ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭತ್ತ ಬೆಳೆಯುವದೆಂದರೆ.. 

Renuka ramanand

ರೇಣುಕಾ ರಮಾನಂದ್  


ರಾಜಹಂಸ, ಜೀವನ ಪ್ರಕಾಶನ

ರಾಜಹಂಸ, ಜೀವನ ಪ್ರಕಾಶನ

ಜೀವನ್ ಪ್ರಕಾಶನದ ರಾಜ್ಯಮಟ್ಟದ

ಯುಗಾದಿ ಕಾವ್ಯ ಸ್ಪರ್ಧೆ-2016ರ ಬಹುಮಾನಿತ ಕವಿತೆ


 

‘ಭತ್ತ..!! ಚಪ್ಪಲಿಗಾಲಲ್ಲಿ ಮೆಟ್ಟಬಾರದು
ದಾಟಿ ಬಾ’ ಎಂದೆ
ಅವಳಿಗೆ ಅರ್ಥವಾಗಲಿಲ್ಲ
‘ಭತ್ತ ..!! ಹಾಗೆಂದರೇನು..?’
ಪ್ರಶ್ನೆ ತೂರಿ ಬಂತು

ಅವಳಿಗೆ ಅಕ್ಕಿ ಗೊತ್ತು, ದೋಸೆ ಗೊತ್ತು
ಅನ್ನ, ಪುಳಿಯೊಗರೆ, ಪಲಾವ್, ಕೇಸರಿಭಾತ್, ರೊಟ್ಟಿ
ಎಲ್ಲವೂ ಗೊತ್ತು
ಭತ್ತ ಗೊತ್ತಿಲ್ಲ

mother daughterಓದಿ ತಿಳಿದವುಗಳು ನೋಡಿ ತಿಳಿದವುಗಳಂತೆ
ಬಡಪೆಟ್ಟಿಗೆ ನೆನಪಾಗುವುದಿಲ್ಲ
ಗೊತ್ತಿರಲೇಬೇಕು ಎಂಬ
ಕಟ್ಟುಪಾಡಿರದ ಅನೇಕ ಸಂಗತಿಗಳಿವೆ
ಜಗತ್ತಿನಲ್ಲಿ
ಆದರೆ ಭತ್ತ..!?
ಗೊತ್ತಿರಲೇಬೇಕಾದಂತ ವಿಷಯವಾಗಿತ್ತು

ವಿಷಾದವೆನ್ನಿಸಿ
ಅಜ್ಜ ಹತ್ತಾರು ಎಕರೆ ಬಿತ್ತಿದ್ದು
ಅಜ್ಜಿ ನೂರಾರು ಖಂಡುಗ ಕುಟ್ಟಿದ್ದು
ಅಪ್ಪ ಊಳಿದ್ದು, ಅವ್ವ ನೆಟ್ಟದ್ದು
ನಾನೂ ಕಾಲೇಜು ಬಿಟ್ಟು ಬಂದ ಮೇಲೆ
ತಾಸೆರಡು ತಾಸು ಕಳೆ ಕಿತ್ತಿದ್ದು
ಎಲ್ಲ ಹೇಳಿದೆ

ಅವಳು ಆಕಳಿಸಿದಳು

ಹೇಳುವುದು ನಿಲ್ಲಿಸಿ
ಒಂದು ಭತ್ತ ಬಿಡಿಸಿದೆ
ಅಮ್ಮನ ಬಸಿರಿಂದ ಹಾಲುಗಲ್ಲದ ಕೂಸಂತೆ
ಅಕ್ಕಿ ಹೊರಬಂತು

ಅವಳು ಚಪ್ಪಾಳೆ ತಟ್ಟಿ ಕುಣಿದಳು
ತಾನೂ ಹತ್ತಾರು ಭತ್ತ ಬಿಡಿಸಿದಳು
ಬೇಯುವ ಅನ್ನಕ್ಕೆ ಹಾಕಿದಳು
ಅಂದು ಒಂದಗುಳೂ ಬಿಡದೆ ಉಣ್ಣುತ್ತ
‘ನಾವೂ ಬೆಳೆಯೋಣ, ನಾವೂ ಬೆಳೆಯೋಣ’ ಎಂದಳು

ಅಂಗಳದ ಚಚ್ಚೌಕ ನೆಲಹಾಸು ಕಿತ್ತು
ಮಣ್ಣು ಹಸನು ಮಾಡಿ
ಮುಷ್ಟಿ  ಬೀಜ ಬಿತ್ತಿದೆವು
ನೀರು ಹನಿಸುವುದು, ಕಳೆ ಕೀಳುವುದು
ಗೊಬ್ಬರ ಹಾಕುವುದು- ಎಲ್ಲ ದೇಖರೇಖಿ
ಅವಳೇ ನೋಡಿಕೊಂಡಳು
ಬರೀ
ಜೋಗುಳ ಹಾಡುವ ಕೆಲಸವನ್ನಷ್ಟೆ
ಗಾಳಿಗೆ ಬಿಟ್ಟಳು

renuka ramanand familyಅಜ್ಜ, ಅಜ್ಜಿ, ಅಪ್ಪ, ಅವ್ವ ಎಲ್ಲ
ಅಂಗಳಕ್ಕೆ ಬಂದು
ಊಳಿ, ಬಿತ್ತಿ, ನೆಟ್ಟು, ತೂರಿ ಸರಭರ
ಓಡಿಯಾಡಿದಂತಾಯ್ತು

ಕದಿರು ಹೂವಾಡಲಾರಂಭಿಸಿತು
ಅಂತಜಾ೯ಲದಲ್ಲಷ್ಟೇ ಬರುತ್ತಿದ್ದ
ಚಿಟ್ಟೆ, ದುಂಬಿ, ಮಿಡತೆ, ಜೇನ್ನೊಣಗಳೆಲ್ಲ
ಅಂಗಳಕ್ಕೆ ಬಂದವು
ತೆನೆ ಮೈದುಂಬಿದಂತೆ
ಗುಬ್ಬಿ, ಗಿಳಿ, ಕಾಜಾಣ, ಪಾರಿವಾಳಗಳು ಕೂಡ

ಅಲ್ಲಿ ಸುರುಟಿಕೊಂಡಂತಿದ್ದ ಅವೆಲ್ಲ
ಇಲ್ಲಿ ಸುಸೂತ್ರ ಮೈಮುರಿದು
ಉಸಿರಾಡಿಕೊಂಡವು

ಈಗ
ಮುಷ್ಟಿ ಭತ್ತಕ್ಕೆ
ಕೊಳಗ ಅಕ್ಕಿ, ಹೊರೆ ಹುಲ್ಲು
ದಾಸ್ತಾನಾಗಿದೆ

‘ಅಮ್ಮಾ ಹೊರೆ ಹುಲ್ಲಿದೆ
ನಾವೂ ದನ ಸಾಕೋಣವೇ,,,,’ ಎನ್ನುತ್ತಿದ್ದಾಳೆ
ಕೊರಳಿಗೊಂದು ಗಂಟೆ
ಈಗಾಗಲೇ ತಂದಿಟ್ಟುಕೊಂಡಿದ್ದಾಳೆ

ಮುಂದಿನ ಬಾರಿ ಭತ್ತಕ್ಕೆ
ಗೊಬ್ಬರವೂ
ನಮ್ಮದೇ……..

‍ಲೇಖಕರು admin

1 April, 2016

8 Comments

  1. vaanee. Suresh

    ತುಂಬಾ ಮುದ್ದಾದ ಕವಿತೆ.
    ಆದರೆ, ಎಲ್ಲಾ ಸರಿ, ನನಗೆ ತಿಳಿದ ಮಟ್ಟಿಗೆ ನಮ್ಮ ಕನ್ನಡದಲ್ಲಿ – “ಗದ್ದೆ ಉಳುವುದು” ಗೊತ್ತು, “ನರಿ ಊಳಿಡುವುದು” ಹಾಗೂ “ಉಳಿಯುವುದು” (ಮಿಗುವುದು ಇತ್ಯಾದಿ ಅರ್ಥದಲ್ಲಿ) ಗೊತ್ತು! ಆದರೆ ಇದೇನಿದು – “ಊಳಿ”, “ಊಳಿದ್ದು” ಅಂದರೆ? (ನಿಮ್ಮ ಪ್ರಯೋಗದಲ್ಲಿ – “ಅಪ್ಪ ಊಳಿದ್ದು” ; “ಊಳಿ, ಬಿತ್ತಿ, ನೆಟ್ಟು, ತೂರಿ”!!). ಉಳುವುದರ ಅಥವಾ ಉತ್ತುವುದರ ಭೂತ ಕಾಲ ಪ್ರಯೋಗ “ಉತ್ತಿದ್ದು”. ಹಾಗೂ – “ಬಿತ್ತಿ, ನೆಟ್ಟು, ತೂರಿ” ಎನ್ನುವಾಗ ನಿಮಗೆ ಬೇಕಿದ್ದುದು “ಉತ್ತಿ” ಎಂಬ ಪದ ಎಂದ! ನನ್ನ ಭಾವನೆ, ದಯವಿಟ್ಟು ಗಮನಿಸಿ.
    ಮೊದಲೇ ಕೊಲೆಯಾಗುತ್ತಿರುವ ನಮ್ಮೆಲ್ಲರ ನೆಚ್ಚಿನ ಕನ್ನಡಕ್ಕೆ ಇನ್ನೂ ಚಿತ್ರಹಿಂಸೆ ಮಾಡುವುದು ಬೇಡ.

  2. Ramachandra U Mahale

    Simply beautiful. Wishing all the success.

  3. smitha

    Chennagide. Abhibandabegalu…. smitha amrithraj

  4. Sangeetha raviraj

    Chennagide renukaravre. Congratulations

  5. Sathyakama Sharma Kasaragodu

    ಅಭಿನಂದನೆಗಳು. ಒಂದು ಉತ್ತಮ ಕವಿತೆ. ‘…ಮಾದಿಗರ ಹೋಟೆಲ್ ‘ ಕಿಂತ ಎಷ್ಟೋ ಉತ್ತಮ! ಮೊದ ಮೊದಲು ವಾಚ್ಯ ಅನಿಸಿದರೂ, ಮುಂದೆ ಸಾಂದ್ರವಾಗಿ ಭತ್ತದ ಹಾಗೆ ಬಿಚ್ಚಿ ಕೊಳ್ಳುವ ಪರಿ ಸೊಗಸಾಗಿದೆ.

  6. ನಾಗರಾಜ್ ಹರಪನಹಳ್ಳಿ

    ಕದಿರು ಹೂವಾಡಲಾರಂಭಿಸಿತು
    ಅಂತಜಾ೯ಲದಲ್ಲಷ್ಟೇ ಬರುತ್ತಿದ್ದ
    ಚಿಟ್ಟೆ, ದುಂಬಿ, ಮಿಡತೆ, ಜೇನ್ನೊಣಗಳೆಲ್ಲ
    ಅಂಗಳಕ್ಕೆ ಬಂದವು
    ತೆನೆ ಮೈದುಂಬಿದಂತೆ
    ಗುಬ್ಬಿ, ಗಿಳಿ, ಕಾಜಾಣ, ಪಾರಿವಾಳಗಳು ಕೂಡ

    ಅಲ್ಲಿ ಸುರುಟಿಕೊಂಡಂತಿದ್ದ ಅವೆಲ್ಲ
    ಇಲ್ಲಿ ಸುಸೂತ್ರ ಮೈಮುರಿದು
    ಉಸಿರಾಡಿಕೊಂಡವು

    ಈಗ
    ಮುಷ್ಟಿ ಭತ್ತಕ್ಕೆ
    ಕೊಳಗ ಅಕ್ಕಿ, ಹೊರೆ ಹುಲ್ಲು
    ದಾಸ್ತಾನಾಗಿದೆ..
    ………………ಆಶಾವಾದವನ್ನು ಬಿತ್ತುವ ಭತ್ತ ಕವಿತೆ . ಈ ಕವಿತೆಯ ಮೊಟ್ಟ ಮೊದಲಿನ ಓದುಗ ನಾನು. ತಣ್ಣಗೆ ಆಲೋಚಿಸಿ, ಒಂದು ಧ್ಯಾನಕ್ಕೆ ಶಬ್ದಕಟ್ಟುತ್ತಾ, ಅದಕ್ಕೆ ಅರ್ಥ ಹೊಳೆಸುವ ರೇಣುಕಾ ಈ ತಲೆಮಾರಿನ ಕವಯತ್ರಿಯರಲ್ಲಿ ಚೆನ್ನಾಗಿ ಬರೆಯಬಲ್ಲ ಕಸುವು ಉಳ್ಳವರು. ಗ್ರಾಮೀಣ ನೆಲೆಯನ್ನು ಇನ್ನು ಕಳೆದುಕೊಳ್ಳದ, ಮಣ್ಣಿನ ಮಕ್ಕಳೊಂದಿಗೆ ಈಗಲೂ ಸಂಪರ್ಕದಲ್ಲಿರುವ ಕವಯತ್ರಿ ರೇಣುಕಾ ಅವರಿಂದ ಇಂಥ ಕವಿತೆಗಳು ಹುಟ್ಟಿಕೊಳ್ಳುತ್ತವೆ.

  7. J.S.Ganjekar

    ರೇಣುಕಾ ರಮಾನಂದ್ ರವರು ಬರೆದ “ಭತ್ತ ಬೆಳೆಯುವದೆಂದರೆ…” ಕವನ ಸೊಗಸಾಗಿ ಮೂಡಿಬಂದಿದೆ. ಕವನದ ಮುಕ್ತಾಯವನ್ನು ಭಾವನಾತ್ಮಕವಾಗಿ ಮಾಡಿರುತ್ತಾರೆ. ಮುಂದಾಲೋಚನೆಯನ್ನೂ ವ್ಯಕ್ತ ಪಡೆಸಿರುತ್ತಾರೆ. ತುಂಬಾ ಒಳ್ಳೆಯ ಕವನ. ಅಭಿನಂದನೆಗಳು.

  8. ಚೈತ್ರಿಕಾ

    ಸುಂದರವಾದ ಕವಿತೆ ರೇಣುಕಾವ್ರೆ ಅಭಿನಂದನೆಗಳು….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading