ಬೆಳ್ಳಕ್ಕಿ ಸಾಲಿನ ಬೆಂಬತ್ತಿ..

ಸಿದ್ಧರಾಮ ಕೂಡ್ಲಿಗಿ

ಹೈಕುಗಳು ಜಪಾನಿ ಕಾವ್ಯ ಪ್ರಕಾರ. ಕನ್ನಡ ಸಾಹಿತ್ಯಕ್ಕೆ ಹೊಸ ಪರಿಚಯ. ಸಿದ್ಧ ಮಾದರಿಯಲ್ಲಿ ಹೇಳಬೇಕಾದುದನ್ನು ಅತ್ಯಂತ ಚುಟುಕಾಗಿ ಸಮರ್ಥವಾಗಿ ಹಿಡಿದಿಡುವ ಕಲೆಯೇ ಹೈಕು. ಜಪಾನೀಯರು ಏನನ್ನೇ ಮಾಡಿದರೂ ಚಿಕ್ಕದಾಗಿ ಚೊಕ್ಕವಾಗಿ ಮಾಡುವುದರಲ್ಲಿ ಅತ್ಯಂತ ನಿಪುಣರು. ಅವರ ಸಾಹಿತ್ಯವೂ ಹಾಗೆಯೇ. ಇಲ್ಲದಿದ್ದರೆ ಕೇವಲ 17 ಅಕ್ಷರಗಳಲ್ಲಿಯೇ ಹೇಳಬೇಕಾದುದನ್ನು ಹೇಳಲು ಸಾಧ್ಯವೇ? ಇಲ್ಲಿ ಸಾಹಿತ್ಯ ಬರಹಗಾರನ ಪದಗಳ, ಅರ್ಥವ್ಯಾಪ್ತಿಯ ಸಾಮರ್ಥ್ಯವನ್ನು ಬಯಸುತ್ತದೆ.

ಪುಟಗಟ್ಟಲೆ ಹೇಳಬೇಕಾದ ವಿಷಯವನ್ನು ಕೇವಲ 17 ಅಕ್ಷರಗಳಲ್ಲಿ ಹಿಡಿದಿಡಲು ಸಾಧ್ಯವೇ? ತುಂಬಾ ಕಷ್ಟ. ಆದರೆ ಸೃಜನಶೀಲತೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಅಲ್ಲವೇ? ಮನುಷ್ಯನ ವಿಚಾರಶಕ್ತಿಯೇ ಅಂಥದ್ದು. ಅದು ಆಕಾಶದಷ್ಟು ಅಪಾರ. ಹಾಗೆಂದೇ ವಿವಿಧ ಬಗೆಯ ಸಾಹಿತ್ಯ ಪ್ರಕಾರಗಳು ಉಗಮವಾದದ್ದು.

ಹೈಕುಗಳನ್ನು ನೋಡಿದಾಗ ನಮ್ಮ ಸರ್ವಜ್ಞನ ತ್ರಿಪದಿಗಳ ನೆನಪಾಗದೇ ಇರದು. ಹೈಕುಗಳೂ ಸಹ ಹಾಗೆಯೇ. ಸರ್ವಜ್ಞನದಲ್ಲಿ ಅನುಭವಗಳ ಮೂಟೆ ಇದ್ದರೆ, ಹೈಕುಗಳಲ್ಲಿ ಆಧ್ಯಾತ್ಮದ ಮೂಟೆ ಇದೆ. ಬೌದ್ಧ ಧರ್ಮದ ಚಿಂತನೆಗಳನ್ನು ಒಳಪಡಿಸಲೆಂದೇ ಹೈಕುಗಳು ಆರಂಭವಾದವು ಎಂಬ ಮಾತೂ ಇದೆ. ಕಿರಿದರಲ್ಲಿ ಹಿರಿದರ್ಥ ತುಂಬುವ ಹೈಕುಗಳು ಜಪಾನಿನಲ್ಲಿ ಅತ್ಯಂತ ಜನಪ್ರಿಯ ಪ್ರಕಾರ. ಅಲ್ಲಿ ಒಂದು ಹೈಕು ಬಗ್ಗೆಯೇ ವಿಚಾರ ಸಂಕಿರಣ ನಡೆಯುತ್ತವೆ ಎಂಬ ಮಾತೂ ಇದೆ. 17ನೇ ಶತಮಾನದಲ್ಲಿ ಮಾತ್ಸು ಓ ಬಾಶೋನಿಂದ ಹೈಕು ಅತ್ಯಂತ ಜನಪ್ರಿಯಗೊಂಡಿತು. ಅಲ್ಲಿಂದ ಜಪಾನಿನ ಕಾವ್ಯ ಪ್ರಕಾರದಲ್ಲಿ ಹೈಕು ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿತು.

ಕನ್ನಡದಲ್ಲಿ ಹೈಕುಗಳನ್ನು ಬರೆಯುವ ಪ್ರಯತ್ನ 60ರ ದಶಕದಲ್ಲಿ ಆರಂಭಗೊಂಡಿತು. ರಾಯಚೂರಿನ ಚಂದ್ರಕಾಂತ ಕುಸನೂರ್ ಈ ಪ್ರಯತ್ನವನ್ನು ಮಾಡುತ್ತಾರೆ. ನಂತರದಲ್ಲಿ ಅನೇಕ ಜನ ಕನ್ನಡದಲ್ಲಿ ಹೈಕುಗಳನ್ನು ಬರೆದು ಪ್ರಕಟಿಸತೊಡಗಿದರು. ಈ ಕುರಿತು ಪ್ರಜಾವಾಣಿ ವಿಶೇಷಾಂಕದಲ್ಲಿ ಸುದೀರ್ಘ ಲೇಖನ ಪ್ರಕಟವಾದಾಗ ಅದನ್ನು ಗಮನಿಸಿ ನಾನೂ ಸಹ ಹೈಕುಗಳನ್ನು ಬರೆಯಲು ಪ್ರಯತ್ನ ಮಾಡಿದೆ. ನಂತರದಲ್ಲಿ ಪುಸ್ತಕವನ್ನೂ ಪ್ರಕಟಿಸಿದೆ.

ಹೈಕುವನ್ನು ಕನ್ನಡದಲ್ಲಿ ಅನುವಾದಿಸಿದವರೂ ಇದ್ದಾರೆ, ಡಾ.ಸಿ.ರವೀಂದ್ರನಾಥ್, ಅಂಕುರ್ ಬೆಟಗೇರಿ, ಡಾ.ಕೆ.ಬಿ.ಬ್ಯಾಳಿ, ಡಾ.ಚಂದ್ರಕಾಂತ ಕುಸನೂರ್ ಮುಂತಾದವರು. ನಂತರದಲಿ ಕನ್ನಡದಲ್ಲಿಯೇ ಸಿದ್ಧಮಾದರಿಯಲ್ಲಿ ಸ್ವತಂತ್ರವಾಗಿ ಹೈಕುಗಳನ್ನು ಕನ್ನಡ ಭಾಷೆಗೆ ಒಗ್ಗಿಸುವ ಪ್ರಯತ್ನ ಆರಂಭಗೊಂಡಿತು. ಅವರಲ್ಲಿ ಅನೇಕರು ಕೃತಿಗಳನ್ನೂ ಪ್ರಕಟಿಸಿದರು.

ಡಾ.ಸರಜೂ ಕಾಟಕರ್, ಡಾ.ಸಿ.ರವೀಂದ್ರನಾಥ, ವೀರಹನುಮಾನ, ಸಿದ್ಧರಾಮ ಹಿರೇಮಠ, ಅರುಣಾ ನರೇಂದ್ರ, ಈರಣ್ಣ ಬೆಂಗಾಲಿ ಹೀಗೆ ಅನೇಕರು ಕೃತಿಗಳನ್ನು ಪ್ರಕಟಿಸಿದ್ದಾರೆ. ಸಿದ್ಧಮಾದರಿಯನ್ನು ಹೊರತುಪಡಿಸಿಯೂ ಭಾವಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ವಿಭಿನ್ನವಾದ ಬಗೆಯಲ್ಲಿ ಕನ್ನಡದಲ್ಲಿ ಹೈಕು ಪ್ರಯೋಗ ಮಾಡಿದವರು ರಂಜಾನ್ ಕಿಲ್ಲೇದಾರ್. ಇವರ ಕೃತಿಯೂ ಸಹ ಪ್ರಕಟವಾಗಿದೆ.

ಈ ಎಲ್ಲ ಹಿನ್ನೆಲೆಯಲ್ಲಿ ಯುವ ಮಿತ್ರರಾದ ಶಿವಶಂಕರ ಕಡದಿನ್ನಿ, ಅಕ್ಷತಾ ಅತ್ರೆ ‘ರಾಜ್ಯಮಟ್ಟದ ಹೈಕು ಸಂಕಲನ’ ಯಾಕೆ ಮಾಡಬಾರದು ಎಂಬ ಉತ್ಸಾಹದಿಂದ ಸಾಧ್ಯವಿದ್ದಷ್ಟೂ ಎಲ್ಲರನ್ನೂ ಸಂಪರ್ಕಿಸಿ ಸಂಪಾದಿಸಿದ ‘ರಾಜ್ಯಮಟ್ಟದ ಪ್ರಥಮ ಹೈಕುಗಳ ಸಂಕಲನ’ವೇ ‘ಬೆಳ್ಳಕ್ಕಿ ಸಾಲು’ ಎಂಬ ಹೈಕು ಸಂಕಲನ. ಇದರಲ್ಲಿ ರಾಜ್ಯದ ಎಲ್ಲ ಹೈಕುಗಳನ್ನು ಬರೆಯುವ ಕವಿಗಳ ಹೈಕುಗಳಿವೆ. ಅನಿವಾರ್ಯ ಕಾರಣಗಳಿಂದ ಕೆಲವರು ಬಿಟ್ಟು ಹೋಗಿರಲೂಬಹುದಾದರೂ ಇದೊಂದು ಮೊದಲ ಪ್ರಯತ್ನವಾಗಿದೆ.

ಈ ಸಂಕಲನದಲ್ಲಿ ಹಿರಿಯ ಕವಿಗಳಿಂದ ಹಿಡಿದು ಇತ್ತೀಚಿನವರೆಗೂ ಬರೆಯುತ್ತಿರುವ ಅನೇಕ ಕವಿಗಳ ಹೈಕುಗಳಿವೆ. ಸಿದ್ಧಮಾದರಿಯೇ ಆದರೂ ‘ಮಿಂಚಿನ ಹೊಳಪು’ ತರುವ ಹೈಕುಗಳ ಮೂಲ ಗುಣವನ್ನು ಇರಿಸಿಕೊಂಡು ಹೈಕುಗಳನ್ನು ಬರೆಯುವವರು ಕಡಿಮೆಯೇ. ಹೀಗಾಗಿ ಅನೇಕ ಜನ ಕವಿಗಳ ಹೈಕುಗಳು ವಾಚ್ಯಗಳಾಗಿಬಿಡುವ ಅಪಾಯದಲ್ಲಿವೆ. ಕೇವಲ 17 ಅಕ್ಷರ ಹಾಗೂ ಮೂರು ಸಾಲಷ್ಟೇ ಹೈಕು ಆಗುವುದಿಲ್ಲ ಎಂಬುದನ್ನು ಹೊಸ ಕವಿಗಳು ಅರ್ಥೈಸಿಕೊಳ್ಳಬೇಕಿದೆ.

ವೀರಹನುಮಾನ ಅವರ ಜಗತ್ತಿನ ಬಗ್ಗೆ ಇರುವ ಹೈಕು ನೋಡಿ :
ಜಗತ್ತು ಒಂದೇ
ಮುಳ್ಳುಬೇಲಿ ಎಲ್ಲೆಲ್ಲೂ
ಭಯದ ಬಾಳು

ಡಾ.ಸಿ.ರವೀಂದ್ರನಾಥ್ ಅವರ ಹೈಕು ತಕ್ಷಣ ಮನಸಿಗೆ ನಾಟುವಂಥವು :
ಈ ಸಂಜೆಯ ಕಿಟಕಿ
ಉದುರುತ್ತಿವೆ
ಬೆಳಗಿನ ಕಿರಣಗಳು

ಶಬ್ದಗಳು
ಕರಗುತ್ತಿವೆ
ಅನಂತ ನಿಶಬ್ದದಲ್ಲಿ

ಡಾ.ಕೆ.ಬಿ.ಬ್ಯಾಳಿಯವರ ಹೈಕು :
ಜಗದ ಜನ
ಹೀಗೆಯೇ ಬೆಂಕಿ ತಿಂದು
ಬೂದಿಯಾಗುತ್ತಾರೆ

ಬಾಯ್ದೆರೆದ
ಬರಡು ತಾಯಿಗೆ
ಆಕಾಶದ ಹನಿಗಳು

ಸಿದ್ಧರಾಮ ಹಿರೇಮಠರ ಹೈಕುಗಳು :
ಬೆನ್ನು ಸುಟ್ಟರೂ
ರೊಟ್ಟಿ ಅರಳುವುದು
ನಗೆ ಹಂಚಲ್ಲಿ

ಬಿತ್ತಿದ ಬೀಜ
ಸತತ ಹೋರಾಡಿತು
ತೆನೆ ನಿಲ್ಲಲು

ಇವು ಕೆಲವು ಉದಾಹರಣೆಗಳು. ಹೀಗೇ ಸಂಕಲನದಲ್ಲಿ ರಾಜ್ಯದ 25 ಜನ ಕವಿಗಳ ಹೈಕುಗಳನ್ನು ಸಂಗ್ರಹಿಸಿ ಪ್ರಕಟಿಸಲಾಗಿದೆ. ಕವಿಗಳ ವಿಳಾಸಗಳನ್ನೂ ನೀಡಲಾಗಿದೆ. ಇದು ಓದುಗರಿಗೆ ಹೈಕುಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಕವಿಗಳನ್ನು ಸಂಪರ್ಕಿಸುವ ಸುಲಭ ವಿಧಾನವೂ ಆಗಿದೆ.

ಇಷ್ಟೇ ಅಲ್ಲದೆ ಈ ಸಂಕಲನದಲ್ಲಿ ಹೈಕು ಹುಟ್ಟು, ಬೆಳವಣಿಗೆ ಅದರ ಸ್ವರೂಪವನ್ನು ಕುರಿತು ಅನುಬಂಧದಲ್ಲಿಯೂ ನೀಡಲಾಗಿದೆ. ಒಟ್ಟಾರೆ ಈ ಸಂಕಲನ ಕೇವಲ ಹೈಕುಗಳ ಸಂಕಲನವಾಗಿರದೆ ಒಟ್ಟಾರೆ ಕನ್ನಡದ ಹೈಕುಗಳನ್ನು ಪರಿಚಯಿಸುವ ಒಂದು ವಿವರಣಾತ್ಮಕ ಸಂಗ್ರಹಯೊಗ್ಯ ಕೃತಿಯೂ ಆಗಿದೆ.

ಕನ್ನಡಕ್ಕೊಂದು ರಾಜ್ಯಮಟ್ಟದ ಪ್ರಥಮ ಚಂದದ ಹೈಕು ಕೃತಿ ‘ಬೆಳ್ಳಕ್ಕಿ ಸಾಲು’. ಸಂಪಾದಕರ ಪ್ರಯತ್ನ ಶ್ಲಾಘನೀಯವಾದುದು. ಹೈಕು ಎಂದರೇನು? ಎಂದು ತಿಳಿಯಬೇಕಿದ್ದವರು ಈ ಕೃತಿಯನ್ನು ನೋಡಬಹುದಾಗಿದೆ ಹಾಗೂ ರಾಜ್ಯದಲ್ಲಿ ಹೈಕುಗಳನ್ನು ಬರೆಯುವ ಕವಿಗಳ ಪರಿಚಯವೂ ಆಗುತ್ತದೆ.

ಒಂದು ಸಂಗ್ರಹಯೊಗ್ಯ ಕೃತಿ.

‍ಲೇಖಕರು Avadhi

March 29, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: