ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆಳದಿಂಗಳ ಉಲ್ಲಾಸವೊಂದು ಎದೆ ಹತ್ತಿ ಕುಳಿತಂತೆ… ..

ಒಂದು ಕತೆಯೊಳಗೆ ಸಂಸಾರದ ಹಲವು ಸೂಕ್ಷ್ಮ ಒಳಸುಳಿಗಳನ್ನ ಅದೆಷ್ಟು ಸಲೀಸಾಗಿ ಯಾವ ಉದ್ವೇಗವೂ ಇಲ್ಲದಂತೆ ತಟಸ್ಥ ಮನಸ್ಥಿತಿಯಲ್ಲಿ ಅವರು ಹೇಳಬಲ್ಲರು. ನಾವುಗಳು ಕುಕ್ಕರುಗಾಲಿನಲ್ಲಿ ಕುಳಿತು ಅವರ ಕತೆಗಳನ್ನು ತದೇಕಚಿತ್ತದಲ್ಲಿ ಆಲಿಸಿದ ಅನುಭವವಾಗುತ್ತದೆ. ಹಾಗಾಗಿ ನನಗೆ ಇಲ್ಲಿನ ಕತೆಗಳು ಓದಿಸಿಕೊಂಡು ಹೋದುದಕ್ಕಿಂತ ಕೇಳಿಸಿಕೊಂಡು ಹೋದಂತೆ ಅನ್ನಿಸಿತು. ಬಹುಷ; ಇದು ತ್ರಾಸಿಯವರ ಕಥನ ಕುಶಲತೆಗೊಂದು ಸಾಕ್ಷಿ.

ಸ್ಮಿತಾ ಅಮೃತರಾಜ್, ಸಂಪಾಜೆ

ಕುಂದಾಪುರದ ಕಡಲತಡಿಯ ತ್ರಾಸಿಯವರು ಬದುಕು ಕಟ್ಟಿಕೊಂಡದ್ದು ಮಹಾನಗರಿ ಮುಂಬಯಿಯಲ್ಲಿ. ರೆಪ್ಪೆ ಮಿಟುಕಿಸದೆ ನಿಂತ ನಿರ್ಭಾವುಕ ನಗರದೊಳಗೆ ಮಿಡಿಯುವ ಅಂತ;ಕರಣ ಇಟ್ಟುಕೊಂಡು ತಮ್ಮ ಸೃಜನಶೀಲತೆ ಆರದಂತೆ ಕತೆ, ಕವಿತೆ, ಅಂಕಣ ಅಂತ ಸಂವೇದನಾಶೀಲರಾಗಿ ಬರೆಯುತ್ತಾ ಸಾಗಿದವರು.

ಇದಾಗಲೇ ಎರಡು ಕವನ ಸಂಕಲನ ಪ್ರಕಟಿಸಿ ಭರವಸೆಯ ಕವಿಯಾಗಿ ಗುರುತಿಸಿಕೊಂಡ ತ್ರಾಸಿಯವರು ಇದೀಗ ‘ಕತೆಯೊಳಗಿನ ಬದುಕು’ ಎಂಬ ಕಥಾಸಂಕಲನದ ಮೂಲಕ ಒಬ್ಬ ಪ್ರತಿಭಾನ್ವಿತ ಕತೆಗಾರರಾಗಿ ಗುರುತಿಸಿಕೊಂಡಿದ್ದಾರೆ. ಕನಸಿನ ನಗರಿಯ ಹಸಿ ಮಣ್ಣು ಕಾಣದ ನೆಲದ ಮೇಲೆ ಸಿಕ್ಕ ಎಡೆಯಲ್ಲಿ ಅವರ ಕಥಾ ಬಳ್ಳಿಗಳು ಬೇರು ಬಿಟ್ಟುಕೊಂಡು ಚಿಗುರಿ ಹಂದರವಾಗುವುದರ ಕುರಿತು ನನಗೆ ಎಲ್ಲಿಲ್ಲದ ವಿಸ್ಮಯ.

ಅವರ ಹತ್ತು ಕತೆಗಳ ಗುಚ್ಛವನ್ನು ಹಿಡಿದುಕೊಂಡು ಓದಿ ಮುಗಿಸಿದಾಗ ತತ್ಕ್ಷಣಕ್ಕೆ ಒಂದೇ ಸಮನೆ ಬರೆಸಿಕೊಂಡ ಸಾಲುಗಳಿವು.

ಬದುಕಿನಲ್ಲಿ ನಮ್ಮ ಊಹೆಗೂ ಮೀರಿ ಅನೇಕ ಸಂಗತಿಗಳು ಘಟಿಸಿ ಬಿಡುತ್ತವೆ. ಊರು ಬಿಡುತ್ತೇವೆ, ಇನ್ನೆಲ್ಲಿಯೋ ಬದುಕು ಕಟ್ಟಿಕೊಳ್ಳುತ್ತೇವೆ. ಯಾವುದೋ ಒಂದು ಕ್ಷಣದಲ್ಲಿ ಅಪರಿಚಿತರು ಪರಿಚಿತರಾಗಿಬಿಡುತ್ತಾರೆ, ಪರಿಚಿತರು ಅಪರಿಚಿತರಾಗಿ ಉಳಿದು ಬಿಡುತ್ತಾರೆ. ಇನ್ನೇನು ಹಸಿರು ಮೊಳಕೆಯೊಡೆಯಲಾರದು ಎಂದು ಕೊಂಡ ಬರಡು ಎದೆಯೊಳಗೆ ಯಾವುದೋ ಒಂದು ಕ್ಷಣ ನವಿರು ಪ್ರೀತಿಯ ಸೆಳಕೊಂದು ಅರಳಿಕೊಳ್ಳುತ್ತದೆ, ಹಠಾತ್ತನೆ ಬಂದೆರಗಿದ ಬಿರುಗಾಳಿಯೊಂದು ಅದನ್ನು ಅದೆಲ್ಲೋ ದೂರಕ್ಕೆ ಹೊತ್ತೊಯ್ದು ಬಿಡುತ್ತದೆ. ಇನ್ನೇನು ಎಲ್ಲ ಮರೆತಂತೆ ಹೊಸ ಲೋಕವೊಂದು ತೆರೆದುಕೊಳ್ಳುವ ಹೊತ್ತಲ್ಲಿ, ಅಚಾನಕ್ ಮತ್ತೊಂದು ಕರಿಮೋಡ ಎದುರಾಗಿ ಕನಸುಗಳಲ್ಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಹರಿದು ಬದುಕಿನ ಗತಿಯೇ ಬದಲಾಗಿ ಬಿಡುತ್ತದೆ. ಇವುಗಳಿಗೆ ಅರ್ಥ ಹುಡುಕಿದಷ್ಟೂ ಗೋಜಲು ಗೋಜಲು ಮತ್ತಷ್ಟು ಕಗ್ಗಂಟು. ಇವೆಲ್ಲಾ ಆ ಕ್ಷಣದ ಸತ್ಯಗಳಷ್ಟೆ.

ನಮ್ಮ ಜನರಲ್ಲೊಂದು ಭ್ರಮೆ ಇದೆ. ಊರು ಬಿಟ್ಟು ಯಾವುದೋ ಕಂಡರಿಯದ ಊರಿನಲ್ಲಿ ಬದುಕು ಕಟ್ಟಿಕೊಂಡವರ ಬಗ್ಗೆ ಒಂದು ವಿಲಕ್ಷಣ ಪ್ರೀತಿ. ಆದರೆ ಈ ಭ್ರಮೆ ಮತ್ತು ವಾಸ್ತವಗಳನ್ನು ಮುಖಾಮುಖಿಯಾಗಿಸುವ ಕ್ಷಣಗಳು ಇವೆಯಲ್ಲ, ಅವು ಬದುಕಿನ ಬಹು ದೊಡ್ಡ ಸಂಘರ್ಷದ ತಿರುವು.

ಕತೆಗಾರ ತ್ರಾಸಿಯವರು ಇಂತಹ ಹಲವು ಕ್ಷಣಗಳನ್ನು ತಮ್ಮ ‘ಕ್ಷಣದ ಸತ್ಯ ‘ಕತೆಯಲ್ಲಿ ತಟ್ಟುವಂತೆ ಕಟ್ಟಿಕೊಡುತ್ತಾರೆ. ರಾಜು ಎಂಬ ಕಥಾ ನಾಯಕನ ಬದುಕು ಇಂತಹ ಹಲವು ಕ್ಷಣಗಳಿಗೆ ಸಾಕ್ಷಿಯಾಗಿದೆ. ತನ್ನ ಪಾಡಿಗೆ ತಾನಿದ್ದ ಯುವಕನಿಗೆ ಮದುವೆ ಆಸೆ ಹುಟ್ಟಿಸುವುದು, ಇನ್ನೇನು ಅವಳಲ್ಲಿ ಪ್ರೀತಿ ಹುಟ್ಟಿತು ಅನ್ನುವಾಗ ಕುಲಗೋತ್ರಗಳು ಅಡ್ಡಿ ಬರುವುದು, ವ್ಯವಹಾರಸ್ಥ ದಳ್ಳಾಳಿಯ ಮಧ್ಯಸ್ಥಿಕೆಯಲ್ಲಿ ನೆಂಟಸ್ಥನ ಕೂಡಿ ಮದುವೆ ಒದಗಿ ಬರುವುದು, ಯಾವುದೋ ಭ್ರಮೆಯಲ್ಲಿದ್ದ ಹೆಣ್ಣಿನ ಕಡೆಯವರಿಗೆ ನಿಜಸ್ಥಿತಿ ಅರಿವಾದಾಗ ನಿಷ್ಕರುಣೆಯಿಂದ ಸಂಬಂಧವನ್ನೇ ಕಡಿದುಕೊಳ್ಳುವುದು, ಇವುಗಳಾವುದರ ಪರಿವೆಯೇ ಇಲ್ಲದ ಮುಗ್ಧ ಯುವಕನೊಬ್ಬನ ಬಾಳು ಸಾವಿನಲ್ಲಿ ಪರ್ಯಾವಸನಗೊಳ್ಳುವುದು, ಇವೆಲ್ಲಾ ಬದುಕಿನಲ್ಲಿ ಬಂದೆರಗುವ ದುರಂತಮಯ ಸನ್ನಿವೇಶಗಳೇ.

ಆದರೆ ಕಥಾನಾಯಕ ಸತ್ತಾಗ ಮತ್ತೊಮ್ಮೆ ಸಂಬಂಧಗಳು ಪಕ್ಕಾ ವ್ಯವಹಾರಿಕ ನೆಲೆಯೊಳಗೆ ಮರು ಜೋಡಿಕೊಳ್ಳುತ್ತವೆ. ಬದುಕಿನ ಇಂತಹ ಕಠೋರ ಕ್ಷಣದ ಸತ್ಯಗಳನ್ನು ತ್ರಾಸಿಯವರು ಕಣ್ಣಿಗೆ ಕಟ್ಟುವಂತೆ ತೆರೆದಿಡುತ್ತಾ ಸಾಗಬಲ್ಲರು. ಕತೆಯ ಕೊನೆ ತಲುಪುವಾಗ ನಮ್ಮ ಎದೆಯೂ ಅರೆಕ್ಷಣ ಸ್ತಬ್ಧವಾಗಿಬಿಡುವುದು ಮಾತ್ರ ಆ ಕ್ಷಣದ ಸತ್ಯ. ಆದರೆ ಕತೆಯ ನೆಲೆಗೆ ಬಂದಾಗ ನಿರಾಶಾದಾಯಕ ಅಂತ್ಯಕ್ಕೆ ಮನಸು ಪಿಚ್ಚೆನ್ನಿಸಿದ್ದು ಸುಳ್ಳಲ್ಲ.

ಕತೆ ಹುಟ್ಟುವುದು ಯಾವಾಗ? ಇದಕ್ಕೊಂದು ನಿರ್ಧಿಷ್ಟ ಉತ್ತರ ದಕ್ಕಬಹುದೇ?. ಹಾಗೆ ನೋಡಿದರೆ ನಮ್ಮ ಬದುಕೇ ಒಂದು ದೊಡ್ಡ ಕಾದಂಬರಿಯ ಹರವು, ನಡುವಿನ ಅನೇಕ ಸನ್ನಿವೇಶಗಳು ಕತೆಯ ಪಾತ್ರಗಳು. ಒಬ್ಬೊಬ್ಬರ ಬದುಕಿನಲ್ಲಿ ಒಂದೊಂದು ಕತೆ. ಎಷ್ಟೊಂದು ಕತೆಗಳು ಈ ಬದುಕಿನಲ್ಲಿ?. ನಾವುಗಳು ಇದಾವುದೂ ಗೊತ್ತಿಲ್ಲದವರಂತೆ ನಮ್ಮೊಳಗಿನ ಕತೆಯನ್ನು ಬಿಟ್ಟು ,ಇನ್ನೊಬ್ಬರ ಕತೆಗೆ ಹಣಕಿ ಹಾಕುತ್ತೇವೆ. ಕುತೂಹಲ ತಣಿಯುವುದಿಲ್ಲ; ಕತೆ ಮುಗಿಯುವುದಿಲ್ಲ.

ಇಲ್ಲಿ ಕಥಾನಾಯಕ ಹುಟ್ಟೂರು ಬಿಟ್ಟು ಶಹರದಲ್ಲಿ ನೆಲೆಯೂರಿ ಒಂದೇ ಒಂದು ಕತೆಯ ಎಳೆಗಾಗಿ ಹುಡುಕುತ್ತಾ ಅದರ ಚುಂಗು ಹಿಡಿದು ಹೊರಟಾಗ ತೆರೆದುಕೊಂಡದ್ದು ಅದೆಷ್ಟು ಕತೆಗಳು? ತ್ರಾಸಿಯವರು ಒಂದು ಕತೆಯೊಳಗೆ ಹಲವು ಕತೆಗಳನ್ನು ಬಿಚ್ಚಿ ಹರಡಬಲ್ಲರು. ಅವರ ಕತೆಯ ನೇಯ್ಗೆ ಕಾವ್ಯ ಹೊಸೆದಂತೆ, ಹಕ್ಕಿಯೊಂದು ಹಾಡಿಕೊಂಡಂತೆ, ಬೆಳಗೊಂದು ಅರಳಿಕೊಂಡಂತೆ, ಕಣ್ಣ ಮುಂದೆ ಚಿತ್ರವೊಂದು ಸದ್ದಿಲ್ಲದೆ ಚಲಿಸಿದಂತೆ. ಹೌದು ! ನಿಜ, ತ್ರಾಸಿಯವರ ಕತೆಗಳಲ್ಲಿ ಪ್ರತೀ ಪಾತ್ರವೂ ನಮ್ಮ ಮುಂದೆ ಓಡಾಡಿದಂತೆ ಭಾಸವಾಗುತ್ತದೆ. ಬಹುಷಃ ಕತೆಯೊಂದು ಗೆಲ್ಲುವುದು ಇದೇ ಕಾರಣಕ್ಕಾಗಿಯೋ ಏನೋ?. ಇಲ್ಲಿ ಕತೆಯ ಪಾತ್ರದೊಳಗಿನ ಪಾತ್ರ ನಾವಾಗಿ ಬಿಡುತ್ತೇವೆ. ಯಾವುದೋ ಬಗೆಯಲ್ಲಿ, ಯಾವುದೋ ಕೋನದಲ್ಲಿ ಅಲ್ಲಿಯ ಭಾವ ನಮ್ಮದೂ ಆಗಿರುವುದರಿಂದ ಕತೆ ನಮಗೆ ಮತ್ತಷ್ಟು ಆಪ್ತವಾಗುತ್ತದೆ. ಮನುಷ್ಯ ಸಂಬಂಧಗಳ ಒಳತೋಟಿಯನ್ನು ತಮ್ಮ ಕತೆಯ ಎಳೆಯೊಳಗೆ ಹುದುಗಿಸಿ ಓದುಗನ ಎದೆಯೊಳಗೆ ತಣ್ಣಗೆ ಹರಿಯಿಸಿಬಿಡುವುದರಲ್ಲಿ ಅವರು ಕುಶಲಿಗರು.

ಸಂಸಾರ ಎಂದ ಮೇಲೆ ಕೂಡು ಕುಟುಂಬ, ಬಂಧು ಬಳಗ, ಅಲ್ಲಿಯ ತಿಕ್ಕಾಟ, ಸಣ್ಣತನ, ಕೋರ್ಟು, ರಗಳೆ ವ್ಯಾಜ್ಯ..ಎಲ್ಲವೂ ಇದ್ದದ್ದೇ. ಪ್ರತೀ ಕುಟುಂಬದೊಳಗೂ ನಡೆಯಬಹುದಾದ ಇಂತಹ ಚಿತ್ರಣವನ್ನ ತ್ರಾಸಿಯವರ ‘ಒಂದು ರುಪಾಯಿಯ ರಾಜಮುದ್ರೆ ಮತ್ತು ಹುಚ್ಚು ಹುಡುಗಿ’ ಕತೆ ಕಟ್ಟಿ ಕೊಡುತ್ತದೆ.

ಒಂದು ಕತೆಯೊಳಗೆ ಸಂಸಾರದ ಹಲವು ಸೂಕ್ಷ್ಮ ಒಳಸುಳಿಗಳನ್ನ ಅದೆಷ್ಟು ಸಲೀಸಾಗಿ ಯಾವ ಉದ್ವೇಗವೂ ಇಲ್ಲದಂತೆ ತಟಸ್ಥ ಮನಸ್ಥಿತಿಯಲ್ಲಿ ಅವರು ಹೇಳಬಲ್ಲರು. ನಾವುಗಳು ಕುಕ್ಕರುಗಾಲಿನಲ್ಲಿ ಕುಳಿತು ಅವರ ಕತೆಗಳನ್ನು ತದೇಕಚಿತ್ತದಲ್ಲಿ ಆಲಿಸಿದ ಅನುಭವವಾಗುತ್ತದೆ. ಹಾಗಾಗಿ ನನಗೆ ಇಲ್ಲಿನ ಕತೆಗಳು ಓದಿಸಿಕೊಂಡು ಹೋದುದಕ್ಕಿಂತ ಕೇಳಿಸಿಕೊಂಡು ಹೋದಂತೆ ಅನ್ನಿಸಿತು. ಬಹುಷ; ಇದು ತ್ರಾಸಿಯವರ ಕಥನ ಕುಶಲತೆಗೊಂದು ಸಾಕ್ಷಿ.

ಆದರೆ ಚೆಂದದಲ್ಲಿ ಕಟ್ಟಿದ ಕತೆಯೊಂದು ಅದರ ನಿರೂಪಣೆಯ ತಾಕತ್ತಿನಿಂದ ಗೆಲ್ಲುತ್ತಾ ಹೋಗಿ ಕೆಲವೊಮ್ಮೆ ಕೊನೇ ಮುಟ್ಟುವಾಗ ಗೊಂದಲಕ್ಕೀಡು ಮಾಡಿದಂತೆ, ಯಾವುದೋ ಅವಸರದಲ್ಲಿದ್ದಂತೆ ಬರೇ ಸಮರ್ಥನೆಗಳನ್ನು ಕೊಟ್ಟು ಎದ್ದು ಹೋದಂತೆ ಅನ್ನಿಸಿತು. ಅಥವಾ ನನಗೆ ಹಾಗನ್ನಿಸಿತೋ ಗೊತ್ತಿಲ್ಲ. ಯಾಕೆಂದರೆ ಒಂದು ಒಳ್ಳೆಯ ಕತೆಯನ್ನು ಓದುತ್ತಾ ಹೋದಂತೆ ಕತೆಯ ಜೊತೆಗೆ ನಮ್ಮ ಕುತೂಹಲಗಳು ಬೆಳೆಯುತ್ತಾ ಹೋಗುವುದು ಸಹಜ. ಹಾಗಾಗಿ ಎಲ್ಲೋ ಒಂದು ಕಡೆ ನಮ್ಮ ನಿರೀಕ್ಷೆಯನ್ನು ಹುಸಿಗೊಳಿಸಿದಂತಾಗಿ ಸಣ್ಣಗೆ ನಿರಾಶೆಯೊಂದು ಕಾಡಿದ್ದು ಸುಳ್ಳಲ್ಲ. ಇಷ್ಟಾಗಿಯೂ ಒಂದು ಕುಟುಂಬದೊಳಗೆ ನಮ್ಮನ್ನೂ ಕೂಡಿಸಿಕೊಂಡು ಕತೆ ಕಟ್ಟುವುದು ಅಷ್ಟೊಂದು ಸುಲಭವಲ್ಲ. ಅದು ತ್ರಾಸಿಯವರಿಗೆ ಸಿದ್ಧಿಸಿದೆ.

ಕನ್ನಡಿಯಲ್ಲಿ ಕಂಡ ಮುಖಗಳು ಎಲ್ಲಾ ಸತ್ಯ ಇರಬಹುದೇ?. ಕನ್ನಡಿ ಸುಳ್ಳು ಹೇಳುವುದಿಲ್ಲ ಅನ್ನುತ್ತಾರೆ. ಅದು ನಿಜವೂ ಇರಬಹುದು. ಆದರೆ ಕನ್ನಡಿ ನಮ್ಮ ಎದುರಿಗಿನ ಪ್ರತಿಬಿಂಬವನ್ನು ಪ್ರತಿಫಲಿಸಬಲ್ಲದು ಅಷ್ಟೆ. ಆದರೆ ನಮ್ಮ ಅಂತರಂಗವನ್ನು ಪ್ರತಿಫಲಿಸಲು ಸಾಧ್ಯವೇ?. ತ್ರಾಸಿಯವರ ‘ಕನ್ನಡಿಯಲ್ಲಿ ಕಂಡ ಮುಖ’ ಗಳು ಕತೆ ಇಂತಹ ಸತ್ಯವನ್ನೇ ಹೇಳುತ್ತಿರುವಂತೆ ಅನ್ನಿಸುತ್ತದೆ.

ಕೆಲವೊಂದು ವಿಚಾರಗಳ ಕುರಿತು ನಮ್ಮದೊಂದು ಪೂರ್ವಾಗ್ರಹ ಇರುತ್ತದೆ. ಅದನ್ನೇ ಸತ್ಯವೆಂದು ಭ್ರಮಿಸಿ ಖಿನ್ನತೆಗೆ ಒಳಗಾಗಿ ಬಿಡುತ್ತೇವೆ. ಇದರಿಂದ ತಪ್ಪಿಸಿಕೊಳ್ಳಲು ಪಲಾಯನಗೈಯುತ್ತೇವೆ. ಆದರೆ ಸುಪ್ತ ಮನದೊಳಗೆ ಬೇರು ಬಿಟ್ಟ ಆಳದ ಪ್ರಶ್ನೆಗಳು ಆಲದ ಮರದಂತೆ ಬಿಳಲು ಬಿಡುತ್ತಾ ಹೋಗುತ್ತದೆ. ಬದುಕು ಬೇರೆ ಬೇರೆ ರೀತಿಯಲ್ಲಿ ತೆರೆದುಕೊಂಡು ಹೋದ ಹಾಗೆ, ಬೇರೆ ಅನುಭವಗಳಿಗೆ ಮುಖಾಮುಖಿಯಾಗುವಾಗ ನಮ್ಮ ಹೆಪ್ಪುಗಟ್ಟಿದ ನೋವುಗಳು ತಳದಲ್ಲಿ ತಿಳಿಯಾಗುತ್ತಾ ಹೋಗುತ್ತವೆ. ಪ್ರತೀ ಘಟನೆಗೂ ಮನಸು ಸಕರಾತ್ಮಕವಾಗಿ ಸ್ಪಂದಿಸಲು ತೊಡಗುತ್ತವೆ.

ಇಲ್ಲೂ ಕೂಡ ಕಥಾನಾಯಕನ ಒಡಲೊಳಗಿನ ಕೆಲವು ಪ್ರಶ್ನೆಗಳಿಗೆ ಉತ್ತರವಿರುವುದಿಲ್ಲ. ಹುಡುಕುತ್ತಾ ಹೋದರೆ ಉತ್ತರವೂ ಸಿಗದೆ ಪ್ರಶ್ನೆಯ ಮುಂದೆ ಮತ್ತೊಂದು ಪ್ರಶ್ನೆ ಪ್ರಶಾರ್ಥಕವಾಗಿ ನಿಲ್ಲುತ್ತದೆ. ಕೊನೆಗೆ ಎಲ್ಲವನ್ನೂ ಒಪ್ಪಿಕೊಂಡಂತೆ ಬದುಕುವುದೇ ನಿಜವಾದ ಅರ್ಥದಲ್ಲಿ ಬದುಕು ಅನ್ನುವ ತಾರ್ಕಿಕ ಸಿದ್ಧಾಂತಕ್ಕೆ ಬದ್ಧವಾದಾಗ ಮನಸು ನಿರಾಳವಾಗುತ್ತದೆ. ಇಷ್ಟೇ ಸಾಕಿತ್ತು ಈ ಕತೆ ಪರಿಣಾಮಕಾರಿಯಾಗುತ್ತಿತ್ತು. ಆದರೆ ಕೆಲವೊಂದು ಸಂಗತಿಗಳನ್ನು ಒಪ್ಪಿಕೊಳ್ಳಲು ಆಗುವುದೇ ಇಲ್ಲ ಅನ್ನುವುದಕ್ಕೆ ವಿವರಗಳನ್ನು, ಸಮಜಾಯಿಸಿಗಳನ್ನು ಕೊಡುತ್ತಾ ಕತೆಯನ್ನು ವಾಚಾಳಿ ಮಾಡಿ ಹಾದಿ ತಪ್ಪಿಸಿದಂತೆ ಅನ್ನಿಸಿಬಿಟ್ಟಿತು.

ನಮ್ಮ ಬದುಕಿನ ಪ್ರತೀ ಸಂಗತಿಯೂ ಕತೆಗೆ ವಸ್ತುವಾಗಬಹುದು ಅನ್ನುವ ಅರಿವಿಲ್ಲದೆ ನಾವು ಕತೆ ಕಟ್ಟುವುದಕ್ಕೆ ಪ್ರಯಾಸಪಡುತ್ತೇವೆ. ಇಂತಹ ಒಂದು ಕತೆಯ ಹಂದರವನ್ನು ತ್ರಾಸಿಯವರ ‘ಹತ್ತು ಮಂದಿ ಹಡೆದ ಕತೆ’ ಯಲ್ಲಿ ಪ್ರಕಟಗೊಳ್ಳುತ್ತದೆ. ಶಿಬಿರದೊಳಗೆ ಕುಳಿತು ಕ್ರಿಯಾಶೀಲ ಮನಸುಗಳು ಒಂದೊಂದು ಕತೆಗೆ ಹೆಣಗಾಡುವುದು, ಸಿಕ್ಕ ಎಳೆ ಚೂರಿಗೆ ಅಂತ್ಯ ದಕ್ಕಿಸಲಾರದೆ ಚಡಪಡಿಸುವುದು, ಬದುಕಿನ ಸಂದಿಗ್ಧತೆಯನ್ನು ಕಟ್ಟಿಕೊಡುತ್ತಲೇ ಆ ಹತ್ತು ಮಂದಿಯ ಒಳಗಿನ ಭಾವಗಳು ಕತೆಗಳೇ ಆಗಿ ಬಿಡುವುದು ಒಂದು ಅಚ್ಚರಿ. ಆದರೆ ಇದೆಲ್ಲಾ ಅರಿವಿಲ್ಲದ ಕಥಾನಾಯಕ ಇದರ ಗೊಡವೆ ಬಿಟ್ಟು ಪ್ರೇಯಸಿಗೊಂದು ಅಚ್ಚರಿ ಕೊಡಬೇಕೆಂಬ ನಿರ್ಧಾರಕ್ಕೆ ಬಂದಾಗ ಕತೆಗೊಂದು ಪೂರ್ಣ ಅಂತ್ಯ ಸಿಕ್ಕ ಖುಷಿಗೆ ನಮ್ಮೊಳಗೂ ಬೆಳದಿಂಗಳ ಉಲ್ಲಾಸವೊಂದು ಎದೆ ಹತ್ತಿ ಕುಳಿತುಕೊಳ್ಳಬಲ್ಲಂತೆ ತ್ರಾಸಿಯವರ ಕತೆಗಳು ಮಾಡಬಲ್ಲವು.

ತ್ರಾಸಿಯವರ ‘ಉದಿಯಾನ ಕೆಂಪು ಕರ್ಚಿಪ್’ ಕತೆಯೊಂದು ವ್ಯವಸ್ಥೆಯೊಂದರ ರೂಪಕದಂತೆ ಗೋಚರಿಸುತ್ತದೆ. ಮುಂಬಯಿಯ ಜನಜೀವನ, ಅವರುಗಳ ಮನಸ್ಥಿತಿ, ಲೋಕಲ್ ಟ್ರೈನ್‍ನೊಳಗೆ ಘಟಿಸಿಕೊಳ್ಳುವ ಅಸಂಭವನೀಯ ಘಟನೆಗಳು ಎಲ್ಲವನ್ನ ಸಹಜವೆಂಬಂತೆ ಹೇಳುತ್ತಾ ಅಪರಿಚಿತರ ಊರಿನಲ್ಲಿ ಗುರುತಿಗಾಗಿ ಹಿಡಿದ ಕೆಂಪು ಖರ್ಚೀಫಿನ ಮೂಲಕ ಮತ್ತೊಂದು ಲೋಕವನ್ನು ಸದ್ದಿಲ್ಲದೆ ದಿಗ್ಭ್ರಮೆಗೊಳಿಸುವಂತೆ ತೆರೆದಿಡಬಲ್ಲರು.

ನಮ್ಮಲ್ಲಿ ಪ್ರೇಮ ಕತೆಗಳಿಗೆ ಕೊರತೆಯಿಲ್ಲ. ಬಹುಷ; ಒಬ್ಬೊಬ್ಬರ ಪ್ರೇಮ ಕತೆಗಳಿಗೂ ಅದರದೇ ಆದ ನವಿರುತನವಿರುವುದರಿಂದಲೇ ಏನೋ ಇವತ್ತಿಗೂ ಅದು ಚಿರಸ್ಥಾಯಿಯಾಗಿ ಉಳಿದುಕೊಂಡಿದೆ. ನವಿರು ಪ್ರೇಮ ಕತೆಗಳು ಹುಟ್ಟಿಸುವ ಪುಳಕ, ಕಂಪನಗಳು ಅತೀತವಾದದ್ದು. ಇಂತದೇ ಒಂದು ಆರ್ಧ್ರ ಭಾವದ ಸಂಚಲನವುಂಟು ಮಾಡುವುದರಲ್ಲಿ ತ್ರಾಸಿಯವರ ‘ಮಾತಾಡೋ ಮುದ್ದು ಗಿಣಿ’ ಯಶಸ್ವಿಯಾಗಿದೆ.

ಯಾವುದೋ ಕ್ಷಣದಲ್ಲಿ ಎದೆಯನ್ನು ತಾಕಿ ಹೋದ ನವಿರು ಗರಿಯಂತ ಪ್ರೀತಿಯ ಸೆಳಕೊಂದು ನಡುವಲ್ಲಿ ಕಿತ್ತು ಹೋದರೂ, ಅದು ಜೀವಮಾನದುದ್ದಕ್ಕು ಬಿಡದೇ ಕಾಡುವುದರ ಬಗ್ಗೆ ನಮ್ಮನ್ನು ಮಿಡುಕಿ ಹೋಗುವಂತೆ ಬರೆಯಬಲ್ಲರು. ಮುರಿದು ಹೋದ ಪ್ರೇಮ ಕತೆಯೊಂದನ್ನು ಮರೆತೆನೆಂದರೂ ಅದು ಬದುಕಿನ ಒಂದು ಭಾಗವಾಗುತ್ತಾ ಬಿಡದೇ ಕಾಡುತ್ತಾ ಹೋಗುವುದೇ ಒಂದು ಸೋಜಿಗ. ಕಾವ್ಯದಂತೆ ಹೆಣೆದ ಕತೆಯನ್ನು ಓದುವ ಸೊಗಸೇ ಬೇರೆ.

‘ಹೀಗೊಂದು ಕತೆ’ಯೆಂಬ ಚಿಕ್ಕ ಚೊಕ್ಕ ಕತೆಯಲ್ಲಿ ಬದುಕಿನಲ್ಲಿ ನಡೆದು ಹೋಗಬಹುದಾದ ನೈ ಘಟನೆಯನ್ನು ಕಾರ್ಡಿನ ಕತೆಯ ಮೂಲಕ ಸೂಚ್ಯವಾಗಿ ಕಟ್ಟಿಕೊಡುತ್ತಾರೆ. ಇವೆಲ್ಲ ಕತೆಗಳು ಅಂತ ಕಥಾನಾಯಕ ತನ್ನ ಪತ್ನಿಗೆ ಸಮಜಾಯಿಷಿ ಕೊಟ್ಟು ಸಮಾಧಾನಿಸಿದರೂ ಕೆಲವೊಂದು ಸಂದರ್ಭದಲ್ಲಿ ತಾನು ಹುಡುಗಿಯರೊಂದಿಗೆ ಮಾತನಾಡುವಾಗ ತನ್ನ ಕಣ್ಣಿನ ಭಾಷೆಯನ್ನು ಆಕೆ ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲಳು ಅನ್ನುವುದರ ಮೂಲಕ ನವಿರು ಹಾಸ್ಯದೊಂದಿಗೆ ಅವಳ ಸಂಶಯದಲ್ಲಿ ಹುರುಳಿಲ್ಲದಿಲ್ಲ ಅನ್ನುವ ಪ್ರಾಮಾಣಿಕತನವನ್ನು ಒಪ್ಪಿಕೊಳ್ಳುತ್ತಾ ಕತೆಗೊಂದು ಮಿಂಚಿನ ಹೊಳಹನ್ನು ಕೊಡುತ್ತಾರೆ.

‘ಸುಹಾನ’ ಕತೆಯ ಮೂಲಕ ದಿನನಿತ್ಯ ನೋಡುತ್ತಾ ಬೆಳೆದ ಎಳೆ ಬಾಲೆ ಹರೆಯಕ್ಕೆ ಬಂದಾಗ ಅವಳನ್ನು ನೋಡುವ ಮನಸ್ಥಿತಿ ಹೇಗೆ ಬದಲಾಗಿ ಬಿಡುತ್ತದೆ ಅನ್ನುವ ಭಾವವನ್ನು ಸಹಜವಾಗಿ ಯಾವುದೇ ಏರಿಳಿತಗಳಿಲ್ಲದೆ ಕಟ್ಟಿಕೊಡುತ್ತಾ ಹೋಗುತ್ತಾರೆ. ಅವಳೊಂದಿಗೆ ಕಕ್ಕುಲಾತಿಯ ,ಮಮತೆಯ ಮಾತುಗಳಂತೆ ಅನ್ನಿಸಿದರೂ ಕೊನೆಗೆ ಕ್ಲಿನಿಕ್ಕಿನಲ್ಲಿ ನಿನ್ನೊಂದಿಗಿರುವ ಡಾಕ್ಟರ್ ಬಗ್ಗೆ ನನಗೆ ಅಸೂಯೆಯಾಗುತ್ತಿದೆ ಅನ್ನುವಲ್ಲಿ ಕತೆಗೊಂದು ಹೊಸ ಅರ್ಥ ದಕ್ಕುತ್ತದೆ. ತದನಂತರ ಡಾಕ್ಟರ್ ಜೊತೆಗಿನ ಅವಳ ಸಂಬಂಧ ಬೇರೆ ರೀತಿಯಲ್ಲಿ ತೆರೆದುಕೊಂಡದ್ದನ್ನ ಕತೆ ಸೂಚ್ಯವಾಗಿ ಕಟ್ಟಿ ಕೊಡುತ್ತದೆ. ಮುಗ್ಧ, ಬಡಪಾಯಿ ಹರೆಯದ ಹೆಣ್ಮಕ್ಕಳು ಬಡತನದ ದೆಸೆಯಿಂದ ಕೆಲವೊಂದು ಸಂಬಂಧಗಳಲ್ಲಿ ಬೇಕಾಗಿಯೋ, ಬೇಡವಾಗಿಯೋ ಕಳೆದು ಹೋಗುವುದರ ಬಗ್ಗೆ ವಿಷಾದವೆನ್ನಿಸಿತು.

ನಾವು ಎಷ್ಟೇ ಮೂಲ ಮಣ್ಣಿನಿಂದ ಬೇರ್ಪಡಿಸಿಕೊಂಡು ಹೊಸ ಆವರಣಕ್ಕೆ ಹೊಂದಿಕೊಂಡು ಬದುಕುತ್ತಿದ್ದೇವೆ ಅನ್ನಿಸಿದರೂ, ಮೂಲ ಮಣ್ಣಿನ ಸತ್ವದಿಂದ , ಅದು ಕಟ್ಟಿಕೊಟ್ಟ ಖುಷಿಯ ಗಳಿಗೆಗಳಿಂದ, ತಂದಿತ್ತ ಸಂಕಟದ ಕ್ಷಣಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಇಡೀ ವ್ಯಕ್ತಿತ್ವಕ್ಕೆ ಬುನಾದಿ ಒದಗಿಸುವುದೇ ಬಾಲ್ಯದ ಅಥವ ಹರೆಯಕ್ಕೆ ಏರು ಹೆಜ್ಜೆಯಿಡುವಾಗಿನ ಅನುಭವವೇ ಅನ್ನುವುದಕ್ಕೆ ಇಲ್ಲಿರುವ ಕತೆಗಳು ಸಾಕ್ಷಿ ನುಡಿದಂತಿದೆ.

ತ್ರಾಸಿಯವರು ಮುಂಬಯಿಯ ಬದುಕಿನ ಕುರಿತು ಕತೆ ಹೇಳಿದರೂ ಅದು ತನ್ನೂರ ಸುಳಿದು ಹೋಗುತ್ತದೆ. ಅಥವಾ ತನ್ನೂರಿನ ಕತೆ ಹೇಳುವಾಗಲೂ ಮುಂಬಯಿ ಎದುರಿಗೆ ಬಂದು ನಿಲ್ಲುತ್ತದೆ. ಈ ಎರಡು ಊರುಗಳ ನಡುವಿನ ಬೆಸೆಯುವ ಕೊಂಡಿಯಂತೆ ಇಲ್ಲಿನ ಕತೆಗಳು ಗೋಚರಿಸುತ್ತದೆ. ಒಮ್ಮೊಮ್ಮೆ ಬಾವಗೀತೆಯಂತೆ, ಮಗದೊಮ್ಮೆ ವಿಷಾದ, ವಿರಹ ಗೀತೆಯಂತೆ ಕೇಳಿಸುತ್ತಾ ತಂಗಾಳಿಯಂತೆ ಸುಳಿದು ಹೋಗುವ ಇಲ್ಲಿನ ಕತೆಗಳಿಗೆ ಚಿತ್ರಕ ಶಕ್ತಿ ಇದೆ. ಇಲ್ಲಿನ ಕತೆಗಳನ್ನು ಓದುತ್ತಾ ಹೋದ ಹಾಗೆ ಬೆಳದಿಂಗಳ ಉಲ್ಲಾಸವೊಂದು ಎದೆ ಹತ್ತಿ ಕುಳಿತಂತೆ ಭಾಸವಾಗುವುದರಲ್ಲಿ ಅಚ್ಚರಿಯಿಲ್ಲ. ಕತೆಗಾರ ಗೋಪಾಲ ತ್ರಾಸಿಯವರ ಕಥಾಯಾನ ನಿರಂತರವಾಗಿರಲಿ.

‍ಲೇಖಕರು avadhi

2 February, 2019

7 Comments

  1. Gopal trasi

    ಅವಧಿಗೆ ಬರೆಯಿರಿ ಅಂಥ ಆತ್ಮೀಯ ಗೆಳೆಯರನೇಕರು ಹೇಳಿದ್ದಿದೆ..ಆದರೆಆಗಲೇ ಇಲ್ಲ..ಸ್ಮಿತಾ ಅವರ ಓದಿ ಹರಸುವ ತಂಪು ಹಾರೈಕೆಗೆ,ಸಹೃದಯತೆಗೆ ಧನ್ಯವಾದ ಅಂದರೆ ಧನ್ಯವಾದವೇ ಸರಿ. ಕಥೆಯೊಳಗಿನ ಬದುಕು ಕಥೆಗಳಾಗಿದ್ದರೆ ಅಷ್ಟು ಸಾಕು..ಜಿ.ಎನ್..ಸರ್ ನಿಮ್ ಪ್ರೀತಿ ವಿಶ್ವಾಸಕ್ಕೂ ಥ್ಯಾಂಕ್ಸೂ….. ಗೋಪಾಲ ತ್ರಾಸಿ..ಮುಂಬೈ.

  2. ರಘುನಾಥ

    ತ್ರಾಸಿ ಅಭಿನಂದನೆ.ನಿಮ್ಮ ಕಥಾಸಂಕಲನ ನಮಗೆ ಸಿಕ್ಕಲಿಲ್ಲವಲ್ಲ!

  3. ಸಂಗೀತ ರವಿರಾಜ್

    ತುಂಬಾ ಚೆನ್ನಾಗಿ ಬರೆದಿದ್ದಾರೆ ಸ್ಮಿತಾ
    ಕಥೆಗಳನ್ನು ಓದಬೇಕು ಅನ್ನಿಸುತ್ತದೆ
    ಸಂಗೀತ

  4. Shyamala Madhav

    ಅವಧಿಯಲ್ಲಿ ನಮ್ಮ ತ್ರಾಸಿ ಅನಾವರಣ ತುಂಬ ಖುಶಿ ಕೊಟ್ಟಿತು.

  5. ಕಲಾ ಚಿದಾನಂದ

    ನಾನೂ ಪುಸ್ತಕ ಓದಿದೆ..ಬಹಳ ಚೆನ್ನಾಗಿದೆ ..ಉತ್ತಮ ವಿಮರ್ಶೆ. .

  6. ಕಲಾ ಚಿದಾನಂದ

    ನಾನೂ ಕಥೆ ಓದಿದೆ. ಬಹಳ ಚೆನ್ನಾಗಿದೆ. ಚಂದದ ವಿಮರ್ಶೆ

  7. Kala Bhagwat

    ನಾನೂ ಓದಿದೆ ಕಥೆ. .ಬಹಳ ಚೆನ್ನಾಗಿದೆ ..
    ಉತ್ತಮ ವಿಮರ್ಶೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading