇನ್ನೊಂದು ಇದು ಸರಿಯಲ್ಲ, ಆ ಮೂಲಕ ಕೆಳ ಸ್ತರಗಳನ್ನು ಮೌಢ್ಯದಲ್ಲಿಟ್ಟು ಶೋಷಣೆ ಮಾಡಲಾಗುತ್ತಿದೆ. ಇದು ಮೆಲ್ನೋಟದಲ್ಲಿ ಅವರು ಸ್ವಯಂ ಪ್ರೇರಣೆಯಿಂದ ಹಾಗೆ ಮಡೆಸ್ನಾನ ಮಾಡುತ್ತಿರುವಂತೆ ಕಂಡು ಬಂದರೂ ಅಲ್ಲಿ ಮೇಲಿನ ಜಾತಿಗಳ ಒತ್ತಡ ಇದೆ ಎನ್ನುವದು ಇನ್ನೊಂದು ವಾದ. ಮಲೆಕುಡಿಯ ಸಮುದಾಯದವರು ಆ ಭಾಗದಲ್ಲಿ ಬರುವ ಕೆಳಸ್ತರದ ಸಮುದಾಯ. ಅವರು ಒತ್ತಾಯದಿಂದಲೋ ಇಲ್ಲಾ ಒತ್ತಡದಿಂದಲೋ ಈ ಮಡೆಸ್ನಾನವನ್ನು ಮಾಡುವದು, ಪರೋಕ್ಷವಾಗಿ ಪರಂಪರೆಯ ಹೆಸರಲ್ಲಿ ಜಾತಿಪದ್ಧತಿಯನ್ನು ಪೊರೆಯುವ ಕೆಲಸವೇ.. ಇಂಥಾ ಅನೇಕ ಬಗೆಯ ಜಾತಿ ಮತ್ತು ಧರ್ಮ ಸಂಬಂಧಿ ವಿಚಾರಗಳು, ಆಚರಣೆಗಳು ನಮ್ಮಲ್ಲಿವೆ. ಜಾತಿಪದ್ಧತಿಯನ್ನು ಬೇಕು ಎನ್ನುವವರು ಅದನ್ನು ಬೇಡ ಎನ್ನುವವರು ಹೆಚ್ಚಿರುವದರಿಂದಲೇ ಅದು ಇಂದಿಗೂ ಉಳಿದಿದೆ ಎನ್ನುವದು ಕಟುಸತ್ಯ.
ಜಾತಿಯಲ್ಲಿ ಸಂಘಟನೆಗಳ ಪ್ರಜ್ಞೆ ಸ್ವಾತಂತ್ರ್ಯಾನಂತರವೇ ಹೆಚ್ಚಾಯಿತು. ಜಾತಿಗೊಂದು ಮಠ, ಮಠಕ್ಕೊಬ್ಬ ಸ್ವಾಮಿ ಎನ್ನವ ವಿಚಾರ ತೀರಾ ಇತ್ತೀಚಿನದು 1954 ರ ಸಂದರ್ಭದಲ್ಲಿ ಡಾ ಜಿ.ಎಸ್. ಘುರ್ರೆಯವರು ಮುಂಬೈಯಲ್ಲಿ ಸುಮಾರು 1700 ಅಧಿಕೃತ ಜಾತಿಯ ಸಂಘಟನೆಗಳನ್ನು ಗುರುತಿಸಿದ್ದರು. ನಗರ ಪ್ರದೇಶಗಳಲ್ಲಿ ಜಾತಿ ಪದ್ಧತಿ ಗ್ರಾಮೀಣ ಭಾಗಗಳಲ್ಲಿಯ ಹಾಗೆ ದೈನಂದಿನ ಬದುಕನ್ನು ನಿಯಂತ್ರಿಸದೇ, ನಿರ್ದೇಶಿಸದೇ ಸಂಘಟನಾತ್ಮಕವಾಗಿ ಲೋಹಿಯಾ ಅವರು ಹೇಳುವಂತೆ ತನ್ನ ತನ್ನ ಜಾತಿಯ ಅನುಯಾಯಿಗಳಿಗೆ ಅದು ಜೀವವಿಮಾನಿಗಮದಂತೆ ಕೆಲಸ ಮಾಡುತ್ತಲೇ ಅದು ಬಲಗೊಳ್ಳುತ್ತಾ ನಡೆಯುತ್ತದೆ. ಇನ್ನು ಹೀಗೆ ಜಾತಿಯ ಸಂಘಟನೆಗಳನ್ನು ರೂಪಿಸಿಕೊಳ್ಳುವುದು ಅತಿ ಮುಖ್ಯವಾಗಿ ಎರಡು ಕಾರಣಗಳಿಗಾಗಿ ಒಂದು ರಾಜಕೀಯ ಕಾರಣಾಗಳಿಗಾಗಿ. ಬಲಪ್ರದರ್ಶನ ಎರಡನೆಯದು. ತನ್ನ ಜಾತಿಯ ಜನತೆಗೆ, ಸಮುದಾಯಕ್ಕೆ ಸಾಮಾಜಿಕ ಸುಬಧ್ರತೆ. ಈ ಕಾರಣಗಳಿಗಾಗಿ ದಲಿತ ಜಾತಿಗಳು ಸಂಘಟನೆ ಮಾದಿಕೊಳ್ಳುವುದು ಸಾಮಾನ್ಯ ಆದರೆ ಮೇಲಿನ ಜಾತಿಗಳಲ್ಲಿಯೂ ಈ ಬಗೆಯ ಜಾತಿಯ ಸಂಘಟಾನೆಗಳು ಶತಮಾನದ ಹಿಂದೆಯೇ ಹುಟ್ಟಿಕೊಂಡಿರುವದಿದೆ. ಇನ್ನು ಈಗ ನಡೆಯಲಿರುವ ಜಾತಿಗಣತಿಯ ಸಂದರ್ಭದಲ್ಲಿ ನಿಚ್ಚಳವಾಗಿ ತನ್ನ ತನ್ನ ಜಾತಿಯನ್ನು ನಮೂದಿಸುವ ಮೂಲಕ ಇನ್ನಷ್ಟು ಜಾತಿಯ ಗಡಸುತನಕ್ಕೆ ಕ್ಯಾಲ್ಸಿಯಂ ಕೊಟ್ಟಂತಾಯಿತು. ಪ್ರತಿಯೊಂದು ಜಾತಿಯು ಸರಕಾರದಿಂದ ಸಿಗಬಹುದಾದ ಸೌಲತ್ತುಗಳ ಬಗ್ಗೆ ಯೋಚಿಸುತ್ತವೆಯೇ ಹೊರತು ದೇಶದ ಹಿತದೃಷ್ಟಿಯಿಂದ ಹೀಗೆ ಜಾತಿಯೊಂದು ಹೋಳು ಹೋಳಾಗುವ ಅಪಾಯದ ಬಗ್ಗೆ ಯೋಚಿಸುವದಿಲ್ಲ. ಭವಿಷ್ಯದಲ್ಲಿ ಈ ಜಾತಿ ಪದ್ಧತಿ ಇನ್ನಷ್ಟು ಬಲಗೊಳ್ಳುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿವೆ.






ಲೇಖನ ತುಂಬಾ ಚನ್ನಾಗಿದೆ. ಪ್ರಗತಿಪರರು, ದಲಿತಪರ ಸಂಘಟನೆ, ದಲಿತ ಸಂಘಟನೆಗಳು ಒಟ್ಟಾಗಿ ಮೂಢನಂಬಿಕೆ ವಿರುದ್ಧ ಹೋರಾಟ ಮಾಡುವುದು ಪ್ರಸ್ತುತ ಅಗತ್ಯವಿದೆ.