ಬ್ರಾ ಎಂಬ 'ಬೆಣ್ಣೆಬಟ್ಟಲು'

ಬಿಲ್ಹಣನ ರುದ್ರ ಶೃಂಗಾರ ಕಾವ್ಯವೂ
ಆನ್ ಲೈನ್ ನಲ್ಲಿ ಬಂದ ಬೆಣ್ಣೆಬಟ್ಟಲೂ!

ಕಾಶ್ಮೀರಿ ಕವಿ ಬಿಲ್ಹಣ ತನ್ನ ರುದ್ರ ಶೃಂಗಾರ ಕಾವ್ಯ ‘ಚೌರ ಪಂಚಸಿಕಾ’ದಲ್ಲಿ (Caurapancasika) ಹೆಣ್ಣಿನ ದೇಹದ ಬಾಗು ಬಳಕುಗಳನ್ನು ನೋಡುವುದರ ಜತೆ ಓದುವುದೂ ಸೊಗಸು ಎನ್ನುವಂತೆ ರಚಿಸಿರುವ ಐವತ್ತೂ ಪದ್ಯಗಳು ನನಗಿಷ್ಟ.
ಮೊನ್ನೆ ಖಾಸಗಿ ಬೈಠಕ್ ನಲ್ಲಿ ಸ್ನೇಹಿತ ವಾಚಿಸಿದ, “ಇಂದಿಗೂ ನನ್ನ ಧ್ಯಾನಿಸುವ ಅವಳ ಒದ್ದೆ ಕಣ್ಣುಗಳು ದಿನದ ಕೊನೆಗೆ ಎದುರಾಗಿ, ಪ್ರತಿರೋಧವಿಲ್ಲದೇ ಎದೆಯ ಮೇಲಿನ ಬಂಗಾರದಂಚಿನ ಬಟ್ಟೆ, ಘನ ಜಘನ ತಾಕುತ್ತಿರುವ ಮುತ್ತಿನ ಹಾರ ಸೆಳೆಯಲು ಬಿಟ್ಟು/ ನನ್ನ ಪ್ರೇಮದಾಕ್ರಮಣವನ್ನು ಬರಿಗೈಯಿಂದಲೆ ಎದುರಿಸಿ, ತನ್ನ ಹೆಮ್ಮೆಯ ಮೊಲೆಗಳ ರುಚಿಯ ಸವಿಯಲು ಆಹ್ವಾನ ನೀಡಿದರೆ/ ನಾನು ರಾಜ್ಯದ ದೊರೆಗಳೂ, ಸ್ವರ್ಗದ ಒಡೆಯರೂ ಅನುಭವಿಸಬಹುದಾದ ಎಲ್ಲ ಸುಖಗಳನ್ನು ಕಾಲಕಸ ಮಾಡಿಬಿಡುತ್ತೇನೆ, (ಅನುವಾದ – ಚಿದಂಬರ ನರೇಂದ್ರ)” ಸಾಲುಗಳು ಅವನ ದನಿಯಿಂದಾಗಿ ಹೆಚ್ಚೇ ಎನ್ನುವಷ್ಟು ಇಷ್ಟವಾದವು.
ಮೆಹಫಿಲ್ ನಿಂದ ಹೊರಬಂದು, “ಓದುತ್ತಿದ್ದವನ ಓದಿನ ಶೈಲಿ, ಧ್ವನಿಯ ಏರಿಳಿತ ನನ್ನ ಮನಸ್ಸಿನಲ್ಲೂ ‘ಎದೆಗಳ’ ಬಗ್ಗೆ ವರ್ಣನಾತೀತ ಉದ್ಭಾವ ಹುಟ್ಟಿಸುತ್ತಿತ್ತು,” ಎಂದು ಮುಂದುವರಿಸುತ್ತಿದ್ದವಳ ಮಾತುಗಳನ್ನು ಶ್ಶ್ ಎನ್ನುತ ತುಟಿಯ ಮೇಲೆ ತೋರು ಬೆರಳು ಒತ್ತಿ ವಿನಯದಿ ತಡೆದಳು ಸ್ನೇಹಿತೆ. ಶ್ರಾವಣದಲ್ಲಿ ಗೌರಿಗೆ, ಮಹಾನವಮಿಯಲ್ಲಿ ದೇವಿಗೆ ಆರತಿ ಮಾಡುವಾಗ ‘ಕುಂಭಕುಚ ಜಗದಂಬೆ ನಂಬಿದೆ ನಿನ್ನ ಪಾದ’ ಎಂದು ಅವ್ವ ಹಾಡಿದ ಮಂಗಳದ ದನಿ, ಬಾಲ್ಯದಲ್ಲಿ ಕೇಳಿದ ತ್ರಿಮೂರ್ತಿಗಳನ್ನೇ ಮಕ್ಕಳಾಗಿಸಿ ಉಣಿಸು ನೀಡಿದ ಮಹಾಸತಿಯ ಕಥೆ ಇನ್ನೂ ನೆನಪಿದೆ. ಧಾರ್ಮಿಕವಾಗಿ ‘ಅವುಗಳನ್ನು’ ಆರಾಧಿಸುವುದಾದರೆ ಲೌಕಿಕದಲ್ಲಿ ಮಾತನಾಡುವಾಗ ಪಿಸುಗುಡುವುದೇಕೆ ಎನ್ನುವುದು ನನಗಿನ್ನೂ ಅರ್ಥವಾಗಿಲ್ಲ.
ಈ ವಿಷಯದಲ್ಲಿ ನಯನಾಜೂಕಿಲ್ಲದ ವಡ್ಡಿ ಎಂದು ಎರಡನೇ ಅಕ್ಕ ಉಗಿಯುವಾಗಲೆಲ್ಲ ನಾನಿರುವ ರೀತಿಗೆ ಮತ್ತೊಂದು ಸ್ವಾಗತಾರ್ಹ ಬೈಗುಳವೆಂದು ತಲೆಯ ಮೇಲೆ ಇನ್ನೊಂದು ಕಿರೀಟವಿಟ್ಟುಕೊಳ್ಳುತ್ತೇನೆ. ಪ್ರತಿಸಲವೂ ಊರಿಂದ ಹೊರಡುವಾಗ ಇನ್ನೇನು ಆಟೋ ಹತ್ತಬೇಕಿರುತ್ತದೆ. ನಿಂತಲ್ಲಿಂದಲೇ, ‘ಒಣಗಾಕ ಹಾಕಿದ್ದ ಬ್ರಾ ಹಿತ್ತಲ್ದಾಗ ಅದಾವು ತಂಬಾ ಜಲ್ದಿ’ ಎಂದು ಚೀರುವುದನ್ನು ಕೇಳುವ ಅವ್ವ ಸ್ವಾದ-ಸೊನ್ನಿ ಇಲ್ಲದ ಮೂಳ ಎಂದ ಹಣೆ ಚಚ್ಚಿಕೊಳ್ಳುತ್ತಾಳೆ.

ಒಂದು ಸಲ ಅಕ್ಕ ತಂದು ಕೊಡಲ್ಲ ಬಿಟ್ಟು ಹೋಗು. ಮುಂದಿನ ಬಾರಿ ಬಂದಾಗ ಒಯ್ಯುವಂತಿ ಎಂದರೆ ಊಹೂಂ… ದುಬಾರಿ ಬೆಲೆ ಅವುಗಳನ್ನ ನಾ ಜಾಸ್ತಿ ಸಾಕಲ್ಲ… ಇರೋದೇ ಎರಡು ಅಥವಾ ಮೂರು ಅದರಲ್ಲಿ ಎರಡನ್ನ ಇಲ್ಲೇ ಬಿಟ್ಟು ಹೋಗಲಾರೆ ತಂದು ಕೊಡೇ ಎಂದು ಗೋಗರೆದಿದ್ದೆ. ನಾನೇ ಹೋಗಿ ತರಬಹುದು ಆದರೂ ಇವೆಲ್ಲ ನನ್ನ ಸೋಮಾರಿತನದ ಪರಮಾವಧಿ ಅಷ್ಟೇ.
ಡ್ರೆಸ್, ಮೇಕಪ್, ಆಭರಣಗಳ ಬಗೆಗಿನ ನನ್ನ ದಿವ್ಯ ನಿರ್ಲಕ್ಷ್ಯಕ್ಕೆ ಬೇಜಾರು ಮಾಡಿಕೊಳ್ಳುವ ದೊಡ್ಡಕ್ಕ, ‘ಹುಡುಗರೇ ಇದ್ದ ಪ್ರಾಥಮಿಕ ಶಾಲೆಗೆ ಸೇರಿಸಿದ್ದಕ್ಕೆ ತಂಗಿ ಹೀಗಾದಳು’ ಎಂದು ಕನಿಕರ ಪಡುತ್ತಾಳೆ.
ನಾನು ಚಿಕ್ಕವಳಿದ್ದಾಗ ಮನೆಯ ಕಾಂಪೌಂಡ್ ಪಕ್ಕದಲ್ಲೇ ಕಾಕಾ ಶುರು ಶುರು ಮಾಡಿದ್ದ ಶಾಲೆಯಲ್ಲಿ ಅಪ್ಪನ, ಕಾಕಂದಿರ ಸ್ನೇಹಿತರ ಹದಿನಾರು ಗಂಡುಮಕ್ಕಳೇ ಇದ್ದ ಮೊದಲ ಬ್ಯಾಚಿನ ಏಕೈಕ ಹುಡುಗಿ ನಾನು. ಈಗಲೂ ನನ್ನ ಬೆಸ್ಟ್ ಫ್ರೆಂಡ್ಸ್ ಹುಡುಗರೇ.
ಹೆಣ್ಣುಮಕ್ಕಳ ಸ್ಕೂಲಿನಲ್ಲಿ ಓದಿ, ಕೋ-ಎಜ್ಯೂಕೇಷನ್ ನ ಹೈಸ್ಕೂಲ್ ಸೇರಿದ ಕ್ಲಾಸ್ ಮೇಟ್ ಹುಡುಗಿಯರು ನನ್ನ ಸ್ನೇಹಿತರ ಕಡೆ ನೋಡಿ ಪಕ್ಕದವಳ ಕಿವಿಯಲ್ಲಿ ಪಿಸುಗುಡುವಾಗಲೇ ಹುಡುಗ-ಹುಡುಗಿಯ ನಡುವಿನ ವ್ಯತ್ಯಾಸ ಗೊತ್ತಾಗಿದ್ದು ನನಗೆ. ಒಮ್ಮೆ ನಮ್ಮ ಕ್ಲಾಸ್ ಪಕ್ಕವೇ ಇದ್ದ ಪಿಯು ಲೇಡಿಸ್ ರೂಮಿನಲ್ಲಿ ಯೂನಿಫಾರ್ಮ್ ಸರಿ ಮಾಡಿಕೊಳ್ಳುತ್ತಿದ್ದವಳನ್ನು ಮಾತನಾಡಿಸಿದ ಇನ್ನಿಬ್ಬರು ಹುಡುಗಿಯರು ನಿನ್ನದು ಫ್ರಂಟ್ ಆರ್ ಬ್ಯಾಕ್? ಎಂದರು.
ನನಗೆ ಈ ಪದ ಪರಿಚಯವಿರುವುದು ಪಂದ್ಯ ಸೋತ ಹುಡುಗರ ಹೊಕ್ಕಳ ಸುತ್ತ ನಾನು ಬುಗುರಿ ತಿರುಗಿಸುವುದಾರೆ ಅದು ಫ್ರಂಟ್, ನನ್ನ ಬೆನ್ನ ಮೇಲೆ ಹುಡುಗರು ಬುಗುರಿ ತಿರುಗಿಸುವುದಾದರೆ ಅದು ಬ್ಯಾಕ್. ಈಗೇಕೆ ಆ ವಿಷಯ ಕೇಳುತ್ತಿದ್ದಾರೆ ಎಂದುಕೊಳ್ಳುತ್ತಿದ್ದವಳಿಗೆ “ನಿನ್ನ ಬ್ರಾ ಬಟನ್ ಹಿಂದೆನಾ, ಮುಂದೆನಾ” ಎಂದು ಸಂದರ್ಭ ಸಹಿತ ವಿವರಿಸಿ ಪ್ರಶ್ನಿಸಿದರು. “ಇನ್ನೂ ಯೂಸ್ ಮಾಡ್ತಿಲ್ಲ” ಎಂದುತ್ತರಿಸಿದ್ದಕ್ಕೆ, ನಳನಳಿಸುತ್ತಿರುವ ತಮ್ಮ ಹರೆಯದ ಪತಾಕೆಗಳ ಕಡೆ ನೋಡಿಕೊಂಡು, ಹುಡುಗಿ ಎಂದು ಕರೆಯಿಸಿಕೊಳ್ಳಲು ಅನರ್ಹಳು ಎನ್ನುವಂತಹ ನೋಟವೊಂದನ್ನು ನನ್ನೆಡೆಗೆ ಬಿಸಾಕಿದರು.
ಅದೇ ಸಂಜೆ ಇದರ ಉತ್ತಾರರ್ಧದ ಅರಿವಿಲ್ಲದೆ, ದಿನದ ರೂಢಿಯಂತೆ ಶಾಲೆಯ ವರದಿ ಜತೆ ಇದನ್ನೂ ಒದರಿದಾಗಲೇ ಅಕ್ಕ (ಚಿಕ್ಕ ಸೋದರ ಮಾವನ ಹೆಂಡತಿ) ನಿರ್ಧರಿಸಿದಳೆಂದು ಕಾಣುತ್ತದೆ ಅರಳುತ್ತಿರುವ ಸಿರಿಮೊಲ್ಲೆಗಳಿಗೆ ಸಂಕಲೆ ತೊಡಿಸಲು! ಮರುದಿನ ಟೌನಿನ ಒಳಉಡುಪುಗಳ ಅಂಗಡಿಗೆ ನನ್ನ ಎಳೆದುಕೊಂಡು ಹೋದವಳು. ಕಣ್ಣಲ್ಲೇ ಯಾವ ಸೈಜ್ ಎಂದು ಕೇಳಿದ ಸೇಲ್ಸ್ ಆಂಟಿಗೆ, ಇವಳಿಗೆ ಎನ್ನುತ್ತ ಮೊದಲ ಸಾರಿ ಎಂದೂ ಸೇರಿಸಿದಳು.
ನನ್ನನ್ನು ಪರದೆಯ ಹಿಂದೆ ಕರೆದುಕೊಂಡು ಹೋದ ಆಂಟಿ ಟೇಪಿನಲ್ಲಿ ಎದೆಯ ಕೆಳಗಿನ, ನಡುಎದೆಯ ಸುತ್ತಳತೆ ನೋಡಿ ಬ್ರಾ ಕೈಗಿಟ್ಟಳು. ಅದನ್ನು ಧರಿಸಿದ್ದಕ್ಕೆ ಮುಜುಗರವಾಗಿ ನಮ್ಮೂರಿನ ಮಾರ್ಚ್ ಬಿಸಿಲಲ್ಲಿ ಸ್ವೆಟರ್ ಹಾಕಿಕೊಂಡು ಕ್ಲಾಸಿಗೆ ಹೋಗುವಾಗ ತೆಳ್ಳಗಿದ್ದರೆ ಇಷ್ಟೆಲ್ಲ ಪಡಿಪಾಟಲು ಪಡಬೇಕಿರಲಿಲ್ಲ ಎನಿಸಿ ನನ್ನ ಒಟ್ಟು ದುಂಡುತನಕ್ಕೆ ಕಾರಣಳಾದ ಅಜ್ಜಿ ಮೇಲೆ ಸಿಟ್ಟು ಬಂದಿತ್ತು.

ಅಪ್ಪ-ಅವ್ವನ ನಾಲ್ಕು ಮಕ್ಕಳಲ್ಲಿ ಕೊನೆಯ ಸಂತಾನ, ಇಬ್ಬರು ಕಾಕಂದಿರ, ನಾಲ್ಕು ಜನ ಸೋದರತ್ತೆಯ ಮಕ್ಕಳೂ ಸೇರಿದಂತೆ ವಂಶದಲ್ಲೇ ಕೊನೆಯ ಕೂಸಾದ ನನ್ನನ್ನು ಬೇಗ ಶಾಲೆಗೆ ಕಳುಹಿಸಲು ಶುರು ಮಾಡಿದರೆ ಚೆನ್ನಾಗಿ ತಿನಿಸುಣಿಸಲು ಆಗುವುದಿಲ್ಲ ಎಂದು ಏಳು ತುಂಬಿದ ನಂತರ ಸೀದಾ ಒಂದನೇ ಇಯತ್ತೆಗೆ ಸೇರಿಸಿದ್ದಳು ಅಜ್ಜಿ.
ಇಂದಿಗೂ ಗುಂಡ-ಗುಂಡಗೇ ಇರುವ ನಾನು 36-28-36ರ ಬಗ್ಗೆ ಎಂದೂ ತಲೆಕೆಡಿಸಿಕೊಂಡಿರಲಿಲ್ಲ. ಕಳೆದ ವರ್ಷ ಆರೋಗ್ಯ ಕೈಕೊಟ್ಟಿದ್ದಕ್ಕೆ ತೂಕ ಕರಗಿಸಬೇಕಾಗಿ ಬಂತು. ಪರಿಣಾಮ ಎದೆಯಳತೆ ಸ್ಟ್ಯಾಂಡರ್ಡ್ ಸೈಜಿಗೆ ಬಂದಿದ್ದಕ್ಕೆ ಸರಿಹೊಂದಬಹುದಾದ ಬ್ರಾ ಪ್ಯಾಟರ್ನ್ ಗಳ ಬಗ್ಗೆ ನೆಟ್ ನಲ್ಲಿ ಪಿಎಚ್.ಡಿಗಾಗುವಷ್ಟು ಮಾಹಿತಿ ಕಲೆ ಹಾಕಿದ್ದೆ.
ಇಷ್ಟವಾದ ಮಾದರಿ ದುಬಾರಿ ಎನಿಸಿ ವರಮಳೆ ಕರೆವ ಮುಗಿಲಂಥ ಇಷ್ಟಸಖನಿಗೆ ಬೆಣ್ಣೆಬಟ್ಟಲು (=ಬ್ರಾ!) ಆರ್ಡರ್ ಮಾಡಬೇಕಿತ್ತು ಎಂದು ಟೆಕ್ಟ್ಸ್ ಮಾಡಿದ್ದಷ್ಟೇ… ರೂಢಿಸಿಕೊಂಡ ಆದರ್ಶಗಳನ್ನು ಪಾಲಿಸುತ್ತ, ಬರುವ ಸಂಬಳದ ಮುಕ್ಕಾಲು ಪಾಲು ತನ್ನ ಶಾಲೆಗೆ ನೀಡುವ ಹುಡುಗಿ, ನನ್ನ ಹತ್ರ ದುಡ್ಡಿಲ್ಲ ಕಣೋ ಏನಾಯ್ತು ಗೊತ್ತ ಎಂದು ತುತ್ತೂರಿ ಊದಲು ಪೀಪಿ ಸರಿ ಮಾಡಿಕೊಳ್ಳುವುದು ಬೇಡ ಎನ್ನುವಂತೆ ಅರೆಕ್ಷಣದಲ್ಲಿ ಸಾಲು ಸಾಲು ಸ್ಮೈಲಿ ಜತೆ ಕಾರ್ಡ್ ನಂಬರ್ ಮತ್ತು ಬಿ ಕಂಫರ್ಟ್ ಅಂತ ರಿಪ್ಲೈ ಮಾಡಿದ.
ಆನ್ ಲೈನಿನಲ್ಲಿ ಬಂದು ಕೈ ಸೇರಿದ ಬೆಣ್ಣೆಬಟ್ಟಲುಗಳನ್ನು ಯೌವನಕ್ಕೆ ಸೊಗಸು, ಪ್ರಣಯಕೆ ಗೌರವ ತಂದು ಕೊಡುವ ತುಂಬಿದೆದೆಗೆ ತೊಡಿಸಿ ಟ್ರಯಲ್ ನೋಡುತ್ತಿದ್ದಾಗ, ಕಂಫರ್ಟ್? ಎನ್ನುವ ಅಕ್ಕರೆಯ ಸಂದೇಶಕ್ಕೆ ಫೋನು ಧನ್ಯತೆಯ ಭಾವದಲ್ಲಿ ಕಂಪಿಸಿತು.
ಅವನಿಗೆ ಕಳುಹಿಸೋಣವೆಂದು, ಸೊಂಟದಿಂದ ಸ್ವಲ್ಪ ಮೇಲೆ, ಕಂಠದಿಂದ ಚೂರು ಕೆಳಗೆ ಅದೇ ತುಂಬಿದ ಜೋನ್ಗೋಡ, ಅಲ್ಲ ಬಂಗಾರದ ಜೋಡು ಬಿಂದಿಗೆ, ಎಳೆ ಬಸವನ ಹೊಸ ಕೊಂಬು, ಬುಟ್ಟಿಯೊಳಗೆ ಬಚ್ಚಿಟ್ಟರೂ ಒಳಗಿಂದೊಳಗೆ ಮಿಸುಕಾಡುವ ಮೊಲದ ಮರಿ, ಈಗ ತಾನೇ ಹುಟ್ಟಿ ಬರುತ್ತಿರುವ ತಾವರೆಯ ಮೊಗ್ಗು, ಕಣ್ಮನಗಳಿಗೆ ಹಿಡಿಸಲಾಗದ ಹಿಗ್ಗನ್ನು ಕ್ಲಿಕ್ಕಿಸುವಾಗ ಬಾಗಿದ ಕಣ್ಣುಗಳಲ್ಲಿದ್ದ ಲಜ್ಜೆಗೆ ಸೆಲ್ಫೀ ಮೋಡ್ ನಲ್ಲಿದ್ದ ಫೋನೇ ನಾಚಿಕೊಂಡಿತು!!

‍ಲೇಖಕರು avadhi

December 22, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: