ಬೆಳಕಿಲ್ಲದ ಏರ್ ಪೋರ್ಟ್ ರೋಡ್ ನಲ್ಲಿ..

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆಹುಡುಕುತ್ತಿದ್ದಾರಂತೆಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ.

ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ ಇಂಥದ್ದೊಂದು ನಡೆಯಲಿಲ್ಲವಲ್ಲ ನಮ್ಮ ಮಕ್ಕಳು ಮುಚ್ಚಟೆಯಾಗಿದ್ದಾರಲ್ಲ ಎನ್ನುವ ನೆಮ್ಮದಿಯ ಭಾವ ಮನಸಿನಾಳದಲ್ಲಿ ಬೆಚ್ಚಗೆ ಕೂತಿರುತ್ತದೆ.

ಈ ಕಾಣದಾದ ಮತ್ತು ವಾಪಸ್ಸು ಮನೆಗೆ ಹೋಗದ ಹೆಣ್ಣುಮಕ್ಕಳ ಬಗ್ಗೆ ಲೀಲಾ ಸಂಪಿಗೆ ನಮ್ಮ ನಿಮ್ಮೆಲ್ಲರ ವೈಯಕ್ತಿಕ ಮತ್ತು ಸಾಮಾಜಿಕ ಪ್ರಜ್ಞೆಯನ್ನು ತುಸು ಜಾಗೃತಗೊಳಿಸುತ್ತಿದ್ದಾರೆ ಆಫ್ ದಿ ರೆಕಾರ್ಡ್ನಲ್ಲಿ.

ಅಪ್ರಾಪ್ತ ಹೆಣ್ಣುಮಕ್ಕಳ ಕಳ್ಳ ಸಾಗಾಣಿಕೆ ಮತ್ತು ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಇದಕ್ಕೆ ನೆಪಗಳು ನೂರಾರು, ಆದರೆ ಈ ಅಂತಾರಾಷ್ಟ್ರೀಯ ಜಾಲಕ್ಕೆ ಭಾರತದಂತಹ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮದುವೆಗಳು ಬಹು ಸುಲಭವಾಗಿ ನೆರವಾಗ್ತಿವೆ. ವಿಶ್ವದಲ್ಲೇ ಅಪ್ರಾಪ್ತ ವಿವಾಹಗಳಲ್ಲಿ ಭಾರತವು ಅಗ್ರ ಸ್ಥಾನದಲ್ಲಿದೆ. ವಿಶ್ವದ ಪ್ರತಿ ಮೂರು ಬಾಲವಧುಗಳಲ್ಲಿ ಒಬ್ಬಳು ಭಾರತೀಯಳು..? ಇಂತಹ ಘಟನೆಗಳು ಹೆಣ್ಣುಮಕ್ಕಳನ್ನು ಶಾಶ್ವತವಾಗಿ ಲೈಂಗಿಕ ಗುಲಾಮಗಿರಿಗೆ ದೂಡುತ್ತವೆ. 

ಅಯ್ಯೋ, ಆಗೋಲ್ಲ, ನೋವು, ಅಮ್ಮಾ… ನನಗೆ ಸಹಿಸೋಕೆ ಸಾಧ್ಯ ಆಗ್ತಿಲ್ಲ… ಕಿರುಚ್ಕೊಂಡೆ. ನನ್ನ ಕೈಗಳನ್ನು ಕಟ್ಟಿ ಹಾಕಲಾಗಿತ್ತು. ಬಿಡಿಸಿರೋ ಎಂದು ಬೇಡಿಕೊಂಡೆ. ಕೈ ಬಿಡಿಸಲಿಲ್ಲ, ನನ್ನ ಹತ್ತಿರ ಡಾಕ್ಟರಮ್ಮ ನಿಂತಿದ್ದಳು. 

ಅವಳು ಮೇಡಂಗೆ ಏನೇನೋ ಹೇಳಿ ಅವಳ ಕೆಲಸ ಮುಗಿಸಿ ಹೊರಟು ಹೋದಳು. ನನ್ನ ಈ ಯಾತನೆಗೆ ಕಾರಣ ನನ್ನ ಯೋನಿಗೆ ಹೊಲಿಗೆ ಹಾಕಿಸಿದರು. ಇದೇನು ನನಗೆ ಹೊಸತಲ್ಲ, ಬಂದಾಗಿನಿಂದ ಎರಡು ವರ್ಷದಿಂದೀಚೆಗೆ ಈ ಥರಾ ಹೊಲಿಗೆ ಹಾಕುವುದು ಸುಮಾರು ಐದಾರು ಬಾರಿ. 

ಹೀಗೆ ಹೊಲಿಗೆ ಹಾಕಿದಾಗ ಒಂದೆರಡು ದಿನ ಯಾವ ಗಿರಾಕೀನೂ ಕಳಿಸೋಲ್ಲ. ಯೋನಿಯ ಗಾಯವೆಲ್ಲಾ ಹೀಲ್ ಆಗ್ಬೇಕಂತೆ. ನನಗೊಬ್ಬಳಿಗೇ ಅಲ್ಲ, ನನ್ನ ಪ್ರಾಯದ ಟಿಂಕೂ, ಸಾರಿಕಾ, ಪದ್ದು, ಶಾಲಿ, ಮಂದ ಇವರಿಗೂ ಕೂಡ ಆಗಾಗ್ಗೆ ಹೊಲಿಗೆ ಹಾಕಿಸ್ತಾನೇ ಇರ್ತಾರೆ. 

ಅದಕ್ಕೆಂತಲೇ ಒಬ್ಬ ಡಾಕ್ಟರಮ್ಮ ಇದ್ದಾಳೆ, ಅವಳು ಮಾತ್ರ ಇಲ್ಲಿಗೆ ಬರೋದು. ಅಬ್ಬಾ, ಎಂಥ ನೋವು ಗೊತ್ತಾ! ಹೊಲಿಗೆ ಹಾಕಿದಾಗ ಒಂಥರಾ ನೋವು, ಅದರ ನಂತರ ಮೊದಮೊದಲು ಬರೋ ಗಿರಾಕಿಗಳು ಮೈ ಮೇಲೆರಗಿದಾಗಲೂ ಯಮಯಾತನೆ.

ಈ  ನೋವಿನಿಂದಾಗಿ ಅದೆಷ್ಟು ಕಣ್ಣೀರ ಕೋಡಿ ಹರಿಸಿದ್ದೇವೋ ನಾವು..! ಮೇಡಂ ಹತ್ತಿರ ಹೇಳಿದ್ರೆ ಅದೆಂಥದೋ ಒಂದು ಮುಲಾಮು ಬಿಡ್ತಾಳೆ ಅಷ್ಟೇ, ಅವಳ ಸಾಂತ್ವನ ಮುಗಿದು ಹೋಗುತ್ತೆ. ಬಿಡುವು ಸಿಕ್ರೆ ನಾವು ನಾವೇ ನೋವನ್ನೆಲ್ಲ ಹಂಚಿಕೊಳ್ತೀವಿ. 

ಒಂದು ಸಾರಿ ನೋವು ಸಹಿಸಲಾಗದೆ ರೋಸಿ ಹೋಗಿ ಮೇಡಂನ ಕೇಳಿಯೇ ಬಿಟ್ಟೆ, “ಯಾಕೆ ಹೀಗೆ ನಮಗೆ ಹೊಲಿಗೆ ಹಾಕಿಸ್ತೀರಾ” ಅಂತ. ಅದಕ್ಕೆ ಅವಳು ಅಡಿಕೆ ಎಲೆ ರಸ ನುಂಗಿಕೊಂಡೆ ಹೇಳಿದ್ಲು, “ಬರೋ ಚಪಲಚೆನ್ನಿಗರಾಯ ನನ್ಮಕ್ಳು ಇನ್ನೂ ಪಟಲ ಹರಿಯದೋರೇ ಬೇಕು ಅಂತ ಜೊಲ್ಲು ಸುರಿಸುತ್ತಾರೆ, ಇಲ್ಲ ಅಂದ್ರೆ ಕೊಡೋದ್ರಲ್ಲಿ ಅರ್ಧ ಕೊಡ್ತಾರೆ. ನಾನು ಹಾಕಿದ ಬಂಡವಾಳ, ನಾನು ನಡೆಸೋ ವಹಿವಾಟಿಗೆ ಅರ್ಧ ತಗೊಂಡು ತಲೆ ಮೇಲೆ ಬಟ್ಟೆ ಹಾಕ್ಕೊಳ್ಳಲಾ” ಅಂತ ರೌದ್ರಾವತಾರ ತಾಳಿ ಕೂಗಾಡಿ ಬಿಟ್ಳು.

ನಾವೂ ಅವಳ ಕೂಗಾಟ, ಅವಳ ನಾಜೂಕು ಎರಡಕ್ಕೂ ಹೊಂದಿ ಕೊಂಡ್ಬಿಟ್ಟಿದ್ದೀವಿ. ನನ್ನೊಳಗಿನ ಎಲ್ಲರನ್ನೂ, ಎಲ್ಲವನ್ನೂ ಮರೆಮಾಚಿ. ಇಲ್ಲಿಯ ಬದುಕೇ ಅಸಹ್ಯ ಅನ್ಸುತ್ತೆ. ಇಲ್ಲಿಯ ತಾಕಲಾಟಗಳು, ಕಣ್ಣೀರು, ಉದ್ವೇಗಗಳು ನನ್ನ ಎದೆಯೊಳಗೆ ತಿದಿ ಹೊತ್ತಿಸುತ್ತಿದ್ದರೂ, ಕೀ ಕೊಟ್ಟ ಬೊಂಬೆಗಳಂತೆ, ನಿರ್ಭಾವುಕವಾಗಿ ಸಂಜೆಯಾಗುತ್ತಲೇ ಸಿಂಗಾರಕ್ಕೆ ಸಿದ್ಧವಾಗಬೇಕು.

ಕೆನ್ನೆ ಮೇಲೆ ಇಳಿ ಬೀಳುವ ಹಾಗೆ ಒದ್ದಾಡಿ ಒದ್ದಾಡಿ ಮಾಡಿಕೊಂಡಿರುವ ಗುಂಗುರುಗಳು, ಆಸೆಯೇ ಇಲ್ಲದ ಕಣ್ಣುಗಳಿಗೆ ಒಂದು ಅಸಹ್ಯವಾದ ನೋಟ ಕೊಟ್ಟು ಅದಕ್ಕೊಂದಿಷ್ಟು ಗೆಟಪ್ ಗಾಗಿ ಇಟ್ಟುಕೊಳ್ಳೋ ಕಾಡಿಗೆ, ಅಪೌಷ್ಟಿಕತೆಯ ಪೇಲವ ಮುಖಕ್ಕೆ ಒಂದಷ್ಟು ಕ್ರೀಮ್ ಹಚ್ಚಿ, ಮೇಲೊಂದಷ್ಟು ಮಿಂಚಿನ ಪುಡಿ ಚುಮುಕಿಸಿ ಫಳಫಳಾಂತ ಹೊಳೆಯೋ ಫೇಸ್ ರೆಡಿ. 

ಒಳಗಿನ ಬ್ರಾ, ಚಡ್ಡಿಗಳು ಹರಿದಿದ್ದರೂ ಶೈನಿಂಗ್ ಶೈನಿಂಗ್ ಇರೋ, ಬಿಗಿಯಾದ ಡ್ರೆಸ್ ಹಾಕಿ, ಜಾಂಡಿಸಿನ ಗುರುತು ಹೇಳುತ್ತಿವೆಯೇನೋ ಎಂಬಂತಿರುವ ಉಗುರುಗಳಿಗೆ ಹಾಕೋ ಮಲ್ಟಿ ಕಲರ್ ಗಳು, ಒಳಗೆಲ್ಲ ಹೇನುಗಳು ತುಂಬಿಕೊಂಡಿದ್ದರೂ ಮರೆಮಾಚಿ ಮೇಲ್ ತಲೆಯ ಬಾಚಿ ಅದಕ್ಕೊಂದೆರೆಡು ಮೊಳ ಹೂವು ಇಳಿಬಿಟ್ಟು, ಹೀಲ್ಡ್ ಚಪ್ಪಲಿ ಮೆಟ್ಟಿ ತಯಾರಾಗಿ ನಿಂತವಳಿಗೆ…

ಒಂದಿಷ್ಟು ಅಗಿಯಲು ಜರ್ದಾ, ಒಂದು ಸಿಪ್ ಹೆಂಡ ಒಳಗೋದ ಕೂಡಲೇ ನಾನೇ ಈ ಲೋಕದ ಒಡತಿ ಅನ್ನೋ ಪೋಸ್ ಕೊಟ್ಟು, ಡೂಪ್ಲಿಕೇಟ್ ಅಪ್ಸರೆ ಥರಾ, ಸೀರಿಯಲ್ ಸೆಟ್ ನ ಕಲರ್ ಕಲರ್ ಬಲ್ಬ್ ಗಳಂತೆ ಝಗಮಗಿಸ್ತೀವಿ.

ಕುದುರಿದ ಗಿರಾಕಿಗಳು ನನ್ನ ಅಜ್ಜಂದಿರ, ನನ್ನ ಮಾವಂದಿರ, ಒಟ್ಟಾರೆ ನನ್ನ ವಯಸ್ಸಿನ ಮೂರರಷ್ಟಾದ್ರೂ ಇರ್ತಾರೆ. ನನ್ನ ಕನ್ಯತ್ವವನ್ನು ಇವರೇ ಅನುಭವಿಸಿದ ಭ್ರಮೆಯಲ್ಲಿ ತೂರಾಡ್ತಾರೆ. ಇಂತಹ ಮನುಷ್ಯರಲ್ಲದ ಅನರ್ಹರಿಗೆ ಮೈ ಕೊಟ್ಟ ನಾನು ನನ್ನ ಭಾವನೆಗಳನ್ನು, ನನ್ನತನವನ್ನು ಅಷ್ಟೇಕೆ ನನ್ನ ಕನಸುಗಳನ್ನು ಕೊಂದುಕೊಂಡು ಬಿಟ್ಟಿರ್ತೀನಿ.

ಕೊನೆಯಲ್ಲಿ ಅವರ ಮೊಮ್ಮಗಳಿಗೆ ಮೈದಡವುವಂತೆ ಮೈದಡವಿ ಅವರು ಕೈಗಿತ್ತು ಹೋಗುವ ಪುಡಿಕಾಸಿನ ಟಿಪ್ಸ್ ಅನ್ನು ಮೇಡಂಗೆ ಕಾಣದೆ ಎದೆಯೊಳಗೆ ತುರುಕಿಸಿ, ಆ ಕಿರಾತಕರಿಗೆ ಟಾಟಾ ಹೇಳಿ ಕಳುಹಿಸುವ ಕೂಸಂತೆ ನಟಿಸ ಬೇಕಾದಾಗಲೆಲ್ಲ ನನಗೆ ವಯಸ್ಸು ಐವತ್ತಾದಂತೆ, ಅರವತ್ತಾದಂತೆ ಭಾಸವಾಗುತ್ತೆ.

ನನಗೆ ಅಪರಿಚಿತವಾದಂತೆ ನಟಿಸುವ ನನ್ನ ಮನಸ್ಸು ಭಾರವಾಗುತ್ತೆ. ಇಷ್ಟೆಲ್ಲಾ ಹೇಳಿದ ನಾನು ಯಾರೆಂದು ನಿಮಗೆ ಪರಿಚಯಿಸಲೇ ಬೇಕು ಎಂದು ಅನ್ನಿಸ್ತಿದೆ. ನನ್ನ ಹೆಸರು ಊರು ಬೇಡ. ನಾನು ಇಂತಹ ವಿಷವರ್ತುಲದೊಳಗೆ, ವಂಚನೆಯ ಮಾಯಾ ಜಾಲದೊಳಗೆ, ಅಮಾಯಕರಾಗಿ ಬಲಿಯಾಗುವ ನನ್ನಂತಹ ಲಕ್ಷಾಂತರ ಹಸುಗೂಸುಗಳ  ಸಂಕೇತ. 

ನಾನು ದಟ್ಟವಾದ  ಕಾಡಿನೊಳಗೆ ಬದುಕುತ್ತಿದ್ದವಳು. ನಮಗೆ ಹೊರಗಿನ ಪ್ರಪಂಚದ ಅರಿವೇ ಇರಲಿಲ್ಲ. ಸೂಪಾ ಅಣೆಕಟ್ಟು ಕಟ್ಟಲು ನಮ್ಮ ಮನೆಗಳನ್ನು, ಬದುಕುಗಳನ್ನು ಮುಳುಗಿಸಿ ಬಿಟ್ಟರು. ಉಳ್ಳವರಿಗೆ ಬೆಳಕು ಕೊಟ್ಟು, ನಮ್ಮನ್ನು ಬೆಳಕಿನಡಿಯ ಕತ್ತಲಲ್ಲಿ ದೂಡಿಬಿಟ್ರು. 

ಐದನೇ ತರಗತಿಗೆ ನನ್ನ ಓದನ್ನು ನಿಲ್ಲಿಸಲೇ ಬೇಕಾಯ್ತು. ಹತ್ತಿರದ ಶಾಲೆಯಲ್ಲಿ ಆರನೇ ತರಗತಿಯಿರಲಿಲ್ಲ. ಸಾಹಸ ಮಾಡಿ ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸೋ ಇರಾದೆ ನಮ್ಮ ಹಾಡಿಯ ಯಾರಿಗೂ ಇರಲಿಲ್ಲ. ಅಪ್ಪ, ಅಮ್ಮ ಸೌದೆ ಕಡಿದು ಪೇಟೆಯಲ್ಲಿ ಮಾರಿ ತಂದದ್ದರಲ್ಲಿ ನಾಲ್ಕೈದು ಹೊಟ್ಟೆಗಳು ತುಂಬಬೇಕಿತ್ತು. 

ಒಂದು ದಿನ ಒಂದು ಬಿಳಿ ಅಂಬಾಸಿಡರ್ ಕಾರು ಬಂತು. ಅದರಲ್ಲಿದ್ದ ಒಬ್ಬ ವ್ಯಕ್ತಿ ಅಪ್ಪನಿಗೆ ಸ್ವಲ್ಪ ಪರಿಚಯದವನೇ. ಅವನೊಂದಿಗೆ ಇನ್ನೊಬ್ಬನಿದ್ದ. ಮನೆಗೆ ಬಂದವರೇ ಅಪ್ಪನ ಜೊತೆ ಏನೇನೋ ಮಾತನಾಡಿ ವ್ಯವಹಾರ ಕುದುರಿಸಿದ್ದರು.

ನಿಮ್ಮ ಮಗಳಿಗೆ ಒಂದು ಕೆಲಸವಿದೆ. ಅಲ್ಲೊಬ್ಬ ನಿವೃತ್ತ ಶಿಕ್ಷಕಿ ಇದ್ದಾರೆ, ಅವರ ಮನೆ ಕೆಲಸ ನೋಡಿಕೊಂಡು ಅವರ ಜೊತೆಯಲ್ಲಿ ಇದ್ದರೆ ಸಾಕು. ಅವರಿಗೂ ಯಾರೂ ಇಲ್ಲ. ತಿಂಗಳಿಗೆ ಏಳ್ನೂರು ರೂಪಾಯಿ ಕೊಡುತ್ತಾರೆ. ಅವಳನ್ನು ಅವರೇ ನೋಡಿಕೊಳ್ಳುತ್ತಾರೆ, ಅವಳ ಭವಿಷ್ಯವನ್ನು ಚೆನ್ನಾಗಿ ಮಾಡ್ತಾರೆ. ನಿಮ್ಮ ಮಗಳು ಸುಖವಾಗಿರುತ್ತಾಳೆ ಅಂತ ಕಷ್ಟಪಡುವ ಕೆಲಸ ಏನೂ ಇಲ್ಲ. ಆ ಹೆಂಗಸಿನ ಜೊತೆ ಆರಾಮಾಗಿ ಇದ್ರೆ ಆಯ್ತು ಅಷ್ಟೆ. ಅಂತ ಹೇಳಿ ಐನೂರು ರೂಪಾಯಿ ಅಡ್ವಾನ್ಸ್ ಕೈಗಿತ್ತು ಮಾರನೇ ದಿವಸ ಬರುವುದಾಗಿ ಹೇಳಿ ಹೋದರು. 

ಅಪ್ಪ-ಅಮ್ಮ ತೂಗಿ ಮಗಚಿ ಯೋಚಿಸಿ ನಿರ್ಧರಿಸಿಯೇ ಬಿಟ್ಟರು, ಹೇಗೋ ನಮ್ಮ ಮಗಳಾದರೂ ಮೂರು ಹೊತ್ತು ಊಟ ಮಾಡಲಿ, ಹೇಗೂ ಅವಳು ಹೋಗ್ತಿರೋದು ಒಬ್ಬ ಹೆಂಗಸಿನ ಮನೆಗೆ. ಯಾವುದೇ ತೊಂದರೆಯಾಗಲಿಕ್ಕಿಲ್ಲ ಅಂತ ನಿರಾಳವಾದ್ರು. ಮಾರನೇ ದಿನ ಮತ್ತದೇ ಜನ, ಅದೇ ಕಾರು.

ಅಷ್ಟೊತ್ತಿಗೆ ನಮ್ಮ ಅಮ್ಮ, ಅಪ್ಪ ನನ್ನನ್ನು ಹಾಗೂ-ಹೀಗೂ ಒಪ್ಪಿಸಿ ತಯಾರು ಮಾಡಿದ್ದರು. ನಾನೂ ಅಪ್ಪ ಅಮ್ಮನಿಗೆ ಹೇಗೂ ಸಹಾಯ ಆಗುತ್ತೆ ಅಂತ ಒಪ್ಪಿ ಬಿಟ್ಟೆ. ದೂರದೂರು ಅಂತ ಗಾಬರಿಯಾಗಬೇಡ. ನೀನು ಬಾ ಕಾರಲ್ಲಿ ಕೂತ್ಕೋ, ಮನೆ ಊರು ಎಲ್ಲಾ ನೋಡಿಕೊಂಡು ಬರಬಹುದು ಅಂತ ಅಪ್ಪನನ್ನು ಕರೆದು ಕಾರಲ್ಲಿ ಕೂರಿಸಿಕೊಂಡರು. 

ನನಗೆ ಇನ್ನೂ ಧೈರ್ಯ ಹೆಚ್ಚಾಯ್ತು. ಮುಂದೆ ತಲುಪಿದ ದೊಡ್ಡ ಕಡಲ ಕಿನಾರೆಯ ನಗರದಲ್ಲಿ ದೂರದ ಮನೆಯೊಂದನ್ನು ತೋರಿಸಿ ಆಗೋ ಅದೇ ಮನೆ ನೋಡು ನಿನ್ನ ಮಗಳು ಸುಖವಾಗಿರುತ್ತಾಳೆ, ಈ ದಿನವೇ ನೀನು ಅಲ್ಲಿಗೆ ಬರುವುದು ಬೇಡ ಅಂತ ಹೇಳಿ ವಾಪಸ್ಸು ಬಸ್ಸಿಗೆ ಕಾಸು ಕೊಟ್ಟು ಅಪ್ಪನನ್ನು ಕಾರಿನಿಂದ ಇಳಿಸಿದ್ರು. ಅಪ್ಪ ನನ್ನನ್ನು ತಬ್ಬಿಕೊಂಡು ಕಣ್ಣಲ್ಲಿ ನೀರು ಹಾಕಿ ನಿನ್ನಿಂದ ದುಡಿಸಿ ತಿನ್ನೋ ಸ್ಥಿತಿಗೆ ಬಂದೆವಲ್ಲ ಮಗಳೇ ಅಂತ ರೋಧಿಸಿದರು.

ಆ ದಿನದ ಅಪ್ಪನ ಅಪ್ಪುಗೆಯೇ ಕೊನೆಯಾಯ್ತು. ಇಂದಿಗೂ ಮುಂದೇನಾಯ್ತು ಅವರ ಬದುಕಲ್ಲಿ ಅಂತ ನನಗೆ ಗೊತ್ತಿಲ್ಲ. ನಾನೀಗ ಅವರು ಬಿಟ್ಟು ಹೋದ ನಗರಕ್ಕಿಂತ ಬಹಳ ದೂರದಲ್ಲಿದ್ದೇನೆ ಅಷ್ಟೇ ಅಲ್ಲ ಹೊರಗೆ ನುಸುಳಲೂ ಆಗದಂತಹ ವರ್ತುಲದೊಳಗೆ ಇದ್ದೇನೆ ಅನ್ನೋದಷ್ಟೆ ಗೊತ್ತು..!

ನನ್ನದಷ್ಟೇ ಅಲ್ಲ. ನನ್ನ ಜೊತೆ ಈ ಮನೆಯಲ್ಲಿರೋ ಹುಡುಗಿಯರ ಒಂದೊಂದು ಕಥೆಯೂ ಕರುಳು ಹಿಂಡುತ್ತೆ. ನಮಗೆಲ್ಲ ವಯಸ್ಸೆಷ್ಟಿರಬಹುದು ಗೊತ್ತಾ? ಇಪ್ಪತ್ತರೊಳಗಿನ ನಿತ್ಯ ಕನ್ಯೆಯರು ನಾವು. ಸಾರಿಕಾ (ಈ ಹೆಸರುಗಳು ಗುರುತಿಗಷ್ಟೇ ಕರೆಯೋ ನಕಲಿ ಐಡೆಂಟಿಟಿ. ಇಲ್ಲಿ ಎಲ್ಲರೂ ನಕಲಿ ಐಡೆಂಟಿಟಿಯವರೇ, ನಮ್ಮ ಘರ್ ವಾಲಿಯೂ ಸೇರಿ) ಮರಾಠಿಯ ಕುಗ್ರಾಮದ ಹುಡುಗಿ.

ಅದೊಂದು ದಿನ ಹುಡುಗಿಯ ನೋಡೋಕೆ ಜನ ಬಂದ್ರು. ಬಂದವರು ಅತ್ಯಂತ ಶ್ರೀಮಂತರು, ಅವರ ವೇಷ, ಭೂಷಣ, ಅವರ ಒಡವೆಗಳು, ಅವರು ಧರಿಸಿದ್ದ ಚಪ್ಪಲಿ ಎಲ್ಲವೂ ಕಣ್ಣು ಕೋರೈಸುವಷ್ಟು. ಅದಕ್ಕೆ ಸಾಕ್ಷಿಯೆಂಬಂತೆ ಅವರು ಬಂದಿದ್ದು ಉದ್ದನೆಯ ಕಾರಲ್ಲಿ. ಹೆಣ್ಣು ನೋಡುವ ಸಂಪ್ರದಾಯ ಮುಗೀತು, ಪರಸ್ಪರ ಭಾಷೆಯೂ ಅಸ್ಪಷ್ಟ.

ಅವರನ್ನು ಕರೆತಂದಿದ್ದವನು ಸಾರಿಕಾ ಮನೆಗೆ ಪರಿಚಯವಿದ್ದ ಅದ್ಯಾವುದೋ ಹೆಸರನ್ನು ಹೆಸರಿಸಿದ. ನೆನಪು ಮಾಡಿಕೊಳ್ಳೋವಷ್ಟು ಸಮಯವಿರಲಿಲ್ಲ. ಅವರ ಹಣದಲ್ಲೇ ಹಟ್ಟಿಯ ಜನರಿಗೆಲ್ಲ ಔತಣ. ಎಲ್ಲರಿಗೂ ಉಡುಗೊರೆಗಳು. ಸರಿ ಜನ ನಿಶ್ಯಬ್ದ. ಕೂಲಿ ಮಾಡಿ ಅರೆಹೊಟ್ಟೆಗೂ ಗತಿಯಿಲ್ಲದೇ ಬದುಕುತ್ತಿದ್ದ ಈ ಕುಟುಂಬಕ್ಕೆ ಬಂದೊದಗಿದ ಅದೃಷ್ಟವನ್ನು ಕೊಂಡಾಡಿದ್ದೇ ಕೊಂಡಾಡಿದ್ದು.

ತಡವಾಗಲೇ ಇಲ್ಲ. ಮದುವೆಯೂ ನಡೆದ್ಹೋಯ್ತು. ಸಾರಿಕಾಳನ್ನು ಒಡವೆ, ಅಲಂಕಾರ ಸಮೇತ ಕಾರಿನಲ್ಲಿಯೇ ಕರೆದೊಯ್ದರು. ಮಾನಸಿಕ ಸ್ಥಿತಿಯೇ ಸ್ತಬ್ಧವಾಗಿದ್ದ ಅವಳ ಅಮ್ಮ-ಅಪ್ಪ ಬಂಧುಗಳು ಅವಳು ಹಾಕಿದ್ದ ಒಡವೆ ಹತ್ತಿದ್ದ ಕಾರು, ಅವಳ ಭವಿಷ್ಯದ ಬಂಗಲೆಯ ಕನಸುಗಳಲ್ಲಿ ತೇಲಿ ಹೋದರು.

ಇತ್ತ ಮದುಮಗಳ ಸಮೇತ ಹೊರಟ ಕಾರು ಬಹು ದೂರ ಪ್ರಯಾಣ ಮಾಡಿದ ಬಳಿಕ ತನ್ನ ಬಣ್ಣ, ತನ್ನ ನಂಬರ್, ಅದರ ಜೊತೆ ಬಂದಿದ್ದ ಸಂಬಂಧಿಕರು ಎಲ್ಲರೂ ತಮ್ಮ ತಮ್ಮ ಸಂಭಾವನೆ ಪಡೆದು ಹೊರಟರು. ಭಾಷೆಯೂ ಬಾರದ, ತನ್ನ ಹೆತ್ತವರನ್ನೂ ಅಗಲಿದ, ಎಂದೂ ಕಾಣದ ದೂರದೂರಿನ ದರ್ಶನದ, ತನ್ನ ಮದುವೆಯಾದ ರಕ್ಕಸನ ಬಾಹುಗಳಲ್ಲಿ ಆ ಹಸುಗೂಸು ಹೊಸಕಿ ಹೋಗಿತ್ತು.

ಅಲ್ಲಿಂದ ಕೆಲವೇ ದಿನಗಳಲ್ಲಿ ಬಂದು ಸೇರಿದ್ದು ಈ ಚಕ್ರವ್ಯೂಹದೊಳಗೆ. ಪ್ರತಿ ಕ್ಷಣವೂ ಅನಾಥ ಪ್ರಜ್ಞೆಯನ್ನು ಉಸಿರಾಡುತ್ತಾ. ನೋವನ್ನೇ ನುಂಗುತ್ತಾ..!

ಇನ್ನು ಟಿಂಕೂ ಕೂಡ ಇದೇ ಥರದ ವ್ಯೂಹದ ವಂಚನೆಗೆ ಬಿದ್ದವಳೇ. ಹೈದರಾಬಾದ್ ಮೂಲದ ಟಿಂಕೂ ಅರಬ್ ಶೇಖ್ ಎಂಬ ತಲೆಹಿಡುಕನ ಪತ್ನಿ! ಖಾಜಿಯೊಬ್ಬನಿಂದ ಮಾಹಿತಿ ಪಡೆದ ಶೇಖ್, ಬಂದವನೇ ಅವಳ ಮನೆಯ ಬಡತನವನ್ನು ಬ್ಲಾಕ್ ಮೇಲ್ ಮಾಡಿದ. ಅಪ್ಪನಿಗಿದ್ದ ಸಾಲ ತೀರಿಸೋವಷ್ಟು ದುಡ್ಡನ್ನು ಬೊಗಸೆಗಿಟ್ಟ. ಮನೆಯ ಮುಂದಿನ ಎಲ್ಲಾ ಕಷ್ಟ ಸುಖಗಳಲ್ಲಿ ಜೊತೆಯಿರುವುದಾಗಿ ನಂಬಿಸಿದ.

ತನಗೆ ಮದುವೆಯಾಗಿದ್ದು, ಮೊದಲ ಹೆಂಡತಿ ಸತ್ತಿದ್ದಾಳೆಂದೂ ತನ್ನ ಕೋಟ್ಯಾಂತರ ಆಸ್ತಿಗೆ ವಾರಸುದಾರರು ಬೇಕೆಂದೂ, ಅದೂ ಬಡವರ ಮನೆ ಮಗಳಿಗೆ ಬದುಕು ಕೊಟ್ಟು ಸಾರ್ಥಕತೆ ಪಡೆಯಬೇಕೆಂದೂ ಹೇಳಿದ, ಹೇಳಿಸಿದ.. ಎಲ್ಲರೂ ಲಾಟರಿ ಹೊಡೆದಂತೆ ಬಂದ ಇವಳ ಅದೃಷ್ಟಕ್ಕೆ ಬೆರಗಾದರು.

ವಯೋವೃದ್ಧನಾದರೇನು! ಇಡೀ ಮನೆಯ ಬಡತನ ಕೊಚ್ಚಿ ಹೋಗಿ ಎಲ್ಲರ ಸುಖಕ್ಕೆ ನೀನು ಕಾರಣಳಾಗ್ತೀಯ ಅಂತ ಹಿರಿಯರು ಅವಳಿಗೆ ಬುದ್ಧಿ ಹೇಳಿದರು. ಗಡಿಬಿಡಿಯಲ್ಲಿ ಆ ಅರಬ್ ಶೇಖ್ ನನ್ನು ಕೈ ಹಿಡಿದು, ಬೀಳ್ಕೊಡುಗೆ ಪಡೆದು ಬಂದವಳು.

ಕೊನೆಗೆ ತಲುಪಿರುವುದು ನಮ್ಮ ಈ ಕತ್ತಲು-ಬೆಳಕಿನ ಬೆತ್ತಲಾಟದ ಗರಡಿಯೊಳಗೆ..!!

ಇನ್ನು ಶಾಲಿ. ಇವಳದೊಂದು ಡಿಫರೆಂಟ್ ಕಥೆ; ಮಲೇಶಿಯಾದಲ್ಲಿ ನಮ್ಮ ಮಗಳಿಗೆ ಕೆಲಸ ಸಿಕ್ಕಿದೆ. ಮುಂದಿನ ವಾರವೇ ಹೊರಡ್ತಾಳೆ. ಶಾಲಿಯ ಮನೆಯವರು ಬೀಗುತ್ತಲೇ ಟಾಂ ಟಾಂ ಹೊಡೆದರು. ಆ ದಿನವೂ ಬಂತು, ಮನೆಯವರಿಂದ ಸಾಹಸ ಮಾಡಿ, ಒತ್ತೆ ಇಟ್ಟ, ಕೂಡಿಟ್ಟಿದ್ದ, ಅಕ್ಕಪಕ್ಕದವರಿಂದ ಕೈ ಸಾಲ ಪಡೆದಿದ್ದ ಎಲ್ಲವನ್ನೂ ಗಂಟು ಕಟ್ಟಿಕೊಂಡು, ಮನೆಯವರೆಲ್ಲರ ಕನಸಿನ ಕಣ್ಣುಗಳ ಮಿಂಚಿನಿಂದಲೇ ಬೀಳ್ಕೊಡುಗೆ ಪಡೆದಳು.

ಆ ಅನ್ನದಾತಳು ಹೇಳಿದ್ದ ಸಮಯಕ್ಕೆ, ಹೇಳಿದ್ದ ಸ್ಥಳದಲ್ಲಿ ಹಾಜರಿದ್ದಳು. ಅವಳೊಂದಿಗೆ ಅವಳ ಗೆಳೆಯನೂ ಇದ್ದ. ಸರಿರಾತ್ರಿಗೆ ವಿಮಾನ ಪ್ರಯಾಣ ಮಾಡಲು ಟಿಕೆಟ್ ರೆಡಿಯಿತ್ತು. ಒಳ ಹೋಗುವ ಸಮಯ, ಅವರ ಪ್ಲಾನ್  ಉಲ್ಟಾ ಹೊಡೆದಿತ್ತು. ತನಿಖಾಧಿಕಾರಿಗಳ ಕೈಗೆ ಸಿಕ್ಕಿಬಿದ್ರು.

ಅಷ್ಟೊತ್ತಿಗೆ ಅಲ್ಲಿಗೆ ನಡುಪ್ರಾಯದ ಒಂದು ಜೋಡಿ ಬಂತು. ಅವಳು ಶಾಲಿಗೆ ಅವರನ್ನು ಪರಿಚಯಿಸಿ, ನೀನು ಇವರೊಂದಿಗೆ ಹೋಗು, ಮುಂದಿನ ವ್ಯವಸ್ಥೆಯನ್ನು ಮಾಡ್ತಾರೆ ಎಂದಳು. ಸರಿ, ಮುಗ್ಧ ಮನಸ್ಸು ಒಪ್ಪಿತ್ತು.

ಅವರೊಂದಿಗೆ ಏರ್ ಪೋರ್ಟ್ ನಿಂದ ಹೊರ ಬಂದವಳು ಬಂದು ಸೇರಿದ್ದು ಇದೇ ಕಗ್ಗತ್ತಲಿಗೆ, ಹೊರ ಬರುವ ಒಂದು ಬೆಳಕಿನ ಕಿಂಡಿಯೂ ಇರದ ಬಂಧನದ ಗೃಹಕ್ಕೆ!!

‍ಲೇಖಕರು ಲೀಲಾ ಸಂಪಿಗೆ

September 2, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: