-ಅಪರ್ಣಾ ಹೆಗಡೆ
ಬ್ರಿಸ್ಬೇನಿನ ಮುಖ್ಯ ರಸ್ತೆಯಲ್ಲಿನ ವೈನ್ ಶಾಪ್
ನಾನು,ಅವಳ ನೆನಪಿನಲ್ಲಿ ಮೊದಲ ಬಾರಿ ವೈನ್ ಕುಡಿದದ್ದು
ಬ್ರಿಸ್ಬೇನಿನ ವೈನ್ ಶಾಪ್ ಪಕ್ಕದಲ್ಲೊಂದು ಅಂಗಡಿ
ತೂಗು ಬಿಟ್ಟ ಆಕಾಶಬುಟ್ಟಿಯಂತಾ ಲೋಲಕವ ಕೊಡಿಸಿದ್ದೆ
ಬ್ರಿಸ್ಬೇನಿನ ಆ ತಿರುವಿನ ನಾಲಕ್ಕನೆಯ ಮನೆಯ
ಎರಡನೇ ಕೋಣೆಯಲ್ಲಿಯೇ ನಾನು ಅವಳು ಕೂಡಿದ್ದು
ಆವತ್ತು ಪ್ರೇಮಿಗಳ ದಿನವಾಗಿತ್ತು
ಬ್ರಿಸ್ಬೇನಿನ ಚಳಿಗಾಲವೆಂದರೆ ಹೂವುಗಳ ಹಬ್ಬ
ಕಿಟಕಿಯ ಅಂಚಿನಲ್ಲಿ ವಾಸ್ನಲ್ಲಿ ಇಟ್ಟ ರೊಹಿಡಾ ಹೂವು
ಮೂರುದಿನದಿಂದ ನಗುತ್ತಲೆ ಇದೆ
ಥೇಟ್ ಅವಳು ಕೊನೆಯ ಸಲ ನೋಡಿ ನಕ್ಕಹಾಗೆ
ಬ್ರಿಸ್ಬೇನಿನ ಚಳಿಗಾಲದಲ್ಲಿ ಗಿಟಾರು ನುಡಿಸುವ ಚಾಳಿ
ಕಲಿಸಿದ್ದು ಅವಳೆ
ಅವಳನ್ನೇ ಮೀಟಿದ ಅನುಭವ
ಬ್ರಿಸ್ಬೇನಿನ ಹೂವಿನ ಅಂಗಡಿಯ ಸಾಲಿನ ಕೊನೆಯಲ್ಲಿ
ಗಿಟಾರು ನುಡಿಸುವ ಹುಡುಗ
ಗದ್ದಕ್ಕೆ ಕೈಯಿಟ್ಟು ಅವನನ್ನೆ ನೋಡುತ್ತಿರುವ ಜೇನುಗಣ್ಣಿನ ಚೆಲುವೆ
ಚಳಿ ಅವರಿಬ್ಬರ ಸೋಕುವುದೇ ಇಲ್ಲ
ರೊಹಿಡಾ ಹೂವು ಬಾಡುವುದೇ ಇಲ್ಲ
ಕಂದು ಮಿಶ್ರಿತ ಚಿನ್ನದ ಬಣ್ಣದ ಬಿಯರಿನೊಳಗೆ
ಬಾರ್ಲಿ ಕಣ್ಣಿನ ಚೆಲುವೆ
ಗ್ಲಾಸಿನೊಳಗೆ ನುಲಿಯುತ್ತಾಳೆ
ಪಟಕ್ಕನೇ ಇಸ್ ಕ್ಯೂಬ್ ಬಿದ್ದಾಗ ಕಣ್ಣುಮುಚ್ಚಿ ಬೆಚ್ಚುತ್ತಾಳೆ
ಎತ್ತಿಕೊಂಡೆ ಗ್ಲಾಸ್
ಅವಳ ಬಡನಡುವನ್ನು ಹಿಡಿದಂತೆ
ತುಟಿಗಿಟ್ಟು ಸಂತೈಸಿದೆ
ಇದೀಗ ನನ್ನ ಒಳಗೆ ಸೇರಿಕೊಂಡು ಬೆಚ್ಚಗಿದ್ದಾಳೆ ನನಗೂ ಬೆಚ್ಚಗಾಗಿಸುತ್ತಾಳೆ.
ಈ ಬ್ರೀಸ್ಬೆನ್ ಹೂವುಗಳ ಅಂಗಡಿಯಲ್ಲಿನ
ರೊಹಿಡಾದ ಪಕಳೆಗಳ ಮೇಲೆ
ಹಿಮಗಳು ಕವಿತೆಯನ್ನು ರಚಿಸುತ್ತವೆ
ನನಗೋ ಆ ಹಿಮಗಳ ಕರಗಿಸಿ
ರೊಹಿಡಾ ಪಕಳೆಗಳ ಅವಳ ಮೈತುಂಬ ಅಲಂಕರಿಸುವ ಹಂಬಲ
ಒಂದು ರಾತ್ರಿ ಬ್ರಿಸ್ಬೇನಿನ ಕಡುಕತ್ತಲಲ್ಲಿ ನನ್ನ ಅಪ್ಪಿಕೊಂಡು ಗಾಢವಾಗಿ ಚುಂಬಿಸಿದ್ದಳು
ಆಗ ಅವಳ ಬಾಬ್ಡ್ ಕೂದಲೊಳಗೆ ರೊಹಿಡಾ ಘಮವಿತ್ತು






0 Comments