ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೋಳುಮಂಡೆ ಹುಡುಗನ ಕಥೆ..

ಶುಭಶ್ರೀ ಭಟ್ಟ,ಬೆಂಗಳೂರು

ಕೆಲವೇ ವರ್ಷಗಳ ಹಿಂದೆ ಬಹುತೇಕ ಕನ್ನಡ ಸಿನೆಮಾವೆಂದರೆ ತಮಿಳೋ, ತೆಲುಗೋ, ಮಲೆಯಾಳವೋ ಅಥವಾ ಇನ್ಯಾವುದೋ ಭಾಷೆಯ ರಿಮೇಕ್ ಸಿನೆಮಾವೆಂಬ ಹಣೆಪಟ್ಟಿ ಅಂಟಿಕೊಂಡಿತ್ತು. ಅದೊಂತರ ಪಿಡುಗು ಅಂದರೂ ತಪ್ಪಾಗಲಾರದು. ಇದೇ ಕಾರಣಕ್ಕೆ ಕನ್ನಡ ಸಿನೆಮಾಗಳಿಗೆ ಜನ ಕಡಿಮೆಯಾಗತೊಡಗಿದರು. ಬೆರಳೆಣಿಕೆಯಷ್ಟು ಮಂದಿ ತಮ್ಮ ಸ್ವಂತ ಪರಿಶ್ರಮದಿಂದ ಸಿನೆಮಾ ಮಾಡಿದರೂ, ಪೂರ್ವಾಗ್ರಹ ಪೀಡಿತರಾದ ಜನ ಚಿತ್ರಮಂದಿರದ ಕಡೆಗೆ ತಲೆ ಹಾಕೂ ಮಲಗುತ್ತಿರಲಿಲ್ಲ. ಪರಭಾಷೆಯ ಸಹೋದ್ಯೋಗಿಗಳು ಕನ್ನಡ ಸಿನೆಮಾ ಎಂದರೆ ಸಾಕು ಅವರಪ್ಪನ ಮನೆ ಆಸ್ತಿ ತಿಂದು ತೇಗಿದವರ ತರಹ ಮೂಗು ಮುರಿಯುತ್ತಿದ್ದರು.

ನಮಗೋ ನಮ್ಮ ಭಾಷೆಯ ಅಭಿಮಾನದಿಂದ ಚಿತ್ರರಂಗದವರನ್ನು ವಹಿಸಿಕೊಂಡು ಬಂದು, ಕನ್ನಡದಿಂದ ಬೇರೆ ಭಾಷೆಗೆ ರಿಮೇಕ್ ಆದ ಚಿತ್ರಗಳ ಪಟ್ಟಿ ತೆಗೆದು, ಒಳ್ಳೆ ‘ಪತ್ತೆದಾರಿ ಪ್ರತಿಭಾ’ ತರ ಆಡಿ ಸಾಕಾಗಿತ್ತು..

ಆಗಲೇ ನಮ್ಮಲೂ ಪ್ರತಿಭೆಗಳಿವೆ,ನಾವೂ ಕೂಡ ಹೆಚ್ಚಿನ ಆಡಂಭರ-ದೊಂಬರಾಟಗಳಿಲ್ಲದೇ ಒಳ್ಳೊಳ್ಳೆ ಚಿತ್ರವನ್ನು ಕಟ್ಟಿಕೊಡಬಲ್ಲೆವು ಎನ್ನುವುದು ಸಾಬೀತಾಯಿತು.. ಲೂಸಿಯಾ, ರಂಗಿತರಂಗ, ಗೋಧಿಬಣ್ಣ ಸಾದಾರಣ ಮೈಕಟ್ಟು, ರಿಕ್ಕಿ,ಯೂಟರ್ನ್, ಪುಷ್ಪಕ ವಿಮಾನ, ಕಿರಿಕ್ ಪಾರ್ಟಿ, ಊರ್ವಿ, ಬಿಬಿ ೫, ಸಿಲಿಕಾನ್ ಸಿಟಿ ಹೀಗೆ ಸಾಲು ಸಾಲು ಒಂದಕ್ಕಿಂತ ಒಂದು ವಿಭಿನ್ನ ಚಿತ್ರಗಳು ತೆರೆಕಂಡು ಯಶಸ್ವಿಯಾದವು. ನಮ್ಮ ಸಾಮಾನ್ಯ ಪ್ರೇಕ್ಷಕನ ಜೊತೆ ಪರಭಾಷೆಯ ಸಹೋದ್ಯೋಗಿಗಳೂ ತೆಪ್ಪಗೆ ಸಿನೆಮಾಕ್ಕೆ ಬಂದು ನಮ್ಮ ಗರ್ವ ಹೆಚ್ಚಿಸಿದ ಸಂದರ್ಭಗಳೂ ಅನೇಕ.. ಇಂತಹುದೇ ಹೊಸ ಪ್ರಯತ್ನದ ಸಾಲಿನಲ್ಲಿ ಸೇರುವುದು ನಮ್ಮ ಬೋಳುಮಂಡೆ ಹುಡುಗನ ಕಥೆ ‘ಒಂದು ಮೊಟ್ಟೆಯ ಕಥೆ’..

ಮನುಷ್ಯನೆಂದ ಮೇಲೆ ಒಂದಲ್ಲಾ ಒಂದು ನೂನ್ಯತೆಗಳಿರುವುದು ಸಹಜ. ಕಪ್ಪು-ಬಿಳುಪು, ಎತ್ತರ-ಕುಳ್ಳು, ದಪ್ಪ-ಸಪೂರ, ಸೊಂಪಾದ ಕೂದಲು-ಬೊಕ್ಕತಲೆ, ಕಪ್ಪುಗಣ್ಣು-ಕಾಜುಗಣ್ಣು ಹೀಗೇ ಪಟ್ಟಿ ಮಾಡುತ್ತಾ ಹೋದರೆ ಪುಟಗಳೇ ಬೇಕಾಗಬಹುದು. ಹೀಗೆ ಎಲ್ಲರೂ ಒಂದೇ ತರ ಇರಲು ಸಾಧ್ಯವಿಲ್ಲ. ಎಲ್ಲರೂ ಸುಂದರವಾಗಿಯೇ ಇರಬೇಕೆಂದು ಅಪೇಕ್ಷಿಸುವುದು ಕೂಡ ಮೂರ್ಖತನ.

ಸಂಸಾರ ಮಾಡಲಿಕ್ಕೆ ಹೊಂದಿಕೊಂಡು ಹೋಗುವ ಗುಣ ಸಾಕೇ ಹೊರತು ಬಾಹ್ಯ ಸೌಂದರ್ಯವಲ್ಲ. ಸುಂದರವಾಗಿರುವವರೆಲ್ಲರದೂ ಸುಂದರ ಸಂಸಾರವೇ ಎಂದು ಅದು ಹೇಗೆ ಹೇಳಲಾದಿತು? ಬಾಹ್ಯ ಸೌಂದರ್ಯ ಶಾಶ್ವತವೂ ಅಲ್ಲ.. ವಿಪರ್ಯಾಸವೆಂದರೆ ಇದರ ಅರಿವಿದ್ದರೂ ಜನರು ಬೇರೆಯವರ ಸಮಸ್ಯೆಯನ್ನು ಕುರಿತು ಆಡಿಕೊಳ್ಳುವುದೇ ಜಾಸ್ತಿ. ಅದೇನೋ ಅಂತಾರಲ್ಲಾ ‘ತಮ್ಮ ಕಾಲಕೆಳಗೆ ಹೆಗ್ಗಣ ಕೊಳೆತು ಬಿದ್ದಿದ್ದರೂ, ಬೇರೆಯವರ ಬಳಿ ಇಲಿ ಸತ್ತು ಬಿದ್ದಿದ್ಯಾ ಎಂದು ಹುಡುಕಿದ್ರಂತೆ’. ತಮ್ಮಲ್ಲಿ ಏನೇ ಸಮಸ್ಯೆಯಿರಲಿ ಆದರೆ ತಾವು ಮದುವೆಯಾಗುವವ/ಳು ಮಾತ್ರ ತ್ರಿಪುರ ಸುಂದರ/ರಿಯೇ ಆಗಿರಬೇಕು ಎಂಬುದು ಅನೇಕರ ಅಪೇಕ್ಷೆ. ಇಂತಹುದೇ ಸಮಸ್ಯೆ ‘ಬೊಕ್ಕತಲೆ’ ಮತ್ತು ‘ಸ್ಥೂಲದೇಹ’ದ ನಡುವೆ ನಡೆಯುವ ಘಟನೆಗಳನ್ನೊತ್ತ ಕಥೆಯೇ ‘ಒಂದು ಮೊಟ್ಟೆಯ ಕಥೆ’.


ಜನಾರ್ಧನನಿಗೆ ಒಂದು ವರುಷದೊಳಗೆ ಮದುವೆ ಮಾಡದಿದ್ದರೆ ಮುಂದೆ ಸನ್ಯಾಸಿಯಾಗುವ ಸಾಧ್ಯತೆಗಳಿದೆ ಎಂಬ ಜ್ಯೋತಿಷಿಗಳ ಮಾತಿಗೆ ಹೆದರಿದ ಜನಾರ್ಧನನ ತಂದೆ ತಾಯಿ ತ್ವರಿತಗತಿಯಲ್ಲಿ ಅವನಿಗೆ ವಧುವಿನ ಅನ್ವೇಶಣೆ ಆರಂಭಿಸುತ್ತಾರೆ. ಆದರೆ ಶುರುವಿನಲ್ಲೇ ‘ಬೋಳುಮಂಡೆ ಮತ್ತು ಕನ್ನಡ ಪ್ರಾಧ್ಯಾಪಕ’ ಎಂಬೆರಡು ಕಾರಣವಿಟ್ಟುಕೊಂಡು ಜನಾರ್ಧನನ್ನು ಹುಡುಗಿಯರೆಲ್ಲಾ ನಿರಾಕರಿಸುತ್ತಿರುವುದು, ಕಂಡವರೆಲ್ಲಾ ‘ಮೊಟ್ಟೆ-ಮೊಟ್ಟೆ’ಯೆಂದು ರೇಗಿಸುವುದು, ವಯಸ್ಸೇನೂ ಆಗದಿದ್ದರೂ ಅಪ್ಪನ ಪ್ರಾಯದವರೆಂದು ತಪ್ಪು ತಿಳಿದುಕೊಳ್ಳುವುದು,ತನಗಿಂತ ನೋಡಲು ಚೆನ್ನಾಗಿರುವ ಸ್ವಂತ ತಮ್ಮನ ಪ್ರೇಮ ಸಂಭಾಷಣೆ ಹೀಗೆ ಅನೇಕ ಕಾರಣಗಳಿಂದ ನಮ್ಮ ಬೋಳುಮಂಡೆಯ ನಾಯಕ ನೊಂದು ಬೆಂದು ಹೈರಾಣಾಗಿರುತ್ತಾನೆ. ಡಾ||ರಾಜಕುಮಾರರ ಅಪ್ಪಟ ಅಭಿಮಾನಿಯಾದ ನಾಯಕನಿಗೆ ಸಮಯಕ್ಕೆ ಸರಿಯಾಗಿ ಸಹಾಯ ಮಾಡುವ ಹಾಡುಗಳು ತಿಳಿಹಾಸ್ಯದ ಮೂಲಕ ಕಚಗುಳಿಯಿಡುತ್ತವೆ. ಹುಡುಗಿಯನ್ನು ತಾನೇ ಹುಡುಕಿಕೊಳ್ಳಲು ಹೋಗಿ ಅವನು ಮಾಡಿಕೊಳ್ಳುವ ಫಜೀತಿ ಒಂದೆರಡಲ್ಲ.

ಮೊಟ್ಟೆನಾಯಕನ ಪಾತ್ರದಲ್ಲಿ ‘ರಾಜ್ ಬಿ ಶೆಟ್ಟಿ’ ಅವರು ನಮ್ಮ ಪಕ್ಕದಮನೆ ಹುಡುಗನ ಕಥೆಯೆಂಬಷ್ಟು ಸರಳವಾಗಿ ಅಭಿನಯಿಸಿದ್ದಾರೆ. ಸಿನೆಮಾದ ತುಂಬೆಲ್ಲಾ ತಮ್ಮ ಸಹಜ ಅಭಿನಯದಿಂದ,ಬೊಕ್ಕತಲೆಯ ಮಿಂಚಿಂದ ಮನಸೆಳೆದು ನಮ್ಮಲ್ಲಿ ಒಬ್ಬರಾಗಿ ಹೋಗುತ್ತಾರೆ. ಇನ್ನು ‘ಸರಳ’ ಪಾತ್ರದಲ್ಲಿ ಶೈಲಶ್ರೀ, ಜನಾರ್ಧನ್ ತಾಯಿಯಾಗಿ ಉಷಾ ಭಂಡಾರಿ, ಶ್ರೀನಿವಾಸ್ ಆಗಿ ಪ್ರಕಾಶ್ ಸೇರಿದಂತೆ ಅನೇಕರು ತಮ್ಮ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿನಯಿಸುವುದರ ಮೂಲಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ರಾಜ್ ಬಿ.ಶೆಟ್ಟಿ ಉತ್ತಮ ನಾಯಕನಟನಾಗಿ,ಭರವಸೆಯ ನಿರ್ದೇಶಕನಾಗಿ ಗೆದ್ದಿದ್ದಾರೆ. ಕ್ಯಾಮೆರಾ-ಸಂಕಲನ ಮಾಡಿರುವ ಪ್ರವೀಣ್ ಶ್ರೀಯಾನ್, ಸಂಗೀತ ನಿರ್ದೇಶಕ ಮಿದುನ್ ಮುಕುಂದನ್ ಚಿತ್ರ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ‘ಚೆಂದ ಇವಳು’ ಹಾಡು ಮನೆಗೆ ಬಂದರೂ ಗುನುಗುನಿಸುವಂತೆ ಮಾಡುತ್ತದೆ. ಎಲ್ಲಿಯೂ ಅಪಾರ್ಥದ ಹಾಸ್ಯ,ಅಪಹಾಸ್ಯ ಮಾಡುವ ಸನ್ನಿವೇಶಗಳಿಲ್ಲದೇ ಕೇವಲ ತಿಳಿಹಾಸ್ಯದ ಮೂಲಕ ಪ್ರೇಕ್ಷಕರ ಮನಸೆಳೆಯುವುದರ ಜೊತೆಗೆ, ಚಿತ್ರದಲ್ಲಿರುವ ಸಂದೇಶವೂ ಗಮನಾರ್ಹ..

ಹೊಸಬರ ಪ್ರಯತ್ನಕ್ಕೆ ನಿಮ್ಮದೊಂದು ಸಹಕಾರವಿರಲಿ. ಕುಟುಂಬ ಸಮೇತ ಚಿತ್ರಮಂದಿರಕ್ಕೆ ಹೋಗಿ ಹೊಟ್ಟೆತುಂಬಾ ನಕ್ಕುಬನ್ನಿ.. ಮೊಟ್ಟೆಯ ಚಿತ್ರ ಎಲ್ಲೆಡೆಯೂ ಬಿಸಿ ಆಮ್ಲೇಟ್ ಆಗಿ ಯಶಸ್ವಿಯಾಗಲಿ..

‍ಲೇಖಕರು admin

15 July, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading