CAA ಸಕ್ಕರೆ ಪಾಕದಲ್ಲಿ ಅದ್ದಿದ ವಿಷದ ಕಡ್ಡಿ ಮಿಠಾಯಿ!

ಎನ್. ರವಿಕುಮಾರ್ ಟೆಲೆಕ್ಸ್

ಸಿಎಎ /ಎನ್‌ಆರ್‌ಸಿ ಗಲಾಟೆಗಳು ನಡೆದಿರುವ ಹೊತ್ತಿನಲ್ಲೇ ಸುಮಾರು  ನಡುರಾತ್ರಿ ದಾಟಿ ಗಾಢ ನಿದ್ದೆಯಲ್ಲಿದ್ದ ನನ್ನನ್ನು ಮೊಬೈಲ್ ಪೋನ್ ಸದ್ದು ಎಚ್ಚರಿಸಿತು..  ಈ ಅಕಾಲಿಕ ಕರೆ ಕ್ಷಣಕಾಲ ನನ್ನಲ್ಲಿ ದುಗಡವನ್ನೂ ಹುಟ್ಟು ಹಾಕಿತಲ್ಲದೆ ನಿದ್ದೆಯ ಮಂಪರು  ಕ್ಷಣಾರ್ಧದಲ್ಲೆ   ಇಳಿದು ಹೋಗಿ ಬೆವರು,  ಭಯದೊಂದಿಗೆ  ಎದ್ದು ಕುಳಿತಿದ್ದೆ.   ಪೋನ್ ಬಿಟ್ಟೂ ಬಿಡದಂತೆ  ರಿಂಗ್ ಆಗುತ್ತಲೆ ಇತ್ತು.  ಪತ್ರಕರ್ತನಾದವನಿಗೆ ಇಂತಹ ಅಕಾಲಿಕ ಕರೆಗಳು ಸಹಜವೆನಿಸಿದರೂ ಯಾಕೂ ಈ ರಾತ್ರಿಯ ಪೋನ್ ಸದ್ದು ನನ್ನಲ್ಲಿ ತುಸು ಹೆಚ್ಚಿನ  ಆತಂಕವನ್ನೆ ಸೃಷ್ಟಿಸಿತ್ತು.

“ಸಲಾಂವಾಲೈಕು ಬಯ್ಯಾ…..”

ಅತ್ತ ಕಡೆಯಿಂದ  ಶೆಟ್ಟಿ ಮಾತನಾಡುತ್ತಿದ್ದ , ಶೆಟ್ಟಿ ಎಂದರೆ  ನನ್ನ ಆತ್ಮೀಯ ಕಿರಿಯ ಗೆಳೆಯ, ಆತನ ಹೆಸರು ಅನ್ಸಾರ್ ಆಹಮ್ಮದ್ , ಅವನು ಶೆಟ್ಟರ ಅಂಗಡಿಯಲ್ಲಿ  ಕೆಲಸ ಮಾಡುತ್ತಿರುವುದರಿಂದ  ಅವನನ್ನು ನಾವೆಲ್ಲಾ ಅಷ್ಟೆ ಅಲ್ಲ, ಮುಸ್ಲಿಂ ಸಮುದಾಯದ ಗೆಳೆಯರೂ ಆವನನ್ನು ಶೆಟ್ಟಿ ಅಂತಲೆ ಕರೆಯುತ್ತಿದ್ದರು. ಪಿಯುಸಿ ಓದಿಕೊಂಡಿರುವ ಶೆಟ್ಟಿ ನ್ಯೂಸ್ ಪೇಪರ್‌ಗಳನ್ನು ಓದಿಕೊಂಡು ನಾಲ್ಕಾರು ಜನರ ಗುಂಪಿನ ಮಧ್ಯೆ ನಿಂತು ತನಗೂ ಬಹಳಷ್ಟು ವಿಷಯ ಗೊತ್ತು ಎನ್ನುವ ರೀತಿ ಪೋಸು ಕೊಡೋದು ಈತನ ಹವ್ಯಾಸ.

“ಅರೆ,  ಶೆಟ್ಟಿ  ಏನ್ ಸಮಾಚಾರಾ..? ಇಷ್ಟೋತ್ನಲ್ಲಿ  ಪೋನ್ ಮಾಡಿದಿಯಾ..?!”  ಎಂದು ಗಾಬರಿಯಿಂದಲೇ ಕೇಳಿದೆ.

“ಏನಿಲ್ಲಣ್ಣ.. ಈ ಸಿಎಎ /ಎನ್‌ಆರ‍್ಸಿ ಬಂದಿದೆಯಲ್ಲಾ ಅದ್ಕೆ ನಾವ್ ಏನೇನೂ ರೆಕಾರ್ಡ್ ಇಟ್ಕೋಬೇಕಣ್ಣ.? ನನ್ನತ್ರ ಈಗ ಆಧಾರ್ ಕಾರ್ಡು, ಓಟರ್ ಕಾರ್ಡು, ರೇಷನ್ ಕಾರ್ಡು ಇದೆ. ನನ್ನ ಹೆಂಡ್ತಿ, ಮಗಂದು  ಅಮ್ಮ, ಅವರ‍್ದೆಲ್ಲಾ ಇದೆ… ಆದ್ರೆ  ನಮ್ಮಪ್ಪಂದು, ನಮ್ಮಜ್ಜಂದು ಏನೂ ಇಲ್ಲ. ಅವ್ರು ಸತ್ತೊಗಿ ಬಹಳ ವರ್ಷ ಅದೋ .. ಈಗ ಏನ್ಮಾಡ್ಲಣ್ಣ..”

 

ಒಂದೇ ಉಸಿರಿಗೆ ಶೆಟ್ಟಿ ಪೊಲೀಸರೇ ಬಂದು ಮುಂದೆ ನಿಂತು ದಾಖಲೆ ಕೇಳುತ್ತಿದ್ದಾರೇನೋ ಎಂಬಂತೆ  ಭಯದಿಂದ ನನಲ್ಲಿ ಭಿನ್ನಹಿಸಿಕೊಳ್ಳತೊಡಗಿದ.
ಇಷ್ಟೊತ್ನಲ್ಲಿ ಇಂತಹದ್ದೊಂದು ಕಾಲ್ ಬರುತ್ತೆ ಅಂತ ಊಹಿಸೇ ಇರದ ನಾನು,  ಶೆಟ್ಟಿಯ ಯಾನೆ ಅನ್ಸಾರ್ ಆಹಮ್ಮದ್ ನ ಈ ಕಳವಳ ಕೇಳಿ ಕಂಗಾಲಾಗಿ ಬಿಟ್ಟೆ.

“ಶೆಟ್ಟಿ ಅಂತದ್ದೇನು ಆಗೋಲ್ಲ, ಈಗ ನೆಮ್ಮದಿಯಾಗಿ ನಿದ್ದೆ ಮಾಡು ಬೆಳಗ್ಗೆ ಮಾತಾಡೋಣ .. ”

ಎಂದು ತಪ್ಪಿಸಿಕೊಳ್ಳಲು ಯತ್ನಿಸಿದರೂ ಆತ ಬಿಡಲಿಲ್ಲ. ಕೊನೆಗೆ
“ನೀನು ಇಲ್ಲೆ ಹುಟ್ಟಿರೋದ್ರಿಂದ ನಿನಿಗ್ಯಾರು ರೆಕಾರ್ಡ್ಸ್
ಕೇಳ್ತಾರೆ ಬಿಡೋ..ನಾನೇ ಸಾಕ್ಷಿ ಹೇಳ್ತಿನಿ”

ಎಂದು ಆತನಿಗೆ  ಒಂದು ತಾಸು ಸಮಾಧಾನ ಮಾಡಿ ನಿದ್ದೆಗೆ ಹೊರಳಿದರೂ ನಿದ್ದೆ ಕಣ್ಣ ತಬ್ಬಲೇ ಇಲ್ಲ…

ಈ ಕಾಯ್ದೆಯ ಆತಂಕ ಈ ದೇಶದ ಅದೆಷ್ಟು ಜನ ಅನ್ಸಾರ್ ಆಹಮದ್ ಗಳನ್ನು  ಇಂತಹ ಹೊತ್ತಿನಲ್ಲಿ  ನಿದ್ದೆ ಗೆಡಿಸಿ ಕಾಡುತ್ತಿರಬಹುದು ಎಂದು ಯೋಚಿಸುತ್ತಲೆ  ಬೆಳಗು ಕಂಡಿದ್ದಾಯಿತು.

ಕೇಂದ್ರದ ಎನ್.ಡಿಎ ನೇತೃತ್ವದ ಸರ್ಕಾರ ದ ಮಹತ್ವಾಕಾಂಕ್ಷೆಯ ಕಾಯ್ದೆಗಳಾದ ಸಿಎಎ/ ಎನ್‌ಆರ್‌ಸಿ ಯನ್ನು   ವಿರೋಧಿಸುವ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳು ಈ ಕಾಯ್ದೆಯ ದೂರಗಾಮಿ ಪರಿಣಾಮಗಳನ್ನು  ಮತ್ತು ರಾಜಕೀಯ ದುರ್ಬಳಕೆಗೆ  ನೆಲೆಯಾಗಬಹುದಾದ ಅಪಾಯವನ್ನು ಎತ್ತಿ ಹಿಡಿಯುವಲ್ಲಿ ವಿಫಲವಾಗಿವೆ ಎನಿಸುತ್ತಿದೆ. ಇದರಿಂದಾಗಿ ಭಾರತದ ನೆಲದಲ್ಲಿನ ಮುಸ್ಲಿಂರಲ್ಲಿ   ಇಂತಹ ಆತಂಕವನ್ನು ತುಂಬುತ್ತಿದ್ದು ಅದು ಈಗ ಮುಸ್ಲಿಂರು ನೆಲೆ ಕಳೆದುಕೊಳ್ಳುವ ಭಯದಲ್ಲಿ ಪ್ರತಿಭಟನೆಗಿಳಿದಿದ್ದಾರೆ.  ಈ ಆತಂಕಗಳು ದೇಶದ ದಲಿತರು, ಆದಿವಾಸಿಗಳು ಅಂದರೆ ಭಾರತದ ಮೂಲನಿವಾಸಿಗಳ ಅಸ್ತಿತ್ವಕ್ಕೂ ಕಂಟಕವಾಗಬಹುದೇ? ಎಂಬ ಅನುಮಾನವೂ  ಬರದೆ ಇರದು.  ಗೋಳ್ವಾಲ್ಕರ್ ಪ್ರೇಣಿತ ರಾಷ್ಟ್ರೀಯತೆಯನ್ನು  ನಿರೂಪಣೆ ಮಾಡ ಹೊರಟವರ  ಕಮಂಡಲದಲ್ಲಿ ಸಕ್ಕರೆ ಪಾಕದಲ್ಲಿ ಅದ್ದಿದ ವಿಷದ ಕಡ್ಡಿಮಿಠಾಯಿ ಇಲ್ಲ ಎನ್ನಲಾದೀತೆ?

ದೇಶದಲ್ಲಿ ಮುಸ್ಲಿಂ ಸಮುದಾಯದ ಮುಂಚೂಣಿಯಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಸಿಎಎ ಕಾಯ್ದೆ ಕೇವಲ ಮುಸ್ಲಿಂ ರ ಸಮಸ್ಯೆಯಲ್ಲ,  ಅದೊಂದು ಸಮಸ್ತ ಬಹುಸಂಖ್ಯಾತ ಭಾರತೀಯರ ಸಮಸ್ಯೆ ಎಂದು ನಿರೂಪಣೆ ಮಾಡುವಲ್ಲಿಯೂ  ವಿಪಕ್ಷಗಳು , ಸಂಘ-ಸಂಸ್ಥೆಗಳು ವಿಫಲವಾಗಿವೆ. ಸಂವಿಧಾನದ ಮೂಲ ತತ್ವಗಳಿಗೆ ದಕ್ಕೆಯಾಗಬಹುದಾದ ಈ ಕಾಯ್ದೆಗಳಲ್ಲಿನ  ಹುಳುಕು,ಕೊಳಕುಗಳನ್ನು ಗುರುತಿಸಲಾಗದಷ್ಟು ಕುರುಡು ಪ್ರತಿಪಕ್ಷಗಳಿಗೆನಿಸಿಕೊಂಡವುಗಳಿಗೆ ಆವರಿಸಿರುವುದು ವಿಪರ್ಯಾಸ. “ಈ ದೇಶದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ”  ಕೊಡಿಸುವ  ಗುರಿಯ ಸಂವಿಧಾನದ ಮೂಲಧಾತುವನ್ನು ಈಗ ಧರ್ಮದ ನೆಲೆಯಲ್ಲಿ ಮತೀಯ ಘಾತಕವನ್ನಾಗಿಸುವ  ದೊಡ್ಡ ಹುನ್ನಾರವೆ ನಡೆದಿದೆ.  ಅದನ್ನು  ವಿರೋಧಿಸುವ  ಹೊಣೆಯನ್ನು ಕೇವಲ ಒಂದು ಧರ್ಮದ ಜನಸಮುದಾಯದ ಹೆಗಲಿಗೆ ಹೊರಿಸಿ ಅದನ್ನು ಸೀಮಿತ ಗೊಳಿಸಲಾಗುತ್ತಿದೆಯಾ ,  ಇಲ್ಲವಾ ಎಂಬ ಪ್ರಶ್ನೆಗೆ ಇನ್ನಷ್ಟೆ ಉತ್ತರ ಸಿಗಬೇಕಿದೆ..

ಎನ್.ಡಿ ಎ ಸರ್ಕಾರದ ನೇತೃತ್ವ ವಹಿಸಿರುವ ಬಿಜೆಪಿಗೆ ಇದೇ ಬೇಕಾಗಿದ್ದು, ಬಿಜೆಪಿಯ ನಿರ್ದೇಶಕ ಸೂತ್ರ ಹಿಡಿದಿರುವ “ಶಕ್ತಿ”  ಏಣಿಸಿದಂತೆಯೇ  ಆಗುತ್ತಿದೆ. ದೇಶದಲ್ಲಿ  ಆರ್ಥಿಕ ಕುಸಿತ, ಬೆಲೆ ಏರಿಕೆ,  ನಿರುದ್ಯೋಗದಂತ ಸಮಸ್ಯೆಗಳು ಜನರನ್ನು ಬಾಧಿಸುತ್ತಿರುವಾಗ ಇದರ ವಿರುದ್ದದ  ಜನರ ಅಸಮಾಧಾನವನ್ನು ವಿಮುಖಗೊಳಿಸಿ ಮತ್ತದೆ ಧರ್ಮ, ದೇವರು,ದೇಶಭಕ್ತಿ  ಎಂಬ ಭಾವಾನತ್ಮಕ ಸಂಗತಿಗಳ ಕಡೆಗೆ ಸೆಳೆಯಲು ಸಿಎಎ ನ್ನು ಸಮರ್ಥವಾಗಿ ಬಳಿಸಿಕೊಂಡಿದೆ.  ಸಿಎಎ ಕಾಯ್ದೆ ಮುಸ್ಲಿಂರ ವಿರುದ್ದದ  ಯೋಜನೆ ಎಂಬುದಾಗಿ ಬಿಂಬಿತವಾಗಬೇಕು. ಈ ಮುಸ್ಲಿಂ ಸಮುದಾಯ ಮೋದಿ, ಅಮಿತ್ ಷಾ ಅವರನ್ನು ಬೈಯುತ್ತಾ ಪ್ರತಿಭಟನೆಗಿಳಿಯಬೇಕು, ಅದು ಹಿಂಸಾರೂಪ ತಾಳಿದರೂ ಪರವಾಗಿಲ್ಲ. ಅಂತಿಮವಾಗಿ ಹಿಂದೂಗಳಲ್ಲಿ ಮುಸ್ಲಿಂ ವಿರೋಧಿ ಭಾವನೆಯನ್ನು ಬಿತ್ತುವಲ್ಲಿ ಯಶಸ್ವಿಯಾದರೆ ಈ ದೇಶದ ಅಧಿಕಾರ ವನ್ನು ಶಾಶ್ವತವಾಗಿ ಹಿಡಿದಿಟ್ಟುಕೊಳ್ಳುವ ತಂತ್ರ ಫಲಿಸಿದಂತೆಯೇ. ಪೌರತ್ವದ ವಿರುದ್ದದ ಪ್ರಶ್ನೆಗಳನ್ನು  ಹಿಂದೂತ್ವದ ವಿರೋಧಿ ಎಂಬಷ್ಟರ ಮಟ್ಟಿಗೆ  ಪರಿವರ್ತಿಸುವಲ್ಲಿ ಮತೀಯ ಶಕ್ತಿಗಳು  ಶ್ರಮಿಸುತ್ತಿವೆ. ಹಿಂದೂತ್ವ ಮತ್ತು ಪೌರತ್ವ ಎಂಬ ವಿಭಜನೆಯನ್ನು ಮಾಡುವಲ್ಲಿ ಯಶಸ್ವಿಯಾಗಿ ಮತ್ತದೆ ಮತೀಯ ರಾಜಕಾರಣದ ಧ್ರುವೀಕರಣದ ತಂತ್ರ ಈಡೇರುವುದನ್ನೆ ಬಿಜೆಪಿ ಕಾದು ಕುಳಿತಿದೆ.

ದೇಶದಲ್ಲಿ ಸಿಎಎ/ಎನ್ ಆರ್ ಸಿ ಕಾಯಿದೆಗಳ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳು ಹಿಂಸಾರೂಪ ತಾಳಿ  ಜೀವಗಳ ಬಲಿ ಕೂಡ   ನಡೆದು ಹೋಗುತ್ತಿದೆ. ದೇಶದಲ್ಲಿ ಸಂಘಟಿತ ಹೋರಾಟಗಳು ನಡೆಯುತ್ತಿಲ್ಲವಾದರೂ ಅಲ್ಲಲ್ಲಿ ಬಿಡಿ ಬಿಡಿ ಪ್ರತಿಭಟನೆಗಳು ನಡೆಯುತ್ತಿವೆ. ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಪ್ರಭುತ್ವದ ಕಾಲಾಳುಗಳಿಂದ ನಿರ್ಮಾನುಷವಾಗಿ ಹತ್ತಿಕ್ಕಲಾಗುತ್ತಿದೆ.  ಎಲ್ಲಲ್ಲೂ ಬಾಬಾಸಾಹೇಬ್ ಅಂಬೇಡ್ಕರ್ ಅವರ ಪೋಟೋಗಳು, ರಾಷ್ಟ್ರಧ್ವಜ ಹಿಡಿದ ಜನಸಮುದಾಯ ಬೀದಿಗಿಳಿದಿರುವುದು ಸಂವಿಧಾನದ ಮಹತ್ವವನ್ನು ಮತ್ತು ದೇಶದ ಭಾರತೀಯ ರಾಷ್ಟ್ರೀಯತೆಯ ಅಸ್ಮಿತೆ ಭುಗಿಲೆದ್ದಿರುವಂತೆ ಕಾಣುತ್ತಿದೆ.  ಕೇಂದ್ರದಲ್ಲಿ ಬಿಜೆಪಿ ನೇತೃತ್ವದ  ಸರ್ಕಾರ ಅಧಿಕಾರ ಹಿಡಿದಾಗಿನಿಂದಲೂ ಸಂವಿಧಾನದ ಮೂಲ ತತ್ವಗಳ ಅಡಿಪಾಯದ ಕಲ್ಲು ಕೀಳುವ ಕೆಲಸ ನಡೆದೆ ಇದೆ. ಇದರ ವಿರುದ್ದ ದನಿ ಎತ್ತುವವರನ್ನು ದೇಶದ್ರೋಹಿಗಳು, ನಗರ ನಕ್ಸಲರು,  ಅಕ್ರಮ ನುಸುಳುಕೋರರು ಎಂಬ ಹಣೆಪಟ್ಟಿ ಕಟ್ಟುತ್ತಾ ಬಾಯಿಕಟ್ಟುವ  ಕೆಲಸ ಮುಂದುವರೆದಿದೆ. ಗಾಂಧಿಯ ಹತ್ಯೆಯನ್ನು ಸಮರ್ಥಿಸಿಕೊಳ್ಳುತ್ತಲೆ ಅವರನ್ನು ತಬ್ಬಿಕೊಂಡು ಹೋಗುವ , ಅಂಬೇಡ್ಕರ್ ಅವರನ್ನುಹೊಗಳುತ್ತಲೆ ಅವರು ಕೊಟ್ಟ ಸಂವಿಧಾನವನ್ನು ಸುಡಬೇಕು, ಬದಲಾಯಿಸಬೇಕು ಎಂದು ಕೂಗುವ ಕೆಲಸಗಳು ಒಂದೇ ಗುಂಪಿನಿಂದ ನಡೆಯುತ್ತಲೆ ಜನರನ್ನು ದಿಕ್ಕುತಪ್ಪಿಸುವ  ಅಂತಿಮವಾಗಿ ತಮ್ಮ ಒಳ ಅಜೆಂಡಾವನ್ನು ಜಾರಿಗೊಳಿಸುವ  ಮೋಸಗಾರಿಕೆ ಮಂತ್ರ ಪಠಿಸಲಾಗುತ್ತಿದೆ.   ಇದಕ್ಕೆ ಅಡ್ಡಿ ಬರುವ  ಯಾರನ್ನು ಬೇಕಾದರೂ ಗುಂಡಿಟ್ಟು ಕೊಲ್ಲಬಲ್ಲರು,  ರಾಮಚಂದ್ರಗುಹಾ ರಂತಹ  ಜಾಗತಿಕ ಚರಿತ್ರಾಕಾರರನ್ನು ಎಳೆದೊಯ್ಯುದು ಜೈಲಿಗೆ ಹಾಕಬಲ್ಲರು, ಸಂವಿಧಾನಿಕ ಸ್ಥಾನಮಾನದಲ್ಲೆ ಇರುವ  ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಪೊಲೀಸರ ಗುಂಡು ಸಿಡಿದ ಮಂಗಳೂರಿಗೆ ಬರದಂತೆ  ನಿರ್ಬಂಧವನ್ನು ಹೇರಬಲ್ಲರು.  ಅಘೋಷಿತ ತುರ್ತು ಪರಿಸ್ಥಿತಿ ನೆಲಗೊಂಡಿರುವ ಈ ದೇಶಕ್ಕೆ  ಈಗ ದೇಶಕ್ಕೆ ಓರ್ವ ಜಯಪ್ರಕಾಶ್ ನಾರಾಯಣ್ (ಜೆಪಿ) ಬೇಕಾಗಿದ್ದಾನೆ ಎನಿಸುತ್ತಿಲ್ಲವೆ?

ದೇಶದಾದ್ಯಂತ ಬೀದಿಯಲ್ಲಿ ನಿಂತು ಪ್ರತಿಭಟಿಸುತ್ತಿರುವ ಜನಸಮುದಾಯ ಕೈಗಳಲ್ಲಿ ತಿರಂಗಾಧ್ವಜ,  ಅಂಬೇಡ್ಕರ್ ಅವರ ಪೋಟೋಗಳನ್ನು  ಹಿಡಿದು ಸಂವಿಧಾನ ಉಳಿಯಲಿ ಎಂದು ಕೂಗುವಾಗ ಅಂಬೇಡ್ಕರ್ ಆಡಿದ ಈ ಮಾತು ನೆನಪಾಯಿತು.

*”ಸಂವಿಧಾನ ಎಷ್ಟೇ* *ಉತ್ತಮವಾಗಿರಲಿ,*
*ಅದನ್ನು ನಿರ್ವಹಿಸುವವರು* *ಕೆಟ್ಟವರಾಗಿದ್ದರೆ*
*ಅದೂ ಕೆಟ್ಟದಾಗಿ ಬಿಡುವುದು ಖಂಡಿತ”*

 

‍ಲೇಖಕರು avadhi

December 22, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Kiran

    ಅಲ್ಲ ಸ್ವಾಮಿ ಒಂದು ಕಡೆ “ದೇಶದಲ್ಲಿ ಆರ್ಥಿಕ ಕುಸಿತ, ಬೆಲೆ ಏರಿಕೆ, ನಿರುದ್ಯೋಗದಂತ ಸಮಸ್ಯೆಗಳು ಜನರನ್ನು ಬಾಧಿಸುತ್ತಿರುವಾಗ” ಅಂತಾನೂ ಬರೀತೀರಾ, ದೇಶದಲ್ಲಿ ನೆಲೆಸಿರೋ ಐದಾರು ಕೋಟಿ ಅಕ್ರಮ ವಲಸಿಗರನ್ನು ಹೊರಗಟ್ಟಲು ಮಾಡಲಾಗಿರುವ NRC ಕಾಯ್ದೆಯನ್ನೂ ವಿರೋದಿಸುತ್ತೀರಾ, ನಮ್ಮ ದೇಶದ ಜನಸಂಖ್ಯೆ ಈಗಾಗಲೇ ಅಪಾಯದ ಮಟ್ಟ ದಾಟಿದೆ, ಮತ್ತೆ ಏಕಾಏಕಿ ಐದಾರು ಕೋಟಿ ಹೆಚ್ಚು ಜನರನ್ನು ಅನಾಮತ್ತಾಗಿ ದೇಶಕ್ಕೆ ಅಧಿಕೃತವಾಗಿ ಸೇರಿಸಿಕೊಂಡರೆ ಆರ್ಥಿಕ ಕುಸಿತ, ಬೆಲೆ ಏರಿಕೆ, ನಿರುದ್ಯೋಗದಂತ ಸಮಸ್ಯೆಗಳು ಇನ್ನೂ ಜಾಸ್ತಿ ಆಗಲ್ವೇ? ನಿಮಗೇನಾದರೂ ಬುದ್ದಿ ಇದೆಯೇ? ಏನೋ ಕೆಲ್ಸಕ್ಕೆ ಬಾರದ ಸೆಂಟಿಮೆಂಟ್ ಹಿಡ್ಕೊಂಡು ಮೆಂಟಲ್ ತರಾ ಅಡ್ತ ಇದ್ದೀರಲ್ಲ !!!
    ಐದಾರು ಕೋಟಿ ಅಕ್ರಮವಾಗಿ ಕೆಲಸ ಮತ್ತೊಂದು ಹುಡುಕಿಕೊಂಡು ಬಂದಿರೋರನ್ನ ಭಾರತದ ಪ್ರಜೆಗಳನ್ನಾಗಿ ರಾತ್ರೋ ರಾತ್ರಿ ಮಾಡಬೇಕು ಅಂತೀರಾ, ಆದರೆ ಪಕ್ಕದ ದೇಶಗಳಿಂದ ಪ್ರಾಣ, ಮಾನ ಉಳಿಸಿಕೊಳ್ಳಲು ನಮ್ಮ ದೇಶಕ್ಕೆ ವಲಸೆ ಬಂದಿರೋ ಬಡಪಾಯಿ ಹಿಂದುಗಳನ್ನು ಸೇರಿಸಿಕೊಳ್ಳಲು ಮಾಡಿರೋ CAA ಕಾಯ್ದೆಯನ್ನು ವಿರೋದಿಸ್ತೀರಾ..
    ಸಂವಿಧಾನ, ಅಂಬೇಡ್ಕರ್ ಅಂತ ಪ್ರತಿ ವಾಕ್ಯದಲ್ಲೂ ಬಡಬಡಸ್ತೀರಾ, ಆದರೆ ಅದೇ ಸಂವಿಧಾನಕ್ಕೆ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡದ ದೀದಿ ಅಂಬೋ ಮಾರಮ್ಮನನ್ನು ಹೊಗಳುತ್ತೀರ, ಅಂಬೇಡ್ಕರ್ ಆಶಯಕ್ಕೆ ವಿರೋಧವಾಗಿ ಸಂವಿಧಾನಕ್ಕೆ ಸೇರಿಸಿದ್ದ ೩೭೦ ವಿಧಿಗೆ ಬೆಂಬಲಿಸುತ್ತೀರಾ…
    ನಿಮ್ಮ ಲೀಲೆಗಳೇ ವಿಚಿತ್ರ, ನಿಮ್ಮ ತಲೆಯೂ ಅದ್ಭುತ ಮತ್ತು ಬರವಣಿಗೆ ಅಧ್ವಾನದ ಚಿತ್ರಾನ್ನ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: