ಬಾನು ಬೆಳಗಿತು..
-ಶಿವಾನಂದ ತಗಡೂರು
ಯಾರು ದೀಪ ಹಚ್ಚಿದರೇನು
ಬೆಳಕಿಗೆ ಬೇಧವಿಲ್ಲ
ಯಾವ ಹಾಡಿಗೂ ಗಂಧ ಗಾಳಿಗೂ
ಬೆಂದು ಉರಿವ ಬೆಂಕಿಗೆ ಬೇಲಿ ಏನು?
ಬೋಧಿ ಮರ ಸುರಿವ ನೆರಳಿಗೆ
ಋಣದ ಸ್ವಾರ್ಥವಾದರೂ ಇದೆಯೇ?
ಮೋಡ ಹಡೆದು ಸುರಿವ ಮಳೆಗೆ
ಕಾಡ ಕಣಿವೆ ಕೊರೆದು ಹರಿವ ನದಿಗೆ
ಮಣ್ಣ ಸೀಳಿ ತೂಗುವ ತೆನೆಗೆ
ಕರಿಯ ಮೇಲೆ ಕುಂತ
ಚಾಮುಂಡಿಯ ಸಿಂಗಾರದೂವಿಗೆ
ಧರ್ಮವೆಲ್ಲಿ ?
ಜಾತಿ, ಧರ್ಮ ಬಗೆದು ನೋಡುವ
ದೇವರುಗಳು ಲೋಕದಲ್ಲಿಲ್ಲ
ಇಲ್ಲಿ ಮನುಷ್ಯರು ಮಾತ್ರವೇ ಇದ್ದಾರೆ
ಸಪ್ತ ಸಾಗರಗಳಾಚೆ
ಕನ್ನಡದ ಡಿಂಡಿಮ
ಲೋಕವೆಲ್ಲ ನೆರೆದು ನಿಂತಿದೆ
ಹಬ್ಬ ನೋಡಲು
ದೊರೆಯು ದೀನನು ಒಂದಾದ
ಮಹಿಷನೂರಿನಲಿ
“ಹೃದಯ ದೀಪ”ಗಳ ಮೆರವಣಿಗೆ
ಎಲ್ಲರ ಹೃದಯದಲ್ಲೊಂದು
ಪ್ರೇಮದ ಹಣತೆ ಉರಿಯಲಿ
ಜಗದಗಲ ಮುಗಿಲಗಲ
ಕನ್ನಡದ ಬಾನು ಬೆಳಗಲಿ.






superrrrrr poem
belakuuuuu yarindaluu sigabahudu mast