
ಕಾವ್ಯಾ ಕಡಮೆ ನಾಗರಕಟ್ಟೆ
ಆ ಕೈ ಮೊದಲು ಕಂಡಿದ್ದು ನೆನಪಿದೆ. ಧಾರವಾಡದಿಂದ ಬೆಂಗಳೂರಿಗೆ ಚಲಿಸುವ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಬಲಗಡೆಗೆ ಅಮ್ಮ ಮತ್ತು ಎಡ ಪಕ್ಕದಲ್ಲಿ ತಂಗಿಯ ಜೊತೆಗೆ ಕುಳಿತಿದ್ದೆ.
ಮೂರೇ ಜನ ಕುಳಿತುಕೊಳ್ಳಬಹುದಾದ ಆ ಸೀಟಿನಲ್ಲಿ ಜಾಗವಿರದೇ ಪಪ್ಪ ನಮ್ಮ ಮುಂದಿನ ಸೀಟಿನಲ್ಲಿ ಕುಳಿತಿದ್ದರು. ಇನ್ನೇನು ಬಸ್ಸು ಬಿಟ್ಟು ಒಂದೆರಡು ಘಂಟೆಗಳಾಗಿರಬೇಕು. ಕಂಡಕ್ಟರ್ ಎಲ್ಲರಿಗೂ ಟಿಕೆಟ್ ಕೊಟ್ಟು ಲೈಟು ಆರಿಸಿದ್ದರು. ಬಸ್ಸು ಧಾರವಾಡ ದಾಟಿ ತಂಪಾದ ಗಾಳಿಯನ್ನು ಕಿಟಕಿ ತೆರೆಯದಿದ್ದರೂ ಒಳಬಿಟ್ಟುಕೊಳ್ಳುತ್ತಿತ್ತು. ಅಮ್ಮ ಮತ್ತು ತಂಗಿ ಆಗಲೇ ಗಾಢ ನಿದ್ದೆಯಲ್ಲಿದ್ದರು. ನನಗೂ ಇನ್ನೇನು ಜೊಂಪು ಹತ್ತಿತು ಎನ್ನುವಾಗಲೇ ಅನುಭವಕ್ಕೆ ಬಂದಿದ್ದು ಆ ಕೈ. ಅದು ನಮ್ಮ ಸೀಟಿನ ನಡುವೆ ಇದ್ದ ಜಾಗದಲ್ಲಿ ಹಿಂದಿನ ಸೀಟಿನಿಂದ ಬಂದಿತ್ತು.ಮೊದಲಿಗೆ ನಾನು ಹಿಂದಿನ ಸೀಟಿನಲ್ಲಿ ನಿದ್ರಿಸಿದವರ್ಯಾರೋ ಮೈಮರೆತು ಕಾಲು ಇಟ್ಟಿರಬೇಕು ಎಂದೇ ತಿಳಿದು ಅವರನ್ನು ಮನಸ್ಸಿನಲ್ಲೇ ಕ್ಷಮಿಸಿ ನಿದ್ರಿಸಲು ಯತ್ನಿಸಿದೆ.
ಆದರೆ ಸಮಯ ಸರಿದಂತೆ ಅದು ಅಲುಗಾಟ ಆರಂಭಿಸಿದಾಗ ತಿರುಗಿ ನೋಡಿ ಅದು ಕಾಲಲ್ಲ ಯಾರದೋ ಚಾಚಿಕೊಂಡ ಹಸ್ತ ಎಂದು ತಿಳಿದು ಹೌಹಾರಿದೆ. ಹನ್ನೆರಡು ಅಥವಾ ಹದಿಮೂರು ವರ್ಷದವಳಿದ್ದೆ. ಅದೊಂದು ಹಸ್ತ ಎಂದು ತಿಳಿದೊಡನೆಯೇ ಸೀಟಿನಿಂದ ಮುಂದೆ ಮುಂದೆ ಸರಿಯುತ್ತಲೇ ಹೋದೆ. ನಾನು ಮುಂದೆ ಸರಿದಂತೆ ಆ ಕೈ ಕೂಡ ಮುಂದೆ ಮುಂದೆ ಬರಲಾರಂಭಿಸಿತು.
ಕಗ್ಗತ್ತಲು ತುಂಬಿದ ಬಸ್ಸಿನಲ್ಲಿ ಹಿಂದಿನ ಸೀಟಿನಲ್ಲಿ ಯಾರು ಕುಳಿತಿರುವರೆಂಬುದನ್ನು ಬಗ್ಗಿ ನೋಡಿದೆ. ಯಾರೋ ಮೂವರು ಒಟ್ಟೊಟ್ಟಾಗಿ ಮಲಗಿದ್ದರಿಂದ ಯಾರ ಮುಖವೂ ಕಾಣುವಂತಿರಲಿಲ್ಲ. ಇಡೀ ಬಸ್ಸು ಗಾಢ ನಿದಿರೆಯಲ್ಲಿ ತೂಗುತ್ತ ಚಲಿಸುತ್ತಿತ್ತು. ಅದೃಷ್ಟವಶಾತ್ ಆ ಕೈ ಇದ್ದಲ್ಲೇ ಮಾಯವಾಗಿತ್ತು. ನನಗೇನೂ ಅರ್ಥವಾಗದೇ, ಇದೆಲ್ಲ ನನ್ನದೇ ಭ್ರಮೆಯಿರಬಹುದು ಎಂದುಕೊಂಡು ಮತ್ತೆ ಮಲಗಲು ಯತ್ನಿಸಿದೆ. ಎರಡೇ ನಿಮಿಷ ಬಿಟ್ಟು ಮತ್ತದೇ ಸ್ಪರ್ಶ ನನ್ನ ಇಡೀ ಮೈಯನ್ನು ನಡುಗಿಸಿತು. ಮತ್ತೆ ನಾನು ಸೀಟಿನಿಂದ ಮುಂದೆ ಮುಂದೆ ಸರಿಯಲು ತೊಡಗಿದಂತೆ ಆ ಕೈ ಕೂಡ ಹಿಂಬಾಲಿಸಿತು.
ಇನ್ನೇನು ನಾನು ಸೀಟಿನಿಂದ ಬಿದ್ದೇ ಬಿಡುತ್ತೇನೆ ಅಂದಾಗ ಅಮ್ಮ “ಏನಾಯ್ತು ಮಗಾ, ಸರಿಯಾಗಿ ಕೂತುಕೋ” ಎಂದರು. ಅಂಜುತ್ತಲೇ ಅಳುಮುಖದಿಂದ ಅವರಿಗೆ ಸೀಟಿನ ಅರ್ಧಕ್ಕೆ ಬಂದಿದ್ದ ಆ ಕೈಯನ್ನು ತೋರಿಸಿದೆ. ಅವರು ಅತ್ಯಂತ ದುಗುಡದಿಂದ ಬ್ಯಾಗಿನೊಳಗಿನ ಸೇಫ್ಟಿಪಿನ್ನನ್ನು ತೆಗೆದು ಆ ಕೈಗೆ ಚುಚ್ಚಿದರು. ತಕ್ಷಣ ಆ ಕೈ ಹಿಂದಕ್ಕೋಡಿತು. ಅಮ್ಮ ನನ್ನ ಕೈಗೂ ಸೇಫ್ಟಿಪಿನ್ನನ್ನು ಕೊಟ್ಟು “ಮತ್ತೆ ಬಂದರೆ ಹೀಗೇ ಚುಚ್ಚು, ಆದರೆ ತುಂಬಾ ಜೋರಾಗಿಯೂ ಚುಚ್ಚಬೇಡ. ಆಮೇಲೆ ಸೇಡಿಟ್ಟುಕೊಂಡರೆ ಕಷ್ಟ” ಎಂದಿದ್ದರು.ಆ ಒಂದೇ ಮಾತಿನಲ್ಲಿ ಇಂದಿನ ತನಕದ ನನ್ನ ಸಾರ್ವಜನಿಕ ಬದುಕಿನ ನೆರಳು ಅಡಗಿದೆ ಅಂತನ್ನಿಸುತ್ತದೆ ನನಗೆ. “ಚುಚ್ಚು, ಆದರೆ ಜೋರಾಗಿ ಚುಚ್ಚಬೇಡ” ಎಂಬುದನ್ನು ಹೆಣ್ಣುಮಕ್ಕಳು ಒಬ್ಬರಿಗೊಬ್ಬರು ಹೇಳುತ್ತಲೇ ಬಂದಿದ್ದಾರೆ.
ಆ ಮಾತಿನ ಹಿಂದೆ ನನ್ನ ತಾಯಿಯ ತಪ್ಪು ನನಗೆ ಎಳ್ಳಷ್ಟೂ ಕಾಣುತ್ತಿಲ್ಲ. ಇನ್ನೇನು ಬಾಲ್ಯ ದಾಟಿ ತಾರುಣ್ಯಕ್ಕೆ ಕಾಲಿಡುತ್ತಿದ್ದ ನನಗೆ ಅಮ್ಮ ಇದ್ದುದರಲ್ಲೇ ಸುರಕ್ಷಿತವಾಗಿ ಹೇಗಿರಬೇಕೆಂದು ತಿಳಿಸಿಕೊಡುತ್ತಿದ್ದರು. ಅಂದಿನಿಂದ ಬೇರೆಯದೇ ಜಗತ್ತಿಗೆ ಕಾಲಿಟ್ಟ ಅನುಭವವಾಗಿತ್ತು ನನಗೆ. ಲಾಂಗ್ ರೂಟಿನ ಬಸ್ಸು ಹತ್ತುವಾಗಲೆಲ್ಲ ಅತ್ಯಂತ ಸಹಜವೆನ್ನುವಂತೆ ಅಮ್ಮನ ಬಳಿ ಸೇಫ್ಟಿಪಿನ್ನನ್ನು ತೆಗೆದಿರಿಸಿಕೊಳ್ಳುತ್ತಿದ್ದೆ. ಮುಂಚಿನಂತೆ ಇಡೀ ರಾತ್ರಿ ಬಸ್ಸಿನ ತಂಗಾಳಿಯಲ್ಲಿ ಕಳೆಯುವ ಸುಂದರ ಅನುಭವ ಮಾಯವಾಗಿ ಸೀಟಿನ ಮಧ್ಯದಿಂದ ಕೈ ಅಥವಾ ಸೀಟಿನ ಕೆಳಗಿನಿಂದ ಕಾಲು ಬರುವುದನ್ನು ಕೈಯಲ್ಲಿ ಪಿನ್ನು ಹಿಡಿದು ಬಿಗಿಉಸಿರು ಹಿಡಿದು ಕಾಯುತ್ತ ಕೂರುತ್ತಿದ್ದೆ. ಮತ್ತು ಆ ಕೈ ಬಹುತೇಕ ಸಂದರ್ಭಗಳಲ್ಲಿ ಬಂದೇ ಬರುತ್ತಿತ್ತು.
ಕಂಡಕ್ಟರ್ಗೆ ಹೇಳಿ ಸೀಟಿ ಬದಲಿಸಿಕೊಂಡಿದ್ದರೆ ಮತ್ತೆ ಆ ಹೊಸ ಸೀಟಿನ ಹಿಂದಿನಿಂದಲೂ ಕೈ ಬರುವುದಿಲ್ಲ ಅಂತ ಏನು ಗ್ಯಾರೆಂಟಿ ಎಂಬ ಆತಂಕವೂ ನಮಗಿತ್ತು. ಮುಂದೆ ಕುಳಿತ ಪಪ್ಪನ ಜೊತೆ ಸೀಟು ಬದಲಿಸಿಕೊಳ್ಳೋಣ ಅಂದರೆ ಅಲ್ಲಿ ಕುಳಿತವರೂ ಗಂಡಸರು, ಪಕ್ಕದಿಂದ ಕೈ ಬರುವುದಿಲ್ಲ ಅಂತ ಹೇಗೆ ಹೇಳುವುದು? ಹಾಗಂತ ಯಾವಾಗಲೂ ಈ ಸೇಫ್ಟಿಪಿನ್ ಪ್ರಯೋಗವನ್ನೇ ಏನು ಉಪಯೋಗಿಸಬೇಕಾಗುತ್ತಿರಲಿಲ್ಲ. ಪಕ್ಕದಲ್ಲಿ ಮನೆಯ ಗಂಡಸರ್ಯಾರಾದರೂ ಕುಳಿತಿದ್ದರೆ ಇಂಥ ಘಟನೆಗಳು ಕಡಿಮೆಯಿರುತ್ತಿದ್ದವು.
ಅಷ್ಟಕ್ಕೂ ಮೀರಿ ಬಂದರೆ “ಯಾರ್ರೀ ಅದು? ಸರಿಯಾಗಿ ಕೂತುಕೊಳ್ರೀ” ಅಂತ ಒಮ್ಮೊಮ್ಮೆ ದೊಡ್ಡ ದನಿಯಲ್ಲಿ ಬಯ್ಯುತ್ತಿದ್ದೆವು. ಆದರೆ ನಮ್ಮ ದುರಾದೃಷ್ಟಕ್ಕೆ ಲಾಂಗ್ ರೂಟಿನ ಬಸ್ಸುಗಳ ಸೀಟುಗಳು ಉದ್ದವಾಗಿದ್ದುದರಿಂದ ಹಿಂಬದಿಯ ಸೀಟಿನಲ್ಲಿ ಕುಳಿತವರು ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ.ಒಮ್ಮೆ ಮಲಗಿದ್ದ ಕಂಡಕ್ಟರರನ್ನು ಎಬ್ಬಿಸಿ ಸೀಟು ಬದಲಿಸಿಕೊಡಲು ಕೇಳಿದೆವು. ಅವರು ಕಣ್ಣು ತಿಕ್ಕುತ್ತ ಬಂದು “ಯಾವ ಸೀಟೂ ಖಾಲಿ ಇಲ್ರಿ” ಅಂದು ನಮ್ಮ ಹಿಂದಿನ ಸೀಟಿನವರನ್ನು ನೋಡಿ “ಏನ್ರೀ, ಅವರೆಲ್ಲ ನಿದ್ದಿ ಮಾಡಾಕತ್ತಾರ. ನಿಮ್ಮನ್ನೆಲ್ಲೆ ಮುಟ್ಟತಾರ” ಅಂತ ಗೊಣಗುತ್ತ “ಹಿಂಗೆಲ್ಲ ಗದ್ದಲ ಮಾಡವರು ಬಸ್ಸಿನ್ಯಾಗ ಯಾಕ ಬರಬೇಕ್ರೀ?” ಎಂಬ ಅರ್ಥವಿಲ್ಲದ ಮಾತು ಅಂದಿದ್ದರು. ಈ ಘಟನೆಗಿಂತ ಮೊದಲೊಮ್ಮೆ ನಾಲ್ಕನೆಯತ್ತೆ ಓದುತ್ತಿರುವಾಗ ಒಂದು ಭಾನುವಾರ ತಂಗಿಯ ಜೊತೆಗೆ ಡ್ಯಾನ್ಸ್ ಕ್ಲಾಸಿಗೆ ಹೋಗುತ್ತಿದ್ದೆ. ಮಾತಾಡುತ್ತ ನಡೆದುಕೊಂಡು ಹೋಗಿ ಅರ್ಧಘಂಟೆ ಮೊದಲೇ ತಲುಪಿದೆವು. ನಮ್ಮ ಡ್ಯಾನ್ಸ್ ಟೀಚರ್ ಇನ್ನೂ ಕ್ಲಾಸಿನ ಬಾಗಿಲನ್ನು ತೆರೆದಿರಲಿಲ್ಲ. ಕ್ಲಾಸಿನ ಮುಂದೆ ದೊಡ್ಡ ಬಯಲಿತ್ತು.
ಪೊಲೀಸ್ ಧಿರಿಸು ಧರಿಸಿದ ಸುಮಾರು ಮೂವತ್ತರ ಯುವಕ ಅಲ್ಲಿಗೆ ಬಂದ. ಅವನು ನಗುತ್ತ ಬಂದುದರಿಂದ ಯಾರೋ ಪರಿಚಯದವನೇನೋ ಅಂತ ನಾನೂ ನಕ್ಕಿದ್ದು ನೆನಪಿದೆ. ಅಷ್ಟಕ್ಕೆ ಅವನು ನನ್ನನ್ನು ಹಿಡಿದುಕೊಂಡು ಎದೆಯ ಭಾಗವನ್ನು ಒತ್ತಲು ಶುರುಮಾಡಿದ. ಆಗ ನನಗೆ ಪ್ರತಿಭಟಿಸಬೇಕೋ ಬಾರದೋ ತಿಳಿಯಲಿಲ್ಲ. ಅವನ ಗಟ್ಟಿಹಿಡಿತದಿಂದ ಕೊಸರಿಕೊಳ್ಳಲು ಯತ್ನಿಸಿದೆ. ಅವನು ಬಿಡದಿದ್ದಾಗ ಅಳುತ್ತ ಅವನನ್ನು ದೂರ ತಳ್ಳಿ ಹೆದರಿಕೊಂಡು ನಿಂತಿದ್ದ ತಂಗಿಯ ಕೈ ಹಿಡಿದುಕೊಂಡು ಜೋರಾಗಿ ಓಡುತ್ತ ಮನೆ ತಲುಪಿದೆ. ನಡೆದುದನ್ನು ಹೇಳಿ ಬಾಗಿಲಲ್ಲೇ ಕುಸಿದು ಕೂತೆ. ಅಂದಿನಿಂದ ಅಮ್ಮ ಅಥವಾ ಪಪ್ಪ ಟೀಚರ್ ಬರುವ ತನಕ ಕಾದಿದ್ದು ನನ್ನನ್ನೂ ತಂಗಿಯನ್ನೂ ಡ್ಯಾನ್ಸ್ ಕ್ಲಾಸಿಗೆ ಬಿಟ್ಟು ಬರುತ್ತಿದ್ದರು.
ಹುಬ್ಬಳ್ಳಿಯಲ್ಲಿ ಮೊದಲ ಪಿಯೂಸಿ ಓದುವಾಗ ಒಮ್ಮೆ ಕಾಲೇಜಿನಿಂದ ಮನೆಗೆ ಮರಳುತ್ತಿದ್ದೆ. ನಿರ್ಜನ ರಸ್ತೆಯಲ್ಲಿ ನಡೆದು ಬರುವಾಗ ಎದುರಿಗೆ ಬರುವ ಹುಡುಗನೊಬ್ಬ ಎದೆ ಮುಟ್ಟಲು ಬಂದ. “ಥೂ ಹುಚ್ಚುನಾಯಿ” ಅಂತ ಅರಚಿ ದೂರ ಸರಿದೆ. ಅಷ್ಟಕ್ಕೆ ಅವನ ಅಭಿಮಾನ ಭಂಗವಾಯಿತು ಅಂತ ಕಾಣುತ್ತದೆ. ಮನೆಯ ತನಕ ನನ್ನನ್ನು ಹಿಂಬಾಲಿಸಿಕೊಂಡು ಬಂದು “ಸಾರಿ ಹೇಳು, ಸಾರಿ ಹೇಳು” ಅಂತ ಹೆಜ್ಜೆಗೊಮ್ಮೆ ಹೇಳುತ್ತಲೇ ಬರುತ್ತಿದ್ದ. ಆ ದಿನ ಮನೆ ಮುಟ್ಟಿದ್ದೇ ನನಗೆ ಸಮಾಧಾನವಾಗಿತ್ತು. ಆದರೆ ಮಾರನೆಯ ದಿನ ಕಾಲೇಜಿಗೆ ತೆರಳುವಾಗ ಅದೆಲ್ಲಿದ್ದನೋ ಮತ್ತೆ ರಸ್ತೆಯಲ್ಲಿ ಪ್ರತ್ಯಕ್ಷನಾದ. ಮುಂದಿನ ಎರಡು ದಿನಗಳು ಕಾಲೇಜಿನಿಂದ ಮನೆ, ಮನೆಯಿಂದ ಕಾಲೇಜು “ಸಾರಿ ಹೇಳು” ಅಂತನ್ನುತ್ತ ನನ್ನನ್ನು ಹಿಂಬಾಲಿಸುತ್ತಲೇ ಇದ್ದ.
ನಾನು ಓಡುನಡಿಗೆಯಲ್ಲಿ ಅವನನ್ನು ನಿರ್ಲಕ್ಷಿಸಿ ನಡೆಯುತ್ತಲೇ ಇದ್ದೆ. ನನ್ನ ಪುಣ್ಯಕ್ಕೆ ಮೂರನೆಯ ದಿನ ಅವನು ಬರಲಿಲ್ಲ. ಆ ಎರಡು ದಿನಗಳೂ “ಛೇ, ದೂರ ಸರಿದು ಓಡಿ ಬಂದಿದ್ದರೆ ಸಾಕಿತ್ತು, ಹುಚ್ಚುನಾಯಿ ಅಂತ ಅವನಿಗೆ ಬೈಯಬಾರದಿತ್ತು” ಅಂತ ಎಷ್ಟು ಪಶ್ಚಾತಾಪ ಪಟ್ಟೆನೋ ಏನೋ. “ಚುಚ್ಚು, ಆದ್ರೆ ಜೋರಾಗಿ ಚುಚ್ಚಬೇಡ” ಎಂಬುದು ಮತ್ತೆ ಮತ್ತೆ ನೆನಪಾಗುತ್ತಿತ್ತು. ಎದುರಿಗಿದ್ದವರ ಕೈಯಲ್ಲಿ ಚೂರಿಯಿರುತ್ತದೋ, ಆಸಿಡ್ ಇರುತ್ತದೋ, ಬಂದೂಕಿರುತ್ತದೋ ಹೇಗೆ ಹೇಳೋದು. ಇಂಥ ಒಂದಲ್ಲ, ಎರಡಲ್ಲ, ನೂರು ಘಟನೆಗಳನ್ನಾದರೂ ನಾನು ನೆನಪಿನ ಆಳದಲ್ಲಿ ಅಷ್ಟಾಗಿ ಇಳಿಯದೆಯೂ ಸರಾಗವಾಗಿ ಬರೆಯಬಲ್ಲೆ. ನಾನಷ್ಟೇ ಅಲ್ಲ, ನಮ್ಮ ಸುತ್ತಲಿನ ಎಲ್ಲ ಹೆಣ್ಣುಮಕ್ಕಳೂ ಬರೆಯಬಲ್ಲರು.
ಮಹಿಳೆಯರ ಸಾರ್ವಜನಿಕ ಬದುಕಿನಲ್ಲಿ ನಿತ್ಯಸತ್ಯವಾಗಿರುವ ಇಂಥ ಸಂಗತಿಗಳು ಯಾವುಯಾವುದೋ ಕಾರಣಗಳಿಗಾಗಿ ಬೆಳಕಿಗೆ ಬರುವುದೇ ಇಲ್ಲ. ಮುಖ್ಯವಾಹಿನಿಗೆ ಬರುವ ಮೊದಲೇ “ಅದೇನು ಬಿಡು, ಚಿಕ್ಕ ವಿಷಯ. ಇನ್ನೂ ದೊಡ್ಡದೇನೂ ಆಗಲಿಲ್ಲವಲ್ಲ ಸದ್ಯ” ಅಂತ ನಮಗೆ ನಾವೇ ಸಮಾಧಾನ ಮಾಡಿಕೊಂಡು ಆ ಕೆಟ್ಟ ಅನುಭವಗಳನ್ನು ಮರೆತೂ ಬಿಡುತ್ತೇವೆ. ಇನ್ನೊಂದು ಸಂಗತಿಯೆಂದರೆ ನಮ್ಮಲ್ಲಿ ಸುಸಂಸ್ಕøತವಾಗಿ ಬೆಳೆದ ಗಂಡುಮಕ್ಕಳಿಗೆ “ಇದು ಬೇರೆ ಯಾರಿಗೋ ನಡೆಯೋದು, ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಇಂಥವೆಲ್ಲ ಅನುಭವಕ್ಕೆ ಬಂದಿರಲ್ಲ” ಅಂತನ್ನಿಸಿರುತ್ತೆ. ಉದಾಹರಣೆಗೆ ನನ್ನ ಕಾದಂಬರಿಯಲ್ಲಿ ಹುಡುಗಿಯರಿದ್ದ ಕೋಣೆಯ ಕಿಟಕಿಯ ಹೊರಗೆ ಹುಡುಗನೊಬ್ಬ ಹಸ್ತಮೈಥುನ ಮಾಡಿಕೊಳ್ಳುತ್ತ ನಿಂತಿದ್ದ ಸಂಗತಿ ಬರೆದಿದ್ದೆ.
ಮೊದಲ ಡ್ರಾಫ್ಟನ್ನು ಓದಿದ ನನ್ನ ಆಪ್ತ ಸ್ನೇಹಿತ ಆ ಕುರಿತಾಗಿ ತಕರಾರು ತೆಗೆದಿದ್ದ. ಯಾವ ಹುಡುಗನೂ ಹಾಗೆ ಸಾರ್ವಜನಿಕವಾಗಿ ವರ್ತಿಸಲು ಸಾಧ್ಯವೇ ಇಲ್ಲ ಅಂತ ನನ್ನ ಬಳಿ ವಾದ ಮಾಡಿದ್ದ. ಅದು ನಾನೇ ಕಂಡ ಅನುಭವ ಮಾರಾಯ ಎಂದಾಗ ನಂಬಲು ಸಾಧ್ಯವಾಗದೇ ತುಸು ವಿಚಲಿತನಾಗಿದ್ದ.ಈ ರೀತಿಯ ಅನುಭವಗಳು ಎಲ್ಲರಿಗೂ ಆಗಿದ್ದರೆ ಮತ್ತೇಕೆ ಅಷ್ಟೆಲ್ಲ ಹೆಣ್ಣುಮಕ್ಕಳು ಆ ಕುರಿತು ಮಾತಾಡದೇ ಸುಮ್ಮನಿದ್ದಾರೆ ಅಂತ ಪ್ರಶ್ನೆ ಬರುವುದು ಸಹಜವಾದದ್ದೇ. ಮೊದಲಿನಿಂದಲೂ ನಾವು ಬೆಳೆದ ಸಾಮಾಜಿಕ ಪರಿಸರವೇ ನಮ್ಮಲ್ಲಿ ಲೈಂಗಿಕ ಸಂಗತಿಗಳ ಕುರಿತು ‘ಶೇಮ್’ ಅನ್ನು ಹುಟ್ಟುಹಾಕಿಬಿಟ್ಟಿದೆ.
ಈ ಸಂಗತಿಗಳ ಬಗ್ಗೆ ಮಾತನಾಡುವುದೇ ದೊಡ್ಡ ಅಪರಾಧವೇನೋ ಎಂಬಂತೆ ನಮ್ಮ ಕೃತಿ, ಚಲನೆ ಎಲ್ಲ. ನಾನೂ ಸಹ ಈ ಬರಹವನ್ನು ಬಿಟ್ಟು ಬಿಟ್ಟು ಬರೆದೆ. ಪ್ರತಿ ಹಂತದಲ್ಲೂ ಇದನ್ನು ಬರೆಯುವುದೂ ಬೇಡ, ಪ್ರಕಟಿಸುವುದೂ ಬೇಡ ಎಂಬಂತೆ ಸಂಕಟಪಟ್ಟೆ. ಕಾರಣ ಆ ಅನುಭವಗಳನ್ನು ಮರುನೆನಪು ಮಾಡಿಕೊಂಡು ಇನ್ನೊಮ್ಮೆ ಆ ಸಂಕಟವನ್ನು ಅನುಭವಿಸುವುದು ನನಗೆ ಬೇಕಿರಲಿಲ್ಲ. ಅದೇ ಕಾರಣಕ್ಕಾಗಿ ಎಷ್ಟೋ ಜನ ಸುಮ್ಮನಿರಬಹುದು.
ಮೌನವಿದೆ ಅಂದಾಕ್ಷಣ ಯಾವ ಘಟನೆಗಳೂ ನಡೆಯಲೇ ಇಲ್ಲ ಎಂದು ಅರ್ಥವಲ್ಲ. ಆ ಅನುಭವಗಳನ್ನು ಹಂಚಿಕೊಳ್ಳಲು ಸರಿಯಾದ ಸಹನೀಯ, ಮಾನವೀಯ, ಸುರಕ್ಷಿತ ಸಮಾಜವನ್ನು ನಾವು ಸೃಷ್ಟಿಸಿಲ್ಲ ಅಂತ ಅರ್ಥ.ಇಂಥ ಎಲ್ಲ ಅನುಭವಗಳು ‘ಶೇಮ್’ ಇಲ್ಲದೇ ಹೊರಬರಬೇಕು. ಪರಸ್ಪರ ಸಮ್ಮತಿ (ಕನ್ಸೆಂಟ್) ಇಲ್ಲದೇ ಲೈಂಗಿಕವಾಗಿ ಯಾವ ರೀತಿಯಲ್ಲಿ ಮುಂದುವರೆದರೂ ಅದು ಕಿರುಕುಳವಾಗುತ್ತದೆ. ಮುಟ್ಟದೇ ಕೇವಲ ಮೆಸೇಜುಗಳಲ್ಲಿ, ಮಾತುಗಳಲ್ಲಿ ಆಡಿದರೂ ಕೂಡ.
ಕಳೆದ ವಾರ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಹಾಲಿವುಡ್ ಸಿನಿಮಾಗಳ ನಿರ್ಮಾಪಕ ಹಾರ್ವಿ ವೈನ್ಸ್ಟಿನ್ ಕುರಿತಾದ ಲೈಂಗಿಕ ಹಗರಣಗಳ ವರದಿ ಪ್ರಕಟಿಸುವುದರ ಮೂಲಕ ವಿಶ್ವದಾದ್ಯಂತ ಮಹಿಳೆಯರ ಪಾಡನ್ನು ಮುಖ್ಯವಾಹಿನಿಗೆ ತಂದಿದೆ. ಆಂಜಲೀನಾ ಜೋಲಿ ಮುಂತಾದ ಜನಪ್ರಿಯ ನಟಿಯರೂ ಸೇರಿದಂತೆ ಹಾರ್ವಿ ವೈನ್ಸ್ಟಿನ್ ತಮಗೆ ಹೇಗೆ ಕಿರುಕುಳ ನೀಡಿದ ಮತ್ತು ತನ್ನ ಅಧಿಕಾರದಿಂದ ಹೇಗೆ ಅವರ ಮೌನವನ್ನು ಕೊಂಡುಕೊಂಡ ಎಂಬುದನ್ನು ನೋವಿನಿಂದ ದಾಖಲಿಸಿದ್ದಾರೆ.
ಆ ಹಿನ್ನಲೆಯಲ್ಲೇ “ಮೀ ಟೂ” ಅಂದರೆ “ನಾನೂ ಕೂಡ” ಎನ್ನುವ ಹ್ಯಾಶ್ಟ್ಯಾಗ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಲೈಂಗಿಕ ಕಿರುಕುಳ ನಡೆಯೋದು ಯಾರೋ ಕಾಣದ ಜನರ ಮೇಲಲ್ಲ, ನಮ್ಮ ಸಮಾಜದಲ್ಲಿ, ನಮ್ಮೆಲ್ಲರ ಅನುಭವಗಳಲ್ಲಿ ಅದು ಹಾಸುಹೊಕ್ಕಾಗಿದೆ ಅಂತ ಸಾವಿರಾರು ಮಹಿಳೆಯರು ತಮ್ಮ ನೋವುಗಳನ್ನು ಜಗತ್ತಿನ ಜೊತೆಗೆ ಹಂಚಿಕೊಳ್ಳುತ್ತಿದ್ದಾರೆ. ಈಗಲಾದರೂ ನಾವು ಮಾತನಾಡಲು ಶುರು ಮಾಡಿದರೆ ಮುಂದೆ ನಮ್ಮ ಮಕ್ಕಳಾದರೂ ಈ ವಿಷಯವಾಗಿ ಸಹಜವಾಗಿ ಪ್ರತಿಭಟಿಸಲು ಸಾಧ್ಯವಾಗಬಹುದು ಎಂಬ ನಂಬಿಕೆಯಿಂದ ಈ ಬರಹ ಬರೆದಿರುವೆ.
ಭಯವ ತರುವ ಕೈಗಳು
ನಿಮಗೆ ಇವೂ ಇಷ್ಟವಾಗಬಹುದು…





0 Comments