ಬೊಗಸೆಯಲ್ಲಿ ಅಮೆರಿಕಾ ಚೆರಿ ಹಣ್ಣು

‘ಅವಧಿ’ಯ ಬರಹಗಾರರಾದ ಟಿ ಎಸ್ ಶ್ರವಣಕುಮಾರಿ ತಾವು ಕಂಡ ಅಮೆರಿಕಾವನ್ನು ಬೊಗಸೆಯಲ್ಲಿ ಹಿಡಿದುಕೊಟ್ಟಿದ್ದಾರೆ.

(ನಿನ್ನೆಯಿಂದ)

ಗೋಲ್ಡನ್ ಗೇಟ್ ಬ್ರಿಡ್ಜ್ ಎಂಬ ಸುಂದರ ಸೇತು..

ಮರುದಿನ ಬೆಳಗ್ಗೆ ನಿಧಾನವಾಗಿ ಎದ್ದು, ಆರಾಮಾಗಿ ತಿಂಡಿ ತಿಂದು, ಒಂದಷ್ಟು ಹರಟಿ, ಅಲ್ಲಿನವರಿಗಾಗಿ ತಂದಿದ್ದ ಸಕಲ ಸಾಮಗ್ರಿಗಳನ್ನು ಅವರ ಸುಪರ್ದಿಗೊಪ್ಪಿಸಿ, ಊಟ ಮಾಡಿ, ಮತ್ತೊಂದಿಷ್ಟು ಮಲಗೆದ್ದ ಮೇಲೆ ಸ್ಯಾನ್ ಫ್ರಾನ್ಸಿಸ್ಕೋದ ಗೋಲ್ಡನ್ ಗೇಟ್ ಬ್ರಿಡ್ಜ್ ನೋಡಿಕೊಂಡು ಬರೋಣವೆಂದು ಹೊರಟೆವು..

ಸುವರ್ಣ ಸೇತುವಿನ ನೇರ ನೋಟ

ಪೆಸಿಫಿಕ್ ಮಹಾಸಾಗರದ ತಡಿಯಲ್ಲಿ ನಿರ್ಮಿತವಾಗಿರುವ ಅದ್ಭುತವಾದ ಉಕ್ಕಿನ ಸೇತುವೆ ಈ ಗೋಲ್ಡನ್ ಗೇಟ್‌ ಬ್ರಿಡ್ಜ್. (ಕಲ್ಕತ್ತಾದ ಹೌರಾ ಸೇತುವೆ ನೋಡಿದವರಿಗೆ ಅದರ ನೆನಪಾಗುವುದು ಸಹಜ). ಇಲ್ಲಿನ ಸೂರ್ಯಾಸ್ತ ಬಲು ಸುಂದರವಂತೆ. ಸೂರ್ಯಾಸ್ತವಾಗುತ್ತಿರುವಾಗ ಇಲ್ಲಿನ ಇಡಿಯ ಪರಿಸರವೇ ಸುವರ್ಣದ ಕಾಂತಿಯಿಂದ ತುಂಬಿರುತ್ತದಂತೆ.

ಸೇತುವೆಯ ಕೆಳಗೆ ಹರಿಯುವ ಕಿರಿದಾದ ನೀರಿನ ಭಾಗವನ್ನು ಗೋಲ್ಡನ್ ಗೇಟ್ ಸ್ಟ್ರೈಟ್ ಎಂದು ಕರೆಯುತ್ತಾರೆ. ಈ ನೀರಿನ ಭಾಗ ಪೆಸಿಫಿಕ್ ಸಾಗರವನ್ನು ಸ್ಯಾನ್ ಫ್ರಾನ್ಸಿಸ್ಕೋ ನಗರದ ಕಡಲ ತೀರಕ್ಕೆ ಸೇರಿಸುತ್ತದೆ. ಈ ಉಕ್ಕಿನ ಸೇತುವೆಯನ್ನು ತುಕ್ಕಿನಿಂದ ರಕ್ಷಿಸಲು ಕಾಲಕಾಲಕ್ಕೆ ‘ಇಂಟರ್‌ನ್ಯಾಷನಲ್ ಆರೆಂಜ್’ ಎಂದು ಕರೆಯುವ ಬಣ್ಣವನ್ನು ಲೇಪಿಸಿ ಅದರ ಸೌಂದರ್ಯವನ್ನು ಮಂಕಾಗದಂತೆ ಕಾಪಾಡಿಕೊಳ್ಳುತ್ತಾರೆ. ಹಾಗಾಗಿ ಈ ಸೇತುವೆ ಸದಾ ಕನಕ ವರ್ಣದಿಂದ ಶೋಭಿಸುತ್ತಿರುತ್ತದೆ. ಈ ಮೇಲಿನ ಕಾರಣಗಳಿಂದ ಈ ಸೇತುವೆಗೆ ‘ಗೋಲ್ಡನ್ ಗೇಟ್ ಬ್ರಿಡ್ಜ್’ ಎನ್ನುವ ಹೆಸರು ಬಂದಿದೆ.

ಮನೆಯಿಂದ ಹೊರಟಾಗ ಸಾಕಷ್ಟು ಬಿಸಿಲಿದ್ದರೂ, ಅಲ್ಲಿ ತಲುಪುವ ಹೊತ್ತಿಗೆ ಮೋಡ ಕವಿದ ವಾತಾವರಣವಿದ್ದು ನಮಗೆ ಸೂರ್ಯಾಸ್ತ ನೋಡಲು ಸಿಗಲಿಲ್ಲ. ಇಲ್ಲಿನ ಪ್ರವಾಸಿ ವೀಕ್ಷಣಾ ತಾಣದಲ್ಲಿಳಿದು ಸುತ್ತಲಿನ ಪ್ರಕೃತಿಯನ್ನು ಆಸ್ವಾದಿಸುತ್ತಾ ನಿಂತೆವು. ಪೆಸಿಫಿಕ್ ಸಾಗರದ ನೀರಿನ ಉಷ್ಣಾಂಶ ಬೇಸಿಗೆಯಲ್ಲಿ ಸಹಾ 3 ರಿಂದ 4 ಡಿಗ್ರಿ ಸೆಲ್ಸಿಯಸ್ ಇರುವುದಂತೆ.

ಹಾಗಾಗಿ ಅದರ ಮೇಲಿನಿಂದ ಬೀಸುವ ತಂಪಾದ ಗಾಳಿಗೆ ಎಲ್ಲರೂ ಗಡಗಡ.. ಹಗುರಾಗಿರುವವರನ್ನು ಹಿಡಿದು ಅಲ್ಲಾಡಿಸುವಂತ ಗಾಳಿಯ ಅಬ್ಬರ.. ಪೆಸಿಫಿಕ್ ಸಾಗರದ ನಡುವೆ ನಿರ್ಮಿತವಾಗಿರುವ ಚರಿತ್ರೆಯ ಪುಟಗಳಲ್ಲಿ ದಾಖಲಾಗಿರುವ ‘ಆಲ್ ಕಟ್ರಾಸ್’ ಸೆರೆಮನೆ ಇಲ್ಲಿಂದ ನೋಡ ಸಿಗುತ್ತದೆ. ಒಂದಷ್ಟು ಹೊತ್ತು ಅಲ್ಲಲ್ಲಿ ಸುತ್ತಾಡಿ ಆ ಸ್ಥಳದ ಪ್ರಕೃತಿಯ ರಮಣೀಯ ದೃಶ್ಯಗಳನ್ನು ಕಣ್ಣಿನಲ್ಲೇ ಆಸ್ವಾದಿಸುತ್ತಾ ಖುಷಿ ಪಟ್ಟೆವು.

ನಮ್ಮಲ್ಲಿರುವ ಲಂಟಾನ, ಇನ್ನಿತರ ಕೆಲವು ಪೊದೆ ಹೂಗಳು ಇಲ್ಲಿಯೂ ಕಣ್ಣಿಗೆ ಬಿದ್ದು ಯಾರೋ ಆತ್ಮೀಯರನ್ನು ಕಂಡಷ್ಟು ಸಂತೋಷವಾಯಿತು. ಎಂತಹ ಮನಸ್ಸು ನಮ್ಮದು! ಅದೆಷ್ಟು ವಿಷಯಗಳನ್ನು ನಮ್ಮದೇ ಮಾಡಿಕೊಂಡು ಬಿಟ್ಟಿರುತ್ತೇವೆ. ಅದನ್ನು ಇನ್ನೊಂದೆಡೆ ಕಂಡಾಗ ಆತ್ಮೀಯತೆಯಿಂದ ಪುಳಕಗೊಳ್ಳುತ್ತೇವೆ! ಬೇರೆ ಅದ್ಭುತಗಳನ್ನು ಕಂಡಾಗ ಬೆರಗಾಗಿ ನೋಡುತ್ತಿರುತ್ತೇವೆ!

ಈ ಅನುಭವಗಳನ್ನು ನಮ್ಮದಾಗಿಸಿಕೊಳ್ಳುವ ತವಕ ನಮ್ಮಲ್ಲಿರುವುದರಿಂದಲೇ ಈ ಜೀವನವೆಂದರೆ ನಮಗಿಷ್ಟು ಬಿಡಲಾಗದ ಬಂಧನವೇನೋ.. ಹಳೆಯ ನೆನಪುಗಳನ್ನು ಹೊರ ತರುತ್ತಾ ಹೊಸ ಅನುಭವಗಳನ್ನು ಒಳಗೆಳೆದುಕೊಳ್ಳುತ್ತಾ ಆಟವಾಡುವ ಉಯ್ಯಾಲೆ.

ಅಲ್ಲಿಂದ ಕೆಳಗಿಳಿದು ಬಂದು ಸೇತುವೆಯ ಪಕ್ಕದ ಪಾದಚಾರಿ ರಸ್ತೆಗುಂಟ ಸ್ವಲ್ಪ ದೂರ ಸಾಗಿದೆವು. ಪೆಸಿಫಿಕ್ ಸಾಗರದ ಮುಂದೆ ನಿಂತು ಅದರ ವೈಶಾಲ್ಯವನ್ನೂ, ಅಲ್ಲಿಂದ ಬೀಸುತ್ತಿದ್ದ ಗಾಳಿಯ ತಂಪನ್ನೂ ನಮ್ಮೊಳಗೆ ಸೇರಿಸಿಕೊಳ್ಳುತ್ತಾ ಕೆಲಕಾಲ ನಿಂತೆವು. ಅಷ್ಟು ಹೊತ್ತಿಗೆ ಸೇತುವೆಯ ಮೇಲೆ ಓಡಾಡುವ ವಾಹನಗಳು ಹೆಚ್ಚಾದವು.

ಅದನ್ನು ಮತ್ತೆ ಮೇಲಿನಿಂದ ನೋಡೋಣವೆಂದು ವಾಪಸ್ಸು ವೀಕ್ಷಣಾ ತಾಣಕ್ಕೆ ಬಂದು ಆಯಕಟ್ಟಾದ ಜಾಗದಲ್ಲಿ ಬ್ರಿಡ್ಜ್ ಎದುರಾಗಿ ಕಾಣುವಂತೆ ನಿಂತು ಹೋಗಿ ಬರುವ ವಾಹನಗಳನ್ನು ವೀಕ್ಷಿಸುತ್ತಾ ನಿಂತೆವು. ಈ ದೇಶದಲ್ಲಿ ವೇಗಮಿತಿಯನ್ನು ಅಚ್ಚುಕಟ್ಟಾಗಿ ಪಾಲಿಸುವುದರಿಂದ ವಾಹನಗಳು ಒಂದೇ ಗತಿಯಲ್ಲಿ ಒಂದರ ಹಿಂದೊಂದು ಸಾಗುವುದನ್ನು ನೋಡಲು ಆಕರ್ಷಣೀಯವಾಗಿರುತ್ತದೆ.

ನಮ್ಮ ಮುಂದಿನಿಂದ ಬರುತ್ತಿರುವ ಪಥದ ವಾಹನಗಳ ಮುಂದೆ ಬಂಗಾರದ ಬಣ್ಣದ ದೀಪ; ವಿರುದ್ಧ ದಿಕ್ಕಿನಲ್ಲಿ ವಾಪಸ್ಸು ಸಾಗುವ ಪಥದ ವಾಹನಗಳ ಹಿಂಬದಿಯಲ್ಲಿ ಕೆಂಪು ದೀಪ. ಒಂದೇ ಗತಿಯಲ್ಲಿ ಎರಡು ದೀಪಗಳೂ ಚಲಿಸುತ್ತಿದ್ದರೆ ಒಂದು ರತ್ನ ಖಚಿತವಾದ ಚಲಿಸುವ ಮಾಲೆಯನ್ನು ಆ ಬ್ರಿಡ್ಜ್ ಹೊದ್ದು ಮಲಗಿದಂತಿತ್ತು.

ಯಾವುದಾದರೂ ವಸ್ತು ಪ್ರದರ್ಶನದಲ್ಲಿ ಮಾಡುವ ವಿದ್ಯುದ್ದೀಪದ ಅಲಂಕಾರದಂತೆ, ಇಲ್ಲಿ ತಾನಾಗಿಯೇ ಆ ಅಲಂಕರಣ ನಿರ್ಮಿತವಾಗಿತ್ತು. ಹಾಗೆಯೇ ನೋಡುತ್ತಾ ಇರುವಾಗ ಮುಂಬೈನ ‘ಕ್ವೀನ್ಸ್ ನೆಕ್‌ಲೇಸ್’ ಜಾಗದ ನೆನಪು ಬಂತು. ಅಲ್ಲಿಯೂ ಹೀಗೆ, ಒಂದರ ಹಿಂದೊಂದು ಚಲಿಸುವ ವಾಹನಗಳು ಕತ್ತಲಲ್ಲಿ ಚಲಿಸುತ್ತಿರುವ ಒಂದು ದೊಡ್ಡ ಕೊರಳಸರವೋ ಎನಿಸುವಂತೆ ಕಾಣುತ್ತಿತ್ತು.

ಗೋಲ್ಡನ್ ಬ್ರಿಡ್ಜನ್ನು ನಿಶಾದೇವಿ ನಿಧಾನವಾಗಿ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿರುವ ಹೊತ್ತಿನಲ್ಲಿ ಬಂಗಾರದಿಂದ ನಿರ್ಮಿತವೋ ಎನ್ನುವಂತ ಲೋಕವು ಸೃಷ್ಟಿಯಾಗಿತ್ತು. ನಮ್ಮ ಅಮೆರಿಕ ಪಯಣದ ಮೊದಲ ದಿನ ಈ ಸುಂದರ ತಾಣದಿಂದ ಆರಂಭವಾಯಿತು. ಸ್ಯಾನ್ ಫ್ರಾನ್ಸಿಸ್ಕೋ ಪಟ್ಟಣದ ನೋಟವನ್ನು ಕಣ್ತುಂಬಿಕೊಳ್ಳುತ್ತಾ ಮನೆಗೆ ಮರಳಿದೆವು. ಸ್ಯಾನ್ ಫ್ರಾನ್ಸಿಸ್ಕೋ ನಗರದ ಬಗ್ಗೆ ಇನ್ನೊಂದು ಲೇಖನ ಬರೆಯುವುದು ಇರುವುದರಿಂದ ಇಲ್ಲಿ ನಗರ ವೀಕ್ಷಣೆಯನ್ನು ಇಲ್ಲಿಗೇ ನಿಲ್ಲಿಸೋಣ.

ತರುಗಳ ತುಂಬಾ ತೊನೆಯುವ ತನಿವಣ್ಣುಗಳ ತೋಟ..

ಚೆರ‍್ರಿ ಮರ ಹತ್ತಿ ಹಣ್ಣು ಕೀಳುತ್ತಿರುವುದು

ಭಾನುವಾರದ ರಜಾದಿನ ಮಿಲ್ಪಿಟಾಸಿನಿಂದ ಸುಮಾರು ನಲವತ್ತು ಮೈಲು ದೂರದಲ್ಲಿರುವ ಡಬ್ಲಿನ್‌ನಲ್ಲಿರುವ ನಾದಿನಿಯ ಮಗಳು ಗಾಯಿತ್ರಿಯ ಮನೆಗೆ ತೆರಳಿ, ಅಲ್ಲಿ ಬೆಳಗಿನ ಉಪಹಾರದ ನಂತರ ಅವರ ಕುಟುಂಬವನ್ನೂ ಕೂಡಿಕೊಂಡು ಅಲ್ಲಿಂದ ಮುಂದೆ ಇನ್ನೊಂದು ಗಂಟೆ ಹಾದಿಯಲ್ಲಿರುವ ಬ್ರೆಂಟ್‌ವುಡ್‌ನ ಚೆರ‍್ರಿ ತೋಟದಲ್ಲಿ ಹಣ್ಣು ಕೀಳುವ ಕಾರ್ಯಕ್ರಮ ಯೋಜಿತವಾಗಿತ್ತು.

ಮಧ್ಯಾಹ್ನದ ಊಟಕ್ಕೆ ಬೇಕಾದ ತಿನಿಸನ್ನೂ, ಒಂದಷ್ಟು ಕುರುಕು ತಿಂಡಿಗಳನ್ನೂ ತೆಗೆದುಕೊಂಡು ಎರಡು ಕಾರುಗಳಲ್ಲಿ ಅಲ್ಲಿಂದ ಹೊರಟೆವು. ದಾರಿಯುದ್ದಕ್ಕೂ ಬಾದಾಮಿ, ಕಿತ್ತಳೆ, ಆಲಿವ್, ರಾಸ್ಬೆರಿ ಮತ್ತು ಚೆರ‍್ರಿ ಹಣ್ಣಿನ ತೋಟಗಳು.

ಒಂದು ಗಂಟೆಯ ನಂತರ ನಿಗದಿತ ತಾಣವನ್ನು ತಲುಪಿದೆವು. ಭಾನುವಾರವಾದ್ದರಿಂದ ಸಾಕಷ್ಟು ಜನರು ಪಿಕ್‌ನಿಕ್ ನೆಪದಲ್ಲಿ ಅಲ್ಲಿ ಸೇರಿದ್ದರು. ಬಂದವರೆಲ್ಲರ ಕೈಯಲ್ಲೂ ಅಲ್ಲಿದ್ದ ಒಂದೊಂದು ಸಣ್ಣ ಪ್ಲಾಸ್ಟಿಕ್ ಬಕೆಟ್‌ಗಳು. ತೋಟದ ಒಳಹೊಕ್ಕಾಗ ನೆನಪಿಗೆ ಬಂದದ್ದು ರಾಮಾಯಣದಲ್ಲಿ ಕಪಿಗಳು ಒಂದು ಹಣ್ಣಿನ ತೋಟವನ್ನು ಹೊಕ್ಕು, ಹಣ್ಣುಗಳನ್ನು ಕಿತ್ತು, ತಿಂದು, ನೆಗೆದು, ನಲಿದು, ಮೆರೆದಾಡಿದ ದೃಶ್ಯ.

ಒಂದೊಂದು ಮರದಲ್ಲೂ ತೂಗಿ ತೊನೆಯುತ್ತಿರುವ ರಕ್ತ ವರ್ಣದ ಹಾಗೂ ಗಾಢ ಕೆಂಪು ಬಣ್ಣದ ರಸ ತುಂಬಿದ ಮಧುರ ಫಲಗಳು. ಎಂದಾದರೂ, ಐಸ್ ಕ್ರೀಂ ಮೇಲೋ, ಇಲ್ಲವೇ ಕೇಕಿನ ಮೇಲೋ ಅಲಂಕರಣಕ್ಕಾಗಿ ಇರಿಸಿದ ಸಕ್ಕರೆಯ ಪಾಕದಲ್ಲಿ ಸಂರಕ್ಷಿಸಿದ ಕೆಂಪನೆಯ ಗೋಲಿಯಾಕಾರದ ಚೆರ‍್ರಿ ಹಣ್ಣುಗಳನ್ನು ನೋಡಿದ್ದಷ್ಟೆ.

ಕಿತ್ತ ಚೆರ‍್ರಿ ಹಣ್ಣು

ಎಲ್ಲೋ ಕೆಲವೊಮ್ಮೆ ಹಣ್ಣುಗಳ ಮಿಶ್ರಣ ತೆಗೆದುಕೊಂಡಾಗ, ಅದರಲ್ಲೂ ಸಂರಕ್ಷಿಸಿದ ಸ್ವಲ್ಪ ಮೃದುವಾದ ಹಣ್ಣನ್ನು ಸವಿದದ್ದಷ್ಟೆ. ಇಲ್ಲಿನ ತಾಜಾ ಹಣ್ಣುಗಳನ್ನು ವರ್ಣಿಸಲು ನನ್ನಲ್ಲಿ ಶಬ್ದಗಳಿಲ್ಲ. ಅಲ್ಲಿಗೆ ಬಂದವರೆಲ್ಲ ಬೇಕಾದಷ್ಟು ಹಣ್ಣನ್ನು ತಿನ್ನಬಹುದು; ತಮ್ಮೊಂದಿಗಿರುವ ಸಂಗ್ರಹಣಾ ಬುಟ್ಟಿಯಲ್ಲಿ ರುಚಿ ನೋಡಿದ ರೆಂಬೆಯ ಹಣ್ಣನ್ನು ಶಬರಿಯಂತೆ ತಿಂದು ಪರೀಕ್ಷಿಸಿ, ಅದರ ಬಣ್ಣ, ಗಾತ್ರ, ರುಚಿಗಳು ಇಷ್ಟವಾದ ಮೇಲೆ ನಮಗೆ ಬೇಕಾದಷ್ಟನ್ನು ಸಂಗ್ರಹಿಸಿಕೊಳ್ಳಬಹುದು.

ಕಡೆಗೆ ತೋಟ ಬಿಡುವ ಮುನ್ನ ಕಿತ್ತುಕೊಂಡಿರುವ ಹಣ್ಣುಗಳನ್ನು ತೂಗಿಸಿಕೊಂಡು, ಅದರ ಬೆಲೆಯನ್ನು ಕೊಟ್ಟು ತೆಗೆದುಕೊಂಡು ಹೋಗಬಹುದು. ತುಂಬಾ ಎತ್ತರದ ಮರಗಳೇನಲ್ಲ. ಕೆಳಗಿರುವ ಗೆಲ್ಲುಗಳಲ್ಲಿ ಹಣ್ಣುಗಳು ಕೈಗೆಟಕುವಂತೆಯೇ ಇರುತ್ತದೆ. ಅಲ್ಲಲ್ಲಿ ಮರಗಳಿಗೆ ಏಣಿಯನ್ನೂ ಆನಿಸಿ ಇಟ್ಟಿರುತ್ತಾರೆ. ಅದನ್ನು ಹತ್ತಿ ಹೋಗಿ ಮುಗಿಲು ನೋಡುತ್ತಿರುವ ಹಣ್ಣುಗಳನ್ನು ಕಿತ್ತುಕೊಳ್ಳಬಹುದು.

ನಾವಿದ್ದದ್ದು ಎಂಟು ಜನ ದೊಡ್ಡವರು, ಇಬ್ಬರು ಮಕ್ಕಳು ಮತ್ತು ಒಂದು ಮಗು. ನನ್ನನ್ನು, ಮಗುವನ್ನು ಬಿಟ್ಟರೆ ಮಿಕ್ಕೆಲ್ಲರೂ ನಾನು ಮೇಲೆ ಹೇಳಿದಂತೆ ತದ್ವತ್ ಹಣ್ಣಿನ ಬನವನ್ನು ಹೊಕ್ಕ ರಾಮಭಂಟ ಸೈನ್ಯದವರೇ ಆಗಿದ್ದರು. ರೆಂಬೆಗಳನ್ನು ಮುರಿಯಲಿಲ್ಲ; ಮರದಿಂದ ಮರಕ್ಕೆ ಹಾರಲಿಲ್ಲ ಅಷ್ಟೆ. ರುಚಿ ನೋಡಲೆಂದೇ ಒಬ್ಬೊಬ್ಬರೂ ಸರಾಸರಿ ಅರ್ಧ ಕೆ.ಜಿ.ಯಿಂದ ಒಂದು ಕೆ.ಜಿ.ಯಷ್ಟು ಹಣ್ಣನ್ನು ತಿಂದು ಮುಗಿಸಿದ್ದರು.

ನಾನೂ.. ನಾನು ಕುಳಿತಿದ್ದ ಮರದ ಬಾಗಿದ ರೆಂಬೆಯಿಂದ ಕೈಗೆಟಕುವಷ್ಟು ಹಣ್ಣನ್ನು ಕಿತ್ತು ತಿಂದೆ. ಇಷ್ಟರ ಮೇಲೆ ಸಂಗ್ರಹಿಸಿದ ಹಣ್ಣು ಮೂರು ಮಧ್ಯಮಗಾತ್ರದ ಪ್ಲಾಸ್ಟಿಕ್ ಬಕೆಟುಗಳಷ್ಟಿತ್ತು. ಮಧ್ಯಾಹ್ನಕ್ಕೆಂದು ತಂದಿದ್ದ ತಿಂಡಿಯನ್ನು ತಿಂದು ಆಯ್ದುಕೊಂಡ ಹಣ್ಣುಗಳನ್ನು ತೂಗಿಸಿಕೊಂಡು ಒಂದು ಹೊಸ ಅನುಭವಕ್ಕೆ ಪಕ್ಕಾಗಿ ಅಲ್ಲಿಂದ ಹೊರಟೆವು.

ಚೆರ‍್ರಿ ಹಣ್ಣುಗಳಲ್ಲಿ ರಕ್ತವರ್ಣದ ಹಣ್ಣುಗಳು ಸ್ವಲ್ಪ ಹುಳಿ ಮಿಶ್ರಿತ ಸಿಹಿಯಾಗಿ ಇರುತ್ತವೆ. ಅಚ್ಚ ಕೆಂಪಿನ (ಮೆರೂನ್‌ ಬಣ್ಣಕ್ಕೆ ಹತ್ತಿರದ ಬಣ್ಣ) ಹಣ್ಣುಗಳಂತೂ.. ಅಮೃತವನ್ನು ನಾನು ರುಚಿ ನೋಡಿಲ್ಲ. ಅದು ಹೀಗೂ ಇರಬಹುದೇನೋ ಎಂದುಕೊಂಡೆ.

ಹಿತವಾದ ನರುಗಂಪು.. ಬಣ್ಣವೋ ಅಚ್ಚಕೆಂಪು.. ಮಧುರತೆಯೋ ನಾಲಿಗೆಗೆ ತಂಪು.. ಹೊಳಪೋ ಕಣ್ಣಿಗೆ ಇಂಪು.. ಸಾಂದ್ರತೆಯೋ ಸ್ವಲ್ಪಮಟ್ಟಿಗೆ ಹದವಾದ ಜಮ್ಮು ನೇರಳೆಯಂತೆ ಗಟ್ಟಿಯೂ ಅಲ್ಲದ, ಮೆದುವೂ ಅಲ್ಲದ, ನಾಲಿಗೆಗೆ ಅಂಟಿಕೊಳ್ಳದ ಹಿತವಾದ ರಸ ಒಸರುವ ತನಿಯ ಪೆಂಪು. ಅಲ್ಲಿಂದ ತಂದಿದ್ದ ಹಣ್ಣುಗಳನ್ನು ನಂತರ ನಾವು ಹದಿನೈದು ದಿನಗಳು ದಿನವೂ ಸವಿದೆವು.

ಯಾರೇ ತಿಂದರೂ ಒಂದು ಹಣ್ಣಿಗೆ ಸಾಕು ಮಾಡಲು ಸಾಧ್ಯವೇ ಇಲ್ಲ. ತಟ್ಟೆಯಲ್ಲಿ ಹಣ್ಣುಗಳನ್ನು ಇಟ್ಟುಕೊಂಡು, ಬೀಜವನ್ನು ಹಾಕಲು ಬಟ್ಟಲನ್ನಿಟ್ಟುಕೊಂಡು ಕುಳಿತರೆ.. ಲೆಕ್ಕ ಹಾಕುವುದು ಬೇಡ ಬಿಡಿ…… ಅವರವರ ಶಕ್ತ್ಯಾನುಸಾರ ಬೀಜದ ಬಟ್ಟಲನ್ನು ತುಂಬಿಸಬಹುದು.

(ಮುಂದುವರಿಯುವುದು)

‍ಲೇಖಕರು avadhi

October 9, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: