ಬೋಪಯ್ಯ ಚೋವಂಡ ಓದಿದ ‘ಕೋವಿಡ್ ಕಥೆಗಳು’

ಬೋಪಯ್ಯ ಚೋವಂಡ

—–

ನನಗೆ ಅತ್ಯಂತ ತೃಪ್ತಿ ಕೊಟ್ಟ ಈ ಬಾರಿಯ ಹಾಸನಾಂಬೆ ದರ್ಶನದೊಂದಿಗೆ, ಅದೇ ದಿನ ನನಗೆ ಕುಷಿ ಕೊಟ್ಟ ಇನ್ನೂ
ಎರಡು ಸಂಗತಿಗಳೆಂದರೆ, ಆತ್ಮೀಯರಾದ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ
ಶಿವಾನಂದ ತಗಡೂರು ಅವರು ಹಾಸನದಲ್ಲಿ ಭೇಟಿಯಾಗಿ ತಮ್ಮ’ಕೋವಿಡ್ ಕಥೆಗಳು’ ಪುಸ್ತಕವನ್ನು ಪ್ರೀತಿಯಿಂದ ನನಗೆ ಕೊಟ್ಟಿದ್ದು ಹಾಗೂ ತಾಯಿಯ ದರ್ಶನ ಮುಗಿಸಿ ಬರುವಾಗ ಭಿಕ್ಷುಕನೊಬ್ಬ ಓದಲು ದಿನ ಪತ್ರಿಕೆ ಕೇಳಿದ್ದು.

ತಗಡೂರು ಅವರ ಈ ಪುಸ್ತಕ ಕಲಬುರ್ಗಿಯಲ್ಲಿ ನಡೆದ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೇ (ಆ ಕಾರ್ಯಕ್ರಮದ ನಿರೂಪಕ ನಾನಾಗಿದ್ದೆ) ನನ್ನ ಕೈ ಸೇರಬೇಕಿತ್ತು. ಆದರೆ ಪ್ರತಿ ಸಲ ಏನೋ ಒಂದು ಕಾರಣದಿಂದ ತಪ್ಪಿ ಹೋಗುತ್ತಿತ್ತು. ನಾನೂ ಅವರನ್ನು ಕಂಡಾಗಲೆಲ್ಲ ನಿಮ್ಮ ಪುಸ್ತಕ ಸಿಗಲಿಲ್ಲ ಎನ್ನುತ್ತಿದ್ದೆ. ಕಾರಿನಲ್ಲಿದೆ, ಕೊಡ್ತೀನಿ ಅಂತಿದ್ರು. ಅದು ನನ್ನ ಕೈ ಸೇರೋಕೆ ತಡವಾದಷ್ಟು ಅದನ್ನು ಓದುವ ಆಸೆ ನನಗೆ ಹೆಚ್ಚಾಗುತ್ತಿತ್ತು. ಕಡೆಗೂ ಪುಸ್ತಕ ಅವರ ಜಿಲ್ಲೆಯಲ್ಲೇ ನನಗೆ ಸಿಕ್ಕಿದ್ದು ತುಂಬಾ ಕುಷಿ ಕೊಟ್ಟಿತ್ತು. ಜೊತೆಗೆ ಬಸ್ಸಲ್ಲಿ ನಿಶ್ಚಿಂತೆಯಿಂದ ಓದಬಹುದಲ್ಲ ಎಂಬ ತೃಪ್ತಿ..!

ಬಸ್ ನಿಲ್ದಾಣಕ್ಕೆ ಹಾಸನದವನೇ ಆದ ನಲ್ಮೆಯ ಗೆಳೆಯ ಸುಪ್ರೀಂ ಕಾರಿನಲ್ಲಿ ಕರೆದುಕೊಂಡು ಬಂದು ಬಸ್ ಹತ್ತಿಸಿ
ಹೋದ. ಸೀಟಲ್ಲಿ ಕುಳಿತವನೇ, ಪುಸ್ತಕ ಓದಲು ಆರಂಭಿಸಿದೆ. 8-10 ಪುಟ ಓದಿರಬಹುದು, ನಿದ್ದೆಯಿಂದ ಕಣ್ಣು ಎಳೆಯಲು ಆರಂಭಿಸಿತು. ಓಹ್.. ಬೆಳಿಗ್ಗೆ 4 ಗಂಟೆಗೆ ನಿದ್ದೆಯಿಂದ ಎಚ್ಚರವಾಗಿದ್ದು, ಕೇವಲ ನಾಲ್ಕೇ ಗಂಟೆ ನಿದ್ದೆ ಆಗಿದ್ದು ಅಂದುಕೊಂಡು ಸ್ವಲ್ಪ ನಿದ್ದೆ ಮಾಡಿದೆ. ಬಸ್ ನಿಲ್ಲಿಸಿದ ಶಬ್ಧಕ್ಕೆ ಎಚ್ಚರವಾಗಿ ಕಣ್ತೆರೆದಾಗ, ಹತ್ತು ನಿಮಿಷ ಸಮಯ ಇದೆ ಚಹಾ ಕುಡಿಯುವವರು ಕುಡಿದು ಬನ್ನಿ ಎಂದಾಗ ಚಕ್ಕನೆ ಇಳಿದು ಹೋಗಿ ಚಹಾ ಕುಡಿದು ಬಂದೆ. ನಿದ್ದೆ ಮಾಡಿದ್ದು, ಚಹಾ ಕುಡಿದದ್ದು ಮನಸ್ಸಿಗೆ ಹಗುರವೆನಿಸಿತು. ಪುಸ್ತಕ ಹಿಡಿದು ಓದಲು ಆರಂಭಿಸಿದೆ.. ಮಧ್ಯೆ, ಮಧ್ಯೆ ಕಣ್ಣು ತುಂಬಿ ಬರುತ್ತಿತ್ತು. ಅಕ್ಷರಗಳು ಮಂಜು ಮಂಜಾದಾಗ ಕಣ್ಣೊರೆಸಿ (ಅಕ್ಕ ಪಕ್ಕದವರಿಗೆ ಕಾಣದಂತೆ) ಓದುತ್ತಾ ಹೋದೆ..!

ಕೋವಿಡ್ ಆರಂಭವಾದಾಗ, ನಾನೂ ನಗರ ಜಿಲ್ಲಾ ರೆಡ್ ಕ್ರಾಸ್ ನ ಕಾರ್ಯದರ್ಶಿಯಾಗಿ 3-4 ತಿಂಗಳು ಹಗಲಿರುಳು ದುಡಿದದ್ದು, ಎಲ್ಲಾ ದುರಂತಗಳನ್ನು ಕಂಡಿದ್ದು ನೆನಪಾಗಿ ದುಃಖ ಒತ್ತರಿಸಿ ಬರುತ್ತಿತ್ತು.

ಹಿರಿ ಕಿರಿಯ ಪತ್ರಕರ್ತ ಮಿತ್ರರು ಕೋವಿಡ್ ಗೆ ಬಲಿಯಾದದ್ದು ಕರುಳು ಹಿಂಡುವ ಕಥೆಯಾದರೆ, ಯಜಮಾನನಿಲ್ಲದ ಮನೆ, ಬಡತನ, ಊಟಕ್ಕೂ ಆಸ್ಪತ್ರೆ ಖರ್ಚಿಗೂ ಹಣವಿಲ್ಲದ ದಯನೀಯ ಸ್ಥಿತಿ. ಅಬ್ಬಬ್ಬಾ..! ಒಂದೊಂದು ಕೂಡ ವ್ಯಥೆಯ ಕಥೆ.. ಕುಟುಂಬವೇ ದಿಕ್ಕೇ ತೋಚದೆ ಕುಳಿತಿದ್ದಾಗ, ತಮ್ಮ ಸಹಪಾಠಿಯ, ಗೆಳೆಯನ ಕುಟುಂಬಕ್ಕೆ ನೆರವಾಗಲು ಒಂದಿಷ್ಟೂ ಒಳ್ಳೆಯ ಮನಸ್ಸುಗಳು ಸೇರಿ, ತಮ್ಮದೇ ಸಂಘದ ಅಧ್ಯಕ್ಷರನ್ನು ಭೇಟಿಯಾಗಿ ಸಹಾಯ ಮಾಡುವoತೆ ಕೋರಿ, ಅದನ್ನು ಅಷ್ಟೇ ಗಂಭೀರವಾಗಿ ತೆಗೆದುಕೊಂಡು ಅಧ್ಯಕ್ಷ ತಗಡೂರು ಅವರು ಸರಕಾರದಿಂದ ಹಣ, ಅವಶ್ಯಕತೆ ಇರುವವರಿಗೆ ಸೂರು, ಕೆಲವರಿಗೆ ಉದ್ಯೋಗ ಕೊಡಿಸುವಲ್ಲಿ ಸಫಲರಾದದ್ದು ಅವರ ಮಾನವೀಯ ಕಳಕಳಿಗೆ, ಅವರ ಧೀಶಕ್ತಿಗೆ ಸಾಕ್ಷಿ..!

80 ವರ್ಷದ ಬೀದರ್ ನ ಮಾರುತಿ ರಾವ್ ಮಾಂದಳೆ, ಕೆ. ಆರ್. ಪೇಟೆಯ ಸಿಂಕ ಸುರೇಶ್, ಸ್ವಾಭಿಮಾನಿ ಹಿರಿಯ ಪತ್ರಕರ್ತ ಹಾಸನದ ಹೆಚ್. ಆರ್. ಹರೀಶ್, ಕೋವಿಡ್ ಪಾಸಿಟಿವ್ ಎಂದು ಕೇಳಿಯೇ ಹೃದಯಾಘಾತದಿಂದ ಮೃತ ಪಟ್ಟ ಗೌರಿಪುರ ಚಂದ್ರು, ಹಿರಿಯ ಪತ್ರಕರ್ತರಾದ ಸೋಮಶೇಖರ್ ಯಡವಟ್ಟಿ, ಪ್ರೀತಿಸಿ ಮದುವೆಯಾದ ದತ್ತಾತ್ರೇಯ ಅವರು, ಪತ್ನಿ ಕೌಸಲ್ಯಾಳ ಎದುರಲ್ಲೇ ಪ್ರಾಣ ಬಿಟ್ಟಿದ್ದು.. ನನ್ನ ಒಳ್ಳೆಯ ಗೆಳೆಯ ಪ್ರಜಾವಾಣಿಯ ಕ್ರೀಡಾ ವರದಿಗಾರ ಡಿ. ಗರುಡ.. ಒಂದೊಂದು ಕಥೆ ಓದುತ್ತಿದ್ದಂತೆ ಒಂದು ದಟ್ಟ ವಿಷಾದ ನನ್ನೊಳಗೆ ಮಡುಗಟ್ಟಿತ್ತು.

ನನ್ನೆದುರು ಸೀಟಲ್ಲಿ ಕುಳಿತಿದ್ದ ದಂಪತಿಯ ಪುಟ್ಟ ಪಾಪು ನಿದ್ದೆಯಿಂದ ಎದ್ದು ಆಟವಾಡುತಿತ್ತು. ನನ್ನನ್ನು ಮುಟ್ಟುವ, ಮಾತಾಡಿಸುವ ಪ್ರಯತ್ನ ಮಾಡುತ್ತಿತ್ತು.ಸಾಮಾನ್ಯವಾಗಿ ಪುಟ್ಟ ಮಕ್ಕಳೊಂದಿಗೆ ಆಟ ಆಡೋದು ನನಗಿಷ್ಟ. ಆದರೆ ಒಬ್ಬೊಬ್ಬರ ಕಥೆ ಓದಿ ನನ್ನ ಮನಸ್ಸು ಭಾರವಾಗಿ ಹೋಗಿತ್ತು. ಮಗುವಿನೊಂದಿಗೆ ಆಡುವ ಮನಸ್ಸು ಮಾರು ದೂರ ಹೋಗಿತ್ತು. ಪುಸ್ತಕ ಓದಿ ಮುಗಿಸಿದಾಗ ದಾಸರಹಳ್ಳಿ ಬಂದೇ ಬಿಟ್ಟಿತ್ತು. ಛೇ..ಮಗುವಿನೊಡನೆ ಈಗಲಾದರೂ ಸ್ವಲ್ಪ ಆಡೋಣ , ನಗಿಸೋಣ ಅಂತ ಅಂದುಕೊಳ್ಳುವಷ್ಟರಲ್ಲಿ ಆ ದಂಪತಿ ಇಳಿಯಲು ಎದ್ದರು. ಮಗುವಿನ ಒಂದು ಫೋಟೊ ಆದರೂ ತೆಗೆಯೋಣ ಅಂತ ನೋಡಿದರೆ, ಅದು ನನ್ ಕಡೆ ನೋಡಲೇ ಇಲ್ಲ..!

ಕೋವಿಡ್ ನ ಮನಮಿಡಿಯುವ ಕಥೆಗಳನ್ನು, ನೊಂದವರ ಬಾಳಿಗೆ ನೆರವಾಗಿದ್ದನ್ನು, ಆ ಸಹಾಯ ನೀಡಲು ಸರ್ಕಾರಿ ಮಟ್ಟದಲ್ಲಿ ಪಟ್ಟ ಪಾಡನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿರುವ ಶಿವಾನಂದ ತಗಡೂರು ಇದನ್ನು ಪುಸ್ತಕ ರೂಪದಲ್ಲಿ ದಾಖಲಿಸಿರುವುದು ಸ್ತುತ್ಯಾರ್ಹ ಕಾರ್ಯ..! ಇದೊಂದು ಸಂಗ್ರಹ ಯೋಗ್ಯ ಪುಸ್ತಕ ಎಂಬುವುದರಲ್ಲಿ ಎರಡು ಮಾತಿಲ್ಲ.

ಇನ್ನು.. ಪತ್ರಿಕೆ ಓದುವವರ ಸಂಖ್ಯೆಯೆ ಬಹಳ ಕಡಿಮೆ. ಅಂತಹದರಲ್ಲಿ ದರ್ಶನ ಮುಗಿಸಿ, ಬರುವಾಗ ರಸ್ತೆ ಬದಿಯಲ್ಲಿ ಕುಳಿತಿದ್ದ ಕೈಕಾಲು ಉನವಿದ್ದ ಭಿಕ್ಷುಕನ ನೋಡಿ ಪರ್ಸ್ ನಿಂದ ಚಿಲ್ಲರೆ ತೆಗೆದು ಅವನ ತಟ್ಟೆಗೆ ಹಾಕಿದೆ. ನನ್ನ ಕೈಲಿದ್ದ ದಿನಪತ್ರಿಕೆ ನೋಡಿದ ಆತ, ನಕ್ಕು ಪೇಪರ್ ಕೊಡ್ತೀರಾ ಸಾರ್ ಅಂದ. ಇವನ್ಯಾಕಪ್ಪ ಪೇಪರ್ ಕೇಳುತ್ತಾನೆ ಅಂತ ಅಚ್ಚರಿ ಮತ್ತು ನಗುವಿನೊಂದಿಗೆ, ನಿಂಗ್ಯಾಕಪ್ಪ ಪೇಪರ್ ಅಂದೆ. ಅವನು ಓದಬೇಕು ಸಾರ್ ಅಂದಾಗ, ಏನೂ ಯೋಚಿಸದೆ ಪೇಪರ್ ಕೊಟ್ಟೆ. ನನಗೆ ಮನಸ್ಸು ತುಂಬಿ ಬಂತು.

ದುಡಿಯಲು ಅಶಕ್ತನಾದ ಆತ ಹೊಟ್ಟೆ ತುಂಬಿಸಲು ಭಿಕ್ಷೆ ಬೇಡುತ್ತಾನೆ.. ಆದರೂ ಆತನ ಓದಿನ ಆಸಕ್ತಿ.. ನಿಜಕ್ಕೂ ಇತರರ ಕಣ್ಣು ತೆರೆಸುವoತದ್ದು. ಎಲ್ಲಾ ಇದ್ದೂ ಕನಿಷ್ಠ ಒಂದು ಪತ್ರಿಕೆ ಓದಲು ಸೋಮಾರಿತನ ತೋರಿಸುವ ಅನೇಕರ ಮುಂದೆ ಆ ಭಿಕ್ಷುಕ ನನಗೆ ತುಂಬಾ ದೊಡ್ಡವನಂತೆ ಕಂಡ…

‍ಲೇಖಕರು avadhi

November 15, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: