( ಇಲ್ಲಿಯವರೆಗೆ…)
ಆಯುಷ್ಯ ಮರೆತ ಮಾವ
ಆಸ್ಪತ್ರೆಗೆ ಸೇರುವ ಆದಿನ ಬಂತು.
ಭಾವನೆಗಳೇ ಇಲ್ಲದ ದಿನವದು.
ಅದರೆ!
ಆದರೆ ೩೧ರ ಬೆಳಗ್ಗೆ ೬ ಗಂಟೆಯ ಸುಮಾರಿಗೆ ಇವನ ಮಾವ -ಹೆಂಡತಿಯ ಅಪ್ಪ- ಕಾಸರಗೋಡಿನ ಆಸ್ಪತ್ರೆಯಲ್ಲಿ ತೀರಿಕೊಂಡ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿತು.
ಅಪ್ಪನನ್ನು ಪ್ರಾಣಕ್ಕೂ ಮಿಗಿಲಾಗಿ ಪ್ರೀತಿಸುತ್ತಿದ್ದ ಶೋಭನಾಳ ಆಗಿನ ಪರಿಸ್ಥಿತಿ ಹೇಗಿರಬೇಡ? ಅವರು ಅಂತಿಂಥ ಅಪ್ಪ ಅಲ್ಲ. ಅಪರಿಮಿತ ಯಕ್ಷಗಾನ ಪ್ರೇಮಿ, ಇವನೋ ಯಕ್ಷಗಾನದ ಅಸೀಮ ಅಭಿಮಾನಿ. ಹೀಗಾಗಿ ಇವರಿಬ್ಬರು ಎಷ್ಟೋ ಬಾರಿ ಒಟ್ಟಗೇ ತಾಳಮದ್ದಳೆಯಲ್ಲಿ ಅರ್ಥ ಹೇಳಿದ್ದುಂಟು. ಕಿಡ್ನಿ ಕಸಿಯ ವಿವರ ಕೇಳಿದ ಅವರು ಮಗಳ ಮೇಲೆ ಅಭಿಮಾನ ಪಟ್ಟದ್ದಲ್ಲದೆ, ಆಪರೇಶನ್‌ನ ಯಶಸ್ವಿಗೆ, ದಂಪತಿಗಳ ದೀರ್ಘಾಯುಷ್ಯಕ್ಕೆ ವಿಶೇಷಪೂಜೆಯನ್ನೂ ಮಾಡಿಸುತ್ತಿರುವಾಗ ತಮ್ಮ ಆಯುಷ್ಯದ ಬಗ್ಗೆ ಯೋಚನೆಯನ್ನೇ ಮಾಡಿದ್ದಿರಲಿಲ್ಲ. ಅವರು ಆ ದಿನವೇ ಕಣ್ಮರೆಯಾದರು. ಕಣ್ಣಿಂದ ರಕ್ತ ಒಸರತೊಡಗಿ ದೆಹಲಿಯಿಂದ ಕಾಸರಗೋಡಿನ ವರೆಗೆ ಹರಿಯತೊಡಗಿತು.
ಕಾಸರಗೋಡಿನವರೆಗೆ ಪಯಣಿಸುವಷ್ಟು ಆರೋಗ್ಯ ಇವನಿಗಿರಲಿಲ್ಲ. ಮಗ ಅಮ್ಮನೊಡನೆ ಹೋಗಲು ತಯಾರಾದ.ಆದರೆ ಮುಂಬ್ಯೆ ಮೂಲಕವಾಗಲೀ, ಬೆಂಗಳೂರು ಮೂಲಕವಾಗಲೀ ಕಾಸರಗೋಡು ತಲುಪಲು ಬೇಕಾದ ಅನುಕೂಲಕರ ವಿಮಾನ ದೊರೆಯಲೇ ಇಲ್ಲ. ಒಂದು ವೇಳೆ ದೊರೆತಿದ್ದರೂ ಶೋಭನಾಳನ್ನು ಆ ಸ್ಥಿತಿಯಲ್ಲಿ ಕಳುಹಿಸಿಕೊಡುವ ಸ್ಥಿತಿಯಲ್ಲಿ ನಾನಿರಲಿಲ್ಲ. ಮಗ ನಮ್ಮ ಸಹಾಯಕ್ಕೆ ನಿಂತ. ಈಗ ಯಾವುದೇ ನಿರ್ಣಯ ತೆಗೆದುಕೊಳ್ಳುವುದು ಬೇಡ, ಸ್ವಲ್ಪ ಹೊತ್ತು ಜೊತೆಗಿರೋಣ ಎಂದು ಹೇಳಿದ ಅವನು ಪರಿಸ್ಥಿಯನ್ನು ಕೈಗೆ ತೆಗೆದುಕೊಂಡ. ಹೊತ್ತೇರುತ್ತಲೇ ಊರಿಗೆ ಫೋನ್ ಮಾಡಿ, ನಾವೀಗ ಬರುವ ಪರಿಸ್ಥಿತಿಯಲ್ಲಿ ಇಲ್ಲ, ನೀವು ಮುಂದುವರಿಸಿ ಎಂದು ಹೇಳಿಬಿಟ್ಟ.
ಇವನು ಶೋಭನಾಗೆ ಅಂಟಿಕೊಂಡು ಮೌನವಾಗಿ ಕೊರಗುತ್ತಿದ್ದ. ಸುಮಾರು ೧೧ ಗಂಟೆಯ ಹೊತ್ತಿಗೆ ಆಸ್ಪತ್ರೆಗೆ ಫೋನ್ ಮಾಡಿ ಶಸ್ತ್ರ ಚಿಕಿತ್ಸೆಯನ್ನು ಮುಂದಕ್ಕೆ ಹಾಕಲು ಯೋಚಿಸುತ್ತಿದ್ದಾಗ ಶೋಭನಾ ಹೇಳಿದ್ದಳು ಹಾಗೆ ಮಾಡಬೇಡಿ.ಮಾಡಿದರೆ ಮತ್ತೆ ನಾವು ಅನೇಕ ಪರೀಕ್ಷೆಗಳಿಗೆ ಹಾಜರಾಗಬೇಕಾಗುತ್ತದೆ. ಊರಿಗಂತೂ ಹೋಗಲಾಗಲಿಲ್ಲ, ಇದನ್ನಾದರೂ ಮುಗಿಸೋಣ.
ಮುಂದಿನ ನಾಲ್ಕಾರು ಗಂಟೆಗಳ ಕಾಲ ಭಯಾನಕ ಮೌನ.
ಈ ಮೌನದಲ್ಲಿಯೇ ಇವರಿಬ್ಬರೂ ಆಸ್ಪತ್ರೆ ಸೇರಿದರು.ನಗು ನಗುತ್ತಾ ಇದ್ದವರು ಈಗ ಇದ್ದಕ್ಕಿದ್ದಂತೆ ಮೌನಕ್ಕೆ ಶರಣಾದ್ದನ್ನು ಗಮನಿಸಿದ ಡಾ.ಮೋಹಿತ್ ಸಮಾಧಾನ ಪಡಿಸಿ, ಧೈರ್ಯದಿಂದಿರಿ, ಶಸ್ತ್ರ ಚಿಕಿತ್ಸೆ ಯಶಸ್ವಿಯಾಗುವುದರಲ್ಲಿ ನನಗೆ ಸಂಶಯವಿಲ್ಲ ಎಂದಿದ್ದರು. ಅವರಿಬ್ಬರೂ ಒಳಗೊಳಗೇ ರೋಧಿಸುತ್ತಿದ್ದರು. ಇವನ ವಿಶೇಷ ಕೋರಿಕೆಯನ್ನು ಮನ್ನಿಸಿದ ಆಸ್ಪತ್ರೆಯ ಅಧಿಕಾರಿಗಳು ಮೇ ೩೧ರ ರಾತ್ರಿ ಅವರಿಬ್ಬರೂ ಒಂದೇ ಕೊಠಡಿಯಲ್ಲಿರಲು ಅವಕಾಶ ಮಾಡಿಕೊಟ್ಟಿದ್ದರಂತೆ.
ಮರುದಿನ ೮ ಗಂಟೆಗೆ ಸರಿಯಾಗಿ ಶೋಭನಾಳನ್ನು ಆಪರೇಶನ್ ಥಿಯೇಟರ್‌ಗೆ ಕರೆದೊಯ್ದರು. ೮.೧೫ಕ್ಕೆ ಇವನನ್ನೂಎಳೆದುಕೊಂಡು ಹೋದರು. ಕಣ್ಣಿಗೆ ಕಾಣುವಷ್ಟು ದೂರದವರೆಗೆ ಗೆಳೆಯ ಕೃಷ್ಣ ಭಟ್ಟರನ್ನು, ಗೆಳತಿ ವಿದ್ಯಾರನ್ನೂ ನೋಡುತ್ತಿದ್ದ. ಅವರು ಕೈಬೀಸಿದಾಗ ಇವನೂ ಮುಗುಳ್ನಕ್ಕಿದ್ದನಂತೆ. ಆಪರೇಶನ್ ಥಿಯೇಟರ್‌ನಲ್ಲಿ ಹೆಂಡತಿಯನ್ನು ಇವನು ಕ್ಷಣ ಮಾತ್ರ ನೋಡಿದ್ದೆ. ಅಷ್ಟರಲ್ಲಿ ಅವರು ಇವನ ಅಂಗಿಯನ್ನು ಕಳಚಿದ್ದರು. ಜೊತೆಗಿದ್ದ ವೈದ್ಯರು ಛಳಿಯಾಗುವುದೇ? ಅಂತ ಕೇಳಿದ್ದಷ್ಟೇ ನೆನಪು.
ಮತ್ತೆ ಕಣ್ಣು ಬಿಟ್ಟಾಗ ಅಪರಾಹ್ನ ೩ ಗಂಟೆ.
ದಾದಿಯರಿಬ್ಬರೂ ಅವನ ಸುತ್ತ ಕುಳಿತಿದ್ದರು.
ಇವನು ಕಣ್ಣು ಬಿಟ್ಟೊಡನೆ ಕೈ ಹಿಡಿದು ಮುಗುಳ್ನಕ್ಕ ಅವರು ಡಾ.ಮೋಹಿತ್ ಮತ್ತು ಸರ್ಜನ್ ಡಾ. ಪಿ.ಬಿ. ಸಿಂಗ್ ಅವರಿಗೆ ಸುದ್ಧಿ ತಲುಪಿಸಿದರು.
ನಾಲ್ಕಾರು ನಿಮಿಷಗಳಲ್ಲಿ ಅವರು ಆತನ ಕಣ್ಣೆದುರು ಹಾಜರು.
ಮಿ. ಬಿಳಿಮಲೆಯವರೇ ಹೇಗಿದ್ದೀರಿ?ಡಾ.ಸಿಂಗ್ ಕೇಳಿದ್ದರು.
ಚೆನ್ನಾಗಿದ್ದೇನೆ ಸರ್, ಆಪರೇಶನ್ ಎಷ್ಟು ಹೊತ್ತಿಗೆ? ಮುಗ್ಧವಾಗಿ ಪ್ರಶ್ನಿಸಿದ್ದ ಇವನು.
ಪಕ್ಕದಲ್ಲಿದ್ದ ಡಾ.ಮೋಹಿತ್ ನಗುತ್ತಾ ಹೇಳಿದ್ದರು, ಆಪರೇಶನ್ ಆಗಿದೆ, ದೇವರ ದಯದಿಂದ ಅದು ಯಾವ ತೊಂದರೆಯೂ ಇಲ್ಲದೆ ಮುಗಿದಿದೆ.ನಿಮ್ಮ ಶ್ರೀಮತಿಯವರೂ ಆರಾಮವಾಗಿದ್ದಾರೆ, ಅಭಿನಂದನೆಗಳು ಎಂದು ಕೈ ಹಿಡಿದು ದಾದಿಯರಿಗೆ ಏನೋ ಸೂಚನೆ ನೀಡಿ ಮತ್ತೆ ಬರುವೆನೆಂದು ಹೇಳಿ ಹೊರಟು ಹೋದರು.
ಇವನು ಅವಕ್ಕಾಗಿದ್ದ.
ಮುಂದಿನ ಕೆಲವು ದಿನಗಳು ಮಹಾ ಅನಿಶ್ಚಿತತೆಯ ದಿನಗಳು.
ಯಾವ ಕ್ಷಣದಲ್ಲೂ, ಯಾವ ದಿನದಲ್ಲೂ ಆತನ ದೇಹ ಆ ಹೊಸ ಕಿಡ್ನಿಯನ್ನು ಒಲ್ಲೆ ಎಂದು ತಿರಸ್ಕರಿಸಬಹುದು.
ಆತ ಯೋಚಿಸುತ್ತಿದ್ದ, ಆಕೆಯೇ ಮನಸಾ ಒಲಿದಿತ್ತ ಕಿಡ್ನಿಯದು, ನನ್ನ ದೇಹ ಯಾಕಾದರೂ ತಿರಸ್ಕರಿಸುತ್ತದೆ
ಅವನ ನಿರೀಕ್ಷೆ ಸುಳ್ಳಾಗಲಿಲ್ಲ.
ಸರ್ಜರಿಯ ಮೂರನೇ ದಿವಸಕ್ಕೆ
ದೇಹದಲ್ಲಿನ ಅನಗತ್ಯ ನೀರೆಲ್ಲ ಆರಿ ಹೋಯಿತು,
ಬೆರಳುಗಳು ಬಾಗತೊಡಗಿದವು.
ಯೂರಿನ್ ಕ್ರಿಯೇಟಿನೈನ್ ೦.೮ ರಲ್ಲಿ ಸ್ಥಗಿತಗೊಂಡಿತು.
ಮುಂದಿನ ಐದೇ ದಿವಸದಲ್ಲಿ ಶೋಭನಾಳನ್ನು ಮನೆಗೆ ಕಳಿಸಿದರು.
ಅವಳು ಅವನಿಗಾಗಿ ಕಾಯತೊಡಗಿದಳು.
ಇವನೋ ೧೨ ದಿವಸಗಳವರೆಗೆ ಆಸ್ಪತ್ರೆಯಲ್ಲಿದ್ದ.
ಅದು ಚಿನ್ನದ ಪಂಜರದ ವಾಸ.
ಮಲೆಯಾಳೀ ದಾದಿಯರ ಅಕ್ಕರೆಯ ಸೇವೆ.
ಅವರು ಬೆಳಗ್ಗೆ ಅವನನ್ನು ಎಬ್ಬಿಸಿ ಪೂರ್ತಿ ಬೆತ್ತಲಾಗಿಸುತ್ತಾರೆ.
ಇಡೀ ದೇಹವನ್ನು ಸ್ಪಂಜಿನಿಂದ ಶುದ್ಧಗೊಳಿಸುತ್ತಾರೆ. ಹೊಸ ಬಟ್ಟೆ ಹಾಕಿಸುತ್ತಾರೆ.
ಅವನೊಮ್ಮೆ ದಾದಿ ಟ್ರೇಸಿಗೆ ಹೇಳಿದ್ದ, ನನ್ನ ಅಮ್ಮನ ಆನಂತರ ಹೀಗೆ ನನ್ನನ್ನು ನೋಡಿದವರು ಮತ್ತು ಸೇವೆ ಮಾಡಿದವರು ನೀವು ಮಾತ್ರ. ನನಗೆ ಮದರ್ ತೆರೆಸಾ ನೆನಪಾಗುತ್ತಿದ್ದಾರೆ
ಟ್ರೇಸಿ ಉತ್ತರಿಸಿದ್ದಳು ಪ್ರತಿ ರೋಗಿಯನ್ನು ನಾವು ಮಗುವಿನ ಹಾಗೆ ನೋಡುತ್ತೇವೆ.
ಬೇರೊಬ್ಬರ ದೇಹವನ್ನು ಇಷ್ಟೊಂದು ಕಾಳಜಿಯಿಂದ ನೋಡುವ ರೀತಿಗೆ ಆತ ಬೆಚ್ಚಿ ಬಿದ್ದಿದ್ದ.
ಮಣಿಪುರದ ದಿಮಿತಾ ದೀದಿ, ನಾಗಲ್ಯಾಂಡಿನ ತಾಯ್ ದೀದಿ, ಕೊಟ್ಟಾಯಂನ ಶನೀಶ್, ದೆಹಲಿಯ ಜಗನ್ನಾಥ್, ಎಷ್ಟೊಂದು ಸೇವೆ ಮಾಡಿದರು?
ಹಣಕ್ಕಾಗಿ ಕೆಲಸ ಮಾಡುವವರಿಗೆ ಇಷ್ಟೊಂದು ನಿಷ್ಠೆ ಬರಲಾರದು.
೧೩ನೇ ದಿನ ಮನೆಗೆ ಅವನನ್ನು ಮನೆಗೆ ಕಳಿಸಲಾಯಿತು. ಡಾ. ಮೋಹಿತ್, ಡಾ.ಪಿ ಬಿ ಸಿಂಗ್, ಡಾ. ಜೆನ್ಸಿ ಮರಿಯಂ, ಡಾ. ಅಂಜುಮ್ ಗುಲಾಟಿ, ಡಾ. ಶಶಿ, ದಾದಿಯರು -ಹೀಗೇ ಎಲ್ಲರೂ ಕೈ ಬೀಸಿ ಅವನನ್ನು ಬೀಳ್ಕೊಟ್ಟರು. ಈ ಕಡೆಯಿಂದ ಮಗ ಅನನ್ಯ, ಗೆಳೆಯ ಕೃಷ್ಣ ಭಟ್, ವಿದ್ಯಾ ಕೋಳ್ಯೂರು ಆತನನ್ನು ಮನೆಗೆ ಕರೆದೊಯ್ಯಲು ಸಿದ್ಧರಾದರು.
ಆಸ್ಪತ್ರೆ ಮೆಟ್ಟಲಿಯಿಳಿತ್ತಲೇ ಏನೋ ಕಳಕೊಂಡ ವಿಚಿತ್ರ ದುಗುಡ!
ಮನೆಗೆ ತಲುಪುತ್ತಲೇ ಅವನಿಗೆ ಮಂಗಳೂರಿನಿಂದ ಶ್ರೀನಿವಾಸ ಕಾರ್ಕಳನಿಂದ ಕರೆ, ಈ ನಡುವೆ ನಮ್ಮ ಕಕ್ಕಿಲ್ಲಾಯರು, ಏಣಗಿ ನಟರಾಜ್ ತೀರಿಕೊಂಡದ್ದು ನಿಮಗೆ ತಿಳಿಯಿತಾ?
ಅವನ ಮನಸ್ಸು ೩೨ ವರ್ಷಗಳ ಹಿಂದಿನ ಕ್ರಾಂತಿಕಾರಿ ದಿನಗಳ ಕಡೆಗೆ ಹೊರಳಿಕೊಂಡಿತು.
ಮತ್ತೆ ಒಂದೆರಡು ದಿನಗಳಲ್ಲೇ ತನ್ನೆಲ್ಲ ಗೆಳೆಯರಿಗೆ ಆತ ಎಸ್.ಎಂ.ಎಸ್. ಕಳಿಸಿದ್ದ.
ಪರಶಿವನಿಗೆ ಮೂರು ಕಣ್ಣು, ನನಗೋ ಮೂರು ಕಿಡ್ನಿ. ನನ್ನ ಪತ್ನಿಯ ಒಂದು ಕಿಡ್ನಿ ನನ್ನಲ್ಲಿದೆಯಾದ್ದರಿಂದ ನಿಜವಾದ ಅರ್ಥದಲ್ಲಿ ನಾನೀಗ ಅರ್ಧನಾರೀಶ್ವರ.ಜೊತೆಗೆ ತ್ರಿ ಮೂತ್ರಪಿಂಡ ಧಾರಿ, ಭಗವಂತನಿಗೂ ಮಿಗಿಲು
————————
ಕತೆಯಿಂದ ನಾವು ಕಲಿಯಬೇಕಾದ ನೀತಿ:
ಕಾಯುತಿಹುದು ಸಾವು ಇಂದು ಸಂಜೆಗೆ, ನಾಳೆ ಮುಂಜಾನೆಯೂ ಬಂದೀತು ಅದು ಮೆಲ್ಲಗೆ.
ಇಂದೇ ಕಡೆ ರಾತ್ರಿಯೆಂದು ದೇವರೇ ಹೇಳಿದರೂ, ನೆನೆ ಹಾಕಿಡು ಉದ್ದು ನಾಳೆ ಬೆಳಗ್ಗಿನ ಇಡ್ಳಿಗೆ.
ಈ ಕತೆ ವಾರ್ತಾಭಾರತಿಯ ಹತ್ತನೇ ವರ್ಷದ ವಿಶೇಷಾಂಕದಲ್ಲಿ ಬಂದಿದೆ.





“ಆತ CCC – Communist, Communal, (ಮತ್ತೆಂತದ್ದೋ ಒಂದು)” ಹೀಗೊಬ್ಬ ಜಮೀನ್ದಾರರು ನನ್ನಲ್ಲಿ ಬಂದಿದ್ದಾಗ ಬಯ್ದು (ಹಿಂದೆಬಿಟ್ಟು) ಪರಿಚಯಿಸಿದ ವ್ಯಕ್ತಿಯೇ ಪುರುಷೋತ್ತಮ ಬಿಳಿಮಲೆ; ಅಂದು ನೆಹರೂ ಮೆಮೊರಿಯಲ್ ಕಾಲೇಜ್, ಸುಳ್ಯದ ಕನ್ನಡ ಅಧ್ಯಾಪಕ. ಪ್ರಸಂಗ – ಈ ಪುರುಷೋತ್ತಮ ಮಂಡೆಕೋಲು ಬಾಂಜಾರವನ್ನು ತನ್ನದೇ ತಂಡ ಕಟ್ಟಿ, ಶೋಧಿಸಿ, ಉದಯವಾಣಿಯಲ್ಲಿ ಲೇಖನ ಬರೆದಿದ್ದರು. ನಾನೂ ಆ ಕಾಲದಲ್ಲಿ ನನ್ನ ತಾಕತ್ತಿನಲ್ಲಿ ಗುಹಾಶೋಧ ನಡೆಸಿದ್ದೆ. ಇವರ ಲೇಖನದಲ್ಲಿ ಪ್ರಾಯ ಸಹಜವಾದ ಸಣ್ಣ ಕೊಂಕುನುಡಿ ಜಮೀನ್ದಾರರ ಬಗ್ಗೆ (ನಮ್ಮ ಬಗ್ಗೆಯೂ ಇತ್ತು) ಇದ್ದಿರಬೇಕು. ನಾನು ಜಮೀನ್ದಾರರ ಮಾತು ಅವಗಣಿಸಿ, ನೇರ ಬಿಳಿಮಲೆಗೆ ಅವರ ಶೋಧದ ಸಣ್ಣ ಒಂದೆರಡು ತಪ್ಪುಗಳ ಕುರಿತು ಪತ್ರ ಹಾಕಿದೆ. ಮರು ಟಪಾಲಿನಲ್ಲಿ ಅವರ ವಿನಯ ಪೂರ್ಣ ಪತ್ರ ಬಂತು, ಅಯಾಚಿತವಾಗಿ ತನ್ನ ದುಡುಕಿನ ಟಿಪ್ಪಣಿಗಳ ಬಗ್ಗೆ ವಿಷಾದವೂ ಇತ್ತು. ಕೇವಲ ಪುಸ್ತಕ ವ್ಯಾಪಾರಿ ಮತ್ತು ಗಿರಾಕಿಯ ಸಂಬಂಧದಿಂದ ನಮ್ಮ ಬಂಧ ಉತ್ತಾರಣೆ ಪಡೆದಿತ್ತು. ಜಮೀನ್ದಾರರ ಉಕ್ತಿಯನ್ನು ನಾನೇನೂ ನಂಬಿರದಿದ್ದರೂ ಅದು ಎಲ್ಲಾ ಅವೈಚಾರಿಕರ ಸುಲಭೀಕರಣ ಮಾರ್ಗ ಎನ್ನುವುದು ಸ್ಪಷ್ಟವಾಗಿತ್ತು. (ಹುಟ್ಟಿನ ಆಕಸ್ಮಿಕದಲ್ಲಿ ಉಚ್ಚ ವರ್ಣೀಯನೆಂದೇ ಗುರುತಿಸಲ್ಪಡುವ ನನ್ನ ಆಚಾರ ನೋಡಿ, ನನಗೇ ಈ ಬಗೆಯ ಹೆಸರು ಕೊಟ್ಟವರಿದ್ದಾರೆ.)
ದಕ ಜಿಲ್ಲಾ ಸಾಹಿತ್ಯ ಸಮ್ಮೇಳನ ಆ ಬಾರಿ ಸುಳ್ಯದಲ್ಲಿ ನಡೆದಿತ್ತು. ಸಂಘಟನೆಯಲ್ಲಿ ನಾವೀನ್ಯ ಬಯಸಿ ಸೇರಿಕೊಂಡಿದ್ದ ಬಿಳಿಮಲೆ, ಒಂದು ಅಪರಾಹ್ನದ (ಪುಷ್ಕಳ ಭೋಜನ ಮಾಡಿ ಸಭಾಸದರು ತೂಕಡಿಸುವ ಹೊತ್ತು) ಪುಸ್ತಕೋದ್ಯಮದ ಗೋಷ್ಠಿಗೆ ನನ್ನನ್ನು ಒಪ್ಪಿಸಿದರು. ಅದುವರೆಗೆ ನನ್ನೆಲ್ಲ ಗೋಷ್ಠಿ ಮಂಡನೆಗಳೂ ಬಿಗಿದ ಹುಬ್ಬಿನ ಶೋತೃಗಳಿಗೆ ಉರಿಯ ಮಳೆಯಂತಿರುತ್ತಿತ್ತು. ಆದರೆ ಸುಳ್ಯದ ವಿಷಯ – ಪುಸ್ತಕೋದ್ಯಮದಲ್ಲಿ ರಂಜನೆ, ನನಗೇ ಆಶ್ಚರ್ಯ. ಅಂದು ಸಭಾಭವನದಿಂದ ದೂರ ಸರಿದು `ಗಂಭೀರ ಸಮಾಧಿ’ಸ್ಥರಾಗಿದ್ದವರೂ ಬಂದು ಚಪ್ಪಾಳೆ ಹಾಕಿದ್ದರು! ನನ್ನಲ್ಲಿನ ವಿನೋದ ಪ್ರಜ್ಞೆಗೆ ಅಪಾರ ಮನ್ನಣೆ ಸಿಕ್ಕಿತ್ತು.
ಬಿಳಿಮಲೆ ಮಂಗಳೂರಿನಲ್ಲಿದ್ದಾಗ ಅವರ ಹೊಸದೊಂದು (ಕರಾವಳಿ ಜಾನಪದ?) ಪುಸ್ತಕದ ಕಟ್ಟು ನನ್ನಂಗಡಿಗೆ ತಂದು ಗಲ್ಲಾದ ಮೇಲೆ ಇಟ್ಟರು. ಜೊತೆಗೆ ಅವರದೇ ಸಾಹಿತ್ಯಾಸಕ್ತ ಒಂದೆರಡು ಮಿತ್ರರೂ ಇದ್ದರು. ನನ್ನ ನೆನಪಿನಲ್ಲಿ ಅದು ಅಪೂರ್ವ ಅನೌಪಚಾರಿಕ ಆದರೆ ಅರ್ಥಪೂರ್ಣ ಸಮಾರಂಭ – ಮಳಿಗೆಯಲ್ಲೇ ಪುಸ್ತಕ ಲೋಕಾರ್ಪಣ.
ಕೋಟೆಕಾರಿನ ಕಲಾಗಂಗೋತ್ರಿಯ ಸಹಯೋಗದಲ್ಲಿ ಇವರ ಯಕ್ಷ ನರ್ತನದ ಬಗ್ಗೆ ಕೇಳಿದ್ದೆ. ಅಮೃತ ಸೋಮೇಶ್ವರರ ಸಾಮಾಜಿಕ ಸಮಸ್ಯೆಗಳ ವಿರುದ್ಧ ಯಕ್ಷಗಾನ ಒಂದರಲ್ಲಿ ಬಿಳಿಮಲೆ ಕುಣಿದದ್ದು ನೋಡಲು ನಾನು ಸಸಿಹಿತ್ಲುವಿನ ಭಗವತಿ ದೇವಳ ವಠಾರಕ್ಕೇ ಹೋಗಿದ್ದೆ.
ಬಿಳಿಮಲೆ ಹಂಪಿಯಲ್ಲಿದ್ದಾಗ `ನವ ಸಾಕ್ಷರರಿಗೆ ಪುಸ್ತಕ ನಿರ್ಮಾಣ’ದ ಬಗ್ಗೆ ನನಗೂ ಒಂದು ವಿಷಯ ಕಳಿಸಿದ್ದರು – ಬೆಟ್ಟ ಗುಡ್ಡಗಳು. ವಿವಿನಿಲಯದ ಮಾರ್ಗಸೂಚೀಯಂತೆ ನಾನು (ಲೇಖಕರು) ಕರಡು ಹಸ್ತಪ್ರತಿಯನ್ನು ಹಿಡಿದುಕೊಂಡು ಹೋಗಿ, ಅಲ್ಲಿನ ಸಂಪಾದಕ ಮಂಡಳಿಯ ಎದುರು ಅಭ್ಯಾಗತನಾಗಿ ಕುಳಿತು (ಪರೀಕ್ಷೆ ಅಲ್ಲ), ಪರಿಷ್ಕರಿಸಿ ಮುಗಿಸುವ ಕೆಲಸ ವಿಶಿಷ್ಟ ಅನುಭವ.
ನನ್ನ ಭಾರತ ಬೈಕ್ ಯಾತ್ರೆಯ ಒಂದು ರಾತ್ರಿಯ ಹೊಸಪೇಟೆ ವಾಸಕ್ಕೆ ಕಡಿಮೆ ಖರ್ಚಿನ ವ್ಯವಸ್ಥೆಗೆ ಬಿಳಿಮಲೆಯ ಮೊರೆಹೊಕ್ಕೆ. ಆ ವಲಯದ ಉಗ್ರೋಗ್ರ ಬೇಸಗೆಯ ದಿನಗಳವು. ಅವರ ಹೆಂಡತಿ, ಮಗ ಊರಿಗೆ ಹೋಗಿದ್ದರೂ ಹಿಂಜರಿಯದೆ ತಮ್ಮ ಮನೆಗೇ ಕರೆಸಿಕೊಂಡು, ಅಷ್ಟಕ್ಕೆ ಬಿಡದೆ ರಾತ್ರಿಯ ಊಟವನ್ನು ಜಪಾನೀ ವಿದ್ವಾಂಸ ಮೊರಿಜಿರಿ, ರಹಮತ್ ತರೀಕೆರೆಯಾದಿ ಮಿತ್ರವೃಂದದೊಂದಿಗೆ ಭರ್ಜರಿ ಹೋಟೆಲಿನಲ್ಲೇ ಕೊಟ್ಟು ಉಪಚರಿಸಿದ್ದರು.
ನನ್ನ ತಂದೆಗೆ ದೆಹಲಿ ಕರ್ನಾಟಕ ಸಂಘದ ಕಾರಂತ ಪ್ರಶಸ್ತಿ ಬಂದಾಗ (ನಾನು ಜೊತೆಯಲ್ಲಿದ್ದೆ) ಆತಿಥೇಯರ ಬಳಗದಲ್ಲಿದ್ದು ಉಪಚರಿಸುವಲ್ಲೂ ಬಿಳಿಮಲೆ ಚುರುಕಾಗಿದ್ದರು.
ಪರಿಸ್ಥಿತಿಗಳೊಡನೆ ರಾಜಿ ಮಾಡಿಕೊಳ್ಳದ ಈ ಬಿಳಿಮಲೆಯ ಹೋರಾಟಗಾರ ಮುಂದುವರಿದು ದೆಹಲಿ ಸಂಘದ ಶುದ್ಧೀಕರಣಕ್ಕೆ ಇಳಿದಾಗಲೇ ನನಗೆ ತಿಳಿದದ್ದು ಇವರ ಆರೋಗ್ಯದ ಸೂಕ್ಷ್ಮ (ಮಧುಮೇಹಿ). ಇತ್ತ ಮಂಗಳೂರಿನಲ್ಲಿ ಅವರ ತಂಗಿ ಗಂಡ, ನನ್ನ ಗೆಳೆಯ ಶ್ರೀನಿವಾಸ ಕಾರ್ಕಳ, ಅಪಘಾತ್ಕೊಳಗಾದಾಗ ನನ್ನ (ಉಪಕಾರಕ್ಕೇನೂ ಒದಗದ) ಆತಂಕ ಹೆಚ್ಚಿತ್ತು. ಆಗ ಬಿಳಿಮಲೆ ದಿಲ್ಲಿಯಿಂದ ದೂರವಾಣಿಸಿ ದುಃಖಾರ್ತರು ಪುಸ್ತಕ ಒಂದನ್ನು ಶ್ರೀನಿಗೆ ಓದಲು ಕೊಡಿ. ನನ್ನ ಹಲವು ದುರ್ಭರ ದಿನಗಳಲ್ಲಿ ಸ್ಥೈರ್ಯಕೊಟ್ಟ ಕೃತಿ ಅದು ಎಂದದ್ದು ಈಗಲೂ ನನ್ನ ಕಿವಿಯಲ್ಲಿದೆ.
ಕಲಾಗಂಗೋತ್ರಿಯ ಗೆಳೆಯ ಸದಾಶಿವ ಮಾಸ್ಟ್ರು ಅವರ ಮಹಾಮೌನದಲ್ಲೂ ಒಮ್ಮೆ ಬಿಳಿಮಲೆಗೆ ಗಂಭೀರ ಮೂತ್ರಪಿಂಡಗಳ ಸಮಸ್ಯೆಯುಂಟಾಗಿದೆ ಎಂದಾಗ ನನ್ನ ಛೆಗೆ ಗಾತ್ರ, ಬಣ್ಣ ದೊಡ್ಡದಾಗಿತ್ತು. ಮತ್ತೆಂದೋ ಅವರು ಸಿಕ್ಕಾಗ ಇಲ್ಲ, ಶೋಭನಾರ `ಪಿಂಡ ದಾನ’ದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದಾಗ ಉಸ್ ಎಂದಿದ್ದೆ. ನನ್ನ ಅಂತರ್ಜಾಲ ಕೆಲಸಗಳ ನಡುವೆ ಆಗೀಗ ಚಾಟ್-ಪಟ್ಟಿಯಲ್ಲಿ ಬಿಳಿಮಲೆಯ ದೀಪ ಉರಿಯುತ್ತಿರುವುದು ಕಾಣಿಸಿದರೂ ಸದಾ ಕೆಂಪೇ ಇರುತ್ತಿತ್ತು. ಔಪಚಾರಿಕ ಭೇಟಿ, ಮಾತುಗಳಲ್ಲಿ ನನಗೆ ಯಾವಾಗಲೂ ಸಂಕೋಚ, ಹಿಂಜರಿಕೆ ಹೆಚ್ಚು. ಹಾಗೂ ತಡೆಯದೇ ಒಂದೆರಡು ಬಾರಿ ಎರಡು ಮಾತು ಎಂದವರ ಕೆಲಸದ ನಡುವೆ ನಾನು ತೂರಿಕೊಂಡದ್ದುಂಟು. ಪುಣ್ಯಾತ್ಮ ಅವರ ಸಮಸ್ಯೆಯ ಸೂಚನೆ ಕೊಟ್ಟಿದ್ದರಾದರೂ ತೀವ್ರತೆ ನನ್ನ ಮಂಡೆಗೆ ಹೊಕ್ಕಿರಲಿಲ್ಲ.
ಇದ್ದಕ್ಕಿದ್ದಂತೆ ಬೊಳುವಾರು ಇಲ್ಲಿ For ಹಾಕಿ ಬಿಳಿಮಲೆಯ ಆತ್ಮಕಥನಕ್ಕಿಳಿದಾಗ ನನಗೆಲ್ಲಾ ಮುಗಿದೇ ಹೋಯ್ತೇ ಎಂಬಷ್ಟು ಬೇಸರವಾಗಿತ್ತು. ಓದುಗರಿಂದ ಕಥನ ಕುತೂಹಲ, ಶೈಲಿಯ ಚಂದ, ಸಣ್ಣ ಪುಟ್ಟ ಆತಂಕಗಳೆಲ್ಲ ಪ್ರತಿಕ್ರಿಯೆಗಳಾಗಿ ಬರುತ್ತಿದ್ದಾಗ ನನ್ನ ಕೈ ಕಟ್ಟಿತ್ತು. ಮೊನ್ನೆ ಇನ್ನೂ ನಾಲ್ಕನೇ ಕಂತು ಓದಿ ಮುಗಿದಾಗ ಮತ್ತೆ ಬಿಳಿಮಲೆ ಚಾಟಿನಲ್ಲಿ ಕೆಂಗಣ್ಣು ತೆರೆದಿದ್ದರು. ಎಷ್ಟೂ ಜನ ತಮ್ಮ ಅಸಹಾಯಕತೆಯ ಸಂದರ್ಭಗಳಲ್ಲಿ ತಮ್ಮ ವಿ-ಖಾತೆಯನ್ನು ಆತ್ಮೀಯರ ಮೂಲಕ ಏನೋ ತುರ್ತು ಕಾರ್ಯಗಳಿಗಾಗಿ ನಿರ್ವಹಿಸುವುದು ನೋಡಿದ್ದೇನೆ. ಹಾಗಾಗಿ ತಡೆಯದೆ ಕೇಳಿದೆ – ದಯವಿಟ್ಟು ನಿಮ್ಮ ಆರೋಗ್ಯ ಎಲ್ಲ ಸರಿಯಿದೆ ಎಂದು ಒಂದು ಮಾತು ಹೇಳಿಬಿಡಿ. ಅದೃಷ್ಟಕ್ಕೆ ಮಿನಿಟು ತಡೆದು ಬರೆದರು ಶೋಭನಾ ಕೃಪೆಯಿಂದ ಈಗ ಸ್ವಸ್ಥ. ಅಷ್ಟೇ ಕಾಳಜಿಯಲ್ಲಿ, ಚುರುಕಿನಲ್ಲಿ ಈಗ ಮುಗಿಸಿಕೊಟ್ಟ ಬೊಳುವಾರು ಮತ್ತು ಅವಧಿಗೂ (ಮೂಲದಲ್ಲಿ ವಾರ್ತಾಭಾರತಿ) ನಾನು ಕೃತಜ್ಞ. ಪ್ರಿಯರ ಸತ್ಕೃತಿಗಳನ್ನು ಆತಂಕದ ಕ್ಷಣಗಳಲ್ಲಿ ನೆನೆಸಿಕೊಳ್ಳುವುದರಿಂದಾಚೆಗೆ ನಾನೇನೂ ಹೇಳಲಾರೆ. ಅದರ ಮುಂದುವರಿಕೆಯ ಭರವಸೆಯಾಗಿ ಅವರು ನಮ್ಮೊಡನಿರುವುದಕ್ಕಿಂತ ಹೆಚ್ಚಿಗೆ ನಾನೇನೂ ಬಯಸಲಾರೆ. ಎಲ್ಲರಿಗೂ ಶುಭವಾಗಲಿ.
ಅಶೋಕವರ್ಧನ
ಕಥೆ ಬಹಳ ಚೆನ್ನಾಗಿದೆ. ಅವರು ತುಂಬ ಮನೋಹರವಾಗಿ ಅರ್ಥಗರ್ಭಿತವಾಗಿ ಕಥೆಯನ್ನು ಹೇಳಿದ್ದಾರೆ. ವಾರ್ತಾಭಾರತಿ ವಿಶೇಷಾಂಕದಲ್ಲಿ ಅದನ್ನು ಪೂರ್ತಿಯಾಗಿ ಓದಿದ್ದೇನೆ.
ನಿಜಕ್ಕೂ ಇದು ಕನ್ನಡದ ಪಾಲಿಗೆ ವಿಭಿನ್ನ ಬರಹ. ಇದು ಒಂದಲ್ಲ ಒಂದು ದಿನ ನಮ್ಮೆಲ್ಲರದು ಆಗಬಹುದಾದ ಆತ್ಮಕಥನ. ಒಂದು ಕತೆಯಂತಹ ಆತ್ಮೀಯ ಕಥನ. ಬದುಕಿನ ಕುರಿತಂತೆ ಅಗಾಧ ಭರವಸೆಯನ್ನು ಬಿತ್ತುವ ಬೊಳುವಾರರ ಬರಹಕ್ಕೆ ಬೋಳುವಾರರೆ ಸಾಟಿ. ಮುಂಬೈಯಲ್ಲಿ ನಾನು ೫ ವರ್ಷ ಇದ್ದಾಗ ನನ್ನ ಮೇಲೆ ಟಿಬಿ ಅಟ್ಯಾಕ್ ಆಗಿತ್ತು. ಆ ಸಂಕಷ್ಟದ ದಿನಗಳು ಮತ್ತು, ಸುಮಾರು ಮೂರು ವರ್ಷ ಅದರ ವಿರುದ್ಧ ಹೋರಾಡಿ ಗೆದ್ದ ಆ ದಿನಗಳು ನೆನಪಾದವು.
very touching narration.
ಒಬ್ಬ ಮನುಷ್ಯನ ಅಂತಸ್ಸತ್ವದ ಸತ್ವಪರೀಕ್ಷೆಯಾಗೋದೇ ಗಂಭೀರ ಕಾಯಿಲೆ ಕಸಾಲೆಗಳ ಸಂದರ್ಭಗಳಲ್ಲಿ.ಸಂಬಂಧಗಳ ಗಟ್ಟಿತನ ಪೊಳ್ಳುತನಗಳು ಅನಾವರಣಗೊಳ್ಳುವ ಸಂದರ್ಭವೂ ಅದೇ.ಬೋಳುವಾರು ಬರೆದ ಬಿಳಿಮಲೆಯವರ ಕುರಿತ ಆತ್ಮೀಯ ಕಥನ ಓದುತ್ತಿದ್ದರೆ ಮನಸಿಗೆ ಬೇಸರವಾಗುತ್ತದೆ.ತಲೆತುಂಬ ಸಾಮಾಜಿಕ ವ್ಯವಸ್ಥೆಯನ್ನು ಬದಲಿಸುವ,ಸ್ವಸ್ಥ ಸಮಾಜವೊಂದನ್ನು ನಿರ್ಮಿಸುವ ಕನಸು ಆಶಯ ತುಂಬಿಕೊಂಡ ಒಬ್ಬ ಯುವಕ ತನ್ನ ಇಪ್ಪತ್ತೇಳರ ಎಳೆಹರೆಯದಲ್ಲೇ ಡಯಾಬಿಟಿಕ್ ಆಗಿ, ಅದರ ಕುರಿತು ಯೋಚಿಸುವ,ಅದನ್ನು ನಿಭಾಯಿಸುವ ವ್ಯವಧಾನವೂ ಇಲ್ಲದಂತೆ ಕೆಲಸಗಳನ್ನು ಮೈಮೇಲೆ ಎಳೆದುಕೊಳ್ಳುತ್ತ ಹೋಗಿ ಅಧಿಕ ರಕ್ತದೊತ್ತಡ, ಮೂತ್ರಪಿಂಡ ವೈಫಲ್ಯದಂತ ಕಳವಳಕಾರಿ ಬೆಳವಣಿಗೆಗಳ ನಡುವೆಯೂ ಕ್ರಿಯಾಶೀಲನಾಗುಳಿದ, ಹಲವು ನಿಟ್ಟಿನಲ್ಲಿ ಬೆಳೆಯುತ್ತ ನಡೆದ ಆ ಕಥನದಲ್ಲಿ ಬಿಳಿಮಲೆ ಬೇರೆಯದೇ ರೀತಿಯಲ್ಲಿ ಗೋಚರಿಸಿದರು.ಈ ಕಥನದಲ್ಲಿರುವಂತೆ ಬಿಳಿಮಲೆಯವರು ಕಿಡ್ನಿ ಟ್ರಾನ್ಸ್ ಪ್ಲಾಂಟ್ ಗೆ ಒಳಗಾದದ್ದು ಈ ವರ್ಷದ ಎಪ್ರಿಲ್ ತಿಂಗಳಲ್ಲಿ.ಅದಕ್ಕೆ ಕೇವಲ ನಾಲ್ಕು ತಿಂಗಳು ಮೊದಲು ೨೦೧೧ ಡಿಸೆಂಬರ್ ೮ ರಂದು ದೆಹಲಿಯಲ್ಲಿ ನಾನವರನ್ನು ನೋಡಿದ್ದೆ.ಭಾರತೀಯ ಇತಿಹಾಸ ಕಾಂಗ್ರೆಸ್ ನ ಅಧಿವೇಶನಕ್ಕೆ ಪಟಿಯಾಲಕ್ಕೆ ಹೋಗುವ ಮಾರ್ಗದಲ್ಲಿ ದೆಹಲಿಯಿಂದ ರಾತ್ರಿ ಅಮೃತಸರ್ ಗೆ ಹೊರಡುವ ಮೊದಲು ನಾಲ್ಕಾರು ತಾಸು ವಿಶ್ರಮಿಸಲು ಮತ್ತು ಅಲ್ಲಿಂದ ನಾಲ್ಕು ದಿನಗಳ ನಂತರ ಮರಳಿ ದೆಹಲಿಗೆ ಬಂದು ಬೆಂಗಳೂರಿಗೆ ಹಿಂದಿರುಗುವ ಮುನ್ನ ಒಂದು ರಾತ್ರಿ ಅಲ್ಲಿ ಉಳಿಯಲು ನಮಗೆ ದೆಹಲಿ ಕರ್ನಾಟಕ ಸಂಘದಲ್ಲಿ ಅನುಕೂಲ ಮಾಡಿಕೊಡುವಂತೆ ನಾನು ಬಿಳಿಮಲೆ ಅವರನ್ನೂ ಸಂಘದ ಕೋಶಾಧ್ಯಕ್ಷೆ ರೇಣುಕಾ ನಿಡಗುಂದಿಯವರನ್ನೂ ವಿನಂತಿಸಿದ್ದೆ. ನಾವು ದೆಹಲಿ ಏರ್ ಪೋರ್ಟ್ ನಲ್ಲಿ ಇಳಿದು ಹೊರಗೆ ಹೆಜ್ಜೆ ಹಾಕುತ್ತಿರುವಾಗಲೇ ಬಿಳಿಮಲೆಯವರಿಂದ ಫೋನು.ನಾವು ದೆಹಲಿ ಕರ್ನಾಟಕ ಸಂಘದಲ್ಲಿ ಇರಬಯಸುತ್ತೇವಾ ಕರ್ನಾಟಕ ಭವನವಾ ಇತ್ಯಾದಿ ಮಾತು. ಸಂಜೆ ಸಂಘಕ್ಕೆ ಅವರೂ ಬಂದು ಡಾ.ಬಿ.ಸುರೇಂದ್ರರಾವ್,ಜಮುನ,ಕುಮಾರಸ್ವಾಮಿ,ಅಶ್ವಥನಾರಾಯಣ,ಬಿ.ಉದಯ ಮತ್ತು ನಾನು ಇದ್ದ ನಮ್ಮ ಟೀಂ ಜೊತೆ ಸ್ವಲ್ಪ ಹೊತ್ತು ಕಳೆದರು. ಕ್ರಿಯೇಟಿನಿನ್ ಪ್ರಮಾಣ ಐದು ಅಥವಾ ಆರು ಅಂಕಿಯನ್ನು ತಲುಪಿದ ಯಾವ ಸೂಚನೆಯೂ ನನಗೆ ಗೊತ್ತಾಗಲಿಲ್ಲ..ಹಾಗೆ ಲವಲವಿಕೆಯಿಂದಿದ್ದರು. ಬಿಳಿಮಲೆ ಭಾರತದ ಜಾತಿತಾರತಮ್ಯಗಳ ವ್ಯವಸ್ಥೆಯ ಕುರಿತು ಬೇಸರ ಮತ್ತು ಇಂಟೆಲೆಕ್ಚುವಲ್ ನೆಲೆಯಲ್ಲಿ ಅದರ ಕುರಿತ ಸಮಾಜಶಾಸ್ತ್ರೀಯ ಗ್ರಹಿಕೆ ಹಾಗೂ ಅದರ ವಿರುದ್ಧ ಒಂದು ತಾತ್ವಿಕ ವಿರೋಧ ಇರುವ ವ್ಯಕ್ತಿಯಾದರೂ ವೈಯಕ್ತಿಕ ನೆಲೆಯಲ್ಲಿ, ಸಂಬಂಧಗಳ ನೆಲೆಯಲ್ಲಿ ನಿಜಕ್ಕೂ ಜಾತ್ಯಾತೀತವಾಗಿ ಯೋಚಿಸುವವರು ಮತ್ತು ಇರುವವರು.ಅವರ ಬರವಣಿಗೆಗಳ ಹೊರತು ಅವರೊಂದಿಗೆ ತೀರ ನಿಕಟ ಪರಿಚಯವಿಲ್ಲದಿದ್ದರೂ ಎಂಬತ್ತರ ದಶಕದಲ್ಲಿ ಕರ್ನಾಟಕದ ಉದ್ದಗಲಕ್ಕೂ ಇದ್ದ ಎಡಪಂಥೀಯ ಒಲವಿನ ಚಿಂತನೆಯವರ ಮಧ್ಯೆ ಪರೋಕ್ಷವಾಗಿ ಇರುತ್ತಿದ್ದ ಒಂದು ಸೆನ್ಸ್ ಆಫ್ ಕಾಮ್ರೇಡರಿ ಅವರೊಂದಿಗೆ ಇತ್ತು.ಕೊಣಾಜೆಯಲ್ಲಿ ಇಪ್ಪತ್ತೆರಡು ವರ್ಷಗಳ ಹಿಂದೆ ನಾನು ನೋಡಿದಾಗ ತೆಳುವಾಗಿದ್ದ ಬಿಳಿಮಲೆ ಆಮೇಲೆ ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಎರಡು ವರ್ಷದ ಹಿಂದೆ ಬೆಳಗಾವಿಯಲ್ಲಿ ನೋಡಿದಾಗ ಸ್ವಲ್ಪ ದಪ್ಪಗಾಗಿದ್ದರು. ಆಮೇಲೆ ದೆಹಲಿಯಲ್ಲಿ ನೋಡಿದಾಗ ಮತ್ತೂ ಸ್ವಲ್ಪ ಊದಿಕೊಂಡಂತಿದ್ದರು. ಆದರೆ ಅದರ ಹಿನ್ನೆಲೆಯಲ್ಲಿ ಮೂತ್ರಪಿಂಡದ ಗಂಭೀರ ಸಮಸ್ಯೆ ಇತ್ತೆಂಬುದು ನನಗೆ ಗೊತ್ತೂ ಆಗಲಿಲ್ಲ. ಅವರಂತೂ ಇಂಥವನ್ನು ತಾವಾಗೇ ಪೀಠಿಕೆ ಹಾಕಿ ಮಾತನಾಡುವವರಲ್ಲ. ಏನಿದ್ದರೂ ಅವರ ಪತ್ನಿಯ ಸಹೃದಯದ ಸ್ಪಂದನೆ, ಒಳ್ಳೆಯ ವೈದ್ಯಕೀಯ ಚಿಕಿತ್ಸೆ ಮತ್ತು ಸ್ವತ: ಅವರ ಸಹನೆ ಎಲ್ಲ ಸೇರಿ ಅವರು ಮತ್ತೆ ಮೊದಲಿನಂತಾದರಲ್ಲ ಎಂಬುದು ಸಮಾಧಾನದ ವಿಷಯ. ಅವರು ನಮ್ಮ ನಡುವಿನ ಒಬ್ಬ ಒಳ್ಳೆಯ ಚಿಂತಕ. ಅವರ ಆಯುರಾರೋಗ್ಯ ವೃದ್ಧಿಸುತ್ತಿರಲಿ ಎಂಬುದು ನನ್ನಂಥ ಅನೇಕರ ಹಾರೈಕೆ.