ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬ್ರಹ್ಮ ರಾಕ್ಷಸ ಮತ್ತು ಎಣ್ಣೆಯ ಕಥೆ – ಸೌಮ್ಯ ಕಳಸ ಬರೀತಾರೆ

ಕೇಚು ಮತ್ತು ಬ್ರಹ್ಮರಾಕ್ಷಸ

ಸೌಮ್ಯ ಕಳಸ


ಅವನ ಪೂರ್ತಿ ಹೆಸರು ಕೇಶವ. ಚಿಕ್ಕ ವಯಸ್ಸಿಗೇ ಪೋಲಿಯೋ ಕಾಡಿದ್ದರಿಂದ ಅವನ ಎರಡೂ ಕಾಲುಗಳು ಕಮಾನಿನಂತೆ ಬಾಗಿದ್ದವು. ನೋಡೋದಕ್ಕೂ ಅವನದ್ದು ಕುಳ್ಳಗಿನ ದೇಹ. ಆದ್ರೆ ಆಸಾಮಿ ದಷ್ಟಪುಷ್ಟವಾಗಿದ್ದ. ನಾನಿನ್ನೂ ಶಾಲೆಗೆ ಹೋಗೋದಿಕ್ಕೆ ಶುರುಮಾಡಿದಾಗ ಕೇಚು ಆಗ್ಲೇ ಹೈಸ್ಕೂಲ್ಗೆ ಹೋಗ್ತಿದ್ದ. ಸರ್ಕಾರಿ ಶಾಲೆಯ ನೀಲಿ ಪ್ಯಾಂಟು ಬಿಳಿ ಶರ್ಟು ಹಾಕ್ಕೊಂಡು ಆತ ತನ್ನದೇ ವಿಶಿಷ್ಟ ಶೈಲಿಯಲ್ಲಿ ನಡೆದುಕೊಂಡು ಶಾಲೆಗೆ ಹೋಗ್ತಾ ಇದ್ದಿದ್ದನ್ನ ನೋಡ್ತಿದ್ರೆ ತಮಾಷೆ ಅನ್ನಿಸ್ತಿತ್ತು. ಆದ್ರೆ ಅದೆಷ್ಟೇ ವರ್ಷಗಳಾದ್ರೂ ಕೇಚು ಯಾಕೆ ಉದ್ದ ಬೆಳೆದಿಲ್ಲ ಅನ್ನೋದು ಅವನನ್ನು ನೋಡಿದಾಗಲೆಲ್ಲಾ ಕಾಡ್ತಿದ್ದ ಕುತೂಹಲದ ಪ್ರಶ್ನೆ. ಆಮೇಲೆ ಒಂದಷ್ಟು ವರ್ಷಗಳ ನಂತರ ಇದ್ದಕ್ಕಿದ್ದಂತೆ ಕೇಚು ಎದುರು ಬೀದಿಯ ಹೋಟೆಲಿನಲ್ಲಿ ಕಾಣಿಸಿಕೊಂಡ. ಅರೇ…ಇವನು ಇಲ್ಲೇನು ಮಾಡ್ತಿದ್ದಾನಪ್ಪಾ ಅಂತ ನೋಡಿದ್ರೆ ಶಾಲೆಗೆ ಗುಡ್ ಬೈ ಹೇಳಿ ಹೋಟೆಲಿನಲ್ಲಿ ಕ್ಲೀನರ್ ಆಗಿ ಕೆಲಸಕ್ಕೆ ಸೇರ್ಕೊಂಡಿದ್ದ. ಆದ್ರೆ ಅಷ್ಟೊತ್ತಿಗಾಗ್ಲೇ ನಮಗೆ ಅವನ ಡೊನಾಲ್ಡ್ ಡಕ್ ಶೈಲಿಯ ನಡಿಗೆ, ಅದಕ್ಕೆ ಕಾರಣವಾದ ಪೋಲಿಯೋ ಬಗ್ಗೆ ಗೊತ್ತಿದ್ದರಿಂದ ಹೆಚ್ಚೇನೂ ಕುತೂಹಲ ಇರ್ಲಿಲ್ಲ .
ಅದೊಂದಿನ ಅಪ್ಪ, ಕೇಚುವಿನ ತಾತನ ಕತೆ ಹೇಳಿದ ನಂತರವೇ ನಾವೆಲ್ಲಾ ಅವನನ್ನ ಆಶ್ಚರ್ಯಭರಿತ ನೋಟದಿಂದ ನೋಡೋಕೆ ಶುರುಮಾಡಿದ್ದು. ಕೇಚುಗೆ `ಕುಟ್ಟಿಚಾತ` ಅನ್ನೋ ಅಡ್ಡಹೆಸರೂ ಇದೆ ಅನ್ನೋ ವಿಷಯ ನಮಗೆ ಗೊತ್ತಾಗಿದ್ದೇ ಆಗ. ಈ ಹೆಸರು ಬರೋದಿಕ್ಕೆ ಕೇಚುವಿನ ತಾತನೇ ಮುಖ್ಯ ಕಾರಣವಂತೆ.
ಕೇಚುವಿನ ತಾತನ ಹೆಸರು ಕೂಡ ಕೇಶವ ಅಂತಲೇ. ಎಲ್ರೂ ಅವರನ್ನ ಕೇಶು ಭಟ್ರು ಅಂತಿದ್ರು. ಆತ ಆ ಕಾಲಕ್ಕೇ ತಕ್ಕಮಟ್ಟಿಗೆ ಪವರ್ಫುಲ್ ಆಗಿದ್ದ ಮಂತ್ರವಾದಿ. ಹೀಗೇ ಒಮ್ಮೆ ಕಾಡುದಾರಿಯಲ್ಲಿ ಬತರ್ಾ ಇದ್ದಾಗ ಕೇಶು ಭಟ್ರ ಕಾಲಿಗೆ ಅದೇನೋ ಪದೇ ಪದೇ ತಡೀತಿತ್ತು. ಮೊದಲೇ ಮಂತ್ರವಾದಿ…ಅಂದ್ಮೇಲೆ ಕಾಲಿಗೆ ತೊಡರುತ್ತಿದ್ದುದು ಬ್ರಹ್ಮರಾಕ್ಷಸ ಅನ್ನೋದು ಕೇಶು ಭಟ್ರಿಗೆ ಆ ಕೂಡ್ಲೇ ಗೊತ್ತಾಗಿಬಿಡ್ತು. ಬ್ರಹ್ಮರಾಕ್ಷಸ ಅನ್ನೋದು ಗೊತ್ತಾದ ಕೂಡ್ಲೇ ಒಂಚೂರೂ ಭಯಪಡದೆ `ನಡಿಯಾಚೆ….ನಡಿಯಾಚೆ’ ಅಂತ ಅದೆಷ್ಟೇ ಹೇಳಿದ್ರೂ ಬ್ರಹ್ಮರಾಕ್ಷಸ ಯಾಕೋ ಬೆನ್ನು ಬಿಡಲೇ ಇಲ್ಲ. ಕೊನೆಗೆ `ಇದನ್ನ ಹೀಗೇ ಬಿಟ್ರೆ ಆಗೋದಿಲ್ಲ’ ಅಂತ ನಿರ್ಧರಿಸಿದ ಕೇಶು ಭಟ್ರು ತಮ್ಮ ಮಂತ್ರಶಕ್ತಿಯಿಂದ ಬ್ರಹ್ಮರಾಕ್ಷಸನ ಜುಟ್ಟು ಹಿಡಿದು ಗಂಟುಹಾಕಿ ಅದನ್ನೊಂದು ಪುಟ್ಟ ಹುಡುಗನಾಗಿ ಪರಿವರ್ತಿಸಿಬಿಟ್ರು.
ಇಷ್ಟೆಲ್ಲಾ ಆದ್ಮೇಲೆ ಪುಟ್ಟ ಬಾಲಕನ ರೂಪದ ಬ್ರಹ್ಮರಾಕ್ಷಸನ ಜೊತೆ ಮನೆಗೆ ಬಂದ ಕೇಶು ಭಟ್ರು ಮನೆಯಲ್ಲಿದ್ದ ತಮ್ಮ ವಯಸ್ಸಾದ ತಾಯಿಗೆ ಕಡಕ್ ಆದೇಶ ಕೊಟ್ರು `ಈ ಮಾಣಿ ಇನ್ಮುಂದೆ ನಮ್ಮ ಮನೇಲೇ ಇರುತ್ತೆ. ನೀನು ಬೇಕಾದ ಕೆಲಸ ಹೇಳು, ಮಾಡುತ್ತೆ. ಆದ್ರೆ ಅಪ್ಪಿ ತಪ್ಪಿ ಇದರ ಕೂದಲ ಗಂಟು ಬಿಚ್ಚಬೇಡ. ತಲೆಗೆ ಹಚ್ಚೋಕೆ ಎಣ್ಣೆಯನ್ನಂತೂ ಕೊಡಲೇಬೇಡ’ ಅಂತ. ಅಷ್ಟೇ ತಾನೇ, ಮನೆಗೆಲಸ ಮಾಡೋಕೆ ಬಿಟ್ಟಿಯಾಗಿ ಒಂದು ಆಳು ಸಿಕ್ತು ಅಂತ ಎಲ್ಲಾ ಶರತ್ತುಗಳಿಗೂ ತಲೆಯಾಡಿಸಿ ಬಾಲಕನ ರೂಪದ ಬ್ರಹ್ಮರಾಕ್ಷಸನನ್ನು ಕೇಶು ಭಟ್ರ ಕುಟುಂಬ ಬರಮಾಡಿಕೊಳ್ತು. ಒಂದೇ ಒಂದು ಮಾತನಾಡದ ಈ ಮಾಣಿ ಕೇಶು ಭಟ್ರ ತಾಯಿ ಹೇಳಿದ ಪ್ರತಿಯೊಂದು ಕೆಲಸವನ್ನೂ ಅದೆಷ್ಟೇ ಕಷ್ಟದ್ದಾಗಿದ್ರೂ ಸರಿ ಚಕಚಕನೆ ಮಾಡಿ ಮುಗಿಸುತ್ತಿತ್ತು. ಕಾಡಿನಿಂದ ಹೊರೆಗಟ್ಟಲೆ ಸೌದೆ ತರೋದು, ನಿಮಿಷ ಮಾತ್ರದಲ್ಲಿ ಬಾವಿಯಿಂದ ಬಿಂದಿಗೆಗಟ್ಟಲೆ ನೀರು ಸೇದೋದು ಹೀಗೆ ಮಾಣಿ ಮಡದ ಕೆಲಸವೇ ಇಲರ್ಿಲ್ಲ. ಒಂದೇ ಒಂದು ಸಲ ಕೂಡ ಸುಸ್ತು ಅಂದ್ರೆ ಕೇಳಿ. ತನ್ನ ಕೆಲಸವನ್ನ ಸಾಕಷ್ಟು ಹಗುರ ಮಾಡಿದ ಈ ಮಾಣಿಯ ಬಗ್ಗೆ ಮುದುಕಿಗೆ ಅದೇನೋ ಮಮಕಾರ. ಹೀಗೇ ಅನೇಕ ತಿಂಗಳುಗಳು ಕಳೆದವು. ಆಗ ಬಂತು ದೀಪಾವಳಿ.
ದೀಪಾವಳಿ ಹಬ್ಬ ಅಂದ್ರೆ ಇಂದಿಗೂ ಅನೇಕ ಹಳ್ಳಿಗಳಲ್ಲಿ ಮಕ್ಕಳು ಮೊಮ್ಮಕ್ಕಳೆಲ್ಲಾ ಹಿರಿಯರ ಮನೆಯಲ್ಲಿ ಸೇರಿ ಒಟ್ಟಾಗಿ ಆಚರಿಸ್ತಾರೆ. ಅದೇ ರೀತಿ ಕೇಶು ಭಟ್ರ ಮನೆಗೂ ದೀಪಾವಳಿಗಾಗಿ ಎಲ್ಲಾ ನೆಂಟರಿಷ್ಟರೂ ಬಂದರು. ಜೊತೆಗೆ ಪುಟಾಣಿ ಮಕ್ಕಳ ಸೈನ್ಯವೂ ಬಂದಿಳಿಯಿತು. ದೀಪಾವಳಿ ಅಭ್ಯಂಜನಕ್ಕೆ ಮನೆಯಲ್ಲಿ ಭರ್ಜರಿ ತಯಾರಿ ಶುರುವಾಯ್ತು. ಅಜ್ಜಿಯ ಸಡಗರವಂತೂ ಹೇಳತೀರದು. ಉಗುರುಬೆಚ್ಚಗೆ ಕಾಸಿದ ಎಳ್ಳೆಣ್ಣೆಯನ್ನು ಮೊಮ್ಮಕ್ಕಳಿಗೆಲ್ಲಾ ಹಚ್ಚಿ ಅಭ್ಯಂಜನಕ್ಕೆ ಅಣಿ ಮಾಡಿದ್ರು. ಇದೆಲ್ಲವನ್ನೂ ಮಾಣಿ ಒಂದು ಮೂಲೆಯಲ್ಲಿ ನಿಂತು ಆಸೆಗಣ್ಣಿನಿಂದ ನೋಡ್ತಾ ಇತ್ತು. ಮಾಣಿಯನ್ನು ಗಮನಿಸಿದ ಅಜ್ಜಿ `ಅಯ್ಯೋ ಪಾಪ… ಅದೆಷ್ಟೋ ದಿನಗಳಾಯ್ತು… ಮಾಣಿ ಒಂದು ದಿನಕ್ಕೂ ತಲೆಗೆ ಎಣ್ಣೆ ಹಚ್ಚಿ ಸ್ನಾನ ಮಾಡಿದ್ದೇ ಇಲ್ಲ. ನನಗೆ ಮನೆಗೆಲಸದಲ್ಲಿ ಇಷ್ಟೆಲ್ಲಾ ಸಹಾಯ ಮಾಡೋ ಮಾಣಿಯೂ ದೀಪಾವಳಿಗೆ ಎಣ್ಣೆ ಸ್ನಾನ ಮಡಲಿ’ ಅಂತ ಮಾಣಿಯನ್ನ ಬಳಿ ಕರೆಯಿತು. `ಇಕಾ ಮಾಣಿ…ನೀನೂ ಹಬ್ಬಕ್ಕೊಂದು ಭರ್ಜರಿ ಸ್ನಾನ ಮಾಡು’ ಅಂತ ಹೇಳಿ ಮಾಣಿ ತಲೆಯ ಜುಟ್ಟನ್ನ ಬಿಚ್ಚಿಯೇ ಬಿಡ್ತು. ಮಗನ ಎಚ್ಚರಿಕೆಯ ಮಾತು ಅಜ್ಜಿಗೆ ಆಗ ನೆನಪೇ ಆಗ್ಲಿಲ್ಲ. ಜುಟ್ಟು ಬಿಚ್ಚಿ ಎಣ್ಣೆ ಸೋಕಿಸಿದ್ದೇ ತಡ, ಬಾಲಕ ಮಂಗಮಾಯ !
ಕಣ್ಣು ಮುಚ್ಚಿ ಕಣ್ಣು ಬಿಡೋದ್ರೊಳಗೆ ಮಾಣಿ ಮಂಗಮಾಯವಾಗಿದ್ದು ನೋಡಿ ಅಜ್ಜಿ ಗಾಬರಿಯಾಗ್ಬಿಡ್ತು. ಮನೆಗೆ ಬಂದ ಮಗನಿಗೆ ನಡೆದಿದ್ದೆಲ್ಲಾ ಹೇಳಿದಾಗ ಕೇಶು ಬಟ್ರು ಮಾಣಿಯ ನಿಜ ರೂಪವನ್ನ ವಿವರಿಸಿದ್ರು. ಮಾಣಿ ಸಾಮಾನ್ಯ ಬಾಲಕನಲ್ಲ, ಅದೊಂದು ಬ್ರಹ್ಮರಾಕ್ಷಸ ಅಂತ ಗೊತ್ತಾಗಿದ್ದೇ ಅಜ್ಜಿ ಹಣೆ ಹಣೆ ಚಚ್ಚಿಕೊಂಡು ಮಗನಿಗೇ ಬೈಯ್ಯಲು ಶುರುಮಾಡ್ತು. `ಮೊದಲೇ ಹೇಳೋದಲ್ವೇನೋ, ಅದು ಬ್ರಹ್ಮರಾಕ್ಷಸ ಅಂತ. ಇನ್ನೂ ಚೆನ್ನಾಗೇ ದುಡಿಸಿಕೊಳ್ತಿದ್ದೆ. ಮನೆ ಮಕ್ಕಳಂತೆ ಮಾಣಿಗೂ ಎಣ್ಣೆ ಸ್ನಾನ ಮಾಡಿಸಲು ಹೋಗಿ ತಪ್ಪು ಮಾಡ್ಬಿಟ್ನಲ್ಲೋ. ಇನ್ನೆಲ್ಲೋ ಸಿಗುತ್ತೆ ಇಂಥ ಕೆಲಸಗಾರ’ ಅಂತ ಅಜ್ಜಿ ಪೇಚಾಡಿಕೊಳ್ತು. ಆದ್ರೆ ಇದೆಲ್ಲದರಿಂದ ಬಿಡುಗಡೆ ಪಡೆದ ಬ್ರಹ್ಮರಾಕ್ಷಸ ಮಾತ್ರ ಸತ್ತೆನೋ ಕೆಟ್ಟೆನೋ ಅಂತ ಪೇರಿಕಿತ್ತುಬಿಡ್ತು.
ಈ ಕತೆ ಕೇಳಿದ ಮೇಲೆ ನಾವು ಮಕ್ಕಳೆಲ್ಲಾ ಯಾರಾದ್ರೂ ಸಿಕ್ಕಾಪಟ್ಟೆ ಕೆಲಸ ಮಾಡೋ ಸಣ್ಣ ಹುಡುಗರು ಕಂಡ್ರೆ ಸಾಕು, `ಇವನು ಬ್ರಹ್ಮರಾಕ್ಷಸ ಇರಬಹುದಾ…ಯಾವುದಕ್ಕೂ ಮನೆಯಲ್ಲಿ ತಲೆಗೆ ಹಾಕೋ ಎಣ್ಣೆ ಇದೆ ತಾನೇ’ ಅಂತ ನಮ್ಮನಮ್ಮಲ್ಲೇ ಮಾತನಾಡಿಕೊಳ್ತಿದ್ದೆವು. ಇದು ಸತ್ಯವೋ, ಕಲ್ಪನೆಯೋ ಅನ್ನೋದ್ರ ಬಗ್ಗೆ ಯಾವತ್ತೂ ಯೋಚಿಸಲಿಲ್ಲ. ಆದ್ರೆ ಇಂದಿಗೂ ಕೇಚುವನ್ನ ನೋಡಿದಾಗ್ಲೆಲ್ಲಾ ಅವನ ಅಜ್ಜನ ಸಾಹಸದ ಈ ಕತೆ ನೆನಪಾಗುತ್ತೆ.
 
 

‍ಲೇಖಕರು G

12 November, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading