ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆಳ್ಳಿ ಮೀನುಗಳ ಸವಾರಿ ಬೆನ್ನ ಮೇಲೂ..

ಕಾಗದದ ಹೂ

lakshman

ಡಾ.ಲಕ್ಷ್ಮಣ್.ವಿ.ಅ

ಸಂಜೆ,
ಸಂತೆಯಲಿ ಬಿಕರಿಯಾಗದ
ಅರ್ಧ ಕತ್ತರಿಸಿಟ್ಟ ಕಲ್ಲಂಗಡಿ ಹೋಳಿನಂತಿರು
-ವ ಸೂರ್ಯನ
ಇಡಿಯಾಗಿ ನುಂಗುತಿದೆ ಕಡಲು.
ನೀಲಿ ಶ್ಯಾಹಿಯಲದ್ದಿದ ಕಾಗದದ ದೋಣಿಗಳು
ದಿಕ್ಕೆಟ್ಟು
ತೇಲುತಿವೆ ತೀರದ ತುಂಬ
ಇರುಳ ಬೇಟಕೆ
ಸಿಂಗರಸಿಕೊಂಡ ಅಭಿಸಾರಿಕೆ ಚಂದ್ರ ಮುಖಿ
-ಗೆ
flowersಕಡಲೇ ನಿಲುವುಗನ್ನಡಿ.
ಅಲೆದುಟಿಯ ಅಂಚಿನ
ಮರಳ ರೇವಿನ ಮೇಲೆ
ಈಗಷ್ಟೇ ನಡೆದು ಹೋದ ಬೆತ್ತಲೆ ಪಾದದ
ಒಂಟಿ ಹೆಜ್ಜೆ ಗುರುತುಗಳು.

ಕಡಲ ದಾರಿ ಹಿಡಿದ ನದಿ ಅನಾಥವಿಲ್ಲಿ.

ಒಂಟಿ ಹೆಜ್ಜೆಯ ಜಾಡು ಹಿಡಿದು
ನಡೆದವನಿಗೆ ಸಿಕ್ಕಿದ್ದು
ಹಿಡಿಮರಳು ಮಲ್ಲಿಗೆ.
ನಿಡುಸುಯ್ಯುವ
ಗಾಳಿಯಲೆಯೊಂದು ಬಿದಿರು ಮೆಳೆ ಹೊಕ್ಕು
ಮಧುರಾಲಾಪದ ಮಂದ್ರ ಕೊಳಲುಸಿರಿನ
ಬಿಕ್ಕು
ನನ್ನೆದೆಯ ಮೇಲೂ

ಸಿಂಗಾರಗೊಂಡ ಅಭಿಸಾರಿಕೆ
-ಗೆ
ಚುರುಗುಡುವ ಬೆಳದಿಂಗಳ
ಧಗೆ.
ದಾಹ ತೀರಲು ಕಡಲಿಗಿಳಿದರೆ
ಬೆಳ್ಳಿ ಮೀನುಗಳ ಸವಾರಿ
ಬೆನ್ನ ಮೇಲೂ.

ಹಲೋ…ಹಲೋ…ಹಲೋ
ಕಾಡಂಚಿನ ಮನೆಯ ಒಂಟಿ ಮುದುಕಿಗೆ
ನೆಟ್ ವರ್ಕೇ ಇಲ್ಲ
ಅಸಂಗತ ನಾಟಕದ ಪಾತ್ರದಂತೆ
ಸ್ವಗತದಲಿ ಮಾತಾಡುತ
ನೇಪಥ್ಯಕೆ ಸರಿಯುವ ಬೆಳಕು.

ಬಟವಾಡೆಯಾಗದ ಕಾಗದದ ಹೂಗಳಿಗಿಲ್ಲಿ
ಭಾರೀ “ಸವಾಲಿನ”ಕೂಗಿದೆ.
ಸವಾಲು ಸೋತ
ಬಣ್ಣ ಮಾಸಿದ ಕಾಗದಗಳು ಪೋಲೀಸ್ ಸ್ಟೇಷನಿನಲಿ
ಮಹಜರುಗೊಂಡಿವೆ.

ಈ ಸಂಜೆ
ಈ ಕಡಲಿಂಚಿನ ಕಾಮಾಟಿಪುರದ
ಮಾಂಸದಂಗಡಿಯಲಿ ಮಲ್ಲಿಗೆ ಘಮ.
ಇಲ್ಲಿ ಎಲ್ಲ…….ಎಲ್ಲವೆಂದರೆ ಎಲ್ಲ ಮಾರಾಟ ,ಮನ,ಮಾನ ,ಬಿಕ್ಕು, ಬಯಕೆ
ಅಭಿಸಾರಿಕೆ!!
-ಯ

ಒಡಲಲಿ ಪಾಪದ ಕಂದನ
ಚಿಗುರು ಪಾದಗಳು
ಈಗ …….ಈಗಷ್ಟೇ ಮೂಡುತಿವೆ!!

 

‍ಲೇಖಕರು admin

2 September, 2016

3 Comments

  1. Sangeeta Kalmane

    ಅಧ೯ ಕತ್ತರಿಸಿಟ್ಟ ಕಲ್ಲಂಗಡಿ ಹಣ್ಣಿನ ಉಪಮೆ ವಾವ್! ಕೊನೆವರೆಗೂ ಹಿಡಿದಿಟ್ಟಿತು ಮನಸ್ಸು. ಸೂಪರ್

  2. ಲಕ್ಷ್ಮಣ್ ವಿ ಎ

    ಧನ್ಯವಾದಗಳು ಸಂಗೀತ ಮೇಡಂ

  3. 'ಶ್ರೀ' ತಲಗೇರಿ

    Very beautiful jii 🙂 🙂 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading