'ಬೆಸೆಯುವ ಶಕ್ತಿ ನೋವಿಗಿರುವಷ್ಟು ನಲಿವಿಗಿಲ್ಲ' – ಸ್ವರ್ಣ ಎನ್ ಪಿ

Swarna-20150627_002735-150x15011

ಸ್ವರ್ಣ ಎನ್ ಪಿ

ಮುಳ್ಳಬೇಲಿಯಲೊಬ್ಬ ಹಸನ್ಮುಖಿ
ಗಂಧ ಗಾಳಿಯ ನಡುವೆ ತೂಗುತ್ತಾಳೆ
ತೊನೆಯುತ್ತಾಳೆ ಹಾಡೊಂದ ಗುನುತ್ತಾಳೆ
ಅವಳ ಹೆಸರು ಲೋಕಕ್ಕೆ ತಿಳಿದಿಲ್ಲ
ಅವಳ ಹಾಡಿಗೆ  ಸೊಲ್ಲಿಲ್ಲ .
ಬೇಲಿ ದಾಟಿದ ನಿಶ್ಯಬ್ಧ ಹಾಡ ತನ್ನದಾಗಿಸಿಕೊಂಡ ಕವಿಯದಕೆ ಮಲ್ಲಿಗೆ ಘಮ ನೀಡುತ್ತಾನೆ . ‘
ಅರೇ ! ಹೀಗೂ ಬರೆಯಬಹುದೇ ? ಇದರ ಬಗ್ಗೆಯೂ  ಬರೆಯಬಹುದೇ ?’  ಎಂಬುದು ಕೆಲವು ಕವಿತೆಗಳನ್ನು ಕೇಳಿದಾಗ ನಮ್ಮ ಮೊದಲ ಅನಿಸಿಕೆಯಾಗಿರುತ್ತದೆ. ಕವಿಮನಸಿಗೆ ಅದೆಲೆಲ್ಲಿ ಕವಿತೆಗಳು ಕಾಣುತ್ತವೋ ? ಬಲ್ಲವರಾರು.
ಕೆ.ಎಸ.ಏನ್. ಅವರ ತೆರೆದ ಬಾಗಿಲು ಸಂಕಲನದ ಪ್ರಸಿಧ್ಧ ಕವಿತೆ ‘ರೇಲ್ವೆ ನಿಲ್ದಾಣದಲ್ಲಿ ‘.  ಇತ್ತೀಚಿಗೆ ಕವಿಯ ಜನ್ಮ ಶತಮಾನೋತ್ಸವ ಸಂಧರ್ಭದಲ್ಲಿ ಬಹು ಚರ್ಚಿತವಾದ ಕವಿತೆ. ಬದುಕಿನ ಪ್ರತೀ ನಿಲ್ದಾಣಕ್ಕೂ ಒಂದು ಗುರುತಿದೆ ಆ ಗುರುತನ್ನು ಹಾಡಾಗಿ ಹಾಡಬಹುದು ,ಕಥೆಯಾಗಿ ಹೇಳಬಹುದು ಅಥವಾ ಮೌನವಾಗಿ ಬದುಕಿ ಬಿಡಬಹುದು.  ಹಾಗೆ ಮೌನವಾಗಿ ಬದುಕುವ ಜೀವಗಳ ಪಾಡನ್ನು ಕವಿ ಹಾಡುತ್ತಾರೆ. ಮೊದಲ ದಿನ ಮೌನ , ರೇಲ್ವೆ ನಿಲ್ದಾಣದಲ್ಲಿ ಅಂತಹ ಮೌನದ ಹಾಡುಗಳೆನಿಸುತ್ತವೆ.
ತವರು ತೊರೆದು ಮತ್ಯಾವುದೋ ಮನೆಯನ್ನು ಒಪ್ಪಿಕೊಂಡು ಅಲ್ಲಿನವರನ್ನು ಅಪ್ಪಿಕೊಳ್ಳುತ್ತಿರುವ ಹೆಣ್ಣಿಗೆ ಬಸಿರು , ಬಾಣಂತನವೆಂಬುದು ಮುಂದಿನ ಹಂತ . ಮದುವೆಯ ನಂತರ ಮೊದಲ ಬಾರಿಗೆ ಮತ್ತೆ ತಿಂಗಳಾನುಗಟ್ಟಲೆ ತವರ ಸುಖವನನುಭವಿಸುವ ಅವಕಾಶ. ಹಾಗೆಂದು ಇಲ್ಲಿ ಸಮಸ್ಯೆಗಳಿಲ್ಲವೆಂದಲ್ಲ. ಆ ಮನೆಯಲ್ಲಿ ಅತ್ತೆ ಮಾವ ಹೇಳಿದಂತೆ ಕೇಳಬೇಕು, ಇಲ್ಲಿ ಅಪ್ಪ ರಿಯಾಯಿತಿ ತೋರಿದರೂ ಅಮ್ಮನ ಮಾತನ್ನು ಪಾಲಿಸಲೇ ಬೇಕು . ಬಾಣಂತನದ ಪಥ್ಯೋಪಚಾರಗಳೆಲ್ಲವೂ ಅವಳ ಸುಪರ್ದಿಯಲ್ಲೇ . ಮೊದಲ ತಿಂಗಳು ಇದನ್ನು ಒಪ್ಪಿಕೊಂಡ ಬಾಣಂತಿಗೆ ಎರಡನೇ ತಿಂಗಳ ಹೊತ್ತಿಗೆ ಅದೇನೋ ಸಿಡಿಮಿಡಿ. ಮನೆಯಲ್ಲೇ ಇರಬೇಕಾದ ಸ್ಥಿತಿ,ನಿದ್ದೆ ಇಲ್ಲದ ರಾತ್ರಿಗಳು ಅವಳನ್ನು ಕಂಗಾಲಾಗಿಸುತ್ತವೆ. ಇದಕ್ಕೆ  ಸನ್ನಿ ಎಂಬ ವೈದ್ಯಕೀಯ ನಾಮವೂ ಇದೆ.  ಅಮ್ಮನಿಗೂ ಅವಳ ಉಪಚಾರ ಮಾಡಿ ಆಗೀಗ ಸುಸ್ತಾಗುವುದುಂಟು. ಆಗೆಲ್ಲ ಅಮ್ಮನ ವರಾತ ಶುರುವಾಗುತ್ತದೆ “೨೫ ದಿನದ ಹಸಿ ಬಾಣಂತಿ ಅಮ್ಮನ ಮನೆ ಬಿಟ್ಟು ಬಂದು ಹಾಸಿಗೆ ಹಿಡಿದ ನಿಮ್ಮಜ್ಜಿ ಸೇವೆ ಮಾಡಿದ್ದೆ.ಶಕ್ತಿ ಇದ್ದಾಗ ನನ್ನನ್ನು ಹುರಿದು ಮುಕ್ಕಿದ ಅತ್ತೆಗೆ ಕೊನೆಗಾಲದಲ್ಲಿ ಆಗಿದ್ದು ನಾನೇ.” ಅಂತಲೋ ಇಲ್ಲ “ನಿಮ್ಮಜ್ಜಿ ನನಗೆ ದಿನಕ್ಕೆ ಒಂದೇ ಲೋಟ ನೀರು ಕೊಡುತ್ತಿದ್ದದ್ದು ಗೊತ್ತಾ ? ಗುಟುಕು ಗುಟುಕಾಗಿ ಕುಡಿಬೇಕಿತ್ತು. ಕತ್ತಲೆ ಕೋಣೆಯಿಂದ ಹೊರ ಬರುತ್ತಿದ್ದದ್ದು  ದಿನಕ್ಕೆರಡೇ ಬಾರಿ” ಎಂದು ಅವಳ ಮಡುಗಟ್ಟಿದ ದುಃಖವನ್ನು ಹೇಳಿಕೊಳ್ಳುತ್ತಾಳೆ .
Evening light shining on railway track
ಮೊದಲೇ ಖಿನ್ನಳಾಗಿರುವ ಬಾಣಂತಿ ಸಿಡುಕುತ್ತಾಳೆ ಇಲ್ಲವೇ ಮತ್ತಷ್ಟು ಖಿನ್ನಳಾಗುತ್ತಾಳೆ. ಆದರೆ ಅಮ್ಮ ಮಗಳ  ಈ ನೋವು ಶಾಶ್ವತವಲ್ಲ. ಇದು  ಆ ತಿಂಗಳ ಆ ವಾರದ ಕಥೆ ಮಾತ್ರ. ಮಗುವಿನ ಮೇಲಾದ ಸಣ್ಣ ಸಾಸಿವೆಯಷ್ಟಿರುವ ಕೆಂಪಾದ ಗುಳ್ಳೆ , ಏಳುವ ಹೊತ್ತಾದರೂ ಏಳದ ಕಂದ ಕಡೆಗೆ ಒಂದು ದಿನ ಮಗು ಕಕ್ಕ ಮಾಡಲಿಲ್ಲವೆಂಬ ವಿಷಯವೂ …ಮತ್ತೆ ಮನೆಯವರಲ್ಲರನ್ನೂ ಬೆಸೆಯುತ್ತದೆ. ಇತ್ತೀಚಿಗೆ ಈ ಪ್ರಕರಣವನ್ನು ಸೊಗಸಾಗಿ ಕಟ್ಟಿ ಕೊಟ್ಟಿದ್ದು  ಕಥೆಗಾರ ಪದ್ಮನಾಭ ಭಟ್ ಶೆವ್ಕಾರ್ , ಕೇಪಿನ  ಡಬ್ಬಿ  ಸಂಕಲನದ ‘ಚೇಳು ಕಚ್ಚಿದ ಗಾಯ ‘ ಕಥೆಯಲ್ಲಿ . ಮನೆಯ ನಾಲ್ಕು ಮೂಲೆಗಳಲ್ಲಿ ಕೂತು ಕೊರಗುತ್ತಿದ್ದ ಜೀವಗಳನ್ನು ಮತ್ತೆ ಬೆಸೆಯುವುದು ಮಗುವಿಗೆ ಚೇಳು ಕಚ್ಚಿರಬಹುದಾದ ಸಾಧ್ಯತೆ . ಬೆಸೆಯುವ ಶಕ್ತಿ ನೋವಿಗಿರುವಷ್ಟು ನಲಿವಿಗಿಲ್ಲ.
ತೊಟ್ಟಿಲ ಹೊತ್ಕೊಂಡು ತೌರ ಬಣ್ಣ ತೊಟ್ಟ ಬಾಣಂತಿಯ ಕಣ್ಣಲ್ಲಿ ಜಿನುಗಿ ಜಾರದೇ ಉಳಿದ  ಕಂಬನಿಯ ಹಾಡು, ರಾತ್ರಿಗಳ ನಿದ್ದೆಯನ್ನು ಬದಿಗಿಟ್ಟು, ಲಾಲಿ ಹಾಡಿದ ಅಮ್ಮನ  ಕಣ್ಣಲ್ಲಿ  ಧಾರೆಯಾಗಿ ಹರಿದ ಹಾಡು. ನಾಳೆಯಿಂದ “ಅಮ್ಮಾ ಪಾಪು ಅಳ್ತಾ ಇದೆ ಎತ್ತೆ ” ಎನ್ನಲು ಅಮ್ಮನಿಲ್ಲ.  ಅಲ್ಲಿ ಅಮ್ಮನಿಗೆ ಮಂಚದಲ್ಲಿ ಮಗಳಿಲ್ಲ, ಕರುಳ ಬಳ್ಳಿಯ ತೊಟ್ಟಿಲಿಲ್ಲ. ನರಸಿಂಹಸ್ವಾಮಿಗಳು ಇವರಿಬ್ಬರ ಪಾಡನ್ನು ತಮ್ಮ ಕವಿತೆಯಲ್ಲಿ ಚಿತ್ರಿಸುತ್ತಾರೆ.
ಈ ಕವಿತೆಯ ಸಾಲುಗಳೆಬ್ಬಿಸಿದ ಕೆಲ ತರಂಗಗಳು ಕೆಳಗಿವೆ :
ಕವಿತೆ ಪ್ರಾರಂಭವಾಗುವುದೇ ಬದುಕಿನ ನಿಲ್ದಾಣಗಳನ್ನು ಎಲ್ಲ ಬಗೆಯಲ್ಲೂ  ಹೋಲುವ ರೇಲ್ವೆ ನಿಲ್ದಾಣದಲ್ಲಿ. ತಾಯಿಗೆ, ರೈಲು ಹತ್ತಿದ ಮಗಳಿಗೆ ಎಷ್ಟು ಜಾಗ್ರತೆ ಹೇಳಿದರೂ ಸಾಲದು .  ಮೊನ್ನಿನ ತನಕ ಬೊಂಬೆಯನ್ನು ಮಗುವಾಗಿಸಿ ಆಡುತ್ತಿದ್ದವಳು ನೆನ್ನೆ ಶ್ರಿಮತಿಯಾಗಿ ಇಂದು ತಾಯಾಗಿದ್ದಾಳೆ . ಈ ಬೊಮ್ಮಟೆಯನ್ನು ನನ್ನ ಗೊಂಬೆ ಸಲಹಬಲ್ಲಳೆ ?  ತಾಯಿ ಕೂಗುತ್ತಾಳೆ ,
“ಎಲ್ಲಿದ್ದಿಯೇ ಮೀನಾ ”
ತವರ ನೀರ ತೊರೆದು ಹೊರಟವಳ ಹೆಸರು ಮೀನಾ !
ಪ್ರಯಾಣಕ್ಕೆ ಹೊರಟವರಿಗೆಲ್ಲ ಕಾಡುವ ಮೊದಲ ಪ್ರಶ್ನೆ ‘ಏನನ್ನೋ ಮರೆತಂತಿದೆ ?’ ಇದು ನಿಲ್ದಾಣದಲ್ಲಿ ನಿಂತಿರುವ ತಾಯಿಯ ಪ್ರಶ್ನೆ ಕೂಡ. ತಾಯಿ ಮಗಳು ಇಬ್ಬರೂ ಇಲ್ಲಿ ಸಮಾನ ದುಃಖಿಗಳೇ , ಯಾರು ಯಾರಿಗೆ ಸಮಾಧಾನ ಮಾಡಬೇಕು ? ಎಂಬ ಪ್ರಶ್ನೆಗಿಲ್ಲಿ ಉತ್ತರವಿಲ್ಲ.
ಏನನ್ನೋ ಮರೆತಂತಿದೆ ಎನ್ನುವುದು  ಪಯಣ ಮುಂದೂಡುವ ತಾಯಿಯ ಹುನ್ನಾರವೂ ಆಗಿರಬಹುದು.ಅದು ಕಾರ್ಯ ಸಾಧಿಸದೇ ಹೋದಾಗ ತಾಯಿ ಹೊಸದೊಂದು ಕಾರಣ ಹುಡುಕುತ್ತಾಳೆ . ಮಗುವಿಗೆ ದೃಷ್ಟಿ ಬೊಟ್ಟಿಟ್ಟು
‘ಮೈ ಬಿಸಿಯಾಗಿದೆಯಲ್ಲೆ
ಹೊರಡುವ ಸಮಯಕ್ಕೆ !’
ಎನ್ನುತ್ತಾಳೆ . ಅಷ್ಟರಲ್ಲಿ ಸಿಳ್ಳು ಹಾಕಿ ಹೊರಟ ಕಿಟಕಿಯ ಜೊತೆ ಓಡುತ್ತಾಳೆ, ಇನ್ನೂ ಒಂದಷ್ಟು ಹೊತ್ತು ಮಗಳನ್ನು , ಮೊಮ್ಮಗುವನ್ನು ಕಾಣುವ ಆಸೆಯಿಂದ . ಆದರೆ ಅಷ್ಟರಲ್ಲಿ ಹಬ್ಬಿದ ಎಂಜಿನ್ನಿನ ಸದ್ದಿನ  ನಡುವೆ ಉಳಿದ ಕೂಗು
‘ಎಲ್ಲಿದಿಯೇ ಮೀನಾ
ಎಲ್ಲಿದ್ದೀಯೇ?’
ಕಿಡಿಯುಗುಳುವ ಬದುಕ ಬಂಡಿಯ ಕಿಡಿ ಒಳ ಬೀಳದಂತೆ ಕಿಟಕಿ ಮುಚ್ಚಿಕೋ ಎನ್ನುತ್ತಾಳೆ ತಾಯಿ . ಎಲ್ಲ ಕಿಡಿಗಳಿಂದ ನಿನ್ನನ್ನೂ , ಕಂದನನ್ನೂ ಕಾಪಾಡಿಕೋ ಎಂದೇ ? ಅವಳ ಕಣ್ಣಿನ ಕಿಡಿ ಮಗಳಿಗೆ ಕಾಣದಿರಲೆಂದೇ ? ಪದವಿಲ್ಲದ ಹಾಡುಗಳಿಗೆ ಶಬ್ಧವೂ ಬೇಕಿಲ್ಲ .
ಕಿಡಿಯುಗುಳುವ ಬಂಡಿ , ಪೆಟ್ಟಿಗೆಯ ಜೊತೆಗೆ ಹಾಸಿಗೆಯನ್ನೂ ಹೊತ್ತೊಯ್ಯಬೇಕಾದ ಪಯಣ ಈಗಿಲ್ಲ.  ತಾಯಿಯೇ ಮಗಳಿರುವ ದೇಶಕ್ಕೆ ಹೋಗಿ ಅಲ್ಲೇ ಬಾಣಂತನ ಮುಗಿಸಿ ಬರುತ್ತಿರುವುದು  ಸಾಮಾನ್ಯವಾಗಿದೆ . ರೇಲ್ವೆನಿಲ್ದಾಣವೀಗ ವಿಮಾನ ನಿಲ್ದಾಣವಾಗಿದೆ. ಬದಲಾಗದಿರುವುದು ತಾಯಿ ಮತ್ತು ಮೀನಾ ಮಾತ್ರ!

‍ಲೇಖಕರು G

September 10, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. ಮಾಧವ ಪದಕಿ

    ತುಂಬಾ ಚನ್ನಾಗಿ ಮೂಡಿ ಬಂದಿದೆ…ಲೇಖನ..ಲೇಖನಿಯ ಹರಿತ…ಇಂಕಿನ ಒಳಸುಳಿವಿನಲ್ಲಿ…ಜೀವ ಭಾವ…ಅಚ್ಚಾಗಿ…ತೀವ್ರತೆಯನ್ನು ನಮ್ಮ ಮುಂದೆ ತೆರೆದಿಡುತ್ತೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: