ಬೇಂದ್ರೆ ಎಂಬ ಎಂದೂ ಮಾಸದ ಕವಿತ್ವ…

ಅಜ್ಜನಿಗೆ ಜನುಮದಿನದ ಶುಭ ಹಾರೈಕೆಗಳೊಂದಿಗೆ

ಸಂಗಮೇಶ ಸಜ್ಜನ

ಕವಿ ಯಾರು? ಹೀಗೆ ಯಾರೋ ಬೇಂದ್ರೆ ಅಜ್ಜನನ್ನು ಕೇಳಿದ್ರಂತೆ. ಆಗ ಬೇಂದ್ರೆ ಅಜ್ಜ ಹೇಳಿದ್ದು, ಕವಿ ಅನ್ನೋದು ಬಹಳ ಹಳೆಯ ಶಬ್ಧ. ವೇದದ ಕಾಲದಿಂದ ಬಂದಿದ್ದ ಕವಿಗಳು ಸಹ ಅವರ ಹಿಂದಿನಿಂದಲೂ ಕವಿಗಳು ಬಂದಿದ್ದರೆಂದು ಹೇಳುತ್ತಾರೆ. ಇಂದಿನ ಕವಿಗಳಿಗೂ ನಾಳಿನ ಕವಿಗಳು ಇದ್ದಾರೆ. ಕವಿ ಹೇಳುತ್ತಾನೆ, ಅದನ್ನು ತಿಳಿದುಕೊಳ್ಳುವವನಿಗೆ ರಸಿಕ ಎನ್ನುತ್ತಾರೆ. ಸಹೃದಯ ಎನ್ನುತ್ತಾರೆ. ಆದರೆ ಪಂಪನ ಕಾಲಕ್ಕೆ ಇದ್ದ ಕವಿ, ಕುಮಾರವ್ಯಾಸನ ಕಾಲಕ್ಕೆ ಇದ್ದ ಕವಿ, ಮತ್ತೆ ನಮ್ಮಿ ಕಾಲಕ್ಕೆ ಇದ್ದ ಕವಿಗಳಲ್ಲಿಯೂ ಒಂದು ರಸ ಪ್ರವಾಹವಿರುತ್ತದೆ.

ಭಗೀರಥನ ಕಾಲಕ್ಕೆ ಇದ್ದ ಗಂಗೆ ನಮ್ಮ ಕಾಲಕ್ಕೂ ಇದ್ದಾಳೆ, ಆದರೆ ಆ ಕಾಲಕ್ಕೆ ಇದ್ದ ನೀರು ಈ ಕಾಲಕ್ಕೆ ಇಲ್ಲ. ಅಲ್ಲಿ ಇದ್ದದ್ದು ನೀರೇ. ಆದರೆ ಅದರ ತಂಪು ಅಂದಿನಂತಹ ತಂಪೇ. ಆದರೆ ಕೇಳುವ ಜನರ ಸಂಸ್ಕಾರ ಬದಲಾಗಿದ್ದರು ಸಹ, ಕೇಳಬೇಕೆಂಬುವರ ಕುತೂಹಲ, ಜಿಜ್ಞಾಸೆ ಎಲ್ಲಿಯವರೆಗೆ ಆ ಸಮಾಜದಲ್ಲಿರುತ್ತದೆಯೋ, ಅಲ್ಲಿಯವರೆಗೂ ಕವಿ ಮತ್ತು ಕಾವ್ಯದ ಜೀವನ ಸಾರ್ಥಕವಾಗಿರುತ್ತದೆ. ಇಂತಹ ಸಂಸ್ಕಾರ ಜನರಲ್ಲಿ ಕಡಿಮೆಯಾದಾಗ, ಸಮಾಜದಲ್ಲಿದ್ದ ಒಬ್ಬ ಗುರುವಿನ ಮಹಾತ್ಮೆಯಂತೆ ಅಲ್ಲಿಯೇ ಸ್ತಬ್ಧವಾಗಿರುತ್ತದೆ. ಮತ್ತೆ ಹೊಸಕಾಲ ಬಂದಾಗ, ವಸಂತದ ಗಾಳಿಬೀಸಿ, ಚಿಗುರು ಒಡ್ಡಿ ಬರುವಂತೆ, ಕವಿವಾಣಿಯು ಮತ್ತೆ ಮತ್ತೆ ಚಿಗುರಿ ಬರುತ್ತದೆ.

ಕವಿತೆ ಕವಿಯ ಅನುಭವದ ಪ್ರತಿಬಿಂಬ, ಹಾಗಂತ ನೋಡಿದ ಎಲ್ಲ ವಸ್ತುವಿನ ಮೇಲೆ ಕವಿತೆ ಕಟ್ಟುವುದು ಕೂಡ ಅಚ್ಚರಿಯೇನಲ್ಲ. ಒಂದು ವಸ್ತುವನ್ನು ನೋಡಿ ಆನಂದಿಸುವುದಕ್ಕಿಂತ, ಅನುಭವಿಸುವುದೇ ಹೆಚ್ಚು. ಅದು ನಿಜವಂತೂ ಅಲ್ಲವೇ ಅಲ್ಲ. ಕವಿತೆ ಬರೆಯುವಾಗ ಕಣ್ಣಿಗೆ ಕಾಣುವ ವಸ್ತು ಒಂದು ನೆಪಮಾತ್ರ. ಅದು ಪ್ರೇರಕವೇನಲ್ಲ. ಯಾವುದೇ ವಿಷಯವನ್ನು ಮನಸ್ಸಿನಲ್ಲಿಟ್ಟು ಕೊಂಡು ಬರೆಯುವುದಕ್ಕಿಂತ, ಆ ಗಳಿಗೆಯಲ್ಲಿ ಮೂಡಿ ಬರುವ ಮನಸ್ಸಿನ ಭಾವನೆಯನ್ನೇ ಕವಿತೆ ರೂಪದಲ್ಲಿ ಮೂಡಿಸಬೇಕು. ಕವಿತೆ ಅನ್ನುವುದು ಆ ಗಳಿಗೆಯ ಸ್ಪೂರ್ತಿ ಫಲವೇ ವಿನಃ, ಅನುಭವದ ಫಲವಲ್ಲ. ಇದಕ್ಕೊಂದು ಒಳ್ಳೆಯ ಉದಾಹರಣೆ ಬೇಂದ್ರೆಯವರ ‘ಹಕ್ಕಿ ಹಾರುತಿದೆ ನೋಡಿದಿರಾ’.

ಒಂದು ದಿನ ತುಂಬಾ ತಡವಾಗಿ ಮಲಗಿದ್ದ ಬೇಂದ್ರೆ ಅಜ್ಜನಿಗೆ, ಮಾರನೆಯ ದಿನ ಎಚ್ಚರವಾದಾಗ, ಹಾಸಿಗೆ ಬಿಟ್ಟು ಏಳಲು ಮನಸ್ಸಾಗಲೇ ಇಲ್ಲ. ಪಕ್ಕದಲ್ಲಿದ್ದ ಗಡಿಯಾರದಿಂದೊಮ್ಮೆ ಟಿಕ್ ಟಿಕ್ ಎಂಬ ನಾದ, ಇದ್ದಕ್ಕಿದ್ದಂತೆಯೇ ಕಾಲಕ್ಕೂ ಹಕ್ಕಿಗೂ ಸಾಮ್ಯ ಮನಸ್ಸಿಗೆ ಬಂದು ‘ಹಕ್ಕಿ ಹಾರುತಿದೆ’ ಕವನ ಹುಟ್ಟಿ ಕೊಂಡಿತು ಅಂತ ಹೇಳುತ್ತಾರೆ. ಹಿಂದೆಯೂ ಎಷ್ಟೋ ಸಲ ಆ ಅನುಭವ ಆಗಿದ್ದರು ಕವನ ಹುಟ್ಟಿರಲಿಲ್ಲವಂತೆ,. (ವಿಚಾರ ಮಂಜರಿ ಪುಸ್ತಕದಿಂದ) ಇಷ್ಟೆಲ್ಲಾ ಹೇಳಿದ್ದ ಬೇಂದ್ರೆ ಅಜ್ಜ ತಮ್ಮ ಕವಿತೆಗಳಲ್ಲಿ ಬಳಸದೆ ಇರುವ ಕನ್ನಡದ ಶಬ್ದಗಳೇ ಇಲ್ಲ. “ಕವಿ ಜೀವದ ಬ್ಯಾಸರ ಹರಿಸಾಕ, ಹಾಡ ನುಡಿಸಾಕ, ಹೆಚ್ಚಿಗೇನು ಬೇಕ? ಒಂದು ಹೂತ ಹುಣಸಿಮರ ಸಾಕ”. 

ಇದನ್ನೆಲ್ಲಾ ನೋಡುತ್ತ ಹೋದಾಗ ಕವಿಗೆ ತನ್ನ ಕವಿತೆಯ ಸ್ವರೂಪಗಳನ್ನು ಕಾವ್ಯರೂಪದಲ್ಲಿ ಅಭಿವ್ಯಕ್ತಗೊಳಿಸಲು ಕವಿ ಪ್ರೇರಣೆಯ ಜೊತೆಜೊತೆಗೆ ಪ್ರತಿಭೆಯು ಅಷ್ಟೇ ಮುಖ್ಯ. ಲೋಕದ ಅನುಭವಗಳನ್ನು ಗ್ರಹಿಸಿ ತನ್ನ ಸೃಜನಶೀಲತೆಯ ವಿಚಾರಗಳನ್ನು ವಾಸ್ತವಿಕ ನೆಲೆಯಿಂದ ಭಾವನಾತ್ಮಕ ನೆಲೆಗೆ ಕೊಂಡೊಯ್ಯುವುದೇ ಕವಿಯ ಕಲೆ. ಅದಕ್ಕೇನೆ ಪಾಶ್ಚ್ಚಿಮಾತ್ಯರು “ಕಲೆ ಅನ್ನುವುದು ಮನುಷ್ಯತ್ವವೇ ಹೊರತು ಯಾವುದೇ ದೈವಿಕವಲ್ಲ” ಅಂತ ಹೇಳಿದ್ದಾರೆ. ಇದನ್ನು ನೋಡಿಯೇ ನಮ್ಮವರು “ರವಿ ಕಾಣದ್ದನ್ನು ಕವಿ ಕಂಡ” ಅಂತ ಹೇಳಿದ್ದರೇನೋ ಎನ್ನುವ ಕುತೂಹಲವು ಉಂಟಾಗುತ್ತದೆ. 

ಎಷ್ಟೋ ಸಲ ಕವಿತೆ ಬರೆಯುವಾಗ ಕಲ್ಪನೆಯ ಜೊತೆಜೊತೆಗೆ ರೂಪಕಗಳು ಅಷ್ಟೇ ಮುಖ್ಯನಾ ಅಂತ ಯೋಚಿಸುತ್ತ ಹೋದಾಗ, ದೇಹದ ಸೌಂದರ್ಯಕ್ಕೆ ಒಳ್ಳೆಯ ಬಟ್ಟೆಗಳು, ಆಭರಣಗಳು ಹೇಗೆ ಮುಖ್ಯವೋ, ಹಾಗೆಯೇ ಕಾವ್ಯಕ್ಕೂ ರೂಪಕಗಳು, ಪ್ರತಿಮೆಗೇಳು, ಆದಿ ಪ್ರಾಸ, ಅಂತ್ಯ ಪ್ರಾಸ, ಅಲಂಕಾರ, ಇವೆಲ್ಲವೂ ಪೂರಕವಾಗೇ ಮುಖ್ಯ ಅಂತ ಅನ್ನಿಸಿದ್ದು ಉಂಟು. 

ಎಷ್ಟೋ ಸಲ ಕವಿಯ ನಿರ್ಲಿಪ್ತತೆ, ವಾಸ್ತವದ ಕಷ್ಟ-ನಿಷ್ಠೂರಗಳು ವಿಡಂಬನಾತ್ಮಕವಾಗಿರುತ್ತವೆ ಅಂತ ಯೋಚಿಸುತ್ತ ಹೋದಾಗ ಬೇಂದ್ರೆ ಅಜ್ಜನ “ಯಾರಿಗಿ ಬೇಕಾಗಿತಿ ನಿಮ್ಮ ಕವಿತಾ” ಬಹಳವೇ ಕಾಡುತ್ತದೆ. ಕಾವ್ಯ ಸೃಷ್ಟಿ ಅನ್ನೋದು ಹೊಟ್ಟೆ ತುಂಬಿಸಲಾಗ ಒಂದು ಸೃಜನಶೀಲ ಕ್ರಿಯೆ. ಇದುವೇ ಸಾರ್ವಕಾಲಿಕ ಸತ್ಯವು ಅಂತ ಅರ್ಥವಾಗುತ್ತದೆ. 

‘ಯಾರಿಗಿ ಬೇಕಾಗೇತಿ ನಿಮ್ಮ ಕವಿತಾ ಇದ್ರ ಒಂದು ಬ್ರೆಡ್ ತಾ ಮ್ಯಾಲ ಅದಕ್ಕ ಬೆಣ್ಣಿ ತಾಇಲ್ಲಾ? ಹೋಗಿ ಎಣ್ಣಿ ತಾ ಹಾಕು ಮ್ಯಾಲ ಖಾರದ ಪುಡಿ ಹೊಟ್ಟಿ ತುಂಬಾ ಅದನ್ನ ಜಡಿ ಕುಡಿ, ಸಿಕ್ಕಷ್ಟು ಚಾ ಕುಡಿಹಿಡಿ, ಬಂದ ಹಾದಿ ಹಿಡಿಸಾಯಕಲ್ ಮ್ಯಾಲ್ ಟಾಂಗಾ ಹೊಡಿ ಬರೀತಾನಂತ ಬರೀತಾನಸುಳ್ಳೇ ತಲೀ ಕೆರೀತಾನ’- ಬೇಂದ್ರೆ ಅಜ್ಜ .

ಕವಿ ಮತ್ತು ಕವಿತೆ ಎರಡಕ್ಕೂ ಅವಿನಾಭಾವ ಸಂಬಂಧವಿದ್ದರೆ, ಎರಡರ ಒಳಹರಿವು ಕೂಡ ಅಷ್ಟೇ ವಿಭಿನ್ನವಾದದ್ದು. ಬರೆದಂತೆ ಬದುಕುವದಕ್ಕಿಂತ, ಬರೆದು ಬದುಕಿದವರೇ ಹೆಚ್ಚು. ಇದಕ್ಕೆ ಮುಖ್ಯ ಉದಾಹರಣೆ ನಮ್ಮ ವರಕವಿ ಬೇಂದ್ರೆ ಅಜ್ಜನೆ. 

‘ಕವಿತಾ ಕಪ್ಪು ಮಶೀಲೆ ಬರೀತಾನ 
ಯುದ್ಧ ಕೆಂಪು ರಕ್ತದಿಂದ ಕೊರೀತಾರ’-
ಬೇಂದ್ರೆ ಅಜ್ಜ.

‍ಲೇಖಕರು Admin

January 31, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: