ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬ್ಲೂ ಜೀನ್ಸ್ ಪ್ಯಾಂಟ್

ಹೈವೇ 7

——–

ಒಮ್ಮೆಲೇ ಅವರ ಮನೆಯೊಳಗೆ ಓಡಿಹೋಗಿ ಆ ಗಂಟುಮೂಟೆಯಿಂದ ಹೊರಗೆ ಕಾಣುತ್ತಿದ್ದ ಜೀನ್ಸ್ ಪ್ಯಾಂಟನ್ನು ಎಳೆದುಕೊಂಡು ನೇರವಾಗಿ ನನ್ನ ಮನೆಗೆ ಓಡಿದವನೇ ಆ ಕ್ಷಣವೇ ಹಾಕಿಕೊಳ್ಳಲು ಯತ್ನಿಸಿ, ಸಾಧ್ಯವಾಗದೆ ಅತೀವ ಬೇಸರದಿಂದ ನರಳಿದೆ. ಅದು ನನಗಿಂತ ಸಣ್ಣ ವಯಸ್ಸಿನವರ ಪ್ಯಾಂಟ್ ಆಗಿತ್ತು. ಅದು ನನ್ನ ಮೊಣಕಾಲನ್ನಷ್ಟೇ ಮುಚ್ಚುವಂಥದಾಗಿತ್ತು.

* * *

ಭಾಗ: ನಾಲ್ಕು

hoovu.jpg

ವಿ ಎಂ ಮಂಜುನಾಥ್

ಮ್ಮ ಮನೆಯ ಪಕ್ಕದಲ್ಲಿ ಶಿವಣ್ಣ ಮತ್ತು ಜಯಮ್ಮ ಎಂಬ ದಂಪತಿಗಳು ವಾಸವಿದ್ದರು. ಆತ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದನಾದರೂ ಗಂಟಲವರೆಗೂ ಕುಡಿಯುತ್ತಿದ್ದ. ನಾನು ಕಂಡಂತೆ ಅವರಿಬ್ಬರೂ ಒಂದು ದಿನವೂ ಸ್ವಸ್ಥವಾಗಿದ್ದದ್ದು, ಸಂತಸದಿಂದ ನಲಿದಾಡಿದ್ದು ನೋಡಿದ ಜ್ಞಾಪಕವೇ ಇಲ್ಲ. ನಮ್ಮ ಮನೆಯ ಬದಿಗೆ ಯಥೇಚ್ಛವಾಗಿ ಬೆಳೆದುಕೊಂಡಿದ್ದ ಕಳ್ಳಿಗಿಡಕ್ಕೆ ಉಚ್ಚೆ ಹೊಯ್ಯುತ್ತಿದ್ದ ಜಯಮ್ಮನ ವೈಖರಿಯೇ ಬೇರೆ ಇತ್ತು. ಪ್ರತಿದಿನ ಸಂಜೆ ಅವರಿಬ್ಬರೂ ಪರಸ್ಪರ ತಲೆಗೂದಲು ಕಿತ್ತುಕೊಂಡು ರಕ್ತ ಬರುವಂತೆ ಹೊಡೆದಾಡುತ್ತಿದ್ದರು. ನಮ್ಮಂತೆಯೇ ಜಯಮ್ಮ ತನ್ನ ಮಗ ಕುಮ್ಮಿಯ ಸಂಗಡ ಚರ್ಚಿಗೆ ದಾನಕ್ಕಾಗಿ ಬಂದು ನಿಲ್ಲುತ್ತಿದ್ದಳು. ಅವಳ ಮುಖದಲ್ಲಿ ಮುಷ್ಟಿ ಹೊಡೆತದ ಕಪ್ಪುಕಲೆಗಳು ಎದ್ದು ಕಾಣುತ್ತಿದ್ದವು. ಆ ಕಲೆಗಳು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದ್ದವು. ಹಾಗೆ ಅವಳು ಒಮ್ಮೆ ಎಲ್ಲರಿಗಿಂತ ಹೆಚ್ಚಾಗಿ ಒಂದು ದೊಡ್ಡ ಬಟ್ಟೆ ಗಂಟನ್ನೇ ಹೊತ್ತುಕೊಂಡು ಬಂದು ನಮ್ಮೆಲ್ಲರನ್ನು ಅಸೂಯೆಗೀಡು ಮಾಡಿದ್ದಳು. ನಾನು ಯಾವಾಗಲೂ ಅವಳ ಮನೆಗೆ ಹೋಗಿ ಅವಳನ್ನು ನೋಡಿ ಮಾತನಾಡಿಸುವ ನೆಪದಲ್ಲಿ ಆ ಬಟ್ಟೆ ಗಂಟನ್ನು ಒಮ್ಮೆ ದಿಟ್ಟಿಸಿ ಬರುತ್ತಿದ್ದೆ. ಯಾಕೆಂದರೆ ಆ ಗಂಟಿನಿಂದ ಹೊರಗೆ ಒಂದು ನೀಲಿ ಜೀನ್ಸ್ ಪ್ಯಾಂಟ್ ಇಣುಕುತ್ತಿತ್ತು. ಅದನ್ನು ಹೇಗಾದರೂ ಮಾಡಿ ಕದಿಯಲೇಬೇಕಾಗಿತ್ತು. ಎಂದಿನಂತೆ ಆ ದಿನ ಸಂಜೆಗತ್ತಲು. ಗಂಡಹೆಂಡಿರಿಬ್ಬರೂ ಗಂಟಲವರೆಗೂ ಕುಡಿದು ಕಿತ್ತಾಡತೊಡಗಿದರು. ಮುಸ್ಲಿಂ ಸಮುದಾಯಗಳೂ ಒಳಗೊಂಡಂತೆ ಅಲ್ಲಿನ ಎಲ್ಲರೂ ಅವರ ಜಗಳದಲ್ಲಿ ತಲ್ಲೀನರಾಗಿದ್ದರು. ಆವೊತ್ತು ಅವರು ಬಹು ಭೀಕರವಾಗಿ ಹೊಡೆದಾಟಕ್ಕಿಳಿದಿದ್ದರು. ಆ ಕ್ಷಣಕ್ಕಾಗೇ ಕಾಯುತ್ತಿದ್ದ ನನಗೆ ಶಿವಣ್ಣ, ಹೆಂಡತಿಯನ್ನು ಬೀದಿಗೆ ಎಳೆದು ತಂದು ಬಡಿಯತೊಡಗಿದ್ದು ಕಂಡಿತು. ಅವಳು ಧರಿಸಿದ್ದ ಕೆಂಪು ಕಾಚಾ ಮತ್ತು ಕಪ್ಪು ಬ್ರಾ [ಅದು ಕೂಡ ಚರ್ಚಿನಲ್ಲಿ ಕೊಟ್ಟಿದ್ದು] ನನ್ನ ಕಣ್ಣಿಗೆ ಆಗಾಗ ಬೀಳುತ್ತಿದ್ದದ್ದು ಇವೊತ್ತಿಗೂ ಹಾಗೇ ಕಣ್ಣಲ್ಲಿ ಇದೆ. ಒಮ್ಮೆಲೇ ಅವರ ಮನೆಯೊಳಗೆ ಓಡಿ ಹೋಗಿ ಆ ಗಂಟುಮೂಟೆಯಿಂದ ಹೊರಗೆ ಕಾಣುತ್ತಿದ್ದ ಜೀನ್ಸ್ ಪ್ಯಾಂಟನ್ನು ಎಳೆದುಕೊಂಡು ನೇರವಾಗಿ ನನ್ನ ಮನೆಗೆ ಓಡಿದವನೇ ಆ ಕ್ಷಣವೇ ಹಾಕಿಕೊಳ್ಳಲು ಯತ್ನಿಸಿ, ಸಾಧ್ಯವಾಗದೆ ಅತೀವ ಬೇಸರದಿಂದ ನರಳಿದೆ. ಅದು ನನಗಿಂತ ಸಣ್ಣ ವಯಸ್ಸಿನವರ ಪ್ಯಾಂಟ್ ಆಗಿತ್ತು. ಅದು ನನ್ನ ಮೊಣಕಾಲನ್ನಷ್ಟೇ ಮುಚ್ಚುವಂಥದಾಗಿತ್ತು. ಆಮೇಲೆ ಅವರು ಇಲ್ಲಿ ಇರುವವರೆಗೂ ಅದನ್ನು ನೆಮ್ಮದಿಯಿಂದ ನೋಡಲಾಗಲೇ ಇಲ್ಲ. ಬಹಳ ಕಾಲ ನನ್ನಲ್ಲೇ ಇದ್ದು ಅದನ್ನು ಧರಿಸಲೂ ಆಗದೆ, ಹಾಗೇ ಇಡಲೂ ಆಗದೆ ಮೂಲೆಯಲ್ಲಿ ಬಿದ್ದಿದ್ದು ಅದನ್ನು ನನ್ನ ಅಮ್ಮ ತಲೆದಿಂಬಿಗೆ ತುರುಕಿದರು.

ಸಿಸ್ಟರ್ ನಿರ್ಮಲ: ಮಾತೃವಾತ್ಸಲ್ಯದ ಸಂಪಗೆ ವೃಕ್ಷ

೯೦ರ ದಶಕದ ಮಧ್ಯಭಾಗದಲ್ಲಿ ಬಳ್ಳಾರಿಯಿಂದ ವೆಂಕಟಾಲ ಗ್ರಾಮದ ರೋಮನ್ ಕ್ಯಾಥೋಲಿಕ್ ಚರ್ಚ್ ಗೆ ನಿರ್ಮಲ ಎಂಬ ಈ ವಾತ್ಸಲ್ಯಮಯಿ ಬಂದಾಗ, ನಾವೆಲ್ಲರೂ ಮತ್ತೊಮ್ಮೆ ಭಯಭೀತರಾಗಿದ್ದೆವು. ಸ್ವಪ್ನದಲ್ಲೂ ಬೆಂಕಿಯಂತೆ ಸುಟ್ಟು, ಮೈ ಮೂಳೆಗಳು ಬೂದಿಯಾಗುವಷ್ಟರ ಮಟ್ಟಿಗೆ ಕಲಕಿ ಹೋಗಿದ್ದೆವು. ಕಾರಣ ಅಲ್ಲಿಯವರೆಗೂ ಬಂದ ಸನ್ಯಾಸಿನಿಯರೆಲ್ಲರೂ ನಮ್ಮನ್ನು ವಿಧವಿಧವಾಗಿ ಹಿಂಸಿಸಿ ಹೋಗಿದ್ದರು. ನಮ್ಮ ಬೀದಿಯ ನಾಯಿ ಒಮ್ಮೆ ಚರ್ಚ್ ನ ತೋಟಕ್ಕೆ ನುಗ್ಗಿದಾಗ, ಐದು ಜನ ಸನ್ಯಾಸಿನಿಯರು ಒಟ್ಟಿಗೆ ಸೇರಿಕೊಂಡು ದೊಣ್ಣೆಗಳಿಂದ ಹುಚ್ಚು ಆವೇಶದಲ್ಲಿ ಬಡಿದು ಹಾಕಿದ್ದರು. ಅದರ ತಲೆಯನ್ನು ಒಡೆದು ಸಿಗಿದು, ಕುತ್ತಿಗೆಗೆ ಹಗ್ಗ ಬಿಗಿದು ಹೊರಗಡೆ ಎಳೆದು ಹಾಕಿದ್ದರು. ಇಂಡಿಯನ್ ಎಕ್ಸ್ ಪ್ರೆಸ್ ಪೇಪರ್ ಹಾಕಿಸಿಕೊಳ್ಳುತ್ತಿದ್ದ ಅವರು, ನಮ್ಮನ್ನು ನೋಡುತ್ತಿದ್ದ ರೀತಿಯೇ ಭೀತಿ ಹುಟ್ಟಿಸುವಂಥದ್ದು. ಒಮ್ಮೊಮ್ಮೆ ಗೇಟಿಗೆ ಸಿಕ್ಕಿಸಿ ಹೋಗುತ್ತಿದ್ದ ಪೇಪರ್ ನೆಲಕ್ಕೆ ಬಿದ್ದು ಹೋದಾಗ ನಾವು ಅದನ್ನು ಕದ್ದು ಮನೆಗೆ ತಂದುಕೊಂಡು ಓದುತ್ತಿದ್ದೆವು. ಕೇರಳದ ಪಾದ್ರಿಯ ಕೋಣೆ ಕಡೆಗೆ ಅವರು ಹೊತ್ತಲ್ಲದ ಹೊತ್ತಿನಲ್ಲಿ ನಡೆದು ಹೋಗುತ್ತಿದ್ದುದನ್ನು ನಾವು ಎಷ್ಟೋ ಸಲ ನೋಡಿದ್ದೇವೆ. ಫರಂಗಿ ತೋಟ, ಒತ್ತೊತ್ತಾಗಿ ಬೆಳೆದ ತೆಂಗಿನಮರ, ಸಂಪಗೆಮರಗಳ, ವಿಧವಿಧವಾದ ದೈತ್ಯಮರಗಳ ನಡುವೆ ಕಲ್ಲುಗೋಡೆಯಿಂದ ನಿರ್ಮಿಸಲಾದ ಸ್ನಾನಗೃಹಗಳಿದ್ದವು. ಅವರೆಲ್ಲರೂ ಅದೆಷ್ಟು ಚಲನಶೀಲರಾಗಿರುತ್ತಿದ್ದರೆಂದರೆ, ನಾವೇನಾದರೂ ತಪ್ಪು ಮಾಡಿ ತಪ್ಪಿಸಿಕೊಳ್ಳಲೆತ್ನಿಸಿದಾಗ ಮೃಗದ ಕ್ರೋಧದಲ್ಲಿ ನಮ್ಮನ್ನು ಬೆನ್ನಟ್ಟಿ ಹಿಡಿದುಕೊಳ್ಳುತ್ತಿದ್ದರು.

ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡುತ್ತಿದ್ದ ಸಿಸ್ಟರ್ ನಿರ್ಮಲ, ನಾವು ಅವರ ಪರಿಮಳಭರಿತ ಸಂಪಗೆವೃಕ್ಷದ ಎದೆಯಾಳದಲ್ಲಿ ಇಳಿದು ಸುಖೋಲ್ಲಾಸದಲ್ಲಿ ವಿಹರಿಸುವ ಮುನ್ನವೇ, ಅವರು ನಮ್ಮೊಳಗೆ ಇಳಿದುಹೋಗಿದ್ದರು. ಪ್ರತಿ ಬುಧವಾಗ ಬೆಳಗ್ಗೆ ರೋಗಿಷ್ಟರನ್ನು ಶುಶ್ರೂಷೆಗೊಳಪಡಿಸಿ, ಔಷಧಿ ನೀಡುವುದರ ಜೊತೆಗೆ ಅದೇ ದಿನ ಸಂಜೆ ಬಡಬಗ್ಗರಿಗೆ ಮೊಟ್ಟೆ, ಹಾಲು, ಬಿಸ್ಕೆಟ್, ಬಟ್ಟೆಬರೆಗಳನ್ನು ನೀಡಲು ಪ್ರಾರಂಭಿಸಿದರು. ಪ್ರಾರ್ಥನಾ ಗೃಹದ ಎದುರಿಗೆ ನಮ್ಮನ್ನೆಲ್ಲ ನಿಲ್ಲಿಸಿಕೊಂಡು ನೆಲ್ಲಿಕಾಯಿ ಕಿತ್ತು ಕೊಡುತ್ತಿದ್ದರು. ಪ್ರತಿಸಂಜೆ ಫ್ರಿಡ್ಜ್ ನಲ್ಲಿರಿಸಿದ್ದ ಸಮುದ್ರ ಮೀನು, ಕೋಳಿಮಾಂಸವನ್ನು ದೊಡ್ಡ ದೊಡ್ಡ ಪಾಲಿಥೀನ್ ಚೀಲದ ತುಂಬ ತುಂಬಿಸಿ ಕೊಡುತ್ತಿದ್ದರು. ಮಾಂಸವನ್ನು ಬಹುವಾಗಿ ಪ್ರೀತಿಸುತ್ತಿದ್ದ ನನ್ನ ಅಪ್ಪ ಅದನ್ನು ಮಕ್ಕಳು ತಿನ್ನಲೆಂದು ಕೆಲಸದಿಂದ ಬಂದು ಗೋಡೆಗೆ ಸೈಕಲ್ ನಿಲ್ಲಿಸಿದವರೇ, ಚರ್ಚ್ ಗೇಟ್ ಕಡೆಗೆ ದೌಡಾಯಿಸುತ್ತಿದ್ದರು. ಅಷ್ಟೊತ್ತಿಗೆ ಮಾಂಸ ಖಾಲಿಯಾಗಿದ್ದರೆ ಬೇರೆಯವರ ಹತ್ತಿರ ಕೇಳಿ ತಂದುಕೊಂಡು ನಮಗೆ ಬೇಯಿಸಿ ಕೊಡುತ್ತಿದ್ದರು. ಪಾದ್ರಿಯ ಕೋಣೆಯ ಸುತ್ತಮುತ್ತಲು ಬೆಳೆದುಕೊಂಡಿದ್ದ ತೊಗರಿ ಗಿಡಗಳಲ್ಲಿ ಕಾಯಿ ಕೀಳಲು ಬಿಡುತ್ತಿದ್ದ ಸಿಸ್ಟರ್ ನಿರ್ಮಲ, ನಮಗೆ ಬೇಳೆಕಾಯಿಗಳನ್ನು ಕೊಡುತ್ತಿದ್ದರು. ಕ್ರಿಸ್ ಮಸ್ ಹಬ್ಬದ ದಿವಸ ಮನೆಮನೆಗೆ ಬಂದು ಪ್ರತಿಯೊಬ್ಬರಿಗೂ ಚೀಟಿ ಕೊಟ್ಟು, ಪ್ರೀತಿಯಿಂದ ಕಷ್ಟಸುಖ ಆಲಿಸುತ್ತಿದ್ದರು. ನಮಗೆಲ್ಲ ಚರ್ಚ್ ಕೂಡ ಒಂದು ಮನೆ ಎನಿಸಿದ್ದು ಆಗಲೇ. ಅಷ್ಟಾದರೂ ಸಿಸ್ಟರ್ ನಿರ್ಮಲ ನಮ್ಮ ಬೆನ್ನು, ಕೈಗಳಿಗೆ ಬಿದಿರು ದೊಣ್ಣೆಯಿಂದ ಹಿಂದಿನ ಸನ್ಯಾಸಿನಿಯರಿಗಿಂತ ಕಡಿಮೆ ಬಿರುಸಿನಲ್ಲಿ ಬಾರಿಸದೇ ಬಿಡಲಿಲ್ಲ.

ಎಷ್ಟೋ ಕ್ರಿಸ್ ಮಸ್ ಗಳು ಕಳೆದುಹೋದ ಕಣ್ಣುಗಳಲ್ಲೇ ಸಿಸ್ಟರ್ ನಿರ್ಮಲ ನಿರ್ಗಮಿಸಿದರು; ತಲೆ, ದೇಹಗಳಂತೆ ಸಿಲ್ವರ್ ವೃಕ್ಷಗಳನ್ನು ಕತ್ತರಿಸುವ ಹೊಸ ಸನ್ಯಾಸಿನಿಯರು ಅವ್ಯಾಹತವಾಗಿ ಬರತೊಡಗಿದರು.

‍ಲೇಖಕರು avadhi

16 January, 2008

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading