ಬ್ರಜಭೂಮಿಯ ಬಣ್ಣದಾಟ: ರಂಗೋತ್ಸವ

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮೆರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ತುಂಟ ಕೃಷ್ಣ ತನ್ನ ಗೆಳೆಯರನ್ನು ಕಟ್ಟಿಕೊಂಡು ರಾಧೆಯ ನೆಪದಲ್ಲಿ ಆಕೆಯ ಊರಾದ ಬರ್ಸಾನಕ್ಕೆ ಹೋಗಿ, ಬಣ್ಣದಾಟ ಆಡಲು ಕರೆದು ಗೋಪಿಕೆಯರ ಕೈಯಿಂದ ಒದೆ ತಿಂದು ವಾಪಸ್! ಕೃಷ್ಣನ ಈ ತುಂಟಾಟವೇ ಹಬ್ಬವೊಂದರ ಆಚರಣೆಯ ಪ್ರಮುಖ ಭಾಗ.

ಉತ್ತರ ಪ್ರದೇಶದ ಬರ್ಸಾನದಲ್ಲಿ ಹೋಳಿ ಶುರುವಾಗುವುದೇ ಹೀಗೆ. ಒಂದಿಷ್ಟು ಹೆಂಗಳೆಯರೆಲ್ಲ ಸೇರಿ ಗಂಡಸರಿಗೆ ಲಾಠಿ ಸೇವೆ ಮಾಡುತ್ತಾರೆ. ಒದೆ ತಿನ್ನವಾತ ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಪಡುತ್ತಾ, ಹೋಳಿಯ ಕೇಕೆ ಮುಗಿಲು ಮುಟ್ಟುತ್ತದೆ. ಇದನ್ನು ಕಣ್ತುಂಬಿಕೊಳ್ಳಲು ಊರ ತುಂಬ ನೆರೆವ ಜನ.

ಕೃಷ್ಣನ ತುಂಟಾಟಗಳೆಲ್ಲ ಹಬ್ಬದ ಆಚರಣೆಯ ರೂಪು ಪಡೆದು ಬ್ರಜಭೂಮಿ ಇಂದಿಗೂ ರಾಧೇ ರಾಧೇ ಅನ್ನುತ್ತದೆ. ಅಂದು ತುಂಟಾಟವಾಡಿದ ಕೃಷ್ಣ ಇಲ್ಲಿನ ದೇಗುಲಗಳಲ್ಲಿ ಸುಮ್ಮನೆ ಕುಳಿತರೆ, ರಾಧೆ ಮಾತ್ರ ಇಲ್ಲಿನ ಜನರ ಉಸಿರು. ಕೃಷ್ಣ ರಾಧೆಯರ ಮೀರಿದ ಪ್ರಪಂಚ ಇನ್ನೊಂದಿಲ್ಲ ಎಂಬಂತೆ ಬದುಕುವ ಇಲ್ಲಿನ ಹೋಳಿಯೇ ವಿಶಿಷ್ಟ. ನಮ್ಮ ದೇಶದ ಅನನ್ಯ ಸಂಸ್ಕೃತಿಯ ಒಂದು ಭಾಗವನ್ನಾದರೂ ನೋಡಬೇಕು ಅಂತ ಆಸೆಯಿದ್ದರೆ, ವೃಂದಾವನದ ಹೋಳಿಯನ್ನು ಪಟ್ಟಿಯ ತುತ್ತತುದಿಯಲ್ಲಿ ಸೇರಿಸಿಕೊಳ್ಳಬಹುದು.

*

ಇಂತಹ ಹೋಳಿಯನ್ನೊಮ್ಮೆ ನಾನೂ ನೊಡಬೇಕಲ್ಲ ಅನಿಸಿ ಕಾಲವಾಯಿತು. ಗಳಿಗೆ ಕೂಡಿ ಬಂದಿದ್ದು ಈಗ. ಹೀಗೆ ನಾನು ತೋಡಿಕೊಂಡ ಆಸೆಗೆ ಬಂದ ಉತ್ತರಗಳು ಹೆಚ್ಚು ಹೀಗೇ ಇದ್ದವು.
‘ಹೋಳಿಗಾ? ವೃಂದಾವನಕ್ಕಾ?’
ಕೇಳುವ ಧಾಟಿಯಲ್ಲೇ ನಿನಗೇನು ಹುಚ್ಚಾ ಅನ್ನುವ ಭಾವ. ಹೋಳಿ ಹಬ್ಬ ಹುಟ್ಟಿದ ನಾಡಿಗೆ ಹೋಗಿ ಹೋಳಿ ಆಚರಿಸೋದಂದ್ರೆ ಅದು ಕೈಲಾಗದ್ದು, ಬಹಳವೇ ಕಷ್ಟ ಎಂಬ ಭಾವನೆ. ಇದು ನಿಜವೂ ಹೌದು. ಅಷ್ಟೂ ಬ್ರಜವಾಸಿಗಳ ನಿಜದ ಸಂಭ್ರಮವೇ ಹೋಳಿ ಹಬ್ಬ.

ಸಾವಿರಕ್ಕಿಂತಲೂ ಹೆಚ್ಚು ವರ್ಷಗಳ ಆಚರಣೆಯ ಇತಿಹಾಸವಿರುವ, ರಾಧಾಕೃಷ್ಣರ ಪ್ರೇಮದ ನೆನಪಿನ ಪ್ರೀತಿಯ ಹಬ್ಬ. ಕಷ್ಟಗಳೆಲ್ಲ ಮರೆತು ಚಳಿಗಾಲ ಮುಗಿಸಿ ವಸಂತವ ಸ್ವಾಗತಿಸುವ ಮತ್ತೆ ಚುರುಕಾಗುವ ವಾರಪೂರ್ತಿ ಬಣ್ಣಗಳ ಲೋಕದಲ್ಲಿ ಮಿಂದೇಳುವ ಹಬ್ಬ. ಮುರಿದ ಸಂಬಂಧ, ಪ್ರೀತಿಗಳನ್ನು ಮತ್ತೆ ಜೋಡಿಸುವ ಜೀವನಪ್ರೀತಿಯ ಹಬ್ಬ. ಉತ್ತರ ಭಾರತದ ಜನರ ಈ ಹಬ್ಬದ ಜೊತೆಗಿನ ಧಾರ್ಮಿಕ ಬಾಂಧವ್ಯ ಈಗ ಆಧುನಿಕಗೊಂಡು ಧರ್ಮಗಳನ್ನೂ ಮೀರಿ ಪ್ರೀತಿಯ ಹಬ್ಬವಾಗಿ ಪ್ರಪಂಚದಾದ್ಯಂತ ಪಸರಿಸಿದೆಯಾದರೂ, ಬ್ರಜವಾಸಿಗಳ ಆಚರಣೆಯ ಘಮಲೇ ಬೇರೆ. ಆ ದೇಸೀ ಗಂಧ ಬೇರೆಲ್ಲೂ ದಕ್ಕದು. ಹಾಗಾಗಿಯೇ ವೃಂದಾವನದ ಹೋಳಿಯ ಮೇಲೆ ವಿದೇಶೀಯರಿಗೂ ಸೆಳೆತ. ಛಾಯಾಗ್ರಾಹಕರಿಗೆ ಸ್ವರ್ಗ. ಒಟ್ಟಾರೆ, ಕಂಡು ಕೇಳರಿಯದ ಜನ ಜಾತ್ರೆ.

ಕೃಷ್ಣ ಹುಟ್ಟಿದ ಮಥುರಾ, ರಾಧೆಯ ಬರ್ಸಾನ, ರಾಧಾಕೃಷ್ಣರ ವೃಂದಾವನ, ನಂದಗಾಂವ್, ಗೋವರ್ಧನ ಇವಲ್ಲ ಹೋಳಿಯ ರಂಗಿನಲ್ಲಿ ಮಿಂದೇಳುವ ಬ್ರಜಭೂಮಿಯ ಊರುಗಳು. ಗೋಕುಲದ ಹೋಳಿ, ಬಂಕೇ ಬಿಹಾರಿಯ ಹೋಳಿ, ವಿಧವೆಯರ ಹೋಳಿ, ಹೂಮಾರುವವರ ಹೋಳಿ, ಬರ್ಸಾನದ ಲಾಠ್‌ ಮಾರ್ ಹೋಳಿ ಹೀಗೆ ದಿನವೂ ಒಂದೊಂದು ಆಚರಣೆ. ವಾರವಾದರೂ ಸಂಭ್ರಮಕ್ಕೆ ಕೊರತೆಯಿಲ್ಲ. ವೃಂದಾವನದ ಅಷ್ಟೂ ಗಲ್ಲಿಗಳಿಗೆ ಅಕ್ಷರಶಃ ಗುಲಾಬಿ ರಂಗು. ಬಿಳಿ ಸೀರೆ ಉಟ್ಟು, ಸದಾ ಭಜನೆ ಮಾಡುವ ವಿಧವೆಯರಿಗೂ ಈಚೆಗಿನ ವರ್ಷಗಳಲ್ಲಿ ಹೋಳಿಯಲ್ಲಿ ಪಾಲು ಸಿಕ್ಕಿದ್ದು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿಯೂ ಬದಲಾಗಿದೆ.

*

ಈಗ್ಗೆ ಕೆಲ ವರ್ಷಗಳ ಹಿಂದೆ, ಯುವತಿಯೊಬ್ಬಳು ಸಾಮಾಜಿಕ ಜಾಲತಾಣಗಳ ಟ್ರಾವೆಲ್ ಗುಂಪುಗಳಲ್ಲಿ ಮಥುರಾ ವೃಂದಾವನದ ಹೋಳಿಯ ಕಹಿ ಘಟನೆಯನ್ನು ನೆನೆದು, ಎಚ್ಚರಿಕೆ ಕೊಟ್ಟಿದ್ದಳು. ತನ್ನ ಪಾಲಿಗೆ ಈ ಹೋಳಿ ಒಂದು ಎಂದೂ ಮರೆಯದ ದುಃಸ್ವಪ್ನ ಎಂದು ತನಗಾದ ಅಹಿತಕರ ಘಟನೆಯನ್ನು ಬರೆದುಕೊಂಡಿದ್ದಳು. ಈ ವಿಷಯ ಆಗ ಸಾಕಷ್ಟು ಚರ್ಚೆಗೂ ಒಳಗಾಗಿ ಅನೇಕ ಹುಡುಗಿಯರು ತಮ್ಮ ಅನುಭವಗಳನ್ನೂ ಹಂಚಿಕೊಡಿದ್ದರು.

‘ಬುರಾ ಮತ್ ಮಾನೋ, ಹೋಲಿ ಹೆ’ ಎಂಬ ಸುಲಭದ ಮಾತೊಂದನ್ನು ತೇಲಿಬಿಟ್ಟು ಹೋಳಿಯ ಹೆಸರಿನಲ್ಲಿ, ಅಪರಿಚಿತ ಯುವಕರು ಹಿಂದಿನಿಂದ ಬಂದು ಬಣ್ಣ ಎರಚುವ ನೆಪದಲ್ಲಿ ಹುಡುಗಿಯರ ಮೈಮುಟ್ಟುವುದು, ಛಾವಣಿಗಳಲ್ಲಿ ನಿಂತು ಬೇಕೆಂದೇ ಪಿಚಕಾರಿಗಳಲ್ಲಿ ಬಣ್ಣ ಚೆಲ್ಲುವುದು, ಬಣ್ಣದ ನೀರು ತುಂಬಿದ ಬೆಲೂನುಗಳನ್ನು ಹುಡುಗಿಯರ ಮೈಮೇಲೆ ಎಸೆದು ತಮಾಷೆ ನೋಡುವುದು ಇತ್ಯಾದಿ ಇತ್ಯಾದಿ ವಿಚಾರಗಳನ್ನು ಹೊರಹಾಕಿದ್ದರಿಂದ ಮಥುರಾ, ವೃಂದಾವನಕ್ಕೆ ಹುಡುಗೀರು ಹೋಳಿ ಸಂದರ್ಭ ಮಾತ್ರ ಹೋಗುವುದು ಉಚಿತವಲ್ಲ ಎಂಬ ಮಾತು ವ್ಯಾಪಕವಾಗಿ ಕೇಳಿಬಂದಿತ್ತು.

ಅಸಭ್ಯವಾಗಿ ನಡೆದಿದ್ದೂ ಅಲ್ಲದೆ, ಆಮೇಲೆ ‘ಹೋಳಿ ಆಡಲು ಇಲ್ಲಿ ಬಂದಿದ್ದೀರೆಂದರೆ ನೀವು ಇದಕ್ಕೆಲ್ಲ ರೆಡಿ ಅಂತಾನೇ ಅರ್ಥವಲ್ಲವೇ’ ಎಂಬ ಉತ್ತರವೂ ಈ ಮಂದಿಯ ಪ್ರಮುಖ ಅಸ್ತ್ರ, ಹಾಗಾಗಿ, ದಯವಿಟ್ಟು ಈ ಬಗ್ಗೆ ಜಾಗ್ರತೆಯಿಂದಿದ್ದು, ಗುಂಪಿನಲ್ಲಿ ಹೋಗಿ. ಸೋಲೋ ಪ್ರಯತ್ನಕ್ಕೆಲ್ಲ ಕೈಹಾಕಬೇಡಿ ಎಂಬ ಸಲಹೆಗಳು ಧಾರಾಳವಾಗಿ ಇಂಟರ್ನೆಟ್ ಒದಗಿಸಿತ್ತು.

ಇಷ್ಟೆಲ್ಲ ಓದಿಕೊಂಡು, ಮನಸ್ಸು ಗಟ್ಟಿ ಮಾಡಿಕೊಂಡು, ಬಣ್ಣದಲ್ಲಿ ಮಿಂದೇಳುವ ನಗರಿಯನ್ನು ಕಣ್ಣಲ್ಲೂ , ಮುಖ್ಯವಾಗಿ ಕ್ಯಾಮರಾ ಕಣ್ಣಲ್ಲೂ ಕಾಪಿಡಬೇಕೆಂದು ಮಿಶ್ರ ಭಾವದಿಂದ ಈ ಬಾರಿ ವೃಂದಾವನಕ್ಕೆ ಕಾಲಿಟ್ಟಿದ್ದೆ. ಜನ ಮರುಳೋ ಜಾತ್ರೆ ಮರುಳೋ ಗಾದೆಗೆ ಹೇಳಿ ಮಾಡಿಸಿದಂಥ ಮಾಹೋಲ್. ಕೊರೋನ ಎಂಬುದೇನಾದ್ರು ಇಷ್ಟರವರೆಗೆ ಇದ್ದಿದ್ದು ಹೌದಾ ಅಂತ ನಮಗೆ ನಾವೇ ಚಿವುಟಿಕೊಳ್ಳಬೇಕು, ಅಷ್ಟೆ, ಅಷ್ಟೂ ಜನ! ತಂಡೋಪತಂಡವಾಗಿ ಹತ್ತಿರದ ಊರುಗಳಿಂದ, ಹೋಳಿ ಆಚರಿಸಲು ಟ್ರಕ್ಕುಗಳಲ್ಲಿ, ಟ್ರ್ಯಾಕ್ಟರುಗಳಲ್ಲಿ ಬಂದಿಳಿವ ಜನ. ಇನ್ನು ಮಾಸ್ಕ್ ಕಥೆ ಈ ಹೋಳಿಯಲ್ಲಿ ವೃಥಾ ಕೇಳೋದ್ಯಾಕೆ ಬಿಡಿ.

ನನಗೆ ಇಂಥ ಘಟನೆಗಳೇನೂ ಅನುಭವಕ್ಕೆ ಬರಲಿಲ್ಲ. ಆದರೂ ಅಲ್ಲಿನ ಜನಸಂಖ್ಯಾ ಸ್ಫೋಟದಿಂದಾಗಿ ಮಾತ್ರ ಕನಸು ಕಂಡಂತೆ ಚಿತ್ರಗಳು ದಕ್ಕಲಿಲ್ಲ ಎಂಬುದೂ ಸತ್ಯವೇ ಆದರೂ, ಪುಟಾಣಿ ಮಕ್ಕಳು ಮಾತ್ರ ಅಲ್ಲಲ್ಲಿ ಇಂತಹ ತುಂಟತನ ತೋರುತ್ತಿದ್ದುದು ಬಿಟ್ಟರೆ, ಅಪರಿಚಿತರ್ಯಾರಿಂದಲೂ ಇಂತಹ ಅನುಭವ ಆಗಲಿಲ್ಲ ಎಂಬುದು ಖುಷಿ. ಹಾಗಂತ ಬೇರೆಯವರ ಅನುಭವ ಸುಳ್ಳು ಎಂದೂ ಹೇಳಲಾರೆ. ಇಂತಹ ಜಾಗಗಳಲ್ಲಿ ಹೀಗಿರುವ ಘಟನೆಗಳು ಸಾಮಾನ್ಯ ಕೂಡ. ವಿದೇಶೀ ಮಹಿಳೆಯರಿಗೂ ಇಂತಹ ಗುಂಪುಗಳಲ್ಲಿ ನೀಡಿರುವ ಸಲಹೆಗಳನ್ನು ಗಮನಿಸಿದರೆ, ಹಿನ್ನೆಲೆ ಸ್ಪಷ್ಟವಾಗುತ್ತದೆ. ‘ಎಷ್ಟಾದರೂ ಭಾರತ. ಜಾಗ್ರತೆಯಿಂದಿರಿ’ ಮಾತುಗಳು ಮಾತ್ರ ಭಾರತದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಜಾಗತಿಕವಾಗಿ ಇರುವ ಅಭಿಪ್ರಾಯವನ್ನು ತಿಳಿಸುತ್ತದೆ.

ಕೃಷ್ಣರಾಧೆಯರ ಪವಿತ್ರ ಪ್ರೇಮವನ್ನು ಎದೆಗಪ್ಪಿಕೊಂಡು ಆರಾಧಿಸುವ ನಾವು, ಮಾತೆತ್ತಿದರೆ ರಾಧೇ ರಾಧೇ ಎಂದು ಎಂದು ತಮ್ಮ ದಿನನಿತ್ಯದ ಕಾರ್ಯಗಳಲ್ಲಿ ರಾಧೆಯನ್ನೇ ಉಸಿರಾಗಿಸಿದ ಇಲ್ಲಿಯ ಮಂದಿಗೆ ಇಂತಹ ಕಳಂಕ ಅಂಟಿರುವುದು ಮಾತ್ರ ಬೇಸರದ ಸಂಗತಿ. ಇದನ್ನು ತೊಡೆದುಹಾಕುವುದೂ ನಮ್ಮ ಕೈಲೇ ಇದೆ.

ಆದರೆ ಒಂದಂತೂ ನಿಜ. ‘ನನ್ನ ಮೈಮೇಲೆ ಬಣ್ಣ ಬಿದ್ದರೆ ಇಷ್ಟ ಆಗಲ್ಲ, ಆದ್ರೆ ಹಬ್ಬ ನೋಡ್ಬೇಕು’ ಅನ್ನೋರಿಗೆ ಇದು ಖಂಡಿತ ಜಾಗವಲ್ಲ. ಧರಿಸಿದ್ದ ಬಟ್ಟೆಯೂ ಸೇರಿದಂತೆ ಕೈಲಿದ್ದುದೆಲ್ಲ ಕಸದ ಬುಟ್ಟಿಗೆ ಹೋಗುತ್ತದೆ ಎಂಬ ಸತ್ಯದ ಅರಿವೂ ಇರಬೇಕು. ಅಪರಿಚತರೂ ಕೇವಲ ಸ್ನೇಹ ಭಾವದಿಂದ ಎರಚುವ ಬಣ್ಣಕ್ಕೆಲ್ಲ ಪ್ರತಿರೋಧ ಒಡ್ಡುವಂತವರಿಗೆ ಇದು ಸಲ್ಲ. ಇದಕ್ಕೆಲ್ಲ ಸೈ ಆದ್ರೆ, ಬ್ರಜಭೂಮಿಯ ಹೋಳಿಗೊಂದು ಜೈ ಎಂದು ಹೊರಡಬಹುದು.

‍ಲೇಖಕರು ರಾಧಿಕ ವಿಟ್ಲ

March 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: